ವೀರಣ್ಣ ಕಲಕೇರಿ ಕೆಂಭಾವಿ
ಪಟ್ಟಣದ ಸಂಜೀವನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕುರಿತು ಜುಲೈ 26ರಂದು ವಿಶ್ವವಾಣಿ ದಿನ ಪತ್ರಿಕೆಯಲ್ಲಿ ಪ್ರಕಟ ವಾಗಿದ್ದ ವಿಶೇಷ ವರದಿಗೆ ಕರ್ನಾಟಕ ಹೈಕೋರ್ಟ್‌ನ ಬಾಲ ನ್ಯಾಯ ಸಮಿತಿ ಸ್ಪಂದಿಸಿದೆ. ವರದಿಯ ಬೆನ್ನಲ್ಲೇ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ದೊರೆತಿದೆ.
ಆ. 5ರಂದು ಹೈಕೋರ್ಟ್ ಬಾಲ ನ್ಯಾಯ ಸಮಿತಿಯ ಉಪಕಾರ್ಯದರ್ಶಿ ಯತೀಶ ಆರ್. ಅವರು ಪತ್ರಿಕಾ ವರದಿಯನ್ನು ಆಧರಿಸಿ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಸೂಚಿಸಿದ್ದರು. ಸೂಚನೆಯ ಹಿನ್ನೆಲೆಯಲ್ಲಿ ಆಗಸ್ಟ್ 30ರಂದು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ರಾಜೇಂದ್ರ ಕುಮಾರ ಯಾದವ್ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: Yadgir News: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಭಾಗ್ಯವಂತಿ ಮಠದ ಪೂಜಾರಿ ವಿರುದ್ಧ ಪೋಕ್ಸೋ ಕೇಸ್ ದಾಖಲು
ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳ ಕೊರತೆ, ಶಾಲೆಯ ಹಿಂಭಾಗದಲ್ಲಿ ಕಾಂಪೌಂಡ್ ಗೋಡೆ ಇಲ್ಲದಿರುವುದು, ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶಾಲೆಗೆ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸ್ಪೀಡ್ ಬ್ರೇಕರ್ ಅಗತ್ಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಶೀಲಿಸಿದರು. ಇದಲ್ಲದೆ ಕುಡಿಯುವ ನೀರಿನ ಶುದ್ಧೀ ಕರಣ ಘಟಕ, ಹಳೆಯ ಕಟ್ಟಡ, ವಿದ್ಯುತ್ ವೈರಿಂಗ್ ಹಾಗೂ ಅಡುಗೆ ಕೋಣೆ ದುರಸ್ತಿ ಅಗತ್ಯತೆ ಮತ್ತು ಶಾಲೆಯಲ್ಲಿರುವ 222 ವಿದ್ಯಾರ್ಥಿಗಳ ಸಂಖ್ಯೆಯ ಬಗ್ಗೆಯೂ ಮುಖ್ಯಗುರುಗಳು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿ ಸಮಗ್ರ ವರದಿ ಸಿದ್ಧಪಡಿಸಿದರು.
ಈ ಪರಿಶೀಲನಾ ವರದಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಆಗಸ್ಟ್ 31ದು ಪತ್ರ ಸಂಖ್ಯೆ ಜಿಮರಘ/ಯಾ/ದಿ.ಪ.ಪ್ರ.ಕು/2026-27/535ರ ಮೂಲಕ ಬೆಂಗಳೂರಿನ ಹೈಕೋರ್ಟ್ ಬಾಲ ನ್ಯಾಯ ಸಮಿತಿಗೆ ರವಾನಿಸಿದ್ದಾರೆ. ವಿಶ್ವವಾಣಿ ವರದಿ ಹಾಗೂ ಹೈಕೋರ್ಟ್ ಬಾಲ ನ್ಯಾಯ ಸಮಿತಿಯ ತಕ್ಷಣದ ಸ್ಪಂದನೆಯ ಫಲವಾಗಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಆರಂಭ ವಾಗಿರುವುದಕ್ಕೆ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಯನ್ನು ಬೆಳಕಿಗೆ ತಂದ ವಿಶ್ವವಾಣಿ ದಿನಪತ್ರಿಕೆ, ಕ್ರಮಕ್ಕೆ ಮುಂದಾದ ಹೈಕೋರ್ಟ್ ಬಾಲ ನ್ಯಾಯ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಽಕಾರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.