ಡಾ.ಡಿ.ಎಸ್.ಶ್ರೀನಿವಾಸ ಪ್ರಸಾದ್
ಅವರು ಸುಮ್ಮನೇ ಕ್ಯಾಮೆರಾ ಮುಂದೆ ಬಂದು ನಿಂತರೆ ಸಾಕು, ನೋಡುಗರಲ್ಲಿ ಭಾವನೆಗಳು ತಾವಾಗಿ ಹೊಮ್ಮುತ್ತವೆ. ಭಾರತೀಯ ಚಿತ್ರರಂಗದಲ್ಲಿ ಸಹಜ ಅಭಿನಯ ಎಂದ ತಕ್ಷಣ ನೆನಪಿಗೆ ಬರುವ ಪ್ರಮುಖ ಹೆಸರು ಅನಂತನಾಗ್. ಇಂಥ ಸಹಜ ಅಭಿನಯದ ಕಲಾವಿದನನ್ನು ಹೊಂದಿದ್ದು ಕನ್ನಡ ಚಿತ್ರರಂಗದ ಭಾಗ್ಯ. ಉತ್ತರ ಕನ್ನಡದ ಶಿರಾಲಿಯಲ್ಲಿ ಆನಂದಿ ನಾಗರ ಕಟ್ಟೆ, ಸದಾನಂದ ನಾಗರಕಟ್ಟೆ ಎಂಬ ಸಂಪ್ರದಾಯ ಬದ್ಧ, ಮಧ್ಯಮವರ್ಗದ ಕುಟುಂಬದಲ್ಲಿ ಸೆಪ್ಟೆಂಬರ್ 4, 1948 ರಲ್ಲಿ ಹುಟ್ಟಿದ ಅನಂತ ನಾಗರಕಟ್ಟೆ, ಮುಂದೆ ಮುಂಬಯಿಯಲ್ಲಿ ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸತೊಡಗಿದಾಗ ತಮ್ಮ ಹೆಸರನ್ನು ಅನಂತನಾಗ್ ಎಂದು ಬದಲಿಸಿಕೊಂಡರು.
ಅನಂತನಾಗ್ ಅವರು ಸಹಜಾಭಿನಯದ ಕಲಾವಿದರೆನ್ನುವುದು ನಿರ್ವಿವಾದದ ಸತ್ಯ. ಆದರೆ ಜನತೆಗೆ ಅನಂತ್ ಅವರು ಬಹಳ ಇಷ್ಟವಾಗಲು ಪ್ರಮುಖವಾದ ಕಾರಣಗಳಿವೆ.
1 ಭಾಷಾಸ್ಪಷ್ಟತೆ, ಉಚ್ಚಾರಣಾ ಸೊಗಸು- ಅನಂತನಾಗ್ ಅವರ ಯಾವುದೇ ಚಿತ್ರಗಳನ್ನು ನೋಡಿದರೂ ಸಹ ಅವರು ಯಾವ ಮಾತುಗಳನ್ನೂ ನುಂಗುವುದಿಲ್ಲ, ಅವರು ಆಡುವ ಅಕ್ಷರಕ್ಷರವೂ ಕಿವಿಗೆ, ಮನಸ್ಸಿಗೆ ಸುಸ್ಪಷ್ಟವಾಗಿ ತಟ್ಟುತ್ತವೆ. 2 ಕುಣಿತ- ಫೈಟಿಂಗ್‌ಗಳ ನೆರವಿಲ್ಲದೆ ಅಭಿಮಾನಿ ಗಳಿಗೆ ಹತ್ತಿರವಾದ ಕಲಾವಿದ ಕನ್ನಡದಲ್ಲಿ ಅನಂತನಾಗ್ ಮಾತ್ರ. ತನ್ನದೇ ಓರಗೆಯ ಕಲಾವಿದರು ಫೈಟಿಂಗ್, (ಶಂಕರನಾಗ್ ಅವರೇ ಹಲ್ಲು ಕಚ್ಚಿ ಹೇಳುವ ಸಂಭಾಷಣೆ, ಪೊಲೀಸ್ ಪಾತ್ರಗಳಿಗೆ ಹೆಸರಾದವರು) ಕುಣಿತಗಳಿಗೆ ಭೇಷ್ ಎನ್ನಿಸಿ ಕೊಂಡರೂ ಅನಂತನಾಗ್ ಯಾವ ಬಿರುದುಗಳಿಗೂ ತಲೆ ಕೆಡಿಸಿಕೊಂಡವರಲ್ಲ.
ಇದನ್ನೂ ಓದಿ: Ananth Nag: ಪದ್ಮಭೂಷಣ ಪುರಸ್ಕೃತ ಹಿರಿಯ ನಟ ಡಾ.ಅನಂತನಾಗ್‌ಗೆ ಸನ್ಮಾನಿಸಿ, ಅಭಿನಂದಿಸಿದ ಪ್ರಲ್ಹಾದ್ ಜೋಶಿ
ಫೈಟ್, ಕುಣಿತಗಳಿದ್ದರೇನೆ ಯಶಸ್ಸು ಎಂದು ನಂಬಿ ಕುಳಿತವರೂ ಅಲ್ಲ. 3 ಅತಿಯಾದ ಅಭಿನಯ ಇಲ್ಲದ ಕಲಾವಿದ. ದುರ್ಬೀನು ಹಾಕಿ ಹುಡುಕಿದರೂ ಸಹ ಅನಂತನಾಗ್ ಅವರಲ್ಲಿ ಅತಿರೇಕದ ಅಭಿನಯ ಕಾಣಲು ಸಾಧ್ಯವೇ ಇಲ್ಲ. ಅವರು ವಿಭಿನ್ನ ಕಾಲಘಟ್ಟಗಳಲ್ಲಿ ಅಭಿನ ಯಿಸಿದ ಯಾವುದೇ ಚಿತ್ರಗಳನ್ನು ನೋಡಿದರೂ ಇದು ಸತ್ಯಸ್ಯಸತ್ಯ.
ಅನಂತನಾಗ್- ಲಕ್ಷ್ಮಿ
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಅದ್ಭುತ ಜೋಡಿ. ಇಬ್ಬರು ಸಹಜಾಭಿನಯ ಚತುರರ ಸಂಗಮ ಕನ್ನಡ ಚಿತ್ರ ರಂಗಕ್ಕೆ ಅತ್ಯಮೋಘ ಚಿತ್ರಗಳನ್ನು ನೀಡಿವೆ. ಇವರಿ ಬ್ಬರ ಜೊತೆಗೆ ದೊರೈ-ಭಗವಾನ್, ಚಿ.ಉದಯ ಶಂಕರ್, ರಾಜನ್ -ನಾಗೇಂದ್ರ, ಎಸ್ಪಿಬಿ, ಎಸ್. ಜಾನಕಿ ಇವರ ಸಮ್ಮಿಲನ ಕನ್ನಡ ಚಿತ್ರರಂಗದ ಸವಿ ಸಿಹಿ ಚಿತ್ರಗಳ ಮಧುರಾನುಭವ ನೀಡಿರುವುದು ನಮ್ಮ ಕಣ್ಣು ಮುಂದಿನ ಸತ್ಯ.
ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಚಂದನದ ಗೊಂಬೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಸೇಡಿನ ಹಕ್ಕಿ (ಎಲ್ಲವೂ ಕಾದಂಬರಿಯಾಧಾರಿತ ಚಿತ್ರಗಳೇ), ನಾ ನಿನ್ನ ಬಿಡಲಾರೆ ಚಿತ್ರದಲ್ಲಿ ದೆವ್ವ ಹಿಡಿದಾಗ ಅನಂತ್ ಅಭಿನಯ ಅದ್ಭುತ. ಇವುಗಳ ಗೆಲುವು ಯಾರೂ ಮರೆಯು ವಂತಿಲ್ಲ. ದೊರೈ ಭಗವಾನ್, ಚಿ.ಉದಯಶಂಕರ್, ರಾಜನ್ ನಾಗೇಂದ್ರ, ಎಸ್ಪಿ, ಎಸ್. ಜಾನಕಿ, ಅನಂತ ನಾಗ್- ಕಲ್ಪನಾ ಅವರ ಬಯಲುದಾರಿ ಇವತ್ತಿಗೂ ಆಪಾತಮಧುರ.
ಬೆಂಕಿಯ ಬಲೆಯ ನರಸಿಂಹ ಮೂರ್ತಿ ಪಾತ್ರ ತರಾಸು ಅವರ ಕಾದಂಬರಿಯಲ್ಲಿ ಬಹಳ ಚಿಕ್ಕದು. ಆದರೆ ಚಿತ್ರದಲ್ಲಿ ಬಹಳ ಹಿಗ್ಗಿಸಲಾ ಗಿದೆ. ಅನಂತನಾಗ್ 100ಕ್ಕೆ 100ರಷ್ಟು ನ್ಯಾಯ ಒದಗಿಸಿದ್ದಾ ರೆನ್ನುವುದೂ ಅಷ್ಟೇ ನಿಜ. ಅನಂತನಾಗ್- ಲಕ್ಷ್ಮಿ ಅಭಿನಯದ ದೊರೈ ಭಗವಾನ್, ರಾಜನ್ ನಾಗೇಂದ್ರ, ಎಸ್ಪಿ- ಎಸ್.ಜಾನಕಿ ಅವರ ಕಾಂಬಿನೇಷನ್ ಹಾಡುಗಳನ್ನು ಈಗಲೂ ಮೆಲುಕು ಹಾಕುತ್ತಲೇ ಇರುತ್ತೇವೆ.
ಒಲಿದ ಜೀವ, ಬಿಸಿಲಾದರೇನು, ನಿನ್ನ ನಗುವು ಹೂವಂತೆ, ನನಗಾಗಿ ಬಂದ, ಒಲವಿನ ಸರಿಗಮ ರಾಗ, ನಯನದ ತುಂಬ, ಈ ಹಾಡುಗಳು ಜಯ ಗೋಪಾಲ್ ಅವರದ್ದು. ಆಕಾಶದಿಂದ ಧರೆಗಿಳಿದ ರಂಭೆ, ಮನೆಯನು ಬೆಳಗಿದೆ ಇಂದು, ನಾನು ನೀನು ಒಂದಾದ ಮೇಲೆ, ಚೆಲುವೆ ಓ ಚೆಲುವೆ, ಮನಸು ಹೇಳಿದೆ ಹೇಳಿದೆ, ಅನಂತನಾಗ್- ಲಕ್ಷ್ಮಿ ಜೋಡಿಯ ಇನ್ನೂ ಕೆಲವು ಗೀತೆಗಳು. ಅನಂತನಾಗ್ ಸುಹಾಸಿನಿ ಅವರ ಜೊತೆಗೆ ಅಭಿನಯಿಸಿದ ಹೊಸನೀರು, ಬಾಡದ ಹೂವುನಲ್ಲಿ ಪದ್ಮಪ್ರಿಯ ಜೊತೆಗಿನ ಅಭಿನಯ, ಕುದುರೆಮುಖ, ಪ್ರೇಮಾಯಣ, ಮಾತು ತಪ್ಪದ ಮಗ (ಆರತಿ) ಚಿತ್ರಗಳೂ ಚೆನ್ನಾಗಿವೆ. ಅರುಣರಾಗದ ವೈದ್ಯನ (ನಾಯಕಿ ಗೀತಾ)ಪಾತ್ರ ಮನಸ್ಸಿಗೆ ಹಾಗೇ ಸನಿಹವಾಗಿ ಬಿಡುತ್ತದೆ. ಗಂಭೀರ- ಹಾಸ್ಯ ಎರಡೂ ಪಾತ್ರಗಳನ್ನು ಅಷ್ಟೇ ಸರಾಗವಾಗಿ ಅಭಿನಯಿಸಬಲ್ಲ ಕಲಾವಿದರು ಅನಂತನಾಗ್.
ಮುದುಡಿದ ತಾವರೆ ಅರಳಿತು ಚಿತ್ರದಲ್ಲಿ ಹಠದಿಂದ ಕೊರಗುವ ನಾಯಕನಾಗಿ, ನಾಯಕಿಯನ್ನು ಗೋಳಾಡಿಸುವ ನಾಯಕನಾಗಿ ಇಬ್ಬನಿ ಕರಗಿತು ಚಿತ್ರದಲ್ಲಿ, ಹೀಗೆಲ್ಲ ಬಹಳ ವೈವಿಧ್ಯಮಯ ಆಯಾಮಗಳಲ್ಲಿ ಕಾಣಿಸಿಕೊಳ್ಳುವ ಅನಂತನಾಗ್ ನಾರದ ವಿಜಯದಲ್ಲಿ ಪೌರಾಣಿಕ ಪಾತ್ರವನ್ನೂ ಸಲೀಸಾದ ಹಾಸ್ಯದಲ್ಲಿ ಎರಕ ಹೊಯ್ದ ಜೀವಂತಿಕೆ, ಹಾಸ್ಯರತ್ನ ರಾಮಕೃಷ್ಣದ ವಿಕಟಕವಿ, ಗೌರಿ ಗಣೇಶದ ಮಿ.ಲಂಬೋದರ, ಗಣೇಶನ ಮದುವೆಯ ವೈ.ಜಿ ರಾವ್, ಇವೆಲ್ಲ ಅನಂತನಾಗ್ ಹೊರತು ಪಡಿಸಿ ಬೇರೆ ಯಾರೂ ಮಾಡಲು ಸಾಧ್ಯವೇ ಆಗದ ಪಾತ್ರಗಳು.
ಉಂಡೂ ಹೋದ ಕೊಂಡೂ ಹೋದ ಚಿತ್ರದ ಕಮಂಗಿಪುರದ ಜನಕ್ಕೆ ಮೋಸ ಮಾಡುವ ಕೌ ಇನ್‌ಸ್ಪೆಕ್ಟರ್, ಹೆಂಡ್ತಿಗ್ಹೇಳ್ಬೇಡಿ ಅನಂತನಾಗ್ ಅವರ ಅನನ್ಯ ಅಭಿನಯದ ಎರಕ. ಧೈರ್ಯಲಕ್ಷ್ಮಿ, ಗಾಯತ್ರಿ ಮದುವೆ, ನನ್ನ ದೇವರು, ಸುಖ ಸಂಸಾರಕ್ಕೆ 12 ಸೂತ್ರಗಳು... ಇಲ್ಲಿನ ಹಾಸ್ಯದ ಪಾತಳಿಗಳು ಬೇರೆ. ಆದರೆ ಅದನ್ನು ಹೂವೆತ್ತಿದಷ್ಟು ಅನಾಯಾಸವಾಗಿ ಅಭಿನಯಿಸಿದ ಅನಂತನಾಗ್ ಅವರು ಗೋಲ್‌ಮಾಲ್ ರಾಧಾಕೃಷ್ಣ, ರೋಲ್ ಕಾಲ್ ರಾಮಕೃಷ್ಣ, ಗಣೇಶ- ಸುಬ್ರಹ್ಮಣ್ಯ ಚಿತ್ರಗಳ ಪಾತ್ರ ಗಳ ಹೂರಣ ಹಾಸ್ಯವೇ ಆದರೂ ಅದರ ಮಜಲುಗಳು ಭಿನ್ನ. ಅದರಲ್ಲೂ ಸೈ ಎನ್ನಿಸಿದ ಅನಂತ ನಾಗ್ ನಾ ನಿನ್ನ ಬಿಡಲಾರೆ ಚಿತ್ರದಲ್ಲಿ ಅಭಿನಯಿಸಿದ ಗಾಂಭೀರ್ಯ, ಹಂಸಗೀತೆ ಚಿತ್ರದ ತಾದಾ ತ್ಮ್ಯತೆ ಅಚ್ಚರಿ ಮೂಡಿಸುತ್ತದೆ. ಈ ಬಗೆಯ ವೈವಿಧ್ಯ, ಟ್ರಾನ್ಸ್ʼಫಾರ್ಮೇಶನ್ ಇವತ್ತಿನ ಕಲಾವಿದರಿಗೆ ಮಾದರಿ ಮತ್ತು ಆದರ್ಶಪ್ರಾಯ.
ಯಂಡಮೂರಿ ವೀರೇಂದ್ರನಾಥ್ ಅವರ ಬೆಳದಿಂಗಳ ಬಾಲೆಯ ರೇವಂತ್ ಆಗಿ ಅನಂತನಾಗ್ ಅವರ ಅಭಿನಯ, ಮಾತಿಗಿಂತ ಮುಖಭಾವ, ಮೌನದ ಭಾವಾಭಿವ್ಯಕ್ತಿ ಪ್ರಕಟವಾಗಬೇಕಾದ ಪಾತ್ರ. ಅನಂತನಾಗ್ ಅವರ ಚಿರಸ್ಮರಣೀಯ ಅಭಿನಯ ಈ ಚಿತ್ರದ ಜೀವಂತಿಕೆ. ಭಾರ್ಗವ ಅವರ ಬಳಿ ಮಾತನಾಡುವಾಗ ಮತ್ತೆ ಹಾಡಿತು ಕೋಗಿಲೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಪಾತ್ರ, ನನ್ನ ಪಾತ್ರ ಎರಡರಲ್ಲಿ ಯಾವುದರ ತೂಕವೂ ಕಡಿಮೆಯಾಗಬಾರದು ಎಂದಷ್ಟೇ ಕೇಳಿದ ಅನಂತನಾಗ್, ವಿಷ್ಣುವರ್ಧನ್ ಅಭಿನಯ ಮರೆಯಲಾಗುವುದೇ ಪ್ರಸಾದ್ ಎಂದ ಭಾರ್ಗವ ಅವರ ಮಾತುಗಳನ್ನು ಇಲ್ಲವೆನ್ನಲಾಗುವುದೇ? ವಿಷ್ಣುವರ್ಧನ್ ಅನಂತನಾಗ್ ಜೋಡಿಯ ನಿಷ್ಕರ್ಷ, ಜೀವನದಿ ಚಿತ್ರಗಳೂ ಚೆನ್ನಾಗಿವೆ.
ವಯೋಮಾನಕ್ಕೆ ತಕ್ಕ ಪಾತ್ರಗಳನ್ನು ಆಯ್ಕೆ ಮಾಡಿಕೊಂಡ ಅನಂತನಾಗ್ ಅವರು ಅದರಲ್ಲೂ ಲೀಲಾಜಾಲವಾಗಿ ಅಭಿನಯಿಸಿ ಹೃದಯ ತಟ್ಟಿದ ಕಲಾವಿದರು. ಮುಂಗಾರು ಮಳೆ ಹಾಗೆ ಎಲ್ಲರಿಗೆ ಇಷ್ಟವಾದ ಪಾತ್ರವಾದರೆ, ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅನಂತನಾಗ್ ಅವರ ಅಭಿನಯ ವಂತೂ ಕಣ್ಣುಗಳನ್ನು ಆರ್ದ್ರವಾಗಿಸುತ್ತದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರ ಅನಂತನಾಗ್ ಅವರ ಮಾಗಿದ ಕಲಾವಿದತನದ ಹೆಗ್ಗುರುತು.
ಹಾಲಿವುಡ್, ಗಾಳಿಪಟ, ಪ್ರೀತಿ ಪ್ರೇಮ ಪ್ರಣಯ ಹೀಗೆ ಹಿರಿವಯಸ್ಸಿನಲ್ಲೂ ಇಷ್ಟವಾಗುವ ಅನಂತ ನಾಗ್ ಅವರ ಪಾತ್ರಗಳು.
ಶಂಕರ್- ಅನಂತ್
ತೆರೆಯ ಹಿಂದಿನ ತಾಂತ್ರಿಕ ಕೆಲಸಗಳ ಸೃಜನಶೀಲ ನಾಗುವ ಬಯಕೆ ಹೊಂದಿದ್ದ ಶಂಕರನಾಗ್‌ರನ್ನು ಅನಂತನಾಗ್ ಗಿರೀಶ್ ಕಾರ್ನಾಡ್ ಅವರ ಬಳಿ ಒತ್ತಾಯ ಮಾಡಿ ಕಳಿಸಿದ್ದರಿಂದಲೇ ಒಂದಾನೊಂದು ಕಾಲದಲ್ಲಿ ಚಿತ್ರದ ‘ಗಂಡುಗಲಿ’ ಆಗಿ ಶಂಕರನಾಗ್ ಮಿನುಗಿದರು.
ಮಾಲ್ಗುಡಿ ಡೇಸ್‌ನ ಚಿತ್ರೀಕರಣಕ್ಕಾಗಿ ಆಗುಂಬೆಯನ್ನು ತಮ್ಮನಿಗೆ ಸೂಚಿಸಿದವರೂ ಸಹ ಅನಂತ ನಾಗ್ ಅವರೇ. ಅನಂತನಾಗ್- ಶಂಕರನಾಗ್ ಅನೇಕ ಚಿತ್ರಗಳಲ್ಲೂ ಜೊತೆಯಾಗಿದ್ದಾರೆ. ಮಿಂಚಿನ ಓಟದಲ್ಲಿ ಅನಂತನಾಗ್ ಶಂಕರನಾಗ್ ಅಭಿನಯಿಸಿರುವುದಷ್ಟೇ ಅಲ್ಲದೆ, ಬೆಳ್ಳಿಮೋಡ ಹತ್ತುತ್ತಾ ಹಾಡನ್ನೂ ಹಾಡಿ ದ್ದಾರೆ.
ಆಕ್ಸಿಡೆಂಟ್, ರಾಮರಾಜ್ಯದಲ್ಲಿ ರಾಕ್ಷಸರು, ನೋಡಿ ಸ್ವಾಮಿ ನಾವಿರೋದೆ ಹೀಗೆ, ಮಕ್ಕಳಿರಲವ್ವ ಮನೆತುಂಬ, ಜನ್ಮಜನ್ಮದ ಅನುಬಂಧ, ಇದು ಸಾಧ್ಯ, ಜೀವಕ್ಕೆ ಜೀವ ಹೀಗೆ ಅನೇಕ ಚಿತ್ರಗಳಲ್ಲಿ ಈ ಸೋದರರ ಅಭಿನಯವಿದೆ. ಶಂಕರನಿಗೆ ನಾನು ಅಣ್ಣ ನಾಗಿರಲಿಲ್ಲ, ಅವನ ಪಾಲಿಗೆ ನಾನು ತಂದೆಯಾಗಿದ್ದೆ, ಅವನು ನನ್ನ ಮಗನಂತೆ ಇದ್ದ, 35ಕ್ಕೇ ಅವನನ್ನು ಕರೆದೊಯ್ದ ಆ ದೇವರನ್ನು ನಾನು ಕ್ಷಮಿಸೋದಿಲ್ಲ ಎಂಬ ಅನಂತನಾಗ್ ಅವರ ಸೋದರ ವಾತ್ಸಲ್ಯದ ನೋವೇ ಪಿ.ಲಂಕೇಶ ರಿಂದ ಪ್ರೇರಿತಗೊಂಡು ‘ನನ್ನ ತಮ್ಮ ಶಂಕರ’ ಎಂಬ ಕೃತಿ, ಅನಂತನಾಗ್ ಅವರೊಳಗಿದ್ದ ಲೇಖಕ ನನ್ನೂ ಪರಿಚಯಿಸುತ್ತದೆ.
78 ವರ್ಷದ ಹಿರಿಯ ಕಲಾವಿದರಾದ ಅನಂತ ನಾಗ್ ಎಂಬ ಹೃದಯಕ್ಕೆ ಆಪ್ತವಾಗುವ ಕಲಾವಿದರು ಸದಾ ನಳನಳಿಸಲಿ. ಕನ್ನಡಿಗರ ಹೃನ್ಮನ ತಣಿಸುತ್ತಿರಲಿ. ಗೌರವ ಡಾಕ್ಟರೇಟ್, ಪದ್ಮಭೂಷಣ, ಇದೀಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಎಲ್ಲಕ್ಕೂ ಅರ್ಹರಾದ ಸಹಜಾಭಿನಯ ಕಲಾವಿದ ಅನಂತನಾಗ್ ಅವರ ಹಿರಿಮೆ ಗರಿಮೆಗಳು ಮತ್ತಷ್ಟು ವಿಸ್ತರಿಸಲಿ.
ಪ್ರತಿಭೆಗೆ ದೊರೆತ ಫಲ
78 ವರ್ಷದ ಅನಂತ್‌ನಾಗ್ ಅವರು 300ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಐದು ದಶಕಗಳ ಅಭಿನಯ. 1973ರಲ್ಲಿ ಸಂಕಲ್ಪ ಸಿನಿಮಾ ಮೂಲಕ ನಟನೆ ಶುರು ಮಾಡಿದರು. ರಾಜ್ ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್ ಅಂತಹ ದೊಡ್ಡ ನಟರಿಂದ ಹೊಸ ಪೀಳಿಗೆಯ ಪುನೀತ್, ಗಣೇಶ್, ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ನಟರ ಜೊತೆ ನಟಿಸಿದ್ದಾರೆ.
ರಂಗಭೂಮಿಯ ಪ್ರತಿಭೆ
ವಯಸ್ಸು 16 ಆಗುವ ಮುನ್ನವೇ ಮುಂಬೈಗೆ ಕಳಿಸಲ್ಪಟ್ಟ ಅನಂತ್ ಅಲ್ಲಿ ಶಿಕ್ಷಣ ಮುಂದುವ ರೆಸಿದರು. ಅನಂತ್ ಅವರಿಗೆ ಸೈನ್ಯ ಸೇರಬೇಕು, ವಿಶೇಷವಾಗಿ ವಾಯುಸೇನೆಗೆ ಸೇರುವ ಬಯಕೆ ಇತ್ತು. ಆದರೆ ಅವರ ಕೃಶದೇಹದ ಕಾರಣ ಆ ಕನಸು ನನಸಾಗ ಲಿಲ್ಲ. ಆದರೆ ಸ್ಪುರದ್ರೂಪಿಯಾಗಿದ್ದ ಅವರನ್ನು ರಂಗಭೂಮಿ ಸೆಳೆಯಿತು. ಮಹಾ ರಾಷ್ಟ್ರದಾದ್ಯಂತ ವಿಶೇಷವಾಗಿ ಮುಂಬೈನಲ್ಲಿ ಆಧುನಿಕ ರಂಗಭೂಮಿಯ ಚಳವಳಿ ನಡೆಯುತ್ತಿದ್ದ ಸಮಯವದು. ಅನಂತನಾಗ್ ಅವರು ಅಮೋಲ್ ಪಾಲೇಕರ್ ಸೇರಿದಂತೆ ಹಲವು ದಿಗ್ಗಜರ ನಾಟಕಗಳಲ್ಲಿ ನಟಿಸಿದರು. ಹಿಂದಿ, ಕನ್ನಡ, ಕೊಂಕಣಿ, ಮರಾಠಿ ಹೀಗೆ ಭಾಷೆಯ ಹಂಗಿಲ್ಲದೆ ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಂಡರು. 1973 ರಲ್ಲಿ ಮೊದಲ ಸಿನಿಮಾ ‘ಅಂಕುರ್’ನಲ್ಲಿ ನಟಿಸುವಷ್ಟರ ನಟನೆಯ ಎಲ್ಲ ಪಟ್ಟುಗಳು ಅವರಿಗೆ ಕರಗತ ಆಗಿಬಿಟ್ಟಿದ್ದವು.
70ಕ್ಕೂ ಹೆಚ್ಚು ನಾಟಕಗಳಲ್ಲಿ ಅವರು ನಟಿಸಿದ್ದರು. ಚಿತ್ರರಂಗಕ್ಕೆ ಕಾಲಿರಿ ಸಿದ ಆರಂಭದಲ್ಲಿ ಹೊಸ ಅಲೆಯ ನಾಯಕ ಎನಿಸಿಕೊಂಡಿದ್ದ ಅನಂತ್ ನಾಗ್ ಶ್ಯಾಮ್ ಬೆನಗಲ, ಅಮೋಲ್ ಪಾಲೇಕರ್, ಶಬಾನಾ ಆಜ್ಮಿ ಇನ್ನೂ ಹಲವರೊಟ್ಟಿಗೆ ಕೆಲಸ ಮಾಡಿದರು. 1974ರಿಂದ 78ರ ವರೆಗೆ ಕನ್ನಡದ ಜೊತೆ-ಜೊತೆಗೆ ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿಯೂ ಕೆಲಸ ಮಾಡಿದರು. ಅವರ ಮೊದಲ ಹಿಂದಿ ಸಿನಿಮಾ ಅಂಕುರ್‌ಗೆ ಮೂರು ರಾಷ್ಟ್ರಪ್ರಶಸ್ತಿಗಳು ದೊರೆತವು.
![]()
ಚಿತ್ರೀಕರಣ ಮಾಡುವಾಗ ಇವರ ಅಭಿನಯ ಇದೇನಪ್ಪ ತಣ್ಣಗಿನ ಮೆಲುಸ್ತರದಲ್ಲಿ ಸಾಗುತ್ತಿದೆ ಯಲ್ಲ ಅನ್ನಿಸೋದು, ಆದರೆ ತೆರೆಯ ಮೇಲೆ ನೋಡಿದಾಗ ಅನಂತನಾಗ್ ಅವರ ಅಭಿನಯ ಉತ್ಕೃಷ್ಟವಾಗಿರುತ್ತಿತ್ತು. ಅನಂತ್ ಆ ತರಹದ ಒಬ್ಬ ಅದ್ಭುತ ಕಲಾವಿದ. ನಮ್ಮ ಅವರ ಸಂಯೋಜನೆಯಲ್ಲಿ ಅನೇಕ ಚಿತ್ರಗಳು ಯಶಸ್ವಿ ಯಾಗಲು ಅನಂತ್ ಅಭಿನಯ ಒಂದು ಮುಖ್ಯ ಕಾರಣ. ಅದಲ್ಲದೆ, ಸುಂದರ ಸುರದ್ರೂಪಿ ನಟ ಕೂಡ ಹಾಸ್ಯವನ್ನು ಬಹಳ ಚೆನ್ನಾಗಿ ಪ್ರೇಕ್ಷಕರಿಗೆ ತಲುಪಿಸಬಲ್ಲ ಎನ್ನುವುದನ್ನು ಪ್ರೂವ್ ಮಾಡಿ ದವರು ಅನಂತನಾಗ್.
-ಭಗವಾನ್, ನಿರ್ದೇಶಕ