Raghav Sharma Nidle Column: ಸೋಶಿಯಲ್ ಮೀಡಿಯಾ ಟ್ರಯಲ್ ಗೆ ಬೇಕಿದೆ ಮೂಗುದಾರ
ನಿರ್ದಿಷ್ಟ ಪ್ರದೇಶದಲ್ಲಿ ನಡೆದ/ನಡೆಯುತ್ತಿರುವ ಘಟನೆಯನ್ನು ಯಥಾವತ್ತಾಗಿ ವರದಿ ಮಾಡುವ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಮಾಧ್ಯಮಗಳಿಗಿದೆ, ಸೋಷಿಯಲ್ ಮೀಡಿಯಾಗಳೂ ಈ ಹಕ್ಕನ್ನು ಬಳಸಿಕೊಳ್ಳುತ್ತಿವೆ. ಅದೇ ರೀತಿ ಅಪರಾಧ ತನಿಖೆಯ ಸಮಯದಲ್ಲಿ ಆರೋಪಿಗಳಿಗೂ ಕಾನೂನಾತ್ಮಕ ರಕ್ಷಣೆ ಪಡೆಯುವ ಹಕ್ಕಿದೆ ಎನ್ನುವುದೂ ಗಮನಾರ್ಹ.


ಮೀಡಿಯಾ ಟ್ರಯಲ್
ರಾಘವ ಶರ್ಮ ನಿಡ್ಲೆ
2020ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್‌ಪೂತ್ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿ ಮಾಡಿತ್ತು. ಗರ್ಲ್ ಫ್ರೆಂಡ್ ರಿಯಾ ಚಕ್ರವರ್ತಿಯೇ ಆತನ ಆತ್ಮಹತ್ಯೆಗೆ ಕಾರಣ ಎಂದು ತೀರ್ಪು ನೀಡಿದ್ದ ಅಂದಿನ ಕೆಲ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳು, ರಿಯಾಳನ್ನು ತೀವ್ರ ತರಹದ ಮಾನಸಿಕ ಸಂಕಟ, ವೇದನೆಗೆ ತಳ್ಳಿದ್ದವು.
ಸೋಷಿಯಲ್ ಮೀಡಿಯಾಗಳಲ್ಲಂತೂ ನಿತ್ಯವೂ ರಿಯಾಳನ್ನು ಘೋರ ಅಪರಾಧಿಯಂತೆ ಬಿಂಬಿಸಿ, ಆಕೆಯನ್ನು ‘ಗೋಲ್ಡ್ ಡಿಗ್ಗರ್’ (ದುಡ್ಡಿನಾಸೆಗೆ ಸಿರಿವಂತರ ಹಿಂದೆ ಹೋಗುವವರು), ಕೊಲೆಗಾರ್ತಿ ಎಂದು ಕರೆದಿದ್ದಲ್ಲದೆ, ಮಾಡರ್ನ್ ವೇಶ್ಯೆ ಎಂದೆಲ್ಲಾ ಟೀಕಿಸಲಾಯಿತು. ಭಾರೀ ಸಾರ್ವಜನಿಕ ಅವಮಾನಕ್ಕೆ ಒಳಗಾಗಿದ್ದ ರಿಯಾ ಚಕ್ರವರ್ತಿ, ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದುದರಿಂದ 27 ದಿನಗಳ ಕಾಲ ಸೆರೆವಾಸವನ್ನೂ ಅನುಭವಿಸಿದಳು.
ಜೈಲಿನಿಂದ ಹೊರಬಂದರೂ, ಸಾಮಾಜಿಕ ಬಹಿಷ್ಕಾರದಂತಹ ವಾತಾವರಣ ನಿರ್ಮಿಸಿದ್ದ ಕೆಲ ಮುಖ್ಯವಾಹಿನಿ ಟಿ.ವಿ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳಿಂದಾಗಿ ಆಕೆ ಭಾರೀ ಮಾನಸಿಕ ಆಘಾತಕ್ಕೆ ತುತ್ತಾಗಿದ್ದಳು.
ಪ್ರಕರಣ ನಡೆದು 5 ವರ್ಷಗಳ ಬಳಿಕ ರಿಯಾ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ದೇಶದ ಪ್ರಮುಖ ತನಿಖಾ ಏಜೆನ್ಸಿಯಾದ ಸಿಬಿಐ, ಸುಶಾಂತ್ ಸಿಂಗ್ ಆತ್ಮಹತ್ಯೆಯಲ್ಲಿ ರಿಯಾ ಪಾತ್ರ ವಿಲ್ಲ ಎಂದು ಸ್ಪಷ್ಟಪಡಿಸಿತು. ಸುಶಾಂತ್ ಕುಟುಂಬಸ್ಥರೂ ರಿಯಾ ಚಕ್ರವರ್ತಿ ಮೇಲೆ ಆರೋಪ ಮಾಡಿ, ಸುಶಾಂತ್ ಹಣವನ್ನೆಲ್ಲಾ ಬಳಸಿಕೊಂಡಿದ್ದಳು ಎಂದು ದೂರಿದ್ದರು. ಆದರೆ ಸಿಬಿಐ ತನಿಖೆ ಯಲ್ಲಿ ಇದ್ಯಾವುದಕ್ಕೂ ಸಾಕ್ಷ್ಯ ಸಿಕ್ಕಲಿಲ್ಲ ಮತ್ತು ರಿಯಾ ಚಕ್ರವರ್ತಿಗೂ ಸುಶಾಂತ್ ಸಾವಿಗೂ ಸಂಬಂಧವಿಲ್ಲ ಎಂದು ಖಚಿತವಾಯಿತು.
ಇದನ್ನೂ ಓದಿ: Raghava Sharma Nidle Column: ಕಳಸಾ-ಬಂಡೂರಿಯ ಗ್ರಹಣ ಬಿಡುವುದು ಯಾವಾಗ ?
ಹಾಗಾದರೆ ಸೋಷಿಯಲ್ ಮೀಡಿಯಾ ಮತ್ತು ಮೀಡಿಯಾಗಳ ಪರ್ಯಾಯ ವಿಚಾರಣೆಯಿಂದ (ಮೀಡಿಯಾ ಟ್ರಯಲ್) ಆಕೆ ಅನುಭವಿಸಿದ ನೋವು, ಸಂಕಟ, ದುಃಖಕ್ಕೆ ಪರಿಹಾರ ಏನು? ತನಿಖೆ ಪೂರ್ಣಗೊಳ್ಳುವ ಮುನ್ನವೇ ರಿಯಾಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಿಗೆ ಶಿಕ್ಷೆ ನೀಡುವವರು ಯಾರು? ಸುದ್ದಿ ವಾಹಿನಿಗಳು, ಯೂಟ್ಯೂಬರ್ ಗಳು ರಿಯಾ ವಿರುದ್ಧ ಥರಹೇವಾರಿ ಸುದ್ದಿಗಳನ್ನು ಮಾಡಿದ್ದಲ್ಲದೆ, ಆಕೆಯನ್ನು ‘ಹಣಕ್ಕಾಗಿ ಯುವಕರ ಬಾಳನ್ನು ಹಾಳು ಮಾಡುವವಳು’ ಎಂಬಂತೆ ಬಿಂಬಿಸಿದ್ದವು.
ಆದರೆ ಇಂದು ರಿಯಾ ಸಮಾಜದ ಎದುರಲ್ಲಿ ನಿರಪರಾಧಿಯಾಗಿ ನಿಂತಿದ್ದಾಳೆ. ಹಾಗೆ ನೋಡಿದರೆ, ಇದು ರಿಯಾ ಒಬ್ಬಳ ಕಥೆಯಲ್ಲ. ನಿತ್ಯವೂ ಸೋಷಿಯಲ್ ಮೀಡಿಯಾ ಟ್ರಯಲ್‌ಗೆ ಒಳಗಾಗಿ, ಮಾನಸಿಕ ಸಂಕಟ ಅನುಭವಿಸುತ್ತಿರುವ ಅನೇಕರು ನಮ್ಮ ಕಣ್ಣ ಮುಂದಿದ್ದಾರೆ.
ನಿರ್ದಿಷ್ಟ ಪ್ರದೇಶದಲ್ಲಿ ನಡೆದ/ನಡೆಯುತ್ತಿರುವ ಘಟನೆಯನ್ನು ಯಥಾವತ್ತಾಗಿ ವರದಿ ಮಾಡುವ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಮಾಧ್ಯಮಗಳಿಗಿದೆ, ಸೋಷಿಯಲ್ ಮೀಡಿಯಾಗಳೂ ಈ ಹಕ್ಕನ್ನು ಬಳಸಿಕೊಳ್ಳುತ್ತಿವೆ. ಅದೇ ರೀತಿ ಅಪರಾಧ ತನಿಖೆಯ ಸಮಯದಲ್ಲಿ ಆರೋಪಿಗಳಿಗೂ ಕಾನೂನಾತ್ಮಕ ರಕ್ಷಣೆ ಪಡೆಯುವ ಹಕ್ಕಿದೆ ಎನ್ನುವುದೂ ಗಮನಾರ್ಹ.
ಅಪರಾಧ ಪ್ರಕರಣವೊಂದು ಸಮಗ್ರ ತನಿಖೆ, ಮೌಲ್ಯಮಾಪನ ಮತ್ತು ಸೂಕ್ತ ಪರಿಶೀಲನೆಗೆ ಒಳಪಟ್ಟ ನಂತರವೇ ಅದನ್ನು ಸಾರ್ವಜನಿಕರೊಂದಿಗೆ ಹಂಚುವ, ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಮಾಧ್ಯಮ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗಳ ಮೇಲಿದೆ. ಇದು ಅತ್ಯಗತ್ಯವೂ ಹೌದು, ಏಕೆಂದರೆ ವಿಚಾರಣೆ ಹಂತದಲ್ಲೇ ಮನಸ್ಸಿಗೆ ತೋಚಿದಂತೆ ಆರೋಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು, ಆತನ ಪ್ರತಿಷ್ಠೆಗೆ ಮಾತ್ರವಲ್ಲದೆ ಕುಟುಂಬದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಇದರಿಂದಾಗಿ ವ್ಯಕ್ತಿ ಅಥವಾ ಸಂಸ್ಥೆ ನಡೆಸಿದ ಎಲ್ಲಾ ಸಮಾಜಮುಖಿ ಕೆಲಸಗಳು ಮೌಲ್ಯ ಕಳೆದು ಕೊಂಡುಬಿಡುತ್ತವೆ. ಮೇಲಾಗಿ, ನ್ಯಾಯಾಲಯದ ಪೂರ್ಣ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ವ್ಯಕ್ತಿ ಆರೋಪಗಳಿಂದ ಖುಲಾಸೆಗೊಂಡರೂ ಆತ, ಮತ್ತವನ ಇಡೀ ಕುಟುಂಬ ಮರ್ಯಾದೆ/ಘನತೆ ಯಿಂದ ಜೀವನ ನಡೆಸುವುದು ಅತಿ ಕಷ್ಟವಾಗಿಬಿಡುತ್ತದೆ.
ಈ ಕಾರಣಕ್ಕಾಗಿಯೇ ಪ್ರಕರಣದ ವಿಚಾರಣೆ ಹಂತದಲ್ಲೇ ಪ್ರಕರಣದ ‘ಮಾಧ್ಯಮ ವಿಚಾರಣೆ’ಯನ್ನು (ಮೀಡಿಯಾ ಟ್ರಯಲ್) ಅನೇಕರು ಒಪ್ಪುವುದಿಲ್ಲ. ಈ ಕಾಲದ ಸೋಷಿಯಲ್ ಮೀಡಿಯಾ ಟ್ರಯಲ್ ಗಳಂತೂ ತೀರಾ ಹೇಸಿಗೆ ಹುಟ್ಟಿಸುತ್ತವೆ ಮತ್ತು ಹಲವು ಸಂದರ್ಭಗಳಲ್ಲಿ ಸೂಕ್ಷ್ಮ ಮನಸ್ಸಿನ ಅಮಾಯಕರು ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾರೆ.
ಜನರು ತಾವು ವೀಕ್ಷಿಸುವ ಅಥವಾ ಕೇಳುವ ಮಾತುಗಳನ್ನು ಆಧರಿಸಿ ಪ್ರಚಲಿತ ವಿಚಾರಗಳ ಬಗ್ಗೆ ಗ್ರಹಿಸುತ್ತಾರೆ/ವಿಮರ್ಶಿಸುತ್ತಾರೆ. ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗುವ ವಿಷಯಗಳನ್ನು ನೋಡಿ ತಮ್ಮದೇ ತೀರ್ಮಾನಕ್ಕೊಂದು ಬರುವವರ ಸಂಖ್ಯೆ ಹೆಚ್ಚು. ವಿವೇಚನೆಯಿಂದ ಸರಿ/ತಪ್ಪುಗಳನ್ನು ವಿಶ್ಲೇಷಿಸುವ ಮಂದಿಯನ್ನು ದುರ್ಬೀನು ಹಾಕಿ ಹುಡುಕಬೇಕಾಗುತ್ತದೆ.
ಸರಿಯಾಗಿ ತನಿಖೆ/ವಿಚಾರಣೆ ನಡೆಯುವ ಮುನ್ನವೇ ಮೇಲ್ನೋಟಕ್ಕೆ ಕಾಣುವ ಅಂಶಗಳನ್ನು ಆಧರಿಸಿಯೇ ವ್ಯಕ್ತಿ ಅಥವಾ ಸಂಸ್ಥೆಗೆ ಕ್ರಿಮಿನಲ್ ಪಟ್ಟ ಕಟ್ಟಲಾಗುತ್ತದೆ. ಇದರಿಂದ ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕೆಂಬ ವಾದಿ ಅಥವಾ ಪ್ರತಿವಾದಿಯ ಆಶಯಕ್ಕೆ ಧಕ್ಕೆಯಾಗುವುದಲ್ಲದೇ, ಆತನ ಖಾಸಗಿ ಹಕ್ಕಿಗೂ (ಸುಪ್ರೀಂಕೋರ್ಟ್ ಮೂಲಭೂತ ಹಕ್ಕು ಎಂದು ಘೋಷಿಸಿದೆ) ಬೆಲೆ ಇಲ್ಲದಂತಾಗುತ್ತದೆ.
ಅಪರಾಧಿ ಎಂದು ಸಾಬೀತಾಗುವ ಮುನ್ನವೇ ಆ ವ್ಯಕ್ತಿ ಸಮಾಜದ ಕಣ್ಣಲ್ಲಿ ಬಹಳ ದೊಡ್ಡ ಅಪರಾಧಿಯಾಗಿ ಬಿಟ್ಟಿರುತ್ತಾನೆ. ಇದರಿಂದ ಉಂಟಾಗುವ ಮಾನಸಿಕ ವೇದನೆ, ಸಂಕಟ ಹಾಗೂ ಕುಟುಂಬದವರು ಅನುಭವಿಸುವ ಮಾನಸಿಕ ನೋವು ಅಷ್ಟಿಷ್ಟಲ್ಲ.
ಇಂದಿನ ಲಂಗು ಲಗಾಮಿಲ್ಲದ ಸೋಷಿಯಲ್ ಮೀಡಿಯಾಗಳ ಮಧ್ಯೆ ಪ್ರಜ್ಞಾವಂತರು ಮರ್ಯಾದೆ ಬಿಟ್ಟು ಬದುಕುವುದು ಅನಿವಾರ್ಯವಾಗಿ ಬಿಟ್ಟಿದೆ. ಹೀಗಾಗಿ ಅತಿಸೂಕ್ಷ್ಮ ಪ್ರಕರಣಗಳಲ್ಲಿ ‘ಲಕ್ಷ್ಮಣ ರೇಖೆ’ ದಾಟದಂತೆ ಮಾಧ್ಯಮಗಳೇ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಲಕ್ಷ್ಮಣರೇಖೆ ಹಾಕಿಕೊಳ್ಳ ದಿದ್ದರೆ ನ್ಯಾಯಾಲಯಗಳೇ ಮಧ್ಯಪ್ರವೇಶ ಮಾಡುವುದು ಅನಿವಾರ್ಯವಾಗುತ್ತದೆ.
ಈಗಿನ ಇಂಟರ್‌ನೆಟ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳೇ ನ್ಯಾಯಾಲಯಗಳಾಗಿ ಮರುಜನ್ಮ ಪಡೆದಿವಿಯೇನೋ ಎಂಬಂತೆ ಅನಿಸುವುದು ಸುಳ್ಳಲ್ಲ. ಸೋಷಿಯಲ್ ಮೀಡಿಯಾ ಖಾತೆದಾರರು ಇಲ್ಲಿ ತಮ್ಮದೇ ರೀತಿಯಲ್ಲಿ ತನಿಖೆ ಆರಂಭಿಸಿ, ಜನರ ಮಧ್ಯೆ ಅಭಿಪ್ರಾಯಗಳನ್ನು ತೇಲಿ ಬಿಡುತ್ತಾರೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನಿಖೆ ಮಾಡುತ್ತಾನೆ ಮತ್ತು ನ್ಯಾಯಾಲಯಗಳಲ್ಲಿ ನೈಜ ವಿಚಾರಣೆ ಆರಂಭವಾಗುವ ಮುನ್ನವೇ ವಾದಿ/ಪ್ರತಿವಾದಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುತ್ತಾರೆ.
ಆರೋಪಿತ ವ್ಯಕ್ತಿಯ ಮೇಲಿನ ಆರೋಪಗಳು ಸಾಬೀತಾಗುವ ತನಕ ಆತ ನಿರಪರಾಧಿಯೇ ಆಗಿರುತ್ತಾನೆ ಎಂದು ನ್ಯಾಯಾಲಯಗಳು ಹತ್ತಾರು ಬಾರಿ ಪುನರುಚ್ಚರಿಸಿದರೂ, ಸೋಷಿಯಲ್ ಮೀಡಿಯಾದಲ್ಲಿ ಆತ ತಪ್ಪಿತಸ್ಥನೇ ಆಗಿರುತ್ತಾನೆ. ಈ ಕುರಿತ ಚರ್ಚೆ, ವಿಶ್ಲೇಷಣೆಗಳು ಕ್ಷಣಾರ್ಧದಲ್ಲಿ ಲಕ್ಷೋಪಲಕ್ಷ ಮೊಬೈಲ್‌ಗಳಲ್ಲಿ ಹರಿದಾಡಿರುತ್ತವೆ.
ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಶವ ಹೂತುಹಾಕಲಾಗಿದೆ ಎಂದು ಅನಾಮಿಕ ನೊಬ್ಬ ದೂರು ನೀಡಿದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳ (ಎಸ್.ಐ.ಟಿ.) ಧರ್ಮಸ್ಥಳ ವ್ಯಾಪ್ತಿ ಯಲ್ಲಿ ಉತ್ಖನನ ಪ್ರಕ್ರಿಯೆ ನಡೆಸುತ್ತಿರುವ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇಡೀ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳ ಕೆಲ ಪೇಜ್‌ಗಳಲ್ಲಿ ನಡೆಸಲಾಗುತ್ತಿರುವ ವಿಶ್ಲೇಷಣೆ, ಚರ್ಚೆ ಹಾಗೂ ‘ಈ ಭಾಗದಲ್ಲಿ ಹೀಗೆಯೇ ನಡೆದಿದೆ’, ‘ಇಂಥವರೇ ಮಾಡಿರುವ ಶಂಕೆಯಿದೆ’ ಎಂಬೆಲ್ಲಾ ಕುರಿತ ಏಕಪಕ್ಷೀಯ ವಾದಗಳು ಸಂಘರ್ಷಮಯ ವಾತಾವರಣಕ್ಕೆಡೆ ಮಾಡಿದೆ.
ಎಸ್.ಐ.ಟಿ. ನಡೆಸುತ್ತಿರುವ ತನಿಖೆಯ ಬಗ್ಗೆ ವರದಿ ಮಾಡುವುದಕ್ಕೆ ಯಾರ ಆಕ್ಷೇಪಣೆಯೂ ಇಲ್ಲ, ಕೋರ್ಟ್ ಕೂಡ ಅದಕ್ಕೆ ನಿರ್ಬಂಧ ಹೇರಿಲ್ಲ, ಆದರೆ ಕೆಲವು ಸೋಷಿಯಲ್ ಮೀಡಿಯಾ ಪೇಜ್‌ಗಳು ಯಾವುದೇ Legal Ground ನ್ನು ತೆಗೆದುಕೊಳ್ಳದೆ, ಸ್ಪರ್ಧೆಗೆ ಬಿದ್ದವರಂತೆ ಮನಸೋ ಇಚ್ಛೆ ನಡೆಸುವ ವಿಶ್ಲೇಷಣೆಗಳು, ಪ್ರಸಾರ ಮಾಡುವ ಹೇಳಿಕೆಗಳು ಜನರ ಮಧ್ಯೆ ಕಂದಕ ಸೃಷ್ಟಿಸುತ್ತಿದೆ.
ಸಾಮಾಜಿಕ ಜಾಲತಾಣಗಳ ವಿಚಾರಣೆ (ಸೋಷಿಯಲ್ ಮೀಡಿಯಾ ಟ್ರಯಲ್) ಎನ್ನುವುದು ಪೊಲೀಸ್ ತನಿಖಾ ಪ್ರಕ್ರಿಯೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತಿರುವು ದಲ್ಲದೆ, ಆರೋಪಿಗಳನ್ನು ಅಪರಾಽಗಳು ಎಂದು ಗ್ರಹಿಸುವಂತೆಯೂ ಸಾರ್ವಜನಿಕರಿಗೆ ಪ್ರೇರೇಪಿಸು ತ್ತಿವೆ.
ಹೀಗಿದ್ದರೂ ಸ್ವತಂತ್ರ ಪತ್ರಕರ್ತರಾಗಿರುವ ದೇಶದ ವಿವಿಧ ಭಾಗಗಳ ಅದೆಷ್ಟೋ ವೃತ್ತಿಪರ ಯೂಟ್ಯೂಬರ್‌ಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾ, ಜನರಿಗೆ ಸ್ಪಷ್ಟ, ನಿಖರ ಜ್ಞಾನ ಹಂಚುತ್ತಿರುವುದನ್ನೂ ನಾವೆಲ್ಲ ನೋಡುತ್ತಿದ್ದೇವೆ. ಆದರೆ, ರಾತ್ರಿ- ಹಗಲಾಗುವುದರೊಳಗೆ ಜನಪ್ರಿಯರಾಗಬೇಕು ಮತ್ತು ಅದಕ್ಕಾಗಿ ಸುದ್ದಿಗಳನ್ನು ಬೆಂಕಿಉಂಡೆಗಳಂತೆ ಬಿಸಿಬಿಸಿಯಾಗಿ ಬಿತ್ತರಿಸಬೇಕೆಂಬ ಕೆಲ ಅರೆ ತುಂಬಿದ ಕೊಡಗಳಿಂದಾಗಿ ಸಮಾಜದಲ್ಲಿ ಪತ್ರಕರ್ತ ಸಮೂಹದ ಬಗ್ಗೆಯೇ ಅಸಹನೆ ಹೆಚ್ಚುತ್ತಿರುವುದು ಸುಳ್ಳಲ್ಲ.
2012ರಲ್ಲಿ ಸುಪ್ರೀಂಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ದಿವಂಗತ ಎಸ್.ಎಚ್. ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠದ ಎದುರು ‘ಮೀಡಿಯಾ ಟ್ರಯಲ್’ ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದ್ದಾಗ, ದೇಶದ ವಿವಿಧ ಕೋರ್ಟ್‌ಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದ ಕೆಲವು ಮಂದಿ, ‘ಮಾಧ್ಯಮಗಳಲ್ಲಿ ನಮ್ಮನ್ನು ದೋಷಿಗಳಂತೆ ಚಿತ್ರಸಲಾಗುತ್ತಿದೆ.
ಇಲ್ಲಸಲ್ಲದ ವರದಿಗಳು ಬಿತ್ತರವಾಗುತ್ತಿರುವುದರ ನೇರ ಪರಿಣಾಮವನ್ನು ನಾವು ಅನುಭವಿಸು ತ್ತಿದ್ದೇವೆ. ನ್ಯಾಯಸ್ಥಾನದ ವಿಚಾರಣೆಗೆ ಒಳಪಟ್ಟಿರುವ ಮೊಕದ್ದಮೆಗಳ ಬಗ್ಗೆ ಬಹುತೇಕ ಬಾರಿ ತಪ್ಪು ವರದಿಗಳೇ ಬಂದಿರುವುದು ಸಮಸ್ಯೆಗೆ ಸಿಲುಕಿಸಿವೆ’ ಎಂದು ದೂರು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹಿರಿಯ ನ್ಯಾಯವಾದಿ ಮತ್ತು ಮಾಜಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ‘ವಿಚಾರಣೆ ಹಂತದಲ್ಲಿರುವ ಪ್ರಕರಣಗಳನ್ನು ವರದಿ ಮಾಡುವ ಬಗ್ಗೆ ನಿಯಮಾವಳಿ ರಚಿಸುವ ಸಂಪೂರ್ಣ ಹಕ್ಕು ಸುಪ್ರೀಂಕೋರ್ಟ್‌ಗಿದೆ.
ಆ ಮೂಲಕ ಸಂವಿಧಾನದ 21ನೇ ವಿಧಿಯಲ್ಲಿ ಹೇಳಿರುವಂತೆ ವ್ಯಕ್ತಿಯೊಬ್ಬನ ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಕೋರ್ಟ್ ಎತ್ತಿಡಿಯಬೇಕು’ ಎಂದಿದ್ದರು. ಹಾಗೆಂದು ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಎತ್ತಿಹಿಡಿಯುವ ಉದ್ದೇಶದಿಂದಲೇ ಮಾಧ್ಯಮ ವರದಿಗಾರಿಕೆಗೆ ನಿಬಂಧ ಹೇರುವ ಕ್ರಮವನ್ನು ಸುಪ್ರೀಂಕೋರ್ಟ್ ಈವರೆಗೆ ಕೈಗೊಂಡಿಲ್ಲ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತಲೇ ಬಂದಿದೆ.
ಆದರೆ ಈ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮಿತಿ ಇರುತ್ತದೆ ಅಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮೂಲಭೂತವಾದರೂ, ಅದು ಸಂಪೂರ್ಣವಲ್ಲ ಮತ್ತು ಕೆಲವು ಮಿತಿಗಳೊಂದಿಗೆ ಬರುತ್ತದೆ. ಸಂವಿಧಾನದ 19(1)(ಎ) ವಿಧಿಯಿಂದ ಖಾತರಿಪಡಿಸಲ್ಪಟ್ಟಂತೆ, ಈ ಹಕ್ಕು ‘ಸಮಂಜಸವಾದ ನಿಬಂಧ’ಗಳಿಗೆ ಒಳಪಟ್ಟಿರುತ್ತದೆ.
ಸೂಕ್ಷ್ಮಾತಿ ಸೂಕ್ಷ್ಮ ಎನಿಸುವ ಕೆಲ ಕೇಸುಗಳ ಮಾಧ್ಯಮ ವಿಚಾರಣೆಯ ಬಗ್ಗೆ ವಿವಿಧ ನ್ಯಾಯಾಲಯ ಗಳಲ್ಲಿ ಹಲವು ಬಾರಿ ವಾದ-ಪ್ರತಿವಾದಗಳು ನಡೆದು, ತೀರ್ಪುಗಳೂ ಬಂದಿವೆ. ಅನಿವಾರ್ಯ ಸಂದರ್ಭಗಳಲ್ಲಿ ಮಾಧ್ಯಮಗಳ ವರದಿಗೆ ತಡೆ ತಂದಿರುವ ಉದಾಹರಣೆಯಿದೆ. ಆದರೆ ವ್ಯಕ್ತಿ ಮತ್ತು ಸಂಸ್ಥೆಗಳ ಘನತೆಯನ್ನು ಬೇಕಾಬಿಟ್ಟಿಯಾಗಿ ಹರಾಜಿಗೆ ಹಾಕುವ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವುದು ಹೇಗೆ..?
(ಲೇಖಕರು ಹಿರಿಯ ಪತ್ರಕರ್ತರು)