ದೇವರ ಸೇವಕ, ದೇವರೊಂದಿಗೆ ಸೇರಿದರು: ಇಸ್ರೇಲ್ ದಾಳಿಯಲ್ಲಿ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ದೃಢೀಕರಿಸಿದ ಇರಾನ್
Iran-Israel conflict: ಇಸ್ರೇಲ್ ವೈಮಾನಿಕ ದಾಳಿಯಲ್ಲಿ ತನ್ನ ಉನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಮೃತಪಟ್ಟಿರುವುದಾಗಿ ಇರಾನ್ ದೃಢಪಡಿಸಿದೆ. ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ (SNSC) ಈ ದೃಢೀಕರಣವನ್ನು ನೀಡಿದೆ. ಲಾರಿಜಾನಿ ಅವರ ಮಗ ಮೊರ್ಟೆಜಾ ಮತ್ತು ಹಲವು ಅಂಗರಕ್ಷಕರು ಸಹ ನಿಧನರಾದರು ಎಂದು ಹೇಳಿದೆ.
ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ (ಸಂಗ್ರಹ ಚಿತ್ರ) -
ಟೆಹರಾನ್, ಮಾ. 18: ಮಂಗಳವಾರ (ಮಾ. 17) ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ (Israel airstrike) ತನ್ನ ಉನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಮೃತಪಟ್ಟಿದ್ದಾರೆ ಎಂದು ಇರಾನ್ ದೃಢಪಡಿಸಿದೆ. ಇದರಿಂದ ಮಧ್ಯಪ್ರಾಚ್ಯದ ಸಂಘರ್ಷ ಇನ್ನಷ್ಟು ಉಲ್ಭಣಗೊಳ್ಳುವ ಲಕ್ಷಣ ಗೋಚರಿಸುತ್ತಿದೆ. ಈ ದಾಳಿಯಲ್ಲಿ ಹತ್ಯೆಯಾದವರಲ್ಲಿ ಲಾರಿಜಾನಿ (Ali Larijani) ಕೂಡ ಇದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಈ ಹಿಂದೆ ಹೇಳಿಕೊಂಡಿದ್ದರು.
ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ (SNSC) ಸದ್ಯ ಲಾರಿಜಾನಿ ಹತ್ಯೆಯನ್ನು ದೃಢೀಕರಿಸಿದೆ. ಲಾರಿಜಾನಿ ಅವರ ಮಗ ಮೊರ್ಟೆಜಾ ಮತ್ತು ಹಲವು ಅಂಗರಕ್ಷಕರು ಸಹ ನಿಧನರಾದರು ಎಂದು ಹೇಳಿದೆ. ಕೌನ್ಸಿಲ್ ಅವರನ್ನು ಇರಾನ್‌ನ ಪ್ರಗತಿ ಮತ್ತು ಇಸ್ಲಾಮಿಕ್ ಕ್ರಾಂತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹುತಾತ್ಮ. ದೇವರ ಸೇವಕ, ದೇವರೊಂದಿಗೆ ಸೇರಿದರು ಎಂದು ಬಣ್ಣಿಸಿದೆ.
ಲಾರಿಜಾನಿ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪರ್ಷಿಯನ್ ಭಾಷೆಯಲ್ಲಿ ಪೋಸ್ಟ್ ಮಾಡಲಾಯಿತು. ಅವರ ಜೀವಮಾನದ ಸೇವೆ, ರಾಷ್ಟ್ರೀಯ ಅಭಿವೃದ್ಧಿಗೆ ಬದ್ಧತೆ ಮತ್ತು ವಿರೋಧಿಗಳ ವಿರುದ್ಧ ಏಕತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳನ್ನು ಶ್ಲಾಘಿಸಿತು. ಜತೆಗೆ ಅವರ ಸಾವನ್ನು ಹುತಾತ್ಮ ಎಂದು ವಿವರಿಸಿತು.
ಇಲ್ಲಿದೆ ಪೋಸ್ಟ್:
بندهی خدا، به خدا پیوست pic.twitter.com/iMv3OVeT7n
— Ali Larijani | علی لاریجانی (@alilarijani_ir) March 18, 2026
ಶೋಕ ಸಂದೇಶದಲ್ಲಿ ಧಾರ್ಮಿಕ ಸಂಕೇತಗಳನ್ನು ಉಲ್ಲೇಖಿಸಿ, ಅಲಿ ಲಾರಿಜಾನಿ ಇರಾನ್‌ನ ಸಿದ್ಧಾಂತ ಹಾಗೂ ರಾಜಕೀಯ ನೆಲೆಯನ್ನು ಬಲಪಡಿಸುವಲ್ಲಿ ವಹಿಸಿದ ಪಾತ್ರಕ್ಕೆ ಗೌರವ ಸಲ್ಲಿಸಲಾಗಿದೆ. ಇದರಲ್ಲಿ ಅಲಿ ಖಮೇನಿ ಸೇರಿದಂತೆ ಹತ್ಯೆಗೀಡಾದ ಪ್ರಮುಖ ನಾಯಕರಾದ ಖಾಸಿಮ್ ಸೊಲೈಮಾನಿ ಮತ್ತು ಹಸನ್ ನಸ್ರಲ್ಲಾ ಅವರನ್ನೂ ಉಲ್ಲೇಖಿಸಿ, ಲಾರಿಜಾನಿಯನ್ನು ಇರಾನ್‌ನ ಪ್ರಾದೇಶಿಕ ತಂತ್ರಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿ ಚಿತ್ರಿಸಲಾಗಿದೆ.
ಶಾಂತಿ ಪುನಃಸ್ಥಾಪನೆಗಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ: ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಹೇಳಿಕೆಯ ಪ್ರಕಾರ, ಲಾರಿಜಾನಿ ತಮ್ಮ ಕೊನೆಯ ಕ್ಷಣಗಳವರೆಗೂ ಇರಾನ್‌ನ ಪ್ರಗತಿ ಮತ್ತು ಏಕತೆಗೆ ಬದ್ಧರಾಗಿದ್ದರು. ಬಾಹ್ಯ ಬೆದರಿಕೆಗಳ ವಿರುದ್ಧ ನಾಗರಿಕರು ಮತ್ತು ಅಧಿಕಾರಿಗಳು ದೃಢವಾಗಿ ನಿಲ್ಲುವಂತೆ ನಿರಂತರವಾಗಿ ಒತ್ತಾಯಿಸಿದರು. ಅವರ ಸಾವು ದೇಶದೊಳಗಿನ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಮಂಡಳಿ ಹೇಳಿದೆ.
ಅಲಿ ಲಾರಿಜಾನಿ ಯಾರು?
ಲಾರಿಜಾನಿ ಅನುಭವಿ ರಾಜಕಾರಣಿ ಮತ್ತು ಇರಾನ್‌ನ ರಾಜಕೀಯ ಮತ್ತು ಭದ್ರತಾ ಸ್ಥಾಪನೆಯಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಖಮೇನಿ ಅವರ ಆಪ್ತರಾಗಿದ್ದ ಅವರು ಈ ಹಿಂದೆ ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಮತ್ತು ರಕ್ಷಣಾ ಮತ್ತು ಪರಮಾಣು ನೀತಿಯನ್ನು ರೂಪಿಸುವ ಜವಾಬ್ದಾರಿಯುತ ಸಂಸ್ಥೆಯಾದ ಎಸ್‌ಎನ್‌ಎಸ್‌ಸಿ ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
ಪ್ರಮುಖ ಪಾದ್ರಿ ಕುಟುಂಬದಿಂದ ಬಂದ ಲಾರಿಜಾನಿ, ಅಮೆರಿಕದೊಂದಿಗೆ ಪರಮಾಣು ಮಾತುಕತೆ ಮತ್ತು ರಷ್ಯಾ ಮತ್ತು ಚೀನಾದಂತಹ ಪ್ರಮುಖ ಜಾಗತಿಕ ಶಕ್ತಿಗಳೊಂದಿಗೆ ಸಂಬಂಧಗಳನ್ನು ನಿರ್ವಹಿಸುವುದು ಸೇರಿದಂತೆ ಇರಾನ್‌ನ ಕಾರ್ಯತಂತ್ರದ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಹತ್ಯೆಯು ಇರಾನ್‌ನ ನಾಯಕತ್ವ ರಚನೆಯ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ಈಗಾಗಲೇ ಅಸ್ಥಿರವಾಗಿರುವ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಇನ್ನಷ್ಟು ತೀವ್ರಗೊಳಿಸಬಹುದು.