ಅಂತರಂಗದ ಸಂಪತ್ತು ನೀಡುವವನೇ ಗುರು
ಅಂತರಂಗದ ಸಂಪತ್ತು ನೀಡುವವನೇ ಗುರು
Vishwavani News
July 14, 2022
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಗುರು ಎಂದರೆ ಯಾರು ವಿಷಯದ ಕುರಿತು ನಾರಾಯಣ ದೇಸಾಯಿ ಉಪನ್ಯಾಸ
ಬೆಂಗಳೂರು: ಯಾರು ನಮ್ಮ ಅಂಧಕಾರವನ್ನು ಕಳೆಯಬಲ್ಲನೋ, ಯಾರು ನಮ್ಮಲ್ಲಿ ಸುಜ್ಞಾನದ ಬೆಳಕನ್ನು ನೀಡಬಲ್ಲನೋ, ಅಂಥಹ ವ್ಯಕ್ತಿ ಗುರು ಎನಿಸಿಕೊಳ್ಳುತ್ತಾನೆ ಎಂದು ನಾರಾಯಣ ದೇಸಾಯಿ ಹೇಳಿದ್ದಾರೆ.
ವಿಶ್ವವಾಣಿ ಕ್ಲಬ್‌ಹೌಸ್ ಏರ್ಪಡಿಸಿದ್ದ ಗುರುವೆಂದರೆ ಯಾರು? ವಿಚಾರದ ಕುರಿತು ಅರಿವಿನ ಉಪನ್ಯಾಸ ನೀಡಿ, ಇಂದು ಗುರು ಎಂದರೆ ಯಾರು? ಗುರುವಿನ ಲಕ್ಷಣ ವೇನು? ಎಂಬ ವಿಚಾರದಲ್ಲಿ ತುಂಬಾ ಗೊಂದಲ ಉಂಟಾಗುತ್ತಿದೆ. ತಾನು ಗುರು ಎಂದು ತಾನೇ ತನ್ನ ಮನೆಯ ಮುಂದೆ ಫಲಕ ಹಾಕಿಕೊಳ್ಳುತ್ತಾರೆ. ಗುರುತಿಸಿಕೊಳ್ಳುವ ಅಥವ ತನಗೆ ಬೇಕಾ ದವರನ್ನು ಆಯ್ಕೆ ಮಾಡಿ ಕೊಳ್ಳುವ ಸ್ವಾತಂತ್ರ್ಯವನ್ನೇ ಆಯ್ಕೆ ಮಾಡಿಕೊಳ್ಳುವವರಿಗೆ ಬಿಡದೇ ಇರುವುದು ಅಪಾಯದ ಸಂಗತಿ ಎಂದರು.
ನಮ್ಮ ಸಂಸ್ಕೃತ ವಾಂಗ್ಮಯ, ಗುರು ಎಂಬ ಶಬ್ಧಕ್ಕೆ ಒಂದು ವ್ಯಾಖ್ಯಾನ ನೀಡಿದೆ. ಸಹಜ ವಾಗಿ ಗುರು ಎಂದರೆ ದೊಡ್ಡದು ಎಂದು ಅರ್ಥ. ಆದರೆ, ಈ ಗುರು ಎಂಬ ಪದದಲ್ಲಿ ನಮಗೆ ನಮ್ಮ ವಿದ್ಯೋಪದೇಶಕನನ್ನು ಹೇಳುವುದರಿಂದ ‘ಗುಕಾರಸ್ತು ಅಂಧಕಾರಃ, ರುಕಾರಸ್ತನ್ನಿ ರೋಧಕಃ, ಅಂಧಕಾರವಿನಾಶಿತ್ವಾತ್ ಗುರುತ್ವಾಬೀಯತೇ’ ಎನ್ನುತ್ತಾರೆ. ಗುಕಾರ ಎಂದರೇ ಅದು ಅಂಧಕಾರದ ಪ್ರತೀಕ, ರ್ ಎನ್ನುವ ಅಕ್ಷರ ಅಗ್ನಿ ಬೀಜ ತಂತ್ರ ಶಾಸದಲ್ಲಿ ರ್ ಎಂಬ ಅಕ್ಷರದ ಮುಂದುವರಿಕೆಯೇ ರು ಆದ್ದರಿಂದ, ಅದು ಅಂಧಕಾರವ ನ್ನೆಲ್ಲಾ ಸುಟ್ಟು ಹಾಕುತ್ತದೆ ಎನ್ನುತ್ತೇವೆ.
ಹೀಗಾಗಿ ಯಾರು ನಮ್ಮ ಅಂಧಕಾರವನ್ನು ಕಳೆಯಬಲ್ಲನೋ, ಯಾರು ನಮಗೆ ಸುಜ್ಞಾನದ ಬೆಳಕನ್ನು ನೀಡಬಲ್ಲನೋ ಅಂಥಹ ವ್ಯಕ್ತಿ ಗುರು ಎನಿಸಿಕೊಳ್ಳುತ್ತಾನೆ ಎಂದು ವಿವರಿಸಿದರು. ‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು’ ಎಂಬ ಮಾತಿದೆ. ಪ್ರತಿಯೊಂದೂ ಜೀವಿಗೆ ಮೊದಲ ಗುರು ಜನನಿ ಅಂದರೆ ತಾಯಿ.
ಆಕೆ ಮಗುವಿಗೆ ಗರ್ಭದಲ್ಲೇ ಸಂಸ್ಕಾರ ನೀಡುವವಳು. ಮಗುವಿಗೆ ಮೊದಲ ಗುರು ತಾಯಿ. ನಂತರ ನಿದಾನವಾಗಿ ತಂದೆಯ ಸಂಪರ್ಕ ಸಿಗುತ್ತದೆ. ಮನೆಯಲ್ಲಿ ಹೇಗೆ ಹೆಜ್ಜೆ ಇಡಬೇಕು ಎಂದು ತಾಯಿ ಹೇಳಿದರೆ, ಹೊರಗೆ ಹೇಗೆ ಹೆಜ್ಜೆ ಇಡಬೇಕು ಎಂದು ತಂದೆ
ಹೇಳುತ್ತಾನೆ. ನಂತರ ಬರುವುದು ಬೋಧಕ. ಒಂದು ಅಕ್ಷರ ಹೇಳಿಕೊಟ್ಟರೂ ಅವನು ಗುರುವೇ ಎಂದು ತಿಳಿಸಿದರು.
ವ್ಯಾಸ, ವಾಲ್ಮೀಕಿ ಈ ಭರತ ಭೂಮಿಯಲ್ಲಿ ಹುಟ್ಟದಿದ್ದರೆ, ಇಂಥಹದ್ದೊಂದು ಸಂಸ್ಕಾರ ಇಲ್ಲಿ ರೂಪುಗೊಳ್ಳುತ್ತಿತ್ತೇ ಎಂಬ ಸಂಶಯ ಮೂಡುತ್ತದೆ. ಇವರಂಥ ಅನೇಕ ಮಹರ್ಷಿಗಳು ಕೊಟ್ಟ ಕೊಡುಗೆ ಅಪಾರ. ಅವರು ನೀಡಿದ ಒಳ್ಳೆಯ ಮಾತು, ನಿದರ್ಶನ, ಶುಭಾಷಿತದಿಂದ ನಮ್ಮ ಜೀವನವನ್ನು ತಿದ್ದಿಕೊಳ್ಳಲು ಸಾಧ್ಯವಾಗಿದೆ. ನಮ್ಮ ಮನಸ್ಸು, ಬುದ್ಧಿಗೆ ಸಂಸ್ಕಾರ ಕೊಟ್ಟು ಕೊಳ್ಳಲು ಸಾಧ್ಯವಾಗಿದೆ. ಆದ್ದರಿಂದಲೇ ಒಂದು ದೇಶ ಕೇವಲ ಭೌತಿಕವಾಗಿ ಸಂಪತ್ತಿನಿಂದ ಕೂಡಿದ್ದರೆ ಸಾಲದು, ಅಲ್ಲಿಯ ಜನರಿಗೆ ಅಂತರಂಗದ ಸಂಪತ್ತು ಇರಬೇಕು. ಎಲ್ಲಿ ಅಂತರಂಗದ ಸಂಪತ್ತು ಇಲ್ಲವೋ, ಆ ದೇಶದ ಭೌತಿಕ ಸಂಪತ್ತು ಬಹುಬೇಗ
ನಾಶವಾಗುತ್ತದೆ ಎಂದರು.
ಗುರು ಯಾರು ಎಂಬುದನ್ನು ಸಂಸ್ಕೃತದ ಪ್ರಕಾರ ಹೇಳುವುದಾದರೆ, ಮೊದಲು ಗುರು ತಾನು ತತ್ತ್ವ ತಿಳಿದಿರಬೇಕು. ನಂತರ ಶಿಷ್ಯನ ಹಿತ ಕಾಪಾಡುವವನಾಗಿರಬೇಕು. ಅಪಾತ್ರನಿಗೆ ವಿದ್ಯೆ ಕೊಟ್ಟರೆ ಅನರ್ಥಕ್ಕೆ ಕಾರಣವಾಗುತ್ತದೆ. ವಿದ್ಯೆ ಕಲಿಯುವವನು ದಯಾ ಸಿಂಧು ಆಗಿರಬೇಕು. ಈ ಕಾರಣದಿಂದಲೇ ಹಿಂದಿನ ಕಾಲದಲ್ಲಿ ವಿದ್ಯೆಗೆ ನಿಬಂಧನೆಗಳಿದ್ದವು. ಗುರು ಅಹೇತುಕ ದಯಾಸಿಂಧು ವಾಗಿರಬೇಕು. ತನಗೆ ನಮಸ್ಕರಿಸಿದವನಿಗೆ ಬಂಧುವಾಗಿರಬೇಕು. ಅಂತಹ ಗುರುವನ್ನು ಹುಡುಕಿ ಶಿಷ್ಯ ಹೋಗಬೇಕು ಎಂದು ತಿಳಿಸಿದರು.
ವೇದವನ್ನು ಉಳಿಸುವುದಕ್ಕೆ ಅವಿರತ ಪ್ರಯತ್ನ ಮಾಡಿ, ವೇದವನ್ನು ವಿಭಾಗ ಮಾಡಿಕೊಟ್ಟವರು ವೇದವ್ಯಾಸರು. ಆ ವೇದ ಸುಲಭವಾಗಿ ಅರ್ಥ ಮಾಡಿಕೊಳ್ಳಲಾಗುವುದಿಲ್ಲ ಎಂಬ ಕಾರಣಕ್ಕೆ ಪುರಾಣ ರಚಿಸಿದರು. ಇತಿಹಾಸ, ಕಾವ್ಯ, ಪುರಾಣ ಮೂರಕ್ಕೂ
ಹೊಂದಬಹುದಾದಂತಹ ಲಕ್ಷ ಶ್ಲೋಕ ಇರುವ ಮಹಾ ಭಾರತ ರಚಿಸಿದರು. ಲೋಕದಲ್ಲಿ ಯಾವುದೆಲ್ಲಾ ಇದೆಯೋ ಅದು ಮಹಾಭಾರತದಲ್ಲಿ ಇದೆ. ಮಹಾ ಭಾರತದಲ್ಲಿ ಯಾವುದು ಇಲ್ಲವೋ ಅದು ಲೋಕದಲ್ಲಿ ಇಲ್ಲ. ಆ ಮಹಾಭಾರತದಲ್ಲಿ ತಾನು ಒಬ್ಬ ಪಾತ್ರಧಾರಿ ಯಾಗಿ ಬಂದರು. ಬ್ರಹ್ಮಸೂತ್ರ ರಚನೆ ಮಾಡಿದರು.
ಒಟ್ಟಾರೆ ನಮ್ಮ ಆಧ್ಯಾತ್ಮ ಪರಂಪರೆಯನ್ನು ರಕ್ಷಿಸುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟವರು ವೇದವ್ಯಾಸರು. ಪ್ರಪಂಚದ ಇತಿಹಾಸದಲ್ಲೇ ಇಂಥಹ ಒಬ್ಬ ವ್ಯಕ್ತಿ ದುರ್ಲಭ ಎಂದು ನಾನು ಭಾವಿಸುತ್ತೇನೆ. ಇಂದು ಅವರು ಜನಿಸಿದ ದಿನ ಗುರು ಪೌರ್ಣಿಮೆ. ಗುರುವೆಂದರೆ ವ್ಯಾಸರು ಎಂದು ಬಣ್ಣಿಸಿದರು.
***
? ಗುರು ಆದವನು, ನೀನು ಹೀಗೆಯೇ ಸಾಗಬೇಕು. ಇಲ್ಲಿಗೆ ತಲುಪಬೇಕು ಎಂಬ ಬಗ್ಗೆ ಜೀವನಕ್ಕೆ ಒಂದು ಗುರಿ, ಮಾರ್ಗ
ಹಾಕಿಕೊಡಬೇಕು.
? ವ್ಯಾಸರು ಭಾರತದಲ್ಲಿ ಜನಿಸದಿದ್ದರೆ ಇಂಥಃ ಸಂಸ್ಕಾರ ಇರುತ್ತಿತ್ತೇ ಎಂದು ಭಾಸವಗುತ್ತದೆ. ಅವರ ಚಿಂತನೆ, ಭೋಧನೆಗಳಿಂದ ನಾವು ಸಂಸ್ಕಾರ ಪಡೆದುಕೊಳ್ಳಲು ಸಾಧ್ಯ.
? ಶಿಕ್ಷಕ, ಬೋಧಕ, ಲೇಖಕ ಒಬ್ಬೊಬ್ಬರು ಯೋಧರು. ಯೋದನಾದವನು ಭೌಗೋಳಿಕವಾಗಿ ದೇಶ ಕಾಪಾಡುತ್ತಾನೆ. ಆದರೆ, ಗುರು
ಇವರು ಆಂತರಂಗಿಕವಾಗಿ ದೇಶವನ್ನು ಕಾಪಾಡುತ್ತಾರೆ.
? ಗುರು ಪಾಠ ಹೇಳುವ ಮೊದಲು ಶಿಷ್ಯನನ್ನು ಹದಗೊಳಿಸುತ್ತಾನೆ.
? ಇಂದು ವಿದ್ಯೆ ಹೇಳಿಕೊಡುವವನಿಗೆ ನಿಖರತೆ ಇಲ್ಲ.
? ಶಿಷ್ಯನ ಹಿತದಲ್ಲೇ ಜೀವನ ನಡೆಸುವವನು ಗುರು.
? ಗುರು ಎಂತಹ ಎತ್ತರಕ್ಕೆ ಇರಬಲ್ಲ ಎಂಬುದಕ್ಕೆ ಉಪನಿಷತ್ ಸಾಕ್ಷಿ.
? ಸುಜ್ಞಾನದ ಬೆಳಕು ನೀಡುವವರು ಗುರು ಅನ್ನಿಸಿಕೊಳ್ಳುತ್ತಾರೆ.