ಬಸವರಾಜ ಬೊಮ್ಮಾಯಿ
ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ
ಸ್ವತಂತ್ರ ಭಾರತದಲ್ಲಿ ಹಲವಾರು ಪ್ರಧಾನಮಂತ್ರಿಗಳು, ಮಂತ್ರಿಗಳು, ರಾಜಕಾರಣಿಗಳು, ನಾಯಕರು ಕಾಲಕಾಲಕ್ಕೆ ಬಂದು ಹೋಗಿದ್ದಾರೆ. ಆದರೆ, ಕೆಲವೇ ಕೆಲವು ಜನ ಭಾರತ ನಡೆದು ಬಂದ ದಾರಿ, ಅಭಿವೃದ್ಧಿ ಪಥದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದೆ ಉಳಿಸಿ ಹೋಗಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಲೋಕಮಾನ್ಯ ಬಾಲಗಂಗಾಧರನಾಥ ತಿಲಕ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಮಹಾತ್ಮಾ ಗಾಂಧಿ ಮೌಲ್ಯಾಧಾರಿತ ನಾಯಕತ್ವ ಕೊಟ್ಟರೆ, ಸ್ವತಂತ್ರ ನಂತರ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಜವಾಹರಲಾಲ್ ನೆಹರೂ, ವಲ್ಲಭಭಾಯಿ ಪಟೇಲ, ಲಾಲಬಹದ್ದೂರ ಶಾಸ್ತ್ರಿ, ಶ್ಯಾಮ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಹೆಜ್ಜೆ ಗುರುತುಗಳನ್ನು ಅಚ್ಚಳಿಯದೇ ಬಿಟ್ಟು ಹೋಗಿದ್ದಾರೆ.
ನವ ಭಾರತದ ನಿರ್ಮಾಣ ಇದು ಒಂದು ವಿಚಾರವಾಗಿ ಬಹಳ ವರ್ಷ ಭಾರತದ ನಾಗರಿಕರಲ್ಲಿ ಮೂಡಿತ್ತು. ನವ ಚಿಂತನೆಯ ಪ್ರಗತಿಯ ಅತ್ಯಂತ ಪ್ರಬಲ ಆರ್ಥಿಕತೆ, ಸಾಮಾಜಿಕ, ಸಮಾನತೆ, ಸರ್ವ ಜನಾಂಗದ ಏಳಿಗೆ, ಎಲ್ಲ ರಂಗದಲ್ಲೂ ಭಾರತ ನಂಬರ್ ಒನ್ ಇರಬೇಕು. ಬಡತನ, ಹಸಿವು, ನಿರುದ್ಯೋಗ ಸಮಸ್ಯೆ, ಸಂಪೂರ್ಣವಾಗಿ ಹೊಡೆದೋಡಿಸಬೇಕೆನ್ನುವ ಕಲ್ಪನೆ ನವಭಾರತದ ಕಲ್ಪನೆ. ಆದರೆ, ಇದನ್ನು ನನಸು ಮಾಡಲು ಯಾರೂ ಕೂಡ ಪ್ರಾಮಾಣಿಕ ಪ್ರಯತ್ನ ಮತ್ತು ಸಾಹಸ ಮಾಡಿರಲಿಲ್ಲ.
ಬದಲಾದ ಗುಜರಾತ್: 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರ ಹಲವಾರು ಪ್ರಯೋಗಗಳು ಯಶಸ್ಸು ಕಂಡವು. ನೀರಿನ ದಾಹದಿಂದ ಕಾಡುತ್ತಿದ್ದ ರಾಜ್ಯಕ್ಕೆ ಪ್ರತಿಯೊಬ್ಬರಿಗೂ ಕುಡಿಯುವ ನೀರು ಕೊಟ್ಟಿದ್ದು, ಗುಜರಾತ್‌ನ್ನು ವಿದ್ಯುತ್ ಸರಬರಾಜು ರಾಜ್ಯ ವಾಗಿ ಮಾಡಿರುವುದು, ನೀರಾವರಿ, ಕೈಗಾರಿಕೆ, ಮೂಲಸೌಕರ್ಯ ಒಟ್ಟಾರೆ ಗುಜರಾತ್ ಆರ್ಥಿಕತೆ ಬೆಳೆಸಿದ್ದು, ಗುಜರಾತ್ ನಲ್ಲಿ ಇರುವಂತಹ ಬುಡಕಟ್ಟು ಜನಾಂಗದ ಅಭಿವೃದ್ಧಿ, ಮುಸ್ಲಿಂ ಹೆಣ್ಣು ಮಕ್ಕಳ ಆರೋಗ್ಯ ಉತ್ತಮಗೊಳಿಸಿರುವುದು, ಕಛ್‌ನಲ್ಲಿ ಭೂಕಂಪ ಅದಾಗ ಜನರೊಂದಿಗೆ ನಿಂತು ಮರು ನಿರ್ಮಾಣ ಮಾಡಿದ್ದು ಕೆಲವೇ ಕೆಲವು ಉದಾಹರಣೆಗಳು.
ಇದನ್ನೂ ಓದಿ: Dr N Someshwara Column: ಅರೆಗಿವುಡರ ಬಾಳು ಬೆಳಗಿದ ಡಿಜಿಟಲ್ ಶ್ರವಣ ಸಾಧನಗಳು
2014ರಲ್ಲಿ ಹೊಸ ಆಶಾಭಾವನೆ: 2014 ರಲ್ಲಿ ಭಾರತ ದೇಶದ ಪ್ರಧಾನಿಯಾಗಲು ಪ್ರತಿಯೊಬ್ಬ ಭಾರತೀಯನ ಇಚ್ಚೆಯಂತೆ ಮೋದಿಯವರು ಪ್ರಧಾನಿಯಾದ ನಂತರ ಭಾರತದ ಆತ್ಮ ವಿಶ್ವಾಸ ವನ್ನು ಪ್ರತಿ ನಾಗರಿಕರಲ್ಲಿ ಆಶಾಕಿರಣ ಮೂಡಿಸಲು ಯಶಸ್ವಿಯಾದರು. ಭಾರತ ಪ್ರಬಲ ಆರ್ಥಿಕ ರಾಷ್ಟ್ರವಾಗಲು ಸಾಧ್ಯತೆಯ ಮಾರ್ಗವನ್ನು ಜನರಿಗೆ ಮನವರಿಕೆ ಮಾಡಲು ಯಶಸ್ವಿಯಾದರು. ಇದರಿಂದ ಎಲ್ಲ ರಂಗದಲ್ಲೂ ಭಾರತ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು.
ಆರ್ಥಿಕ ಅಭಿವೃದ್ಧಿ: 2014ಕ್ಕೂ ಮುಂಚೆ ಭಾರತವು ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದು ಹಣದುಬ್ಬರ ಶೇ.12% ರಷ್ಟು ಏರಿರುವಂಥದ್ದು ಕೇವಲ ಶೇ 12% ಜಿಡಿಪಿ ಮಾತ್ತ ಅಭಿವೃದ್ಧಿಗೆ ಖರ್ಚಾಗುತ್ತಿತ್ತು. ಬಹುತೇಕ ಬ್ಯಾಂಕುಗಳು ನಷ್ಟದ ದಾರಿ ಹಿಡಿದಾಗ ಅಭಿವೃದ್ಧಿಗೆ ಹಣದ ಕೊರತೆ, ಮತ್ತು ಭ್ರಷ್ಟಾ ಚಾರದ ಹಗರಣದಿಂದ ಕೂಡಿರುವ ಹಾಗೂ ನಿಷ್ಕ್ರಿಯ ಆಡಳಿತ ಭಾರತವನ್ನು ಹಿಂಜರಿತಕ್ಕೆ ದೂಡಿತ್ತು.
ಮೋದಿಯವರು ತಮ್ಮ ದಕ್ಷ ಆಡಳಿತದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಶೇ.22% ರಷ್ಟು ಜಿಡಿಪಿ ಹಣ ಅಭಿವೃದ್ಧಿಗೆ, ಆಸ್ತಿ ಮಾಡಲು ಹೆಚ್ಚಿಸಿ ಹಣದುಬ್ಬರವನ್ನು ಶೇ.5% ಕ್ಕೆ ಇಳಿಸಿ ಎಲ್ಲ ಬ್ಯಾಂಕ್ ಗಳು ಲಾಭದಾಯಕವಾಗಿ ಜಿಎಸ್‌ಟಿಯನ್ನು ಅನುಷ್ಠಾನ ಮಾಡಿ, ಒಂದೂವರೆ ಲಕ್ಷ ಕೋಟಿಗೂ ಹೆಚ್ಚು ಪ್ರತಿ ತಿಂಗಳು ಜಿಎಸ್‌ಟಿ ಸಂಗ್ರಹ ಮಾಡಿ, 596 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆ, ದಾಖಲೆ ಪ್ರಮಾಣದ ಶೇ. 7-8 % ಆರ್ಥಿಕ ಬೆಳವಣಿಗೆ, ಅತಿ ದೊಡ್ಡ ಬಜೆಟ್ ಗಾತ್ರಗಳ ಮುಖಾಂತರ ಆರ್ಥಿಕ ಸದೃಢತೆಯನ್ನು ತಂದಿದ್ದಾರೆ.
ಕೃಷಿಗೆ ಉತ್ತೇಜನ: ಬಡವರ, ದೀನದಲಿತರ ಪರ ಆಡಳಿತ ಕೊಡಲು ಸಾಧ್ಯವಾಯಿತು. ಸುಮಾರು 1 ಲಕ್ಷ 27 ಸಾವಿರ ಕೋಟಿ ಕೃಷಿ ಬಜೆಟ್, ಸುಮಾರು ಮೂರು ಲಕ್ಷಕೋಟಿಯಲ್ಲಿ 11 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಮುಖಾಂತರ 7.3 ಕೋಟಿ ರೈತರಿಗೆ ಕಡಿಮೆ ಬಡ್ಡಿಯ ಸಾಲ, 83 ಲಕ್ಷ ಮಹಿಳಾ ಸಂಘಗಳಿಗೆ 8 ಲಕ್ಷ ಕೋಟಿ ರು. ಸಾಲದ ಸಹಾಯ, ಒಂದು ಕೋಟಿ ಲಕ್‌ಪತಿ ದೀದಿ ಯೋಜನೆಯ ಲಾಭ, 12 ಕೋಟಿಗಿಂತ ಹೆಚ್ಚು ಶೌಚಾಲಯಗಳು ಶೇ 75% ಶಾಲೆಗಳಿಗೆ ಶೌಚಾಲಯ, 31 ಕೋಟಿ ಹೆಣ್ಣು ಮಕ್ಕಳಿಗೆ ಮುದ್ರಾ ಸಾಲ ಸೇರಿ ಹತ್ತು ಹಲವಾರು ಯೋಜನೆಗಳನ್ನು ಜಾರಿ ಮಾಡಿದರು.
ರಸ್ತೆಗಳ ಸುಧಾರಣೆ: ಪ್ರತಿ ದಿನ ಸುಮಾರು 30 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ, ಕಳೆದ ಹತ್ತು ವರ್ಷದಲ್ಲಿ 28 ಸಾವಿರ ಕೀ. ಮಿ. ರಾಷ್ಟ್ರೀಯ ಹೆzರಿ ಹೊಸದಾಗಿ ನಿರ್ಮಾಣವಾಗಿದೆ. 3 ಲಕ್ಷ 72 ಸಾವಿರ ಹೊಸ ಹಳ್ಳಿಗಳಿಗೆ ರಸ್ತೆ, ಅದೇ ರೀತಿ ರೈಲ್ವೆಯಲ್ಲಿ ಬಹುತೇಕ ಎಲೆಕ್ಟ್ರಿಕ್, 500ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು, ಸಾವಿರಾರು ಹೊಸ ರೈಲು ಸಂಪರ್ಕ ಮತ್ತು 70ಕ್ಕಿಂತ ಹೆಚ್ಚು ಹೊಸ ವಿಮಾನ ನಿಲ್ದಾಣ ಹೀಗೆ ಎಲ್ಲ ರಂಗದಲ್ಲಿ ಅಭಿವೃದ್ಧಿ ಮಾಡಿರುವುದು ಸಾಕ್ಷಿ ಇದೆ.
ಡಿಜಿಟಲ್‌ನಲ್ಲಿ ಭಾರತ ನಂಬರ್ ಒನ್: ಅದೇ ರೀತಿ ಡಿಜಿಟಲ್ ನಲ್ಲಿ ಭಾರತ ನಂಬರ್ ಒನ್ ಸ್ಥಾನದಲ್ಲಿದೆ. ಮೊಬೈಲ್ ಉತ್ಪಾದನೆ ಸ್ಟೀಲ್ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೆ ದಾಖಲೆಯ 6 ಲಕ್ಷ ಕೋಟಿ ರಕ್ಷಣಾ ಬಜೆಟ್ ಒಂದು ಕೋಟಿಗಿಂತ ಹೆಚ್ಚು ಆತ್ಮನಿರ್ಭರದಲ್ಲಿ ಡಿಫೆನ್ಸ್ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗಿದೆ. ಇದರಿಂದ ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆ ಸುವ್ಯವಸ್ಥೆಯಲ್ಲಿದೆ. ಭಯೋತ್ಪಾದನೆ ಹತೋಟಿಗೆ ತಂದಿರುವುದು, ನಕ್ಷಲ್ ಸಮಸ್ಯೆ ಬಹುತೇಕ ಬಗೆ ಹರಿಸಿರುವುದು. ಎಲ್ಲ ರಾಜ್ಯಗಳಿಗೆ ಆರ್ಥಿಕ ವಲಯದಲ್ಲಿ ಶೇ.40% ಅವರ ಪಾಲು ಕೊಟ್ಟಿರುವುದು ಅತ್ಯಂತ ಗಮನಾರ್ಹ.
ಹೀಗೆ ಪ್ರಮುಖ ನಿರ್ಣಯಗಳ ಮುಖಾಂತರ ಮೋದಿಯವರು ಭಾರತವನ್ನು ಮುನ್ನಡೆಸಿರುವುದಕ್ಕೆ ಸಾಕ್ಷಿ. ಯಾವುದೇ ರೀತಿಯ ಪ್ರಭಾವ ಹಿನ್ನೆಲೆ ಇಲ್ಲದ ವ್ಯಕ್ತಿ ಮೂರು ಬಾರಿ ರಾಷ್ಟ್ರದ ಚುನಾವಣೆ ಗೆದ್ದು ಪ್ರಧಾನಿಯಾಗಿ, ವಿಶ್ವನಾಯಕರಾಗಿ ಬೆಳೆದಾಗ ಸಹಜವಾಗಿ ಅವರ ಬಗ್ಗೆ ಅಸೂಯೆ, ಅಪಪ್ರಚಾರ ಇರುತ್ತದೆ. ಅದರಲ್ಲಿಯೂ ಪ್ರಮುಖ ವಿರೋಧ ಪಕ್ಷ ನಿರಂತರ ಚುನಾವಣೆಯಲ್ಲಿ ಸೋತು ಹತಾಶೆಗೊಂಡು ವೈಯಕ್ತಿಕ ಕೀಳು ಮಟ್ಟದ ಟೀಕೆ ಮಾಡಿ, ಜನರು ಆಯ್ಕೆ ಮಾಡಿರುವ ಪ್ರಜಾಪ್ರಭುತ್ವದ ರೀತಿಯಲ್ಲಿ ಚುನಾವಣೆ ಗೆದ್ದಿರುವ ಮೋದಿಯವರ ಗೆಲುವಿನ ವಿಶ್ವಾಸಾರ್ಹತೆ ಯನ್ನು ಕಡಿಮೆಗೊಳಿಸಲು ಸಂವಿಧಾನದಿಂದ ನಿರ್ಮಿತವಾಗಿರುವ ವ್ಯವಸ್ಥೆಯ ಬಗ್ಗೆ ಸಂಶಯ ಬರುವ ರೀತಿಯಲ್ಲಿ ದೇಶದಲ್ಲಿ ಅರಾಜಕತೆ ಮೂಡಿಸುತ್ತಿರುವ ಪ್ರಯತ್ನವನ್ನು ಮೋದಿಯವರು ತಮ್ಮ ಪ್ರಾಮಾಣಿಕ, ದಕ್ಷ ಆಡಳಿತ ಹಾಗೂ ಸಚ್ಚಾರಿತ್ರ್ಯ, ಸತ್ಯ ದೇಶಭಕ್ತಿಯ ವ್ಯಕ್ತಿತ್ವದಿಂದ ಅತ್ಯಂತ ಪ್ರಬಲವಾಗಿ ಎದುರಿಸಿ ಮುನ್ನುಗ್ಗುತ್ತಿದ್ದಾರೆ.
ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬ ಭಾರತೀಯ ಮೋದಿಯವರ ದೂರದೃಷ್ಟಿ, ಅನುಷ್ಠಾನದ ವೇಗ, ಸಾಧಿಸುವ ಛಲ ಇರುವ ಯಶಸ್ವಿ ನಾಯಕತ್ವಕ್ಕೆ ಅವರಿಗೆ ಬೆಂಬಲ ಕೊಟ್ಟು ಅವರ ಜತೆ ನಿಲ್ಲುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಭಾವಿಸುತ್ತೇನೆ. ಮೋದಿಯವರ ಏಕ್ ಭಾರತ ಶ್ರೇಷ್ಠ ಭಾರತ ರಥ ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ.