ಪ್ರೊ.ಜಿ.ಎನ್.ಉಪಾಧ್ಯ, ಮುಂಬೈ
ಮಹಾರಾಷ್ಟ್ರದ 36 ಜಿಲ್ಲೆಗಳಲ್ಲಿ ನಾವು ತಪ್ಪದೇ ನೋಡಬೇಕಾದ ಜಿಲ್ಲೆ ಎಂದರೆ ನಾಸಿಕ್. ಗಿರಿ ಶಿಖರ ನದಿ ಪರ್ವತ ಗುಡ್ಡಬೆಟ್ಟ ನಿತ್ಯ ಹರಿದ್ವರ್ಣದ ಕಾಡುಗಳಿಂದ ಕೂಡಿರುವ, ನಮ್ಮ ಮಲೆನಾಡನ್ನು ಹೋಲುವ ಸಮೃದ್ಧ ಜಿಲ್ಲೆ ನಾಸಿಕ್. ಇದು ನಿತ್ಯೋತ್ಸವದ ನಾಡು. ವಿಶ್ವದ ಅತಿದೊಡ್ಡ ಧಾರ್ಮಿಕ ತೀರ್ಥಯಾತ್ರೆ, ಉತ್ಸವಗಳಲ್ಲಿ ನಮ್ಮ ದೇಶದ ಕುಂಭ ಮೇಳವೂ ಒಂದು. ದ್ವಾದಶ ವರ್ಷಗಳ ಬಳಿಕ ನಾಸಿಕ್ ನಲ್ಲಿ ಈ ಸರ್ತಿ ನಡೆಯಲಿರುವ ಸಿಂಹಸ್ಥ ಕುಂಭ ಮೇಳಕ್ಕೆ ಸಿದ್ಧತೆಗಳು ಆರಂಭವಾಗಿವೆ. ನಾಸಿಕದಲ್ಲಿ, ಈಗಾಗಲೇ ಒಂದು ಬಗೆಯ ಉಮೇದು ನವೋತ್ಸಾಹ ಸಡಗರ ಸಂಭ್ರಮ ಮನೆ ಮಾಡಿದೆ. ಈ ಮಹಾಯಾತ್ರೆಯ ಸ್ವಾಗತಕ್ಕೆ ಮಲೆನಾಡಿನ ಸಿರಿಸೊಬಗಿನ ಗೋದಾವರಿ ತಟ ಸರ್ವ ಸನ್ನದ್ಧಗೊಳ್ಳುತ್ತಿದೆ. ಪ್ರಸಕ್ತ ಭವ್ಯ ದಿವ್ಯ ಆಧ್ಯಾತ್ಮ ಪರ್ವದಲ್ಲಿ ಅಂದಾಜು ಮೂವತ್ತು ಕೋಟಿ ಭಕ್ತಗಡಣ ಮಿಂದೇಳುವ ಸಾಧ್ಯತೆಯಿದೆ ಎನ್ನಲಾಗಿದೆ. ರೋಚಕ, ಅಷ್ಟೇ ರೋಮಾಂಚಕ ಸಂಸ್ಕೃತಿ, ಭಕ್ತಿ ಮತ್ತು ಏಕತೆಯನ್ನು ಅನುಭವಿಸಲು ಈ ಭವ್ಯ ಆಧ್ಯಾತ್ಮಿಕ ಸಭೆ ಸಾಕ್ಷಿಯಾಗಲಿದೆ.
ಕುಂಭಮೇಳದ ಹೆಸರು ಕೇಳದ ಭಾರತೀಯ ನಿಲ್ಲ. ಕುಂಭಮೇಳವನ್ನು ವಿಶ್ವ ಪರಂಪರೆಯ ಪ್ರಮುಖ ಸಾಂಸ್ಕೃತಿಕ ವಿದ್ಯಮಾನಗಳಲ್ಲಿ ಒಂದು ಎಂದು ಗುರುತಿಸಿ, ಯುನೆಸ್ಕೋ ಗೌರವಿಸಿದೆ. ಮತ್ತೊಮ್ಮೆ, ಈ ವರ್ಷ ನಾಸಿಕ್ ಕುಂಭಮೇಳ ಪಾಪನಾಶಿನಿ ಗೋದಾವರಿಯ ಮಡಿಲಲ್ಲಿ ಸಂಪನ್ನ ಗೊಳ್ಳಲಿದೆ. ನಮ್ಮವರು ನದಿಗಳಲ್ಲೂ ದೇವತೆಗಳನ್ನು ಕಂಡವರು. ನದಿಗಳು ಆಯಾ ಪ್ರದೇಶದ ಜನರ ಜೀವನಾಡಿ. ‘ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ನಮ್ಮ ಪೂರ್ವಜರು ನದಿಗಳನ್ನು ನಿತ್ಯ ಸ್ಮರಿಸಿಕೊಳ್ಳುತ್ತಿದ್ದರು. ಈ ಏಳು ನದಿಗಳಲ್ಲಿ ಮಿಂದ ವರಿಗೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ನಮ್ಮವರದು.
ಗಂಗಾನದಿ ನಮ್ಮ ರಾಷ್ಟ್ರದ ಬಹುದೊಡ್ಡ ನದಿ. ದೇವನದಿ ಎಂಬ ಕೀರ್ತಿಗೂ ಇದು ಭಾಜನವಾಗಿದೆ. ಗಂಗಾನದಿಯ ಬಳಿಕ ಬರುವ ದೊಡ್ಡ ನದಿ ಗೋದಾವರಿ. ಇದರ ಉದ್ದ ಅಂದಾಜು ಸು.1465 ಕಿಲೋಮೀಟರ್. ಮಹಾರಾಷ್ಟ್ರ ರಾಜ್ಯದ ತ್ರ್ಯಂಬಕೇಶ್ವರದಲ್ಲಿ ಹುಟ್ಟುವ ಗೋದಾವರಿ ನದಿ ಆಂಧ್ರ- ತೆಲಂಗಾಣಗಳಲ್ಲಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಹದಿನೈದಕ್ಕೂ ಹೆಚ್ಚು ಉಪನದಿ ಗಳನ್ನು ಹೊಂದಿರುವ ಈ ಗೋದಾವರಿ ನದಿ, ಪುಣ್ಯ ನದಿಯೂ ಹೌದು. ಉತ್ತರ ಕರ್ನಾಟಕದ ಮಾಂಜರಾ, ಕಾರಂಜಾ, ಮಧುರನಾಲಾ, ದೇವನಾಲಾ, ಹೆಬ್ಬಾಳ ಮೊದಲಾದ ಉಪನದಿಗಳು ಗೋದಾವರಿ ನದೀಜಾಲದಲ್ಲಿ ಸಮಾವೇಶಗೊಂಡಿವೆ.
ಕವಿ ಶ್ರೀವಿಜಯ ಉವಾಚ
ಕರ್ನಾಟಕದ ಗಡಿರೇಖೆಯನ್ನು ಮೊದಲು ಹೇಳಿದವನು ಶ್ರೀವಿಜಯ. ಉತ್ತರದಲ್ಲಿ ಗೋದಾವರಿ ನದಿಯವರೆಗೆ ಕನ್ನಡ ನಾಡು ವ್ಯಾಪಿಸಿತ್ತು, ಅಲ್ಲಿಯ ತನಕ ಕನ್ನಡಿಗರು ನೆಲೆಸಿದ್ದರು; ಕನ್ನಡ ಸಂಸ್ಕೃತಿ ಪಸರಿಸಿಕೊಂಡಿತ್ತು ಎಂಬುದು ಅವನ ಹೇಳಿಕೆ. ಇದು ಕೇವಲ ಕವಿ ಕಲ್ಪನೆಯಲ್ಲ; ಚಾರಿತ್ರಿಕ ಸತ್ಯ.
ಇದನ್ನೂ ಓದಿ: Kumbha Sambhava Movie: ‘ಭೀಮ’ ಚಿತ್ರದ ಖ್ಯಾತಿಯ ಪ್ರಿಯಾ ಅಭಿನಯದ ‘ಕುಂಭ ಸಂಭವ’ ಸಿನಿಮಾದ ಟೀಸರ್ ಔಟ್
ನಾಸಿಕ್ ಕುಂಭಮೇಳ ಈ ವರ್ಷ ಇನ್ನೇನು ಆರಂಭಗೊಳ್ಳಲಿದೆ. ಕುಂಭಮೇಳವು ಸಮುದ್ರ ಮಂಥನದ ಕಥೆಯಲ್ಲಿ ನೆಲೆಪಡೆದಿದೆ. ಅಲ್ಲಿ ದೇವತೆಗಳು ಮತ್ತು ರಾಕ್ಷಸರು ಅಮೃತವನ್ನು ಪಡೆಯಲು ಸೆಣಸಾಡಿದರು. ಆ ಗದ್ದಲದಲ್ಲಿ ಹರಿದ್ವಾರ, ಪ್ರಯಾಗ, ನಾಸಿಕ್-ತ್ರಿಂಬಕೇಶ್ವರ ಮತ್ತು ಉಜ್ಜಯಿನಿಯಲ್ಲಿ ನಾಲ್ಕು ಹನಿ ಅಮೃತ ಸಿಂಚನವಾಯಿತು. ಹೀಗಾಗಿ ಇವನ್ನು ಕುಂಭಮೇಳದ ಪವಿತ್ರ ಸ್ಥಳಗಳೆಂದು ಪರಿಗಣಿಸಲಾಗಿದೆ. ಕುಂಭವು ಅಮೃತದ ಪವಿತ್ರ ಹೂಜಿಯನ್ನು ಸಂಕೇತಿಸು ತ್ತದೆ. ಇದು ಜೀವನ, ಆಧ್ಯಾತ್ಮಿಕತೆಗಳನ್ನು ಪ್ರತಿನಿಧಿಸುತ್ತದೆ. ಈ ಕಾರ್ಯಕ್ರಮವು ಭಕ್ತಿ, ಜ್ಞಾನ ಮತ್ತು ಸಂಸ್ಕೃತಿಯ ಅಪೂರ್ವ ಸಂಗಮವಾಗಿದ್ದು ನಂಬಿಕೆಯನ್ನು ಪುನರುಜ್ಜೀವನ ಗೊಳಿಸುವ ಮತ್ತು ಏಕತೆಯನ್ನು ವೃದ್ಧಿಸುವ ಘನ ಉದ್ದೇಶವನ್ನು ಹೊಂದಿದೆ.
ನಾಸಿಕ್ ಕುಂಭಮೇಳವು ಶತಮಾನಗಳಷ್ಟು ಹಳೆಯದಾದ ಇತಿಹಾಸವನ್ನು ಹೊಂದಿದೆ. ಭಾರತದ ಅತ್ಯಂತ ಪವಿತ್ರ ನದಿಗಳಲ್ಲಿ ಒಂದೆಂದು ಪರಿಗಣಿಸಲಾದ ಗೋದಾವರಿ ನದಿಯ ದಡದಲ್ಲಿ ನಾಸಿಕ್ ಕುಂಭಮೇಳ ನಡೆಯುತ್ತದೆ. ಲಭ್ಯ ದಾಖಲೆಗಳ ಪ್ರಕಾರ, 17ನೆಯ ಶತಮಾನದಲ್ಲಿ ನಾಸಿಕ್ ಕುಂಭಮೇಳ ನಡೆದ ಪ್ರಸ್ತಾಪವಿದೆ; ಅಂದಿನಿಂದ ಇದು ಜನಪ್ರಿಯತೆಗಳಿಸಿದೆ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಕೋಟಿಗಟ್ಟಲೆ ಜನರು ಈ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಮಿಂದು ಪುನೀತರಾಗುತ್ತಾರೆ.
ಪ್ರತ್ಯೇಕ ಅಖಾಡ
ನಾಸಿಕ್ ಕುಂಭಮೇಳದ ವಿಶಿಷ್ಟತೆ ಎಂದರೆ ಇಲ್ಲಿ ವೈಷ್ಣವ ಮತ್ತು ಶೈವ ಅಖಾಡಗಳು ಪ್ರತ್ಯೇಕವಾಗಿ ಸ್ನಾನ ಮಾಡುವುದು. ಇದು ಘರ್ಷಣೆಗಳನ್ನು ತಡೆಗಟ್ಟಲು ಪ್ರಾರಂಭಿಸಲಾದ ಸುಧಾರಿತ ಸಂಪ್ರ ದಾಯ. ದಂಡಕಾರಣ್ಯ ಕಾಡಿನ ಭಾಗವಾಗಿರುವ ನಾಸಿಕ್, ರಾಮನ ವನವಾಸಕ್ಕೆ ಸಂಬಂಧಿಸಿದೆ. ತ್ರಯಂಬಕೇಶ್ವರವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು ಗೋದಾವರಿ ನದಿಯ ಉಗಮ ವನ್ನು ಹೊಂದಿದೆ. ಈ ಉಭಯ ದರ್ಶನಗಳ ಸಂಗಮಕ್ಕೆ ಈ ಕುಂಭ ಸಂಭ್ರಮ ಸಾಕ್ಷಿಯಾಗಲಿದೆ.
ಗೋದೆಯ ತೀರದ ದೊಡ್ಡ ನಗರ ನಾಸಿಕ್. ಇದರ ಆರಂಭಿಕ ಉಲ್ಲೇಖವು ಪಾಣಿನಿ ಸೂತ್ರದ ಕಾತ್ಯಾನನ ವರ್ತ್ತಿಕದಲ್ಲಿ ಬಂದಿದೆ. ಅಲ್ಲಿ ಅವನು ನಾಶಿಕ ಪಟ್ಟಣವನ್ನು ನಾಗರ ಎಂದು ಕರೆದಿದ್ದಾನೆ. ವಾಯು ಪುರಾಣ, ವರಾಹ ಪುರಾಣ ಮತ್ತು ಇತರ ಪುರಾಣಗಳಲ್ಲಿ, ಬೃಹತ್ ಸಂಹಿತ ದಲ್ಲಿ ಇದನ್ನು ‘ತೀರ್ಥ’ ಎಂದು ಉಲ್ಲೇಖಿಸಲಾಗಿದೆ. ಆ ಸಮಯದಲ್ಲಿ ಗೋವರ್ಧನವು ಈ ಪ್ರದೇಶದ ಪ್ರಮುಖ ಪಟ್ಟಣವಾಗಿತ್ತು
ಕನ್ನಡಿಗರ ಅಭಿಮಾನ
ಮೌರ್ಯರು ನಾಸಿಕ್ ಅನ್ನು ಆಳಿದ ದಾಖಲೆಗಳಿವೆ. ಅವರ ಅನಂತರ ಶಾತವಾಹನರು ಬಂದರು. ಆ ಬಳಿಕ ಈ ಭಾಗವನ್ನು ಚಾಲುಕ್ಯರು, ರಾಷ್ಟ್ರಕೂಟರು, ಕಲಚುರಿಗಳು ಆಳಿದರು. ದೇವಗಿರಿ ಸೇವುಣರ ಕಾಲದಲ್ಲಿ ನಾಸಿಕ್ ಅಭಿವೃದ್ಧಿ ಹೊಂದಿತು. ಬಳಿಕ ಮೊಘಲ್ ದೊರೆಗಳು, ಮರಾಠರು ಈ ಭಾಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ನಾಸಿಕ್‌ನ ಹೆಚ್ಚಿನ ಸ್ಥಳನಾಮಗಳಲ್ಲಿ ಕನ್ನಡತನ ಕಾಣಸಿಗುತ್ತದೆ. ಬಾದರಾಯಣ ಸಂಬಂಧ ಹೊಂದಿರುವ ಇದೇ ಗೋದೆಯ ಮಡಿಲಲ್ಲಿ ಬಹು ನಿರೀಕ್ಷೆಯ ಸಿಂಹಸ್ಥ ಕುಂಭಮೇಳ ಸುರುವಾಗಲಿದೆ ಎಂಬುದು ಕನ್ನಡಿಗರು ಸಹ ಅಭಿಮಾನ ಪಡುವ ಸಂಗತಿ.
ಧ್ವಜಾರೋಹಣ
ಸಿಂಹಸ್ಥ ಕುಂಭಮೇಳವು ಅಕ್ಟೋಬರ್ 31, 2026 ರಂದು ತ್ರ್ಯಂಬಕೇಶ್ವರ, ರಾಮಕುಂಡ ಮತ್ತು ಪಂಚವಟಿಯಲ್ಲಿ ಸಾಂಪ್ರದಾಯಿಕ ಧ್ವಜಾರೋಹಣದೊಂದಿಗೆ ಅಽಕೃತವಾಗಿ ಪ್ರಾರಂಭ ವಾಗಲಿದ್ದು, ಜುಲೈ 24, 2028ರಂದು ಮುಕ್ತಾಯಗೊಳ್ಳಲಿದೆ. ನಾಸಿಕ್ ಮತ್ತು ತ್ರ್ಯಂಬಕೇಶ್ವರದಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳವು ಒಂದು ಅಭೂತಪೂರ್ವ ಜೀವಂತ ಆಧ್ಯಾತ್ಮಿಕ ವಿರಾಟ್ ವಿದ್ಯಮಾನವೂ ಭಕ್ತಿಸಾಗರದ ಪ್ರವಾಹವೂ ಹೌದು. ಪುರಾಣ, ಖಗೋಳಶಾಸ್ತ್ರ, ಧಾರ್ಮಿಕ ಶಿಸ್ತು ಮತ್ತು ವೈವಿಧ್ಯ ಮಯ ಆಸ್ತಿಕತೆಗಳ ಅನಾವರಣ ಜಗತ್ತಿನ ಬೇರೆಲ್ಲಿಯೂ ವಿರಳವಾಗಿ ಕಂಡು ಬರುವ ರೀತಿಯಲ್ಲಿ ಇದನ್ನು ಆಚರಿಸಲಾಗುತ್ತದೆ.ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಸಿಂಹಸ್ಥವು ಕುಂಭಮೇಳವು ಗೋದಾವರಿ ಜಲಾನಯನ ಪ್ರದೇಶವನ್ನು ವಿಶಾಲವಾದ ಪವಿತ್ರ ವರ್ಣರಂಚಿತ ಭೂದೃಶ್ಯವನ್ನಾಗಿ ಪರಿವರ್ತಿಸುತ್ತದೆ. ಇದು ಗ್ರಹಗಳ ಚಲನೆ ಪಾರಂಪರಿಕ ಸಂಪ್ರ ದಾಯ ಆಚರಣೆ ಹಿನ್ನೆಲೆಯಲ್ಲಿಗಳ ರೂಪುಗೊಂಡಿದೆ. ಇತರ ಕುಂಭಮೇಳಗಳಿಗಿಂತ ಭಿನ್ನವಾಗಿ, ನಾಸಿಕ್-ತ್ರಿಂಬಕೇಶ್ವರ ಸಿಂಹಸ್ಥವು ಎರಡು ಆಧ್ಯಾತ್ಮಿಕವಾಗಿ ವಿಭಿನ್ನವಾದ ಆದರೆ ಆಳವಾಗಿ ಸಂಪರ್ಕ ಹೊಂದಿದ ಸ್ಥಳಗಳಲ್ಲಿ ತೆರೆದುಕೊಳ್ಳುತ್ತದೆ. ಇದು ಸಂಕೀರ್ಣ ಮತ್ತು ಆಳವಾಗಿ ಸಾಂಕೇತಿಕವಾದ ದ್ವಂದ್ವ ಲಯವನ್ನು ನೀಡುತ್ತದೆ.
ಈ ಮಾರ್ಗದರ್ಶಿ ಸಿಂಹಸ್ಥ ಕುಂಭಮೇಳವನ್ನು ಒಂದು ಮೇರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯೆಂದು ಪ್ರಸ್ತುತ ಪಡಿಸುತ್ತದೆ; ಮಹಾರಾಷ್ಟ್ರದ ನಾಸಿಕ್ ನಲ್ಲಿ ಕುಂಭಮೇಳವು ಗೋದಾವರಿ ನದಿಯ ಪವಿತ್ರ ದಡದಲ್ಲಿ, ಕುಶಾವರ್ತ ಕುಂಡದ ಬಳಿ ನಡೆಯುತ್ತದೆ. ನಾಶಿಕ್ ಕುಂಭಮೇಳವು ಹಿಂದೂಗಳ ಪವಿತ್ರ ಪರ್ವವಾಗಿದ್ದು, ಇದು ಒಂದೇ ಸ್ಥಳದಲ್ಲಿ ಸಂಭವಿಸುವ ಮಾನವೀಯತೆಯ ವಿಶ್ವ ಸಮ್ಮೇಳನವೂ ಆಗಿದೆ.
ದಕ್ಷಿಣ ಗಂಗೆಯ ಮಡಿಲಲ್ಲಿ
ಗೋದಾವರಿ ನದಿಯನ್ನು ದಕ್ಷಿಣ ಗಂಗಾ ಅಥವಾ ದಕ್ಷಿಣದ ಗಂಗಾ ಎಂದು ಕರೆಯಲಾಗುತ್ತದೆ. ಕುಂಭಮೇಳದಲ್ಲಿ ಮುಳುಗೆದ್ದರೆ ನಿರಂತರ ಜನನ ಮರಣದ ಚಕ್ರದಿಂದ ಪಾರಾಗಿ ಮೋಕ್ಷ ಪ್ರಾಪ್ತಿ ಯಾಗುತ್ತದೆ ಎಂಬ ನಂಬಿಕೆ ಇದೆ. ಗೋದಾವರಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಎಲ್ಲ ಪಾಪಗಳು ಕರಗುತ್ತವೆ ಮತ್ತು ಜೀವನ ಮತ್ತು ಮರಣದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ.
ಅಖಾಡಗಳ ಆಗಮನ
ನಾಸಿಕ್‌ನಲ್ಲಿ ನಡೆಯುವ ಕುಂಭಮೇಳದ ಸಮಯದಲ್ಲಿ ಹಲವು ಅಖಾಡಗಳು ನಾಸಿಕ್‌ಗೆ ಆಗಮಿಸುತ್ತವೆ. ಇವು ಸಾಧುಗಳು, ಸನ್ಯಾಸಿಗಳು, ಸಿದ್ಧಪುರುಷರು, ಬೈರಾಗಿಗಳು ಮತ್ತು ವಿಶಿಷ್ಟ ಸಾಧಕರ ಪಂಗಡಗಳಾಗಿವೆ. ಕುಂಭಮೇಳದ ಸಮಯದಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ತಂಡೋ ಪತಂಡವಾಗಿ ಆಗಮಿಸುತ್ತಾರೆ. ಮುಗಿಲು ಮುಟ್ಟುವ ಘೋಷಣೆಗಳು, ಮಂತ್ರ ಪಠಿಣ ಜೊತೆಗೆ ಢಮರು ಢಕ್ಕೆ ಮತ್ತು ಇತರ ವಾದ್ಯಗಳ ಲಯಬದ್ಧ ಬಡಿತಗಳೊಂದಿಗೆ ಈ ಉತ್ಸವದ ಹೃದಯ ಬಡಿತ ಮತ್ತಷ್ಟು ಹೆಚ್ಚುತ್ತದೆ. ನಾಸಿಕ್‌ನಲ್ಲಿ ನಡೆಯುವ ಕುಂಭಮೇಳದ ಸಮಯದಲ್ಲಿ ಈ ಅಖಾಡಗಳ ಮೆರವಣಿಗೆಯನ್ನು ವೀಕ್ಷಿಸುವುದು ಒಂದು ಅದ್ಭುತ ಅನುಭವವೇ ಸರಿ.
ನದಿಗಳನ್ನು ಸಕ್ರಿಯಗೊಳಿಸುವ ಘಳಿಗೆ
ಸಿಂಹಸ್ಥವನ್ನು ಅರ್ಥಮಾಡಿಕೊಳ್ಳುವುದು ಸುಲಭ. ಸೂರ್ಯ ಮತ್ತು ಗುರು ಇಬ್ಬರೂ ಸಿಂಹ ರಾಶಿಯಲ್ಲಿದ್ದಾಗ ಭಾದ್ರಪದ ಮಾಸದಲ್ಲಿ ನಾಸಿಕ್ ಕುಂಭಮೇಳವನ್ನು ಆಚರಿಸಲಾಗುತ್ತದೆ. ಸಿಂಹಸ್ಥ ಎಂಬ ಪದವು ಗುರುವು ಸಿಂಹ ರಾಶಿಗೆ (ಸಿಂಹ ರಾಶಿ) ಪ್ರವೇಶಿಸುವ ನಿರ್ದಿಷ್ಟ ಜ್ಯೋತಿಷ್ಯ ಜೋಡಣೆಯನ್ನು ಸೂಚಿಸುತ್ತದೆ. ಹಿಂದೂ ಪಂಚಾಂಗ ವಿಜ್ಞಾನದಲ್ಲಿ, ಈ ಕ್ಷಣವು ಪವಿತ್ರ ನದಿಗಳನ್ನು ಸಕ್ರಿಯಗೊಳಿಸುತ್ತದೆ ಎಂದು ನಂಬಲಾಗಿದೆ.
ಇದು ಧಾರ್ಮಿಕ ಸ್ನಾನವನ್ನು ಅಸಾಧಾರಣ ಆಧ್ಯಾತ್ಮಿಕ ಶಕ್ತಿಯ ಕ್ರಿಯೆಯನ್ನಾಗಿ ಮಾಡುತ್ತದೆ ಎಂಬುದು ವಿಶೇಷ. ಆಚರಣೆಗಳು, ಮೆರವಣಿಗೆಗಳು ಮತ್ತು ಸ್ನಾನದ ಅನುಕ್ರಮಗಳು ಅನುಕೂಲ ಕ್ಕಿಂತ ಹೆಚ್ಚಾಗಿ ಪಂಚಾಂಗ, ಖಗೋಳ ಶಾಸ್ತ್ರಕ್ಕೆ ಹೊಂದಿಕೆಯಾಗುತ್ತವೆ. ಅದಕ್ಕಾಗಿಯೇ ನಾಸಿಕ್ ಕುಂಭವನ್ನು ಇತರ ಕುಂಭ ಕೂಟಗಳಿಗಿಂತ ಭಿನ್ನ ಮತ್ತು ಹೆಚ್ಚು ನಿಖರವೆಂದು ಪರಿಗಣಿಸಲಾಗು ತ್ತದೆ. ಈ ಅವಧಿಯಲ್ಲಿ ಮಹಾನದಿ ಗೋದಾವರಿಯನ್ನು ಕೇವಲ ನದಿಯಾಗಿ ನೋಡದೆ, ಮನಸ್ಸಿನ ಶುದ್ಧೀಕರಣ, ಪರಂಪರೆಯ ನೆನಪು ಮತ್ತು ನೋಡಲಾಗುತ್ತದೆ.
ವಿಮೋಚನೆಯ ಜೀವಂತ ಮಾರ್ಗವಾಗಿ ಚಾರಿತ್ರಿಕ ನಗರವಾಗಿ ನಾಸಿಕ್ ಪ್ರಕೃತಿರಮ್ಯ ನಾಸಿಕ್ ನಲ್ಲಿರುವ ಎಲ್ಲ ಸ್ಥಳಗಳಲ್ಲಿ, ತ್ರಯಂಬಕೇಶ್ವರ ದೇವಾಲಯದಷ್ಟು ಪ್ರಸಿದ್ಧವಾದ ಸ್ಥಳ ಇನ್ನೊಂದಿಲ್ಲ. ಈ ದೇವಾಲಯವು ಭಾರತದಾದ್ಯಂತ ಇರುವ ಹನ್ನೆರಡು ಶಿವನ ಜ್ಯೋತಿಲಿಂಗ ದೇವಾಲಯಗಳ ಪಟ್ಟಿಯಲ್ಲಿ ಬರುತ್ತದೆ. ತ್ರಯಂಬಕೇಶ್ವರ ದೇವಾಲಯವು ಮೂರು ಬೆಟ್ಟಗಳ ನಡುವೆ ನಿಂತಿದೆ; ಭಾರತದ ದಕ್ಷಿಣ ಭಾಗದಲ್ಲಿ ಹರಿಯುವ ಗೋದಾವರಿ ನದಿಯು ತ್ರಯಂಬಕೇಶ್ವರ ದೇವಾಲಯದ ಬಳಿ ಇರುವ ಬ್ರಹ್ಮಗಿರಿ ಪರ್ವತದ ಮೇಲೆ ತನ್ನ ಮೂಲವನ್ನು ಹೊಂದಿದೆ.
ಇಡೀ ದೇವಾಲಯದ ರಚನೆಯು ಕಪ್ಪು ಬಸಾಲ್ಟ್ ಬಂಡೆಯಿಂದ ಮಾಡಲ್ಪಟ್ಟಿದೆ. ತ್ರ್ಯಂಬಕೇಶ್ವರ ದೇವಾಲಯದ ಪ್ರಾಚೀನ ದೇವಾಲಯದ ವಾಸ್ತುಶಿಲ್ಪವು ವಿಶಿಷ್ಟ, ಅನನ್ಯ. ಇದು ಹೇಮಾಡ ಪಂಥ ವಾಸ್ತುಶಿಲ್ಪ ಶೈಲಿಯನ್ನು ಆಧರಿಸಿದೆ. ಇದು ಸೊಗಸಾದ ಶಿಲ್ಪಗಳು, ಕಂಬಗಳು ಮತ್ತು ಗೋಡೆಗಳ ಮೇಲೆ ಕೆತ್ತನೆಗಳು ಮತ್ತು ಅಲಂಕಾರಗಳನ್ನು ಹೊಂದಿದೆ. ತ್ರ್ಯಂಬಕೇಶ್ವರ ದೇವಾಲಯವು ಸಂದರ್ಶಕರ ವಂಶಾವಳಿಯ ದಾಖಲೆಗಳನ್ನು ಸಹ ಹೊಂದಿದೆ.
‘ಪಂಡಿತರು’ ಎಂದು ಕರೆಯಲ್ಪಡುವ ಪುರೋಹಿತರು ಈ ದಾಖಲೆಗಳನ್ನು ನಿರ್ವಹಿಸುತ್ತಾರೆ. ಈ ದಾಖಲೆಯಲ್ಲಿ ಪೂರ್ವಜರ ಹೆಸರುಗಳಿವೆ. ಈ ದಾಖಲೆಗಳ ಸಹಾಯದಿಂದ, ಒಬ್ಬರ ಪೂರ್ವಜರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.
ಕುಂಭಮೇಳಕ್ಕೆ ನಡೆದಿದೆ ಸಿದ್ಧತೆ
ನಾಸಿಕ್ ಕುಂಭಮೇಳಕ್ಕಾಗಿ ಮಹಾರಾಷ್ಟ್ರ ಸರಕಾರ ಸಮಾರೋಪಾದಿಯಲ್ಲಿ ಕೆಲಸ ಸುರು ಮಾಡಿದೆ. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಬಳಸಿ, ಪರಿಸರ ಸ್ನೇಹಿ ಕ್ರಮಗಳೊಂದಿಗೆ ಈ ಕುಂಭ ಮೇಳವು ವಿಶಿಷ್ಟವಾಗಿ ಮೂಡಿಬರಲಿದೆ ಎಂಬುದು ಸರಕಾರದ ಅಂಬೋಣ. ಈ ಮಹಾ ಉತ್ಸವ ಕೇವಲ ಧಾರ್ಮಿಕ ಆಚರಣೆ ಅಲ್ಲ, ಇದು ಆರ್ಥಿಕ ಚಟುವಟಿಕೆಯ ಇಂಜಿನ್ ಕೂಡ ಎಂಬುದು ಸರಕಾರದ ಸ್ಪಷ್ಟ ಉಕ್ತಿ. ನಗರ ನಿರ್ಮಾಣ, ವಸತಿ ವ್ಯವಸ್ಥೆ, ಮೂಲಭೂತ ಸೌಕರ್ಯಗಳ ಸುಧಾರಣೆ, ಹೆಲಿ ಪ್ಯಾಡ್‌ಗಳು ಮತ್ತು ಹೆಲಿಕಾಪ್ಟರ್ ಸೇವೆಗಳು,ದೊಡ್ಡ ಪ್ರಮಾಣದ ಮೂಲ ಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆ, ಉತ್ತಮ ವಿಮಾನ ನಿಲ್ದಾಣ ಮತ್ತು ಸಂಪರ್ಕ ವ್ಯವಸ್ಥೆಗಳ ಅಭಿವೃದ್ಧಿಗೆ ಸರಕಾರ ಈ ಬಾರಿ ವಿಶೇಷ ಆಸ್ಥೆ ವಹಿಸಲಾಗಿದೆ. ನಾಸಿಕ್ ನಗರದ ಉನ್ನತಿಗೆ ಇದು ಪೂರಕ ಎಂಬಂತೆ ಸರಕಾರ ಯೋಜನೆಗಳನ್ನು ಜಾರಿಗೊಳಿಸಿದೆ. ನಾಸಿಕ್ ಕುಂಭಮೇಳವು ವಸತಿ, ಆಹಾರ, ಸಾರಿಗೆ, ವೈದ್ಯಕೀಯ ಮತ್ತು ಭದ್ರತೆಯೊಂದಿಗೆ ಸಂಪೂರ್ಣವಾಗಿ ಯೋಜಿತ ತಾತ್ಕಾಲಿಕ ದೊಡ್ಡ- ನಗರ ವಾಗಿ ತಲೆಯೆತ್ತಲಿದೆ. ಇವೆಲ್ಲವನ್ನೂ ಕೋಟ್ಯಂತರ ಜನರನ್ನು ಸುರಕ್ಷಿತವಾಗಿ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಕುಂಭಮೇಳದ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುಲಾಗುತ್ತಿದೆ, ಇದರಿಂದ ಪರಿಸರ ಹಾನಿಗೊಳಾಗುತ್ತಿದೆ ಎಂಬ ಆರೋಪ, ಅಪಸ್ವರ ಸಹ ಅಲ್ಲಲ್ಲಿ ಕೇಳಿಬಂದಿದೆ. ಆದರೆ, ಇಕ್ಕಟ್ಟಾದ ಗೋದಾವರಿ ತೀರದ ಪರಿಸರದಲ್ಲಿ ಕುಂಭಮೇಳವನ್ನು ಸಂಘಟಿಸುವುದು ಸುಲಭದ ಮಾತಲ್ಲ. ಏನೇ ಮಿತಿಗಳಿದ್ದರೂ ಈ ಬಾರಿಯ ನಾಸಿಕ್ ಕುಂಭಮೇಳ ರೈಸುವುದರಲ್ಲಿ ಸಂದೇಹವಿಲ್ಲ.
ಕಳೆದ ವರ್ಷ ಪ್ರಯಾಗದಲ್ಲಿ ನಡೆದ ಕುಂಭಮೇಳವು ಯಶಸ್ವಿಯಾಗಿತ್ತು. ಹಲವು ಕೋಟಿಜನರು ಭಾಗವಹಿಸಿ, ಗಂಗೆಯಲ್ಲಿ ಸ್ನಾನ ಮಾಡಿದರು. ಈ ವರ್ಷ ನಾಸಿಕದಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭಮೇಳವು ಅದೇ ರೀತಿ ಜನರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ. ದಕ್ಷಿಣ ಭಾರತಕ್ಕೆ ಹತ್ತಿರವಿರುವುದರಿಂದಾಗಿ, ಈ ಭಾಗದ ಜನರು ಅಧ್ಯಾತ್ಮದ ಅನುಭೂತಿಯನ್ನು ಪಡೆಯಲು ಇದೊಂದು ಉತ್ತಮ ಅವಕಾಶ. ಈಗಲೇ ಸಿದ್ಧತೆ ಮಾಡಿಕೊಳ್ಳಿ, ಹೊರಡಿ ನಾಸಿಕ ಕುಂಭಮೇಳದತ್ತ! ಗೋದಾವರಿಯಲ್ಲಿ ಸ್ನಾನ ಎಂದರೆ, ನಮ್ಮ ದೇಶದ ಪುರಾತನ ಪರಂಪರೆಯಲ್ಲಿ ಮಿಂದೇಳುವುದು ಎಂದೇ ಅರ್ಥ! ಅಲ್ಲವೇ?
ಯಾವಾಗ ಏನು ಎತ್ತ ?
ಸಿಂಹಸ್ಥ ಕುಂಭಮೇಳವು ಅಕ್ಟೋಬರ್ 31, 2026ರಿಂದ ಆರಂಭಗೊಂಡು ಜುಲೈ 24, 2028ರವರೆಗೆ ನಡೆಯಲಿದೆ.
ಆಗಸ್ಟ್ 2, 2027: ಮೊದಲ ಅಮೃತ ಸ್ನಾನ.
ಆಗಸ್ಟ್ 31, 2027: ಎರಡನೆಯ ಅಮೃತ ಸ್ನಾನ.
ಸಪ್ಟೆಂಬರ್ 11 ಮತ್ತು 12, 2027:
ಸಂಪನ್ನ ಅಮೃತ ಸ್ನಾನ.
ಜುಲೈ 24, 2028:
ಧ್ವಜಾವರೋಹಣದೊಂದಿಗೆ ಮೇಳಕ್ಕೆ ತೆರೆ
ಇತರ ಪ್ರೇಕ್ಷಣೀಯ ಸ್ಥಳಗಳು
ನಾಸಿಕ್‌ನಲ್ಲಿ ಭೇಟಿ ನೀಡಲು ಇನ್ನೂ ಹಲವು ಸ್ಥಳಗಳಿವೆ. ಇಲ್ಲಿನ ಪ್ರವಾಸದಲ್ಲಿ ಸುಲಾ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡುವುದನ್ನು ಸೇರಿಸಿಕೊಳ್ಳಬಹುದು. ಈ ದ್ರಾಕ್ಷಿ ತೋಟವನ್ನು ಮಹಾರಾಷ್ಟ್ರ ದಲ್ಲಿ ಸ್ಥಾಪಿಸಲಾದ ಮೊದಲನೆಯ ತೋಟ ಎಂದು ಪರಿಗಣಿಸಲಾಗಿದೆ. ಸೋಮೇಶ್ವರ ಜಲಪಾತ, ದೂಧ್‌ಸಾಗರ್ ಜಲಪಾತ ಮತ್ತು ಅಂಜನೇರಿ ಬೆಟ್ಟಗಳು ಇಲ್ಲಿನ ಸುಂದರವಾದ ಆಕರ್ಷಣೆಗಳಾಗಿವೆ. ಚಾರಣ ಉತ್ಸಾಹಿಯಾಗಿದ್ದವರು, ಹರಿಹರ ಕೋಟೆ ಮತ್ತು ನಾಶಿಕ್ ಬಳಿಯ ಇತರ ಅನೇಕ ಟ್ರೆಕ್ ಗಳಿಗೆ ಚಾರಣವನ್ನು ಯೋಜಿಸಬಹುದು. ನಾಣ್ಯ ವಸ್ತುಸಂಗ್ರಹಾಲಯ ಮತ್ತು ಗಾರ್ಗೋಟಿ ವಸ್ತುಸಂಗ್ರಹಾಲಯದಂತಹ ನಾಶಿಕ್‌ನಲ್ಲಿರುವ ವಸ್ತುಸಂಗ್ರಹಾಲಯಗಳು ಪ್ರಾಚೀನ ವಸ್ತುಗಳನ್ನು ವೀಕ್ಷಿಸಲು ಉತ್ತಮ ಸ್ಥಳಗಳಾಗಿವೆ. ಇಗತ್ಪುರಿ ವಿಶ್ರಾಂತಿಧಾಮ ಸಾಹಸ ಚಟುವಟಿಕೆಗಳಿಗೆ ಸೂಕ್ತ.
(ಪ್ರಾತಿನಿಧಿಕ ಚಿತ್ರಗಳನ್ನು ಬಳಸಲಾಗಿದೆ)