ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶ ಕಂಡ ದಕ್ಷತೆಯ ಆಡಳಿತಗಾರ

ಶಿಸ್ತು, ಬದ್ಧತೆ, ಸಂಘಟನೆಯನ್ನು ತಪ್ಪಸ್ಸಿನ ರೀತಿಯಲ್ಲಿ ನೋಡುವ ಹಾಗೂ ಮಾತೃನೆಲದ ಮಹತ್ವ ತಿಳಿಸಿಕೊಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಸಂಪರ್ಕಕ್ಕೆ ಬರುವ ದೇಶಪ್ರೇಮಿ ಯುವ ಜನರಿಗೆ ತಪೋಭೂಮಿಯಾಗಿದೆ. ಇಂಥ ಪುಣ್ಯಭೂಮಿಯಲ್ಲಿ ಬೆಳೆದ ಅಪರೂಪದ ಸಂಘಟನಾ ಶಿಲ್ಪಿ ಹಾಗೂ ಮಹಾನ್ ಶಕ್ತಿ ನರೇಂದ್ರ ಮೋದಿಯವರು.

ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು

ಸಾಮಾನ್ಯರಲ್ಲಿ ಸಾಮಾನ್ಯನೊಬ್ಬ ಹೇಗೆ ಅಸಾಮಾನ್ಯ ಸಾಧಕನಾಗಬಲ್ಲ. ಬಹುದೊಡ್ಡ ಇತಿಹಾಸ ನಿರ್ಮಿಸಬಲ್ಲ, ಈ ದೇಶ ಮರೆಯದ ಯುಗದ ಪುರುಷನಾಗಬಲ್ಲ ಎಂಬ ಉದಾಹರಣೆಯನ್ನು ನೀಡಿ ಎಂದು ಯಾರಾದರೂ ಮುಂದಿನ ಪೀಳಿಗೆಗೆ ಪ್ರಶ್ನಿಸಿದರೆ ನಿಸ್ಸಂಶಯವಾಗಿ ಕೇಳಿಬರುವ ಹೆಸರು ಅದು ನರೇಂದ್ರ ಮೋದಿಯವರದೇ ಆಗಿರುತ್ತದೆ.

ಶಿಸ್ತು, ಬದ್ಧತೆ, ಸಂಘಟನೆಯನ್ನು ತಪ್ಪಸ್ಸಿನ ರೀತಿಯಲ್ಲಿ ನೋಡುವ ಹಾಗೂ ಮಾತೃನೆಲದ ಮಹತ್ವ ತಿಳಿಸಿಕೊಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಸಂಪರ್ಕಕ್ಕೆ ಬರುವ ದೇಶಪ್ರೇಮಿ ಯುವ ಜನರಿಗೆ ತಪೋಭೂಮಿಯಾಗಿದೆ. ಇಂಥ ಪುಣ್ಯಭೂಮಿಯಲ್ಲಿ ಬೆಳೆದ ಅಪರೂಪದ ಸಂಘಟನಾ ಶಿಲ್ಪಿ ಹಾಗೂ ಮಹಾನ್ ಶಕ್ತಿ ನರೇಂದ್ರ ಮೋದಿಯವರು.

ಅಂದು ಶೈಶವಾವಸ್ಥೆಯಲ್ಲಿದ್ದ ಬಿಜೆಪಿ ಸಂಘಟನೆಗೆ ದಕ್ಷಿಣ ಭಾರತದಲ್ಲಿ ಮೊದಲ ಹೆಬ್ಬಾಗಿಲು ತೆರೆಸಬೇಕೆಂಬ ಕನಸು ಹಾಗೂ ಸಂಕಲ್ಪ ನನ್ನಂತಹ ಕಾರ್ಯಕರ್ತನಲ್ಲಿ ಮೂಡಲು ಅನೇಕ ಹಿರಿಯರ ಮಾರ್ಗದರ್ಶನ, ಪ್ರೇರಣೆ ಮರೆಯುವಂತಿಲ್ಲ. ಅದೇ ಬಗೆಯಲ್ಲಿ ಸಂಘ ಹಾಗೂ ಪಕ್ಷದ ಸೇವೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದ ಮೋದಿಯವರ ಗುಜರಾತಿನ ಮಾದರಿ ಆಡಳಿತ ಕರ್ನಾಟಕದಲ್ಲಿನ ನನ್ನ ಆಡಳಿತಾವಧಿಗೆ ಬಹು ಪ್ರೇರಣೆ ನೀಡಿತು.

ಈ ಕಾರಣಕ್ಕಾಗಿಯೇ 2009ರಲ್ಲಿ ನರೇಂದ್ರ ಮೋದಿಯವರನ್ನು ಕರ್ನಾಟಕಕ್ಕೆ ಕರೆಯಿಸಿ ನಮ್ಮ ಶಾಸಕರುಗಳಿಗೆ ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ದಿನವಿಡೀ ಆಡಳಿತದ ಬಗೆಗಿನ ಮಾರ್ಗದರ್ಶನ ಹಾಗೂ ಉಪದೇಶ ಕೊಡಿಸಿದ ನೆನಪು ನನ್ನ ಮನದಲ್ಲಿ ಇನ್ನೂ ಹಚ್ಚಹಸಿರಾಗಿದೆ. ಆ ದಿನದ ನೆನಪು ಬಂದಾಗಲೆ ರೋಮಾಂಚನವೆನಿಸುತ್ತದೆ. ಏಕೆಂದರೆ ಅಂದು ಯಾರು ಊಹಿಸಿದ್ದರೋ ಇಲ್ಲವೋ, ನನಗೆ ತಿಳಿಯದು, ಆದರೆ ಮೋದಿಯವರ ಕರ್ನಾಟಕ ಪ್ರವಾಸದ ಬೀಳ್ಕೊಡುಗೆ ಕಾರ್ಯಕ್ರಮ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆದ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಅದ್ಯಾವ ಆಗೋಚರ ಶಕ್ತಿ ನನ್ನ ಬಾಯಲ್ಲಿ ಹೇಳಿಸಿತೋ ಗೊತ್ತಿಲ್ಲ, ಈ ದೇಶಕ್ಕೆ ಎಂಟೆದೆಯ ಬಂಟನಂಥ ಧೀರ ಪ್ರಧಾನಿ ಬೇಕೆಂಬ ನನ್ನ ತುಡಿತದ ಕಲ್ಪನೆಯಲ್ಲಿ ಪಡಿಮೂಡಿದ್ದ ಏಕೈಕ ವ್ಯಕ್ತಿ ನರೇಂದ್ರ ಮೋದಿಯವರು ಮಾತ್ರ.

ಇದನ್ನೂ ಓದಿ: Narendra Modi Biopic: ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಅನೌನ್ಸ್ ! ಮೋದಿ‌ ಪಾತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್

ತಡೆದಿಟ್ಟುಕೊಳ್ಳಲಾಗದ ನನ್ನ ಭಾವನೆಗಳು ಧುಮ್ಮಿಕ್ಕಿದ ಜಲಪಾತದಂತೆ ನನ್ನ ಬಾಯಿಂದ ಅಂದು ಮಾಧ್ಯಮದ ಮುಂದೆ ಈ ದೇಶದ ಪ್ರಧಾನಿಯಾಗುವ ಅರ್ಹತೆ, ಯೋಗ್ಯತೆ ನರೇಂದ್ರ ಮೋದಿಯವರಿಗಿದೆ. ಅವರು ಪ್ರಧಾನಿಯಾಗಬೇಕೆಂಬುದು ನನ್ನಾಸೆ ಎಂದು ನುಡಿದು ಬಿಟ್ಟೆ. ಇದು ರಾಜಕೀಯ ವ್ಯವಸ್ಥೆಯಲ್ಲಿ ಸಂಚಲನ ಉಂಟು ಮಾಡಿ ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ಭರವಸೆಯ ಬೆಳಕು ಮೂಡಲು ನಾಂದಿ ಹಾಡಿತು. ಅಂದು ನಾ ಕನಸಿದ್ದ ಪ್ರಧಾನಿ ಇಂದು ಜಗತ್ತು ಕಂಡ ಶ್ರೇಷ್ಠ ಮುಂಚೂಣಿ ನಾಯಕರ ಸಾಲಿನಲ್ಲಿ ನಿಂತಿದ್ದಾರೆ.

ನನಗೆ ಪ್ರೇರಣೆ ಪ್ರಧಾನಿ ನರೇಂದ್ರ ಮೋದಿ: ದಣಿವರಿಯದ ನನ್ನ ಹೋರಾಟಗಳು, ಜನಮನದೊಂದಿಗೆ ನಿರಂತರ ಸಂಧಿಸುವ ನನ್ನ ಹಂಬಲಗಳು ಇಂದಿಗೂ ಕುಗ್ಗದಿರಲು ಹಾಗೂ ನನ್ನ ಆತ್ಮವಿಶ್ವಾಸದ ಬಲವರ್ಧನೆಗೆ ಜತೆಯಾಗಿ ಪ್ರೇರಣೆ ನೀಡಿದವರು ಮೋದಿಯವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಏಕೆಂದರೆ, ಒಬ್ಬ ದೇಶ ಕಟ್ಟುವ ಛಲ ಹೊತ್ತ ನೈಜ ನೇತಾರ ಹೇಗಿರುತ್ತಾನೆ ಎಂಬುದಕ್ಕೆ ನಿದ್ದೆ, ಹಸಿವು, ವಿಶ್ರಾಂತಿ ಹಾಗೂ ತನ್ನ ಯಾವುದೇ ಸ್ವಂತ ಹಿತವನ್ನು ಲೆಕ್ಕಿಸದೇ ‘ನಾನೊಬ್ಬ ಮಹಾನ್ ನಾಯಕನಲ್ಲ, ದೇಶ ಕಾಯುವ ಕಾವಲುಗಾರ, ನಾನೊಬ್ಬ ಪ್ರಧಾನಿಯಲ್ಲ ಜನರ ಪ್ರಧಾನ ಸೇವಕ’ ಎಂದು ಹೇಳಿಕೊಳ್ಳುವ ಮೋದಿಯವರು ಮಾತ್ರ ಉದಾಹರಣೆಯಾಗಿ ನಿಲ್ಲಬಲ್ಲ ಏಕೈಕ ನಾಯಕರಾಗಿ ನಮ್ಮ ಮುಂದೆ ಕಾಣುತ್ತಾರೆ.

ನೈಜ ರಾಜಕಾರಣ ಅಧಿಕಾರ ಸೃಷ್ಟಿಸುವ ಕಾರ್ಖಾನೆಯಲ್ಲ, ಬದಲಾಗಿ ಅದು ಜನರ ಸೇವೆಗಾಗಿ ಸಿಗುವ ಒಂದು ಪವಿತ್ರ ವ್ಯವಸ್ಥೆ, ಅಧಿಕಾರಸ್ಥ ರಾಜಕಾರಣಿ ಸರ್ವಾಧಿಕಾರಿಯಲ್ಲ, ಅವನೊಬ್ಬ ಸೇವಾ ತಪಸ್ವಿ ಎಂಬುದನ್ನು ವಿಶ್ವ ಪ್ರಜಾಪ್ರಭುತ್ವಕ್ಕೆ ನಡೆದು, ನುಡಿದು ತೋರಿಸುತ್ತಿರುವವರು ನಮ್ಮ ಮೋದಿ. ರೈತ ಹಾಗೂ ಗ್ರಾಮೀಣರ ಪರವಾದ ನನ್ನ ನಿಲುವು-ಒಲವು, ಮಹಿಳೆಯರ ಹಾಗೂ ಗ್ರಾಮೀಣರ ಪರವಾದ ನನ್ನ ಕಾರ್ಯಕ್ರಮಗಳಿಗೆ ಜನಮಾನಸದ ಗೌರವ-ಮೆಚ್ಚುಗೆ ಲಭಿಸಿದೆ ಎಂಬುದರ ಪ್ರಮಾಣ ಪತ್ರ ನನಗೆ ದೊರಕಿದ್ದರೆ ಅದು ಮೋದಿಯವರ ಮೂಲಕವೆಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.

ರೈತರ ರಕ್ಷಣೆಗೆ ನಾನಾ ಯೋಜನೆ: ಏಕೆಂದರೆ ರೈತ ಕೇವಲ ಕೃಷಿಕನಲ್ಲ ಅವನೊಬ್ಬ ಉತ್ಪನ್ನ ಕ್ಷೇತ್ರದ ಉದ್ಯಮಿಯಂತೆ ತಲೆ ಎತ್ತಿ ನಿಲ್ಲಬೇಕೆಂಬ ಅದಮ್ಯ ಬಯಕೆಯಿಂದ ಮೋದಿಯವರು ರೈತರ ರಕ್ಷಣೆಗಾಗಿ ಫಸಲ್ ಬಿಮಾ ಯೋಜನೆ ಜಾರಿಗೆ ತರುವುದರ ಜತೆಗೇ ರೈತ ತಾನು ಬೆಳೆದ ಉತ್ಪನ್ನಗಳಿಗೆ ತಾನೇ ಬೆಲೆ ಕಂಡುಕೊಳ್ಳುವ ಎಪಿಎಂಸಿ ಕಾಯಿದೆ ತಿದ್ದುಪಡಿ ಹಾಗೂ ಮಣ್ಣಿನ ಮಗನ ನೆಲವನ್ನು ನೆಲಬಾಕರು ಅಗ್ಗದ ಬೆಲೆಗೆ ಕಬಳಿಸದಂತೆ ನೂತನ ಭೂ ಸುಧಾರಣಾ ಕಾಯಿದೆಗಳನ್ನು ಜಾರಿಗೆ ತರುವ ಮೂಲಕ ರೈತ ಹೋರಾಟಗಾರನೆಂದು ಗುರುತಿಸಿಕೊಂಡ ನಾನು ನನ್ನ ಅವಧಿಯಲ್ಲಿ ಮಂಡಿಸಿದ ಕೃಷಿ ಬಜೆಟ್‌ಗೆ ವಿಶೇಷ ಪ್ರಮಾಣ ಪತ್ರ ದೊರಕಿಸಿಕೊಂಡ ಭಾವನೆ ನನ್ನದಾಗಿದೆ.

ಮಹಿಳೆಯರ ರಕ್ಷಣೆಗೆ ಸುಕನ್ಯಾ ಸಮೃದ್ಧಿ ಯೋಜನೆ: ಭಾಗ್ಯಲಕ್ಷ್ಮಿ, ಶಾಲಾ ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆಯ ನನ್ನ ಸರಕಾರದ ಯೋಜನೆಗಳು ಈ ನೆಲದ ಸ್ತ್ರೀ ಕುಲದ ರಕ್ಷಣೆ ಹಾಗೂ ಹೆಣ್ಣು ಮಕ್ಕಳಲ್ಲಿ ನಾಯಕತ್ವದ ಗುಣ ಉತ್ತೇಜಿಸುವ ದೃಷ್ಟಿಯಿಂದ ಕೂಡಿದ್ದರೆ ಅದೇ ಮಾದರಿಯಲ್ಲಿ ಮೋದಿಯವರ ‘ಸುಕನ್ಯಾ ಸಮೃದ್ಧಿ’ ಯೋಜನೆ ಮಹಿಳೆಯರ ರಕ್ಷತೆಯ ಕಾಳಜಿಯಿಂದ ಕೂಡಿದೆ.

ಈ ಯುಗದ ಪುಣ್ಯ ಪುರುಷ: ಹತ್ತು ಹಲವು ಸವಾಲುಗಳನ್ನು ಮೆಟ್ಟಿನಿಂತು ದೇಶ ರಕ್ಷಣೆಗಾಗಿ ಯೋಧರೊಂದಿಗೆ ಯೋಧರಾಗಿ ಯೋಧರಾಗಿ ಹಾಗೂ ಕರೊನಾ ಕೆನ್ನಾಲಿಗೆಯಿಂದ ದೇಶದ ಜನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮೋದಿಯವರು ಕೈಗೊಂಡ ಕ್ರಮಗಳು ದೇಶದ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ. ಭಾರತ ಮಾತೆ ತನ್ನ ಪರಂಪರೆ, ಇತಿಹಾಸ, ಸಂಸ್ಕೃತಿ ಗಳಿಗೆ ಸಂಚಕಾರ ಬಂದಾಗಲೆ ತನ್ನ ಮಡಿಲಿ ನಿಂದ ಮಹಾನ್ ಸುಪುತ್ರರನ್ನು ಸಮರ್ಪಿಸಿದ್ದಾಳೆ.

ಈ ನಿಟ್ಟಿನಲ್ಲಿ ಆಚಾರ್ಯತ್ರಯರಾಗಬಹುದು, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಾಗಬಹುದು, ಹಾಗೇ ತನ್ನ ಜನ್ಮಭೂಮಿಯಲ್ಲಿ ವನವಾಸದಲ್ಲಿದ್ದ ಶ್ರೀರಾಮಚಂದ್ರ ನನ್ನು ಗತಕಾಲದ ಸುದೀರ್ಘ ಹೋರಾಟದಿಂದ ಮುಕ್ತಗೊಳಿಸಿ ಮಂದಿರ ನಿರ್ಮಾಣದ ಕಾರ್ಯಕ್ಕೆ ಚಾಲನೆ ನೀಡುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದು ಮೋದಿಯವರು ಒಬ್ಬ ವ್ಯಕ್ತಿಯಲ್ಲ ಯುಗದ ಪುಣ್ಯ ಪುರುಷ ಎಂಬುದನ್ನು ಸಾಬೀತುಪಡಿಸಿದೆ.

ಅಂದು ಸರ್ದಾರ ವಲ್ಲಭಭಾಯಿ ಪಟೇಲರು ನಿಜಾಮನ ಮುಷ್ಟಿಯಲ್ಲಿ ಸಿಲುಕಿದ್ದ ಹೈದರಾಬಾದ್ ಪ್ರದೇಶವನ್ನು ಮುಕ್ತಗೊಳಿಸಿದಂತೆ ಮೋದಿಯವರು ಭಾರತದ ಕಿರೀಟವೆನಿಸಿದ ಕಾಶ್ಮೀರ ಕಣಿವೆಯ ಕುತ್ತಿಗೆಗೆ ಕುಣಿಕೆ ಬಿಗಿದಿದ್ದ ಆರ್ಟಿಕಲ್ 370 ಅನ್ನು ಮೂಲೆಗೆ ಸೇರಿಸಿದ್ದು ಇತಿಹಾಸ ಎಂದಿಗೂ ಮರೆಯದ ದಿಟ್ಟ ಕ್ರಮವಾಗಿದೆ. ಮೋದಿಯವರ ನಡೆ ನುಡಿ ನಿರ್ಧಾರಗಳು ಒಬ್ಬ ದೂರದೃಷ್ಟಿಯ ಆಡಳಿತಗಾರನ ದಕ್ಷತೆಯ ಪ್ರತಿರೂಪವೆನಿಸಿದೆ. ಇಂಥ ಮಹಾನ್ ನಾಯಕ, ತಪಸ್ವಿ ಪುರುಷ ನೂರ್ಕಾಲ ಬಾಳಲಿ, ಭಾರತವನ್ನು ಬೆಳಗಲಿ.