ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghava Sharma Nidle Column: ರಾಜಕೀಯ ಶುದ್ಧೀಕರಣವೋ, ವಿಪಕ್ಷಗಳ ವಿರುದ್ಧ ದಂಡಾಸ್ತ್ರವೋ ?

ತಮಿಳುನಾಡಿನ ಡಿಎಂಕೆ ಸರಕಾರದಲ್ಲಿ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದರೂ, ಅವರನ್ನು ಸಚಿವ ಸ್ಥಾನದಿಂದ ಸಿಎಂ ಎಂ.ಕೆ. ಸ್ಟ್ಯಾಲಿನ್ ತೆಗೆದುಹಾಕಿರಲಿಲ್ಲ. ಹೀಗಾಗಿ, ಇದನ್ನು ತಡೆಯಲು ಹೊಸ ಕಾನೂನು ತರುವ ಮೂಲಕ, ‘ರಾಜಕೀಯ ನೈತಿಕತೆ’ಯ ಸಂದೇಶ ಸಾರಲು ಬಿಜೆಪಿ ಯತ್ನಿಸಿದೆ.

ರಾಘವ ಶರ್ಮ ನಿಡ್ಲೆ, ಲೇಖಕರು, ಹಿರಿಯ ಪತ್ರಕರ್ತರು

ಕಳೆದ 10 ವರ್ಷಗಳಲ್ಲಿ, ರಾಜಕಾರಣಿಗಳ ವಿರುದ್ಧ ಇ.ಡಿ. 193 ಪ್ರಕರಣಗಳನ್ನು ದಾಖಲಿಸಿದೆ. ಅದರಲ್ಲಿ ಕೇವಲ ಇಬ್ಬರಿಗೆ ಮಾತ್ರ ಶಿಕ್ಷೆ ವಿಧಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಕಳೆದ ಮಾರ್ಚ್‌ನಲ್ಲಿ ರಾಜ್ಯಸಭೆಗೆ ಮಾಹಿತಿ ನೀಡಿದ್ದರು. ಈ 193 ಕೇಸುಗಳಲ್ಲಿ 138 ಕೇಸುಗಳನ್ನು 2019ರಲ್ಲಿ ಎರಡನೇ ಅವಧಿಗೆ ಎನ್‌ಡಿಎ ಮೈತ್ರಿ ಕೂಟ ಅಧಿಕಾರಕ್ಕೆ ಬಂದ ನಂತರವೇ ದಾಖಲಾಗಿವೆ. ಇದೇ ಅವಧಿಯಲ್ಲಿ ಬಿಜೆಪಿ ಆಡಳಿತದ ಒಂದೇ ಒಂದು ರಾಜ್ಯದಲ್ಲಿ ಇ.ಡಿ ಅಥವಾ ಸಿಬಿಐ ದಾಳಿ ನಡೆದಿಲ್ಲ. ಹೀಗಿದ್ದರೂ, ಹೊಸ ತಿದ್ದುಪಡಿ ಮಸೂದೆಗಳು ವ್ಯವಸ್ಥೆಯ ಶುದ್ಧೀಕರಣಕ್ಕಾಗಿ ಎಂಬ ನೈಜ ಉದ್ದೇಶ ಕೇಂದ್ರ ಸರಕಾರದಲ್ಲಿದ್ದರೆ ಅದನ್ನು ಸ್ವಾಗತಿಸಬೇಕು.

ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧ ಪ್ರಕರಣದಲ್ಲಿ ಆರೋಪಿ ಗಳಾಗಿ 30ಕ್ಕಿಂತ ಹೆಚ್ಚು ದಿನ ಜೈಲಿನಲ್ಲಿದ್ದರೆ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರನ್ನು ಅವರ ಹುದ್ದೆಗಳಿಂದ ಪದಚ್ಯುತಗೊಳಿಸುವ ಕೇಂದ್ರ ಸರಕಾರದ ಮೂರು ಹೊಸ ತಿದ್ದುಪಡಿ ವಿಧೇಯಕಗಳಿಗೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ವಿಪಕ್ಷ ಸಂಸದರು ವಿಧೇಯಕದ ಪುಟಗಳನ್ನು ಹರಿದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖಕ್ಕೆ ಎಸೆದ ಘಟನೆಯೂ ಲೋಕಸಭೆಯಲ್ಲಿ ನಡೆದಿದೆ. ಯಾವುದೇ ಪ್ರಕರಣದಲ್ಲಿ ಆರೋಪಿಯಾಗಿ ಬಂಧನಕ್ಕೊಳಗಾದ ತಕ್ಷಣವೇ ಮಂತ್ರಿ “ಮುಖ್ಯಮಂತ್ರಿ ಅಥವಾ ಪ್ರಧಾನಿಯೊಬ್ಬ ತನ್ನ ಸ್ಥಾನ ತ್ಯಜಿಸಬೇಕು ಎಂಬ ಕಾನೂನು ಭಾರತದಲ್ಲಿ ಇದುವರೆಗೆ ಬಂದಿಲ್ಲ.

ತೀರಾ ಇತ್ತೀಚಿನ ದಾಹರಣೆಯನ್ನೇ ನೀಡುವುದಾದರೆ; ದಿಲ್ಲಿ ಅಬಕಾರಿ ಹಗರಣದಲ್ಲಿ ತಿಹಾರ್ ಜೈಲು ಸೇರಿದ್ದ ಮಾಜಿ ಸಿಎಂ, ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್, ತಿಹಾರ್ ಜೈಲಿನಿಂದಲೇ 6 ತಿಂಗಳ ಕಾಲ ಸಿಎಂ ಹುದ್ದೆ ನಿರ್ವಹಿಸಿ, ಸರಕಾರದ ಕಡತಗಳಿಗೆ ಸಹಿ ಹಾಕುತ್ತಿದ್ದರು.

ಇದನ್ನೂ ಓದಿ: Raghav Sharma Nidle Column: ಸೋಶಿಯಲ್‌ ಮೀಡಿಯಾ ಟ್ರಯಲ್‌ ಗೆ ಬೇಕಿದೆ ಮೂಗುದಾರ

ತಮಿಳುನಾಡಿನ ಡಿಎಂಕೆ ಸರಕಾರದಲ್ಲಿ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ಭ್ರಷ್ಟಾಚಾರ ಪ್ರಕರಣ ದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದರೂ, ಅವರನ್ನು ಸಚಿವ ಸ್ಥಾನದಿಂದ ಸಿಎಂ ಎಂ.ಕೆ.ಸ್ಟ್ಯಾಲಿನ್ ತೆಗೆದುಹಾಕಿರಲಿಲ್ಲ. ಹೀಗಾಗಿ, ಇದನ್ನು ತಡೆಯಲು ಹೊಸ ಕಾನೂನು ತರುವ ಮೂಲಕ, ‘ರಾಜಕೀಯ ನೈತಿಕತೆ’ಯ ಸಂದೇಶ ಸಾರಲು ಬಿಜೆಪಿ ಯತ್ನಿಸಿದೆ.

ಕಳೆದ 11 ವರ್ಷಗಳಲ್ಲಿ ದೇಶದ ಸಾಂವಿಧಾನಿಕ ಸಂಸ್ಥೆ, ತನಿಖಾ ಸಂಸ್ಥೆ ಹಾಗೂ ರಾಜಕೀಯ ವ್ಯವಸ್ಥೆಯ ಮೂಲತತ್ವಗಳನ್ನೇ ಬುಡಮೇಲು ಮಾಡಿದವರಿಗೆ ಯಾವ ನೈತಿಕತೆ ಇದೆ ಎನ್ನುವುದು ವಿಪಕ್ಷಗಳ ಪ್ರಶ್ನೆ. ಒಂದು ವೇಳೆ ಇಂಥದ್ದೊಂದು ಕಾನೂನು ದೇಶದಲ್ಲಿ ಮೊದಲಿನಿಂದಲೇ ಜಾರಿ ಯಲ್ಲಿದ್ದಿದ್ದರೆ, ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ, ದಿಲ್ಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ, ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ, ದಿಲ್ಲಿ ಮಾಜಿ ಸಚಿವ ಸತ್ಯೇಂದ್ರ ಜೈನ್, ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ, ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್, ತ.ನಾಡು ಸಚಿವ ಸೆಂಥಿಲ್ ಬಾಲಾಜಿ ಸೇರಿ ಅನೇಕರು ಕಾನೂನಿನ ಪ್ರಕಾರ ತಮ್ಮ ಹುದ್ದೆ ಗಳನ್ನು ಒಂದೇ ತಿಂಗಳಲ್ಲಿ ಕಳೆದುಕೊಳ್ಳುತ್ತಿದ್ದರು.

ಅದೇನೇ ಇರಲಿ, ಕೇಂದ್ರ ಸರಕಾರದ ಉದ್ದೇಶಿತ ಹೊಸ ಕಾನೂನು ದೇಶದ ರಾಜಕೀಯ ವ್ಯವಸ್ಥೆ ಯಲ್ಲಿ ಭಾರೀ ಬದಲಾವಣೆಗೆ ಮುನ್ನುಡಿ ಬರೆಯುವ ನಿರೀಕ್ಷೆ ಅನೇಕರಲ್ಲಿದೆ. 30 ದಿನಕ್ಕಿಂತ ಹೆಚ್ಚು ದಿನ ಜೈಲಿನಲ್ಲಿರುವ ಪಿಎಂ, ಸಿಎಂ ಅಥವಾ ಸಚಿವರು ತಮ್ಮ ಸ್ಥಾನಕ್ಕೆ ನೀಡಿ, ಜೈಲಿನಿಂದ ಹೊರ ಬಂದ ಮೇಲಷ್ಟೇ ಆ ಸ್ಥಾನ/ ಹುದ್ದೆಗಳಿಗೆ ಮರಳಬಹುದು.

2014ರ ನಂತರದಲ್ಲಿ ಕೇಂದ್ರ ಸರಕಾರದ ತನಿಖಾ ಏಜೆನ್ಸಿಗಳ ತನಿಖೆಗೆ ಗುರಿಯಾಗಿ, ಎಐಎಡಿಎಂಕೆ, ಟಿಎಂಸಿ, ಎಎಪಿ, ಡಿಎಂಕೆ, ಎನ್‌ಸಿಪಿ ಪಕ್ಷಗಳ 12ಕ್ಕಿಂತ ಹೆಚ್ಚು ಸಚಿವರು ಜೈಲು ಸೇರಿ, ನಂತರ ಹೊರಬಂದಿzರೆ. ವಿಪರ್ಯಾಸ ಎಂದರೆ, ಜಾರಿ ನಿರ್ದೇಶನಾಲಯದಿಂದ ತನಿಖೆಗೊಳಪಟ್ಟು ಜೈಲು ಸೇರಿದ್ದ ಅನೇಕ ಜನಪ್ರತಿನಿಧಿಗಳನ್ನು ಅಪರಾಧಿಗಳು ಎಂದು ಸಾಬೀತುಪಡಿಸಲು ತನಿಖಾ ಸಂಸ್ಥೆ ಗಳಿಗೆ ಸಾಧ್ಯವಾಗಿಲ್ಲ.

ಪೂರಕ ಸಾಕ್ಷ್ಯಗಳಿಲ್ಲದೆ ಈಗಲೂ ಹಲವು ಕೇಸ್ ಗಳು ನ್ಯಾಯಾಲಯದಲ್ಲಿ ದೂಳು ತಿನ್ನುತ್ತಿದ್ದರೆ ಮತ್ತೆ ಕೆಲವು ಕೇಸ್‌ಗಳಲ್ಲಿ ಆರೋಪಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದೆ. 2021ರ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾ ಗಿದ್ದ ದಿಲ್ಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ವಿರುದ್ಧ 4 ವರ್ಷಗಳ ಬಳಿಕ ಸಿಬಿಐ ಕ್ಲೀನ್‌ಚಿಟ್ ನೀಡಿ ದ್ದನ್ನು ದಿಲ್ಲಿ ಹೈಕೋರ್ಟ್ ಒಪ್ಪಿಕೊಂಡು, ಅವರನ್ನು ಕೆಲ ದಿನಗಳ ಹಿಂದೆ ಹಗರಣದಿಂದ ಮುಕ್ತಗೊಳಿಸಿರುವುದು ಇಲ್ಲಿ ಉಲ್ಲೇಖಾರ್ಹ.

ಈ ನಾಲ್ಕು ವರ್ಷಗಳಲ್ಲಿ ದಿಲ್ಲಿ ರಾಜಕಾರಣ ಹತ್ತಾರು ಬದಲಾವಣೆಗೆ ಸಾಕ್ಷಿಯಾಗಿದೆ. ಈ ನಡುವೆ ಸತ್ಯೇಂದ್ರ ಜೈನ್ ಕ್ಲೀನ್‌ಚಿಟ್ ವಿಚಾರ ದೊಡ್ಡ ಮಟ್ಟಿನ ಸಾರ್ವಜನಿಕ ಚರ್ಚೆಗೂ ಗ್ರಾಸವಾಗಲಿಲ್ಲ. ಏಕೆಂದರೆ, ಆರೋಪ, ಬಂಧನದಂತಹ ಪದಗಳು ಮಾಡುವಷ್ಟು ಸದ್ದು, ಖುಲಾಸೆ ಮಾಡುವುದೇ ಇಲ್ಲ!

ಕಳೆದ 11 ವರ್ಷಗಳಲ್ಲಿ ವಿಪಕ್ಷಗಳ ಅನೇಕ ಜನಪ್ರತಿನಿಧಿಗಳು ಇ.ಡಿ. ಮತ್ತು ಸಿಬಿಐ ದಾಳಿಗೆ ತುತ್ತಾಗಿ, ತನಿಖೆಯ ಬಿಸಿ ಎದುರಿಸಿದ್ದಾರೆ. ಆತ್ಮಸ್ಥೈರ್ಯ ಕಳೆದುಕೊಂಡ ಅನೇಕರಿಗೆ ರಾಜಕಾರಣವೇ ಸಾಕೆನಿಸಿದೆ. ಅಚ್ಚರಿ ಎಂದರೆ, ಇದೇ ಅವಧಿಯಲ್ಲಿ ಬಿಜೆಪಿ ಆಡಳಿತದ ಒಂದೇ ಒಂದು ರಾಜ್ಯದಲ್ಲಿ ಇ.ಡಿ ಅಥವಾ ಸಿಬಿಐ ದಾಳಿ ನಡೆದಿಲ್ಲ.

ಅಂದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜನಪ್ರತಿನಿಧಿಗಳ ಮಟ್ಟದಲ್ಲಿ ಕನಿಷ್ಠ ಮಟ್ಟದ ಭ್ರಷ್ಟಾಚಾರವೂ ನಡೆಯದೆ, ಎಲ್ಲವೂ ಸುಗಮವಾಗಿದೆ ಎಂದುಕೊಳ್ಳಬೇಕೆ? ಇದರ ಉತ್ತರ ತಿಳಿದಿರು ವಂಥದ್ದೇ. ಏಕೆಂದರೆ, ಕಳೆದ 11 ವರ್ಷಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಮುಖ್ಯ ಟಾರ್ಗೆಟ್ ವಿಪಕ್ಷ ನಾಯಕರೇ ಆಗಿದ್ದಾರೆ.

ಹಾಗಂತ, ಭ್ರಷ್ಟರನ್ನು, ಲಂಚಕೋರರನ್ನು, ಜನರ ತೆರಿಗೆ ಹಣದ ಲೂಟಿ ಹೊಡೆವ ತಿಮಿಂಗಿಲ ಗಳನ್ನು ಹಿಡಿಯಬೇಕು, ಶಿಕ್ಷಿಸಲೇಬೇಕು ಮತ್ತು ರಾಜಕೀಯ ವ್ಯವಸ್ಥೆ ಸ್ವಚ್ಛಗೊಳ್ಳಬೇಕು. ಆದರೆ, ಈ ತಿಮಿಂಗಿಲಗಿಳಿರುವುದು ವಿಪಕ್ಷಗಳಲ್ಲಿ ಮಾತ್ರವೇ ಎನ್ನುವುದು ಪ್ರಶ್ನೆ. ವಿರೋಧಿಗಳ ವಿರುದ್ಧ ಅಸ್ತ್ರ: ಈ ಕಾರಣಕ್ಕಾಗಿಯೇ ವಿಪಕ್ಷಗಳು ಈ ಮೂರು ಹೊಸ ಮಸೂದೆಗಳ ಉದ್ದೇಶವನ್ನು ಪ್ರಶ್ನಿಸಿವೆ.

ಇ.ಡಿ.ಯ ತನಿಖೆಗಳನ್ನೇ ಉಲ್ಲೇಖಿಸಿ ವಾದಿಸುತ್ತಿರುವ ವಿಪಕ್ಷ ನಾಯಕರು, ವಿರೋಧಿಗಳನ್ನು ಬಂಧಿಸಲು ಬಳಸುತ್ತಿರುವ ಅಕ್ರಮ ವರ್ಗಾವಣೆ ತಡೆ ಕಾಯ್ದೆ ( ಪಿಎಂಎಲ್‌ಎ) ಅಡಿಯಲ್ಲಿ, ಜನಪ್ರತಿನಿಧಿಗಳನ್ನು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಬಂಧನಲ್ಲಿಟ್ಟ ಹಲವು ಉದಾಹರಣೆ ಗಳಿವೆ.

ಪಿಎಂಎಲ್‌ಎ ಕೇಸುಗಳಲ್ಲಿ ಜಾಮೀನು ಪಡೆಯುವುದು ಕೂಡ ಸುಲಭದ ಹಾದಿಯೇನಲ್ಲ ಎಂದು ಇಂತಹ ಹಲವಾರು ಕೇಸುಗಳಲ್ಲಿ ವಾದಿಸಿರುವ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂ ಹೇಳುತ್ತಾರೆ. ಸರಕಾರಗಳನ್ನು ಅಸ್ಥಿರಗೊಳಿಸಲು ಇ.ಡಿ. ಮತ್ತು ಸಿಬಿಐ ತನಿಖಾ ಏಜೆನ್ಸಿ ಗಳನ್ನು ಕೇಂದ್ರ ಸರಕಾರ ವ್ಯವಸ್ಥಿತವಾಗಿ ಬಳಸುತ್ತಿದೆ. ಈ ಮೂರು ವಿಧೇಯಕಗಳು ಅದರ ಮುಂದುವರಿದ ಭಾಗ ಎಂದು ಸಿಂ ಆತಂಕ ಹೊರ ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ಜಾರಿ ನಿರ್ದೇಶನಾಲಯದ (ಇ.ಡಿ.) ಮೇಲೆಯೇ ತೀವ್ರ ವಾಗ್ದಾಳಿ ನಡೆಸಿದ್ದ ಸುಪ್ರೀಂಕೋರ್ಟ್, ತನಿಖಾ ಸಂಸ್ಥೆಯೇ ವಂಚಕನಂತೆ ವರ್ತಿಸಲು ಸಾಧ್ಯವಿಲ್ಲ ಎಂದು ಕೆಂಡಕಾರಿ, ಕಾನೂನಿನ ವ್ಯಾಪ್ತಿಯ ನೀವು ಕೆಲಸ ಮಾಡಬೇಕು. ಕಾನೂನು ಜಾರಿ ಸಂಸ್ಥೆಗಳು ಮತ್ತು ಕಾನೂನು ಉಲ್ಲಂಸುವ ಸಂಸ್ಥೆಗಳ ನಡುವೆ ವ್ಯತ್ಯಾಸವಿದೆ ಎಂದು ಹೇಳಿತ್ತು.

ತನಿಖಾ ಸಂಸ್ಥೆಯ ವರ್ಚಸ್ಸಿನ ಬಗ್ಗೆ ನಮಗೆ ಕಳವಳವಾಗುತ್ತಿದೆ ಎಂದಿದ್ದ ಸಿಜೆಐ ಬಿ.ಆರ್ ಗವಾಯಿ ನೇತೃತ್ವದ ನ್ಯಾಯಪೀಠ, 5000 ಪ್ರಕರಣಗಳಲ್ಲಿ, ಅಪರಾಧ ಸಾಬೀತಾಗಿ ಶಿಕ್ಷೆಗೆ ಗುರಿಯಾಗಿರುವುದು 10ಕ್ಕಿಂತ ಕಡಿಮೆ ಏಕೆ ಎಂದು ಪ್ರಶ್ನಿಸಿದ್ದರು.

ಹೀಗಿದ್ದರೂ, ಹೊಸ ತಿದ್ದುಪಡಿ ಮಸೂದೆಗಳು ವ್ಯವಸ್ಥೆಯ ಶುದ್ಧೀಕರಣಕ್ಕಾಗಿ ಎಂಬ ನೈಜ ಉದ್ದೇಶ ಕೇಂದ್ರ ಸರಕಾರದಲ್ಲಿದ್ದರೆ ಅದನ್ನು ಸ್ವಾಗತಿಸಬೇಕು. ಏಕೆಂದರೆ, ದೇಶದ ಪ್ರಧಾನಿ, ಸಿಎಂ ಅಥವಾ ಸಚಿವ ಜೈಲಿನಿಂದ ಅಧಿಕಾರ ನಡೆಸುವುದನ್ನು ಪ್ರeವಂತ ನಾಗರಿಕನೊಬ್ಬ ಬಯಸುವುದಿಲ್ಲ. ಕಳೆದ ವರ್ಷ ಕೇಜ್ರಿವಾಲ್ ಜೈಲಿಗೆ ಹೋದ ಕೂಡಲೇ ರಾಜೀನಾಮೆ ನೀಡಬೇಕಿತ್ತು ಎಂದು ಅವರದೇ ಪಕ್ಷದ ಬೆಂಬಲಿಗರು ಸೇರಿ ಅನೇಕ ದಿಲ್ಲಿವಾಸಿಗಳು ಬಯಸಿದ್ದರು.

ಆದರೆ, ಕೇಜ್ರಿವಾಲ್ ಅಧಿಕಾರಕ್ಕಂಟಿ ಕೂತಿದ್ದರು. ಜಾರ್ಖಂಡ್‌ನ ಹೇಮಂತ್ ಸೊರೇನ್ ಜೈಲು ಸೇರುವ ಕೆಲ ಗಂಟೆಗಳಿಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಚಂಪೈ ಸೊರೇನ್ ರಾಜ್ಯದ ಮುಖ್ಯಮಂತ್ರಿಯಾದರು. 5 ತಿಂಗಳ ನಂತರ ಚಂಪೈ ಸಿಎಂ ಸ್ಥಾನ ತೊರೆದು, ಹೇಮಂತ್ ಸೊರೇನ್ ಮತ್ತೆ ಮುಖ್ಯಮಂತ್ರಿಯಾದರು.

ಕೇಂದ್ರದ ಮೂರು ಮಸೂದೆಗಳ ಉದ್ದೇಶ ಕೂಡ ಇದೇ ಆಗಿದ್ದು, 30ಕ್ಕಿಂತ ಹೆಚ್ಚು ದಿನ ಜೈಲಲ್ಲಿದ್ದರೆ ಪಿಎಂ, ಸಿಎಂ ಅಥವಾ ಸಚಿವ ಹುದ್ದೆ ಸಹಜವಾಗಿಯೇ ಅನೂರ್ಜಿತಗೊಳ್ಳುತ್ತದೆ ಈ ವಿಧೇಯಕ ಗಳನ್ನು ಸರಕಾರ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಶಿಫಾರಸು ಮಾಡಿದೆ. ವಿಪಕ್ಷಗಳ ಅಭಿಪ್ರಾಯಗಳನ್ನೂ ಪರಿಗಣಿಸಿ ವಿಧೇಯಕಗಳಿಗೆ ಹಲವು ತಿದ್ದುಪಡಿಗಳನ್ನು ಜೆಪಿಸಿ ಶಿಫಾರಸು ಮಾಡಬಹುದು. ಈ ವರ್ಷಾಂತ್ಯದಲ್ಲಿ ಮಹತ್ವದ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ.

“ಕಾಂಗ್ರೆಸ್ ಮತ್ತು ವಿಪಕ್ಷಗಳು ವೋಟ್ ಚೋರಿಯನ್ನು (ಮತಗಳವು) ಅಸ್ತ್ರ ಮಾಡಿಕೊಂಡಿವೆ. ಅದಕ್ಕುತ್ತರವಾಗಿ, 3 ವಿಧೇಯಕಗಳ ಮೂಲಕ ನಾವು ಭ್ರಷ್ಟಾಚಾರದ ವಿರುದ್ಧ ಹೊಸ ಸಮರ ಸಾರಿದ್ದೇವೆ. ಜೈಲಿನಲ್ಲಿ ಕಡತಗಳಿಗೆ ಸಹಿ ಹಾಕುವವರು ವಿಧೇಯಕ ಕಂಡು ಹೆದರಿದ್ದಾರೆ" ಎಂದು ಬಿಹಾರ ಗಯಾದಲ್ಲಿ ಪ್ರಶ್ನಿಸಿರುವ ಪಿಎಂ ಮೋದಿ, ‘ವೋಟ್‌ಚೋರಿ’ಗೆ ತಮ್ಮ ಬ್ರಹ್ಮಾಸ್ತ್ರವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.