ಶೀಘ್ರ ಪತ್ತೆ, ಕ್ಯಾನ್ಸರ್ ನಾಪತ್ತೆ ಘೋಷವಾಕ್ಯ ಎಲ್ಲರೂ ತಿಳಿದಿರಬೇಕು
ಶೀಘ್ರ ಪತ್ತೆ, ಕ್ಯಾನ್ಸರ್ ನಾಪತ್ತೆ ಘೋಷವಾಕ್ಯ ಎಲ್ಲರೂ ತಿಳಿದಿರಬೇಕು
Vishwavani News
September 25, 2022
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ ಉಪನ್ಯಾಸ
ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು
ಹಲವು ಕಾರಣಗಳಿಂದ ಕ್ಯಾನ್ಸರ್ ಖಾಯಿಲೆ ಹೆಚ್ಚಾಗುತ್ತಿದ್ದು, ಬಹುತೇಕ ರೋಗಿಗಳು ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಬರುತ್ತಿರುವುದರಿಂದ ಗುಣಪಡಿಸಲು ಸಾಧ್ಯವಾ ಗುತ್ತಿಲ್ಲ. ಆದರೆ, ಆರಂಭದಲ್ಲೇ ಪತ್ತೆಯಾದರೆ ಗುಣಪಡಿಸಲು ಸಾಧ್ಯ. ಆದ್ದರಿಂದ
ಶೀಘ್ರ ಪತ್ತೆ, ಕ್ಯಾನ್ಸರ್ ನಾಪತ್ತೆ ಘೋಷವಾಕ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ.ರಾಮಚಂದ್ರ ಹೇಳಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ‘ಕ್ಯಾನ್ಸರ್ ರೋಗಿಗಳ ಹೆಚ್ಚಳ’ ಕುರಿತು ಉಪನ್ಯಾಸ ನೀಡಿ, ದೇಶದಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ, ನಮ್ಮಲ್ಲಿ ಇತ್ತಿಚೆಗೆ ಹೆಚ್ಚಾಗಿರುವ ಪಾಶ್ಚಿಮಾತ್ಯ ಆಹಾರ ಪದ್ಧತಿ, ತಂಬಾಕು ಸೇವನೆ, ಮಹಿಳೆಯರ ಧೂಮಪಾನ, ಮದ್ಯಪಾನ. ಅದರಲ್ಲೂ ಪಾಶ್ಚಿಮಾತ್ಯ ಆಹಾರಗಳಾದ ಪಿಜ್ಜಾ, ಬರ್ಗರ್ ಜತೆಗೆ ಹೆಚ್ಚುತ್ತಿರುವ ಒತ್ತಡವೂ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ, ಒತ್ತಡ, ಧೂಮಪಾನ, ಮದ್ಯಪಾನ, ಪಾಶ್ಚಿಮಾತ್ಯ ಆಹಾರ ಪದ್ಧತಿ ಮತ್ತು ಋತುಚಕ್ರ ಸಮಸ್ಯೆ. ಹೀಗಾಗಿ ೪೦ ವರ್ಷ ಮೇಲ್ಪಟ್ಟ ಮಹಿಳೆಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಭಾರತದಲ್ಲಿ ಇಂದಿನ ದಿನಮಾನದಲ್ಲಿ ಯುವಕರಲ್ಲಿ ಹೆಚ್ಚು ಕ್ಯಾನ್ಸರ್ ಕಾಯಿಲೆ ಕಂಡುಬರುತ್ತಿದೆ. ೧೭ ವರ್ಷಕ್ಕೇ ಮಕ್ಕಳು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ತಂಬಾಕು, ಧೂಮಪಾನ ಸೇವನೆ ಮಾಡುವುದೇ ಇದಕ್ಕೆ ಕಾರಣ ಎಂದು ಹೇಳಿದ ಅವರು, ಕ್ಯಾನ್ಸರ್
ಕುರಿತು ಜಾಗೃತಿ ಮೂಡಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.
ದುಬಾರಿ ಚಿಕಿತ್ಸೆ: ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಬೋನ್‌ಮ್ಯಾರೊ ಟ್ರಾನ್ಸ್ಪ್ಲಾಂಟೇಷನ್ ಎಂಬ ಚಿಕಿತ್ಸೆ ಇದೆ. ಇದು ಅತ್ಯಂತ ದುಬಾರಿಯಾಗಿದ್ದು, ೩೦ರಿಂದ ೫೦ ಲಕ್ಷ ರು. ವೆಚ್ಚವಾಗುತ್ತದೆ. ಹೀಗಾಗಿ ಬಡವರಿಗೆ ಈ ಚಿಕಿತ್ಸೆ ನೀಡಲು ಕಾರ್ಪಸ್ ಫಂಡ್ ಸಂಗ್ರಹ ಮಾಡಲಾ ಗುತ್ತಿದೆ. ಇದರಿಂದಾಗಿ ಬಡ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆ ನೀಡಲು ಸಹಾಯ ವಾಗುತ್ತದೆ. ಅನೇಕರು ಸಹಾಯ ಮಾಡಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.
ಒಳ್ಳೆಯ ಆರೋಗ್ಯ ಇದ್ದಲ್ಲಿ ಅದೇ ನಮ್ಮ ಶ್ರೀಮಂತಿಕೆ: ಜೀವನದಲ್ಲಿ ಶ್ರೀಮಂತಿಕೆ ಎಂದರೆ ಹಣವಲ್ಲ. ಒಳ್ಳೆಯ ಕುಟುಂಬ, ಒಳ್ಳೆಯ ಸ್ನೇಹಿತ, ಒಳ್ಳೆಯ ಆರೋಗ್ಯ ಇದ್ದಲ್ಲಿ ಅದೇ ನಮ್ಮ ಶ್ರೀಮಂತಿಕೆ. ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವಾಗ
ಕೆಲವೊಂದು ಆರೋಪಗಳು ಬರುವುದು ಸಹಜ. ಇದಕ್ಕೆ ಯಾರೂ ತಲೆಕೆಡಿಸಿಕೊಳ್ಳಬಾರದು. ಇಟ್ಟ ಗುರಿ ಸಾಧಿಸುವ ತನಕ ಹೋರಾಡುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಮಾನವೀಯ
ಮೌಲ್ಯಗಳು ನಮ್ಮ ಗೌರವ ಕಾಪಾಡುತ್ತವೆ.
ದೇಶದ ಆರ್ಥಿಕತೆ ಹೆಚ್ಚಾಗಲು ಸ್ವದೇಶಿ ಪ್ರೇಮ ಬೆಳೆಸಿಕೊಳ್ಳಬೇಕು. ನಾವು ವಿದೇಶಿ ಉತ್ಪನ್ನಗಳು ಹಾಗೂ ಆಹಾರ ಪದಾರ್ಥಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಸಕ್ಕರೆ ಕಾಯಿಲೆ, ಶ್ವಾಸಕೋಶ ತೊಂದರೆ ಪ್ರಕರಣ ಹೆಚ್ಚಾಗುತ್ತಿದೆ. ದೇಶದ ಆರ್ಥಿಕತೆ
ಮಂದಗತಿಯಲ್ಲಿ ಬೆಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಕನಸು ಸಾಕಾರಗೊಳ್ಳಲು ಯುವ ಜನತೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ನಾ ಕಂಡ ಕನಸು ನನಸಾಗಿದೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಸೇರಿಕೊಂಡಾಗ ಇಲ್ಲಿ ನಿರ್ದೇಶಕನಾಗಬೇಕು ಎಂದು ಕನಸು ಕಂಡಿದ್ದೆ. ಅಷ್ಟೇ ಅಲ್ಲ,
ನಿರ್ದೇಶಕನಾದರೆ ಏನೇನು ಮಾಡಬೇಕು ಎಂಬ ಕನಸನ್ನೂ ಕಂಡಿದ್ದೆ. ಆ ಕನಸು ಈಡೇರಿದೆ ಎಂಬ ಸಮಾಧಾ ನ ಇದೆ.
೨೦೧೮ರಲ್ಲಿ ನಿರ್ದೇಶಕನಾಗಿ ನೇಮಕಗೊಂಡ ಮೇಲೆ ೪ ವರ್ಷ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ಕಿದ್ವಾಯಿ ಕ್ಯಾನ್ಸರ್
ಆಸ್ಪತ್ರೆಯ ಶಾಖೆಗಳನ್ನು ತೆರೆಯಲು ತುಮಕೂರು , ಗುಲಬರ್ಗಾ, ಮೈಸೂರಿಗೆ ಭೇಟಿ ನೀಡಲು ಮಾತ್ರ ರಜೆ ತೆಗೆದುಕೊಂಡಿದ್ದೇನೆ. ನಾನು ನಿರ್ದೇಶಕನಾಗಿ ಆಯ್ಕೆಯಾದ ನಂತರ ಐಸಿಯು ಬೆಡ್‌ಗಳನ್ನು ೪೨ರಿಂದ ೧೦೪ಕ್ಕೆ ಏರಿಸಲಾಗಿದೆ.
ಇಂಥ ಆಸ್ಪತ್ರೆಯನ್ನು ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಡಾ.ಸಿ.ರಾಮಚಂದ್ರ ಹೇಳಿದರು. ಯುವಕರು ದೇಶಕಟ್ಟುವ ನಾಯಕರು ಮಕ್ಕಳು ದೇಶದ ಆಸ್ತಿ. ಅವರನ್ನು ಶಾಲೆಗೆ ಕಳುಹಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವುದು ಎಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ. ಪ್ರೀತಿ, ವಿಶ್ವಾಸ, ಸಹೋದರತೆ, ಸಮಾನತೆಯಂತಹ ಮಾನವೀಯ ಮೌಲ್ಯಗಳ ಮೇಲೆ ಬದುಕು ರೂಪುಗೊಳ್ಳುವಂತೆ ಮಾಡುವುದೇ ಶಿಕ್ಷಣದ ಗುರಿಯಾಗಬೇಕು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಯನ್ನಾಗಿಸಿ. ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕು. ಮೇಲು ಕೀಳೆಂಬ ಭಾವನೆಯನ್ನು ಬಿಡಬೇಕು.
ಸಮಾಜದಲ್ಲಿ ಎದುರಾಗುವ ಸಮಾಜಘಾತುಕ ಶಕ್ತಿಗಳನ್ನು ದೂರವಿಡಬೇಕು. ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ
ಮೂಲಕ ಸಮಸಮಾಜ ನಿರ್ಮಾಣದ ಸಂಕಲ್ಪ ಮಾಡಬೇಕಾಗಿದೆ. ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡು ಪ್ರಗತಿಯತ್ತ ಸಾಗಬೇಕಾಗಿದೆ. ಜ್ಞಾನ-ವಿಜ್ಞಾನಕ್ಕೆ ಸರಿಸಾಟಿ ಯಾವುದೂ ಇಲ್ಲ ಎಂದು ಡಾ.ಸಿ.ರಾಮಚಂದ್ರ ತಿಳಿಸಿದರು.
ಸುಧಾಮೂರ್ತಿ ತಾಯಿಗೆ ಕೋಟಿ ನಮನ
ಸಮಾಜ ಸಂಕಷ್ಟದಲ್ಲಿ ಸಿಲುಕಿದಾಗ ಹಾಗೂ ನೊಂದ ಜೀವಗಳಿಗೆ ಆಸರೆಯಾಗಿ ನಿಲ್ಲುವ ಇನೋಸಿಸ್ ಫೌಂಡೇಷನ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಅವರ ಸೇವಾಗುಣ ದೊಡ್ಡದು. ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹೊರ ರೋಗಿಗಳ ವಿಭಾಗ ನಿರ್ಮಾಣದ ರುವಾರಿ ಅವರು.
ದೇಣಿಗೆ ಹಣದಿಂದ ಅತ್ಯುನ್ನತ ಮಟ್ಟಕ್ಕೆ ತಲುಪುತ್ತಿರುವ ಕಿದ್ವಾಯಿ ಸಂಸ್ಥೆಗೆ ಅನೇಕ ದಾನಿಗಳು ಸಹಾಯಹಸ್ತ ಚಾಚಿದ್ದಾರೆ. ಯಾವುದೇ ಸಮಾಜಮುಖಿ ಕಾರ್ಯಗಳಿಗೆ ಸದಾ ಮುಂದಿರುವ ಸುಧಾಮೂರ್ತಿ ಅವರಿಗೆ ನನ್ನ ಅಭಿನಂದನೆಗಳು ಎಂದು ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಹೇಳಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆಯಲು ಹಾಗೂ ಅತ್ಯುನ್ನತ ತಂತ್ರಜ್ಞಾನಗಳನ್ನು ಅಳವಡಿಸಿ ಕೊಳ್ಳಲು ಸಹಕಾರ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ನನ್ನ ನಮನಗಳು. ಅನೇಕ ದಾನಿಗಳು ಕಿದ್ವಾಯಿಗೆ ಸೂರ್ತಿ ತುಂಬಿದ್ದಾರೆ. ಕ್ಯಾನ್ಸರ್ ಸಂಬಂಧಿತ ಎಲ್ಲಾ ಚಿಕಿತ್ಸೆಗಳನ್ನು ಹೊಂದಿರುವ ಹೆಮ್ಮೆಯ ಸಂಸ್ಥೆ ನಮ್ಮದು.
-ಡಾ.ಸಿ.ರಾಮಚಂದ್ರ,
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ
***
ಕ್ಯಾನ್ಸರ್‌ಗೆ ಆಯುರ್ವೇದದಲ್ಲಿ ಚಿಕಿತ್ಸೆ ಇಲ್ಲ. ಹಾಗಾಗಿ ಸೇ ನೋ ಟು ಆಯುರ್ವೇದ ಫಾರ್ ಕ್ಯಾನ್ಸರ್. ಮೆಟಬಾಲಿಕ್ ಡಿಸಾರ್ಡರ್ ಮುಂದೊಂದು ದಿನ ಕೋವಿಡ್‌ನಂತೆಯೇ ಪ್ರಪಂಚಕ್ಕೆ ಮಾರಕವಾಗುತ್ತದೆ. ೪೦ ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೆ ಒಮ್ಮೆ ಆಂಕಾಲಜಿಸ್ಟ್ ಮಾಡಿಸುವುದು ತುಂಬಾ ಒಳ್ಳೆಯದು. ಜನರು ಆದಷ್ಟು ಸಸ್ಯಹಾರಿಗಳಾಗಬೇಕು. ಹೆಚ್ಚಾಗಿ ಮಾಂಸ ಸೇವನೆ
ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಸ್ಟಮಕ್ ಕ್ಯಾನ್ಸರ್ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಫುಡ್ ಸೀ ಫುಡ್ ಹೆಚ್ಚು
ಸೇವನೆ ಇದಕ್ಕೆ ಕಾರಣ.
ಕಿದ್ವಾಯಿ ಆಸ್ಪತ್ರೆಯಲ್ಲಿ ೧೯೭೩ರಿಂದ ಇಲ್ಲಿಯವರೆಗಿನ ಎಲ್ಲಾ ದಾಖಲೆಗಳನ್ನು ಕಂಪ್ಯೂಟರೈಸ್ಡ್ ಮಾಡಲಾಗಿದೆ. ಶೇ.೭೦ರಷ್ಟು ಲಂಗ್ಸ್ ಕ್ಯಾನ್ಸರ್‌ಗೆ ತಂಬಾಕು ಸೇವನೆ ಕಾರಣ. ಹೀಗಾಗಿ ಈ ಬಗ್ಗೆ ಜಾಗೃತರಾಗಬೇಕು.