Karnataka Weather: ಮುಂದಿನ 3 ದಿನ ಬೆಂಗಳೂರು, ಕೋಲಾರ ಸೇರಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ
ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಹೆಚ್ಚು. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿಗ್ರಿ ಸೆ. ಮತ್ತು 19 ಡಿಗ್ರಿ ಸೆ. ಇರುವ ಸಾಧ್ಯತೆ ಇದೆ.
ಮಳೆ (ಸಾಂದರ್ಭಿಕ ಚಿತ್ರ) -
ಬೆಂಗಳೂರು, ನ.22: ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಬೆಂಗಳೂರು, ಕೋಲಾರ ಸೇರಿ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಮಳೆ ಅಬ್ಬರಿಸಿದೆ. ಅದೇ ರೀತಿ ನವೆಂಬರ್ 24 ರವರೆಗೆ ಬೆಂಗಳೂರು, ಕೋಲಾರ ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಜಿಲ್ಲೆಗಳಲ್ಲಿ ಮುಂಜಾನೆ ರೀವ್ರ ಚಳಿ ಹಾಗೂ ಅಲ್ಲಲ್ಲಿ ದಟ್ಟ ಮಂಜಿನ ವಾತಾವರಣ (Karnataka Weather) ಇರುವ ಸಾಧ್ಯತೆಯಿದೆ.
ನ.23ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ನ.24ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : Health Tips: ಚಳಿಗಾಲದಲ್ಲಿ ಪಾಲಕ್ ಸೊಪ್ಪು ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
ನಂತರ ನ.25ರಿಂದ 28ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ ದಾಖಲು
ಕರ್ನಾಟಕದ ಸಮತಟ್ಟಾದ ಪ್ರದೇಶಗಲ್ಲಿ ಬೀದರ್‌ನಲ್ಲಿ ಶನಿವಾರ ಮುಂಜಾನೆ ರಾಜ್ಯದಲ್ಲೇ ಅತಿ ಕನಿಷ್ಠ ಉಷ್ಣಾಂಶ 15.2 ಡಿಗ್ರಿ ಸೆ. ದಾಖಲಾಗಿದೆ.
ಇನ್ನು ಮಲಕ್ಕಾ ಜಲಸಂಧಿಯ ಮಧ್ಯ ಭಾಗಗಳಲ್ಲಿ ಮೇಲಿನ ವಾಯು ಚಂಡಮಾರುತದ ಪ್ರಭಾವದಿಂದ ಇಂದು ಬೆಳಗ್ಗೆ ಮಲಕ್ಕಾ ಜಲಸಂಧಿ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ರೂಪುಗೊಂಡಿದೆ. ಇದು ನವೆಂಬರ್ 24ರ ಸುಮಾರಿಗೆ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಮತ್ತು ಆಗ್ನೇಯ ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವುದು ಮುಂದುವರಿದು, ಮುಂದಿನ 48 ಗಂಟೆಗಳಲ್ಲಿ ನೈರುತ್ಯ ಬಂಗಾಳಕೊಲ್ಲಿಯಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.