ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safari begins: ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿ ಪುನರಾರಂಭಿಸುವಂತೆ ಸೂಚನೆ ನೀಡಿ ತಿಂಗಳು ಕಳೆದರೂ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಸುಳಿವನ್ನು ನೀಡಿಲ್ಲ. ತಾಂತ್ರಿಕ ಸಮಿತಿ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಈಶ್ವರ್ ಖಂಡ್ರೆ ಹೇಳಿದ್ದರು.

ರಂಜಿತ್ ಎಚ್.ಅಶ್ವತ್ಥ, ಬೆಂಗಳೂರು

ಸಫಾರಿ ಆರಂಭಿಸಲು ಕಿರಿಯ-ಹಿರಿಯ ಅಧಿಕಾರಿಗಳು ಒಪ್ಪಿದರೂ ಅರಣ್ಯ ಸಚಿವ ರಿಂದ ಮೀನಮೇಷ

ಸಾಮಾನ್ಯವಾಗಿ ದೇವರು ವರ ಕೊಟ್ಟರೂ, ಪೂಜಾರಿಗಳು ಕೊಡುವುದಿಲ್ಲ ಎನ್ನುವುದು ವಾಡಿಕೆ. ಆದರೆ ಸಫಾರಿ ನಿರ್ಬಂಧದ ವಿಷಯದಲ್ಲಿ, ಪೂಜಾರಿಗಳೆಲ್ಲ (ಅಧಿಕಾರಿಗಳು) ವರ ಕೊಟ್ಟರೂ ದೇವರು (ಸಚಿವರು) ಮಾತ್ರ ಮೌನವಾಗಿರುವುದು ಪ್ರವಾಸೋದ್ಯಮ ಕ್ಷೇತ್ರ ವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿ ಪುನರಾರಂಭಿಸುವಂತೆ ಸೂಚನೆ ನೀಡಿ ತಿಂಗಳು ಕಳೆದರೂ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಸುಳಿವನ್ನು ನೀಡಿಲ್ಲ. ತಾಂತ್ರಿಕ ಸಮಿತಿ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಈಶ್ವರ್ ಖಂಡ್ರೆ ಹೇಳಿದ್ದರು.

ಆದರೀಗ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರವಲ್ಲದೇ, ತಾಂತ್ರಿಕ ಸಮಿತಿ ಸದಸ್ಯರೂ ಸಹ ಸಫಾರಿಗೂ ಈ ಹುಲಿ ದಾಳಿಗಳಿಗೂ ಸಂಬಂಧವಿಲ್ಲ. ಆದ್ದರಿಂದ ಪುನರಾರಂಭಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ. ಬೇಕಿದ್ದರೆ, ಹಂತ-ಹಂತವಾಗಿ ಸಫಾರಿ ಆರಂಭಿಸಿಕೊಳ್ಳೋಣ ಎನ್ನುವ ಶಿಫಾರಸನ್ನು ಮಾಡಲಾಗಿದೆ.

ಈ ಶಿಫಾರಸು ಈಗಾಗಲೇ ಅರಣ್ಯ ಭವನದಿಂದ ಸಚಿವರ ಕಚೇರಿಗೆ ಹೋಗಿ ವಾರಗಳೇ ಕಳೆದರೂ, ಮುಂದೇನು ಮಾಡಬೇಕು ಎನ್ನುವ ಸೂಚನೆ ಅಧಿಕಾರಿಗಳಿಗೆ ನೀಡಿಲ್ಲ ಎನ್ನುವ ಮಾತುಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಬಾಯಲ್ಲಿ ಕೇಳಿ ಬರುತ್ತಿದೆ.

ಇದನ್ನೂ ಓದಿ: Safari Bandh: ಸಾಂಸ್ಕೃತಿಕ ರಾಜಧಾನಿಗೂ ತಟ್ಟಿದ ‌ʼಸಫಾರಿ ಬಂದ್‌ʼ ಎಫೆಕ್ಟ್

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಈಗಲೇ ಸಫಾರಿ ಆರಂಭಿಸುವುದಕ್ಕೆ ಯಾವುದೇ ಸಮಸ್ಯೆಯಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಆದರೆ ಯಾವಾಗ ಸಫಾರಿಯನ್ನು ಆರಂಭಿಸಬೇಕು ಎನ್ನುವುದನ್ನು ತಾನು ತೀರ್ಮಾನಿಸುವುದಾಗಿ ಸಚಿವರು ಹೇಳಿರುವು ದರಿಂದ, ಅವರ ಸೂಚನೆಗೆ ಕಾಯುತ್ತಿದ್ದೇವೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಹಿರಿಯ ಅಧಿಕಾರಿಗಳು ಇದೇ ವಿಷಯವನ್ನು ಸ್ಥಳೀಯ ಅಧಿಕಾರಿಗಳಿಗೂ ರವಾನಿಸಿದ್ದು, ರೆಸಾರ್ಟ್ ಮಾಲೀಕರಿಗೆ ರವಾನಿಸಿದ್ದಾರೆ. ಆದರೆ ರೆಸಾರ್ಟ್ ಮಾಲೀಕರು ಯಾವಾಗ ಆರಂಭವಾಗಲಿದೆ ಎನ್ನುವ ಪ್ರಶ್ನೆಗಳಿಗೆ ಮಾತ್ರ ಸೂಕ್ತ ಸ್ಪಂದನೆ ನೀಡದಿರುವುದರಿಂದ ರೆಸಾರ್ಟ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಮುಹೂರ್ತ ಹುಡುಕುತ್ತಿದ್ದಾರೆಯೇ ಸಚಿವರು? ಪ್ರವಾಸೋದ್ಯಮ, ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರ ತಜ್ಞರು, ಪ್ರವಾಸೋದ್ಯಮದಲ್ಲಿರುವ ವಿವಿಧ ತಜ್ಞರು, ಸ್ಥಳೀಯ ರೆಸಾರ್ಟ್ ಮಾಲೀಕರು ಸೇರಿದಂತೆ ಎಲ್ಲರೂ ಸಫಾರಿ ನಿಲ್ಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಆರಂಭಿಸುವುದೇ ಸೂಕ್ತ ಎನ್ನುವ ಸ್ಪಷ್ಟ ಸಲಹೆಯನ್ನು ನೀಡಿದ್ದಾರೆ.

ಇದನ್ನೂ ಓದಿ: SAFARI: ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಇದರೊಂದಿಗೆ ಸ್ವತಃ ಮುಖ್ಯಮಂತ್ರಿಗಳೇ ಸಫಾರಿ ಆರಂಭಿಸುವಂತೆ ಸೂಚನೆ ನೀಡಿದ್ದರೂ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಫಾರಿ ಆರಂಭಿಸಲು ದಿನಾಂಕ ನಿಗದಿಪಡಿಸದಿರುವುದಕ್ಕೆ ಕಾರಣವೇನು? ಯಾವ ಶುಭ ಮುಹೂರ್ತಕ್ಕಾಗಿ ಸಚಿವರು ಕಾಲದೂಡುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಶುರುವಾಗಿದೆ.

ಅರಣ್ಯ ಇಲಾಖೆಯ ಅವೈeನಿಕ ತೀರ್ಮಾನದಿಂದ ಈಗಾಗಲೇ ನಾಲ್ಕು ತಿಂಗಳ ಸಫಾರಿ ಹಾಗೂ ಪ್ರವಾಸೋದ್ಯಮದ ಆದಾಯ ಖೋತಾ ಆಗಿದೆ. ಈಗಲಾದರೂ ಅನುಮತಿ ನೀಡಿದರೆ, ಇಷ್ಟು ದಿನದ ನಷ್ಟದಲ್ಲಿ ಸ್ವಲ್ವವನ್ನಾದರೂ ಸರಿದೂಗಿಸಬಹುದು. ಆದರೆ ಅರಣ್ಯ ಸಚಿವರು ಮೊಂಡಾಟಕ್ಕೆ ಬಿದ್ದು ಸಫಾರಿ ನಿರ್ಬಂಧ ಮುಂದುವರಿಸಿದರೆ ಮುಂದಿನ ಒಂದು ವರ್ಷಗಳ ಕಾಲ ನಷ್ಟದಲ್ಲಿಯೇ ರೆಸಾರ್ಟ್ ನಡೆಸಬೇಕು ಎನ್ನುವುದು ರೆಸಾರ್ಟ್ ಮಾಲೀಕರ ಆತಂಕವಾಗಿದೆ. ಈ ಆತಂಕವನ್ನು ಇನ್ನಾದರೂ, ಅರಣ್ಯ ಇಲಾಖೆ ಅರ್ಥ ಮಾಡಿಕೊಳ್ಳುವುದೇ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.

ರೆಸಾರ್ಟ್ ಮಾಲೀಕರಿಗೆ ಇಕ್ಕಟ್ಟು

ಸಫಾರಿ ನಿರ್ಬಂಧದ ತೀರ್ಮಾನದಿಂದ ಬಂಡೀಪುರ ಹಾಗೂ ನಾಗರಹೊಳೆ ಸುತ್ತಮುತ್ತ ಒತ್ತಡ ಹೆಚ್ಚಾಗುತ್ತಿದೆ. ಸ್ಥಳೀಯರಿಗೆ ಕೆಲಸ ಹೋಗುವ ಆತಂಕ ಇರುವುದರಿಂದ, ಆರ್‌ಎಫ್ಒ, ಎಸಿಎಫ್ ಸೇರಿದಂತೆ ಸ್ಥಳೀಯರ ಅರಣ್ಯ ಅಧಿಕಾರಿಗಳಿಂದ ಹಿಡಿದು ಬೆಂಗಳೂರಿನ ಹಿರಿಯ ಅಧಿಕಾರಿಗಳವರೆಗೆ ಸಫಾರಿ ಆರಂಭಿಸಬೇಕು ಎನ್ನುವ ಒತ್ತಡ ಹೆಚ್ಚಾಗುತ್ತಿದೆ.

ಮೂಲಗಳ ಪ್ರಕಾರ, ಸ್ಥಳೀಯ ಅಧಿಕಾರಿಗಳು ರೆಸಾರ್ಟ್ ಹಾಗೂ ಹೋಮ್ ಸ್ಟೇ ಮಾಲೀಕ ರಿಗೆ, ಶೀಘ್ರವೇ ಸಫಾರಿ ಆರಂಭವಾಗಲಿದೆ. ಆದರೆ ಯಾವಾಗ ಎನ್ನುವುದು ನಿರ್ಧಾರವಾಗಿಲ್ಲ ಎನ್ನುವ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ಕಳೆದ ನಾಲ್ಕು ತಿಂಗಳಿನಿಂದ ನಿರ್ಬಂಧ ವಿಧಿಸಿರುವುದರಿಂದ, ಸ್ಥಳೀಯರಿಗೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಯಾವುದೇ ಭರವಸೆ ಉಳಿದಿಲ್ಲ. ಕೆಲ ರೆಸಾರ್ಟ್ ಮಾಲೀಕರು, ಫೆಬ್ರವರಿ ಕೊನೆಯವರೆಗೆ ನೋಡಿ ಬಳಿಕ ರೆಸಾರ್ಟ್‌ಗಳನ್ನೇ ಮುಚ್ಚುವುದಾಗಿ ಹೇಳಿಕೊಂಡಿದ್ದಾರೆ.

ರಂಜಿತ್​ ಎಚ್​ ಅಶ್ವತ್ಥ್

View all posts by this author