ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೀಗೊಂದು ವಿದಾಯ

ಹೀಗೊಂದು ವಿದಾಯ

ಹೀಗೊಂದು ವಿದಾಯ

Profile Vishwavani News Sep 7, 2022 5:13 PM
image-1c87a919-3e47-47d3-aa3f-13baaceb29f0.jpg
ಶ್ರೀರಂಜನಿ ಅಡಿಗ ನಾನು ಮೊದಲಿನಿಂದಲೂ ಅಪ್ಪನ ಮಗಳು. ಆದರೆ ಗಂಡನ ಜತೆ ಹೊರಟಾಗ, ಜತೆಯಲ್ಲಿ ಬರಹೇಳಿದ್ದು ಅಮ್ಮನನ್ನು ಮುಂಚಿನಿಂದಲೂ ನನ್ನನ್ನು ಎಲ್ಲರೂ ‘ಅಪ್ಪನ ಮಗಳು’ ಎಂದೇ ಕರೆಯುತ್ತಿದ್ದರು. ಎಲ್ಲಿ ಹೋಗುವುದಿದ್ದರೂ ಅಪ್ಪನ ಬಾಲ. ಸೈಕಲ್ ಮೇಲೆ ಅಪ್ಪ ಹತ್ತಿ ಕೂರುವುದಕ್ಕಿಲ್ಲ ‘ನಾ ಬತ್ತೆ ಅಪ್ಪಯ್ಯ’ ಎಂದು ಕ್ಯಾರಿಯರ್ ಮೇಲೆ ಹತ್ತುತ್ತಿದ್ದೆ. ಶಾಲೆಯಲ್ಲಿ ನಡೆಯುವ ಭಾಷಣ, ನಟನೆ ಸ್ಪರ್ಧೆಗಳಿಗೆ ಅಪ್ಪನೇ ತರಬೇತಿ ಕೊಡುತ್ತಿದ್ದ ರಿಂದ ಅವರ ಮೇಲಿನ ಅವಲಂಬನೆ ಹೆಚ್ಚಿರುವುದಕ್ಕೆ ಕಾರಣವಾಗಿತ್ತು. ಅಮ್ಮನ ಹತ್ತಿರ ಈ ತರಹದ ಬಳಕೆಯಿಲ್ಲ. ಅವಳಿಗೆ ಮನೆಯ ಕೆಲಸ, ದನಕರು, ಪಾತ್ರೆ, ಬಟ್ಟೆ ತೊಳೆಯುವುದೆಂದು ಸಮಯ ಕಳೆಯುತ್ತಿತ್ತು. ನೆಂಟರು, ಅಡುಗೆ, ನಮ್ಮ ಆರೈಕೆ ಎಂದು ಅರೆನಿಮಿಷ ವಿರಾಮವಿರುತ್ತಿರಲಿಲ್ಲ. ಹೀಗಾಗಿ ಅಪ್ಪನೇ - ಅವರಿಗೂ ಪುರುಸೊತ್ತು ಕಮ್ಮಿ ಇದ್ದರೂ - ಶಾಲೆಯ ವಿಷಯಗಳನ್ನು ಕೇಳುತ್ತಿದ್ದುದು. ಸ್ಕೂಲ್ ಡೇಗಳಲ್ಲಿ ನಮ್ಮ ಪಾರ್ಟು ನೋಡಲು ಬರುತ್ತಿದ್ದುದೂ ಕೂಡಾ ಅಪ್ಪನೇ. ಅಮ್ಮನಿಗೆ ಅಂತದ್ದರಲ್ಲಿ ಅಸಕ್ತಿ ಕಮ್ಮಿ, ಒತ್ತಾಯಿಸಿದರೂ ‘ನಂಗೆತಕ್ಕೆ ಅದೆಲ್ಲ? ನಂಗರ್ಥವಾಗದು’ ಎಂದು ಕೆಲಸ ಹುಡುಕಿಕೊಂಡು ಹೋಗುತ್ತಿದ್ದಳು. ಇಂತಿಪ್ಪ ಈ ಅವಲಂಬನೆಯಲ್ಲಿ ಮದುವೆಯ ದಿನ ಗಂಡನ ಮನೆಗೆ ಹೊರಟಾಗ ಅತ್ತಿದ್ದು ಮಾತ್ರ ‘ಅಮ್ಮನನ್ನು ಬಿಟ್ಟು ಹೋಗಬೇಕಲ್ಲ’ ಎಂದು. ವಧುವಿನ ಕೋಣೆಯಲ್ಲಿ ಕೂತು ನಾನು ಮನಸೋ ಇಚ್ಛೆ ಅತ್ತಿದ್ದೆ. ಕಣ್ಣೀರನ್ನು ತಡೆಹಿಡಿಯದೆ! ಕಾರು ಹತ್ತಿ ಹೊರಡುವಾಗ, ‘ಅಮ್ಮ ನೀನು ಬಾ ನನ್ನ ಜೊತೆ’ ಎಂದು ತುಂಬಿದ ಕಂಗಳಲ್ಲಿ ಹೇಳಿದಾಗ ‘ಇವತ್ತು ಒಂದು ರಾತ್ರಿಯಷ್ಟೇ. ನಾಳೆ ಬರ್ತೇನಲ್ಲ?’ ಎಂದು ಮಗುವಿಗೆ ಹೇಳುವಂತೆ ಹೇಳಿ ಸಮಾಧಾನಿಸಿದ್ದಳು. ಸ್ವಲ್ಪ ಜಾಸ್ತಿಯೇ ಇಮೋ ಶನಲ್ ಎಂದುಕೊಂಡಿದ್ದ ನನ್ನ ಆಮ್ಮ ಅವತ್ತು ಒಂದು ಹನಿ ಕಣ್ಣೀರನ್ನು ಸುರಿಸದೆ ಧೈರ್ಯದಿಂದ ಹೇಳಿದ್ದು ಆ ಕ್ಷಣದಲ್ಲೂ ಅಚ್ಚರಿ ಮೂಡಿಸಿತ್ತು. ಸಾಮಾನ್ಯವಾಗಿ ಅಪ್ಪ ಎಲ್ಲ ವಿಷಯಕ್ಕೂ ನಿರ್ಲಿಪ್ತರು. ಅಪ್ಪನಿಗೆ ‘ಬರುತ್ತೇನೆ ಅಪ್ಪ’ ಎಂದು ಹೇಳಲು ಹುಡುಕಿದರೆ ಅವರು ಅಲ್ಲೂ ಇಲ್ಲ. ನಾನು ಹೊರಡುವುದನ್ನು ನೋಡಲು ಅವರಿಂದಾಗದು ಎಂದು, ಛತ್ರದ ಒಳಗಿನ ರೂಮಿನಲ್ಲಿ ಮೌನವಾಗಿ ಕೂತಿದ್ದರಂತೆ! ಪ್ರತಿ ವರ್ಷ ಮದುವೆಯ ವಾರ್ಷಿಕೋತ್ಸವದಂದು ಈ ಘಟನೆ ನೆನಪಾದಾಗ ‘ಇವರಿಬ್ಬರಲ್ಲಿ ಗಟ್ಟಿಗರಾರು?’ ಎಂಬ ಪ್ರಶ್ನೆ ಮೂಡಿಸಿಬಿಡುತ್ತದೆ. ಜತೆಗೆ, ಒಂದು ಹೇಳಲಾಗದ ಭಾವವನ್ನು ಸಹ!