ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧಾರಾಕಾರ ಮಳೆಗೆ ಬೆಂಗಳೂರು ತತ್ತರ: ನಾಳೆಯೂ ಗುಡುಗು ಸಹಿತ ಸುರಿಯಲಿದೆ ವರ್ಷಧಾರೆ

Bengaluru Rains: ಗುರುವಾರ ಸಂಜೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ವರುಣನ ಆಗಮನವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಜೋರಾಗಿ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡಿದರು. ಶುಕ್ರವಾರವೂ ಮಳೆ ಮುಂದುವರಿಯಲಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole May 28, 2026 10:40 PM

ಬೆಂಗಳೂರು, ಮೇ 28: ಎಂದಿನಂತೆ ಗುರುವಾರ (ಮೇ 28) ಸಂಜೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ವರುಣನ ಆಗಮನವಾಗಿದೆ (Weather Report). ಇದರೊಂದಿಗೆ ವರುಣನ ಪರಿವಾರಗಳಾದ ಗುಡುಗು, ಮಿಂಚು, ಗಾಳಿಯೂ ಆಗಮಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ (Bengaluru Rains). ಅದರಲ್ಲೂ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಜೋರಾಗಿ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡಿದರು. ಮೊದಲೇ ಹವಾಮಾನ ಇಲಾಖೆ (IMD) ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಿದ್ದು, ಅದು ಅಕ್ಷರಶಃ ನಿಜವಾಗಿದೆ.

ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಿ ಗುಡುಗು-ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿದಿದೆ. ಇದರಿಂದ ಕಚೇರಿಯಿಂದ ಮನೆಗೆ ತೆರಳುವವರು ಪರದಾಡುವಂತಾಯಿತು. ಮೆಜೆಸ್ಟಿಕ್, ಕಾರ್ಪೊರೇಷನ್, ಎಂ.ಜಿ. ರಸ್ತೆ, ಯಶವಂತಪುರ, ಇಂದಿರಾ ನಗರ, ವೈಟ್‌ಫೀಲ್ಡ್, ಜಯನಗರ, ರಾಜರಾಜೇಶ್ವರಿ ನಗರ, ಎಲೆಕ್ಟ್ರಾನಿಕ್ ಸಿಟಿ ಸೇರಿನಗರದ ಬಹುತೇಕ ಎಲ್ಲ ಭಾಗಗಳಲ್ಲಿ ಮಳೆಯಾಗಿದೆ.

ತೋಡಿನಂತಾದ ರಸ್ತೆಗಳು

ಭಾರಿ ಮಳೆ ಸುರಿದ ಪರಿಣಾಮ ಬೆಂಗಳೂರಿನ ಬಹುತೇಕ ರಸ್ತೆಗಳು ತೋಡಿನಂತಾಗಿದ್ದು, ಕಿ.ಮೀ.ಗಟ್ಟಲೆ ಟ್ರಾಫಿಕ್‌ ಜಾಮ್‌ ಕಂಡುಬಂತು. ಹಲವು ಕಡೆಗಳಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತು.

ರಾಜ್ಯದ ವಿವಿಧ ಭಾಗಗಳಲ್ಲೂ ಸುರಿದ ಮಳೆ

ಬೆಂಗಳೂರು ಮಾತ್ರವಲ್ಲ ರಾಜ್ಯದ ಹಲವು ಕಡೆಗಳಲ್ಲೂ ಮಳೆ ಸುರಿದಿದ್ದು, ಗ್ರಾಮೀಣ ಭಾಗಳಲ್ಲಿ ಕೃಷಿಗೆ ಹಾನಿಯಾಗಿದೆ. ಕೆಲವೆಡೆ ವಿದ್ಯುತ್‌ ಕಂಬಗಳಿಗೆ ಹಾನಿಯಾಗಿ ತಾಸುಗಟ್ಟಲೆ ಸಂಪರ್ಕ ಕಡಿತಗೊಂಡಿದೆ.

ವಿವಿಧ ಕಡೆಗಳಲ್ಲಿ ಸುರಿದ ಮಳೆಯ ಪ್ರಮಾಣ (ಸೆಂಟಿ ಮೀಟರ್‌ಗಳಲ್ಲಿ): ಮಂಠಾಳ (ಬೀದರ್‌)-5, ಮಸ್ಕಿ (ರಾಯಚೂರು)-4, ಜಾಲಹಳ್ಳಿ (ರಾಯಚೂರು)-3, ನೆಲೋಗಿ (ಕಲಬುರಗಿ)-3, ಮುದಗಲ್‌ (ರಾಯಚೂರು)-3, ಯಡ್ರಾಮಿ (ಕಲಬುರಗಿ)-3, ಗೇರುಸೊಪ್ಪ (ಉತ್ತರ ಕನ್ನಡ)-3, ಸಿದ್ದಾಪುರ (ವಿಜಯಪುರ)-2, ಭಾಗಮಂಡಲ (ಕೊಡಗು)-2, ಹುಂಚದಕಟ್ಟೆ (ಶಿವಮೊಗ್ಗ)-2, ಮುದ್ದೇಬಿಹಾಳ (ವಿಜಯಪುರ)-2, ಕಮಲಾಪುರ (ಕಲಬುರಗಿ)-2, ಬಾದಾಮಿ (ಬಾಗಲಕೋಟೆ)-1, ಕುಷ್ಟಗಿ (ಕೊಪ್ಪಳ)-1, ಕಾರವಾರ (ಉತ್ತರ ಕನ್ನಡ)-1, ಧರ್ಮಸ್ಥಳ (ದಕ್ಷಿಣ ಕನ್ನಡ)-1.

ರಾಜಧಾನಿಯಲ್ಲಿ ಏರುತ್ತಿದೆ ಬಿಸಿಲಿನ ತಾಪ, ರಾಜ್ಯಾದ್ಯಂತ ಶುಷ್ಕ ವಾತಾವರಣ

ಶುಕ್ರವಾರದ ವಾತಾವರಣ ಹೇಗಿರಲಿದೆ?

ಇನು ಶುಕ್ರವಾರವಾರವೂ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ವಿವಿಧ ಕಡೆ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಮುಂದಿನ 5 ದಿನಗಳವರೆಗೆ ರಾಜ್ಯದ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರಲಾರದು. ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆ ಇರುವ ಸಾಧ್ಯತೆ ಇದೆ. ಮೀನುಗಾರರಿಗೆ ಯಾವುದೇ ಮುನ್ನೆಚ್ಚರಿಕೆ ನೀಡಲಾಗಿಲ್ಲ.

ಬೆಂಗಳೂರು ವೆದರ್‌ ರಿಪೋರ್ಟ್‌

ಬೆಂಗಳೂರಿನಲ್ಲಿ ಮಧ್ಯಾಹ್ನ/ಸಂಜೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ 30-40 ಕಿ.ಮೀ. ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 23°C ಹಾಗೂ 31°C ಇರಲಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.