ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Safari Begins today: ಇಂದಿನಿಂದಲೇ ಸಫಾರಿ ಶುರು

ಗುರುವಾರದಿಂದ ಹಂತ-ಹಂತವಾಗಿ ಸಫಾರಿ ಆರಂಭಿಸುವುದಾಗಿ ಘೋಷಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಫಾರಿಯಿಂದ ಸಂದಾಯವಾಗುವ ಆದಾಯದ ಒಂದು ಭಾಗವನ್ನು ಸ್ಥಳೀಯ ಅಭಿ ವೃದ್ಧಿಗೆ ಬಳಸಲಾಗುವುದು ಎಂದು ಹೇಳುವ ಮೂಲಕ ಸ್ಥಳೀಯರನ್ನು ‘ಸಂತೈಸುವ’ ಕಾರ್ಯ ಮಾಡಿದೆ.

ಬೆಂಗಳೂರು: ವಿಶ್ವಮಟ್ಟದಲ್ಲಿ ಕರ್ನಾಟಕ ಪ್ರವಾಸೋದ್ಯಮ ಪ್ರಮುಖ ಆಕರ್ಷಣೆ ಯಾಗಿದ್ದ ನಾಗರಹೊಳೆ, ಬಂಡೀಪುರ ಸಫಾರಿ ಆರಂಭಿಸಬೇಕೆಂಬ ತೀವ್ರ ಒತ್ತಡಕ್ಕೆ ಮಣಿದಿರುವ ಅರಣ್ಯ ಇಲಾಖೆ ಗುರುವಾರ ದಿಂದಲೇ (ಫೆ.19) ಸಫಾರಿ ಆರಂಭಿಸುವುದಾಗಿ ಘೋಷಿಸಿದೆ.

ಹೆಡಿಯಾಳ ಸುತ್ತಮುತ್ತಲಿನ ಭಾಗದಲ್ಲಿ ನಿರಂತರ ಹುಲಿ ದಾಳಿ ನಡೆದಿದ್ದನ್ನು ಮುಂದಿಟ್ಟು ಕೊಂಡು ಸಫಾರಿ ನಿರ್ಬಂಧಿಸಿದ್ದ ಅರಣ್ಯ ಇಲಾಖೆ ಕೊನೆಗೂ, ಸಫಾರಿಗೂ ಹುಲಿಗಳ ದಾಳಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ.

ಗುರುವಾರದಿಂದ ಹಂತ-ಹಂತವಾಗಿ ಸಫಾರಿ ಆರಂಭಿಸುವುದಾಗಿ ಘೋಷಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಫಾರಿಯಿಂದ ಸಂದಾಯವಾಗುವ ಆದಾಯದ ಒಂದು ಭಾಗ ವನ್ನು ಸ್ಥಳೀಯ ಅಭಿ ವೃದ್ಧಿಗೆ ಬಳಸಲಾಗುವುದು ಎಂದು ಹೇಳುವ ಮೂಲಕ ಸ್ಥಳೀಯ ರನ್ನು ‘ಸಂತೈಸುವ’ ಕಾರ್ಯ ಮಾಡಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಬಂಡೀಪುರ ಅರಣ್ಯ ಭಾಗದಲ್ಲಿ ಮಾನವ-ಹುಲಿ ಸಂಘರ್ಷ ಹೆಚ್ಚಾದ ಬಳಿಕ, ಈ ದಾಳಿಗಳನ್ನು ಸಫಾರಿಗೆ ಲಿಂಕ್ ಮಾಡಿ ‘ಅವೈಜ್ಞಾನಿಕ’ ತೀರ್ಮಾನ ವನ್ನು ಅರಣ್ಯ ಇಲಾಖೆ ತಗೆದುಕೊಂಡಿತ್ತು. ಇದರಿಂದಾಗಿ ಬಂಡೀಪುರ, ನಾಗರಹೊಳೆ ಭಾಗಕ್ಕೆ ಪ್ರವಾಸಿಗರ ಸಂಖ್ಯೆ ತೀವ್ರ ಕುಸಿತ ಕಂಡು ನಿತ್ಯ 25 ಲಕ್ಷ ರು.ಗಳಿಗೂ ಹೆಚ್ಚು ನಷ್ಟವಾಗಲು ಶುರುವಾಗಿತ್ತು.

ಇದನ್ನೂ ಓದಿ: Safari begins: ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಇದರೊಂದಿಗೆ ಬಂಡೀ ಪುರ, ನಾಗರಹೊಳೆ ಸುತ್ತಮುತ್ತಲಿನ ಸುಮಾರು ಎರಡರಿಂದ ಎರಡುವರೆ ಸಾವಿರ ಕುಟುಂಬಕ್ಕೆ ಆಧಾರವಾಗಿದ್ದ ಪ್ರವಾಸೋದ್ಯಮ ಏಕಾಏಕಿ ಸ್ಥಗಿತ ವಾಗಿದ್ದರಿಂದ ಕುಟುಂಬಗಳು ಬೀದಿಗೆ ಬರುವ ಆತಂಕವಿತ್ತು.

ಸಫಾರಿ ನಿರ್ಬಂಧದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅರಣ್ಯ ಇಲಾಖೆಗೆ ಕೂಡಲೇ ಸಫಾರಿ ಆರಂಭಿಸುವಂತೆ ಸೂಚನೆ ನೀಡಿದ್ದರು, ತಾಂತ್ರಿಕ ಸಮಿತಿಯ ವರದಿಯ ನೆಪದಲ್ಲಿ ಒಂದುವರೆ ತಿಂಗಳು ಕಳೆದ ಇಲಾಖೆ ಇದೀಗ, ಸಫಾರಿಗೂ ಹುಲಿ ದಾಳಿಗೂ ಸಂಬಂಧವಿಲ್ಲವೆಂದು ಹೇಳಿ ಸಫಾರಿ ಆರಂಭಿಸಲು ಮುಂದಾಗಿದೆ.

ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ: ಸಫಾರಿ ಆರಂಭಿಸಬೇಕು ಎನ್ನುವ ಒತ್ತಡ ಎಲ್ಲೆಡೆಯಿಂದ ಅರಣ್ಯ ಇಲಾಖೆ ಮೇಲೆ ಶುರುವಾಗಿದ್ದರಿಂದ ಸಚಿವ ಈಶ್ವರ್ ಖಂಡ್ರೆ ಅವರು ಬುಧವಾರ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ, ಹಂತ-ಹಂತವಾಗಿ ಸಫಾರಿ ಯನ್ನು ಆರಂಭಿಸಲು ತೀರ್ಮಾನಿಸಿದ್ದಾರೆ.

ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋ ದ್ಯಮದ ಧಾರಣಾ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿ ಪಡಿಸಲು ರಚಿಸಲಾಗಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಾಂತ್ರಿಕ ಸಮಿತಿ ನೀಡಿರುವ ಪ್ರಾಥಮಿಕ ವರದಿಯ ಆಧಾರದಲ್ಲಿ ಈ ತೀರ್ಮಾನ ಕೈಗೊಂಡಿರುವು ದಾಗಿ ಘೋಷಿಸಿದ್ದಾರೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವವೂ ಉಳಿಯಬೇಕು, ಮಾಧ್ಯಮಗಳಲ್ಲಿ ಸಫಾರಿ ಪುನಾರಂಭಿಸಬೇಕು ಎನ್ನುವ ವರದಿಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಸಫಾರಿಯನ್ನು ನಿಯಂತ್ರಿತವಾಗಿ ಮತ್ತು ಹಂತಹಂತವಾಗಿ ಪುನರಾರಂಭ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಿ ತೀರ್ಮಾನಿಸಲಾಗಿದೆ.

ಟ್ರಿಪ್, ಸಮಯ ಮತ್ತು ವಾಹನ ಸಂಖ್ಯೆಯಲ್ಲಿ ಕಡಿತ ಮಾಡಿ ಸಫಾರಿ ಪುನಾರಂಭಕ್ಕೆ ಸಮ್ಮತಿಸಲಾಗಿದೆ. ಈ ಹಿಂದೆ ಬಂಡೀಪುರದಲ್ಲಿ 8 ಗಂಟೆಗಳ ಕಾಲ ಸಫಾರಿ ನಡೆಯುತ್ತಿತ್ತು. ಈಗ ಅದನ್ನು 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿಸ ಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಫಾರಿಯಲ್ಲಿ ಆಗಿರುವ ಬದಲಾವಣೆ ಏನು?

ಬಂಡೀಪುರದಲ್ಲಿ ಎಂಟು ಗಂಟೆಗಳ ಕಾಲ ನಡೆಯುತ್ತಿದ್ದ ಸಫಾರಿ ಐದು ಗಂಟೆಗೆ ಇಳಿಕೆ

ಸುಂಕದಕಟ್ಟೆಯಲ್ಲಿ ಆರು ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಸಫಾರಿಗೆ ಅನುಮತಿ

ಮೊದಲ ಹಂತದಲ್ಲಿ ಶೇ.50ರಷ್ಟು ವಾಹನಗಳನ್ನು ಮಾತ್ರ ಬಳಸಲು ತೀರ್ಮಾನ

ಮುಂದಿನ ಎರಡು ತಿಂಗಳಲ್ಲಿ ಸಫಾರಿ ವಾಹನಗಳಿಗೆ ಜಿಪಿಎಸ್, ಡ್ಯಾಶ್‌ಕ್ಯಾಮ್ ಅಳವಡಿಕೆ

ಸಫಾರಿಯಿಂದ ಬರುವ ಆದಾಯದ ಒಂದು ಭಾಗ

ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ಬಳಕೆ

ಸಫಾರಿ ಸ್ಥಗಿತದಿಂದ ಆಗಿದ್ದ ಸಮಸ್ಯೆಯೇನು?

ಬುಕ್ಕಿಂಗ್ ರದ್ದು ಮಾಡಿದ್ದ ಪ್ರವಾಸಿಗರು, ಕೋಟಿ ಕೋಟಿ ಹಣ ಸುರಿದಿದ್ದ ರೆಸಾರ್ಟ್ ಮಾಲೀಕರಿಗೆ ಭಾರಿ ನಷ್ಟ

ಬಂಡೀಪುರ, ನಾಗರಹೊಳೆ ಸುತ್ತಮುತ್ತಲ 2500ಕ್ಕೂ ಹೆಚ್ಚು ಜನರ ಉದ್ಯೋಗಕ್ಕೆ ಕತ್ತರಿ ಆತಂಕ

ಸಫಾರಿ ಸ್ಥಗಿತಗೊಂಡ ದಿನದಿಂದ ನಿತ್ಯ 25 ಲಕ್ಷ ರು. ನಷ್ಟ ಅನುಭವಿಸಿದ್ದ ಸ್ಥಳೀಯ ಪ್ರವಾಸೋದ್ಯಮ

ಸಫಾರಿ ಪುನಾರಾರಂಭವಾಗದಿದ್ದರೆ ಕರ್ನಾಟಕ ಪ್ರವಾಸೋದ್ಯಮದ ಸಂಸ್ಕೃತಿಗೆ ಧಕ್ಕೆ ಯಾಗುವ ಆತಂಕ

ಸಫಾರಿ ರದ್ದು ಹಿನ್ನೆಲೆಯಲ್ಲಿ ನೆರೆ ರಾಜ್ಯದ ವಯನಾಡು, ಮದುಮಲೈನಲ್ಲಿ ಹೆಚ್ಚಿದ ಪ್ರವಾಸಿಗರ ಸಂಖ್ಯೆ

ನಿರಂತರ ವರದಿ ಮಾಡಿದ ವಿಶ್ವವಾಣಿ

ಕಳೆದ ವರ್ಷ ನ.8ರಂದು ಅರಣ್ಯ ಇಲಾಖೆ ಬಂಡೀಪುರ, ನಾಗರಹೊಳೆ ಸಫಾರಿ ನಿರ್ಬಂಧಿಸಿತ್ತು. ಸಿಎಂ ಸೂಚನೆ ಬಳಿಕವೂ ‘ತಾಂತ್ರಿಕ’ ವರದಿಯ ನೆಪದಲ್ಲಿ ಅರಣ್ಯ ಇಲಾಖೆ ಸಫಾರಿ ಆರಂಭಿಸುವುದನ್ನೂ ಮುಂದೂಡುತ್ತಲೇ ಬಂದಿತ್ತು. ಇದರಿಂದ ಬಂಡೀಪುರ, ನಾಗರಹೊಳೆ ಮಾತ್ರವಲ್ಲದೇ ಮೈಸೂರು ಸುತ್ತಮುತ್ತಲೂ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿರುವ ಬಗ್ಗೆ ವಿಶ್ವವಾಣಿ ಫೆ.9ರಿಂದ ನಿರಂತರವಾಗಿ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು, ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೇ ರಾಜ್ಯ, ಅಂತಾರಾಜ್ಯ ಮಟ್ಟದಿಂದಲೂ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಫಾರಿ ಪುನರಾರಂಭಿಸುವ ತೀರ್ಮಾನವನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ತೆಗೆದುಕೊಂಡಿದ್ದಾರೆ.

*

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶೇ.8ರಷ್ಟು, ನಾಗರಹೊಳೆ ಪ್ರದೇಶದ ಶೇ.7.5ರಷ್ಟು ಅರಣ್ಯ ಪ್ರದೇಶವನ್ನು ಮಾತ್ರ ಸಫಾರಿಗೆ ಬಳಸಿಕೊಳ್ಳಲಾಗಿದೆ. ಆದ್ದರಿಂದ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂದು ಹೇಳಲು ಯಾವುದೇ ವೈeನಿಕ ಆಧಾರವಿಲ್ಲ ಎಂದು ತಾಂತ್ರಿಕ ಸಮಿತಿ ವರದಿ ನೀಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸುವ ಷರತ್ತಿನೊಂದಿಗೆ ಸಫಾರಿ ಆರಂಭಿಸಲು ಸಮ್ಮತಿಸಲಾಗಿದೆ.

- ಈಶ್ವರ್ ಖಂಡ್ರೆ, ಅರಣ್ಯ ಸಚಿವ