ರಾಜಶ್ರೀ ಟಿ.ರೈ ಪೆರ್ಲ
ರಾಗಿಯನ್ನು ತೀರಾ ಕಡಿಮೆ ಬೆಳೆಯುವ ನಮ್ಮ ರಾಜ್ಯದ ಕರಾವಳಿಯಲ್ಲಿ, ರಾಗಿಯ ಕುರಿತು ಕೆಲವು ಜನಪದ ಕಥೆಗಳಿವೆ ಎಂಬುದು ವಿಶೇಷ.
ತುಳು ಜನಪದದಲ್ಲಿ ಹಲವಾರು ಮೌಖಿಕ ಕಥನಗಳಿವೆ. ಬಾಳೆಮೀನು ಮುಗುಡು ಮೀನು, ಕಲ್ಲುಟ್ಟಿ, ಕಲ್ಕುಡ, ಬಾಲೆ ಜೇವು ಮಾಣಿಗ ಮುಂತಾದುವುಗಳ ಬೇರೆ ಬೇರೆ ಪಾಠಾಂತರಗಳ ಕುರಿತಾಗಿ ಈಗಾಗಲೇ ಹಲವಾರು ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಇದೇ ಸಾಲಿಗೆ ಸೇರುವ ತುಳುವರ ‘ರಾಗಿ ಅಕ್ಕಿ ಕಥೆ’ (ರಾಗಿ ಬಾರ್ ಕಥೆ) ಕಥನವೂ ಒಂದು.
ತುಳುನಾಡಿನಲ್ಲಿ ಬಹಳ ಹಿಂದಿನಿಂದಲೇ ಭತ್ತ ಕುಟ್ಟುವಾಗ, ನೇಜಿ ನೆಡುವಾಗ, ಬುಟ್ಟಿ,ಚಾಪೆ ಹೆಣೆಯುವಾಗ ಇತ್ಯಾದಿ ತಮ್ಮ ಕೆಲಸದ ಸಮಯದಲ್ಲಿ ಕಬಿತಗಳನ್ನು ಕಟ್ಟಿ ಹಾಡುತ್ತಿದ್ದರು ಎನ್ನುವುದು ಈಗಾಗಲೇ ಸಾಬೀತಾದ ವಿಚಾರ.
ತುಳುನಾಡಿನಲ್ಲಿ ಪ್ರಚಲಿತದಲ್ಲಿರುವ ರಾಗಿ ಅಕ್ಕಿಯ ಕುರಿತು ಜನಪದ ಕಥೆಯ ಬೇರೆ ಬೇರೆ ಅವತರಣಿಕೆಗಳು ಲಭ್ಯವಿವೆ. ಒಂದು ಪಠ್ಯದಲ್ಲಿ ಇದು ತುಳುನಾಡಿನಲ್ಲಿ ಬೆಳೆಯುತ್ತಿದ್ದ ‘ಅತಿಕಾರೆ’ ಎನ್ನುವ ಭತ್ತದ ತಳಿಯು ದೈವತ್ವಕ್ಕೆ ಏರಿದ ಕಥೆ ಆದರೆ ಇನ್ನೊಂದು ಪಠ್ಯದಲ್ಲಿ ಇದು ಭತ್ತ ರಾಗಿಗೆ ಬುದ್ಧಿ ಹೇಳುವ ಕಥೆ, ಹಾಗೆಯೇ ಮತ್ತೊಂದು ಅವತರಣಿಕೆಯಲ್ಲಿ ರಾಗಿ ಭತ್ತಕ್ಕೆ ಸಮಾಧಾನ ಹೇಳುವ ಕತೆ. ಹೀಗೆ ಬೇರೆ ಬೇರೆ ರೀತಿಯ ಕಥನಗಳು ಲಭ್ಯವಿವೆ.
ರಾಮಧಾನ್ಯಚರಿತೆ ರಾಮಾಯಣದ ಜೊತೆ ತಳಕು ಹಾಕಿಕೊಂಡಿದ್ದರೆ ಇಲ್ಲಿ ಈ ರೀತಿಯ ಯಾವ ಉಲ್ಲೇಖಗಳೂ ಬರುವುದಿಲ್ಲ. ಭತ್ತದ ಕೃಷಿಯೇ ಪ್ರದಾನವಾಗಿರುವ ತುಳುನಾಡಿನಲ್ಲಿ ರಾಗಿಯ ಜೊತೆ ಜೋಡಿಕೊಂಡಿರುವ ಈ ಕಥೆಗಳು ನಿಜಕ್ಕೂ ಬಹಳ ಕುತೂಹಲಕಾರಿ ಯಾಗಿದೆ.
ಇದನ್ನೂ ಓದಿ: Commercial Crop: ಹೆಸರುಕಾಳು, ಕಡ್ಳೆಬೇಳೆ ಬೆಲೆ ಗಗನಮುಖಿ
ಪಠ್ಯ ಒಂದು: ಒಂದು ಪಠ್ಯದಲ್ಲಿ ಅತಿಕಾರೆ ಭತ್ತದ ತಳಿ ಈಶ್ವರ ದೇವರ ಅನುಗ್ರಹ ಪಡೆದು ಭೂಮಿಗೆ ಬರುತ್ತದೆ. ಅಂದಿನ ವಿವಿಧ ಸಮುದಾಯ ವಿಭಾಗ ವ್ಯವಸ್ಥೆಯ ಮಂದಿಗಳ ಬಳಿಗೆ ಹೋಗಿ ಅವಮಾನ ಮತ್ತು ಬೇಸರಗೊಂಡು ಘಟ್ಟಕ್ಕೆ ತೆರಳುತ್ತದೆ. ಅಲ್ಲಿಯೂ ಅದಕ್ಕೆ ಸರಿಯಾದ ಮಾನ್ಯತೆ ದೊರೆಯುವುದಿಲ್ಲ. ಕೊನೆಗೆ ಕೈಲಾಸಕ್ಕೆ ಹಿಂತಿರುಗುವ ದಾರಿಯಲ್ಲಿ ರಾಗಿಯನ್ನು ಭೇಟಿಯಾಗುತ್ತದೆ. ರಾಗಿ ಅದನ್ನು ಸರಿಯಾದ ಮನೆಗೆ ಸೇರಿಸುವೆ ಎಂದು ಸಮಾಧಾನ ಮಾಡಿಸಿ ಬಂಟರ ಮನೆಗೆ ಸೇರಿಸಿತು ಎಂದು ಈ ಕಥೆ ನಿರೂಪಿಸುತ್ತಾ ಹೋಗುತ್ತದೆ. ಈ ಕಥೆಗೆ ಪೂರಕವಾಗಿ ಅತಿಕಾರೆ ಎನ್ನುವ ಭತ್ತದ ತಳಿ ತುಳುನಾಡಿನಲ್ಲಿ ಬಹಳ ಪಾವಿತ್ರ್ಯತೆ ಯನ್ನು ಹೊಂದಿರುವುದನ್ನು ಗಮನಿಸಬಹುದು.
ರಾಗಿಯನ್ನು ತೀರಾ ಕಡಿಮೆ ಬೆಳೆಯುವ ನಮ್ಮ ರಾಜ್ಯದ ಕರಾವಳಿಯಲ್ಲಿ, ರಾಗಿಯ ಕುರಿತು ಕೆಲವು ಜನಪದ ಕಥೆಗಳಿವೆ ಎಂಬುದು ವಿಶೇಷ. ಆದರೆ ಇದೇ ಭತ್ತದ ತಳಿ ಇತರ ಜನಾಂಗ ಗಳಿಗೂ(ಕಾನದ ಕಟದ ) ಒಲಿದ ಕಥೆಗಳು ಪ್ರಚಲಿತದಲ್ಲಿ ಇವೆ.
ಪಠ್ಯ ಎರಡು
ಒಂದು ದಿನ ರಾಗಿ ಗದ್ದೆ ಬದುವಿನಲ್ಲಿ ಕುಳಿತಿರುವಾಗ ಭತ್ತ ಕಣ್ಣು , ಮೂಗು ಒರೆಸಿಕೊಂಡು ಕೋಪದಲ್ಲಿ ಸಂಕಟದಲ್ಲಿ ನಡೆದುಕೊಂಡು ಹೋಗುತ್ತಿತ್ತಂತೆ. ಇದನ್ನು ನೋಡಿದ ರಾಗಿ ಏನಾಯಿತು ಎಂದು ವಿಚಾರಿಸಿತು. ಆಗ ಭತ್ತ, “ಈ ಮನುಷ್ಯರ ಸಹವಾಸವೇ ಬೇಡ, ಇವರು ನನ್ನನ್ನು ಬಡಿದು, ಗುದ್ದಿ ಸಿಪ್ಪೆ ಸುಳಿಯುತ್ತಾರೆ,ನಾನು ಎಲ್ಲಿಗಾದರೂ ಹೋಗುತ್ತೇನೆ" ಎಂದಿತು. ಆಗ ರಾಗಿ, “ಇಷ್ಟಕ್ಕೆ ಈ ರೀತಿ ಎದ್ದು ಹೋಗುವುದಾ!
ನೀನು ಹಾಗೆ ಹೋಗುವುದಾದರೆ ನಿನಗಿಂತ ಮೊದಲು ನಾನು ಊರು ಬಿಡಬೇಕಿತ್ತು. ನಿನಗೆ ಅಷ್ಟೇ ಅಲ್ವಾ ಮಾಡುವುದು, ನನ್ನನ್ನು ಇವರು ಮೊದಲು ಬುಡ ಸಹಿತ ಕಿತ್ತು ನೆಲಕ್ಕೆ ಹೊಡೆಯುತ್ತಾರೆ. ನಂತರ ಕೊತ್ತಲಿಂಗೆ(ತೆಂಗಿನ ಮಡಲಿನ ಬುಡದ ಭಾಗ)ಯಲ್ಲಿ ಬಡಿಯು ತ್ತಾರೆ. ಬೀಸುವ ಕಲ್ಲಿನಲ್ಲಿ ಬೀಸಿ ಪುಡಿ ಪುಡಿ ಮಾಡಿಡುತ್ತಾರೆ.
ನನಗೆಷ್ಟು ನೋವಾಗ್ಬೇಕು.ಆದರೂ ನಾವೇ ಅವರ ಪ್ರಾಣ ಉಳಿಸುವವರು ಎನ್ನುವ ಕೃತಜ್ಞತೆ ಅವರಿಗಿದೆ. ಸುಮ್ಮನೆ ಬಾ" ಎಂದು ಭತ್ತದ ಮೂಗಿನಲ್ಲಿ ಹಿಡಿದು ಎಳೆದುಕೊಂಡು ಬಂದಿ ತಂತೆ. ಹಾಗೆ ಭತ್ತದ ಮೂಗು ಉದ್ದ ಬಂತು ಎನ್ನುವಲ್ಲಿಗೆ ಈ ಕಥೆ ಮುಗಿಯುತ್ತದೆ. ಇಲ್ಲಿ ಜಗಳಕ್ಕಿಂತ ತಿಳಿ ಹೇಳುವ ಸ್ನೇಹ ಎದ್ದು ಕಾಣುತ್ತದೆ.
ಪಠ್ಯ ಮೂರು
ಈ ಕಥೆಯಲ್ಲಿ ರಾಗಿಯ ಪ್ರಸ್ತಾಪ ಬಾರದಿದ್ದರೂ ಭತ್ತ ಬಹಳ ಮುಂಗೋಪಿ ಎನ್ನುವ ವಿಚಾರವನ್ನು ಬಿಂಬಿಸಲಾಗಿದೆ. ಮೊದಲು ಭತ್ತದ ಬದಲು ಅಕ್ಕಿಯೇ ಬೆಳೆಯುತ್ತಿತ್ತು. ಒಂದು ದಿನ ಒಬ್ಬಳು ಅನ್ನ ಬೇಯಿಸಲು ಒಣ ಕಟ್ಟಿಗೆ ಸಿಗದೆ ಒದ್ದೆ ಕಟ್ಟಿಗೆ ಒಲೆಗೆ ಇಟ್ಟಳು. ಹೊಗೆ ತುಂಬಿ ಅವಳ ಕಣ್ಣು ಮೂಗಲ್ಲಿ ನೀರು ಸುರಿಯಿತು.
“ಈ ಅಕ್ಕಿಗೆ ಸಿಪ್ಪೆ (ಉಮಿ) ಆದರೂ ಇರುತ್ತಿದ್ದರೆ ಅದರಿಂದ ಕೆಂಡ ಮಾಡಿ ಅನ್ನ ಬೇಯಿಸು ತ್ತಿದ್ದೆ, ಬತ್ತಲೆ ಹುಟ್ಟಿತು ಕರ್ಮದ್ದು .." ಅಂದಳಂತೆ. ಅಕ್ಕಿಗೆ ಎಲ್ಲಿಲ್ಲದ ಸಿಟ್ಟು ಬಂದು ಆನಂತರ ಗಟ್ಟಿ ಸಿಪ್ಪೆ ಅಂಟಿಸಿಕೊಂಡೇ ಭತ್ತ ಆಗಿ ಹುಟ್ಟಿತು. ಅದರ ಸಿಪ್ಪೆಯನ್ನು ಒಲೆಗೆ ಹಾಕಬಹುದು.
ಇದೇ ಕಥೆಯ ಭಾಗ ಎನ್ನುವ ಹಾಗೆ ಭತ್ತ ದೊಡ್ಡ ದೊಡ್ಡ ಉಂಡೆಯ ಹಾಗೆ ಬೆಳೆದು ಅಂಗಳಕ್ಕೆ ಉರುಳಿಕೊಂಡು ಬರುತ್ತಿತ್ತಂತೆ. ಭತ್ತ ಒಣಗಿಸಲು ಅಂಗಳ ಸಿದ್ದ ಮಾಡಿಡದ ಒಬ್ಬಳು ಭತ್ತ ಉರುಳಿ ಅಂಗಳಕ್ಕೆ ಬಂದಾಗ “ಅಬ್ಬಾ ನಿನ್ನ ಅವಸರವೇ ಎಂದು ಗದರಿ ಕೊಳ್ಳುತ್ತಾಳೆ’ ಹಾಗೆ ಮುನಿಸಿನಲ್ಲಿ ಮುದುರಿ ಭತ್ತ ಸಣ್ಣಗಾಯಿತು.
ಈಗ ಅದು ಬಲಿತರೂ ನಾವು ಕಟಾವು ಮಾಡಿ ಮನೆಗೆ ಮರ್ಯಾದೆ ಕೊಟ್ಟು ಕರೆದೊಯ್ಯದೆ ಬರುವುದಿಲ್ಲ ಹಲವಾರು ಹಿರಿಯ ವಿದ್ವಾಂಸರು ‘ರಾಮಧಾನ್ಯ ಚರಿತೆ’ಯನ್ನು ಬೇರೆ ಬೇರೆ ದೃಷ್ಟಿಕೋನದಿಂದ ನೋಡಿದ್ದಾರೆ. ಇಲ್ಲಿ ವರ್ಣ ಸಂಘರ್ಷ, ಬಡವ ಬಲ್ಲಿದ ಭೇದ , ಅಲ್ಲದೇ ಪ್ರತಿಯೊಂದು ವಸ್ತು ವ್ಯಕ್ತಿಗೆ ತನ್ನದೇ ಆದ ವೈಶಿಷ್ಟ್ಯ ಇದೆ ಎನ್ನುವ ಸಾರದ ನಿರೂಪಣೆ ಇದೆ ಎನ್ನುವ ಅಂಶವನ್ನು ಪ್ರತಿಪಾದಿಸಿದ್ದಾರೆ.
ಕನಕದಾಸರ ‘ರಾಮಧಾನ್ಯ ಚರಿತೆ’ ಪ್ರಸಿದ್ಧ ಕೃತಿ. ಇದು ಭಕ್ತಿ ಪರಂಪರೆಯಲ್ಲಿ ಹದಿನಾರನೇ ಶತಮಾನದಲ್ಲಿ ಮೂಡಿ ಬಂದ ಬಲು ದೊಡ್ಡ ಸಾಹಿತ್ಯ ಕೃತಿ ಕೊಡುಗೆ. ರಾಮಧಾನ್ಯ ಚರಿತೆಯ ಕುರಿತಾಗಿ ಬಹಳಷ್ಟು ಅಧ್ಯಯನಗಳು ನಡೆದಿವೆ. ಕನಕರ ‘ರಾಮಧಾನ್ಯ ಚರಿತೆ’ ತುಳುನಾಡಿನ ಅಂದಿನ ಜನಪದವನ್ನು ತಲುಪಿರುವುದಕ್ಕೆ ಕಷ್ಟ ಸಾಧ್ಯ. ಆದರೆ ಕನಕ ದಾಸರು ಉಡುಪಿ ಭಾಗಕ್ಕೆ ಬಂದಿದ್ದರು ಎನ್ನುವುದು ದಾಖಲಾಗಿದೆ; ಅವರು ಇಲ್ಲಿದ್ದಾಗ, ಇಲ್ಲಿನ ಜನಪದರ ರಾಗಿಯ ಕುರಿತಾದ ಈ ಜಾನಪದ ಕಥೆ ಅವರ ಅವಗಾಹನೆಗೆ ಬಂದು ಹೀಗೊಂದು ರಚನೆಗೆ ಪ್ರೇರಣೆಯಾಗಿರಬಹುದು ಎಂದು ತರ್ಕಿಸುವುದರಲ್ಲಿ ತಪ್ಪೇನಿಲ್ಲ.
ಭಾರತದಲ್ಲಿ ರಾಗಿ ಮತ್ತು ಅಕ್ಕಿ ಬೆಳೆಯುವ ಪ್ರದೇಶಗಳ ಜನಪದರಲ್ಲಿ ಇದೇ ರೀತಿಯ ಕತೆಗಳಿವೆಯೇ ಎಂದು ಅನ್ವೇಷಣೆ ನಡೆಸಿದರೆ ಮತ್ತಷ್ಟು ಹೊಸ ಹೊಳಹುಗಳು ಹುಟ್ಟಿ ಕೊಳ್ಳಬಹುದು.