ಅಭಿವೃದ್ದಿ ಪಥ
ಪಿಯೂಷ್ ಗೋಯೆಲ್
ಹೊಸ ವರ್ಷ, ಹೊಸ ವೇಗ: ಭಾರತದ ಮುಂದಿನ ಜಿಗಿತಕೆ ಶಕ್ತಿ ತುಂಬಿದ ಪ್ರಧಾನಿ ನರೇಂದ್ರ ಮೋದಿ 2025ರ ಸುಧಾರಣೆಗಳು
ಹೊಸ ವರ್ಷವು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ಹೊಸ ವಿಶ್ವಾಸ ಮತ್ತು ಆಶಾವಾದವನ್ನು ಹೊತ್ತು ತಂದಿದೆ. 2025ರಲ್ಲಿ ಕೈಗೊಂಡ ಹಲವು ನಿರ್ಣಾಯಕ ಕ್ರಮಗಳು ವ್ಯಾಪಾರ ಮತ್ತು ಹೂಡಿಕೆಯನ್ನು ವೇಗಗೊಳಿಸಲು, ಸಣ್ಣ ಉದ್ಯಮಗಳು ಮತ್ತು ನವೋದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ಪ್ರತಿ ಯೊಬ್ಬ ನಾಗರಿಕರ ಜೀವನವನ್ನು ಸುಗಮಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಧ್ಯೇಯವನ್ನು ಮತ್ತಷ್ಟು ಹತ್ತಿರವಾಗಿಸಲು ವೇದಿಕೆ ಸಜ್ಜುಗೊಳಿಸಿವೆ.
ನವೋದ್ಯಮಗಳಿಗೆ ಉತ್ತೇಜನ ಮೋದಿ ಸರಕಾರದ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ. ಇಂದು, ಭಾರತವು ಸರಕಾರ ದಿಂದ ಮಾನ್ಯತೆ ಪಡೆದ 2 ಲಕ್ಷಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದಿದೆ. ಸ್ಟಾರ್ಟ್ ಅಪ್ ಇಂಡಿಯಾದ 10ನೇ ವಾರ್ಷಿಕೋತ್ಸವದಂದು ಪ್ರಧಾನಮಂತ್ರಿ ಅವರು ಹೇಳಿದಂತೆ, ನಮ್ಮ ನವೋದ್ಯಮಗಳು ವಿವಿಧ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಿವೆ.
ಜತೆಗೆ ಭಾರತೀಯ ಆರ್ಥಿಕತೆಯು ಚೇತರಿಸಿಕೊಳ್ಳಲು ಮತ್ತು ಸ್ವಾವಲಂಬಿಯಾಗಲು ಸಹಾಯ ಮಾಡುತ್ತಿವೆ. ನವೋದ್ಯಮಗಳಿಗೆ ಬೆಂಬಲವು, ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಆ ಮೂಲಕ ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ಪ್ರತಿಯೊಬ್ಬ ನಾಗರಿಕನ, ವಿಶೇಷವಾಗಿ ಬಡವರ ಜೀವನವನ್ನು ಸುಧಾರಿಸಲು ಮೋದಿ ಸರಕಾರ ಕೈಗೊಂಡ ವ್ಯಾಪಕ ಕಾರ್ಯತಂತ್ರದ ಒಂದು ಭಾಗವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ 2014 ರಿಂದ ಭಾರತವು ಸಾಗುತ್ತಿರುವ ಪರಿವರ್ತನಾತ್ಮಕ ಪ್ರಯಾಣದಲ್ಲಿ 2025 ಒಂದು ಹೆಗ್ಗುರುತಿನ ವರ್ಷವಾಗಿದೆ. ದಿಟ್ಟ ನಿರ್ಧಾರಗಳು ಮತ್ತು ಕ್ರಾಂತಿಕಾರಿ ಸುಧಾರಣೆಗಳ ಮೂಲಕ, ನಮ್ಮ ಸರಕಾರವು ವ್ಯಾಪಾರ ವಾತಾವರಣವನ್ನು ಮರು ರೂಪಿಸಿದೆ.
ಇದನ್ನೂ ಓದಿ: Piyush Goyal Column: ಉದ್ಯೋಗ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿರುವ ವ್ಯಾಪಾರ ಒಪ್ಪಂದ
ಪ್ರತಿಯೊಂದು ನೀತಿಯು ನಾಗರಿಕರ ಜೀವನವನ್ನು ಸುಧಾರಿಸಲು ಕೊಡುಗೆ ನೀಡುವುದನ್ನು ಖಚಿತಪಡಿಸಿದೆ, ವಿಶೇಷವಾಗಿ ಕಡುಬಡವರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ. ಭಾರತವು ಈಗ ಜಾಗತಿಕ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ವಿಶ್ವಾಸಾರ್ಹ ಮತ್ತು ನಂಬಿಕಸ್ಥ ಪಾಲುದಾರ ಎಂದು ಭಾರತ ಗುರುತಿಸಲ್ಪಟ್ಟಿದೆ.
ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಭಾರತದ ರಫ್ತು ಬೆಳವಣಿಗೆಯ ವೇಗವನ್ನು ಕಾಯ್ದು ಕೊಂಡಿದೆ. 2024-25ರಲ್ಲಿ ಭಾರತದ ಒಟ್ಟು ರಫ್ತು ಶೇಕಡಾ 6ರಷ್ಟು ಏರಿಕೆಯಾಗಿ ದಾಖಲೆಯ 825.25 ಶತ ಕೋಟಿ ಡಾಲರ್‌ಗೆ ತಲುಪಿದೆ. ರಫ್ತುದಾರರನ್ನು ಮತ್ತಷ್ಟು ಬೆಂಬಲಿಸಲು, ಸರಕಾರವು 25,060 ಕೋಟಿ ರು.ಗಳ ರಫ್ತು ಉತ್ತೇಜನ ಯೋಜನೆಯನ್ನು ಘೋಷಿಸಿದೆ.
ಜನ ವಿಶ್ವಾಸ ಮತ್ತು ಸುಗಮ ವ್ಯಾಪಾರ: ರದ್ದತಿ ಮತ್ತು ತಿದ್ದುಪಡಿ ಕಾಯ್ದೆ-2025 ಜಾರಿ ಮೂಲಕ ಬಳಕೆಯಲ್ಲಿಲ್ಲದ 71 ಕಾನೂನುಗಳನ್ನು ತೆಗೆದುಹಾಕಲಾಗಿದೆ. ಇವುಗಳಲ್ಲಿ ಕೆಲವು 1886ರಷ್ಟು ಹಿಂದಿನವು ಎಂಬುದು ಗಮನಾರ್ಹ. ‘ಜನ ವಿಶ್ವಾಸ’ ಉಪಕ್ರಮದ ಅಡಿಯಲ್ಲಿ, ಮೋದಿ ಸರಕಾರವು ಹಲವಾರು ಸಣ್ಣ ಅಪರಾಧಗಳಿಗೆ ಕ್ರಿಮಿನಲ್ ನಿಬಂಧನೆಗಳನ್ನು ರದ್ದುಪಡಿಸಿದೆ. ಈ ಸುಧಾರಣೆಗಳು ಆಡಳಿತವನ್ನು ಹೆಚ್ಚಿಸುತ್ತವೆ, ವ್ಯವಹಾರವನ್ನು ಸುಲಭಗೊಳಿಸುತ್ತವೆ ಮತ್ತು ಭಾರತದ ಕಾನೂನು ನೀತಿಗಳು ಆಧುನಿಕ ಆರ್ಥಿಕತೆ ಯೊಂದಿಗೆ ವೇಗ ಕಾಯ್ದುಕೊಳ್ಳುವುದನ್ನು ಖಚಿತಪಡಿಸುತ್ತವೆ. ಈ ವರ್ಷವೂ ನೂರಾರು ನಿಬಂಧನೆಗಳನ್ನು ತೊಡೆದು ಹಾಕುವ ಮೂಲಕ ಈ ಸುಧಾರಣೆ ಪ್ರಕ್ರಿಯೆ ಯನ್ನು ಮುಂದುವರಿಸಲಾಗುವುದು.
ಕಳೆದ ವರ್ಷದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹಡಗು ಮತ್ತು ಬಂದರುಗಳಿಗೆ ಸಂಬಂಧಿ ಸಿದ ಐದು ಮಹತ್ವದ ವಿಧೇಯಕಗಳನ್ನು ಅಂಗೀಕರಿಸಲಾಯಿತು. ಈ ಕಾಯ್ದೆಗಳು ದಾಖಲಾತಿ ಗಳನ್ನು ಸರಳ ಗೊಳಿಸುತ್ತವೆ, ವಿವಾದ ಪರಿಹಾರವನ್ನು ಸರಾಗಗೊಳಿಸುತ್ತವೆ ಮತ್ತು ಸರಕು-ಸಾಗಣೆ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ.
ವಾಣಿಜ್ಯ ರಂಗದಲ್ಲಿ, ಪಾರದರ್ಶಕ, ಅನುಕೂಲಕರ ನೀತಿಗಳ ಮೂಲಕ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯವು ರಫ್ತುದಾರರನ್ನು ಸಕ್ರಿಯವಾಗಿ ಬೆಂಬಲಿಸಿದೆ. ಆ ಮೂಲಕ ವ್ಯವಹಾರವನ್ನು ಸುಲಭಗೊಳಿಸಿದೆ. ಈ ಉಪಕ್ರಮಗಳು ನಮ್ಮ ವ್ಯಾಪಾರಿಗಳು, ಸಣ್ಣ ಉದ್ಯಮಿಗಳು ಮತ್ತು ನವೋ ದ್ಯಮಿಗಳ ಉದ್ಯಮಶೀಲತೆಯ ಉತ್ಸಾಹಕ್ಕೆ ಹೊಸ ವೇಗ ನೀಡಿವೆ. ಅವರು ಈಗ ಬೇಸರದ ಕಡ್ಡಾಯ ಅನುಸರಣೆ ಬಗ್ಗೆ ಚಿಂತಿಸುವ ಬದಲು; ಮತ್ತು ಕೆಲವು ಸಣ್ಣ ಉಲ್ಲಂಘನೆಗಳಿಗೆ ಜೈಲು ಶಿಕ್ಷೆಯ ಭಯದ ಬಗ್ಗೆ ಚಿಂತಿಸುವ ಬದಲು ತಮ್ಮ ಕೆಲಸದತ್ತ ಗಮನ ಹರಿಸಬಹುದಾಗಿದೆ.
ಮುಕ್ತ ವ್ಯಾಪಾರ ಒಪ್ಪಂದಗಳು(ಎಫ್ಟಿಎ) ಮತ್ತು ಲೋಕಲ್ ಫಾರ್ ಗ್ಲೋಬಲ್: ಸ್ಥಳೀಯ ಉದ್ಯಮಿಗಳನ್ನು, ವಿಶೇಷವಾಗಿ ಸಣ್ಣ ಉದ್ಯಮಗಳು, ನವೋದ್ಯಮಗಳು, ರೈತರು ಮತ್ತು ಕುಶಲ ಕರ್ಮಿಗಳನ್ನು ಬೆಂಬಲಿಸುವುದು; ಜತೆಗೆ ಜಾಗತಿಕವಾಗಿ ಯಶಸ್ವಿಯಾಗಲು ಅವರನ್ನು ಸಬಲೀ ಕರಣಗೊಳಿಸುವುದು ಸರಕಾರದ ವ್ಯಾಪಾರ ಮತ್ತು ಹೂಡಿಕೆ ಕಾರ್ಯತಂತ್ರದ ಮಾರ್ಗದರ್ಶಿ ತತ್ವ ವಾಗಿದೆ. ಈ ದೃಷ್ಟಿಕೋನದ ಅನ್ವೇಷಣೆಯಲ್ಲಿ, ಭಾರತವು ಕಳೆದ ವರ್ಷ ಮೂರು ಮುಕ್ತ ವ್ಯಾಪಾರ ಒಪ್ಪಂದಗಳನ್ನು (ಎಫ್ʼಟಿಎ) ಅಂತಿಮಗೊಳಿಸಿದೆ.
ಇವು ಬ್ರಿಟನ್, ನ್ಯೂಜಿಲೆಂಡ್ ಮತ್ತು ಒಮಾನ್‌ನ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಿಗೆ ಭಾರತೀಯ ಸರಕುಗಳಿಗೆ ಸುಂಕ ಮುಕ್ತ ಪ್ರವೇಶವನ್ನು ಒದಗಿಸುತ್ತವೆ.
ಮುಕ್ತ ವ್ಯಾಪಾರ ಒಪ್ಪಂದಗಳು ಸಹ ಸುಧಾರಣಾ ಪ್ರಕ್ರಿಯೆಯ ಭಾಗವಾಗಿವೆ. ಇದಕ್ಕೂ ಮುನ್ನ ಯುಪಿಎ ಸರಕಾರವು ರಾಷ್ಟ್ರೀಯ ಹಿತಾಸಕ್ತಿಯನ್ನು ನಿರ್ಲಕ್ಷಿಸಿ, ಜಾಗತಿಕವಾಗಿ ಭಾರತದೊಂದಿಗೆ ಸ್ಪರ್ಧಿಸುವ ದೇಶಗಳೊಂದಿಗೆ ಅಜಾಗರೂಕತೆಯಿಂದ ಒಪ್ಪಂದಗಳಿಗೆ ಸಹಿ ಹಾಕಿತ್ತು.
ಮೋದಿ ಸರಕಾ ರವು ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಆದ್ಯತೆ ನೀಡಿರುವುದು ಸರಿಯಷ್ಟೆ. ಇದು ಪರಸ್ಪರ ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಈ ಮುಕ್ತ ವ್ಯಾಪಾರ ಒಪ್ಪಂದಗಳು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುತ್ತವೆ, ಹೂಡಿಕೆಯನ್ನು ಉತ್ತೇಜಿಸುತ್ತವೆ ಮತ್ತು ಭಾರತದಾದ್ಯಂತ ಸಣ್ಣ ಉದ್ಯಮಗಳು, ವಿದ್ಯಾರ್ಥಿಗಳು, ಮಹಿಳೆಯರು, ರೈತರು ಮತ್ತು ಯುವಕರಿಗೆ ಕ್ರಾಂತಿಕಾರಿ ರೀತಿಯಲ್ಲಿ ಅವಕಾಶಗಳನ್ನು ತೆರೆಯುತ್ತವೆ.
ಪ್ರತಿ ಒಪ್ಪಂದವನ್ನು ಅಂತಿಮಗೊಳಿಸುವ ಮುನ್ನ ವ್ಯಾಪಕವಾದ ಮಧ್ಯಸ್ಥಗಾರರ ಸಮಾಲೋಚನೆ ಗಳನ್ನು ನಡೆಸಲಾಗಿದೆ. ಆ ಮೂಲಕ ಸಮತೋಲಿತ ಫಲಿತಾಂಶಗಳು ಹಾಗೂ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ನೈಜವಾದ ಪರಸ್ಪರ ಅನುಕೂಲಕರ (ವಿನ್-ವಿನ್) ಒಡನಾಟವನ್ನು ಖಾತ್ರಿಪಡಿಸಲಾಗಿದೆ.
ಭಾರತದ ಹಿತಾಸಕ್ತಿಗಳ ರಕ್ಷಣೆ: ಈ ಒಪ್ಪಂದಗಳ ಜತೆಗೆ, 2024ರಲ್ಲಿ ಸಹಿ ಹಾಕಲಾದ ‘ಯುರೋಪಿ ಯನ್ ಮುಕ್ತ ವ್ಯಾಪಾರ ಸಂಘ’ದೊಂದಿಗಿನ (ಇಎಫ್ ಟಿಎ) ಮುಕ್ತ ವ್ಯಾಪಾರ ಒಪ್ಪಂದವನ್ನು ಕಾರ್ಯಗತಗೊಳಿಸಲಾಗಿದೆ. ಸ್ವಿಟ್ಜರ್ಲೆಂಡ್, ನಾರ್ವೆ, ಐಸ್ಲ್ಯಾಂಡ್ ಮತ್ತು ಲಿಚ್ಟೆನ್ ಸ್ಪೈನ್ ದೇಶಗಳನ್ನು ಇದು ಒಳಗೊಂಡಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಪ್ರಮುಖ ಜಾಗತಿಕ ಹೈನು ರಫ್ತುದಾರರೊಂದಿಗಿನ ಒಪ್ಪಂದಗಳು ಸೇರಿದಂತೆ ಎಲ್ಲ ಮುಕ್ತ ವ್ಯಾಪಾರ ಒಪ್ಪಂದ ಗಳಲ್ಲಿ ಭಾರತದ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳ ರಕ್ಷಣೆಯನ್ನು ಸಾಮಾನ್ಯ ಆದ್ಯತೆಯ ವಿಷಯ ವನ್ನಾಗಿ ಪರಿಗಣಿಸಲಾಗಿದೆ.
ಈ ವ್ಯಾಪಾರ ಒಪ್ಪಂದಗಳ ಮೂಲಕ, ಭಾರತೀಯ ರಫ್ತುಗಳು ತಕ್ಷಣದ ಅಥವಾ ತ್ವರಿತ ಸುಂಕ ನಿರ್ಮೂಲನೆಯಿಂದ ಪ್ರಯೋಜನ ಪಡೆಯುತ್ತವೆ. ಇದೇ ವೇಳೆ, ಭಾರತವು ತನ್ನ ಮಾರುಕಟ್ಟೆ ಯನ್ನು ಇತರೆ ದೇಶಗಳಿಗೆ ಮುಕ್ತಗೊಳಿಸುವ ವಿಚಾರದಲ್ಲಿ ಬಹಳಷ್ಟು ಲೆಕ್ಕಾಚಾರದ ಮತ್ತು ನಿಧಾನ ಗತಿಯ ಪ್ರಕ್ರಿಯೆಯನ್ನು ಅನುಸರಿಸಲಿದೆ.
ನ್ಯೂಜಿಲೆಂಡ್ ಮುಂದಿನ 15 ವರ್ಷಗಳಲ್ಲಿ 20 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆಗೆ ಬದ್ಧತೆ ವ್ಯಕ್ತಪಡಿಸಿದೆ. ಇದು ‘ಇಎಫ್ ಟಿಎ’ ದೇಶಗಳೊಂದಿಗೆ ಭಾರತದ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಆದ್ಯತೆ ಪಡೆದ ನವೀನ ಹೂಡಿಕೆ -ಸಂಬಂಧಿತ ನಿಬಂಧನೆಗಳನ್ನು ಸೂಚಿಸುತ್ತದೆ.
ಈ ಹೂಡಿಕೆಯು ಕೃಷಿ, ಹೈನುಗಾರಿಕೆ, ಎಂಎಸ್‌ಎಂಇಗಳು, ಶಿಕ್ಷಣ, ಕ್ರೀಡೆ ಮತ್ತು ಯುವ ಅಭಿವೃದ್ಧಿ ಯನ್ನು ಬೆಂಬಲಿಸುತ್ತದೆ. ಆ ಮೂಲಕ ವಿಸ್ತೃತ ಮತ್ತು ಸಮಗ್ರ ಬೆಳವಣಿಗೆಯನ್ನು ಖಾತ್ರಿ ಪಡಿಸುತ್ತದೆ.
ಭಾರತ: ಜಾಗತಿಕ ಹೂಡಿಕೆಯ ತಾಣ: ಕಳೆದ 11 ಹಣಕಾಸು ವರ್ಷಗಳಲ್ಲಿ (2024-25 ರವರೆಗೆ), ಭಾರತವು 748 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ, ಇದು ಅದಕ್ಕೂ ಹಿಂದಿನ 11 ವರ್ಷಗಳಲ್ಲಿ ಸ್ವೀಕರಿಸಿದ 308 ಶತಕೋಟಿ ಡಾಲರ್‌ಗಿಂತ ಎರಡೂವರೆ ಪಟ್ಟು ಅಧಿಕ. ಮೋದಿ ಸರಕಾರವು ಅಧಿಕಾರಕ್ಕೆ ಬಂದಾಗ ವಿಶ್ವದ ದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದೆಂಬ ಹಣೆಪಟ್ಟಿ ಹೊತ್ತಿದ್ದ ಮತ್ತು ಅತ್ಯಂತ ಅವ್ಯವಸ್ಥಿತ ಆರ್ಥಿಕತೆಯನ್ನು ಬಳುವಳಿಯಾಗಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ದೇಶದ ಆರ್ಥಿಕತೆಯ ಸುಸ್ಥಿತಿಯು ಗಮನಾರ್ಹವಾಗಿದೆ.
ಯುಪಿಎ ಸರಕಾರದ ಅವಧಿಯಲ್ಲಿ, ಪುನರಾವರ್ತಿತ ಆರ್ಥಿಕ ಹಿನ್ನಡೆಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳಿಂದ ದೂರವಿರುವಂತೆ ಮಾಡಿದ್ದವು. ನಿರ್ದಿಷ್ಟ ಗುರಿಯತ್ತ ಗಮನ ಕೇಂದ್ರೀಕರಿಸಿದ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಮೂಲಕ; ದಿಟ್ಟ ಸುಧಾರಣೆಗಳು ಹಾಗೂ ಹಣಕಾಸಿನ ಶಿಸ್ತಿನ ಮೂಲಕ ಪ್ರಧಾನಮಂತ್ರಿ ಮೋದಿ ಅವರು ಭಾರತೀಯ ಆರ್ಥಿಕತೆಯಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸಿದರು. ವ್ಯಾಪಾರ ಮತ್ತು ಹೂಡಿಕೆಗೆ ಆದ್ಯತೆಯ ತಾಣವಾಗಿ ಭಾರತದ ಸ್ಥಾನಮಾನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು.
ಬಡವರಿಗೆ ಸಹಾಯ ಮಾಡಲು ಸುಧಾರಣೆಗಳು: ಭಾರತವು ಉನ್ನತ ಸಾಧನೆಗಳ ಮೂಲಕ 2025ಕ್ಕೆ ವಿದಾಯ ಹೇಳಿತು. ಜಪಾನ್ ಅನ್ನು ಹಿಂದಿಕ್ಕುವ ಮೂಲಕ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಈ ವಿಚಾರದಲ್ಲಿ ಜರ್ಮನಿಯನ್ನು ಮೀರಿಸುವ ಹಾದಿ ಯಲ್ಲಿದೆ. ಮುಖ್ಯವಾಗಿ, ಯುಪಿಎ ಅವಧಿಗಿಂತಲೂ ಭಿನ್ನವಾಗಿ, ಆರ್ಥಿಕ ಲಾಭಗಳು ಬಡವರು ಮತ್ತು ವಿಶೇಷವಾಗಿ ಗ್ರಾಮೀಣ ಭಾರತವನ್ನು ತಲುಪಿವೆ.
ಕಾರ್ಮಿಕರಿಗೆ ಪ್ರಯೋಜನಗಳನ್ನು ಹೆಚ್ಚಿಸಲು, ಮೋದಿ ಸರಕಾರವು ಐತಿಹಾಸಿಕ ಕಾರ್ಮಿಕ ಸುಧಾರಣೆಗಳನ್ನು ಜಾರಿಗೊಳಿಸಿದೆ. 29 ಛಿದ್ರಗೊಂಡ ಕಾನೂನುಗಳನ್ನು ನಾಲ್ಕು ಆಧುನಿಕ ಸಂಹಿತೆಗಳಾಗಿ ವಿಲೀನಗೊಳಿಸಲಾಗಿದೆ. ನ್ಯಾಯಯುತ ವೇತನ, ಸಮಯೋಚಿತ ಪಾವತಿಗಳು, ಸಾಮಾಜಿಕ ಭದ್ರತೆ ಮತ್ತು ಸುರಕ್ಷತೆಯತ್ತ ಗಮನ ಹರಿಸಲಾಗಿದೆ. ಇವು ದುಡಿಯುವ ವರ್ಗದಲ್ಲಿ ಹೆಚ್ಚಿನ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಲಿವೆ.
ಜನರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಎರಡಕ್ಕೆ ಇಳಿಸಿದ ಹೊಸ ತಲೆಮಾರಿನ ಜಿಎಸ್‌ಟಿ ಸುಧಾರಣೆಗಳಿಂದ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಪ್ರಯೋಜನ ಪಡೆದಿದ್ದಾರೆ. ಇದು ಮನೆಗಳು, ಎಂಎಸ್‌ಎಂಇಗಳು, ರೈತರು ಮತ್ತು ಅಧಿಕ ಶ್ರಮ ಆಧರಿತ ವಲಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಿದೆ.
ಮುಂದಿನ ಹಾದಿ: 2025ನೇ ಸಾಲಿನ ವರ್ಷವು ದೇಶೀಯ ಉದ್ಯಮ ಮತ್ತು ಜಾಗತಿಕ ಬೇಡಿಕೆಯ ನಡುವೆ, ನೀತಿ ಸುಧಾರಣೆ ಮತ್ತು ಡಿಜಿಟಲ್ ಸಬಲೀಕರಣದ ನಡುವೆ ಹಾಗೂ ಉದಯೋನ್ಮುಖ ಸಣ್ಣ ಉದ್ಯಮಗಳು ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ನಡುವೆ ಸಂಪರ್ಕ ಸೇತು ನಿರ್ಮಿಸಿದ ವರ್ಷವಾಗಿತ್ತು. ಮುಂದೆ ಇನ್ನೂ ಮತ್ತಷ್ಟು ಶುಭಸುದ್ದಿ ಕಾದಿದೆ. ನೀತಿ ಆಯೋಗದ ಸದಸ್ಯರಾದ ರಾಜೀವ್ ಗೌಬಾ ನೇತೃತ್ವದ ಸಮಿತಿಯು ವ್ಯಾಪಕ ಶ್ರೇಣಿಯ ಸುಧಾರಣೆಗಳನ್ನು ಅಧ್ಯ ಯನ ಮಾಡುತ್ತಿದೆ. ಇದು ಪ್ರಧಾನಮಂತ್ರಿ ಮೋದಿಯವರ ‘ಸುಧಾರಣಾ ಎಕ್ಸ್‌ಪ್ರೆಸ್ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತವು ಸ್ಪರ್ಧಾತ್ಮಕ ವ್ಯಾಪಾರ, ನವೀನ ಉದ್ಯಮ ಹಾಗೂ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಹೊಂದಿರುವ ಸದೃಢ ಆರ್ಥಿಕತೆಯ ಮೂಲಕ ‘ವಿಕಸಿತ ಭಾರತ’ವನ್ನು ನಿರ್ಮಿಸುವ ಸ್ಪಷ್ಟ ದೃಷ್ಟಿಯೊಂದಿಗೆ ಮುಂದೆ ಸಾಗುತ್ತಿದೆ.
ಭಾರತದ ರಫ್ತುದಾರರು, ತಯಾರಕರು, ರೈತರು ಮತ್ತು ಸೇವಾ ಪೂರೈಕೆದಾರರ ಯಶಸ್ಸು ಎಂದರೆ ಅದು ರಾಷ್ಟ್ರದ ಯಶಸ್ಸು. ಭಾರತವು ಕೇವಲ ಭವಿಷ್ಯಕ್ಕಾಗಿ ತಯಾರಿ ನಡೆಸುತ್ತಿಲ್ಲ. ಬದಲಿಗೆ, ಅದು ಭವಿಷ್ಯವನ್ನು ರೂಪಿಸುತ್ತಿದೆ. ದೃಢವಾದ ನಾಯಕತ್ವ, ದಿಟ್ಟ ಸುಧಾರಣೆಗಳು ಮತ್ತು ಸ್ಪಷ್ಟ ಜಾಗತಿಕ ಕಾರ್ಯತಂತ್ರದೊಂದಿಗೆ, ದೇಶದ ಮಹತ್ವಾಕಾಂಕ್ಷೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ.
ಭಾರತವು ವಿಶ್ವದೊಂದಿಗೆ ವ್ಯಾಪಾರ, ನಿರ್ಮಾಣ, ನಾವೀನ್ಯತೆ ಮತ್ತು ಸಂಪರ್ಕವನ್ನು ಸಾಧಿಸುತ್ತಿರು ವಾಗ, ಅದನ್ನು ತನ್ನದೇ ಆದ ಮೌಲ್ಯಗಳ ಮೇಲೆ ಒಂದು ಬಲಿಷ್ಠ, ಸ್ವಾವಲಂಬಿ ಮತ್ತು ವಿಶ್ವಾ ಸಾರ್ಹ ರಾಷ್ಟ್ರವಾಗಿ ಮಾಡುತ್ತಿದೆ.
(ಲೇಖಕರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು)