ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

K Srinivas Rao Column: ಟರ್ನಿಂಗ್‌ ಪಾಯಿಂಟ್‌ ಆದ ಪೋಸ್ಟ್‌ ಕಾರ್ಡ್‌ !

ನನ್ನದು ಯಥಾಪ್ರಕಾರ ಮೌನೇನ ಕಲಹಂ ನಾಸ್ತಿ! ಪೇಪರ್ ಏಜೆನ್ಸಿ ಕಷ್ಟ; ನಿತ್ಯ ಬೆಳಿಗ್ಗೆ 4ಕ್ಕೇ ಏಳಬೇಕು. ಮನೆಗಳಿಗೆ ಹಂಚಲು ಹುಡುಗರು ಅವಶ್ಯ. ಅವರಿಗೆ ಕಾಫಿ ತಿಂಡಿ, ಜೊತೆಗೆ ಸೈಕಲ್ ಒದಗಿಸುವುದು ಸಾಧ್ಯವೇ? ಅಷ್ಟಕ್ಕೂ ಅವರು ಕೈಕೊಟ್ಟರೆ ನಾನೇ ಮನೆ ಮನೆಗೆ ಪತ್ರಿಕೆ ಕೊಟ್ಟು ಬರಬೇಕು. ಈ ಉಸಾ ಬರಿಯೇ ಬೇಡ. ನನ್ನ ನಿರುತ್ತರದಿಂದ ಅವರಿಗೆ ಕೋಪ ಬಂದಿತೆಂದು ಕಾಣು ತ್ತದೆ. ದುರ್ದಾನ ತೆಗೆದು ಕೊಂಡವರಂತೆ ಎದ್ದು ಬಿರಬಿರನೆ ಹೊರ ಹೊರಟರು. ಊರಿಗೆ ಹೋಗಿ, ಉಡುಪಿಯಿಂದ ಅಂಚೆ ಕಾರ್ಡ್ ಬರೆದಿದ್ದರು. ಒಕ್ಕಣೆ ಹೀಗಿತ್ತು.

ಕೆ.ಶ್ರೀನಿವಾಸರಾವ್, ಹರಪನಹಳ್ಳಿ

ಬಹಳ ಹಿಂದೆ ಅಂದರೆ ನನ್ನ ತಾರುಣ್ಯದ ಕಾಲ. ಅಪ್ಪನಿಗೆ ಸಹಾಯಕನಾಗಿ ಹೋಟೆಲ್ ನಡೆಸಿದೆ. ನಂತರ, ಕಾರಣಾಂತರದಿಂದ ಹೋಟೆಲನ್ನು ಗುತ್ತಿಗೆಗೆ ಕೊಟ್ಟು ಬೇರೆ ಒಬ್ಬನೇ ಮಾಡಬಹುದಾದ ವ್ಯವಹಾರಗಳ ಹುಡುಕಾಟ ಆರಂಭಿಸಿದ್ದೆ. ಆಗಾಗ ಬರುತ್ತಿದ್ದ ತಂದೆಯ ವರ ಗೆಳೆಯ ದಕ್ಷಿಣ ಕನ್ನಡದ ಹಿರಿಯರೊಬ್ಬರು ನನಗೆ ತುಂಬಾ ಆಪ್ತರಾಗಿದ್ದರು.

ಅವರು ನನ್ನ ಮುಂದಿನ ಹೆಜ್ಜೆಯ ಬಗ್ಗೆ ಮಾರ್ಗದರ್ಶನ ನೀಡುತ್ತ ಬಟ್ಟೆ ಅಂಗಡಿ, ಫ್ಯಾನ್ಸಿ ಸ್ಟೋರ್, ಬೇಕರಿ, ಎಲೆಕ್ಟ್ರಾನಿಕ್ ಶಾಪ್ ಮತ್ತಿತರೆ ಮಾಡುವಂತೆ ಸಲಹೆ ಕೊಟ್ಟರು. ನನಗಾಗ ಬಂಡವಾಳ ಹಾಕುವ ಚೈತನ್ಯವಿರಲಿಲ್ಲ. ಬರುವ ಅಲ್ಪ ಬಾಡಿಗೆ ಹಣ ತಂದೆ ತಾಯಿ, ಪತ್ನಿ, ಮಕ್ಕಳ ಊಟ,ತಿಂಡಿ, ಶಾಲೆಯ ವೆಚ್ಚಕ್ಕೇ ಖಾಲಿ!

ಹಾಗಾಗಿ ಎಲ್ಲಕ್ಕೂ ಹಿಂಜರಿದೆ. ಹಾಗೆಯೇ ಮೂರು ವರ್ಷ ಕಳೆದರೂ ಉದ್ಯೋಗದ ಸಮಸ್ಯೆ ಅಂತ್ಯ ಕಾಣಲಿಲ್ಲ. ಅವರೂ ಯಾವುದ್ಯಾವುದೋ ವ್ಯವಹಾರ ಮಾಡುವಂತೆ ಒತ್ತಾಯಿಸುತ್ತಿದ್ದರು. ಯಾವು ದಕ್ಕೆ ಪ್ರಯತ್ನಿಸಿದರೂ ಬೆಕ್ಕು ಅಡ್ಡಬಂದ ಅನುಭವ!

ಇದನ್ನೂ ಓದಿ: Dr Vijay Darda Column: ವಲಸಿಗರೆಲ್ಲಾ ಅಮೆರಿಕ ತೊರೆದರೆ ಏನಾಗುತ್ತದೆ ?

ಆ ಹಿರಿಯರು ಸಲಹೆ ಕೊಟ್ಟದ್ದು ನನಗೆ ಸರಿಕಾಣುತ್ತಿರಲಿಲ್ಲ. ಅವರಿಗೂ ಒಂಥರಾ ಬೇಸರ ! ಒಂದು ದಿನ ಬೆಳಿಗ್ಗೆ ತಿಂಡಿ ವೇಳೆಗೆ ಹಿರಿಯರು ಬಂದರು. ‘ಶ್ರೀನಿವಾಸ, ಒಂದು ಲೀಡಿಂಗ್ ದಿನ ಪತ್ರಿಕೆಯ ಹರಪನಹಳ್ಳಿ ಏಜೆನ್ಸಿ ಖಾಲಿಯಿದ್ದು ಹೊಸ ಏಜೆನ್ಸಿ ಕೊಡಲು ಅರ್ಜಿ ಕೇಳಿದ್ದಾರೆ. ನೀನು ಮಾಡ್ತೀಯ? ನನಗೆ ಆ ಪತ್ರಿಕೆಯವರು ಪರಿಚಯ. ನಾನು ಹೇಳಿದರೆ ಖಂಡಿತ ಕೊಡುತ್ತಾರೆ. ಈಗಲೇ ಅರ್ಜಿ ಹಾಕು’ ಎಂದರು.

ನನ್ನದು ಯಥಾಪ್ರಕಾರ ಮೌನೇನ ಕಲಹಂ ನಾಸ್ತಿ! ಪೇಪರ್ ಏಜೆನ್ಸಿ ಕಷ್ಟ; ನಿತ್ಯ ಬೆಳಿಗ್ಗೆ 4ಕ್ಕೇ ಏಳಬೇಕು. ಮನೆಗಳಿಗೆ ಹಂಚಲು ಹುಡುಗರು ಅವಶ್ಯ. ಅವರಿಗೆ ಕಾಫಿ ತಿಂಡಿ, ಜೊತೆಗೆ ಸೈಕಲ್ ಒದಗಿಸುವುದು ಸಾಧ್ಯವೇ? ಅಷ್ಟಕ್ಕೂ ಅವರು ಕೈಕೊಟ್ಟರೆ ನಾನೇ ಮನೆ ಮನೆಗೆ ಪತ್ರಿಕೆ ಕೊಟ್ಟು ಬರಬೇಕು. ಈ ಉಸಾಬರಿಯೇ ಬೇಡ. ನನ್ನ ನಿರುತ್ತರದಿಂದ ಅವರಿಗೆ ಕೋಪ ಬಂದಿತೆಂದು ಕಾಣು ತ್ತದೆ. ದುರ್ದಾನ ತೆಗೆದುಕೊಂಡವರಂತೆ ಎದ್ದು ಬಿರಬಿರನೆ ಹೊರ ಹೊರಟರು. ಊರಿಗೆ ಹೋಗಿ, ಉಡುಪಿಯಿಂದ ಅಂಚೆ ಕಾರ್ಡ್ ಬರೆದಿದ್ದರು. ಒಕ್ಕಣೆ ಹೀಗಿತ್ತು.

‘ಶ್ರೀನಿವಾಸರಾಯರೇ, ನಾನು ನಿಮ್ಮ ಒಳಿತಿಗಾಗಿ ಅನೇಕ ವ್ಯವಹಾರಗಳ ಮಾರ್ಗ ತೋರಿಸಿದೆ. ಆದರೆ ನೀವು ಯಾವುದಕ್ಕೂ ಮುಂದೆ ಬರಲಿಲ್ಲ. ಮುಖ್ಯವಾಗಿ ನಿಮಗೆ ಯಾವುದೇ ವ್ವವಹಾರದಲ್ಲಿ ಆಸಕ್ತಿಯಿಲ್ಲ. ಧೈರ್ಯವೂ ಇಲ್ಲ. ಕೊನೆಗೆ ದಿನಪತ್ರಿಕೆ ಏಜೆನ್ಸಿಯಾದರೂ ನಿಮಗೆ ಕೊಡಿಸೋಣ ವೆಂದು ಪ್ರಸ್ತಾಪಿಸಿದರೆ ಅದಕ್ಕೂ ಹೇಡಿಯಂತೆ ನಕಾರ ಸೂಚಿಸಿದಿರಿ. ಒಂದಂತೂ ನನಗೆ ಖಾತ್ರಿ ಯಾಗಿದೆ. ನೀವು ಏನೂ ಮಾಡಲು ನಾಲಾಯಕ್!

ವೇಸ್ಟ್ ಬಾಡಿ! ನಿಮ್ಮ ಬದುಕು ಇಷ್ಟೇ. ಮನೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತ ಸ್ನೇಹಿತರೊಂದಿಗೆ ಕಾಡು ಹರಟೆ ಹೊಡೆಯುತ್ತ ಇದ್ದು ಬಿಡಿ. ಇನ್ನು ನನ್ನನ್ನು ಮಾತನಾಡಿಸಬೇಡಿ.’ ನನಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು!

ಇಷ್ಟೊಂದು ಭರ್ತ್ಸನೆಯೇ? ನಿಜಕ್ಕೂ ನಾನು ಸೋಮಾರಿಯೇ? ಏನೂ ಮಾಡಲಾಗದ ಅಯೋಗ್ಯ ನೇ ? ಕಣ್ಣು ಕೆಂಪಾಗಿತ್ತು. ರೋಷ ಉಕ್ಕೇರಿತ್ತು. ಅವರು ಬರೆದ ಕಾರ್ಡ್ ಕಣ್ಣೆದುರು ಗಹಗಹಿಸಿ ನಕ್ಕಂತಾಯಿತು! ನಾನೇನು, ನನ್ನ ಯೋಗ್ಯತೆಯೇನು ತೋರಿಸಲೇ ಬೇಕು ಎಂದು ನಿರ್ಧರಿಸಿ ರಣಧೀರ ಕಂಠೀರವನಂತೆ ಎದ್ದೆ. ದೇವರಿಗೆ ಕೈಮುಗಿದು, ನಾವೇ ಬಾಡಿಗೆಗೆ ಕೊಟ್ಟಿದ್ದ ಹೋಟೆಲಿಗೆ ಹೋದೆ.

ಅವರಾಗಲೇ ವ್ಯಾಪಾರ ತುಂಬಾ ಕುಸಿದಿದ್ದರಿಂದ ಹೋಟೆಲ್ ಬಿಡಲು ಯೋಚಿಸುತ್ತಿದ್ದದ್ದು ಗೊತ್ತಿತ್ತು. ಹೋದವನೇ ‘ನೀವು ಹೋಟೆಲ್ ವಾಪಸ್ ಕೊಡಲು ಎಷ್ಟು ಹಣ ಕೊಡಬೇಕು?‘ ಎಂದೆ. ಒಂದು ಸುತ್ತಿನ ಮಾತುಕತೆಯ ನಂತರ ನಿರ್ಧಾರವಾಗಿ ಮತ್ತೊಬ್ಬರ ಬಳಿ ಸಾಲ ತಂದು ಹಾಳಾಗಿದ್ದ ಕುರ್ಚಿ, ಟೇಬಲ್, ರುಬ್ಬುವ ಮಷಿನ್, ಎಲ್ಲವನ್ನೂ ಬದಲಾಯಿಸಿ ಹೋಟೆಲ್ ಹೆಸರು ಬದಲಾಯಿಸಿ ಆರಂಭಿಸಿದೆ.

ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶ್ರಮಿಸಿದ ಫಲವಾಗಿ ಎರಡು ವರ್ಷದಲ್ಲಿ ಸಾಲ ಮುಕ್ತನಾದೆ. ವ್ಯಾಪಾರ, ಜನಮೆಚ್ಚುಗೆ ಲಭಿಸಿ ಕಟ್ಟಡವೂ ಹೊಸದಾಯಿತು.ಇಂದು ಜೀವನ ಹಸಿರಾಗಿದ್ದು ಎಲ್ಲವೂ ಸುಂದರವಾಗಿ ತೋರುತ್ತಿದೆ. ಒಂದಂತೂ ದಿಟ! ಆ ಹಿರಿಯರು ಕಟುವಾದ ಶಬ್ದಗಳಿಂದ ಆ ಕಾರ್ಡ್‌ನ್ನು ಬರೆಯದಿದ್ದರೆ ನನ್ನ ಬದುಕು ಹೇಗಿರುತ್ತಿತ್ತೋ? ಅವರು ಬರೆದ ಆ ಅಂಚೆಕಾರ್ಡ್ ನನ್ನ ಬದುಕಿಗೆ ಒಂದು ತಿರುವು ನೀಡಿತ್ತು! ನನ್ನ ಭವಿಷ್ಯವನ್ನೇ ಬದಲಿಸಿದ ಆ ಕಾರ್ಡನ್ನು ಜೋಪಾನ ವಾಗಿರಿಸಿದ್ದೇನೆ! ಈಗಲೂ ತಿಂಗಳಿಗೊಮ್ಮೆ ಆ ಪತ್ರವನ್ನು ಓದಿ ಧೈರ್ಯವನ್ನು ರೀಚಾರ್ಜ್ ಮಾಡಿ ಕೊಳ್ಳುತ್ತೇನೆ.