ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೋಡದ ಮರೆಯ ಸೊಬಗು

ಮೋಡದ ಮರೆಯ ಸೊಬಗು

ಮೋಡದ ಮರೆಯ ಸೊಬಗು

Profile Vishwavani News Nov 26, 2022 3:49 PM
image-d7322d12-4d83-458e-b1cd-0322950ec2dc.jpg
image-57c2ca8e-dffc-4a2d-89fc-c08b57364399.jpg
ಸಿ.ಜಿ.ವೆಂಕಟೇಶ್ವರ ಆಗಾಗ್ಗೆ ಕೇಳಿಸುವ ಮಕ್ಕಳ ಅಳುವಿನ ಸದ್ದು, ಕೆಲವೊಮ್ಮೆ ಸಂತಸದಿಂದ ಕುಣಿದಾಡುವ ಶಿಶುಗಳ ಕಲರವ, ಒಂದೆಡೆ ಹಿಂದಿಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಪಕ್ಕದ ತಮಿಳು ಭಾಷೆಯ ಸದ್ದು, ತೆಲುಗು ಭಾಷೆ ಸ್ವಲ್ಪ ಹೆಚ್ಚೇ ಎನ್ನುವಂತೆ ಕೇಳುತ್ತಿದ್ದರೆ, ಕ್ಷೀಣವಾಗಿ ಅಂದು ಇಂದು ಕನ್ನಡ ಪದಗಳು ಕೇಳುತ್ತಿದ್ದವು. ಇದು ತಿರುಮಲದ ವೆಂಕಟೇಶ್ವರ ಸ್ವಾಮಿಯ ವೈಕುಂಠ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ರುವ ಸರ್ವದರ್ಶನ ಕಂಪಾರ್ಟ್‌ಮೆಂಟ್ ನ ಚಿತ್ರಣ. ವೆಂಕಟೇಶ್ವರ ಎಂಬ ಹೆಸರಿನ ನಾನು ವರ್ಷಕ್ಕೊಮ್ಮೆ ಬಾಲಾಜಿಯ ದರ್ಶನ ಮಾಡದಿದ್ದರೆ ಏನೋ ಕಳೆದುಕೊಂಡ ಅನುಭವ. ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಸ್ವಾಮಿಯ ದರ್ಶನ ಭಾಗ್ಯದಿಂದ ವಂಚಿತನಾದ ನಾನು ಕಳೆದ ವಾರ ಬಸ್ ಏರಿ ತಿರುಮಲೆಗೆ ಹೊರಟೇಬಿಟ್ಟೆ. ತಿರುಪತಿಯಿಂದ ತಿರುಮಲಾಗೆ ಟಿ ಟಿ ಡಿ ಬಸ್ ನಲ್ಲಿ ಪಯಣ ಆರಂಭವಾದಾಗ ನಿಧಾನವಾಗಿ ಮೋಡ ಕವಿದ ವಾತಾವರಣ ಆಗಾಗ್ಗೆ ಬೀಳುವ ತುಂತುರು ಮಳೆ, ಬಸ್ ಮೇಲೇರಿದಂತೆ ತಿರುಪತಿಯ ಕಾಂಕ್ರೀಟ್ ಕಾಡು ಮಾಯವಾಗಿ ಶೇಶಾಚಲಂ ಕಾನನದ ವೈಭವ ನಮ್ಮ ಮನವನ್ನು ಮುದಗೊಳಿಸಿತು. ತಿರುಮಲ ಬೆಟ್ಟ ತಲುಪಿ ಸ್ನಾನ ಮಾಡಿ, ಮೊದಲಿಗೆ ವರಹಾಸ್ವಾಮಿಯ ದರ್ಶನ ಪಡೆದು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸರ್ವ ದರ್ಶನ ಸಾಲಿನಲ್ಲಿ ನಿಂತಾಗ ಎಷ್ಟು ಹೊತ್ತಿಗೆ ದರ್ಶನವಾಗುತ್ತದೆ ಎಂಬ ನಿರ್ದಿಷ್ಟವಾದ ಸಮಯದ ಅರಿವಿಲ್ಲದಿದ್ದರೂ ಸ್ವಾಮಿಯ ದರ್ಶನವಾಗೇ ಆಗುತ್ತದೆ ಎಂಬ ಅದಮ್ಯ ವಿಶ್ವಾಸ ನಮ್ಮದು. ಸರತಿಯ ಸಾಲು ಮುಂದೆ ಸಾಗಿ ಇಂದು ಕಂಪಾರ್ಟ್ ಮೆಂಟ್ ತಲುಪಿತು. ಅದು ಭಾರತದ ಪ್ರತಿಬಿಂಬ. ಅಲ್ಲಿ ಬಡವರಿದ್ದರು ಧನಿಕರು, ಕಪ್ಪನೆಯ, ಕೆಂಪನೆಯ ಎಣ್ಣೆಗೆಂಪು ಬಣ್ಣದ, ಗಂಡು, ಹೆಣ್ಣು, ವಿವಿಧ ಭಾಷೆಯ, ವಿವಿಧ ಸಂಸ್ಕೃತಿಗಳ ಜನ ಸೇರಿದ್ದರು. ವಿಭಿನ್ನವಾದ ನೆಲ ಮೂಲ, ಸಂಸ್ಕೃತಿಯಾದರೂ, ಗಡಿ, ನೀರು, ಜಾತಿ ಭಾಷೆಗಳ ವಿಚಾರಕ್ಕೆ ಕಿತ್ತಾಡುವವ ರೆಲ್ಲರ ಬಾಯಲ್ಲಿ ಗೋವಿಂದ ನಾಮಾವಳಿ ಪ್ರತಿಧ್ವನಿಸುತ್ತಿತ್ತು! ಆ ಮಟ್ಟಿಗೆ ಬಾಲಾಜಿ ನಮ್ಮನ್ನೆ ಏಕತೆಯ ಮಂತ್ರ ಪಠಿಸುವ ಬುದ್ಧಿ ಕರುಣಿಸಿದ್ದ. ನಾವೆಲ್ಲರೂ ಮೊಬೈಲ್ ಮತ್ತು ನಮ್ಮ ಎಲ್ಲಾ ಎಲೆಕ್ಟ್ರಾನಿಕ್ ಡಿವೈಸ್ ಗಳಿಂದ ದೂರ ವಿರುವ ಕಾರಣ ಉಚಿತವಾದ ಮೊಬೈಲ್ ಡಿ ಅಡಿಕ್ಷನ್ ಆದ ಅನುಭವ! ಕಂಪಾರ್ಟ್ ಮೆಂಟ್ ನಲ್ಲಿ ಟಿ ಟಿ ಡಿ ಯವರು ಆಗಾಗ್ಗೆ ಅನ್ನ ಪ್ರಸಾದ ನೀಡುವರು. ಅ ಜಲಪ್ರಸಾದ ಲಭ್ಯ.ನಿತ್ಯ ಕರ್ಮಕ್ಕೂ ಸ್ಥಳಾವಕಾಶವನ್ನು ಕಲ್ಪಿಸಿದ್ದಾರೆ. ದೊಡ್ಡ ಪರದೆಯ ಮೇಲೆ ಸ್ವಾಮಿಯ ವಿವಿಧ ಸೇವೆಗಳನ್ನು ಕಣ್ತುಂಬಿಸಿಕೊಳ್ಳುವ ಭಾಗ್ಯ. ಸುಮಾರು ಹದಿನೇಳು ಗಂಟೆಗಳ ಕಾಯುವಿಕೆಯ ನಂತರ, ಗರ್ಭಗುಡಿಯ ಹತ್ತಿರ ಬಂದೆವು. ಸ್ವಾಮಿಯ ದಿವ್ಯ ಸ್ವರೂಪವನ್ನು ಕಣ್ತುಂಬಿಸಿಕೊಂಡು ಹೊರಬರುವಾಗ ಒಂದು ಅವ್ಯಕ್ತವಾದ ಸಂತಸ ಮನೆ ಮಾಡಿ ಧನ್ಯತಾ ಭಾವ ಮೂಡುತ್ತದೆ. ಈ ಬಾರಿ ತಿರುಪತಿಗೆ ಹೋದಾಗ ನಾನು ಗಮನಿಸಿದ ಮತ್ತೊಂದು ಒಳ್ಳೆಯ ಅಂಶ ಏಕಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ! ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಬದಲಿಗೆ ಒಂದು ಲೀಟರ್ ಗಾಜಿನ ಬಾಟಲ್ ಗಳಲ್ಲಿ ನೀರಿನ ಮಾರಾಟ ಮಾಡುವುದು ಕಂಡು ಬಂತು. ದರ ಸ್ವಲ್ಪ ಹೆಚ್ಚಾದರೂ ಪರಿಸರ ಕಾಳಜಿಯ ಆಶಯ. ಲಾಡು ಖರೀದಿಸಲು ಪ್ಲಾಸ್ಟಿಕ್ ಚೀಲದ ಬದಲಿಗೆ ಪರಿಸರ ಸ್ನೇಹಿ ಚೀಲಗಳ ಬಳಕೆ. ಈ ಬಾರಿ ಬಾಲಾಜಿಯ ದರ್ಶನಕ್ಕೆ ತೆರಳಿದ ನಮ್ಮದು ಬರೀ ತೀರ್ಥ ಯಾತ್ರೆ ಅನಿಸಲ್ಲ ಬದಲಿಗೆ ಅದೊಂದು ಸಮಾಜೋ ಆರ್ಥಿಕ ಮಹತ್ವದ ಪಯಣವಾಗಿತ್ತು, ಏಕತೆಯ ಯಾತ್ರೆಯಾಗಿತ್ತು. ಪರಿಸರ ಜಾಗೃತಿಯ ಪಯಣ ಎನಿಸಿತು.