ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ
ಮನೆ-ಮನಸ್ಸಲ್ಲೂ ಬೆಳಕು ಹರಡುವ ಸಂಭ್ರಮ-ಸಡಗರದ ದೀಪಾವಳಿ ದೀಪಾವಳಿಯ ನಿಜವಾದ ಅರ್ಥ ಕೇವಲ ಹೊರಗಿನ ಕತ್ತಲೆಯನ್ನು ದೂರಮಾಡುವುದಲ್ಲ; ಮನಸ್ಸಿನಲ್ಲಿ ರುವ ಅಜ್ಞಾನ, ಅಹಂಕಾರ, ದ್ವೇಷ, ಅಸೂಯೆ ಮತ್ತು ಸ್ವಾರ್ಥದ ಕತ್ತಲೆಯನ್ನು ದೂರ ಮಾಡುವುದಾಗಿದೆ. ರಾಮನ ಕಥೆ ಧರ್ಮನಿಷ್ಠೆಯನ್ನು, ಕೃಷ್ಣನ ಕಥೆ ದುಷ್ಟತನದ ವಿರುದ್ಧದ ವಿಜಯವನ್ನು, ಬಲಿ ಚಕ್ರವರ್ತಿಯ ಕಥೆ ದಾನಶೀಲತೆ ಮತ್ತು ತ್ಯಾಗವನ್ನು ನಮಗೆ ನೆನಪಿಸುತ್ತವೆ.
ಭಾರತೀಯ ಸಂಸ್ಕೃತಿಯ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಇತಿಹಾಸ, ಪೌರಾಣಿಕ ಹಿನ್ನೆಲೆ ಮತ್ತು ಜೀವನ ಸಂದೇಶವಿದೆ. ಅಂತಹ ಹಬ್ಬಗಳಲ್ಲಿ ದೀಪಾ ವಳಿಗೆ ವಿಶಿಷ್ಟ ಸ್ಥಾನವಿದೆ. ಕತ್ತಲೆ ಯನ್ನು ದೂರ ಮಾಡಿ ಬೆಳಕನ್ನು ಹರಡುವ ದೀಪಗಳ ಸಾಲು ಕೇವಲ ಮನೆಯ ಅಂಗಳವನ್ನಷ್ಟೇ ಅಲ್ಲ, ಮನುಷ್ಯನ ಮನ ಸ್ಸನ್ನೂ ಬೆಳಗಿಸಬೇಕೆಂಬ ಉದಾತ್ತ ಆಶಯವನ್ನು ಹೊಂದಿದೆ.
ದೀಪಾವಳಿ ಎಂದರೆ ಸಂಭ್ರಮ, ಸಡಗರ, ಭಕ್ತಿ, ಭರವಸೆ ಮತ್ತು ಮಾನವೀಯ ಮೌಲ್ಯಗಳ ಸಂಗಮ. ನಮ್ಮ ಹಿರಿಯರು ಹೇಳುವಂತೆ, ದೀಪಾವಳಿ ಅಂದರೆ ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವ ಹಬ್ಬ. ಪುರಾಣಗಳಲ್ಲಿಯೂ ಈ ಹಬ್ಬಕ್ಕೆ ವಿಶೇಷವಾದ ಹಿನ್ನೆಲೆಯಿದೆ.
ಪೌರಾಣಿಕ ಹಿನ್ನೆಲೆ ಮತ್ತು ದೀಪಾವಳಿಯ ಕಥೆಗಳು: ದೀಪಾವಳಿಯ ಆಚರಣೆಯ ಹಿಂದೆ ಹಲವು ಪೌರಾಣಿಕ ಕಥೆಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಶ್ರೀರಾಮನು ಅಯೋಧ್ಯೆಗೆ ಮರಳಿದ ಕಥೆ ಪ್ರಮುಖ ವಾದುದು. ರಾಮಾಯಣದ ಪ್ರಕಾರ, ತಂದೆಯ ಮಾತಿನಂತೆ ಹದಿನಾಲ್ಕು ವರ್ಷಗಳ ವನವಾಸಕ್ಕೆ ತೆರಳಿದ್ದ ಶ್ರೀರಾಮನು, ರಾವಣನನ್ನು ಸಂಹರಿಸಿ ಸೀತಾದೇವಿ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳಿದನು. ತಮ್ಮ ಪ್ರೀತಿಯ ರಾಮನ ಆಗಮನದಿಂದ ಸಂತೋಷ ಗೊಂಡ ಅಯೋಧ್ಯೆಯ ಜನರು ಮನೆ-ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ ಸ್ವಾಗತಿಸಿದರು ಎಂಬ ಪ್ರತೀತಿ ಇದೆ.
ಇದನ್ನೂ ಓದಿ: Deepavali Edition released: ವಿಶ್ವವಾಣಿ ದೀಪಾವಳಿ ವಿಶೇಷಾಂಕ ವೀಕ್ಷಿಸಿ ಸಚಿವ ಲಮಾಣಿ ಹರ್ಷ
ಅಂದಿನಿಂದ ದೀಪಗಳ ಬೆಳಕಿನೊಂದಿಗೆ ವಿಜಯೋತ್ಸವದ ಸಂಭ್ರಮವನ್ನು ಆಚರಿಸುವ ಪರಂಪರೆ ಬೆಳೆದು ಬಂದಿದೆ ಎಂದು ಹೇಳಲಾಗುತ್ತದೆ. ಇನ್ನೊಂದು ಪ್ರಸಿದ್ಧ ಕಥೆ ನರಕಾಸುರನ ವಧೆಗೆ ಸಂಬಂಧಿಸಿದೆ. ಪುರಾಣಗಳ ಪ್ರಕಾರ, ನರಕಾಸುರನೆಂಬ ರಾಕ್ಷಸನು ತನ್ನ ಅಹಂಕಾರ ಮತ್ತು ಅಧಿಕಾರದ ಮದದಿಂದ ಜನರಿಗೆ ಹಾಗೂ ದೇವತೆಗಳಿಗೆ ಕಿರುಕುಳ ನೀಡುತ್ತಿದ್ದನು. ಅವನ ಉಪಟಳ ದಿಂದ ಮುಕ್ತಿಗೊಳಿಸಲು ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದನು.
ನರಕಾಸುರನ ಬಂಧನದಲ್ಲಿದ್ದವರನ್ನು ಬಿಡುಗಡೆಗೊಳಿಸಿ ಜನರಿಗೆ ನೆಮ್ಮದಿಯನ್ನು ಮರಳಿಸಿದನು. ಈ ವಿಜಯದ ಸ್ಮರಣಾರ್ಥ ನರಕ ಚತುರ್ದಶಿಯನ್ನು ಆಚರಿಸಲಾಗುತ್ತದೆ ಎಂಬ ನಂಬಿಕೆಯಿದೆ. ಈ ಕಥೆಯು ಅಹಂಕಾರ ಮತ್ತು ಅಧರ್ಮ ಎಷ್ಟೇ ಬಲಿಷ್ಠವಾಗಿದ್ದರೂ ಅಂತಿಮವಾಗಿ ಧರ್ಮವೇ ಜಯ ಗಳಿಸುತ್ತದೆ ಎಂಬ ಸಂದೇಶ ನೀಡುತ್ತದೆ. ಮತ್ತೊಂದು ಪೌರಾಣಿಕ ಕಥೆ ಮಹಾಬಲಿ ಚಕ್ರ ವರ್ತಿಗೆ ಸಂಬಂಧಿಸಿದೆ.
ಮಹಾದಾನಿ ಹಾಗೂ ಪ್ರಜಾಪ್ರೇಮಿ ಎನಿಸಿಕೊಂಡಿದ್ದ ಬಲಿ ಚಕ್ರವರ್ತಿಯ ಬಳಿಗೆ ವಾಮನ ರೂಪದಲ್ಲಿ ಬಂದ ವಿಷ್ಣು 3 ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು. ಬಲಿ ಒಪ್ಪಿದಾಗ ವಾಮನನು ತ್ರಿವಿಕ್ರಮನಾಗಿ ಬೆಳೆದು 2 ಹೆಜ್ಜೆಗಳಲ್ಲಿ ಭೂಮಿಯನ್ನೂ ಆಕಾಶವನ್ನೂ ಅಳೆದನು. ಮೂರನೇ ಹೆಜ್ಜೆಗೆ ತನ್ನ ತಲೆಯನ್ನೇ ಅರ್ಪಿಸಿದ ಬಲಿಯ ಭಕ್ತಿಗೆ ಮೆಚ್ಚಿದ ವಿಷ್ಣುವು ಅವನಿಗೆ ವಿಶೇಷ ಅನುಗ್ರಹ ನೀಡಿದನು ಎಂಬುದು ಪುರಾಣದ ಕಥನ. ಈ ಕಥೆಯ ಸ್ಮರಣೆಯೊಂದಿಗೆ ಬಲಿಪಾಡ್ಯಮಿ ಯನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಈ ದಿನಕ್ಕೆ ವಿಶೇಷ ಸಾಂಸ್ಕೃತಿಕ ಮಹತ್ವವಿದೆ. ಹಾಗೆಯೇ ಸಮುದ್ರಮಥನದ ಸಂದರ್ಭದಲ್ಲಿ ಮಹಾಲಕ್ಷ್ಮಿಯು ಪ್ರತ್ಯಕ್ಷಳಾಗಿ ವಿಷ್ಣುವನ್ನು ವರಿಸಿದಳು ಎಂಬ ಪೌರಾಣಿಕ ನಂಬಿಕೆಯೂ ದೀಪಾವಳಿಯ ಲಕ್ಷ್ಮಿಪೂಜೆಯೊಂದಿಗೆ ಸಂಬಂಧ ಹೊಂದಿದೆ. ಈ ದಿನ ಸಂಪತ್ತು, ಸಮೃದ್ಧಿ ಮತ್ತು ಶುಭದ ಸಂಕೇತವಾದ ಲಕ್ಷ್ಮಿದೇವಿಯನ್ನು ಪೂಜಿಸುವ ಸಂಪ್ರದಾಯವಿದೆ.
ದೀಪಾವಳಿಯ ಆಚರಣೆ ಮತ್ತು ಸಂಪ್ರದಾಯ: ದೀಪಾವಳಿಯು ಧನತ್ರಯೋದಶಿಯಿಂದ ಆರಂಭವಾಗಿ ನರಕ ಚತುರ್ದಶಿ, ಅಮಾವಾಸ್ಯೆಯ ಲಕ್ಷ್ಮಿಪೂಜೆ ಮತ್ತು ಬಲಿಪಾಡ್ಯಮಿಯವರೆಗೆ ವಿವಿಧ ಆಚರಣೆಗಳಿಂದ ಕೂಡಿದೆ. ಮನೆಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ಮಣ್ಣಿನ ಹಣತೆಗಳನ್ನು ಹಚ್ಚಿ, ದೇವರಿಗೆ ಪೂಜೆ ಸಲ್ಲಿಸಿ, ಸಿಹಿತಿಂಡಿಗಳನ್ನು ಹಂಚಿಕೊಂಡು ಬಂಧುಮಿತ್ರ ರೊಂದಿಗೆ ಸಂಭ್ರಮಿಸುವುದು ಈ ಹಬ್ಬದ ವಿಶೇಷತೆ. ದೀಪಗಳ ಸಾಲು ಮನಸ್ಸಿನಲ್ಲಿ ಹೊಸ ಆಶಾವಾದವನ್ನು ಮೂಡಿಸುತ್ತದೆ.
ದೀಪಾವಳಿ ಸಾರುವ ಜೀವನ ಮೌಲ್ಯಗಳು: ದೀಪಾ ವಳಿಯ ನಿಜವಾದ ಅರ್ಥ ಕೇವಲ ಹೊರಗಿನ ಕತ್ತಲೆ ಯನ್ನು ದೂರಮಾಡುವುದಲ್ಲ; ಮನಸ್ಸಿನಲ್ಲಿರುವ ಅeನ, ಅಹಂಕಾರ, ದ್ವೇಷ, ಅಸೂಯೆ ಮತ್ತು ಸ್ವಾರ್ಥದ ಕತ್ತಲೆಯನ್ನು ದೂರ ಮಾಡುವುದಾಗಿದೆ. ರಾಮನ ಕಥೆ ಧರ್ಮನಿಷ್ಠೆಯನ್ನು, ಕೃಷ್ಣನ ಕಥೆ ದುಷ್ಟತನದ ವಿರುದ್ಧದ ವಿಜಯವನ್ನು, ಬಲಿ ಚಕ್ರವರ್ತಿಯ ಕಥೆ ದಾನಶೀಲತೆ ಮತ್ತು ತ್ಯಾಗವನ್ನು ನಮಗೆ ನೆನಪಿಸುತ್ತವೆ. ಇಂದು ಹಬ್ಬಗಳ ಆಚರಣೆಯಲ್ಲಿ ಆಡಂಬರ ಮತ್ತು ದುಂದುವೆಚ್ಚ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ. ಪಟಾಕಿಗಳ ಅತಿಯಾದ ಬಳಕೆಯಿಂದ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ಉಂಟಾಗುತ್ತದೆ. ಇದರಿಂದ ಮಕ್ಕಳು, ವೃದ್ಧರು, ರೋಗಿಗಳು ಹಾಗೂ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮಣ್ಣಿನ ಹಣತೆಗಳನ್ನು ಬೆಳಗಿಸಿ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಹಬ್ಬವನ್ನು ಆಚರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೀಪಾವಳಿ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ಭಾರತೀಯ ಸಂಸ್ಕೃತಿಯ ಆತ್ಮ, ಪುರಾಣಗಳ ಪರಂಪರೆ ಮತ್ತು ಮಾನವೀಯತೆಯ ಪ್ರತೀಕ. ಸಾವಿರಾರು ದೀಪಗಳನ್ನು ಹಚ್ಚುವುದಕ್ಕಿಂತ ಒಬ್ಬರ ಬದುಕಿನಲ್ಲಿ ಭರವಸೆಯ ದೀಪ ಹಚ್ಚುವುದು ಹೆಚ್ಚು ಅರ್ಥಪೂರ್ಣ. ಹಸಿದವರಿಗೆ ಅನ್ನ ನೀಡುವುದು, ಅಸಹಾಯಕರಿಗೆ ನೆರವಾಗುವುದು, ಸಂಬಂಧಗಳಲ್ಲಿನ ಕಹಿಯನ್ನು ಮರೆತು ಪ್ರೀತಿಯಿಂದ ಒಂದಾಗುವುದು ನಿಜವಾದ ದೀಪಾವಳಿಯ ಆಚರಣೆಯಾಗ ಬೇಕು. ದೀಪವು ತನ್ನನ್ನು ತಾನು ಉರಿಸಿಕೊಂಡು ಸುತ್ತಲಿನ ಜಗತ್ತಿಗೆ ಬೆಳಕು ನೀಡುವಂತೆ, ನಾವೂ ನಮ್ಮ ಜ್ಞಾನ, ಪ್ರೀತಿ ಮತ್ತು ಸೇವಾ ಮನೋಭಾವದಿಂದ ಸಮಾಜಕ್ಕೆ ಬೆಳಕಾ ಗೋಣ.
ದ್ವೇಷದ ಕತ್ತಲೆ ದೂರವಾಗಿ, ಮಾನವೀಯತೆಯ ಬೆಳಕು ಪ್ರತಿಯೊಂದು ಹೃದಯ ದಲ್ಲೂ ಬೆಳಗಲಿ. ದೀಪಾವಳಿಯ ಬೆಳಕು ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆ ಯನ್ನು ತರಲಿ. ಬೆಳಗಲಿ ಹಣತೆ, ಬೆಳಗಲಿ ಮನಸ್ಸು; ಹರಡಲಿ ಬೆಳಕು, ಉಳಿಯಲಿ ಮಾನವೀಯತೆ, ಇದೇ ದೀಪಾವಳಿಯ ನಿಜವಾದ ಸಂದೇಶ.