ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೂಗು ಕಟ್ಟಿದೆಯೇ ?

ಮೂಗು ಕಟ್ಟಿದೆಯೇ ?

image-ccddc20c-3f41-4484-93a3-1d692db65bb6.jpg
ರವಿ ದುಡ್ಡಿನಜಡ್ಡು ಮೂಗು ಕಟ್ಟುವುದು, ನೆಗಡಿ, ಸಣ್ಣ ಕೆಮ್ಮು ಎಲ್ಲವೂ ಆಗಾಗ ನಮ್ಮನ್ನು ಕಾಡುವ ಕಿರಿಕಿರಿಗಳು. ಈಚಿನ ದಿನಗಳಲ್ಲಿ ಮಳೆ ಮತ್ತು ತುಂತುರು ಮಳೆ ಜಾಸ್ತಿಯಾಗಿರುವುದರಿಂದ, ನೆಗಡಿ, ಮೂಗು ಕಟ್ಟುವುದು, ಗಂಟಲು ನೋವು ಸಾಮಾನ್ಯ ಎನಿಸಿದೆ. ನೆಗಡಿ, - ಮೊದಲಾದವು ವೈರಸ್‌ನಿಂದ ಉಂಟಾಗುವ ದೈಹಿಕ ಸಮಸ್ಯೆಗಳು; ಆದ್ದರಿಂದ ಇವುಗಳಿಗೆ ಸುಲಭವಾದ ಔಷಧವಿಲ್ಲ; ಆಂಟಿಬಯೋಟಿಕ್‌ಗಳು ಬ್ಯಾಕ್ಟೀರಿಯಾದಿಂದ ಉಂಟಾದ ರೋಗಕ್ಕೆ ಔಷಧವೇ ಹೊರತು, ವೈರಸ್ ಸೋಂಕಿಗೆ ಪರಿಹಾರವಲ್ಲ. ಆದ್ದರಿಂದಲೇ, ನೆಗಡಿಯು ಒಮ್ಮೆ ಅಂಟಿತು ಎಂದರೆ, ಔಷಧ ತೆಗೆದುಕೊಂಡರೂ ಅಥವಾ ತೆಗೆದುಕೊಳ್ಳದಿದ್ದರೂ ಏಳು ದಿನದಲ್ಲಿ ವಾಸಿಯಾಗುತ್ತದೆ ಎಂಬ ನುಡಿಗಟ್ಟು ಜನಪ್ರಿಯ ವಾಗಿದೆ! ಹಾಗಿದ್ದರೆ, ಮೂಗು ಕಟ್ಟುವುದು, ಗಂಟಲು ನೋವಿನಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರವೇನು? ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಇದಕ್ಕೆ ಸಾಕಷ್ಟು ಮನೆಮದ್ದು ಗಳಿವೆ. ಬಿಸಿ ಬಿಸಿ ನೀರು, ಮೆಣಸಿನ ಕಾಳಿನ ಕಷಾಯ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಬೆರೆಸಿ ಕುದಿಸಿದ ಕಷಾಯಗಳು ಬಹು ಹಿಂದಿನಿಂದಲೂ ನೆಗಡಿಯ ವಿರುದ್ಧ ಹೋರಾಡುವ ಅಸಗಳೆನಿಸಿವೆ. ನಮ್ಮ ದೇಶದ ಪ್ರಸಿದ್ಧ ಸಂಬಾರ ಪದಾರ್ಥಗಳಾದ ಅರಸಿನ, ಶುಂಠಿ, ಬೆಳ್ಳುಳ್ಳಿ, ಮೆಣಸಿನ ಕಾಳುಗಳು ಸಾಮಾನ್ಯ ನೆಗಡಿ ಮತ್ತು ಗಂಟಲು ನೋವಿಗೆ ಉತ್ತಮ ಪರಿಹಾರಗಳು. ಅರ್ಧ ಲೋಟ ಹಾಲಿಗೆ ಉತ್ತಮ ಅರಸಿನ ಪುಡಿಯನ್ನು ಬೆರೆಸಿ ಕುಡಿದರೆ ಹಲವು ದೈಹಿಕ ಸಮಸ್ಯೆಗಳನ್ನು ಕ್ರಮೇಣ ದೂರಮಾಡಲು ಸಾಧ್ಯ. ನೆಗಡಿ, ಮೂಗು ಕಟ್ಟುವುದು ಮೊದಲಾದವುಗಳು ಸಣ್ಣ ಸಮಸ್ಯೆ ಎನಿಸಿದರೂ, ದೇಹದಲ್ಲಿ ಪ್ರತಿರೋಧ ಶಕ್ತಿಯು ದುರ್ಬಲ ವಾಗಿದ್ದರೆ, ಇವು ನಮ್ಮನ್ನು ಸಾಕಷ್ಟು ತೀಕ್ಷ್ಣವಾಗಿಯೇ ಕಾಡಬಹುದು. ಕೆಲವು ವಿಟಮಿನ್ ಮತ್ತು ಖನಿಜಾಂಶಗಳು ನಮ್ಮ ದೇಹದ ಪ್ರತಿರೋಧ ಶಕ್ತಿಯನ್ನು ವೃದ್ಧಿಸುವ ಮೂಲಕ, ಇಂತಹ ಸಮಸ್ಯೆಗಳ ಬಾಧೆಯನ್ನು ಕಡಿಮೆಗೊಳಿಸಬಲ್ಲವು ಎಂದು ಸಂಶೋಧ ನೆಗಳು ಕಂಡುಕೊಂಡಿವೆ. ವಿಟಮಿನ್ ಸಿ ಮತ್ತು ಜಿಂಕ್ ಸೇವನೆ ದೇಹದ ಪ್ರತಿರೋಧ ಶಕ್ತಿಯನ್ನು ಅಧಿಕಗೊಳಿಸಬಲ್ಲವು. ಜಿಂಕ್ ಹೊಂದಿರುವ ಸಿರಪ್ ಗಳನ್ನು ನೆಗಡಿಯ ಆರಂಭದಲ್ಲೇ ಮೂರರಿಂದ ನಾಲ್ಕು ಗಂಟೆಗೊಮ್ಮೆ ಸೇವಿಸುವುದರಿಂದ ಮೂಗು ಕಟ್ಟುವುದು ಮತ್ತು ನೆಗಡಿಯ ಭಾದೆ ಕಡಿಮೆಯಾಗಬಹುದು ಎಂದು ಅಧ್ಯಯನಗಳು ಗುರುತಿಸಿವೆ. ಬಿಸಿ ನೀರು: ಆಗಾಗ ಬಿಸಿ ಬಿಸಿ ನೀರು ಕುಡಿಯುವುದರಿಂದ ನೆಗಡಿ, ಗಂಟಲು ನೋವು ಕಡಿಮೆಯಾಗುವ ಸಾಧ್ಯತೆ ಅಧಿಕ. ಕೆಲವು ಬಾರಿ ವೈರಸ್‌ಗಳು ಗಂಟಲು ಮತ್ತು ಶ್ವಾಸನಾಳದ ಮೇಲ್ಭಾಗವನ್ನು ಕಾಡುತ್ತಿರುವಾಗ ಗಂಟಲು ನೋವು ಬರಬಹುದು; ಆಗ ಬಿಸಿ ಬಿಸಿ ನೀರನ್ನು ಕುಡಿಯುವುದರಿಂದ ಸಮಸ್ಯೆ ಕಡಿಮೆಯಾದೀತು. ಬಿಸಿಯಾದ ತಿಳಿ ಸಾರು ಅಥವಾ ಸೂಪ್ ಸಹ ಇದೇ ರೀತಿಯ ಪರಿಹಾರ ಒದಗಿಸಬಲ್ಲದು. ಮೆಣಸಿನ ಕಾಳಿನ ತಿಳಿ ಸಾರು ಇಂತಹ ಸಮಸ್ಯೆಗಳಿಗೆ ರಾಮಬಾಣ ಎಂದು ನಮ್ಮ ದೇಶದ ಪಾರಂಪರಿಕ ಜ್ಞಾನ ಕಂಡುಕೊಂಡಿದೆ. ಶುಂಠಿ, ಮೆಣಸಿನ ಕಾಳು ಮತ್ತು ಈರುಳ್ಳಿಯನ್ನು ಬೆರೆಸಿ ಕುದಿಸಿ, ಸೋಸಿದ ತಿಳಿ ಕಷಾಯವು ಗಂಟಲು ನೋವು, ನೆಗಡಿ, ತಲೆಭಾರ, ಮೂಗು ಕಟ್ಟುವುದು ಮೊದಲಾದ ಸಮಸ್ಯೆಗಳಿಗೆ ಸರಳ ಪರಿಹಾರ. ಒಂದು ಲೋಟ ಬೆಚ್ಚನೆ ಯ ನೀರಿಗೆ ಒಂದು ಚಮಚ ಉಪ್ಪು ಬೆರೆಸಿ ಆಗಾಗ ಬಾಯಿ ಮುಕ್ಕಳಿಸುವುದರಿಂದ, ಗಂಟಲನ್ನು ಕಾಡುವ ಹೆಚ್ಚಿನ ನೋವುಗಳು ಬಹುಬೇಗ ನಿಯಂತ್ರಣಕ್ಕೆ ಬರುತ್ತವೆ. ಕೆಮ್ಮಿಗೆ ಸರಳ ಪರಿಹಾರ: ಕೆಮ್ಮು ದೊಡ್ಡ ಸಮಸ್ಯೆ ಅಲ್ಲದೇ ಇದ್ದರೂ, ಪದೇ ಪದೇ ಕೆಮ್ಮು ಬರುತ್ತಿದ್ದರೆ ಮಕ್ಕಳಲ್ಲಾಗಲೀ, ದೊಡ್ಡವರಲ್ಲಾಗಲೀ ನಿದ್ರೆಗೆ ತೊಡಕಾಗಬಹುದು. ಅದನ್ನು ತಡೆಯಲು ಸರಳ ಉಪಾಯ ಒಂದಿದೆ. ಕಾಲು ಚಮಚ ಹಸಿ ಶುಂಠಿ ರಸ, ಕಾಲು ಚಮಚ ಲಿಂಬೆ ರಸ, ಅರ್ಧ ಚಮಚ ಜೇನು ತುಪ್ಪ, ಕಾಲು ಚಮಚ ದೊಡ್ಡಪತ್ರೆ ಎಲೆಯ ರಸ ಇದನ್ನು ಸೋಸಿ, ಒಂದು ಚಮಚ ಕುಡಿದರೆ ಹೆಚ್ಚಿನ ಕೆಮ್ಮುಗಳು ನಿಯಂತ್ರಣಕ್ಕೆ ಬರುತ್ತದೆ. ಈ ಮಿಶ್ರಣವನ್ನು ಮೂರರಿಂದ ನಾಲ್ಕು ಗಂಟೆಗೊಮ್ಮೆ ಸೇವಿಸಬಹುದು.