ವಿನಾಯಕ ಮಠಪತಿ, ಬೆಳಗಾವಿ
ಆ ಸನ್ನಿವೇಶ ಮಿಸ್ ಮಾಡಿದ್ದರೆ ಸಾಯುವವರೆಗೂ ಕೊರಗಬೇಕಿತ್ತು
ನೋಡುತ್ತಿದ್ದಂತೆ ನನ್ನೆರಡು ಕೈ ಅವರ ಪಾದ ಮುಟ್ಟಿದ್ದವು
ಅವತ್ತು ನನ್ನೆದುರಿಗೆ ಪ್ರೀತಿಯ ಖ್ಯಾತ ಬರಹಗಾರ ನಿಂತಿದ್ದರು. ಅವರ ಮುಖ ನೋಡುತ್ತಿದ್ದಂತೆ ಒಂದು ಕ್ಷಣ ರೋಮಾಂಚನ. ನನಗೆ ಅರಿವಿಲ್ಲದಂತೆ ನನ್ನೆರಡು ಕೈಗಳು ಮುಂದೆ ಚಾಚಿಕೊಂಡವು. ದೇಹ ಬಾಗಿದ್ದಲ್ಲದೆ ಅವರ ಎರಡೂ ಕಾಲುಗಳನ್ನು ಸ್ಪರ್ಶಿಸಿದ್ದೆ. ಅವತ್ತು ಒಬ್ಬ ಸಂತನ ಪಾದ ಮುಟ್ಟಿದ ಅನುಭವ.
ಎತ್ತರದ ವ್ಯಕ್ತಿತ್ವ ಹೊಂದಿದ್ದ ಅಪರೂಪದ ಸಾಹಿತಿ ಎಸ್.ಎಲ್.ಭೈರಪ್ಪನವರ ಭೇಟಿಯಾದ ಅಮೂಲ್ಯ ಕ್ಷಣವಿದು. ಹೌದು 2023ರ ಜೂನ್ 7ರಂದು ನನ್ನ ಹುಟ್ಟುಹಬ್ಬ. ಇದೇ ಒಂದು ಸಣ್ಣ ಕಾರಣವಿಟ್ಟುಕೊಂಡು ಈ ಬಾರಿ ನನ್ನಿಷ್ಟದ ಸಾಹಿತಿ ಎಸ್.ಎಲ್.ಭೈರಪ್ಪನವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡಬೇಕೆಂಬ ಬಯಕೆ ಹುಟ್ಟಿಕೊಂಡಿತ್ತು. ವಾರದ ಮೊದಲೇ ಆಪ್ತರಿಂದ ಭೈರಪ್ಪನವರ ಮನೆಯ ಲ್ಯಾಂಡ್‌ಲೈನ್ ನಂಬರ್ ಪಡೆದು ಒಂದು ದಿನ ಕರೆ ಮಾಡಿದ್ದೆ.
ಅತ್ತ ಕಡೆಯಿಂದ ಹಲೋ ಯಾರು ಎಂದು ಧ್ವನಿ ಕೇಳಿಬಂತು. ಇವರು ಭೈರಪ್ಪನವರು ಎಂಬುವುದು ಖಾತ್ರಿಯಾಯ್ತು. ಆ ಸಮಯಕ್ಕೆ ಅವರಿಗೆ ವಯೋಸಹಜ ಕಾರಣಗಳಿಂದ ಕಿವಿ ಅಷ್ಟೊಂದು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಇತ್ತ ಕಡೆಯಿಂದ ಜೋರಾದ ಧ್ವನಿಯಲ್ಲಿ ಮಾತನಾಡ ಬೇಕಿತ್ತು.
ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?
ನನ್ನ ಪರಿಚಯ ಮಾಡಿಕೊಂಡೆ. ತಮ್ಮನ್ನು ಭೇಟಿಯಾಗುವ ಬಯಕೆ ಇದೆ ಎಂದು ಹೇಳಿದೆ. ನನ್ನನ್ನು ಯಾಕೆ ಭೇಟಿ ಮಾಡಬೇಕು ಎಂಬ ಮರುಪ್ರಶ್ನೆ ಅವರಿಂದ ಬಂತು. ನಾನು ನಿಮ್ಮ ಅಭಿಮಾನಿ, ಬದುಕಲ್ಲಿ ಒಮ್ಮೆಯಾದರೂ ತಮ್ಮನ್ನು ಭೇಟಿಯಾಗುವ ಆಸೆ ಹೊಂದಿರುವೆ ಎಂದು ಹೇಳಿದೆ. ಅದಕ್ಕವರು 2023ರ ಜೂನ್ 7ರಂದು ಬೆಳಗ್ಗೆ 11 ಗಂಟೆ 20 ನಿಮಿಷಕ್ಕೆ ಬರುವಂತೆ ಹೇಳಿದರು.
ಬೆಳಗಾವಿಯಿಂದ ಮೈಸೂರಿಗೆ ಬಂದಿಳಿದ ನಾನು ಸರಿಯಾಗಿ 11 ಗಂಟೆಗೆ ಹೋಟೆಲ್ ಶಾಂತಿಸಾಗರ ರಸ್ತೆಯಲ್ಲಿರುವ ಭೈರಪ್ಪನವ ಮನೆ ಮುಂದೆ ನಿಂತಿದ್ದೆ. ಸರಿಯಾಗಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷ ಆಗುತ್ತಿದ್ದಂತೆ ಮನೆ ಗೇಟ್ ಸರಿಸಿ ಒಳಹೋದೆ. ಮನೆ ಬಾಗಿಲು ತೆರೆದ ಭೈರಪ್ಪನವರು ಪ್ರೀತಿಯಿಂದ ಒಳಕರೆದರು. ಈ ಸಂದರ್ಭದಲ್ಲಿ ಮೊದಲಿಗೆ ಹೇಳಿದಂತೆ ರೋಮಾಂಚನಕಾರಿ ಅನುಭವವಾಯಿತು.
ಅತ್ತಿಂದ ಮಾತು ಪ್ರಾರಂಭವಾಯಿತು. ಏನು ಓದಿದ್ದು, ಎಲ್ಲಿ ಕೆಲಸ, ಸಂಬಳ ಹೇಗಿದೆ ಎಂಬ ಪ್ರಶ್ನೆಗಳು. ಅದಕ್ಕೆಲ್ಲ ಉತ್ತರಿಸಿದ ಮೇಲೆ ವಿಶ್ವವಾಣಿ ಪತ್ರಿಕೆ ಪ್ರಸರಣ, ನಮ್ಮ ಕ್ಯಾಪ್ಟನ್ ವಿಶ್ವೇಶ್ವರ ಭಟ್ಟರ ಸಾಹಸದ ಕುರಿತು ಕೆಲಹೊತ್ತು ಮಾತನಾಡಿದರು. ಇವೆಲ್ಲವನ್ನೂ ಭೈರಪ್ಪನವರ ಮುಂದೆ ವಿದ್ಯಾರ್ಥಿಯಂತೆ ಕುಳಿತು ಆಲಿಸುತ್ತಿದ್ದೆ.
ಓದಿನ ಕುರಿತು ಪಾಠ: ಇಂಗ್ಲಿಷ್ ಭಾಷೆಯಲ್ಲಿನ ಸಾಹಿತ್ಯ ಓದುತ್ತೀರಾ ಎಂದರು. ನಾನು ಇಲ್ಲ ಸರ್ ಇಂಗ್ಲಿಷ್ ಸ್ವಲ್ಪ ಕಷ್ಟ ನನಗೆ. ಅದೇ ಕಾರಣಕ್ಕೆ ಓದಿಲ್ಲ ಎಂದೆ. ಓದಬೇಕು ಇಂಗ್ಲಿಷ್ ಭಾಷೆಯಲ್ಲಿನ ಸಾಹಿತ್ಯ ಓದುವುದನ್ನೂ ರೂಢಿ ಮಾಡಿಕೊಳ್ಳಿ. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ಪಾಠ ಮಾಡಿದರು. ಅವರು ಹೇಳಿದ್ದನ್ನೆಲ್ಲ ತಲೆಯಾಡಿಸಿ ಕೇಳುತ್ತಿದ್ದೆ. ವಿಸ್ಮಯಕಾರಿ ವ್ಯಕ್ತಿತ್ವದ ಅಪರೂಪದ ವ್ಯಕ್ತಿ ಮುಖ ನೋಡುವುದೇ ಆ ಸಂದರ್ಭದಲ್ಲಿ ನನಗೆ ಅದೃಷ್ಟದ ಕ್ಷಣವಾಗಿತ್ತು. ಹಿಂದಿ ಹಾಗೂ ಮರಾಠಿ ಭಾಷಾ ಸಾಹಿತ್ಯ ಹಾಗೂ ಪುಸ್ತಕಗಳ ಕುರಿತು ಹೇಳಿದರು. ಬೆಳಗಾವಿ ಭಾಗದವನಾದ ಕಾರಣಕ್ಕೆ ಮರಾಠಿ ಸಾಹಿತ್ಯದ ಕುರಿತು ಅನೇಕ ವಿಷಯ ಹಂಚಿಕೊಂಡಿದ್ದರು.
ತಬ್ಬಲಿಯು ನೀನಾದೆ ಮಗನೆ ಪುಸ್ತಕದ ಹಿಂದಿನ ಪ್ರೇರಣೆ ಹುಬ್ಬಳ್ಳಿ ನೆಲ: ಹೌದು 1958ರಿಂದ 1960ರವರೆಗೆ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತತ್ವಶಾಸ್ತ್ರ ಹಾಗೂ ಮನಶಾಸ್ತ್ರದ ಅಧ್ಯಾಪಕರಾಗಿ ಭೈರಪ್ಪನವರು ಸೇವೆ ಸಲ್ಲಿಸುತ್ತಿದ್ದರು. ಈ ವೇಳೆ ಇವರ ಸ್ನೇಹ ವಲಯದ ಸಹ ಪ್ರಾಧ್ಯಾಪಕರ (ಹೆಸರು ಮರೆತಿರುವೆ) ಮನೆಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಕುಟುಂಬದ ಗೋವಿನ ಪ್ರೀತಿ ಅವರನ್ನು ಬಲವಾಗಿ ಕಾಡಿತ್ತು.
ಅನಾರೋಗ್ಯದ ಕಾರಣಕ್ಕೆ ಆ ಗೋವು ತೀರಿಹೋದಾಗ ಕುಟುಂಬ ಕೊರಗಿದ್ದನ್ನು ಕಣ್ಣಾರೆ ಕಂಡಿದ್ದ ಸನ್ನಿವೇಶ ಭೈರಪ್ಪನವರ ಮೇಲೆ ಅತೀವ ಪ್ರಭಾವ ಬೀರಿತ್ತು. ಇದೇ ಘಟನೆ ನಾನು ಕಣ್ಣಾರೆ ನೋಡಿ ದ್ದರ ಕಾರಣಕ್ಕೆ ತಬ್ಬಲಿಯು ನೀನಾದೆ ಮಗನೆ ಬರೆಯುವಲ್ಲಿ ಸಹಕಾರಿಯಾಯಿತು ಎಂಬ ವಿಷಯ ಹಂಚಿಕೊಂಡರು. ಹುಬ್ಬಳ್ಳಿಯಲ್ಲಿ ಇರುವಾಗಲೇ ಪುಸ್ತಕ ಹೊರಬಂದಿದ್ದು ಇನ್ನೊಂದು ಅದ್ಭುತ.
ಸರಳ ವಿವಾಹದ ಕುರಿತು ಹೇಳಿದ್ದರು: ಭೈರಪ್ಪನವರ ಜೊತೆ ಮಾತನಾಡುವ ವೇಳೆ ನಿನಗೆ ಮದುವೆ ಆಗಿದೆಯಾ ಎಂದು ಕೇಳಿದರು. ಇಲ್ಲ ಎಂದು ಹೇಳಿದೆ. ಸರಳ ವಿವಾಹದ ಕುರಿತು ಸಾಕಷ್ಟು ಮೌಲ್ಯಯುತ ವಿಷಯ ತಿಳಿಸಿಕೊಟ್ಟರು. ಹಿಂದೆಲ್ಲ ಬಂಧು, ಬಳಗದವರು ಮದುವೆ ಕಾರ್ಯಕ್ಕೆ ಬರುವಾಗ ತಮ್ಮಲ್ಲಿ ಬೆಳೆದಿದ್ದ ವಸ್ತುಗಳನ್ನು ಜೊತೆಗೆ ತರುತ್ತಿದ್ದರು. ಇದರಿಂದ ಮದುವೆ ಮನೆಯವರ ಆರ್ಥಿಕತೆಗೆ ಪೆಟ್ಟು ಬೀಳುತ್ತಿರಲಿಲ್ಲ. ಎಲ್ಲರೂ ಸೇರಿ ಜವಾಬ್ದಾರಿ ನಿರ್ವಹಿಸುವ ಸಂಪ್ರದಾಯ ನಮ್ಮಲ್ಲಿತ್ತು. ಆದರೆ ಈಗ ಆಡಂಬರತನ ಜಾಸ್ತಿ ಆಗಿದೆ. ಇದರಿಂದ ಸಾಲದ ಸುಳಿ ಯಲ್ಲಿ ಸಿಲುಕುವ ಪ್ರಕರಣಗಳೇ ಜಾಸ್ತಿ ಆಗಿವೆ ಎಂದು ಹೇಳುವ ಮೂಲಕ ಸಾಮಾಜಿಕ ಕಳಕಳಿ ಹೊರಹಾಕಿದ್ದರು. ಅಷ್ಟೇ ಅಲ್ಲದೆ ನನಗೆ ಸರಳ ವಿವಾಹವಾಗುವಂತೆ ತಿಳಿಸುವ ಉದ್ದೇಶ ಅದರಲ್ಲಿ ಅಡಗಿತ್ತು ಎಂಬುದು ಅರಿವಿಗೆ ಬಂತು.
ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು: ಎಸ್.ಎಲ್.ಭೈರಪ್ಪನವರ ಭೇಟಿ ಹಾಗೂ ಅವರ ಜೊತೆಗಿನ ಆ ಅಮೂಲ್ಯ ಎರಡು ಗಂಟೆಗಳ ಮಾತು ಬದುಕಿನ ಸಾರ್ಥಕ ಕ್ಷಣಗಳಲ್ಲಿ ಒಂದು. ಬೆಳಗಾವಿ ಸಿಹಿ ತಿನಿಸು ಹಾಗೂ ಅಭಿಮಾನದಿಂದ ತಗೆದುಕೊಂಡು ಹೋಗಿದ್ದ ಶಲ್ಯ ಅವರ ಕೈಗಿಟ್ಟು ಮತ್ತೊಮ್ಮೆ ನಮಸ್ಕರಿಸಿದೆ. ಅವರ ಜನಪ್ರಿಯ ನಿರಾಕರಣ ಪುಸ್ತಕಕ್ಕೆ ಹಸ್ತಾಕ್ಷರ ಮಾಡಿಸಿಕೊಂಡು ಎದೆಗೆ ಬಿಗಿದಪ್ಪಿಕೊಂಡ ನೆನಪು ಈಗಲೂ ಹಸಿರು. ಕೊನೆಗೆ ಫೋಟೋ ತಗೆಯಲು ಯಾರೂ ಇರಲಿಲ್ಲ.
ಮೊಬೈಲ್‌ನಲ್ಲಿ ಟೈಮರ್ ಇಟ್ಟು ಅವರ ಜೊತೆಗೊಂದು -ಟೋ ಕ್ಲಿಕ್ಕಿಸಿಕೊಂಡೆ. ಹೀಗೂ ಫೋಟೋ ತಗೆಯಬಹುದಾ ಎಂದು ಕುತೂಹಲದಿಂದ ಕೇಳಿದರು. ಬದುಕಿನಲ್ಲಿ ಹಲವು ಘಟನೆಗಳು ಸಂಭವಿಸುವುದು ಒಂದು ಯೋಗಾಯೋಗ. ಅಮೂಲ್ಯ ರತ್ನದ ಭೇಟಿ ಹಾಗೂ ಅವರ ಸಾಹಿತ್ಯದ ಓದು ನನಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಹೋಗಿ ಬನ್ನಿ ಭೈರಪ್ಪಜ್ಜ... ನಿಮ್ಮ ನೆನಪಲ್ಲಿ ಈ ಜೀವಗಳು ಸದಾಕಾಲವೂ ಇರುತ್ತವೆ.