ದೋಸ್ತಿ ಪಕ್ಷದ ನಾಯಕ ಎಚ್ಡಿಕೆ ಬೆಂಬಲಕ್ಕೆ ನಿಲ್ಲದ ಬಿಜೆಪಿ ನಡೆ ನಿಗೂಢ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕಾವು ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಚುಟುಕು ಕಾರ್ಯಚರಣೆಯನ್ನೇ ಮುಂದಿಟ್ಟು ಕೊಂಡು ನಿತ್ಯ ಒಂದಿಲ್ಲೊಂದು ಹೋರಾಟ, ದಾಖಲೆ ಬಿಡುಗಡೆ ಮಾಡುತ್ತಿದ್ದರೂ, ಇಡೀ ಪ್ರಕರಣ ದಲ್ಲಿ ಬಿಜೆಪಿಯ ‘ಮೌನ’ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಎಚ್ಚರಿಕೆ, ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ ಕೇಳಿ ಬಂದಾಗಿನಿಂದಲೂ ಈ ವಿಷಯದಲ್ಲಿ ಬಿಜೆಪಿ ‘ತಣ್ಣಗೆ’ ಮಲಗಿದೆ. ಇಡೀ ಪ್ರಕರಣಕ್ಕೂ, ತನಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ರಾಜ್ಯ ಬಿಜೆಪಿ ಘಟಕ ನಡೆದುಕೊಳ್ಳುತ್ತಿರುವುದು ಪಕ್ಷದ ಕಾರ್ಯಕರ್ತ ರಲ್ಲಿ ಹಾಗೂ ಸಾರ್ವಜನಿಕರಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸರಕಾರದ ಬುಡವನ್ನೇ ಅಲುಗಾಡಿಸುತ್ತಿರುವ ಸ್ಟಿಂಗ್ ಆಪರೇಷನ್ ಆರೋಪ ಕೇಳಿಬಂದ ದಿನದಿಂದ ಯಾವೊಬ್ಬ ನಾಯಕರೂ ಈ ವಿಷಯದಲ್ಲಿ ಬಹಿರಂಗ ಹೇಳಿಕೆ ನೀಡುವ ಗೋಜಿಗೆ ಹೋಗಲಿಲ್ಲ. ಕೆಲ ನಾಯಕರು ಸಾಮಾಜಿಕ ಜಾಲತಾಣದಲ್ಲಿ ‘ಪೋಸ್ಟ್’ ಮಾಡಿ ಕೈತೊಳೆದುಕೊಂಡರೆ, ಇನ್ನು ಕೆಲ ನಾಯಕರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಡೆಸುತ್ತಿ ರುವ ಹೋರಾಟಕ್ಕೆ ‘ನೈತಿಕ’ ಬೆಂಬಲ ನೀಡುವ ಬಗ್ಗೆಯೂ ಬಿಜೆಪಿ ನಾಯಕರು ತುಟಿ ಬಿಚ್ಚದಿರು ವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Karnataka Sting Operation: ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ವಿಡಿಯೊ ಪ್ರಸಾರ ಮಾಡದಂತೆ ಕೋರ್ಟ್ನಿಂದ ಪ್ರತಿಬಂಧಕಾದೇಶ
ದಿಲ್ಲಿಗೆ ವಿಷಯ ಮುಟ್ಟಿಸಿದ ಕುಮಾರಸ್ವಾಮಿ ಗುರುವಾರ ರಾಜ್ಯ ಸರಕಾರದ ವಿರುದ್ಧ ಕುಮಾರ ಸ್ವಾಮಿ ಪ್ರತಿಭಟನೆ ನಡೆಸಿ, ಇಡೀ ಪೊಲೀಸ್ ವ್ಯವಸ್ಥೆಯನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿಕೊಳ್ಳು ವಲ್ಲಿ ಯಶಸ್ವಿಯಾಗುವುದರೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಈ ಪ್ರಕರಣದಿಂದ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡರು. ಇದಾದ ಬಳಿಕ ಕನಿಷ್ಠ ಕುಮಾರಸ್ವಾಮಿ ನಡೆಸಿದ್ದ ಹೋರಾಟದ ಬಗ್ಗೆಯೂ ಚಕಾರ ಎತ್ತಿಲ್ಲ. ಇದು ಮೈತ್ರಿಯೊಳಗಿರುವ ‘ಸಮನ್ವಯ’ ಕೊರತೆಯ ಕಾರಣಕ್ಕೂ ಅಥವಾ ರಾಜ್ಯ ಬಿಜೆಪಿ ನಾಯಕರ ರಾಜಕೀಯ ‘ಲೆಕ್ಕಾಚಾರ’ದ ಕಾರಣಕ್ಕೋ ಎನ್ನುವ ಸ್ಪಷ್ಟನೆ ಇಲ್ಲ. ಆದರೆ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ, ರಾಜ್ಯ ಬಿಜೆಪಿ ನಾಯಕರ ನಡವಳಿಕೆ ಬಗ್ಗೆ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಪಾದಯಾತ್ರೆ ವೇಳೆಯೂ ಅಶೋಕ್ ನಾಪತ್ತೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಂಘಟನಾ ವಿಷಯದಲ್ಲಿ ಕೆಲವೊಂದಷ್ಟು ಹೋರಾಟ ನಡೆಸಿದ್ದರೂ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಕೆಲ ನಾಯಕರಿಂದ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಅಶೋಕ್ ಅವರು ಜೆಡಿಎಸ್ ಹೋರಾಟ ಮಾತ್ರವಲ್ಲ, ಬಿಜೆಪಿಯೇ ಸಂಘಟನೆ ಮಾಡಿದ್ದ ಬಳ್ಳಾರಿ ಪಾದಯಾತ್ರೆ ಯಿಂದಲೂ ಅಂತರ ಕಾಯ್ದುಕೊಂಡಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸ್ಟಿಂಗ್ ಆಪರೇಷನ್ ವಿಷಯದಲ್ಲೂ ಕುಮಾರಸ್ವಾಮಿ ಅವರೊಂದಿಗೆ ಕಾಣಿಸಿಕೊಳ್ಳದೇ ಪಕ್ಷದ ಕಾರ್ಯ ಕರ್ತರಿಗೆ ಯಾವ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಶುರುವಾಗಿದೆ.
ಎಚ್ಡಿಕೆ ಹೋರಾಟ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಮೈತ್ರಿ ಪಕ್ಷ ಬಿಜೆಪಿಯ ನಾಯಕರ ‘ಮೌನ’ದ ಹೊರತಾಗಿಯೂ, ಕುಮಾರಸ್ವಾಮಿ ನೈಸ್ ಹಗರಣ, ಬಿಡದಿ ಟೌನ್ಶಿಪ್, ಸ್ಟಿಂಗ್ ಆಪರೇಷನ್ ಗದ್ದಲ ಸೇರಿದಂತೆ ಹಲವು ವಿಷಯಗಳನ್ನು ನಿರಂತರವಾಗಿ ಎತ್ತಿಕೊಂಡು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಒಂದು ಹಂತಕ್ಕೆ ಯಶಸ್ವಿಯಾಗಿದ್ದಾರೆ.
ಅದರಲ್ಲಿಯೂ ಗುರುವಾರ ಸ್ಟಿಂಗ್ ಆಪರೇಷನ್ ವಿಷಯದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದು ಸರಕಾರಕ್ಕೆ ಇರುಸು-ಮುರುಸು ಉಂಟಾಗಿದೆ. ಆದರೆ ಈ ಎಲ್ಲ ಹೋರಾಟದಲ್ಲಿ ಬಿಜೆಪಿ ಮೌನ ಜಾರಿದ್ದರೂ, ಏಕಾಂಕಿಯಾಗಿ ಸರಕಾರದ ವಿರುದ್ಧ ಕುಮಾರಸ್ವಾಮಿ ಮುಗಿಬಿದ್ದು, ಸರಕಾರವನ್ನು ಅದರಲ್ಲಿಯು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿದೆ.