Dr Bharathi Maravanthe Column: ವೀರು
ಭಯೋತ್ಪಾದಕರನ್ನು, ಬಂದೂಕು ಹಿಡಿದು ಅಮಾಯಕ ಜನರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಿ ಸಾಯಿಸಿದವರನ್ನು ಸೇನೆಯು ಬೇಟೆಯಾಡಿದೆ. ಆದರೆ, ನಮ್ಮಲ್ಲೇ ಸುತ್ತ ಮುತ್ತ ವಾಸಿಸುತ್ತಿರುವ ಸೋಗು ವೇಷದ ಭಯೋತ್ಪಾದಕರನ್ನು ಹೇಗೆ ಶಿಕ್ಷಿಸುವುದು? ಇದೇ ಪ್ರಶ್ನೆ ವೀರುವಿನ ಮನದಲ್ಲಿ ಕಾಡುತ್ತಿತ್ತು.


ಡಾ.ಭಾರತಿ ಮರವಂತೆ
ಆತನಿಗೆ ಅಂದಿನ ಸಂಭ್ರಮದ ಕ್ಷಣ ತನ್ನ ಇಳಿವಯಸ್ಸಿನಲ್ಲಿ ನೆನಪಾಯಿತು. ನೆನೆದಾಗ ಮೈ ರೋಮಾಂಚನಗೊಳ್ಳುತ್ತಿದೆ. ಬದುಕಿನ ಸಾರ್ಥಕ್ಯದ ಸಂತಸದ ಘಳಿಗೆಯದು. ಅಂದು ತ್ರಿವರ್ಣ ಧ್ವಜವನ್ನು ಕೈಯಿಂದ ಎತ್ತಿ ಹಿಡಿದು ಭಾರತ್ ಮಾತಾ ಕಿ ಜೈ ಎಂದು ಜೋರಾಗಿ ಕೂಗಿದ್ದೆವು. ನಮ್ಮ ಕಣ್ಣಲ್ಲಿ ಆನಂದ ಭಾಷ್ಪ ಕೋಡಿಯಾಗಿ ಹರಿದಿತ್ತು. ಭಯೋತ್ಪಾದಕರು ನನ್ನ ದೇಶದೊಳಗೆ ನುಗ್ಗಿ ದಾಗ ಮಾಡು ಇಲ್ಲವೇ ಮಡಿ ಎಂಬಂತೆ ಕಾದಾಡಿದ್ದೆವು. ನನಗಂತೂ “ಗೆದ್ದರೆ ರಾಜ್ಯಲಕ್ಷ್ಮಿ ಸತ್ತರೆ ವೀರ ಸ್ವರ್ಗ" ಎಂಬ ಕವಿಯ ಉಲ್ಲೇಖ ನೆನಪಾಗಿತ್ತು. ಬಾಲ್ಯದಲ್ಲಿ ಟೀಚರ್ ಹೇಳಿ ಕೊಟ್ಟ ಹಾಡನ್ನು ಈಗಲೂ ಆತ ಗುನುಗುನಿಸಿದ. “ಎದ್ದು ನಿಲ್ಲು ವೀರ ದೇಶ ಕರೆದಿದೆ, ತೊಡೆಯ ತಟ್ಟು ಧೀರ ಸಮರ ಕಾದಿದೆ" ಬಾಯಿಪಾಠ ಹೊಡೆದದ್ದು ನೆನಪಾಯಿತು.
ಬಾನೆತ್ತರದಲ್ಲಿ ತ್ರಿವರ್ಣದ ರಂಗು ಹಾರುತ್ತಿತ್ತು. ನನ್ನ ಮೊಣಕಾಲಿನ ಕೆಳಭಾಗದಲ್ಲಿ ರಕ್ತ ಸುರಿಯು ತ್ತಿತ್ತು. ಕಾಲಿನ ಪಾದಗಳಂತೂ ನನ್ನದೇ ಪಾದಗಳು ಹೌದೋ ಅಲ್ಲವೋ ಎನ್ನುವಂತಾಗಿತ್ತು. ಮೈ ಯೆಲ್ಲಾ ಧೂಳು ಕೆಸರು ಇವ್ಯಾವುದೂ ನಮಗೆ ಲೆಕ್ಕಕ್ಕಿಲ್ಲ, ಗೆಲುವಿನ ಸಂಭ್ರಮದಲ್ಲಿ ನೋವೂ ಗೆಲುವಾಗಿ ಬದಲಾಗಿತ್ತು. ಕಾಲಿನ ಮಾಂಸಖಂಡಗಳಲ್ಲಿ ಒಂದು ಇಂಚು ಗುಂಡು ಹೊಕ್ಕಿತ್ತು.
ಸ್ನೇಹಿತನೊಬ್ಬ ಕೀಳುತ್ತಾ ನೋವಾಗುತ್ತಿದೆಯಾ ಗೆಳೆಯಾ ಇದೀಗ ತೆಗೆದೇನು ಎನ್ನುವ ಮಾತಿಗೆ ಮನ ಸೋತಿದ್ದೆ. ಒಳ ಹೊಕ್ಕ ಆ ಗುಂಡು ಹೊರ ಬರುವಾಗ ರಕ್ತದೋಳಿ ಕಂಡು ಅಮ್ಮಾ. .ಎಂದು ಕಿಟಾರನೆ ಕಿರುಚಿದ್ದೆ. ತಲೆಯ ಹಿಂಭಾಗದಿಂದಲೂ ರಕ್ತ ಸೋರುತ್ತಿತ್ತು. ತಾನು ಧರಿಸಿದ್ದ ಅಂಗಿ ಯನ್ನೇ ಬಾಯಲ್ಲಿ ಕಚ್ಚಿ ಹರಿದು ಇನ್ನೊಬ್ಬ ಸ್ನೇಹಿತ ರಕ್ತ ಸೋರುವಲ್ಲಿ ಬ್ಯಾಂಡೇಜ್ ಕಟ್ಟಿದ್ದ. ಬೆನ್ನಿಗೆ ಹಾಕಿದ್ದ ಬ್ಯಾಗ್‌ನ ಎಲ್ಲಾ ವಸ್ತುಗಳೂ ವೈರಿಗಳ ದಾಳಿಗೆ ಛಿದ್ರಗೊಂಡು ಎಲ್ಲೆಲ್ಲೋ ಬಿದ್ದಿದ್ದವು. ಮೈ ನಡುಗುತ್ತಿತ್ತು. ದೇಹದಲ್ಲಿ ರಕ್ತ ಹರಿದು ಹೆಪ್ಪುಗಟ್ಟಿದ್ದವು.
ಇದನ್ನೂ ಓದಿ: Vishweshwar Bhat Column: ಜಗತ್ತಿನ ಮುಂದೆ ವಿಚಿತ್ರ ಮನವಿ ಇಟ್ಟಿದ್ದ ಜಪಾನ್ ಪ್ರಧಾನಿ !
ನಮಗದ್ಯಾವುದೂ ಲೆಕ್ಕಕ್ಕೇ ಇರಲಿಲ್ಲ. ಹೇಗೋ ನಮ್ಮ ಗೂಡಿಗೆ ಮರಳಿ ಸ್ನಾನ ಮುಗಿಸಿ ಮತ್ತೊಮ್ಮೆ
ತ್ರಿವರ್ಣ ಧ್ವಜ ಹಿಡಿದೆವು. ದೀಪ ಹಚ್ಚಿ, ಕೈ ಮುಗಿದು ಅಂದು ದೀಪಾವಳಿ ಆಚರಿಸಿದ್ದೆವು. ಇದೀಗ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಸಮಯ ಎಂದರಿತ.
ಆ ದಿನ ಬೆಳಿಗ್ಗೆ ಮನೆಯ ಚಾವಡಿಯಲ್ಲಿ ಮೊಮ್ಮಗು ಕೈಯಲ್ಲೊಂದು ಪುಸ್ತಕ ಹಿಡಿದಿತ್ತು. ಕಾಶ್ಮೀರದ ಕಣಿವೆಯಲ್ಲಿ ಹಗೆಯ ಕೆಂಗಿಡಿ. . . . ಹಾಡನ್ನು ಬಾಯಿಪಾಠ ಮಾಡುತ್ತಿತ್ತು. ಅಜ್ಜನ ಕಿವಿಗೆ ಆ ಸಾಲು ಗಳು ಕೇಳಿ ಕಣ್ಣುಗಳು ತೇವವಾದವು. ಅಂದಿನ ಆ ಕರಾಳ ದಿನಗಳ ಕತ್ತಲೆ ಛಾಯೆ ನೆನಪಾಗಿ ಎದೆಗೇ ಇರಿದಂತಾಯಿತು. ಅಂದು ಆ ಹುಲ್ಲುಗಾವಲಿನಲ್ಲಿ ಅತ್ಯಂತ ಸಡಗರ. ಸುತ್ತಲೂ ಮಂಜು ಮಸುಕಿದ ವಾತಾವರಣ, ಹರಿಯುವ ನದಿ, ಬೆಟ್ಟಗುಡ್ಡಗಳ ಸಾಲು, ತಿಳಿಯಾದ ಮೋಡ, ಹಕ್ಕಿಗಳ ಚಿಲಿಪಿಲಿ, ಹೂವು, ಗಿಡಬಳ್ಳಿಗಳು ಪ್ರಕೃತಿ ದೇವತೆ ಧರೆಗಿಳಿದಂತಿತ್ತು. ಗಂಡ, ಹೆಂಡತಿ, ಮಕ್ಕಳ ಚೆಂದದ ಕುಟುಂಬಗಳು ವಿಹರಿಸುತ್ತಿದ್ದ ಸಮಯವದು. ಅವರ ಖುಷಿಯೇ ನಮ್ಮ ಖುಷಿಯಾಗಿತ್ತು. ಆಕಾಶ ದಲ್ಲಿ ದೂರದಲ್ಲಿ ಹದ್ದೊಂದು ಹಾರುತ್ತಿರುವುದು ನೋಡಿ ಮನಸ್ಸು ಕಸಿವಿಸಿಗೊಂಡಿತ್ತು.
ಅದರ ಕೆಟ್ಟ ದೃಷ್ಟಿ ನಮಗೆ ಗೋಚರಿಸದೇ ಹೋಯಿತು. ಎಲ್ಲಿಂದಲೋ ಢಂ ಎಂಬ ಶಬ್ದ, ಅಯ್ಯೋ ಕಾಪಾಡೀ ಎಂಬ ಕನ್ನಡ ಸೊಲ್ಲಿನ ಆರ್ತನಾದ ನನ್ನ ಕಿವಿಗೆ ಬೀಳುತ್ತಿದ್ದಂತೆ ಕೈಯಲ್ಲಿದ್ದ ತಿನಿಸು ಅಲ್ಲೇ ಬಿಟ್ಟು ಹೊರಕ್ಕೋಡಿದ್ದೆ. ನನ್ನ ಜನ ಛೀರುತ್ತಾ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಢಂ ಢಂ ಢಮಾರ್ ಎಂಬ ಗುಂಡುಗಳು ನೇರವಾಗಿ ಜನರ ಮೇಲೆ ಎರಗುತ್ತಿವೆ. ಹೆಣಗಳ ರಾಶಿ ಬೀಳುತ್ತಿದೆ. ಬಿಕ್ಕಿ ಬಿಕ್ಕಿ ಅಳುತ್ತಿರುವ ಹೆಣ್ಣುಮಕ್ಕಳ ರೋದನ. ಎತ್ತಲಿಂದ ಹೇಗೆ ಬಂದರೋ ಒಬ್ಬೊಬ್ಬರ ತಲೆಗೆ ಗುಂಡು ಹೊಡೆಯುತ್ತಲೇ ಸಾಗುತ್ತಿದ್ದ ನರರಾಕ್ಷಸರು. ಉಗ್ರರ ಅಟ್ಟಹಾಸಕ್ಕೆ ನನ್ನ ಮುಗ್ಧ ಜನ ನಲುಗಿ ಹೋಗಿದ್ದರು.
ಯಮನಂತೆ ಮುನ್ನುಗ್ಗಿದ ರೌಡಿಗಳು ಹೇಡಿಗಳಂತೆ ಹೆಣ್ಣುಮಕ್ಕಳ ಬಳಿ ಸಾಗಿದ್ದರು. ಹಣೆಯ ಅರಶಿನ, ಕುಂಕುಮ, ತಲೆಯಲ್ಲಿ ಮುಡಿದ ಹೂವು, ಕಾಲ್ಗೆಜ್ಜೆ, ಭುಜದಲ್ಲಿನ ಕಂಬಳಿ, ಕುತ್ತಿಗೆಯ ಸರ ನೋಡಿ ನೋಡಿ ಗುಂಡಿಕ್ಕುತ್ತಿದ್ದರು. ಗಂಡು ಮಕ್ಕಳ ಪ್ಯಾಂಟ್ ಬಿಚ್ಚಿ ಗುಂಡಿಕ್ಕಿದ ಅಸಹ್ಯಕ್ಕೇ ಪ್ರಕೃತಿ ಗಹಗಹಿಸಿ ನಗುತ್ತಿತ್ತು. ಅಯ್ಯೋ ನಾವಿದ್ದೂ ವ್ಯರ್ಥವಾಯಿತಲ್ಲ ಎಂದು ರೋದಿಸಿದ್ದೆವು.
ಸಿಟ್ಟು, ಆಕ್ರೋಶ, ಸೇಡಿನಲ್ಲಿ ನಮ್ಮ ರಕ್ತ ಕೊತ ಕೊತ ಕುದಿಯುತ್ತಿತ್ತು. ನಮ್ಮಂತೆಯೇ ನಟಿಸಿ, ನಮ್ಮಂತಹ ಬಟ್ಟೆಯನ್ನು ಧರಿಸಿ, ಹದ್ದಿನಾಕಾರದಲ್ಲಿ ಎರಗಿದ್ದರು ರಕ್ತಪೀಪಾಸುಗಳು. ರಣ ಹದ್ದೊಂದು ಹೊಂಚು ಹಾಕಿ ಹಾರಿ ಬಂದು ಕುಕ್ಕಿ ಕುಕ್ಕಿ ತಿಂದು ಹಸಿವನ್ನು ನೀಗಿಸಿಕೊಂಡಿತ್ತು. ಅಜ್ಜನ ಕಣ್ಣುಗಳು ತೇವಗೊಂಡು ನಿದ್ರೆಗೆ ಜಾರಿದ್ದನು.
ತಂಗಿಯ ಫೋನ್ ಕರೆಗೆ ಎಚ್ಚರವಾಗಿ ಆಕೆಯ ಮಾತಿಗೆ ದಿಗಿಲುಗೊಂಡ. ತಂಗಿಯ ಮಗಳಿಗೆ ಇಪ್ಪತ್ತು ವರ್ಷದ ಹದಿಹರೆಯ, ಬಿಸಿ ರಕ್ತದ ಜೀವವದು. ಕಾಲೇಜಿನ ಸಮಾರಂಭವೊಂದರಲ್ಲಿ ಅದೇನೋ ಕಾರಣಕ್ಕೆ ‘ವೈರಿ ದೇಶಕ್ಕೆ ಜಯವಾಗಲಿ’ ಎಂದು ಕೂಗಿದ್ದಳಂತೆ. ಕಾಲೇಜಿನಲ್ಲಿ ಸ್ನೇಹಿತರು ತರಾಟೆಗೆ ತಗೊಂಡಿದ್ದರಂತೆ. ಅದು ನಮ್ಮ ಪಕ್ಕದ ರಾಷ್ಟ್ರವಲ್ಲವೇ ಎಂದು ಹಲವರ ವಾದ. ಪೊಲೀಸರಿಗೆ ದೂರೂ ಹೋಗಿತ್ತು.
ಕಾಲೇಜಿನಿಂದಲೇ ಕಿತ್ತೊಗೆಯಿರಿ ಎಂಬ ಬೈಗುಳವೂ ಆಗಿತ್ತು. ಮಗಳ ವಿಷಯ ತಿಳಿದು ಬೇಸತ್ತ ತಂಗಿ ಅಣ್ಣನಿಗೆ ತಿಳಿಸಿ ಅಳುತ್ತಿದ್ದಳು. ಅಜ್ಜನ ಆಕ್ರೋಶ ಇನ್ನೂ ತೀವ್ರವಾಯಿತು. ಪಕ್ಕದವರಾದರೆ ನಮ್ಮ ಜನರನ್ನೇಕೆ ಸಾಯಿಸುತ್ತಿದ್ದಾರೆ? ಅಂದು ನಮ್ಮ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಗುಂಡು ಹೊಡೆದು ಪ್ರಪಾತಕ್ಕೆ ಬೀಳಿಸಿದ್ದರು. ನನ್ನ ತಂಡವರೆಲ್ಲರೂ ಸತ್ತು ಹೋದರು. ನನ್ನವರ ಮನೆಗಳಿಗೆ ಹೊಡೆದ ಗುಂಡಿನ ಸದ್ದು ಈಗಲೂ ಕಿವಿಗೆ ಅಪ್ಪಳಿಸುತ್ತಿದೆ.
ನನ್ನ ಜನರ ಆರ್ತನಾದ, ಚೀರಾಟ, ರಕ್ತದೋಕುಳಿ ಇಂದಿಗೂ ಕಣ್ಣೆದುರಿದೆ. ಪಕ್ಕದವರಾದರೆ ನಮ್ಮನ್ಯಾಕೆ ಗಡಿ ಕಾಯಲು ಸಂಬಳ ಸೌಲಭ್ಯ ಕೊಟ್ಟು ನಿಲ್ಲಿಸಿದ್ದಾರೆ. ನನ್ನ ಒಂದು ಕಣ್ಣು ಹೋದ ರೂ ಚಿಂತೆಯಿಲ್ಲ ಪಕ್ಕದವರ ಎರಡೂ ಕಣ್ಣುಗಳೂ ಹೋಗಬೇಕು ಎಂಬ ಮನೋಸ್ಥಿತಿಯವರು ನಮ್ಮಲ್ಲಿದ್ದಾರೆ.
ಇನ್ನು “ಪಕ್ಕದ ದೇಶಕ್ಕೆ ಜೈಕಾರ ಹಾಕುತ್ತಿದ್ದಾರೆ ಎಂದರೆ ಅಸಲಿ ಸತ್ಯ ಬೇರೆಯೇ ಇದೆ". ನನ್ನ ಸ್ನೇಹಿತ ರಲ್ಲಿ ಊಟ ನಿದ್ದೆ ಕುಟುಂಬವನ್ನೇ ಬಿಟ್ಟು ಜೀವಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ನಾನೊಬ್ಬ ಯೋಧ, ನನ್ನ ಮನೆಯಲ್ಲೇ ನನ್ನ ದೇಶದ ಬಗ್ಗೆ ಪ್ರೀತಿ ಹುಟ್ಟದ ನರ ಪಿಶಾಚಿ ಹುಟ್ಟಿತಲ್ಲಾ ಎಂದು ದಿತ್ಭ್ರಾಂತನಾದ. ದೇಶದ ಹೊರಗಿರುವ ಶತ್ರುಗಳನ್ನು ನಾವು ತಡೆಯುತ್ತೇವೆ. ಇದೇ ದೇಶದಲ್ಲಿ ಬದುಕಿ ಬಾಳಿದ ಇಂತವರು ದೇಶಕ್ಕೇ ಮಾರಕ ಎಂಬ ಕೊರಗು ಆತನನ್ನು ಕಾಡತೊಡಗಿತು.
ಇದ್ದಕ್ಕಿದ್ದಂತೆಯೇ ಮನೆಯೆದುರು ಗಲಾಟೆ ಕೇಳಿಸಿದಾಗ ಹೊರ ಬರುತ್ತಾನೆ. ಪಕ್ಕದ ದೇಶದ ಧ್ವಜ ಹಾರಿಸುತ್ತಾ ಒಬ್ಬ ವ್ಯಕ್ತಿ ಸಂಭ್ರಮಿಸುತ್ತಿದ್ದನಂತೆ. ವೈರಿ ರಾಷ್ಟ್ರಕ್ಕೆ ಜಯವಾಗಲಿ ಎಂದು ಗೋಡೆ ಯಲ್ಲಿ ವಿದ್ಯಾರ್ಥಿಯೊಬ್ಬಳು ಬರೆದಿದ್ದಳಂತೆ. ‘ಗಡಿಯಲ್ಲಿ ನಿಮ್ಮ ರಕ್ಷಣೆಗಾಗಿ ನಾವು ಹೋರಾಡು ತ್ತಿದ್ದೇವೆ. ನೀವಿಲ್ಲಿ ವೈರಿ ರಾಷ್ಟ್ರದ ಧ್ವಜಕ್ಕೆ ಜೈಕಾರ ಹಾಕುತ್ತಿರುವಿರಿ’ ಎನ್ನುವಾಗಲೇ ಜೋರಾದ ಮೈಕ್ ಶಬ್ದ ಕೇಳಿತು. ಗಣೇಶ ಉತ್ಸವದಲ್ಲಿ ಗಣಪತಿ ಬಪ್ಪ ಮೋರ್ಯಾ ಎಂದರಂತೆ. ರಾಶಿ ರಾಶಿ ಕಲ್ಲುಗಳು ಜನರ ಮೇಲೆ ಬಿದ್ದವಂತೆ. ಗಣಪತಿ ಹೊತ್ತವನ ಎದೆಗೆ ಕಲ್ಲು ತಾಗಿ ಬಿದ್ದು ಸತ್ತನಂತೆ.
ಆ ಕೇಸಿನಲ್ಲಿ ಗಣಪತಿಯೇ ಸಾಕ್ಷಿಯಂತೆ. ಗಣಪತಿಯನ್ನು ಜೈಲಲ್ಲಿ ಇಟ್ಟರಂತೆ. ನಾಲ್ಕು ಕಂಬಿಗಳ ನಡುವೆ ಸೊಂಡಿಲು ಚಾಚಿದ್ದ ಗಣಪತಿಗೆ ಕೆಲವರು ಕೈಮುಗಿಯುತ್ತಿದ್ದರಂತೆ. ವಿಷಯ ಕೇಳಿದ ಅಜ್ಜನಿಗೂ ನಗುಬಂತು. ಗಣಪತಿ ಹೊತ್ತವನಿಗೆ ಎದೆ ನೋವಿದ್ದುದರಿಂದ ಹಾರ್ಟ್ ಎಟ್ಯಾಕ್ ಆಗಿ ಸತ್ತ ಎಂದು ಹಲವರ ಅಭಿಪ್ರಾಯ.
ಅಯ್ಯೋ ನಮ್ಮ ಮಗಳ ಹಣೆಯ ಕುಂಕುಮ ನೋಡಿ ಹೊಡೆದರು, ಮಗನ ವಿಭೂತಿ ನೋಡಿ ಸಾಯಿಸಿದರು, ಸಹೋದರನ ಅಂಗಿಯ ಬಣ್ಣ ನೋಡಿ ತಲೆ ಉರುಳಿಸಿದರು, ಹೆಗಲ ಮೇಲಿದ್ದ ಕಂಬಳಿ ನೋಡಿ ಹೊಡೆದರು. ಇವರೇನೋ ಮಾಡಿರಬೇಕು ಸುಮ್ಮನೆ ಹೊಡೆಯುತ್ತಾರಾ? ಅಮಾಯಕರು ಮುಗ್ಧರು ಎಂದು ಕೆಲವರು ಸಮರ್ಥನೆ. ಇದನ್ನು ಕೇಳಿದ ಅಜ್ಜನಿಗೆ ಹಿಂದಿನಿಂದ ಚೂರಿಯಿಂದ ಯಾರೋ ಇರಿದಂತಾಯಿತು.
ನಾವಲ್ಲಿ ಊಟ ನಿದ್ದೆ ಬಿಟ್ಟು ಒದ್ದಾಡುತ್ತಿದ್ದರೆ ಇವರಿಲ್ಲಿ ಹುಚ್ಚರಂತೆ ಹೊಡೆದಾಡುತ್ತಿದ್ದಾರೆ ಎಂಬ ಆಕ್ರೋಶವೂ ಬಂತು. ಸೈನ್ಯದಲ್ಲಿ ಕೆಲವು ವರ್ಷ ಕೆಲಸ ಮಾಡಿ, ನಿವೃತ್ತಿ ಪಡೆದು ಹಳ್ಳಿಯಲ್ಲಿ ವಾಸಿಸುವ ಈ ದಿನಗಳಲ್ಲಿ ತಿಂಡಿ ತಿಂದು ಟಿ.ವಿ. ಆನ್ ಮಾಡಿದ. ವಿಷಯ ಕೇಳಿ ಬೆಚ್ಚಿಬಿದ್ದ. ಹೆಣ್ಣುಮಗಳೊಬ್ಬಳೊಬ್ಬಳು ಜಾಲತಾಣದಲ್ಲಿ ರವಾನಿಸಿದ ಎಡವಟ್ಟಿನ ಸಂದೇಶವೇ ಓಡಾಡುತ್ತಿತ್ತು.
ನಮ್ಮ ಸೈನಿಕರ ರಹಸ್ಯ ಕಾರ್ಯಾಚರಣೆಯನ್ನು ಅದ್ಹೇಗೋ ತಿಳಿದುಕೊಳ್ಳುತ್ತಿದ್ದಳಂತೆ. ಪಕ್ಕದ ದೇಶದ ಅವಳ ಪ್ರಿಯತಮನಿಗೆ ಕಳುಹಿಸುತ್ತಿದ್ದಳಂತೆ. ನಾವಲ್ಲಿ ಹೊರಗಿನ ಶತ್ರುಗಳು ಒಳ ಬಾರ ದಂತೆ ಎಲ್ಲಾ ಸೌಲಭ್ಯಗಳನ್ನೂ ಪಡೆದು ಹಗಲಿರುಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದೇಶ ಕಾಯು ತ್ತಿದ್ದೇವೆ. ಇಲ್ಲಿ ಒಳಗಿನ ರಹಸ್ಯ ಮಾಹಿತಿಗಳ ರವಾನೆ ಮಾಡುತ್ತಿರುವವರ ಬಗ್ಗೆ ಆತನಿಗೆ ಆಕ್ರೋಶ ಸಂಕಟ ಒಟ್ಟಿಗೇ ಆದವು.
ಇಷ್ಟೆಲ್ಲಾ ಹೇಳಿದ ಮೇಲೆ ಈ ನಿವೃತ್ತ ಸೈನಿಕನ ಹೆಸರು ಹೇಳಲೇಬೇಕಲ್ಲವೇ? ಹುಟ್ಟಿದಾಗ ಜಾತಕದ ಪ್ರಕಾರ ವೀರೇಂದ್ರ ಎಂಬ ಹೆಸರಿಟ್ಟಿದ್ದರು. ಎಲ್ಲರೂ ವೀರ ಎಂದೇ ಕರೆಯುತ್ತಿದ್ದರು. ಅಮ ಅಪ್ಪನ ಪ್ರೀತಿಯ ವೀರೂ ಆಗಿದ್ದ. ವೀರ ಶಬ್ದದ ಬಗ್ಗೆ ಆತನಿಗೆ ಅರ್ಥವಾದದ್ದೇ ಹೈಸ್ಕೂಲ್ ನಲ್ಲಿ. “ಎದ್ದು ನಿಲ್ಲು ವೀರ ದೇಶ ಕರೆದಿದೆ" ಎಂಬ ಹಾಡನ್ನು ಟೀಚರ್ ವಿವರಿಸಿದಾಗ ವೀರ ಎಂದರೆ ಸೈನಿಕನ ಧೈರ್ಯ ಎಂಬುದು.
ಆಗಲೇ ತಾನೊಬ್ಬ “ವೀರ ಯೋಧ"ನಾಗಬೇಕೆಂಬ ಕನಸಿನ ಬೀಜ ಮೊಳಕೆಯೊಡದಿತ್ತು. ಅದೇ ಕೆಲಸಕ್ಕೆ ಇಷ್ಟ ಪಟ್ಟು ಸೇರಿಯೂ ಆಗಿತ್ತು. ನಿಜವಾಗಿ ಹೇಳಬೇಕೆಂದರೆ, ಅದು ಕೆಲಸ ಎಂದಾ ಗಿರಲಿಲ್ಲ, ಬದುಕಿನ ಉಸಿರಾಗಿತ್ತು. ರಜೆ ಪಡೆದು ಊರಿಗೆ ಬಂದು ಮರಳಿ ಹೋಗುವಾಗ ಹೆಂಡತಿಯ ಕಣ್ಣೀರು ದುಃಖದ ಛಾಯೆ ನೋಡಲಾಗುತ್ತಿರಲಿಲ್ಲ. ಅಂದಂತೂ ಬೆಳಿಗ್ಗೆ ಹೊರಡುವಾಗ ವೀರನಿಗೆ ದೀಪ ಬೆಳಗಲು ಗ್ರಾಮದವರೆಲ್ಲರೂ ಬಂದಿದ್ದರು. ಹೆಂಡತಿಯಂತೂ ತನ್ನ ಮುಖವನ್ನು ಪದೇ ಪದೇ ದಿಟ್ಟಿಸಿ ನೋಡುತ್ತಾ ದೇವರನ್ನು ನೆನೆಯುತ್ತಿದ್ದಳು.
ಮರಳಿ ಬರುವಂತೆ ಮಾಡು ದೇವರೆ ಎನ್ನುವುದೇ ಆಕೆಯ ಕೂಗಾಗಿತ್ತು. ವೀರು ಇದೀಗ ತಾನೊಬ್ಬ ವೀರ ಯೋಧನಾಗಿ, ದಶಕಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಪಡೆದಿದ್ದಾನೆ; ಹಳ್ಳಿಗೆ ವಾಪಸಾಗಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಾನೆ. ನೆನಪುಗಳು ಆಗಾಗ್ಗೆ ಮನಪಟಲದಲ್ಲಿ ಸುಳಿಯು ತ್ತಿರುತ್ತದೆ. ಈ ಸುಖದ ಘಳಿಗೆಯಲ್ಲಿ ತನ್ನ ತಂಡದವರ ನೆನಪು ಮರುಕಳಿಸುತ್ತಿರುತ್ತದೆ. ರುಚಿಯಾದ ಊಟ, ಕುಟುಂಬದವರೊಡನೆ ಸುತ್ತಾಟ, ಮೆತ್ತನೆ ಹಾಸಿಗೆಯಲ್ಲಿ ನಿದ್ರಿಸುವಾಗ, ಗಡಿಯಲ್ಲಿರುವ ತನ್ನ ಸ್ನೇಹಿತರ ನೆನಪಾಗುತ್ತಿದೆ.
ಎಷ್ಟೋ ಸಂದರ್ಭದಲ್ಲಿ ಊಟ ಬಿಟ್ಟು ಎದ್ದಿದ್ದೂ ಇದೆ. ಈಗಲಾದರೂ ಖುಷಿಯಲ್ಲಿ ಊಟ ಮಾಡ ಬಾರದೆ ಎಂದು ಹೆಂಡತಿ ಕೇಳುತ್ತಿದ್ದಾಳೆ. ಹೌದು ‘ನನ್ನ ಸ್ನೇಹಿತರು ಅಲ್ಲಿ ನಿತ್ಯವೂ ಕಾಡು ತೋಡು ಗಳಲ್ಲಿ ಸಿಕ್ಕ ನೀರು ಕುಡಿಯುತ್ತಾ ಸಿಕ್ಕ ಊಟ ಮಾಡುತ್ತಾ ನಮ್ಮ ನೆಲ ಮಣ್ಣು ಪ್ರಕೃತಿ ಜೀವಗಳನ್ನು ಕಾಯುತ್ತಿದ್ದಾರೆ. ಹೇಗೆ ಸುಖದಿಂದ ನಿದ್ರಿಸಲಿ?’ ಎನ್ನುತ್ತಿದ್ದಾನೆ ವೀರು.
ಅದೊಂದು ದಿನ ನೀರು ಖಾಲಿಯಾಗಿ ಹೊಟ್ಟೆ ಚುರ್ ಎನ್ನುತ್ತಿತ್ತು. ಯಾರೋ ಹತ್ತಿರದಲ್ಲಿ ಗಾಡೀಲಿ ಹೋಗುತ್ತಿದ್ದರು. ನನ್ನ ನೋಡಿ ಹೆದರಿದರು. ನೀರು ಬೇಕು ಎಂದು ಸನ್ನೆ ಮಾಡಿದಾಗ ಕೈಗೆ ನೀರು ಸುರಿದರು. ಹೊಟ್ಟೆ ತುಂಬಾ ನೀರು ಕುಡಿದು ಅಂದು ನಿದ್ರಿಸಿದೆ. ಹೆಂಡತಿ ಫೋನ್ ಕರೆ ಮಾಡಿದಾಗ ನನ್ನ ಮೊಬೈಲ್‌ನಲ್ಲಿ ಚಾರ್ಜ್ ಖಾಲಿಯಾಗಿತ್ತು. ಹೆಂಡತಿಗೇನಾಗಿದೆಯೋ ಎಂಬ ಚಿಂತೆ ನನಗೆ, ಆಕೆಗಂತೂ ನನ್ನದೇ ಚಿಂತೆ. ಇನ್ನೊಂದೆಡೆ ಮಕ್ಕಳಿಗೆ ಕಾಮಾಲೆ ರೋಗ ಬಂದಾಗ ನನಗೆ ಹೋಗ ಲಾಗಲಿಲ್ಲ ಎಂಬ ಕೊರಗು. ಅಂದು ನನ್ನಮ್ಮನ ಸಾವಿನ ಸುದ್ದಿ ಸಿಡಿಲೆರಗಿದಂತಾಗಿತ್ತು.
ಅಮ್ಮಾ ನಿನ್ನ ಕೊನೆಯ ಕ್ಷಣದಲ್ಲಿ ನನಗೆ ಬರಲಾಗುತ್ತಿಲ್ಲ ಇಲ್ಲಿ ದೇಶ ಕಾಯುತ್ತಿದ್ದೇನೆ. . . ಇದೇ ನಿನ್ನ ಸೇವೆ ಅಮ್ಮಾ ಎಂದು ಅಮ್ಮನ ಫೋಟೋ ಹಿಡಿದು ಬಿಕ್ಕಿ ಬಿಕ್ಕಿ ಅತ್ತಿದ್ದು ನೆನಪಾಯ್ತು ವೀರುಗೆ. ರೈಲಿನಲ್ಲಿ ಹೋಗುವಾಗ ಅಲ್ಲಲ್ಲಿ ಗುರುತಿನ ಚೀಟಿ ತೋರಿಸಿದಾಗ ವೀರುಗೆ ಸೆಲ್ಯೂಟ್ ಕೊಡುತ್ತಿದ್ದರು. ಹೃದಯ ಉಕ್ಕಿ ಬರುತ್ತಿತ್ತು, ಗಡಿಯಲ್ಲಿ ವೈರಿಗಳ ನಾಶವಾಗುತ್ತಿದೆ, ಮೇಲಿಂದ ಮೇಲೆ ಜಯಘೋಷ ನಮಗೇ ಕೇಳಿಬರುತ್ತಿದೆ.
ಅಲ್ಲಿ ಜಯಶಾಲಿಗಳಾದೆವು ಆದರೆ ದೇಶದೊಳಗೆ ಮೇಲಿಂದ ಮೇಲೆ ವಿಚಿತ್ರ ಘಟನೆಗಳು ಮರು ಕಳಿಸುತ್ತಿವೆ. ಅಪಸ್ವರಗಳಾಗಿ ಸೈನ್ಯದ ರಹಸ್ಯ ಕಾರ್ಯಾಚರಣೆಗಳನ್ನು ಜಾಲತಾಣಗಳ ಮೂಲಕ ರವಾನಿಸುವ ಕುತಂತ್ರ ಇದರಿಂದ ನಮ್ಮ ಯೋಧರಿಗಾಗುತ್ತಿರುವ ಅವಮಾನ, ವೈರಿ ದೇಶಕ್ಕೆ ಜಯ ವಾಗಲಿ ಎನ್ನುವಾಗ ನನ್ನ ದೇಶಕ್ಕೆ, ನಮ್ಮ ಧ್ವಜಕ್ಕೆ, ನಮ್ಮ ಸೈನಿಕರಿಗಾಗುತ್ತಿರುವ ಅವಮಾನ ವೀರು ವನ್ನು ಯೋಚಿಸುವಂತೆ ಮಾಡಿತ್ತು.
ನಮ್ಮ ಒಳಗೇ ಅಲ್ಲಲ್ಲಿ ಇರುವ ಇಂತಹ ಭಯೋತ್ಪಾದಕರ ನಿಗ್ರಹ ಯಾವಾಗ? ಹೇಗೆ? ಅದನ್ನು ನಿಲ್ಲಿಸುವವರ್ಯಾರು? ಇತ್ಯಾದಿ ಪ್ರಶ್ನೆಗಳು ವೀರುವನ್ನು ಕಾಡುತ್ತಿದೆ. ಈ ವೀರು ನಮ್ಮೂರಿನ ಪಕ್ಕದ ಹಳ್ಳಿಯ ಯುವಕ. ನನ್ನಮ್ಮನಿಗೆ ಪರಿಚಯವಂತೆ. ನನ್ನಮ್ಮ ಸೈನಿಕರ ಬಗ್ಗೆ ಹೇಳುವಾಗ ಈ ವೀರುನ ಉದಾಹರಿಸಿ ಹೇಳುತ್ತಿದ್ದರು. ನಾವು ನಮ್ಮ ಕುಟುಂಬ ಬಂಧು ಬಾಂಧವರು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದೇವೆ.
ನಮ್ಮ ನೆಮ್ಮದಿಯ ಬದುಕು ಇರುವುದೇ ನಮ್ಮ ಸೈನಿಕರ ಕೈಯಲ್ಲಿ ಎಂದು ಅರ್ಥವಾಗುವಾಗ ಹೃದಯ ಉಕ್ಕಿ ಬಂತು. ನಾವು ಸುಖವಾಗಿದ್ದು ರುಚಿಯಾದ ಅಡುಗೆ ತಿಂದು ತೇಗುತ್ತಿದ್ದೇವೆ. ವೀರು ವಂತವರೇ ಈ ದೇಶದ ಅತೀ ದೊಡ್ಡ ಆಸ್ತಿ. ವೀರುನ ದಿಟ್ಟತನ, ಧೈರ್ಯ, ಹೋರಾಟ ನಿವೃತ್ತಿ ಯಲ್ಲೂ ದೇಶದ ಬಗ್ಗೆ ಚಿಂತಿಸುವ ರೀತಿ ಮಾದರಿ ಎನಿಸಿತು.