ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದ ಮನವಿಯನ್ನು ನಿರಾಕರಿಸಲು ಭಾರತಕ್ಕೆ ಇದೆಯೇ ಅವಕಾಶ?
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಕಳೆದ ಒಂದು ವರ್ಷದಿಂದ ಆಶ್ರಯ ನೀಡಿರುವ ಭಾರತಕ್ಕೆ ಈಗ ಸವಾಲೊಂದು ಎದುರಾಗಿದೆ. ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ) ಮರಣದಂಡನೆ ಶಿಕ್ಷೆಯನ್ನು ವಿಧಿಸಿರುವುದರಿಂದ ಅವರನ್ನು ಭಾರತವು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕಾಗುತ್ತದೆ. ಆದರೆ ಬಾಂಗ್ಲಾದೇಶದ ಮನವಿಯನ್ನು ತಿರಸ್ಕರಿಸಲು ಭಾರತಕ್ಕೆ ಅವಕಾಶವಿದೆ. ಅದು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಡಾ. ಮೊಹಮ್ಮದ್ ಯೂನಸ್, ಶೇಖ್ ಹಸೀನಾ, ಪ್ರಧಾನಿ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ: ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಿಂದ (International Crimes Tribunal,) ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ( EX Prime Minister ) ಶೇಖ್ ಹಸೀನಾ (Sheikh Hasina) ಅವರಿಗೆ ಕಳೆದ ಒಂದು ವರ್ಷದಿಂದ ಭಾರತ ಆಶ್ರಯ ನೀಡಿದೆ. ನ್ಯಾಯ ಮಂಡಳಿಯ ತೀರ್ಪು ಭಾರತದ ಪಾಲಿಗೆ ಹೊಸ ಸವಾಲನ್ನು ಸೃಷ್ಟಿಸಿದೆ. ಹಸೀನಾ ಅವರ ಹಸ್ತಾಂತರಕ್ಕೆ ಈಗಾಗಲೇ ಬಾಂಗ್ಲಾದೇಶ ಮನವಿ ಮಾಡಿದೆ. ಭಾರತದ ಮುಂದಿನ ನಡೆ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲದೇ ಇದ್ದರೂ ಬಾಂಗ್ಲಾದೇಶದ ಮನವಿಯನ್ನು ತಿರಸ್ಕರಿಸಲು ಭಾರತಕ್ಕೆ ಅವಕಾಶವಿದೆ. ಆದರೆ ಅದನ್ನು ಭಾರತ ಬಳಸುವುದೋ ಇಲ್ಲವೋ ಎಂಬುದು ಕಾದು ನೋಡಬೇಕಿದೆ.
ಬಾಂಗ್ಲಾದೇಶದಲ್ಲಿ 2024ರಲ್ಲಿ ನಡೆದ ತೀವ್ರ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಹಸೀನಾ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಹಸೀನಾ ಮತ್ತು ಅವರ ಮಾಜಿ ಗೃಹ ಸಚಿವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮರಣದಂಡನೆಯನ್ನು ವಿಧಿಸಿದೆ. ಈ ನಡುವೆಯೇ ಹಸೀನಾ ಅವರ ಹಸ್ತಾಂತರಕ್ಕೆ ಬಾಂಗ್ಲಾದೇಶ ಭಾರತಕ್ಕೆ ಮನವಿಯನ್ನು ಕೂಡ ಮಾಡಿದೆ.
ಇದನ್ನೂ ಓದಿ: Sheikh Hasina: ಸೇನಾಡಳಿತದಿಂದ ಬಾಂಗ್ಲಾವನ್ನು ಕಾಪಾಡಿದ್ದ ದಿಟ್ಟ ನಾಯಕಿ ಶೇಖ್ ಹಸೀನಾ ಅವರ ಹಿನ್ನಲೆ ಏನು ಗೊತ್ತಾ..?
ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈಗಾಗಲೇ ಹಸ್ತಾಂತರ ಒಪ್ಪಂದವಿದೆ. ಇದರ ಜೊತೆಗೆ ಭಾರತೀಯ ಕಾನೂನು ಹಸ್ತಾಂತರ ಪ್ರಕ್ರಿಯೆ ಸಂಬಂಧಿಸಿ ಕೆಲವು ನಿಯಮಗಳನ್ನು ಕೂಡ ಹೊಂದಿದೆ.
ಶೇಖ್ ಹಸೀನಾ ಅವರ ಹಸ್ತಾಂತರ ವಿಷಯವು ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ನ್ಯಾಯಾಂಗ ನಿಯಮಗಳ ಅಡಿಯಲ್ಲಿ ಬರುತ್ತದೆ ಎಂಬುದನ್ನು ಈಗಾಗಲೇ ಭಾರತ ಹೇಳಿದೆ. ಇದಕ್ಕಾಗಿ ಎರಡು ದೇಶಗಳ ನಡುವೆ ಕೆಲವು ಔಪಚಾರಿಕ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಅಗತ್ಯವಿದೆ. ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಾ ಅವರು ತಿಳಿಸಿದ್ದಾರೆ.
ಹಸೀನಾ ಅವರಿಗೆ ಮರಣದಂಡನೆಯನ್ನು ವಿಧಿಸಿದ ಬಳಿಕ ಢಾಕಾದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸೈನ್ಯ, ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ದೇಶಾದ್ಯಂತ ನಿಯೋಜಿಸಲಾಗಿದೆ.
ಹಸ್ತಾಂತರ ಕಾಯ್ದೆ ಏನು ಹೇಳುತ್ತದೆ?
ಶೇಖ್ ಹಸೀನಾ ಹಸ್ತಾಂತರ ವಿಚಾರದಲ್ಲಿ ಭಾರತ ಯಾವುದೆಲ್ಲ ವಿಷಯಗಳನ್ನು ಗಮನಿಸಬಹುದು ಎನ್ನುವ ಕುರಿತು ಕಾನೂನು ತಜ್ಞರು ಹೇಳುವುದು ಹೀಗೆ.
ಹಸ್ತಾಂತರ ಒಪ್ಪಂದಗಳನ್ನು ನಂಬಿಕೆ ಮತ್ತು ನ್ಯಾಯದ ಹಿತಾಸಕ್ತಿಯನ್ನು ಗಮನಿಸಿ ಗೌರವಿಸಲಾಗುತ್ತದೆ. ವಿನಂತಿಯು ರಾಜಕೀಯ ಪ್ರೇರಿತ ಅಥವಾ ಅನ್ಯಾಯವೆಂದು ಕಂಡುಬಂದರೆ ಅದನ್ನು ತಿರಸ್ಕರಿಸುವ ಅಧಿಕಾರವೂ ದೇಶಕ್ಕೆ ಇರುತ್ತದೆ.
ಭಾರತದ ಹಸ್ತಾಂತರ ಕಾಯ್ದೆ 1962 ರ ಅಡಿಯಲ್ಲಿ ಒಬ್ಬ ವ್ಯಕ್ತಿಯ ಹಸ್ತಾಂತರ ಮತ್ತು ಕಾಯ್ದೆಯ ಸೆಕ್ಷನ್ 29ರ ಅಡಿಯಲ್ಲಿ ಹಸ್ತಾಂತರ ವಿನಂತಿಯನ್ನು ತಿರಸ್ಕರಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.
ಶೇಖ್ ಹಸೀನಾ ಹಸ್ತಾಂತರ ಪ್ರಕ್ರಿಯೆಯು ಕ್ಷುಲ್ಲಕ ಅಥವಾ ನಂಬಿಕೆಗೆ ಯೋಗ್ಯವಾಗಿಲ್ಲದಿದ್ದರೆ, ರಾಜಕೀಯ ಪ್ರೇರಿತವಾಗಿದ್ದರೆ, ನ್ಯಾಯದ ಹಿತಾಸಕ್ತಿಯಲ್ಲಿ ಇಲ್ಲದೇ ಇದ್ದರೆ ಹಸ್ತಾಂತರದ ವಿಚಾರಣೆಯನ್ನು ತಡೆಹಿಡಿಯಲು, ವಾರಂಟ್‌ಗಳನ್ನು ರದ್ದುಗೊಳಿಸಲು ಅಥವಾ ಕೋರಿದ ವ್ಯಕ್ತಿಯನ್ನು ಬಿಡುಗಡೆ ಮಾಡದೇ ಇರಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ.
ಸೆಕ್ಷನ್ 31ರ ಪ್ರಕಾರ ಪರಾರಿಯಾದವರು, ರಾಜಕೀಯ ಅಪರಾಧಕ್ಕಾಗಿ ವ್ಯಕ್ತಿಯನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ನಿಯಮದ ಪ್ರಕಾರ ವಿಚಾರಣೆಯನ್ನು ಕೂಡ ಸೀಮಿತಗೊಳಿಸಲಾಗಿದೆ. ಸಂಬಂಧವಿಲ್ಲದ ಅಪರಾಧಗಳಿಗೆ ವಿಚಾರಣೆಯಿಂದ ರಕ್ಷಣೆ ಒದಗಿಸಲಾಗುವುದಿಲ್ಲ.
ಯಾವ ಪ್ರಕರಣದ ಕುರಿತು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂಬುದನ್ನು ಕೂಡ ಸ್ಪಷ್ಟ ಪಡಿಸಬೇಕು ಎಂದು ಸೆಕ್ಷನ್ 31(ಸಿ) ಹಸ್ತಾಂತರ ಒಪ್ಪಂದದಲ್ಲಿ ಹೇಳಲಾಗಿದೆ.
ಅಪರಾಧವು ರಾಜಕೀಯವಾಗಿದ್ದರೆ ಕೂಡ ಭಾರತ ಹಸ್ತಾಂತರವನ್ನು ನಿರಾಕರಿಸಬಹುದು. ಕೊಲೆ, ಭಯೋತ್ಪಾದನೆ, ಸ್ಫೋಟಗಳು, ಬಂದೂಕು ಉಲ್ಲಂಘನೆ, ಅಪಹರಣ, ಘೋರ ಹಲ್ಲೆ ಮತ್ತು ಬಹುಪಕ್ಷೀಯ ಅಪರಾಧ ವಿರೋಧಿ ಒಪ್ಪಂದಗಳ ಅಡಿಯಲ್ಲಿ ವಿವಿಧ ರೀತಿಯ ಗಂಭೀರ ಅಪರಾಧಗಳನ್ನು ರಾಜಕೀಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕಾಯ್ದೆ ಹೇಳಿದೆ.
ಆರೋಪ ಹೊಂದಿರುವ ವ್ಯಕ್ತಿಯನ್ನು ಭಾರತ ವಿಚಾರಣೆ ನಡೆಸುವುದಾದರೆ ಅಥವಾ ಆರೋಪಿಯು ಹಸ್ತಾಂತರವು ಅನ್ಯಾಯ ಅಥವಾ ದಬ್ಬಾಳಿಕೆ ಎಂದು ಕಂಡು ಬಂದರೆ ಹಸ್ತಾಂತರವನ್ನು ಭಾರತ ನಿರಾಕರಿಸಲು ಅವಕಾಶವಿದೆ.
ಸಣ್ಣ ಅಪರಾಧ, ಅಪರಾಧ ನಡೆದು ಹಲವು ವರ್ಷಗಳಾಗಿದ್ದರೆ, ಆರೋಪ ನಂಬಿಕೆಗೆ ಯೋಗ್ಯವಾಗಿಲ್ಲದೇ ಇದ್ದರೆ, ಅಪರಾಧ ಮಿಲಿಟರಿ ಸ್ವರೂಪದ್ದಾಗಿದ್ದರೆ, ಮೊದಲೇ ಆರೋಪಿಗೆ ಶಿಕ್ಷೆಯಾಗಿದ್ದು, ಶಿಕ್ಷೆ ವಿಧಿಸದೇ ಇದ್ದರೆ ಕೂಡ ಹಸ್ತಾಂತರವನ್ನು ನಿರಾಕರಿಸುವ ಅಧಿಕಾರ ಭಾರತಕ್ಕೆ ಇದೆ. ಇದರಲ್ಲಿ ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಒಪ್ಪಂದ ಹೇಳಿದೆ.
ಇದನ್ನೂ ಓದಿ: Sheikh Hasina: ಶೇಖ್ ಹಸೀನಾ ಗಡಿಪಾರಿಗೆ ಬಾಂಗ್ಲಾ ಒತ್ತಾಯ; ಭಾರತ ಹೇಳಿದ್ದೇನು?
ಒಪ್ಪಂದದ 21ನೇ ವಿಧಿಯ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿ ಆರು ತಿಂಗಳ ಸೂಚನೆಯೊಂದಿಗೆ ಎರಡೂ ದೇಶಗಳು ಒಪ್ಪಂದವನ್ನು ಕೊನೆಗೊಳಿಸಬಹುದು. ಎರಡು ರಾಷ್ಟ್ರಗಳ ನಡುವಿನ ಒಪ್ಪಂದವನ್ನು ಜಾರಿಗೊಳಿಸಲು ಅಥವಾ ಇದರಲ್ಲಿ ಮಧ್ಯಪ್ರವೇಶಿಸಲು ವಿಶ್ವ ಸಂಸ್ಥೆಗೂ ಅಧಿಕಾರವಿಲ್ಲ. ಎರಡು ರಾಷ್ಟ್ರಗಳ ನಡುವಿನ ಒಪ್ಪಿಗೆಯಿಲ್ಲದೆ ಅಂತಾರಾಷ್ಟ್ರೀಯ ನ್ಯಾಯಾಲಯವು ಹಸ್ತಕ್ಷೇಪ ಮಾಡಲಾಗದು. ಹೀಗಾಗಿ ಹಸ್ತಾಂತರ ನಿರ್ಧಾರ ಎರಡು ರಾಷ್ಟ್ರಗಳ ಅಧಿಕಾರವಾಗಿದೆ ಎನ್ನುವುದನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.