ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Birth centenary of Ramakrishna Hegde: ಹೆಗಡೆಯವರಿಗೇ ಹೆಗಡೆಯವರೇ ಸಾಟಿ

ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವ ಅವಕಾಶವೂ ಅವರಿಗೆ ದೊರೆಯಿತು. ಆದರೆ ವಿದ್ಯಾಭ್ಯಾಸದ ಜತೆಗೆ ದೇಶದ ಸ್ವಾತಂತ್ರ್ಯ ಹೋರಾಟವೂ ಅವರ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿತು. 1942 ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಭಾಗವಹಿಸಿ ಜೈಲುವಾಸ ಅನುಭವಿಸಿದರು. ನಂತರ ಎಸ್.ನಿಜಲಿಂಗಪ್ಪನವರ ಅನುಯಾಯಿ ಯಾಗಿ ಅವರ ಅಪೇಕ್ಷೆಯ ಮೇರೆಗೆ ಕಾಂಗ್ರೆಸ್ ಸೇರಿದರು.

ಬಿ.ಎಲ್.ಶಂಕರ್‌, ಚಿತ್ರಕಲಾ ಪರಿಷತ್‌ ಅಧ್ಯಕ್ಷ

ಅಧಿಕಾರಕ್ಕೆ ಅಂಟಿಕೊಳ್ಳಲಿಲ್ಲ, ರಾಜೀನಾಮೆ ನೀಡಲು ಹಿಂಜರಿಯಲಿಲ್ಲ ಮೌಲ್ಯ, ಉತ್ತರ

Birth centenary of Ramakrishna Hegdeದಾಯಿತ್ವ ಮತ್ತು ನಾಯಕತ್ವದ ಅಪರೂಪದ ಮಾದರಿ.

ಕರ್ನಾಟಕ ಕಂಡ ಅಪರೂಪದ ಬಹುಮುಖ ವ್ಯಕ್ತಿತ್ವದ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗಡೆ ಯವರು ಅಗ್ರಗಣ್ಯರು. ಸ್ವಾತಂತ್ರ್ಯ ಹೋರಾಟಗಾರ, ಸಂಘಟಕ, ಆಡಳಿತಗಾರ, ಚಿಂತಕ, ಸಂಸ್ಕೃತಿ ಪ್ರೇಮಿ, ಪ್ರಜಾ ಪ್ರಭುತ್ವದ ಮೌಲ್ಯಗಳಿಗೆ ಬದ್ಧರಾದ ನಾಯಕ ಹಾಗೂ ಎರಡನೇ ಪೀಳಿಗೆಯ ನಾಯಕರನ್ನು ರೂಪಿಸಿದ ಮಾರ್ಗದರ್ಶಕ - ಹೀಗೆ ಅವರ ವ್ಯಕ್ತಿತ್ವವನ್ನು ಒಂದೇ ಆಯಾಮದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ.

ರಾಮಕೃಷ್ಣ ಹೆಗಡೆಯವರ ಜನ್ಮಶತ ಮಾನೋತ್ಸವದ ಸಂದರ್ಭದಲ್ಲಿ ಅವರ ಬಹುಮುಖ ವ್ಯಕ್ತಿತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮ ಆಯೋಜಿಸ ಲಾಗುತ್ತಿದೆ. ಇಂದಿನ ರಾಜಕಾರಣದಲ್ಲಿ ಜಾತಿ, ಹಣ, ಕುಟುಂಬ ಮತ್ತು ಅಧಿಕಾರದ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೆಗಡೆಯವರ ರಾಜಕೀಯ ಬದುಕನ್ನು ನೆನಪಿಸಿಕೊಳ್ಳು ವುದು ಕೇವಲ ಒಬ್ಬ ಮಾಜಿ ಮುಖ್ಯಮಂತ್ರಿ ಯನ್ನು ಸ್ಮರಿಸುವ ಕಾರ್ಯಕ್ರಮವಲ್ಲ, ಬದಲಾಗಿ ಮೌಲ್ಯಾಧಾರಿತ ಸಾರ್ವಜನಿಕ ಬದುಕು ಹೇಗಿರಬೇಕು ಎಂಬುದನ್ನು ಮತ್ತೊಮ್ಮೆ ಸಮಾಜದ ಮುಂದೆ ತೆರೆದಿಡುವ ಪ್ರಯತ್ನವಾಗಿದೆ.

ರಾಮಕೃಷ್ಣ ಹೆಗಡೆಯವರು ಇತರ ರಾಜಕಾರಣಿಗಳಿಗಿಂತ ಹೇಗೆ ಭಿನ್ನರಾಗಿದ್ದರು ಎಂಬುದನ್ನು ಅವರ ಬಾಲ್ಯ ಮತ್ತು ಯೌವನದ ಬದುಕಿನ ಕಾಣಬಹುದು. ಅವರ ಅಕ್ಕ ಮಹಾದೇವಿ ತಾಯಿ ಹೆಗಡೆ ಅವರು ಹೆಗಡೆಯವ ನ್ನು ಚಿಕ್ಕ ವಯಸ್ಸಿನ ವಿನೋಬಾ ಭಾವೆಯವರ ವಾರ್ಧಾ ಆಶ್ರಮಕ್ಕೆ ಸೇರಿಸಿದರು. ಶ್ರೀಮಂತ ಕುಟುಂಬ ಮತ್ತು ಸಮಾಜದ ಉನ್ನತ ವರ್ಗದ ಹಿನ್ನೆಲೆಯಿಂದ ಬಂದಿದ್ದ ಹೆಗಡೆಯವರಿಗೆ ಆಶ್ರಮದಲ್ಲಿ ವಿನೋಬಾ ಭಾವೆಯವರು ಸಾಮಾನ್ಯವಾಗಿ ನಿರೀಕ್ಷಿಸದ ಜವಾಬ್ದಾರಿಯನ್ನು ನೀಡಿದರು.

ಇದನ್ನೂ ಓದಿ: Birth centenary of Ramakrishna Hegde: ಜನರ ಸಾಮರ್ಥ್ಯ ಗುರುತಿಸುವುದು ಹೆಗಡೆ ಅವರ ವಿಶೇಷ ಗುಣವಾಗಿತ್ತು

ಆಶ್ರಮದಲ್ಲಿದ್ದ ಶೌಚಾಲಯಗಳನ್ನು ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಸ್ವಚ್ಛಗೊಳಿಸುವ ಕೆಲಸವನ್ನು ಅವರಿಗೆ ವಹಿಸಲಾಯಿತು. ಹೆಗಡೆಯವರು ಆ ಕೆಲಸವನ್ನು ಯಾವುದೇ ಹಿಂಜರಿ ಕೆಯಿಲ್ಲದೆ ಶ್ರದ್ಧೆಯಿಂದ ಮಾಡಿದರು. ಒಂದು ಸಂದರ್ಭದಲ್ಲಿ ವಿನೋಬಾ ಭಾವೆಯವರು, ಹುಟ್ಟಿನಿಂದ ಬಂದ ಅಹಂಕಾರ, ಹಣ ಮತ್ತು ಶ್ರೀಮಂತಿಕೆಯಿಂದ ಬಂದ ಅಹಂಕಾರ ಈಗ ತೊಲಗುತ್ತಿದೆಯೇ? ಎಂದು ಕೇಳಿ ದಾಗ, ಹೆಗಡೆಯವರು ತಾವು ಸಾಮಾನ್ಯರಲ್ಲಿ ಸಾಮಾ ನ್ಯರಂತೆ ಬದುಕುವುದನ್ನು ಕಲಿತಿದ್ದೇವೆ ಎಂಬ ಅರ್ಥದಲ್ಲಿ ಉತ್ತರಿಸಿದ್ದರು. ಅದು ಕೇವಲ ಒಂದು ಆಶ್ರಮದ ಕೆಲಸವಾಗಿರಲಿಲ್ಲ. ಸಮಾನತೆ, ಶ್ರಮದ ಗೌರವ ಮತ್ತು ಅಹಂಕಾರರಹಿತ ಬದುಕಿನ ಪಾಠವಾಗಿತ್ತು.

ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವ ಅವಕಾಶವೂ ಅವರಿಗೆ ದೊರೆಯಿತು. ಆದರೆ ವಿದ್ಯಾಭ್ಯಾಸದ ಜತೆಗೆ ದೇಶದ ಸ್ವಾತಂತ್ರ್ಯ ಹೋರಾಟವೂ ಅವರ ಬದುಕಿನ ಮೇಲೆ ಆಳವಾದ ಪ್ರಭಾವ ಬೀರಿತು. 1942 ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಭಾಗವಹಿಸಿ ಜೈಲುವಾಸ ಅನುಭವಿಸಿದರು. ನಂತರ ಎಸ್.ನಿಜಲಿಂಗಪ್ಪನವರ ಅನುಯಾಯಿ ಯಾಗಿ ಅವರ ಅಪೇಕ್ಷೆಯ ಮೇರೆಗೆ ಕಾಂಗ್ರೆಸ್ ಸೇರಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಜವಾಬ್ದಾರಿ ನಿರ್ವಹಿಸಿದರು. ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯ ದರ್ಶಿಯಾಗಿಯೂ ಕೆಲಸ ಮಾಡಿದರು. 1989ರಲ್ಲಿ ಕಾಂಗ್ರೆಸ್ ವಿಭಜನೆಯಾದ ಸಂದರ್ಭದಲ್ಲಿ ನಿಜಲಿಂಗಪ್ಪನವರೊಂದಿಗೆ ಸಂಸ್ಥಾ ಕಾಂಗ್ರೆಸ್ ಸೇರಿ ಅದರ ಸಂಘಟನೆಗೆ ತಮ್ಮದೇ ಆದ ಕೊಡುಗೆ ನೀಡಿದರು.

ದೇಶಕ್ಕಾಗಿ ಕುಟುಂಬವೇ ಆಭರಣ ತ್ಯಜಿಸಿತು: 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ದೇಶ ಸಂಕಷ್ಟದಲ್ಲಿದ್ದಾಗ ಪ್ರಧಾನಿ ಜವಹರಲಾಲ್ ನೆಹರು ಅವರು ಜನರಿಗೆ ತಮ್ಮಲ್ಲಿದ್ದ ಚಿನ್ನವನ್ನು ದೇಶಕ್ಕಾಗಿ ನೀಡುವಂತೆ ಕರೆ ನೀಡಿದರು. ಆ ಸಂದರ್ಭದಲ್ಲಿ ಹೆಗಡೆ ಕುಟುಂಬ ತೋರಿದ ದೇಶಭಕ್ತಿ ಅಪರೂಪದ್ದು. ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆ ಯವರು ತಮ್ಮ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಆಭರಣಗಳ ಜತೆಗೆ ಕೊರಳಿನ ತಾಳಿಯನ್ನೂ ದೇಶಕ್ಕಾಗಿ ಅರ್ಪಿಸಿದರು. ಹೆಗಡೆಯವರೂ ತಮ್ಮಲ್ಲಿದ್ದ ಚಿನ್ನವನ್ನು ದೇಶಕ್ಕೆ ನೀಡಿದರು.

ಇದು ಕೇವಲ ಅಂದಿನ ದೇಶಭಕ್ತಿಯ ಸಂಕೇತವಾಗಿರಲಿಲ್ಲ. ತ್ಯಾಗವನ್ನು ಸಾರ್ವಜನಿಕ ಬದುಕಿನ ಮೌಲ್ಯ ವಾಗಿ ಸ್ವೀಕರಿಸಿದ್ದ ಕುಟುಂಬದ ಮನೋಭಾವದ ಪ್ರತೀಕವಾಗಿತ್ತು. ರಾಮಕೃಷ್ಣ ಹೆಗಡೆ ಯವರ ರಾಜಕೀಯ ಬದುಕಿನ ಅತ್ಯಂತ ವಿಶಿಷ್ಟ ಅಂಶವೆಂದರೆ ಅಧಿಕಾರವನ್ನು ಗುರಿಯನ್ನಾಗಿ ಮಾಡಿಕೊಂಡಿರಲಿಲ್ಲ ಎಂಬುದು.

ಅಧಿಕಾರಕ್ಕೆ ಬಂದವರು ಸಾಮಾನ್ಯವಾಗಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುವ ಸಂದರ್ಭದಲ್ಲಿ ಹೆಗಡೆಯವರು ತಮ್ಮ ನಿಲುವು, ತತ್ವ ಅಥವಾ ಉತ್ತರದಾಯಿತ್ವದ ವಿಚಾರದಲ್ಲಿ ರಾಜೀನಾಮೆ ನೀಡಲು ಹಿಂದೇಟು ಹಾಕಲಿಲ್ಲ. 1962ರಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ಶಾಸನಸಭೆಯಲ್ಲಿ ಬೆಂಬಲ ಸಿಗಲಿಲ್ಲ ಎಂಬ ಕಾರಣಕ್ಕೆ ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

1977ರಲ್ಲಿ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಸೋತ ಸಂದರ್ಭದಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಸ್ಥಾನಕ್ಕೂ ರಾಜೀನಾಮೆ ನೀಡಿದರು. 1984ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಕಡಿಮೆ ಸ್ಥಾನಗಳು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸರಕಾರವನ್ನು ವಿಸರ್ಜಿಸಿದರು. 1986ರಲ್ಲಿ ಬಾಟ್ಲಿಂಗ್ ಹಗರಣದ ಆರೋಪ ಎದುರಾದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 1988ರಲ್ಲಿ ಟೆಲಿಫೋನ್ ಟ್ಯಾಪಿಂಗ್ ಆರೋಪ ಬಂದ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಸ್ಥಾನ ತೊರೆದರು.

1989ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದರು. ಹೀಗಾಗಿ ಹೆಗಡೆಯವರ ರಾಜಕೀಯ ಬದುಕನ್ನು ನೋಡಿದಾಗ ಅಧಿಕಾರವೇ ರಾಜಕಾರಣವಲ್ಲ, ಸಾರ್ವಜನಿಕ ಉತ್ತರದಾಯಿತ್ವವೇ ರಾಜಕಾರಣ ಎಂಬ ಸಂದೇಶ ಸ್ಪಷ್ಟವಾಗುತ್ತದೆ. ಪಂಚಾಯತ್ ರಾಜ್‌ನಿಂದ ವಿಕೇಂದ್ರೀಕರಣ: ರಾಮಕೃಷ್ಣ ಹೆಗಡೆಯವರ ಆಡಳಿತದ ಅತ್ಯಂತ ದೊಡ್ಡ ಕೊಡುಗೆಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಪ್ರಮುಖವಾದದ್ದು.

ಮಹಾತ್ಮ ಗಾಂಧಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆಯನ್ನು ಆಡಳಿತದಲ್ಲಿ ಅಳವಡಿಸುವ ಉದ್ದೇಶದಿಂದ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಿದರು. ಮಂಡಲ್ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ ವ್ಯವಸ್ಥೆಗೆ ದೊಡ್ಡ ಪ್ರಮಾಣದಲ್ಲಿ ಅಧಿಕಾರ ನೀಡಿದರು. ಅಬ್ದುಲ್ ನಜೀರ್ ಸಾಹೇಬ್ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ವ್ಯವಸ್ಥೆ ಜಾರಿಗೆ ಕೇಂದ್ರದ ಒಪ್ಪಿಗೆ ಪಡೆಯಲು ಹೋರಾಟ ನಡೆಸಿದರು. ಅಂತಿಮವಾಗಿ ಅಧಿಕಾರ ವಿಕೇಂದ್ರೀ ಕರಣಕ್ಕೆ ಹೊಸ ದಾರಿ ತೆರೆದಿತು.

ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ ಆಡಳಿತದ ಮೇಲ್ವಿಚಾರಣೆಯಲ್ಲಿ ಮಹತ್ವದ ಅಧಿಕಾರಗಳನ್ನು ನೀಡಲಾಗಿತ್ತು. ಇದರಿಂದ ಅಧಿಕಾರದ ಕೇಂದ್ರ ಬೆಂಗಳೂರು ಮಾತ್ರವಾಗಿರದೆ ಗ್ರಾಮೀಣ ಪ್ರದೇಶ ಗಳಿಗೂ ತಲುಪುವ ವ್ಯವಸ್ಥೆ ರೂಪುಗೊಂಡಿತು. ಇಂದಿಗೂ ಕರ್ನಾಟಕದ ಪಂಚಾಯತ್ ರಾಜ್ ಇತಿಹಾಸದಲ್ಲಿ ಹೆಗಡೆಯವರ ಮಂಡಲ್ ಪಂಚಾಯತ್-ಜಿಲ್ಲಾ ಪರಿಷತ್ ವ್ಯವಸ್ಥೆ ಒಂದು ಪ್ರಮುಖ ಘಟ್ಟವಾಗಿ ನೆನಪಿಸಲಾಗುತ್ತದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸುವ ಪ್ರಯತ್ನ ಮಾಡಿದ ವರಲ್ಲಿ ಹೆಗಡೆಯವರು ಪ್ರಮುಖರು. ಮಹಿಳೆಯರ ರಾಜಕೀಯ ಸಬಲೀಕರಣಕ್ಕೂ ಅವರು ಒತ್ತು ನೀಡಿದ್ದರು. ಅಂತ್ಯೋದಯ ಯೋಜನೆ, ಜನತಾದರ್ಶನದಂತಹ ಕಾರ್ಯಕ್ರಮಗಳ ಮೂಲಕ ಸರಕಾರವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ನಗರಾಭಿವೃದ್ಧಿಯ ವಿಚಾರದಲ್ಲಿಯೂ ಹೆಗಡೆಯವರ ದೂರದೃಷ್ಟಿ ಗಮನಾರ್ಹ. ಬೆಂಗಳೂರು ಅಡ್ಡಾದಿಡ್ಡಿಯಾಗಿ ಬೆಳೆಯಬಾರದು, ಪರಿಸರ ಮಾಲಿನ್ಯ ಹೆಚ್ಚಬಾರದು ಎಂಬ ದೃಷ್ಟಿಯಿಂದ ಹಸಿರು ವಲಯ ಗ್ರೀನ್ ಬೆಲ್ಟ್ ಪರಿಕಲ್ಪನೆ ಜಾರಿಗೆ ತಂದರು.

ಇಂದು ಬೆಂಗಳೂರು ಎದುರಿಸುತ್ತಿರುವ ಪರಿಸರ ಮತ್ತು ನಗರೀಕರಣದ ಸಮಸ್ಯೆಗಳನ್ನು ಗಮನಿಸಿ ದರೆ, ದಶಕಗಳ ಹಿಂದೆಯೇ ಅವರು ವ್ಯಕ್ತಪಡಿಸಿದ್ದ ನಗರ ಯೋಜನೆಯ ಕಾಳಜಿಯ ದೂರದೃಷ್ಟಿ ಎಷ್ಟು ಮಹತ್ವzಗಿತ್ತು ಎಂಬುದು ಅರ್ಥವಾಗುತ್ತದೆ. ಕನ್ನಡ, ಕಲೆ ಮತ್ತು ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕನ್ನಡ ಕಾವಲು ಸಮಿತಿಯನ್ನು ರಚಿಸಿ ಕನ್ನಡದ ಬಳಕೆಗೆ ಉತ್ತೇಜನ ನೀಡಿದರು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ದೊಡ್ಡ ಪಾಂಡಿತ್ಯವಿದ್ದರೂ ಭಾಷಣ ಮತ್ತು ಬರಹಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿದ್ದರು.

1969ರಲ್ಲಿ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಕನ್ನಡ ಚಲನಚಿತ್ರಗಳಿಗೆ ಸಬ್ಸಿಡಿ ನೀಡುವ ಕಾರ್ಯಕ್ರಮ ಜಾರಿಗೆ ತಂದರು. ಮೈಸೂರಿನಲ್ಲಿ ರಂಗಾಯಣ ಸ್ಥಾಪನೆಗೆ ಕಾರಣರಾದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡುವ ಪರಂಪರೆಗೆ ಚಾಲನೆ ನೀಡಿದರು. ಯವನಿಕಾ ಸಭಾಂಗಣ ನಿರ್ಮಾ ಣಕ್ಕೂ ಕೊಡುಗೆ ನೀಡಿದರು. ಕನ್ನಡ ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ದೇಶ-ವಿಶ್ವದ ಮಟ್ಟದಲ್ಲಿ ಪರಿಚಯವಾಗ ಬೇಕು ಎಂಬ ಉದ್ದೇಶದಿಂದ ಮೈಸೂರಿನಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದರು.

ರಾಮಕೃಷ್ಣ ಹೆಗಡೆಯವರ ರಾಜಕೀಯ ಸಾಧನೆಗಳನ್ನು ಅಳೆಯುವಾಗ ಅವರು ಎಷ್ಟು ವರ್ಷ ಶಾಸಕ, ಸಚಿವ ಅಥವಾ ಮುಖ್ಯಮಂತ್ರಿ ಆಗಿದ್ದರು ಎಂಬ ಅಂಕಿ- ಅಂಶಕ್ಕಿಂತ ಅವರು ಎಷ್ಟು ನಾಯಕರನ್ನು ಬೆಳೆಸಿದರು ಎಂಬುದೇ ಮುಖ್ಯ. ತನ್ನಷ್ಟೇ ಪ್ರಭಾವಶಾಲಿ ಅಥವಾ ತನಗಿಂತಲೂ ಪ್ರಭಾವಶಾಲಿಯಾದ ನಾಯಕರನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವವನೇ ನಿಜವಾದ ನಾಯಕ. ಈ ದೃಷ್ಟಿಯಿಂದ ನೋಡಿದರೆ ರಾಮಕೃಷ್ಣ ಹೆಗಡೆಯವರ ಸ್ಥಾನ ವಿಶಿಷ್ಟ.

ನಾನು ವಿದ್ಯಾರ್ಥಿಯಾಗಿದ್ದಾಗಲೇ ಪರಿಚಯ: ಜಯಪ್ರಕಾಶ್ ನಾರಾಯಣರ ನೇತೃತ್ವದ ಚಳವಳಿ ಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ರಾಮಕೃಷ್ಣ ಹೆಗಡೆಯವರ ಪರಿಚಯವಾಯಿತು. ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಹೆಗಡೆಯವರು ಸಂಸ್ಥಾ ಕಾಂಗ್ರೆಸ್ ಮೂಲಕ ವಿರೋಧ ಪಕ್ಷದಲ್ಲಿ ಸಕ್ರಿಯರಾಗಿ ದ್ದರು. ಬೆಂಗಳೂರಿಗೆ ಬಂದ ಸಂದರ್ಭದ ಸಭೆ-ಸಮಾರಂಭಗಳಲ್ಲಿ ಹೆಗಡೆ, ದೇವೇಗೌಡ, ವೀರೇಂದ್ರ ಪಾಟೀಲರು ಸೇರಿದಂತೆ ಅನೇಕ ನಾಯಕರ ಪರಿಚಯವಾಯಿತು.

1977ರ ನಂತರ ಯುವ ಜನತಾದಳದಲ್ಲಿ ಸಕ್ರಿಯರಾದಾಗ ಈ ಸಂಬಂಧ ಮತ್ತಷ್ಟು ಗಾಢ ವಾಯಿತು. 1980ರಲ್ಲಿ ರಾಜ್ಯ ಯುವ ಜನತಾ ಅಧ್ಯಕ್ಷರಾದ ಸಂದರ್ಭದಲ್ಲಿ ಹೆಗಡೆಯವರೊಂದಿಗೆ ಇನ್ನಷ್ಟು ನಿಕಟವಾಗಿ ಕೆಲಸ ಮಾಡುವ ಅವಕಾಶ ದೊರೆಯಿತು. 1983ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿದ್ದ ಜನತಾ ಪಕ್ಷದ ಕಚೇರಿಯಲ್ಲಿ ಹಗಲು-ರಾತ್ರಿ ಹೆಗಡೆಯವರೊಂದಿಗೆ ಕೆಲಸ ಮಾಡಿದ ಅನುಭವ ರಾಜಕೀಯ ಬದುಕಿನ ಮಹತ್ವದ ಹಂತವಾಯಿತು.

1985ರ ವೇಳೆಗೆ ವಿಧಾನಸಭೆಗೆ ಸ್ಪರ್ಧಿಸಲು ಸಾಧ್ಯವಾಗದ ಸಂದರ್ಭದಲ್ಲಿ ಹೆಗಡೆಯವರೇ ನನ್ನನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದರು. ನಂತರ ಒಂದು ವರ್ಷದೊಳಗೆ ಸಚಿವ ಸ್ಥಾನವೂ ದೊರೆಯಿತು. ಸರಕಾರದಲ್ಲಿ ಹಲವು ಜವಾಬ್ದಾರಿಗಳನ್ನು ನೀಡುವುದರ ಜತೆಗೆ ಪ್ರತಿಯೊಂದು ವಿಚಾರದಲ್ಲೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು.

1985ರ ಚುನಾವಣೆಯ ಪ್ರಣಾಳಿಕೆ ರೂಪಿಸುವುದರಿಂದ ಹಿಡಿದು ಹಲವು ಕಾರ್ಯಕ್ರ ಮಗಳನ್ನು ಘೋಷಿಸುವ ಸಂದರ್ಭದಲ್ಲಿಯೂ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರು ಎಂಬುದು ಹೆಗಡೆಯವರ ಯುವ ನಾಯಕರ ಮೇಲಿದ್ದ ನಂಬಿಕೆಯನ್ನು ತೋರಿಸುತ್ತದೆ. ಹೀಗಾಗಿ ಅವರ ಸಂಬಂಧ ಒಂದು ರಾಜಕೀಯ ಪಕ್ಷದ ಗಡಿಯಲ್ಲಿ ಸೀಮಿತವಾಗಿರಲಿಲ್ಲ. ಚಳವಳಿ, ಪಕ್ಷ ಸಂಘಟನೆ, ಸರಕಾರ, ಆಡಳಿತ ಮತ್ತು ಸಾಂಸ್ಕೃತಿಕ ವಲಯ ಹೀಗೆ ಹಲವು ಸ್ತರಗಳಲ್ಲಿ ಅವರ ಒಡನಾಟ ಸಾಗಿತ್ತು. ಅವರು ಬೆಳೆಸಿದ ಅನೇಕ ನಾಯಕರು ಇಂದು ಬೇರೆ ಬೇರೆ ಪಕ್ಷಗಳಲ್ಲಿ ಇರಬಹುದು. ಆದರೆ ಅವರ ರಾಜಕೀಯ ಪಯಣದ ಒಂದು ಹಂತದಲ್ಲಿ ರಾಮಕೃಷ್ಣ ಹೆಗಡೆಯವರ ಸ್ಪರ್ಶ, ಮಾರ್ಗದರ್ಶನ ಅಥವಾ ಅವಕಾಶದ ಗುರುತು ಕಾಣುತ್ತದೆ.

ನಾಯಕತ್ವದ ನಿಜವಾದ ಪರೀಕ್ಷೆ ತನ್ನ ಅಧಿಕಾರ ಎಷ್ಟು ಕಾಲ ಉಳಿಯಿತು ಎಂಬುದಲ್ಲ, ತನ್ನ ನಂತರ ಎಷ್ಟು ನಾಯಕರನ್ನು, ಎಷ್ಟು ಮೌಲ್ಯಗಳನ್ನು ಮತ್ತು ಎಷ್ಟು ಸಂಸ್ಥೆಗಳನ್ನು ಉಳಿಸಿ ಹೋಯಿತು ಎಂಬುದು. ಈ ಅರ್ಥದಲ್ಲಿ ರಾಮಕೃಷ್ಣ ಹೆಗಡೆಯವರ ರಾಜಕೀಯ ಪರಂಪರೆ ಕರ್ನಾಟಕದ ಇತಿಹಾಸದಲ್ಲಿ ವಿಶಿಷ್ಟವಾಗಿದೆ.

ಜಾತಿ, ಹಣ, ಕುಟುಂಬ ಮತ್ತು ಅಧಿಕಾರದ ಲೆಕ್ಕಾಚಾರ ಗಳಾಚೆಗೆ ನಿಂತು, ಮೌಲ್ಯಾಧಾರಿತ ರಾಜಕಾರಣ, ಸಾರ್ವಜನಿಕ ಉತ್ತರದಾಯಿತ್ವ, ಅಧಿಕಾರ ವಿಕೇಂದ್ರೀಕ ರಣ, ಸಾಂಸ್ಕೃತಿಕ ಕಾಳಜಿ ಮತ್ತು ಯುವ ನಾಯಕರ ನಿರ್ಮಾಣದ ಮೂಲಕವೂ ರಾಜಕೀಯ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದನ್ನು ರಾಮಕೃಷ್ಣ ಹೆಗಡೆಯ ವರ ಬದುಕು ಇಂದಿಗೂ ಸಾರುತ್ತದೆ. ಹೀಗಾಗಿ ಕರ್ನಾಟಕ ಕಂಡ ಅಪರೂಪದ ಸಮಗ್ರ ರಾಜಕೀಯ ವ್ಯಕ್ತಿತ್ವವನ್ನು ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ಸ್ವಾತಂತ್ರ್ಯ ಹೋರಾಟಗಾರನಿಂದ ಆಡಳಿತಗಾರನ ತನಕ, ರಾಜಕಾರಣಿಯಿಂದ ಸಾಂಸ್ಕೃತಿಕ ನಾಯಕನ ತನಕ, ಅಧಿಕಾರಸ್ಥನಿಂದ ಮಾರ್ಗದರ್ಶಕನ ತನಕ ರಾಮಕೃಷ್ಣ ಹೆಗಡೆಯವರಿಗೇ ರಾಮಕೃಷ್ಣ ಹೆಗಡೆಯವರೇ ಸಾಟಿ.