ಗಣೇಶ್ ಕಮ್ಲಾಪುರ ದಾವಣಗೆರೆ
ಕಾಂಗ್ರೆಸ್‌ಗೆ ಅಸ್ತಿತ್ವ, ಬಿಜೆಪಿಗೆ ಪ್ರತಿಷ್ಠೆ
ಅಲ್ಪಸಂಖ್ಯಾತರೇ ನಿರ್ಣಾಯಕರು
ಯಾರ ಪಾಲಾಗಲಿದೆ ದಕ್ಷಿಣ ಕ್ಷೇತ್ರ
ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನ ಸಭಾ ಕೇತ್ರದ ಉಪಚುನಾವಣೆ ಕಣ ದಿನೇದಿನೆ ರಂಗೇರುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಕೊನೆಗೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅಖಾಡಕ್ಕಿಳಿಸಿವೆ. ದಾವಣಗೆರೆ ಬೆಣ್ಣೆ ದೋಸೆ ಯಾರ ಬಾಯಿಗೆ ಮತದಾರ ಇಡಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.
ಅನುಕಂಪದ ಅಲೆಯಲ್ಲಿ ಉಪಚುನಾವಣೆ ಗೆಲ್ಲಲು ಆಡಳಿತರೂಢ ಕಾಂಗ್ರೆಸ್ ಬಾಗಲ ಕೋಟೆ, ದಾವಣಗೆರೆ ಎರಡೂ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದು, ಶಾಮನೂರು ಕುಟುಂಬದ ಕುಡಿ, 27ರ ಹರೆಯದ ಉದ್ಯಮಿ ಸಮರ್ಥ್ ಅಧಿಕೃತವಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಟಿಕೆಟ್‌ಗಾಗಿ ಪಟ್ಟು ಹಿಡಿದು ಅಸಮಾಧಾನಗೊಂಡಿದ್ದ ಮುಸ್ಲಿಂ ಸಮುದಾಯ ನಾಯಕರಿಗೆ ಮುಂಬರುವ ದಿನಗಳಲ್ಲಿ ನಿಗಮ, ಮಂಡಳಿ, ಪರಿಷತ್ ಮತ್ತಿತರ ಕಡೆಗಳಲ್ಲಿ ಅವಕಾಶ ನೀಡುವ ಭರವಸೆಯೊಂದಿಗೆ ಭುಗಿಲೆದ್ದಿದ್ದ ಅಸಮಾಧಾನ ತಣ್ಣಗಾಗಿಸುವಲ್ಲಿ ಹೈಕಮಾಂಡ್ ಯಶಸ್ಸು ಕಂಡಿದೆ. ಹಾಗಾಗಿ, ದಕ್ಷಿಣಕ್ಕೆ ಸಮರ್ಥ್ ಸಮರ್ಥನೆ ಮುಸ್ಲಿಂರಿಗೆ ಅನಿವಾರ್ಯವಾಗಿದೆ.
ಇದನ್ನೂ ಓದಿ: Davanagere Byelection: ಟಿಕೆಟ್ ಹಂಚಿಕೆ ಹಿಂದೆ ಸ್ವಯಂ ಲಾಭಗಳ ತಂತ್ರ
ಇನ್ನೂ ಟಿಕೆಟ್ ಹಂಚಿಕೆ ಮೊದಲೇ ಎಸ್.ಎಸ್.ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ನಾಮ ಪತ್ರ ಸಲ್ಲಿಸುವ ಮೂಲಕ ಹೈಕಮಾಂಡ್‌ಗೆ ಸಡ್ಡು ಹೊಡೆದು ಒತ್ತಡ ಹಾಕುವ ತಂತ್ರದ ಜತೆಗೆ ಪಕ್ಷ ಕಟ್ಟಿ ಬೆಳೆಸಿದ್ದು ನಾವು. ಜಿಲ್ಲೆಯಲ್ಲಿ ನಮ್ಮಿಂದ ಪಕ್ಷ. ಹೊರತು ಪಕ್ಷದಿಂದ ನಾವಲ್ಲ ಎಂಬ ಸಂದೇಶ ರವಾನಿಸಿದ್ದರು. ಇದೀಗ ಪಕ್ಷ ಮಣಿದು ಟಿಕೆಟ್ ನೀಡಿದ್ದು, ಕಾಂಗ್ರೆಸ್ ಭದ್ರಕೋಟೆಯಾದ ದಾವಣಗೆರೆ ದಕ್ಷಿಣ ಉಳಿಸಿಕೊಳ್ಳುವ ಜವಾಬ್ದಾರಿ ಸಮರ್ಥ್ ಮೇಲಿದೆ.
ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆಗೆ ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರೇ ಸೋಮವಾರ ದಾವಣಗೆರೆಗೆ ಆಗಮಿಸಲಿದ್ದಾರೆ. ಇತ್ತ, ಟಿಕೆಟ್ ಹಂಚಿಕೆ ಮೊದಲು ಮನೆಯೊಂದು ಮೂರು ಬಾಗಿಲಿನಂತಿದ್ದ ಜಿಲ್ಲಾ ಬಿಜೆಪಿ ನಾಯಕರಿಗೆ ಹೈಕಮಾಂಡ್ ಅಚ್ಚರಿಯ ಅಭ್ಯರ್ಥಿ ಹೆಸರು ಘೋಷಿಸುವ ಮೂಲಕ ಎಲ್ಲರೂ ಒಂದಾಗಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವಂತೆ ಸೂಚಿಸಿದೆ.
ಸಾಮಾನ್ಯ ಕಾರ್ಯಕರ್ತನಾಗಿ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿದ್ದ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಬಿಜೆಪಿ ಮಣೆ ಹಾಕಿದ್ದು, ಈ ಮೂಲಕ ದಲಿತರು, ಅಲ್ಪಸಂಖ್ಯಾತರ ಮತ ಸೆಳೆಯುವ ದಾಳ ಹುರುಳಿಸಿದೆ. ಜತೆಗೆ, ಸಾಮಾನ್ಯ ಕಾರ್ಯಕರ್ತ ನಿಗೂ ಬಿಜೆಪಿ ಟಿಕೆಟ್ ನೀಡುತ್ತೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದೆ.
ಶ್ರೀನಿವಾಸ್ ದಾಸ ಕರಿಯಪ್ಪ ಅವರ ತಂದೆ ದಾಸ ಕರಿಯಪ್ಪ ಜೆಡಿಎಸ್‌ನಲ್ಲಿ ಪ್ರಬಲ ನಾಯಕರಾಗಿದ್ದರು. ಅವರ ಪುತ್ರನಿಗೆ ಟಿಕೆಟ್ ನೀಡುವ ಜತೆಗೆ ಎಸ್ಟಿ ಸಮುದಾಯದ ಅಭ್ಯರ್ಥಿಯನ್ನು ಘೋಷಿಸುವ ಮೂಲಕ ಬಿಜೆಪಿ ಹೊಸ ದಾಳ ಹುರುಳಿಸಿದೆ.
ಒಟ್ಟಾರೆಯಾಗಿ, ದಕ್ಷಿಣದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೇರಹಣಾಹಣಿ ಏರ್ಪಟ್ಟಿದ್ದು, ಯಾರು ಶಾಸಕರಾಗಬೇಕೆಂಬುದನ್ನು ಮುಸ್ಲಿಂ ಮತಗಳು ನಿರ್ಣಯಿಸಲಿವೆ. ಹಾಗಾಗಿ, ಕಾಂಗ್ರೆಸ್, ಬಿಜೆಪಿಗೆ ದಾವಣಗೆರೆ ದಕ್ಷಿಣ ಅಸ್ತಿತ್ವ, ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ಮತದಾರ ಪ್ರಭುಗಳು ಯಾರಿಗೆ ಆಶೀರ್ವದಿಸುವರೋ ಕಾದು ನೋಡಬೇಕಿದೆ.
ಶ್ರೀನಿವಾಸ್ ಪ್ಲಸ್
ಎಸ್‌ಟಿ ಸಮುದಾಯದ ಕಾರಣದಿಂದ ಅಹಿಂದ ಮತಗಳು ವಾಲುವ ಸಾಧ್ಯತೆ
ಕಳೆದ ಎರಡ್ಮೂರು ದಶಕದಿಂದ ಕಾಂಗ್ರೆಸ್ ಆಡಳಿತದಿಂದ ಮತದಾರ ಬೇಸರ
ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚಸ್ಸು
ಟಿಕೆಟ್ ಸಿಗದಿರುವುದರಿಂದ ಮುಸ್ಲಿಮರು ಅಸಮಾಧಾನ
ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಜನರ ಬೇಸರ
ಶ್ರೀನಿವಾಸ್ ಮೈನಸ್
ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಮೇಲಿನ ಬೇಸರ
ಕಾಂಗ್ರೆಸ್ ಪಕ್ಷದ ಮೇಲಿನ ಮುಸ್ಲಿಂರ ಒಲವು
ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕಾರ್ಯಗಳು
ಹೊಸ ಅಭ್ಯರ್ಥಿ, ಕ್ಷೇತ್ರದ ಮತದಾರರ ನಾಡಿಮಿಡಿತದ ಅರಿವಿಲ್ಲದಿರುವುದು
ಸಮರ್ಥ್ ಪ್ಲಸ್
ಶಾಸಕರಾಗಿದ್ದ ತಾತ, ಸಚಿವರಾದ ತಂದೆ, ಸಂಸದೆಯಾದ ತಾಯಿಯ ವರ್ಚಸ್ಸು
ನಿರ್ಣಾಯಕ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯದೊಂದಿಗಿನ ಉತ್ತಮ ಒಡನಾಟ
ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿ ಕಾರ್ಯಗಳು
ಕಾಂಗ್ರೆಸ್ ಬಗೆಗಿನ ಅಹಿಂದ ಮತದಾರರ ಒಲವು
ಸಮರ್ಥ್ ಮೈನಸ್
ಹೊಸ ಅಭ್ಯರ್ಥಿ, ರಾಜಕೀಯ ಅನುಭವ ಇಲ್ಲದಿರುವುದು
ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗದ ಬೇಸರ
ಬಿಜೆಪಿಯಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿ ಸ್ಪರ್ಧಿಸಿರುವುದು
ದಕ್ಷಿಣದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಆಗದಿರುವುದು
ಕುಟುಂಬ ರಾಜಕಾರಣದ ಬಗ್ಗೆ ಮತದಾರರ ಅಸಮಾಧಾನ
![]()
ಈಗಾಗಲೇ ಕ್ಷೇತ್ರದಲ್ಲಿ ಸಮರ್ಥ ಶಾಮನೂರು ಪ್ರಚಾರ ಕೈಗೊಂಡಿದ್ದು, ನಮ್ಮ ಪಕ್ಷವು ಕ್ಷೇತ್ರವನ್ನು ಉಳಿಸಿಕೊಳ್ಳಲಿದೆ.
-ಎಚ್.ಬಿ.ಮಂಜಪ್ಪ , ಕಾಂಗ್ರೆಸ್ ಜಿಲ್ಲಾಧ್ಯಕ್ಷ