ಅ.26ರಂದು ಪ್ರಕಟಿಸಿದ್ದ ವಿಶೇಷ ವರದಿಗೆ ಫಲಶ್ರುತಿ
ಮುನಿರಾಜು ಎಂ ಅರಿಕೆರೆ
ಚಿಂತಾಮಣಿ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ, ಜನಪದ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಹೋರಾಟಗಳ ಮೂಲಕ ನಾಡಿನ ಗಮನ ಸೆಳೆದಿರುವ ಹಿರಿಯ ಸಾಹಿತಿ, ಜನಪದ ಕಲಾವಿದ ಗೊಲ್ಲಹಳ್ಳಿ ಶಿವಪ್ರಸಾದ್(Gollahalli Shivaprasad) ಅವರಿಗೆ ಕೊನೆಗೂ ತವರಿನ ಗೌರವ ಸಂದಿದೆ.
ಚಿಂತಾಮಣಿಯಲ್ಲಿ ನ.19 ಮತ್ತು 20ರಂದು ನಡೆಯಲಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ(Kannada Sahitya Sammelana)ದ ಸರ್ವಾಧ್ಯಕ್ಷರಾಗಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಶುಕ್ರವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.
ಗೊಲ್ಲಹಳ್ಳಿ ಶಿವಪ್ರಸಾದ್ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಆಗ್ರಹಿಸಿ ಅಕ್ಟೋಬರ್ 26ರಂದು ವಿಶ್ವವಾಣಿ ಪತ್ರಿಕೆಯಲ್ಲಿ ‘ಶಿವಪ್ರಸಾದ್ಗೆ ಸಮ್ಮೇಳನದ ಸಾರಥ್ಯ ಒಲಿಯುವುದೇ?’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು.
ಇದನ್ನೂ ಓದಿ: Chikkaballapur News: ನ.12ರಂದು ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ನಾಲ್ಕು ದಶಕಗಳ ಸಾಹಿತ್ಯ, ಜಾನಪದ ಮತ್ತು ಹೋರಾಟದ ಪಯಣಕ್ಕೆ ತವರಿನ ಗೌರವ ಸಲ್ಲಿಸ ಬೇಕೆಂಬ ಸಾಹಿತ್ಯಾಸಕ್ತರ ಅಭಿಪ್ರಾಯ ಹಾಗೂ ಅವರ ಸಾಧನೆಗಳನ್ನು ವರದಿ ಮೂಲಕ ಗಮನಕ್ಕೆ ತರಲಾಗಿತ್ತು. ಇದೀಗ ಅವರ ಆಯ್ಕೆಯೊಂದಿಗೆ ಆ ಮನವಿಗೆ ಸಕಾರಾತ್ಮಕ ಫಲ ದೊರೆತಂತಾಗಿದೆ.
ಕವಿಯಾಗಿ, ಹಾಡುಗಾರನಾಗಿ, ವಾಗ್ಮಿಯಾಗಿ ಹಾಗೂ ಜನಪರ ಹೋರಾಟಗಳ ಸಂಗಾತಿಯಾಗಿ ಗುರುತಿಸಿಕೊಂಡಿರುವ ಶಿವಪ್ರಸಾದ್ ಅವರು ನೆಲಮೂಲ ಸಂಸ್ಕೃತಿ, ಸಾಮಾಜಿಕ ನ್ಯಾಯ, ಪರಿಸರ, ಕನ್ನಡಪರ ಚಳವಳಿ ಮತ್ತು ಜನಸಾಮಾನ್ಯರ ಬದುಕಿನ ಪ್ರಶ್ನೆಗಳನ್ನು ತಮ್ಮ ಸಾಹಿತ್ಯದ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ.
ಅವರ ‘ಎಲ್ಲಾ ಮಾಯ, ನಾಳೆ ನಾವು ಮಾಯ’ ಹಾಡು ದೇಶದಾದ್ಯಂತ ಜನಪ್ರಿಯತೆ ಗಳಿಸಿದ್ದು, ‘ನೀರಿಗಾಗಿ ನಿಮಿಷ ಮಾತನಾಡುವಿರಾ’ ಗೀತೆ ಶಾಶ್ವತ ನೀರಾವರಿ ಹೋರಾಟದ ಧ್ಯೇಯಗೀತೆಯಾಗಿ ಗುರುತಿಸಿಕೊಂಡಿದೆ.
ಕರ್ನಾಟಕ ಸರ್ಕಾರದ ಚಲನಚಿತ್ರ ಪ್ರಶಸ್ತಿ, ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವ ಅವರು ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಚಿಂತಾಮಣಿ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಜಿಲ್ಲೆಯ ನೆಲಮೂಲ ಸಂಸ್ಕೃತಿ, ಜನಪರ ಸಾಹಿತ್ಯ ಮತ್ತು ಹೋರಾಟದ ಪರಂಪರೆಗೆ ಈ ಆಯ್ಕೆ ಗೌರವ ಸಲ್ಲಿಸಿದಂತಾಗಿದೆ. ಅಕ್ಟೋಬರ್ 26ರಂದು ವಿಶ್ವವಾಣಿ ಪ್ರಕಟಿಸಿದ್ದ ವಿಶೇಷ ವರದಿಗೆ ಈ ಆಯ್ಕೆಯು ಫಲಶ್ರುತಿಯಾಗಿದ್ದು, ಸಾಹಿತ್ಯಾಸಕ್ತರು ಹಾಗೂ ಸಾಂಸ್ಕೃತಿಕ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.