ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Virajpet MLA A S Ponnanna Interview: ನಾಯಕತ್ವದ ಬಗ್ಗೆ ಸಿಎಂ-ಡಿಸಿಎಂ ಮಧ್ಯೆ ಚರ್ಚೆಯಾಗಿದೆ

ಕಾವೇರಿ, ಕೃಷ್ಣಾ, ಮುಡಾ, ವಾಲ್ಮೀಕಿ ಸೇರಿದಂತೆ ಅನೇಕ ಕಾನೂನು ಸಮಸ್ಯೆಗಳನ್ನು ಸುಲಭ ವಾಗಿ ಪರಿಹರಿಸಬೇಕು. ಕಠಿಣ ಮಾಡಬಾರದು. ಸಮಸ್ಯೆಗಳನ್ನು ಜನರ ಹಿತದೃಷ್ಟಿಯಿಂದ ಕಾನೂನಾತ್ಮಕಾಗಿ ನೋಡಬೇಕು. ಇದರಿಂದ ಯಾವುದೇ ಟ್ರಬಲ್ ಶೂಟ್ ಮಾಡಬಹುದು. ಆದ್ದರಿಂದ ಎಲ್ಲವನ್ನೂ ರಾಜಕೀಯವಾಗಿ ಯೋಚಿಸಬಾರದು.

ಸಂದರ್ಶನ: ಶಿವಕುಮಾರ್‌ ಬೆಳ್ಳಿತಟ್ಟೆ

ಅಧಿಕಾರದ ಬಗ್ಗೆ ಜಗಳವೇ ಇಲ್ಲ

28ರ ಅಧಿಕಾರ ಪಕ್ಷದ ಗುರಿ

ಕೊಡಗು ಜಿಲ್ಲೆಗೆ ಮಂತ್ರಿ ಸ್ಥಾನ ಬೇಕು

ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ಚರ್ಚೆಯಾಗಿದೆ ಎಂದು ‘ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ’ ಹೇಳಿದ್ದಾರೆ. ‘ವಿಶ್ವವಾಣಿ’ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ನಾಯಕತ್ವ ವಿಚಾರದಲ್ಲಿ ಸಾರ್ವಜನಿಕರ ವಾಗಿ ನಡೆಯುತ್ತಿರುವ ಚರ್ಚೆಯಲ್ಲಿ ಯಾವುದೇ ವಾಸ್ತವ ಇಲ್ಲ. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವಂತೆ ಯಾವುದೇ ಬೆಳವಣಿಗೆ ನಡೆದಿಲ್ಲ. ಅಧಿವೇಶನ ಸಂದರ್ಭ ದಲ್ಲಿ ನಮಗೆ ಪಕ್ಷದ ಹೈಕಮಾಂಡ್‌ನಿಂದ ಕರೆ ಬಂದಿತ್ತು. ನಾಯಕತ್ವದ ಬಗ್ಗೆ ಮಾತನಾಡುವಂತೆ ಸೂಚನೆ ಬಂದಿತ್ತು. ನಂತರ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ, ಬ್ರೇಕ್ ಫಾಸ್ಟ್ ಮೀಟಿಂಗ್ ಏರ್ಪಡಿಸಿದ್ದೆ. ಇದಕ್ಕೆ ಉಪಮುಖ್ಯಮಂತ್ರಿ ಶಿವಕುಮಾರ್ ಅವರೂ ಒಪ್ಪಿದರು. ಇದಾದ ನಂತರ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯಿತು. ಈ ಸಂದರ್ಭದಲ್ಲಿ ಅವರಿಬ್ಬರೂ ಮಾತನಾಡಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ನಾಯತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಪೊನ್ನಣ್ಣ ವಿವರಿಸಿದರು. ಇದೇ ರೀತಿ ಪಕ್ಷ ಹಾಗೂ ಸರಕಾರದಲ್ಲಿ ಏನೆಲ್ಲಾ ಬೆಳವಣಿಗೆ ನಡೆದಿವೆ ಹಾಗೂ ಅಭಿವೃದ್ಧಿ ಹೇಗೆಲ್ಲಾ ಆಗಿದೆ ಎನ್ನುವುದನ್ನು ಪೊನ್ನಣ್ಣ ಅವರು ಹಂಚಿಕೊಂಡಿದ್ದಾರೆ. ಅದರ ಪೂರ್ಣ ಪಾಠ ಇಲ್ಲಿದೆ.

ಸರಕಾರ 1000 ದಿನಗಳನ್ನು ಪೂರೈಸಿದ್ದು ವಿಶೇಷವೇ ಅಥವಾ ಏನಾದರು ಸಾಧನೆ ಆಗಿದೆಯೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಪ್ರನಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತದೆ ಎಂದು ಪ್ರತಿಪಕ್ಷಗಳು ಭಾವಿಸಿರಲಿಲ್ಲ. ಈಗ ಬಹುತೇಕ ಎಲ್ಲವನ್ನೂ ಈಡೇರಿಸುವ ಮೂಲಕ ನಮ್ಮ ಸರಕಾರ ದೇಶದಲ್ಲೇ ಮಾದರಿ ಎನಿಸಿದೆ. ಅದರಲ್ಲೂ ಹೆಚ್ಚು ಹೊರೆ ಎಂದೇ ಭಾವಿಸಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಈಡೇರಿಸಿದ್ದೇವೆ. ಜತೆಗೆ ಮೂಲಸೌಕರ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಹಾಗೆಯೇ ಒಳ ಮೀಸಲಾತಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ.

ಪ್ರತಿಪಕ್ಷಗಳ ಹೋರಾಟ ನಿಮಗೆ ಇಕ್ಕಟ್ಟು ತಂದಿದೆಯೇ?

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪ್ರತಿಪಕ್ಷಗಳು ತೀರಾ ದುರ್ಬಲವಾಗಿವೆ. ಆದ್ದರಿಂದ ಬರೀ ಕ್ಷುಲ್ಲಕ ವಿಚಾರಗಳನ್ನು ಎತ್ತಿಕೊಂಡು ಹೋರಾಟ ಮಾಡುವುದು ಮತ್ತು ಟೀಕಿಸುವುದರಲ್ಲಿ ತೊಡಗಿವೆ.

ಇದನ್ನೂ ಓದಿ: Jayamala Interview: ತವರು ಮನೆ ಸೇರುವ ತವಕವೇ ಫಿಲ್ಮ್‌ ಚೇಂಬರ್‌ ಚುನಾವಣೆಯಲ್ಲಿ ಸ್ಪರ್ಧೆಗೆ ಕಾರಣ: ನಟಿ ಜಯಮಾಲಾ

ಅಕ್ರಮ, ಹಗರಣಗಳ ಆರೋಪದಲ್ಲಿ ಸರಕಾರ ಏನೆಲ್ಲಾ ಅನುಭವಿಸಿತ್ತು? ಇದರಲ್ಲಿ ನಿಮ್ಮ ಪಾತ್ರ ಹೇಗಿತ್ತು?

ಸರಕಾರದಲ್ಲಿ ಮುಖ್ಯಮಂತ್ರಿಗಳ ಮೇಲೆ ಹಾಗೂ ಕೆಲವು ಸಚಿವರ ವಿರುದ್ಧ ಅನೇಕ ಆರೋಪಗಳು ಬಂದಿದ್ದವು. ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದೆ ಎಂಬ ಆರೋಪ ಬಂದಿತ್ತು. ಇನ್ನು ಮುಡಾ ಅಕ್ರಮ ಆರೋಪವನ್ನು ಮುಖ್ಯಮಂತ್ರಿ ಮೇಲೆ ಆರೋಪಿಸ ಲಾಗಿತ್ತು. ಇದು ಸತ್ಯಕ್ಕೆ ದೂರ ಎಂದು ನಾನೊಂದು ಪುಸ್ತಕವನ್ನೇ ರಚಿಸಿದ್ದೆ. ಇದೇ ವೇಳೆ ಲೋಕಾಯುಕ್ತ ತನಿಖೆ ನಡೆದಿತ್ತು. ನ್ಯಾ.ದೇಸಾಯಿ ಆಯೋಗದಿಂದ ತನಿಖೆ ಆಗಿತ್ತು. ಇ.ಡಿ ತನಿಖೆ ಕೂಡ ನಡೆದಿತ್ತು. ರಾಜ್ಯಪಾಲರು ಕೂಡ ತನಿಖೆಗೆ ಅನುಮತಿ ನೀಡಿದ್ದರು. ಇದಕ್ಕೂ ಮುನ್ನ ಸರಕಾರ ಎಸ್‌ಐಟಿಯನ್ನೂ ರಚಿಸಿತ್ತು. ಎಲ್ಲ ತನಿಖೆಗಳಲ್ಲೂ ಈ ಅಕ್ರಮದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಇಂಥ ತನಿಖೆಗಳಲ್ಲೂ ಎಲ್ಲ ಸಂದರ್ಭದಲ್ಲೂ ಈವರೆಗಿನ ಕಾನೂನು ಕ್ಷೇತ್ರದ ನನ್ನ ಅನುಭವವನ್ನು ಬಳಸಿ ಸರಕಾರದ ಮೇಲಿನ ನಿರಾಧಾರ ಆರೋಪದಲ್ಲಿ ಹುರುಳಿಲ್ಲ ಎನ್ನುವುದನ್ನು ತೋರಿಸಿದೆ.

ನೀವು ಸರಕಾರದಲ್ಲಿ ಟ್ರಬಲ್ ಶೂಟರ್ ಆಗಿದ್ದಿರಿ. ಇದು ಹೇಗೆ ಸಾಧ್ಯವಾಯಿತು?

ಕಾವೇರಿ, ಕೃಷ್ಣಾ, ಮುಡಾ, ವಾಲ್ಮೀಕಿ ಸೇರಿದಂತೆ ಅನೇಕ ಕಾನೂನು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬೇಕು. ಕಠಿಣ ಮಾಡಬಾರದು. ಸಮಸ್ಯೆಗಳನ್ನು ಜನರ ಹಿತದೃಷ್ಟಿ ಯಿಂದ ಕಾನೂನಾತ್ಮಕಾಗಿ ನೋಡಬೇಕು. ಇದರಿಂದ ಯಾವುದೇ ಟ್ರಬಲ್ ಶೂಟ್ ಮಾಡಬಹುದು. ಆದ್ದರಿಂದ ಎಲ್ಲವನ್ನೂ ರಾಜಕೀಯವಾಗಿ ಯೋಚಿಸಬಾರದು.

ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನನಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಹಾಗೆಯೇ ನನ್ನ ಕೆಲಸದ ಮೇಲೆ ಅವರಿಗೆ ಪೂರ್ಣ ವಿಶ್ವಾಸವಿದೆ. ಹೀಗಾಗಿ ಆರೋಪಗಳ ವಿರುದ್ಧ ಸರಕಾರವನ್ನು ರಕ್ಷಣೆ ಮಾಡಿ ಪ್ರತಿಪಕ್ಷಗಳಿಗೆ ಪಾಠ ಕಲಿಸಲು ಸಾಧ್ಯವಾಯಿತು. ನಾನು ಮುಖ್ಯಮುಂತ್ರಿಗಳಿಗೆ ಅಷ್ಟೇ ಅಲ್ಲದೆ ರಾಜ್ಯದಿಂದ ಬರುವ ಅನೇಕ ಜನರ ಸಮಸ್ಯೆ ಗಳಿಗೆ ಕಾನೂನು ಸೇವೆ ನೀಡುತ್ತಾ, ಗಂಭೀರ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸಿದ್ದೇನೆ. ಇದನ್ನು ಸರಕಾರ ಮತ್ತು ಪಕ್ಷ ಎರಡೂ ಗುರುತಿಸಿದೆ.

ಭಾಷಣ ಓದುವ ವಿಚಾರದಲ್ಲಿ ರಾಜ್ಯಪಾಲರ ನಡೆ ಬಗ್ಗೆ ಏನಂತೀರಿ?

ರಾಜ್ಯಪಾಲರು ರಾಜಕೀಯ ಅನುಭವ ಇರುವವರು. ಆದರೂ ಸದನದಲ್ಲಿ ಭಾಷಣ ಓದದಿ ರುವುದು ಸರಿಯಲ್ಲ. ಅವರ ಮೇಲೆ ಯಾವೆಲ್ಲಾ ರೀತಿಯ ಒತ್ತಡಗಳಿದ್ದವು ಎನ್ನುವುದು ತಿಳಿಯುತ್ತದೆ. ಆದರೆ ಅವರಿಗೆ ಬಿಲ್‌ಗಳ ಬಗ್ಗೆ ಸರಕಾರದ ಬಗ್ಗೆ ಚರ್ಚಿಸಲು ಹೋದಾಗ ಮುಕ್ತ ಅವಕಾಶ ನೀಡಿದ್ದಾರೆ. ಅವರ ಜತೆ ಯಾವುದೇ ವಿಚಾರಗಳನ್ನು ಚರ್ಚಿಸಿ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿದೆ.

ಮೂರು ವರ್ಷಗಳಲ್ಲಿ ಪ್ರತಿಪಕ್ಷಗಳು ಸೋತಿದ್ದೆಲ್ಲಿ? ನೀವು ಗೆದ್ದಿದ್ದು ಎಲ್ಲಿ?

ಪ್ರತಿಪಕ್ಷಗಳ ಬಗ್ಗೆ ನಮಗೆ ಗೌರವವಿದೆ. ಅದರಲ್ಲೂ ವಾಜಪೇಯಿ ಅವರಂಥ ನಾಯಕರ ಬಗ್ಗೆ ಅಪಾರ ಗೌರವವಿದೆ. ಆದರೆ ಈಗಿನ ಪ್ರತಿಪಕ್ಷಗಳು ನಿಜವಾದ ಇತಿಹಾಸವನ್ನೇ ಬದಲಿಸುತ್ತಿದ್ದಾರೆ. ಇದನ್ನು ಒಪ್ಪುವುದು ಸಾಧ್ಯವೇ? ಆದ್ದರಿಂದ ಪ್ರತಿಪಕ್ಷಗಳ ಆರೋಪ ದಲ್ಲಿ ಗುಣಮಟ್ಟ ಮತ್ತು ವಾಸ್ತವ ಇರಬೇಕು. ಪ್ರತಿಪಕ್ಷಗಳ ಟೀಕೆಗಳಿಗೆ ಸ್ವಾಗತ. ಆದರೆ ಅದು ರಚನಾತ್ಮಕವಾಗಿರಬೇಕು. ಇದಿಲ್ಲದಿರುವುದು ನಮ್ಮ ಸರಕಾರಕ್ಕೆ ಅನುಕೂಲವಾಗಿದೆ.

ಹೊಸ ಶಾಸಕರಿಗೆ ಮಂತ್ರಿ ಸ್ಥಾನಕ್ಕೆ ಆಗ್ರಹಿಸಿ ಹೈಕಮಾಂಡ್‌ಗೆ ಪತ್ರ ಸಲ್ಲಿಕೆ ನಿಜವೇ?

ಕಳೆದ ಬಾರಿ ಅಧಿವೇಶನದಲ್ಲಿ ಮೊದಲ ಬಾರಿ ಆಯ್ಕೆಯಾದ ಎಲ್ಲ ಶಾಸಕರು ಮುಖ್ಯ ಮಂತ್ರಿ ಅವರಿಗೆ ಪತ್ರ ಸಲ್ಲಿಸಿ ಯಾರಾದರೂ ಮೂವರು ಹೊಸ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕೆಂದು ವಿನಂತಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರಕಾರ ದಲ್ಲಿ ಸಂಪುಟ ಪುನಾರಚನೆ ವೇಳೆಯಲ್ಲೇ ಹೊಸ ಶಾಸಕರಾಗಿದ್ದ ಪ್ರಿಯಾಂಕ್ ಖರ್ಗೆ, ಪ್ರಮೋದ್ ಮಧ್ವರಾಜ್ ಅವರಿಗೆ ಅವಕಾಶ ನೀಡಲಾಗಿತ್ತು. ಅದೇ ರೀತಿ ಈ ಬಾರಿಯೂ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿದೆ.

ಕೊಡಗು ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುತ್ತಿವೇಕೆ? ಈಗ ಆಗ್ರಹಿಸುತ್ತಿದ್ದೀರಾ?

ಕೊಡಗು ಈ ಹಿಂದೆ ಪ್ರತ್ಯೇಕ ರಾಜ್ಯವಾಗಿತ್ತು. ಸಿಎಂ ಪೂಣಚ್ಚ ಅವರು ಮುಖ್ಯಮಂತ್ರಿ ಯಾಗಿದ್ದರು ಎನ್ನುವುದನ್ನು ಮರೆಯಬಾರದು. ಅಂತಹ ಜಿಲ್ಲೆಗೆ ಇಂದು ಮಂತ್ರಿ ಇಲ್ಲ. ಇಬ್ಬರು ಶಾಸಕರಿಗೆ ಸೀಮಿತಗೊಳಿಸಲಾಗಿದೆ. ಆದ್ದರಿಂದ ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡಬೇಕು. ಮೂರು ವಿಧಾನಸಭಾ ಕ್ಷೇತ್ರಗಳನ್ನು ನೀಡಬೇಕು. ಆ ಮೂಲಕ ಸಚಿವ ಸ್ಥಾನ ನೀಡಿ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು.

ನಿಮ್ಮ ಕ್ಷೇತ್ರ ವಿರಾಜಪೇಟೆ ಹೇಗಿತ್ತು. ಈಗ ಏನೆಲ್ಲಾ ಬದಲಾಗಿದೆ?

ನಮ್ಮದು ಹೆಚ್ಚು ಮಳೆ ಸುರಿಯುವ ಜಿಲ್ಲೆ. ಇಲ್ಲಿ ರಸ್ತೆಗಳು ಬಹುಬೇಗ ರಿಪೇರಿಗೆ ಬರುತ್ತವೆ. ನಾನು ಬಂದ ಮೇಲೆ 150 ಕೋಟಿ ರು. ವೆಚ್ಚದ ರಸ್ತೆಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ವಿಪರೀತವಾಗಿದ್ದು, 128 ಕೋಟಿ ರು. ವೆಚ್ಚದಲ್ಲಿ ವಿವಿಧ ವಿದ್ಯುತ್ ಕಾಮಗಾರಿಗಳನ್ನು ನಡೆಸಿ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುತ್ತಿದೆ. ಹಾಗೆಯೇ ಕುಡಿಯುವ ನೀರಿನ ಯೋಜನೆಯನ್ನು 60 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಹಾಗೆಯೇ ಪೊನ್ನಂ ಪೇಟೆ ಸೇರಿದಂತೆ ಅನೇಕ ಆಸ್ಪತ್ರೆಗಳನ್ನು ಮೇಲ್ದರ್ಗೇರಿಸಲಾಗಿದೆ.

ನಿಮ್ಮ ಕ್ಷೇತ್ರದಲ್ಲಿ ಜಮ್ಮಾಬಾಣೆ ಸಮಸ್ಯೆ ವಿಪರೀತ. ಇದಕ್ಕೆ ಪರಿಹಾರವೇನು?

ಜಮ್ಮಾಬಾಣೆ ಸಮಸ್ಯೆಗೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ನಿಯಮಗಳನ್ನು ರೂಪಿಸಬೇಕು. ಅದು ಸದ್ಯದಲ್ಲೇ ಆಗುತ್ತದೆ. ಹಾಗೆಯೇ ಅರಣ್ಯ ಭೂಮಿ ಮತ್ತು ಕಂದಾಯ ಜಾಗಗಳಿಗೆ ಸಂಬಂಧಿಸಿದಂತೆ ಸರ್ವೇ ಮೂಲಕ ಸಮಸ್ಯೆ ಬಗೆಹರಿಸ ಲಾಗುತ್ತಿದೆ.

ನಿಮ್ಮ ಕ್ಷೇತ್ರದಲ್ಲಿ ವನ್ಯಜೀವಿ, ಮಾನವ ಸಂಘರ್ಷ ಮುಗಿಯುತ್ತಿಲ್ಲ. ಇದು ಯಾರ ಸಮಸ್ಯೆ?

ಪ್ರಾಣಿಗಳಿದ್ದ ಅರಣ್ಯ ಜಾಗ ಕಡಿಮೆಯಾಗುತ್ತಿರವುದರಿಂದ ಸಂಘರ್ಷ ಹೆಚ್ಚಾಗುತ್ತಿದೆ. ಸಂಘರ್ಷ ತಪ್ಪಿಸಲು ಜನರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಸಮನ್ವಯ ಹಾಗೂ ಸಮಸ್ಯೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ.

ಸದನದಲ್ಲಿ ಹೊಸ ಜವಾಬ್ದಾರಿಯಿಂದ ವಿಜೃಂಭಿಸಿದ್ದಿರಿ, ಏನನಿಸುತ್ತದೆ?

ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವವರ ಬಗ್ಗೆ ಚರ್ಚಿಸಲಾಗಿತ್ತು. ಮುಖ್ಯಮಂತ್ರಿ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಪ್ರಥಮ ಬಾರಿಗೆ ಶಾಸಕನಾಗಿದ್ದ ನನಗೆ ಅವಕಾಶ ನೀಡಿದರು. ಇದರಲ್ಲೂ ಅವರ ನಿರೀಕ್ಷೆಗೆ ತಕ್ಕಂತೆ ಮಂಡಿಸಿ ಯಶಸ್ವಿಯಾಗಿ ಮುಖ್ಯಮಂತ್ರಿ ಹಾಗೂ ಅನೇಕ ಸಚಿವರಿಂದ ಮೆಚ್ಚುಗೆ ಪಡೆದೆ.

ನಿಮ್ಮ ಕ್ಷೇತ್ರದಲ್ಲಿ ಜಮ್ಮಾಬಾಣೆ ಸಮಸ್ಯೆ ವಿಪರೀತ. ಇದಕ್ಕೆ ಪರಿಹಾರವೇನು?

ಜಮ್ಮಾಬಾಣೆ ಸಮಸ್ಯೆಗೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ನಿಯಮಗಳನ್ನು ರೂಪಿಸಬೇಕು. ಅದು ಸದ್ಯದಲ್ಲೇ ಆಗುತ್ತದೆ. ಹಾಗೆಯೇ ಅರಣ್ಯ ಭೂಮಿ ಮತ್ತು ಕಂದಾಯ ಜಾಗಗಳಿಗೆ ಸಂಬಂಧಿಸಿದಂತೆ ಸರ್ವೇ ಮೂಲಕ ಸಮಸ್ಯೆ ಬಗೆಹರಿಸಲಾಗುತ್ತಿದೆ.

ನಿಮ್ಮ ಕ್ಷೇತ್ರದಲ್ಲಿ ವನ್ಯಜೀವಿ, ಮಾನವ ಸಂಘರ್ಷ ಮುಗಿಯುತ್ತಿಲ್ಲ. ಇದು ಯಾರ ಸಮಸ್ಯೆ?

ಪ್ರಾಣಿಗಳಿದ್ದ ಅರಣ್ಯ ಜಾಗ ಕಡಿಮೆಯಾಗುತ್ತಿರವುದರಿಂದ ಸಂಘರ್ಷ ಹೆಚ್ಚಾಗುತ್ತಿದೆ. ಸಂಘರ್ಷ ತಪ್ಪಿಸಲು ಜನರು ಮತ್ತು ಅರಣ್ಯ ಅಧಿಕಾರಿಗಳ ನಡುವೆ ಸಮನ್ವಯ ಹಾಗೂ ಸಮಸ್ಯೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದೆ.