Basavaraj M Yaraguppi Column: ಮೇ ಫ್ಲವರ್‌ನ ಕೆಂಬಣ್ಣ !
ಇಲ್ಲಿ ಹೇಳ ಹೊರಟಿರುವುದು ಉಜ್ವಲ ಕೆಂಬಣ್ಣದ ಹೂ ಬಿಡುವ ಗುಲ್ಮೊಹರ್ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ ಲಕ್ಷ್ಮೇಶ್ವರದ ಇಟ್ಟಿಗೆರೆ, ಬಟ್ಟೂರ ಹಾಗೂ ಗೊಜನೂರ ಮಾರ್ಗದ ರಸ್ತೆ ಬದಿಯಲ್ಲಿ ಮೇ ತಿಂಗಳಲ್ಲಿ ಕೆಂಪು ಹೂಗಳ ಸಂಭ್ರಮ ಈಗ ಹೇಳತೀರದು! ಹಸಿರು ಎಲೆಗಳಿಗೆ ಒಂಚೂರೂ ಜಾಗ ನೀಡದೇ ಅರಳುವ ಹೂವು!


ಬಸವರಾಜ ಎಂ. ಯರಗುಪ್ಪಿ
ಮೇ ತಿಂಗಳಿನ ಬಿರುಬೇಸಗೆಯ ದಿನಗಳಲ್ಲಿ ರಸ್ತೆಯುದ್ದಕ್ಕೂ, ಉದ್ಯಾನವನಗಳಲ್ಲಿ ಮೈ ತುಂಬಾ ಕೆಂಪು ಹೂವುಗಳನ್ನು ತುಂಬಿಕೊಳ್ಳುವ ಮೇ ಫ್ಲವರ್ ಮರಗಳು, ಸುತ್ತಲಿನ ಪರಿಸರವನ್ನೇ ವರ್ಣಮಯ ಮಾಡುವುದಂತೂ ನಿಜ.
ಇಲ್ಲಿ ಹೇಳ ಹೊರಟಿರುವುದು ಉಜ್ವಲ ಕೆಂಬಣ್ಣದ ಹೂ ಬಿಡುವ ಗುಲ್ಮೊಹರ್ ಮರದ ಬಗ್ಗೆ. ನನ್ನೂರು ರಾಮಗೇರಿಯಿಂದ ಲಕ್ಷ್ಮೇಶ್ವರದ ಇಟ್ಟಿಗೆರೆ, ಬಟ್ಟೂರ ಹಾಗೂ ಗೊಜನೂರ ಮಾರ್ಗದ ರಸ್ತೆ ಬದಿಯಲ್ಲಿ ಮೇ ತಿಂಗಳಲ್ಲಿ ಕೆಂಪು ಹೂಗಳ ಸಂಭ್ರಮ ಈಗ ಹೇಳತೀರದು! ಹಸಿರು ಎಲೆಗಳಿಗೆ ಒಂಚೂರೂ ಜಾಗ ನೀಡದೇ ಅರಳುವ ಹೂವು! ತನ್ನ ಕೆಂಬಣ್ಣದ ಚೆಲುವ ಸಿರಿಯ ಹೂಗಳಿಂದ ಕ್ಷಣ ಮನಸ್ಸು ಮುದಗೊಳಿಸುವ, ತನ್ನ ಅಂದದ ಬಣ್ಣದಿಂದ ಆಕರ್ಷಿಸುವ ಗುಲ್ ಮೊಹರ್ ಹೂಗಳು ಬಿರು ಬೇಸಿಗೆಯ ಬಿಸಿಲ(ಬೆಂಕಿಯ)ಲ್ಲಿ ಅರಳುವ ಸುಂದರಿಯರು! ಈ ವರ್ಷ ಎಪ್ರೀಲ್ - ಮೇ ತಿಂಗಳಲ್ಲಿ ಶಿರಹಟ್ಟಿಯ ಡಬಾಲಿ ಶಾಲೆಯ ಆವರಣದಲ್ಲಿ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ ಕೆಂಪು ಹೂಗಳ ಗುಲ್ಮೊಹರ್ ಮರಗಳು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಜತೆಗೆ, ನಮ್ಮ ರಾಜ್ಯದಾದ್ಯಂತ ಬಿಸಿಲಿನ ದಿನಗಳಲ್ಲಿ ಅರಳಿಕೊಂಡು, ಬೇಸಗೆಯ ತಾಪಕ್ಕೆ ಹೊಸ ಭಾವದ ಸ್ಪರ್ಶ ನೀಡಿವೆ.
ಬಹುತೇಕ ರಸ್ತೆ ಪಕ್ಕದಲ್ಲಿ, ಶಾಲಾ ಆವರಣದಲ್ಲಿ ಗೋಚರಿಸುವ ವಿಶಿಷ್ಟ- ಅಷ್ಟೇ ವಿಭಿನ್ನ ಬಗೆಯಲ್ಲಿ ಬೆಳೆದು ನಿಲ್ಲುವ ಈ ಗುಲ್ ಮೊಹರ್ ಮರಗಳಲ್ಲಿನ ಕೆಂಪು ಹೂಗಳನ್ನು ಕಂಡ ಕ್ಷಣ ಮನಸ್ಸು ಸೆಳೆವ ಜೊತೆಗೆ ಹಿತಾನುಭವ ನೀಡುತ್ತವೆ.
ಇದನ್ನೂ ಓದಿ: Vinayak V Bhat Column: ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ
ಇವುಗಳಿಗೆ ಉತ್ತರ ಕರ್ನಾಟಕದಲ್ಲಿ ಸಂಕೇಶ್ವರ ಮರ ಎಂದೇ ಹೆಸರು; ಮೇ ಫ್ಲವರ್, ಗುಲ್‌ಮೊಹರ್ ಹೆಸರಿನಿಂದಲೂ ಕರೆಯುವುದುಂಟು. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಕೆಂಡ ದಂತಹ ಉರಿ ಬಿಸಿಲು. ಸೆಕೆಯ ಸಂಕಟ, ತಾಪಕ್ಕೆ ದೂರ ಓಡುವಂತೆ ಮಾಡಿದ್ದರೆ, ಅಂಥಾ ಬಿಸಿಲಲ್ಲಿ ಗುಲ್ (ಹೂ) ಮೊಹರ್ (ನವಿಲು) ಜೀವ ಕಳೆ ಪಡೆದಿರುವಂತೆ, ನಸು ನಗುತ್ತಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವುದು ಈ ಹೂವಿನ ವಿಶೇಷತೆ.
ಡೆಲೋನಿಕ್ಸ್ ರೆಜಿಯಾ ಎಂಬುದು ಗುಲ್‌ಮೊಹರ್ ಮರದ ವೈಜ್ಞಾನಿಕ ಹೆಸರು. ಇದು ಮಡಗಾಸ್ಕರ್ ದ್ವೀಪದ ಮೂಲನಿವಾಸಿ. ತನ್ನ ಹೊಳೆಯುವ ಹೂವುಗಳ ಸಿರಿವಂತಿಕೆಯಿಂದಾಗಿ, ಈಗ ಜಗತ್ತಿನ ಹಲವು ದೇಶಗಳಿಗೆ ಪಸರಿಸಿವೆ, ಅಲಂಕಾರಿಕ ಮರವಾಗಿ ಬೀದಿಯುದ್ದಕ್ಕೂ ಬೆಳೆದಿವೆ. ವಸಂತ ಮತ್ತು ಬೇಸಿಗೆಯಲ್ಲಿ ಹಲವಾರು ವಾರಗಳವರೆಗೆ ಇದರ ಹೂವುಗಳು ಜ್ವಾಲೆಯ ರೀತಿ ಕಂಗೊಳಿಸುತ್ತವೆ!
ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದ ಆರೇಳು ವರ್ಷಗಳಿಂದ ಸಾವಿರಾರು ಗುಲ್ ಮೊಹರ್ ಮರಗಳ ಮಾರಣ ಹೋಮವಾಗಿವೆ. ಮತ್ತೆ ಹೊಸ ಮಾರ್ಗಕ್ಕೆ ಈಗಿನ ಅನೇಕ ಗುಲ್ ಮೊಹರ್ ಮರಗಳು ಬಲಿಯಾಗಿವೆ. ಬಹುಬೇಗನೆ ಬೆಳೆಯುವ ಈ ಮರಗಳು, ಬೇಸಗೆಯಲ್ಲಿ ಎಲೆ ಗಳನ್ನು ಪೂರ್ತಿಯಾಗಿ ಉದುರಿಸಿಕೊಂಡು, ಮೈ ತುಂಬಾ ಹೂವುಗಳನ್ನೇ ಅರಳಿಸಿ ಕೊಳ್ಳುವುದು ಒಂದು ಸಣ್ಣ ಸೋಜಿಗ! ಕರಾವಳಿಯಿಂದ ಬಯಲುಸೀಮೆಯ ತನಕ, ಹಳ್ಳಿಯ ರಸ್ತೆ ಯಂಚಿನಿಂದ ನಗರದ ಉದ್ಯಾನವನದ ತನಕ ಎಲ್ಲೆಲ್ಲೂ ಹೂ ಬಿಟ್ಟಿರುವ ಮೇ ಫ್ಲವರ್ ಮರದ ವರ್ಣಸಿರಿಯನ್ನು ಕಣ್ ತುಂಬಿ ಕೊಳ್ಳಲು ಇದೇ ಸಕಾಲ!