Shashidhara Halady Column: ಮರಗಳೇ ಎನ್ನ ಮಕ್ಕಳು !
ಮಕ್ಕಳಿಲ್ಲದ ಆ ದಂಪತಿಗೆ, ಆ ರಸ್ತೆಯುದ್ದಕ್ಕೂ ಬೆಳೆದು ನಿಂತ ಮರಗಳೇ ಮಕ್ಕಳು ಎನಿಸಿ ದವು. ಅವುಗಳು ಬೆಳೆಯುವುದನ್ನು ನೋಡುತ್ತಾ, ಅವುಗಳ ಪಾಲನೆ ಪೋಷಣೆ ಮಾಡುತ್ತಾ, ಬದುಕಿ ನಲ್ಲಿ ಪ್ರೀತಿಯನ್ನು ಕಂಡುಕೊಂಡರು ಆ ದಂಪತಿ. ಈ ನಡುವೆ, 1991ರಲ್ಲಿ ತಿಮ್ಮಕ್ಕ ನವರ ಪತಿ ಬಿಕ್ಕಲು ಚಿಕ್ಕಯ್ಯ ತೀರಿ ಹೋದಾಗ, ತಿಮ್ಮಕ್ಕ ಏಕಾಂಗಿಯಾದರು.
-
ಸಾರ್ವಜನಿಕ ರಸ್ತೆಯುದ್ದಕ್ಕೂ ನೂರಾರು ಗಿಡಗಳನ್ನು ನೆಟ್ಟು, ಅವುಗಳಿಗೆ ನೀರೆರೆದು ಪೋಷಿಸಿ, ರಕ್ಷಿಸಿ, ಮರಗಳನ್ನಾಗಿಸಿದವರು ಸಾಲುಮರದ ತಿಮ್ಮಕ್ಕ. ಹೆದ್ದಾರಿಯ ಪಕ್ಕದಲ್ಲಿ ನೆಟ್ಟು ಬೆಳೆಸಿದ ಆ ಸಾಲುಮರಗಳಿಂದ ಅವರು ಯಾವುದೇ ಆರ್ಥಿಕ ಲಾಭವನ್ನು ಬಯಸಿರ ಲಿಲ್ಲ, ನಿರೀಕ್ಷಿಸಿಯೂ ಇರಲಿಲ್ಲ! ಹಕ್ಕಿಗಳಿಗೆ, ಇತರ ಜೀವಿಗಳಿಗೆ ಆಶ್ರಯ ನೀಡಲಿ ಎಂಬುದು ಒಂದು ಆಸೆ; ರಸ್ತೆಯಲ್ಲಿ ಸಂಚರಿಸುವ ಜನರಿಗೆ ನೆರಳನ್ನು ನೀಡಲು ಎಂಬುದು ಇನ್ನೊಂದು ಬಯಕೆ. ಅಷ್ಟೇ! ಇಂತಹ ನಿಸ್ವಾರ್ಥ ಸೇವೆ ಮಾಡಿದ ಸಾಲುಮರದ ತಿಮ್ಮಕ್ಕ ನವರು, ತಾವು ಬೆಳೆಸಿದ ಮರಗಳನ್ನು ಮಕ್ಕಳಂತೆಯೇ ಕಂಡರು. ಆ ಮರಗಳನ್ನು ರಕ್ಷಿಸುವಲ್ಲಿ ಮಾತೃಪ್ರೇಮ ಮೆರೆದರು. ಹಳ್ಳಿಗಾಡಿನಲ್ಲೇ ಹುಟ್ಟಿ ಬೆಳೆದ ತಿಮ್ಮಕ್ಕನವರು, ಮರಗಳನ್ನು ನೆಡುವ ಕೈಂಕರ್ಯದ ಮೂಲಕ ಪ್ರಸಿದ್ಧರಾದರು; ಅದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಪಡೆಯಲು ದೆಹಲಿಗೆ ಹೋಗಿಬಂದರು! ರಾಷ್ಟ್ರಪತಿಗಳ ಹಸ್ತದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಅವರು ಪಡೆದಾಗ ತಮ್ಮ ಹಳ್ಳಿಯಲ್ಲಿ ಅವರು ನೆಟ್ಟ ನೂರಾರು ಆಲದ ಮರಗಳು, ಮೌನವಾಗಿ ತಮ್ಮ ಎಲೆಗಳನ್ನು ಅಲುಗಿಸಿ ಚಪ್ಪಾಳೆ ತಟ್ಟಿರಲೇಬೇಕು! ಕರ್ನಾಟಕದ ಗ್ರಾಮೀಣ ಪ್ರದೇಶದ ಪರಿಸರಪ್ರೇಮಿಯೊಬ್ಬರು ಪದ್ಮಪ್ರಶಸ್ತಿ ಪಡೆದ ಅಪರೂಪದ ಕ್ಷಣ ಅದು!
ಬದುಕಿದ್ದಾಗಲೇ ದಂತಕಥೆಯಾಗಿ ಪ್ರಸಿದ್ಧರಾದಂತಹವರ ಪಟ್ಟಿಯಲ್ಲಿ ಸಾಲು ಮರದ ತಿಮ್ಮಕ್ಕನವರ ಹೆಸರು ಅಗ್ರಗಣ್ಯ ಎನಿಸುತ್ತದೆ. ಶಾಲೆಗೆ ಹೋಗದ, ಅಕ್ಷರಾಭ್ಯಾಸ ಮಾಡದ ಈ ಮಹಿಳೆ, ಪರಿಸರ ಸಂರಕ್ಷಣೆಯಲ್ಲಿ ಮಾಡಿದ ಕೆಲಸ, ತನ್ನ ಕೆಲಸದ ಮೂಲಕ ಒಂದು ಜನಾಂಗಕ್ಕೆ ನೀಡಿದ ಪ್ರೇರಣೆಯು ಅಗಾಧ. ರಸ್ತೆಯ ಇಕ್ಕೆಲದಲ್ಲಿ ನೂರಾರು ಗಿಡಗಳನ್ನು ನೆಟ್ಟು, ಆ ಗಿಡಗಳಿಗೆ ಬೇಸಗೆಯಲ್ಲಿ ನೀರುಣಿಸಿ, ಗಿಡಗಳನ್ನು ರಕ್ಷಿಸಿ, ಬೆಳೆಸಿ, ಸಾಲುಮರಗಳ ನೆರಳನ್ನು, ಆಸರೆ ಯನ್ನು ಕಲ್ಪಿಸಿಕೊಟ್ಟ ತಿಮ್ಮಕ್ಕನವರ ಸಾಧನೆ ಮತ್ತು ಅವರು ಗಳಿಸಿದ ಮನ್ನಣೆ ನಿಜಕ್ಕೂ ವಿಶೇಷ. ಹಲವು ವರ್ಷಗಳ ಕಾಲ ಗಿಡಗಳಿಗೆ ನೀರುಣಿಸಿ, ಮೇಕೆಗಳು ಆ ಗಿಡಗಳ ಕುಡಿಯನ್ನು ತಿಂದು ಹಾಕದಂತೆ ಕಾಪಾಡಿ, ಸುಮಾರು 400 ಸಾಲುಮರಗಳನ್ನು ಬೆಳೆಸಿದ ಹಳ್ಳಿಯ ಹೆಂಗಸು ತಿಮ್ಮಕ್ಕನವರು, ಇಂದಿನ ಆಧುನಿಕ ಯುಗದ ಪರಿಸರ ಪ್ರೇಮಿಗಳಿಗೂ ಆದರ್ಶ ಎನಿಸಿದ್ದಾರೆ.
ಹಾಗೆ ನೋಡಿದರೆ, ಸಾಲುಮರದ ತಿಮ್ಮಕ್ಕನವರ ಸಾಧನೆಯು ಬಹು ದೀರ್ಘಕಾಲದ ತನಕ, ಬಹುಮಟ್ಟಿಗೆ ಅಜ್ಞಾತವಾಗಿಯೇ ಉಳಿದಿತ್ತು. 1911ರಲ್ಲಿ ಜನಿಸಿದ ತಿಮ್ಮಕ್ಕನವರು, ಆ ಕಾಲದ ಗ್ರಾಮೀಣ ಮಹಿಳೆಯರ ರೀತಿ, ತಮ್ಮ ಪಾಡಿಗೆ ಬದುಕು ಕಟ್ಟಿಕೊಂಡಿದ್ದವರು; ಏಕತಾನದ ಬದುಕು; ಹಸು ಮೇಯಿಸುವಂತಹ ಸಣ್ಣ ಪುಟ್ಟ ಕೆಲಸ ಮಾಡುವ ಕಾಯಕ. ಪತಿ ಬಿಕ್ಕಲು ಚಿಕ್ಕಯ್ಯನವರ ಜತೆ ಸರಳ ಜೀವನ. ಬದುಕಿನಲ್ಲೊಂದು ತಿರುವು ಈ ನಡುವೆ, ಒಂದು ದಿನ ಮಾಗಡಿ ತಾಲೂಕಿನ ಹುಲಿಕಲ್ ಮತ್ತು ಕುದೂರು ಗ್ರಾಮಗಳನ್ನು ಸಂಪರ್ಕಿ ಸುವ ರಸ್ತೆಯ ಪಕ್ಕದಲ್ಲಿ ಹತ್ತು ಆಲದ ಕುಡಿಗಳನ್ನು ನೆಟ್ಟು, ನೀರುಣಿಸಲು ತೊಡಗಿದರು ಆ ದಂಪತಿ. ಅವರಿಗೆ ಅರಿವಿಲ್ಲದೇ ಮಾಡಿದ ಆ ಕೆಲಸವು, ಅವರ ಬದುಕಿಗೊಂದು ಗುರಿಯನ್ನು ಕಲ್ಪಿಸಿತು.
ಇದನ್ನೂ ಓದಿ: Shashidhara Halady Column: ಕರಡಿಗಳ ಊರು ಗರುಡನಗಿರಿಗೆ ʼಸೋಲೋ ಟ್ರಿಪ್ʼ !
ಹಕ್ಕಿಗಳಿಗೆ ಆಶ್ರಯ ನೀಡುವ, ದಾರಿಹೋಕರಿಗೆ ನೆರಳು ನೀಡುವ ಮರಗಳನ್ನು ಬೆಳೆಸುವ, ಪರಿಸರಪ್ರೇಮದ ಕೆಲಸ ಅದು; ಪರಿಸರವಾದದ ಪರಿಚಯವಿಲ್ಲದೇ, ಪರಿಸರ ರಕ್ಷಣೆಗೆ ತೊಡಗಿದ್ದರು ಆ ದಂಪತಿ! ರಸ್ತೆಬದಿ ನೆಟ್ಟ ಗಿಡಗಳನ್ನು ತಮ್ಮ ಮಕ್ಕಳ ರೀತಿಯಲ್ಲಿ ಪೋಷಿಸತೊಡಗಿದರು.
ಪ್ರತಿ ವರ್ಷ ಮಳೆ ಬಿದ್ದ ಕೂಡಲೇ, ಅದೇ ರಸ್ತೆಯ ಎರಡೂ ಬದಿಗಳಲ್ಲಿ ಇನ್ನಷ್ಟು ಆಲದ ಕುಡಿಗಳನ್ನು ನೆಟ್ಟು, ನೀರೆರೆದು ಪೋಷಿಸತೊಡಗಿದರು. ಆ ಗಿಡಗಳಿಗೆ ಮುಳ್ಳಿನ ಬೇಲಿ ಮಾಡಿ, ಮೇಕೆಗಳು, ಕುರಿಗಳು ಆ ಗಿಡಗಳನ್ನು ತಿನ್ನದಂತೆ ನೋಡಿಕೊಂಡರು. ಪ್ರತಿ ಬೇಸಗೆ ಯಲ್ಲೂ ದೂರದಿಂದ ನೀರನ್ನು ಹೊತ್ತು ತಂದು, ತಾವು ನೆಟ್ಟ ಗಿಡಗಳಿಗೆ ಎರೆದು, ಅವು ಬಾಡದಂತೆ ನೋಡಿಕೊಂಡರು; 1950-60ರ ದಶಕದಿಂದಲೇ ಅವರ ಈ ನಿಸ್ವಾರ್ಥ ಕೈಂಕರ್ಯ ಮುಂದುವರಿದಿತ್ತು.
ಆ ಸುತ್ತಲಿನ ಗ್ರಾಮಸ್ತರು ಇವರ ಕೆಲಸವನ್ನು ನೋಡಿ ಮೆಚ್ಚಿದ್ದರು; ಆದರೆ, ವಿಶೇಷವಾದ ಪ್ರಚಾರ ದೊರಕದೇ, ಇವರ ಪರಿಸರ ಪ್ರೇಮವು ಅಜ್ಞಾತವಾಗಿಯೇ ನಡೆದಿತ್ತು. ಹುಲಿಕಲ್ ಮತ್ತು ಕುದೂರು ನಡುವೆ, ರಸ್ತೆಯುದ್ದಕ್ಕೂ ಎರಡೂ ಪಕ್ಕದಲ್ಲಿ ಇವರು ಬೆಳೆಸಿದ ಸುಮಾರು 385 ಮರಗಳು ನೆರಳು ನೀಡತೊಡಗಿದವು; ಆ ಮಟ್ಟಕ್ಕೆ ಮರಗಳು ಬೆಳೆಯಲು ಆ ದಂಪತಿ ಸಾಕಷ್ಟು ಬೆವರು ಸುರಿಸಿದ್ದಂತೂ ನಿಜ; ಅವುಗಳನ್ನು ಕಾಪಾಡುವ ಜತೆಯಲ್ಲೇ, ಎಳವೆಯಲ್ಲಿದ್ದಾಗ, ಬೇಸಗೆಯ ಸಮಯದಲ್ಲಿ ನೀರುಣಿಸುವ ಕೆಲಸನ್ನು ಮಾಡಲೇಬೇಕಿತ್ತು.
ನಡುನಡುವೆ ಒಂದೊಂದು ವರ್ಷ ಸಾಕಷ್ಟು ಮಳೆಯಾಗದೇ, ಸನಿಹಗ ಜಲಮೂಲಗಳು ಒಣಗಿದಾಗ, ಬಹುದೂರದಿಂದ ನೀರನ್ನು ಹೊತ್ತು ತಂದು, ತಾವು ನೆಟ್ಟ ಗಿಡಗಳಿಗೆ ಉಣಿಸುವ ಮೂಲಕ, ಮಾತೃಪ್ರೇಮವನ್ನು ಮೆರೆದರು ತಿಮ್ಮಕ್ಕ. ಕಾಯಕ ನಿಷ್ಠೆ ಜೀವನ ಪ್ರೀತಿ ಯಾವುದೇ ಪ್ರತಿ-ಲಾಪೇಕ್ಷೆ ಇಲ್ಲದೇ, ಸಾರ್ವಜನಿಕ ರಸ್ತೆಯ ಎರಡೂ ಪಕ್ಕದಲ್ಲಿ ಆಲದ ಮರಗಳನ್ನು ನೆಟ್ಟು ಬೆಳೆಸುವ ಅವರ ಈ ಕಾಯಕನಿಷ್ಠೆಯನ್ನು, ಜೀವನ ಪ್ರೀತಿ ಯನ್ನು, ಸಾಹಸವನ್ನು ವರ್ಣಿಸಲು ಸೂಕ್ತ ಪದಗಳಿಲ್ಲ.
ಮಕ್ಕಳಿಲ್ಲದ ಆ ದಂಪತಿಗೆ, ಆ ರಸ್ತೆಯುದ್ದಕ್ಕೂ ಬೆಳೆದು ನಿಂತ ಮರಗಳೇ ಮಕ್ಕಳು ಎನಿಸಿ ದವು. ಅವುಗಳು ಬೆಳೆಯುವುದನ್ನು ನೋಡುತ್ತಾ, ಅವುಗಳ ಪಾಲನೆ ಪೋಷಣೆ ಮಾಡುತ್ತಾ, ಬದುಕಿನಲ್ಲಿ ಪ್ರೀತಿಯನ್ನು ಕಂಡುಕೊಂಡರು ಆ ದಂಪತಿ. ಈ ನಡುವೆ, 1991ರಲ್ಲಿ ತಿಮ್ಮಕ್ಕ ನವರ ಪತಿ ಬಿಕ್ಕಲು ಚಿಕ್ಕಯ್ಯ ತೀರಿ ಹೋದಾಗ, ತಿಮ್ಮಕ್ಕ ಏಕಾಂಗಿಯಾದರು.
ಆದರೆ, ಅವರು ಕಷ್ಟಪಟ್ಟು ನೆಟ್ಟು ಬೆಳೆಸಿದ 385 ಆಲದ ಮರಗಳು, ತಿಮ್ಮಕ್ಕನವರನ್ನು ಏಕಾಂಗಿಯಾಗಿರಲು ಬಿಡಲಿಲ್ಲ; ಆ ಮರಗಳನ್ನು ಇನ್ನಷ್ಟು ನಿಷ್ಠೆಯಿಂದ, ಪ್ರೀತಿಯಿಂದ, ಕಾಳಜಿಯಿಂದ ರಕ್ಷಿಸಲು ತೊಡಗಿಕೊಂಡರು, ಸಾಲುಮರದ ತಿಮ್ಮಕ್ಕ. ಹುಲಿಕಲ್ ಮತ್ತು ಕುದೂರು ಗ್ರಾಮಗಳ ನಡುವಿನ ೪ ಕಿ. ಮೀ. ಉದ್ದದ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿದ್ದ 385ಕ್ಕೂ ಅಧಿಕ ಮರಗಳು ಅದಾಗಲೇ ನೆರಳು ನೀಡುತ್ತಿದ್ದರೂ, ಅವು ಆ ಮಟ್ಟಕ್ಕೆ ಬೆಳೆದು ನಿಲ್ಲುವಲ್ಲಿ ತಿಮ್ಮಕ್ಕ ದಂಪತಿ ಮಾಡಿದ ಕೈಂಕರ್ಯ ಆಗಿನ್ನೂ ಪ್ರಸಿದ್ಧಿಗೆ ಬಂದಿರ ಲಿಲ್ಲ.
1994ರ ಒಂದು ದಿನ; ಕನ್ನಡದ ಪ್ರಮುಖ ದಿನಪತ್ರಿಕೆಯೊಂದು, ಸಾಲುಮರದ ತಿಮ್ಮಕ್ಕ ಬೆಳೆಸಿದ ಸಾಲುಮರಗಳ ಕುರಿತು ಒಂದು ಸಚಿತ್ರ ವರದಿಯನ್ನು ಪ್ರಕಟಿಸಿತು. ‘ಓದು ಬರಹ ಕಲಿಯದ, ಹಳ್ಳಿಗಾಡಿನ ಏಕಾಂಗಿ ಮಹಿಳೆಯೊಬ್ಬಳು ಸಾರ್ವಜನಿಕ ರಸ್ತೆಯ ಎರಡೂ ಪಕ್ಕದಲ್ಲಿ, ನೂರಾರು ನೆರಳಿನ ಮರಗಳನ್ನು ಬೆಳೆಸಿದ್ದಾಳೆ, ಆ ಮೂಲಕ ಪಕ್ಷಿ ಸಂಕುಲಕ್ಕೆ ಆಶ್ರಯ ಕಲ್ಪಿಸಿದ್ದಾಳೆ’ ಎಂಬ ವಿಚಾರವು ಕನ್ನಡನಾಡಿನಾದ್ಯಂತ ಸಂಚಲನವನ್ನೇ ಸೃಷ್ಟಿಸಿತು.
ಸರಕಾರದ ಇಲಾಖೆಗಳು ಮಾಡಬಹುದಾದಂತಹ ಇಂತಹ ಪರಿಸರ ಸ್ನೇಹಿ ಚಟುವಟಿಕೆ ಯನ್ನು, ಮಾಗಡಿ ತಾಲೂಕಿನ ನಿರಕ್ಷರಕುಕ್ಷಿ ಮಹಿಳೆಯೊಬ್ಬಳು ಮಾಡಿದ್ದಾಳೆ ಎಂಬ ವಿಷಯವು, ಜನಸಾಮಾನ್ಯರಲ್ಲಿ ಮತ್ತು ಪರಿಸರಪ್ರೇಮಿಗಳಲ್ಲಿ ಬೆರಗನ್ನು ಮೂಡಿಸಿತು; ನಿಧಾನವಾಗಿ, ಹಲವು ಸಂಘ ಸಂಸ್ಥೆಗಳು ತಿಮ್ಮಕ್ಕನ ಸಾಧನೆಯನ್ನು ಗುರುತಿಸಿದವು, ಹೊಗಳಿದವು, ಸನ್ಮಾನವನ್ನೂ ಮಾಡಿದವು; ಅವರ ಈ ಪರಿಸರ ಸ್ನೇಹಿ ಚಟುವಟಿಕೆಯಲ್ಲಿ ತಾವೂ ಕೈ ಜೋಡಿಸಿದವು.
ಹುಲಿಕಲ್ ಮತ್ತು ಕುದೂರು ಗ್ರಾಮದ, ಆ ಸುತ್ತಲಿನ ಜನರಿಗೆ ಕೆಲವು ದಶಕಗಳಿಂದಲೇ ಈ ಮಹಿಳೆ ಚಿರಪರಿಚಿತ; ತಮ್ಮ ಗ್ರಾಮದ ರಸ್ತೆಯ ಎರಡೂ ಪಕ್ಕದಲ್ಲಿ ಗಿಡಗಳನ್ನು ನೆಟ್ಟು, ನೀರು ಹಾಕುತ್ತಾ, ಅವುಗಳನ್ನು ರಕ್ಷಿಸುತ್ತಿದ್ದ ಈ ಮಹಿಳೆಯನ್ನು ಗ್ರಾಮಸ್ಥರು ‘ಸಾಲು ಮರದ ತಿಮ್ಮಕ್ಕ’ ಎಂದೇ ಕರೆಯುತ್ತಿದ್ದರು.
ಹಳ್ಳಿಯ ಜನರು ಇಟ್ಟ ಹೆಸರಾದ ‘ಸಾಲುಮರದ ತಿಮ್ಮಕ್ಕ’ ಈಗ ನಾಡಿನಾದ್ಯಂತ ಪ್ರಚುರ ಗೊಂಡಿತು. ಬಿಬಿಸಿ ಗುರುತಿಸಿದ ಸಾಧನೆ ಏಕಾಂಗಿ, ಅನಕ್ಷರಸ್ಥ ಮಹಿಳೆಯೊಬ್ಬಳು, ರಸ್ತೆಯ ಬದಿ ನೂರಾರು ಮರಗಳನ್ನು ಬೆಳೆಸಿ, ಸಾಲುಮರದ ವನವನ್ನೇ ಬೆಳೆಸಿದ್ದಾಳೆ ಎಂಬ ಸುದ್ದಿ ಕರ್ನಾಟಕದಾಚೆಯೂ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ.
ರಾಷ್ಟ್ರೀಯ ಸುದ್ದಿಯಾದ ಈ ಪರಿಸರಸ್ನೇಹಿ ಚಟುವಟಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹರಡಿತು. ಬಿ.ಬಿ.ಸಿ. ಸಂಸ್ಥೆಯು 2014ರಲ್ಲಿ ಸಾಲುಮರದ ತಿಮ್ಮಕ್ಕನ ಸಾಧನೆ ಯನ್ನು ಗುರುತಿಸಿ, ಜಗತ್ತಿನ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರನ್ನಾಗಿ ಇವರನ್ನು ಹೆಸರಿಸಿದ್ದಂತೂ, ಇಡೀ ದೇಶಕ್ಕೇ ಹೆಮ್ಮೆಯ ವಿಚಾರ. ನಮ್ಮ ರಾಜ್ಯದ ಸರಕಾರ ಮತ್ತು ಪ್ರತಿಷ್ಠಿತ ಸಂಸ್ಥೆಗಳು ಸಾಲುಮರದ ತಿಮ್ಮಕ್ಕನ ಸಾಧನೆಯನ್ನು ಗೌರವಿಸಿದವು.
ಮಾಗಡಿ ತಾಲೂಕಿನ ಹುಲಿಕಲ್ ಮತ್ತು ಕುದೂರು ನಡುವೆ ಆರಂಭದಲ್ಲಿ ಸುಮಾರು 400 ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕನವರು, ಆ ನಂತರವೂ ಗಿಡನೆಡುವ ಕೈಂಕರ್ಯವನ್ನು ಮುಂದುವರಿಸಿದರು. ಅವರೊಂದಿಗೆ ಹಲವು ಸಂಸ್ಥೆಗಳು ಕೈಜೋಡಿ ದಿವರು. ಇದುವರೆಗೆ ಒಟ್ಟು 8000ಕ್ಕೂ ಹೆಚ್ಚಿನ ಮರಗಳನ್ನು ಅವರು ನೆಟ್ಟಿದ್ದಾರೆ.
ಮಂತ್ರಿ ಸಮಾನ ಗೌರವ ಕುದೂರು ಬಳಿ ರಸ್ತೆಯುದ್ದಕ್ಕೂ ಅವರು ನೆಟ್ಟಿರುವ ಮರಗಳು ಇಂದು ವಿಶಾಲ ಕ್ಯಾನೋಪಿಯನ್ನು ಸೃಷ್ಟಿಸಿವೆ; ದಾರಿಹೋಕರಿಗೆ, ಪಕ್ಷಿಗಳಿಗೆ, ಜಾನುವಾರು ಗಳಿಗೆ ನೆರಳನ್ನು ನೀಡಿವೆ. ಈ ಮರಗಳನ್ನು ನೆಡುತೋಪನ್ನಾಗಿ ಸರಕಾರ ಘೋಷಿಸಿದ್ದು, ಅವುಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ರಕ್ಷಣೆ ನೀಡಿದೆ.
ಜತೆಗೆ, ಇಂತಹ ಒಂದು ಸಾಧನೆಗಾಗಿ, ಸಾಲು ಮರದ ತಿಮ್ಮಕ್ಕನವರಿಗೆ, ಆಜೀವ ಪರ್ಯಂತ ಕ್ಯಾಬಿನೆಟ್ ದರ್ಜೆಯ ಮಂತ್ರಿಯ ಸ್ಥಾನಮಾನ ನೀಡಿ ಗೌರವಿಸಿದೆ. 21ನೆಯ ಶತಮಾನದಲ್ಲಿ ಸಾಲುಮರದ ತಿಮ್ಮಕ್ಕನವರ ಸಾಧನೆಯು ಇನ್ನಷ್ಟು ಪ್ರಸಿದ್ಧವಾಯಿತು.
ಅಕ್ಷರಶಃ ನೂರಾರು ಸಂಘ ಸಂಸ್ಥೆಗಳು, ಬಳಗಗಳು, ಗೆಳೆಯರ ಗುಂಪು ಅವರಿಗೆ ಸನ್ಮಾನ ಮಾಡಿವೆ. ಹಲವು ಕಡೆ ಅವರನ್ನು ಗೌರವ ಅತಿಥಿಯಾಗಿ ಕರೆದು, ಪರಿಸರ ರಕ್ಷಣೆಯ ಸಂದೇಶವನ್ನು ಹರಡಿವೆ. ಸಾಲುಮರಗಳನ್ನು ಬೆಳೆಸಿದ ಇವರ ನಿಸ್ವಾರ್ಥ ಚಟುವಟಿಕೆಯು, ಅವರಿಗೆ 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ತಂದುಕೊಟ್ಟಿದೆ.
ಓದುಬರಹ ಕಲಿಯದ ಗ್ರಾಮೀಣ ಮಹಿಳೆಯೊಬ್ಬರು ಪದ್ಮಶ್ರೀ ಪಡೆದದ್ದು, ಪರಿಸರ ರಕ್ಷಿಸುವ ಎಲ್ಲರಿಗೂ ಇನ್ನಷ್ಟು ಸೂರ್ತಿ ನೀಡಿದೆ. ಇಂದು ಕಾಲ ಬದಲಾಗಿದೆ. ಸಾಲುಮರದ ತಿಮ್ಮಕ್ಕನವರು ಬೆಳೆಸಿದ ಮರಗಳು ನೆರಳನ್ನು ನಿಡುತ್ತಲೇ ಇವೆ; ೨೦ನೆಯ ಶತಮಾನದ ತನಕ ಹೆದ್ದಾರಿಯುದ್ದಕ್ಕೂ ಸಾಲುಮರಗಳನ್ನು ಬೆಳೆಸುವುದು ಆದ್ಯ ಚಟುವಟಿಕೆಗಳಲ್ಲಿ ಒಂದು ಎನಿಸಿತ್ತು.
ಆದರೆ 21ನೆಯ ಶತಮಾನದ ಈಚಿನ ವರ್ಷಗಳಲ್ಲಿ, ರಸ್ತೆ ಬದಿಯ ಮರಗಳನ್ನು ಕಡಿದು, ಹಲವು ಲೇನ್‌ಗಳ ರಸ್ತೆ ನಿರ್ಮಾಣ, ಕಾಮಗಾರಿಯು ಹೆಚ್ಚು ಆದ್ಯತೆಯನ್ನು ಪಡೆಯುತ್ತಿದೆ. ಪರಿಸರ ರಕ್ಷಣೆಯ ಅಭಿಯಾನವು, ಹೊಸ ಆಯಾಮದಲ್ಲಿ ಮುಂದುವರಿದಿದ್ದು, ಕವಲು ದಾರಿ ಹಿಡಿದಿರುವ ಈ ಸಂದರ್ಭದಲ್ಲಿ, ತಾವೇ ಕೈಯಾರ ನೀರೆರೆದು 385 ಆಲದ ಮರಗಳನ್ನು ಬೆಳೆಸಿದ ಸಾಲುಮರದ ತಿಮ್ಮಕ್ಕನ ಕೈಂಕರ್ಯವು ಒಂದು ಅದ್ಭುತ ಕೆಲಸ ಎಂದು ಗೋಚರವಾಗುತ್ತಿದೆ ಮತ್ತು ಆದರ್ಶಪ್ರಾಯವಾಗಿ ಕಾಣಿಸುತ್ತಿದೆ. ಕಳೆದ ವಾರ ನಮ್ಮನ್ನಗಲಿದ ಸಾಲುಮರದ ತಿಮ್ಮಕ್ಕ, ಈ ಕಾಲಮಾನದ ಎಲ್ಲಾ ಪರಿಸರ ಹೋರಾಟಗಾರ ರಿಗೆ ಸ್ಪೂರ್ತಿ ತುಂಬಲಿ ಎಂದು ಆಶಿಸೋಣ.
ಉಮೇಶ್ ಅವರ ಸಹಕಾರ
ಇಳಿವಯಸ್ಸಿನಲ್ಲಿ ತಿಮ್ಮಕ್ಕನವರನ್ನು ನೋಡಿಕೊಳ್ಳಲು, ಆಸರೆಯಾದವರು ಅವರ ದತ್ತುಪುತ್ರ ಬಳ್ಳೂರು ಉಮೇಶ್. ತಿಮ್ಮಕ್ಕನವರ ರೀತಿಯೇ ಗಿಡಗಳನ್ನು ನೆಡುವಲ್ಲಿ ಆಸಕ್ತಿ ಇದ್ದ ಬೇಲೂರು ಮೂಲದ ಉಮೇಶ್ ಅವರು, ಈಚಿನ ವರ್ಷಗಳಲ್ಲಿ ತಿಮ್ಮಕ್ಕನವರ ಜತೆಯಲ್ಲೇ ಇದ್ದರು; ತಮ್ಮ ಊರಿನ ಜಾತ್ರೆಗೆ ಹೋಗುವಾಗ ಮತ್ತು ಇತರ ಸಮಾರಂಭ ಗಳಲ್ಲಿ ಭಾಗವಾಹಿಸುವಾಗ, ತಿಮ್ಮಕ್ಕನವರನ್ನು ಕ್ಷೇಮವಾಗಿ ಕರೆದುಕೊಂಡು ಹೋಗಿ ಬರುತ್ತಿದ್ದರು.
ರಾಷ್ಟ್ರಪತಿಗಳಿಗೆ ಆಶೀರ್ವಾದ!
ಸಾರ್ವಜನಿಕ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಮರಗಳನ್ನು ಬೆಳೆಸಿದ ಕೈಂಕರ್ಯಕ್ಕಾಗಿ, ಸಾಲುಮರದ ತಿಮ್ಮಕ್ಕನವರಿಗೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ. ವಿದೇಶದಲ್ಲೂ ಇವರ ಈ ಸಾಧನೆಯುನ್ನು ಗುರುತಿಸಲಾಗಿದೆ. ಕರ್ನಾಟಕ ಸರಕಾರವು ಅವರಿಗೆ ಮಂತ್ರಿಯ ಸ್ಥಾನಮಾನವನ್ನು ನೀಡಿದೆ. ಭಾರತ ಸರಕಾರವು 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಆ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದ ತಿಮ್ಮಕ್ಕನವರು, ಪ್ರತಿಯಾಗಿ ರಾಷ್ಟ್ರಪತಿಗಳಿಗೆ ನಮಿಸಿ, ಅವರ ತಲೆ ಸವರಿ ಆಶೀರ್ವಾದವನ್ನೂ ಮಾಡಿದರು! ಮರಗಳೇ ಎನ್ನ ಮಕ್ಕಳು ಎಂದು ನಂಬಿದ ಸಾಲು ಮರದ ತಿಮ್ಮಕ್ಕನವರು, ಪರಿಸರ ರಕ್ಷಣೆಯನ್ನು ತಾವೇ ಸ್ವತಃ ಮಾಡಿ ತೋರಿಸಿದವರು; ಆ ಮೂಲಕ ಎಲ್ಲಾ ಪರಿಸರಪ್ರೇಮಿಗಳಿಗೆ ಮಾದರಿ ಎನಿಸಿದ್ದಾರೆ.