ಹಿಂದಿರುಗಿ ನೋಡಿದಾಗ
(ಭಾಗ-1)
ಪುನರಪಿ ಜನನಂ ಪುನರಪಿ ಮರಣಂ,
ಪುನರಪಿ ಜನನೀ ಜಠರೇ ಶಯನಂ |
ಇಹ ಸಂಸಾರೆ ಬಹು ದುಸ್ತಾರೆ,
ಕೃಪಯಾ ಪಾರೇ ಪಾಹಿ ಮುರಾರೆ ||
ಶ್ರೀಶಂಕರಾಚಾರ್ಯ
ಜಾತಸ್ಯ ಮರಣಂ ಧ್ರುವಂ
ಭಗವದ್ಗೀತೆ
ಶ್ರಾವಸ್ತಿ ನಗರದ ಶ್ರೀಮಂತ ವರ್ತಕನ ಮಡದಿ ಕಿಸಾ ಗೌತಮಿ. ಆಕೆಯ ಏಕಮಾತ್ರ ಪುತ್ರ ಮರಣಿಸು ತ್ತಾನೆ. ಕಿಸಾ ಗೌತಮಿಯು ಪುತ್ರನ ಮರಣವನ್ನು ಸಹಿಸಲಾಗದೇ “ಯಾರಾದರೂ ನನ್ನ ಮಗುವನ್ನು ಬದುಕಿಸಿಕೊಡಿ" ಎಂದು ಕರುಳು ಕಿವುಚುವಂತೆ ರೋಧಿಸುತ್ತಾಳೆ. ಆಗ ಮುದುಕನೋರ್ವನು ಭಗವಾನ್ ಬುದ್ಧನನ್ನು ಕಾಣುವಂತೆ ಕಿಸಾ ಗೌತಮಿಗೆ ಸೂಚಿಸುತ್ತಾನೆ.
ಆಕೆಯು ನೇರವಾಗಿ ಬುದ್ಧನ ಬಳಿಗೆ ಬಂದು, ಅವನ ಪದತಲದಲ್ಲಿ ಮಗನ ಕಳೇಬರವನ್ನು ಇಟ್ಟು, ತನ್ನ ಮಗನಿಗೆ ಜೀವಕೊಡುವಂತೆ ಪ್ರಾರ್ಥಿಸುತ್ತಾಳೆ. ಆಕೆಯ ಅಳಲನ್ನು ಕೇಳಿದ ಭಗವಾನ್ ಬುದ್ಧ “ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತಂದರೆ ನಿನ್ನ ಮಗನನ್ನು ಬದುಕಿಸುವೆ" ಎನ್ನುತ್ತಾನೆ. ಕಿಸಾ ಗೌತಮಿಯು ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತರಲು ಇಡೀ ಶ್ರಾವಸ್ತಿ ನಗರದ ಮನೆಯೊಂದನ್ನೂ ಬಿಡದೆ ಸುತ್ತುತ್ತಾಳೆ. ಆದರೆ ಎಲ್ಲರ ಮನೆಯಲ್ಲಿಯೂ ಒಬ್ಬರಲ್ಲ ಒಬ್ಬರು ಸತ್ತೇ ಇರುತ್ತಾರೆ. ಸಂಜೆಯ ವೇಳೆಗೆ ಕಿಸಾ ಗೌತಮಿಗೆ ಜ್ಞಾನೋದಯವಾಗುತ್ತದೆ.
ಸಾವು ಅನಿವಾರ್ಯ, ಸಾವಿಲ್ಲದ ಮನೆ ಯಾವುದೂ ಇಲ್ಲ ಎನ್ನುವ ಸತ್ಯ ತಿಳಿದ ಕೂಡಲೇ, ಆಕೆ ಬುದ್ಧರಿಗೆ ಶರಣು ಹೋಗುತ್ತಾಳೆ. ಕಿಸಾ ಗೌತಮಿ ಬರುತ್ತಿರುವುದನ್ನು ನೋಡುತ್ತಿದ್ದ ಕೂಡಲೆ ಬುದ್ಧ ರಿಗೆ ಆಕೆಯು ‘ಅರ್ಹಂತ’ ಪಟ್ಟದ ಮೊದಲ ಮೆಟ್ಟಿಲನ್ನು ಹತ್ತಿರುವುದು ತಿಳಿಯುತ್ತದೆ. ನಂತರ ಆಕೆಗೆ, ಪೂರ್ಣ ಅರ್ಹಂತಳಾಗುವತ್ತ ಮಾರ್ಗದರ್ಶನವನ್ನು ತೋರುತ್ತಾರೆ ಭಗವಾನ್ ಬುದ್ಧ!
ಹುಟ್ಟು, ಸಾವು ಹಾಗೂ ಚಿರಂಜೀವತ್ವವು ಅನಾದಿ ಕಾಲದಿಂದಲೂ ಮನುಷ್ಯನನ್ನು ಕಾಡುತ್ತಾ ಬಂದಿವೆ. ‘ಹುಟ್ಟಿದವರು ಸಾಯಲೇಬೇಕು’ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ನುಡಿದಿದ್ದಾನೆ. ಈ ಸಾವನ್ನು ಅರ್ಥ ಮಾಡಿಕೊಳ್ಳಲು, ಸಾಧ್ಯವಾದಲ್ಲಿ ಸಾವನ್ನು ಗೆಲ್ಲಲು ಇಲ್ಲವೇ ಸಾವಿನಿಂದ ಪಾರಾಗಲು ಮನುಷ್ಯ ನಿರಂತರವಾಗಿ ಪ್ರಯತ್ನಿಸುತ್ತಿರುವುದನ್ನು ನಾವು ಮಾನವ ಇತಿಹಾಸದಲ್ಲಿ ಕಾಣುತ್ತೇವೆ.
ಇದನ್ನೂ ಓದಿ: Dr N Someshwara Column: ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು
ಬಹುಶಃ ಧರ್ಮ ಹಾಗೂ ದೇವರ ಉಗಮಕ್ಕೆ ಸಾವಿನ ಭೀತಿಯೇ ಕಾರಣವೆನಿಸುತ್ತದೆ. ಸಾವು ಬರದಂತೆ ಅಮರತ್ವವನ್ನು ನೀಡುವ ಅಮೃತವನ್ನು ಮನುಷ್ಯರು ಸೃಷ್ಟಿಸಿದರು. ಸಾವನ್ನು ಗೆದ್ದ ಮಾರ್ಕಂಡೇಯನ ಕಥೆಯನ್ನು ಕಟ್ಟಿದರು. ನಚಿಕೇತನು ಸ್ವಯಂ ಯಮನಿಂದಲೇ ಸಾವಿನ ರಹಸ್ಯ ವನ್ನು ಅರಿತನು ಎಂದರು. ಸಾವನ್ನು ಗೆದ್ದವರು ಚಿರಂಜೀವಿಗಳಾಗುತ್ತಾರೆ ಎಂದು ಹೇಳಿದರು.
ಮುಂದಿನ ಸತ್ಯಯುಗ ಆರಂಭವಾಗುವವರೆಗೂ ಇಡೀ ಕಲಿಯುಗದಾದ್ಯಂತ ಬಲಿ ಚಕ್ರವರ್ತಿ, ಪರಶುರಾಮ, ವಿಭೀಷಣ, ಹನುಮಂತ, ವ್ಯಾಸ, ಅಶ್ವತ್ಥಾಮ ಹಾಗೂ ಕೃಪಾಚಾರ್ಯರು ಚಿರಂಜೀವಿ ಗಳಾಗಿ ಜೀವಿಸಿರುತ್ತಾರೆ ಎಂದು ನಮ್ಮ ಪುರಾಣಗಳು ಹೇಳುತ್ತವೆ. ಹುಟ್ಟು, ಸಾವು ಹಾಗೂ ಚಿರಂಜೀ ವತ್ವವು ಇಡೀ ಮಾನವ ಕುಲವನ್ನು ಹದ್ದುಬಸ್ತಿನಲ್ಲಿ ಇಟ್ಟಿರುವ ಮೂರು ಪ್ರಮುಖ ಪ್ರಾಕೃತಿಕ ಶಕ್ತಿಗಳಾಗಿವೆ.
ಹುಟ್ಟು: ಇಂದಿಗೆ ಸುಮಾರು 14 ಬಿಲಿಯನ್ ವರ್ಷಗಳ ಹಿಂದೆ ಬ್ರಹ್ಮಾಂಡವು ರೂಪುಗೊಂಡಿತು. ನಮ್ಮ ಸೌರ ನಿಹಾರಿಕೆಯು 4.6 ಬಿಲಿಯನ್ ವರ್ಷಗಳ ಹಿಂದೆ ಒಂದು ಸೌರಮಂಡಲವಾಯಿತು. ಭೂಮಿಯು 4.5 ಬಿಲಿಯನ್ ವರ್ಷಗಳ ಹಿಂದೆ ಸ್ಪಷ್ಟ ಆಕೃತಿಯನ್ನು ತಳೆಯಿತು. ಮೊದಲ ಬಾರಿಗೆ ಏಕಕಣದ ಜೀವಿಯು 3.5 ಬಿಲಿಯನ್ ವರ್ಷಗಳ ಹಿಂದೆ ಸಮುದ್ರದಲ್ಲಿ ಹುಟ್ಟಿತು.
ಸಮುದ್ರದಲ್ಲಿ ಹುಟ್ಟಿದ ಜೀವಿಗಳು ತಮ್ಮ ಸಂತಾನವರ್ಧನೆಯನ್ನು ಬಹಳ ಸರಳವಾಗಿ ನಡೆಸು ತ್ತಿದ್ದವು. ಆಹಾರವನ್ನು ಸೇವಿಸಿ ಚೆನ್ನಾಗಿ ಬೆಳೆದ ಜೀವಕೋಶವೊಂದು ತನ್ನ ಒಡಲನ್ನು ಮಧ್ಯದಲ್ಲಿ ತಾನೇ ಸೀಳಿಕೊಂಡು ಎರಡಾಗಿ ಬಿಡುತಿತ್ತು. ಇದನ್ನು ಜೀವಶಾಸ್ತ್ರದ ಪರಿಭಾಷೆಯಲ್ಲಿ ‘ದ್ವಿ-ವಿಭಜನೆ’ (ಬೈನರಿ ಫಿಶನ್) ಎಂದು ಕರೆಯುತ್ತೇವೆ.
ದ್ವಿವಿಭಜನೆಯಲ್ಲಿ ರೂಪುಗೊಂಡ ಜೀವಕೋಶಗಳು ಆಹಾರವನ್ನು ಸೇವಿಸಿ, ಪುಷ್ಟವಾಗಿ ಬೆಳೆದ ಮೇಲೆ ಮತ್ತೆ ದ್ವಿವಿಭಜನೆಯ ಮೂಲಕ ನಾಲ್ಕು ಜೀವಿಗಳನ್ನು ರೂಪಿಸುತ್ತಿದ್ದವು. ಆ ನಾಲ್ಕು ಜೀವಿ ಗಳು ಮತ್ತೆ ಎಂಟು ಜೀವಿಗಳನ್ನು, ಎಂಟು ಹದಿನಾರು ಜೀವಿಗಳನ್ನು, ಹದಿನಾರು ಮೂವತ್ತೆರಡು ಜೀವಿಗಳ ಜನನಕ್ಕೆ ಕಾರಣವಾಗುತ್ತಿದ್ದವು. ಈ ದ್ವಿ- ವಿಭಜನೆ ಹೀಗೆ ನಿರಂತರವಾಗಿ ಮುಂದುವರಿ ಯುತ್ತಿತ್ತು. ಈ ಜೀವಿಗಳಿಗೆ ‘ಸಹಜ ಸಾವು’ ಎನ್ನುವುದು ಇರಲಿಲ್ಲ (ಆದರೆ ಅಪಘಾತಗಳಿಂದ, ಪ್ರಾಕೃತಿಕ ವೈಪರೀತ್ಯಗಳಿಂದ ಇಲ್ಲವೇ ಮತ್ತೊಂದು ಜೀವಿಯ ಭಕ್ಷಣೆಯಿಂದ ಅಸಹಜ ವಾಗಿ ಸಾವು ಬರುತ್ತಿತ್ತು ಎನ್ನುವುದು ಬೇರೆಯ ವಿಷಯ). ಹಾಗಾಗಿ ಒಂದರ್ಥದಲ್ಲಿ ಈ ಜೀವಿಗಳು ಚಿರಂಜೀವಿ ಗಳಾಗಿದ್ದವು.
ದ್ವಿ-ವಿಭಜನೆಯ ಪ್ರಕ್ರಿಯೆ: ‘ಚಿರಂಜೀವಿ’ ಜೀವಿಗಳು ಹೀಗೆ ಸುಮಾರು 1200 ಬಿಲಿಯನ್ ವರ್ಷ ಗಳವರೆಗೆ ಸಮುದ್ರದಲ್ಲಿ ಅವ್ಯಾಹತವಾಗಿ ಬೆಳೆದವು. ಆದರೆ, ಅದುವರೆಗೂ ತಮ್ಮ ಪಾಡಿಗೆ ಬದುಕು ತ್ತಿದ್ದ ಜೀವಿಗಳ ಬದುಕಿನಲ್ಲಿ ಒಂದು ಮಹತ್ತರ ತಿರುವನ್ನು ತರಲು ಪ್ರಕೃತಿಯು ನಿರ್ಧರಿಸಿತು.
ಸಾವಿನ ಹುಟ್ಟು: ಏಕಕಣ ಜೀವಿಗಳು ಪರಿಪಾಲಿಸುತ್ತಿದ್ದ ದ್ವಿ-ವಿಭಜನೆಯ ಬದಲು, ಅತ್ಯುತ್ತಮ ಗುಣಲಕ್ಷಣಗಳಿರುವ ವೈವಿಧ್ಯಮಯ ಜೀವಿಗಳನ್ನು ಸೃಜಿಸಲು ಲೈಂಗಿಕ ಸಂತಾನ ವರ್ಧನೆಯನ್ನು ಜಾರಿಗೆ ತರಲು ಮನಸ್ಸು ಮಾಡಿತು. ಈ ನಿರ್ಧಾರದ ಕಾರಣ, ಜೀವಿಗಳಲ್ಲಿ ಹಲವು ಬದಲಾವಣೆಗಳು ಮೂಡಿದವು.
? ಪ್ರಕೃತಿಯು ಬಹುಕೋಶ ಜೀವಿಗಳನ್ನು ಸೃಜಿಸಿತು.
? ಬಹುಕೋಶ ಜೀವಿಗಳಲ್ಲಿ ಜೀವಕೋಶಗಳು ಕೆಲಸವನ್ನು ಹಂಚಿಕೊಂಡವು. ಕೆಲವು ಕೋಶಗಳು ರಕ್ಷಣೆಯ ಜವಾಬ್ದಾರಿ ಹೊತ್ತವು. ಕೆಲವು ಆಹಾರ ಸಂಪಾದನೆಯನ್ನು ಮಾಡಿದವು. ಕೆಲವು ಆಹಾರ ವನ್ನು ಜೀರ್ಣಿಸಿ ಶಕ್ತಿಯನ್ನು ಒದಗಿಸಿದವು. ಕೆಲವು ಚಲನೆಗೆ ನೆರವಾದವು. ಹೀಗೆ ಜೀವಕೋಶಗಳು ವಿವಿಧ ರೀತಿಯ ಕೆಲಸವನ್ನು ವಹಿಸಿಕೊಂಡಾಗ ಕೆಲವು ಜೀವ ಕೋಶಗಳು ಸಂತಾನವರ್ಧನೆಯ ಜವಾಬ್ದಾರಿಯನ್ನು ಹೊತ್ತುಕೊಂಡವು.
? ಸಂತಾನವರ್ಧನಾ ಕಾರ್ಯದಲ್ಲಿ ಭಾಗಿಯಾಗಲು ಲಿಂಗಗಳು ಉದಯಿಸಿದವು. ‘ಗಂಡು’ ಮತ್ತು ‘ಹೆಣ್ಣು’ ಜೀವಿಗಳು ರೂಪುಗೊಂಡವು.
? ಲಿಂಗಗಳ ಉದಯದೊಡನೆ ಸಾವು ‘ಹುಟ್ಟಿ’ತು!ಗಂಡು ಜೀವಿ ಹಾಗೂ ಹೆಣ್ಣು ಜೀವಿ ಒಂದು ಹಂತದವರೆಗೆ ಆಹಾರವನ್ನು ಸೇವಿಸಿ ಚೆನ್ನಾಗಿ ಬೆಳೆದವು. ಬೆಳೆದ ನಂತರ ಸಂತಾನ ವರ್ಧನೆಯಲ್ಲಿ ಪಾಲುಗೊಂಡವು. ಹೊಸ ಸಂತಾನ ರೂಪುಗೊಂಡ ಮೇಲೆ ಆ ಗಂಡು ಮತ್ತು ಹೆಣ್ಣುಗಳು ಯಾಕೆ ತಾನೆ ಬೇಕು? ಅವನ್ನು ಅಳಿಸಿ ಹಾಕಲು ಪ್ರಕೃತಿಯು ನಿರ್ಧರಿಸಿತು.
‘ಸಾವು’ ಎನ್ನುವ ಹೊಸ ಪ್ರಾಕೃತಿಕ ಘಟನೆಗೆ ಜನ್ಮ ನೀಡಿತು. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಪರಿಗಣಿಸೋಣ.
? ಸಾಲ್ಮನ್ ಮೀನು ನದಿಯಲ್ಲಿ ಹುಟ್ಟುತ್ತದೆ.
? ನಂತರ ನದಿಯ ಪ್ರವಾಹದ ಜತೆಯಲ್ಲಿ ಸಮುದ್ರವನ್ನು ಸೇರುತ್ತದೆ.
? ಸಮುದ್ರದಲ್ಲಿ ಸುಮಾರು ಐದು ವರ್ಷಗಳ ಕಾಲ ಬೆಳೆಯುತ್ತದೆ, ಬದುಕನ್ನು ನಡೆಸುತ್ತದೆ.
ಆಹಾರವನ್ನು ಸೇವಿಸಿ ದಷ್ಟಪುಷ್ಟವಾಗಿ ಬೆಳೆಯುತ್ತದೆ. ವಯಸ್ಕ ಹಂತವನ್ನು ತಲುಪುತ್ತದೆ. ಸಂತಾನವರ್ಧನೆಗೆ ಸಿದ್ಧವಾದ ಕೂಡಲೇ ತಾನು ಬಂದ ಹಾದಿಯಲ್ಲಿಯೇ, ತಾನು ಹುಟ್ಟಿದ ಸ್ಥಳಕ್ಕೆ ಹಿಮ್ಮರಳುತ್ತದೆ.
? ನದಿಯಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜುತ್ತಾ, ದಾರಿಯಲ್ಲಿ ಎದುರಾಗುವ ಎಲ್ಲ ಅಡ್ಡಿ ಆತಂಕ ಗಳನ್ನು ಎದುರಿಸುತ್ತಾ, ಜಲಪಾತಗಳನ್ನು ಹತ್ತಿಕೊಂಡು ತಾನು ಹುಟ್ಟಿದ ನದಿಯ ಬಳಿಗೆ ಬರುತ್ತದೆ.
? ಹೆಣ್ಣು ಸಾಲ್ಮನ್, ನದಿಯ ತಳದಲ್ಲಿ ಸುಮಾರು 30 ಚದರ ಅಡಿ ವ್ಯಾಸದ ಹಳ್ಳವನ್ನು ತನ್ನ ಬಾಲ ದಿಂದಲೇ ಅಗೆಯುತ್ತದೆ. ಈ ಹಳ್ಳದಲ್ಲಿ ಸುಮಾರು 5000 ಮೊಟ್ಟೆಗಳನ್ನಿಡುತ್ತದೆ.
? ಇದೇ ವೇಳೆಗೆ ಗಂಡು ಸಾಲ್ಮನ್ ಅಲ್ಲಿಗೆ ಬರುತ್ತದೆ. ಹೆಣ್ಣು ಇಟ್ಟ ಮೊಟ್ಟೆಗಳ ಮೇಲೆ ತನ್ನ ವೀರ್ಯ ವನ್ನು ವಿಸರ್ಜಿಸುತ್ತದೆ. ಅಲ್ಲಿಯೇ ಗರ್ಭಧಾರಣೆಯಾಗುತ್ತದೆ.
? ಗಂಡು ಮತ್ತು ಹೆಣ್ಣು ಸಾಲ್ಮನ್ ಹೀಗೆ ಸುಮಾರು 7 ಸಲ ನದಿಯ ಬೇರೆ ಬೇರೆ ಭಾಗಗಳಲ್ಲಿ ಮೊಟ್ಟೆ ಗಳನ್ನು ಇಡುತ್ತವೆ. ಈ ವೇಳೆಗೆ ಗಂಡು ಮತ್ತು ಹೆಣ್ಣು ಸಾಲ್ಮನ್ʼಗಳ ಶಕ್ತಿ ಉಡುಗುತ್ತದೆ. ಮರುದಿನ ಬೆಳಗಾಗುತ್ತಿರುವಂತೆಯೇ ಗಂಡು ಮತ್ತು ಹೆಣ್ಣು ಸಾಯುತ್ತವೆ!
? ಮೊಟ್ಟೆಗಳು ಒಡೆದು ಮರಿಗಳು ಹೊರಬಂದು ಅವು ಸಮುದ್ರದತ್ತ ಧಾವಿಸುತ್ತವೆ. ಸಾಲ್ಮನ್ ಗಂಡು ಮತ್ತು ಹೆಣ್ಣು ಮೀನುಗಳು ಒಂದು ಸಲ ಸಂತಾನ ವರ್ಧನೆಯಲ್ಲಿ ಪಾಲುಗೊಂಡ ಮೇಲೆ ಪ್ರಕೃತಿಗೆ ಅವು ಅನಗತ್ಯ. ಹಾಗಾಗಿ ಅವುಗಳಿಗೆ ಸಾವನ್ನು ತರುತ್ತದೆ. ಹೀಗೆ, ಅಲ್ಲಿಯವರೆಗೂ ಜೀವಜಗತ್ತಿನಲ್ಲಿ ಸಹಜವಾಗಿ ಕಂಡು ಬರದ ಸಾವು ಒಮ್ಮೆಲೇ ಹುಟ್ಟಿಕೊಂಡಿತು! ಆನಂತರ ತನ್ನದೇ ಆದ ರೀತಿಯಲ್ಲಿ ಜೀವಜಗತ್ತನ್ನು ‘ಆಳುತ್ತಿದೆ’!
ಮನುಷ್ಯ ಮತ್ತು ಸಾವು: ಸಾಲ್ಮನ್ ಮೀನು ತನ್ನ ಬದುಕಿನಲ್ಲಿ ಒಂದು ಸಲ ಸಂತಾನ ವರ್ಧನೆ ಯನ್ನು ನಡೆಸಿ ಸತ್ತು ಹೋಗುತ್ತದೆ!
ಸಾಲ್ಮನ್ ಮೀನು 100 ಮೊಟ್ಟೆಗಳನ್ನು ಇಟ್ಟರೆ, ಅವುಗಳಲ್ಲಿ ಶೇ.5ರಷ್ಟು ಮೊಟ್ಟೆಗಳು ಮಾತ್ರ ವಯಸ್ಕ ಹಂತದವರೆಗೆ ಬೆಳೆಯುತ್ತವೆ. ಉಳಿದವೆಲ್ಲ ಇತರ ಮಾಂಸಾಹಾರಿ ಜೀವಿಗಳಿಗೆ ಆಹಾರ ವಾಗಿಬಿಡುತ್ತವೆ. ಇದು ತೀರಾ ಅನ್ಯಾಯ!
ಪ್ರಕೃತಿಯು ತಾನು ಮಾಡಿದ ಅನ್ಯಾಯವನ್ನು ಸರಿಪಡಿಸಲು ಬರುಬರುತ್ತಾ ಸಂಕೀರ್ಣ ಜೀವಿ ಗಳನ್ನು ಸೃಷ್ಟಿಸಿತು. ಜತೆಗೆ ಅದುವರೆಗೂ ಜೀವಜಗತ್ತಿನಲ್ಲಿ ಕಂಡು ಬರದ ಹೊಸ ಜವಾಬ್ದಾರಿ ಗಳನ್ನು ಜೀವಿಗೆ ನೀಡಿತು.
ಪ್ರಕೃತಿಯು ತಾನು ಹೆತ್ತ ಸಂತಾನವನ್ನು ರಕ್ಷಿಸಲು ಗಂಡು ಮತ್ತು ಹೆಣ್ಣು ಜೀವಿಗಳಲ್ಲಿ ‘ಮಾತೃತ್ವ’ ಎನ್ನುವ ಒಂದು ಭಾವವನ್ನು ತುಂಬಿತು. ಸಂತಾನವನ್ನು ವರ್ಧಿಸುವುದರ ಜತೆಗೆ ಅದರ ರಕ್ಷಣೆಯ ಭಾರವನ್ನು ಹೊರುವಂತೆ ಹೇಳಿತು. ತನ್ನ ಸಂತಾನವು ಬೆಳೆದು ಸ್ವತಂತ್ರವಾಗಿ ಬದುಕನ್ನು ನಡೆಸುವ ಸಾಮರ್ಥ್ಯವನ್ನು ಗಳಿಸುವವರೆಗೂ ಅದರ ಪೋಷಣೆ ಹಾಗೂ ರಕ್ಷಣೆಯ ಹೊಣೆಯನ್ನು ಹೆಗಲಿ ಗೇರಿಸಿತು.
ಮಾತೃತ್ವ ಎನ್ನುವ ಶಬ್ದದಲ್ಲಿ ತಂದೆ-ತಾಯಿಯರಿಬ್ಬರ ಜವಾಬ್ದಾರಿಯೂ ಅಡಕವಾಗಿದೆ. ಆದರೆ ಜೀವಜಗತ್ತಿನಲ್ಲಿ ಸಂತಾನದ ಜವಾಬ್ದಾರಿಯನ್ನು ತಾಯಿ ಹೊರುವಷ್ಟು ತಂದೆ ಹೊರುವುದಿಲ್ಲ. ಮನುಷ್ಯರಲ್ಲಿಯೂ, ನಮ್ಮ ಅನುಭವಕ್ಕೆ ಬಂದಿರುವ ಹಾಗೆ ತಂದೆಯ ಪ್ರೀತಿಗಿಂತ ತಾಯಿಯ ಪ್ರೀತಿಯೇ ದೊಡ್ಡದು.
ತಾಯಿಯು ಪ್ರಸವದಲ್ಲಿ ತನ್ನ ಜೀವವನ್ನೇ ಒತ್ತೆಯಿಡುತ್ತಾಳೆ ಎನ್ನುವ ಮಾತು ಸತ್ಯ. ಇಂದಿಗೂ ಗ್ರಾಮೀಣ ಭಾರತದಲ್ಲಿ ಯಶಸ್ವಿ ಪ್ರಸವವೆಂದರೆ ಹೆಣ್ಣಿಗೆ ಎರಡನೆಯ ಜನ್ಮ ದೊರೆತಂತೆ!
ತನ್ನ ಬದುಕಿನುದ್ದಕ್ಕೂ ತಾಯಿಯಾದವಳು ತನ್ನ ಸಂತಾನಕ್ಕಾಗಿ ಏನು ಬೇಕಾದರೂ, ಯಾವ ರೀತಿಯ ತ್ಯಾಗವನ್ನು ಬೇಕಾದರೂ ಮಾಡಲು ಸಿದ್ಧಳಾಗಿರುತ್ತಾಳೆ. ಪ್ರಕೃತಿಯು ಮನುಷ್ಯನನ್ನು ಒಳಗೊಂಡಂತೆ ಹಲವು ಜೀವಿಗಳಲ್ಲಿ, ಸಾಲ್ಮನ್ ಮೀನುಗಳಂತೆ ಒಂದು ಸಲ ಸಂತಾನವನ್ನು ವರ್ಧಿ ಸಿ ಸಾಯಿಸುವ ಬದಲು, ಹಲವು ಸಲ ಸಂತಾನವನ್ನು ವರ್ಧಿಸುವ ಭಾಗ್ಯವನ್ನು ಕರುಣಿಸಿತು.
ಮಾನವ ಸ್ತ್ರೀಯ ಗರ್ಭಧಾರಣಾ ಅವಧಿ ಸುಮಾರು 30 ವರ್ಷಗಳು. ಅಂದರೆ ಆಕೆಯು ತನ್ನ ಜೀವಮಾನದಲ್ಲಿ 15 ಮಕ್ಕಳನ್ನು ಹೆರಬಲ್ಲಳು. ಆನಂತರ ಸಾಲ್ಮನ್ ಮೀನುಗಳಲ್ಲಾದಂತೆ, ತಾಯಿಗೆ ಒಮ್ಮೆಲೇ ಸಾವು ಬರುವುದಿಲ್ಲ. ತಾಯಿ-ತಂದೆಯರಿಗೆ ವೃದ್ಧಾಪ್ಯ ಎನ್ನುವ ಒಂದು ಹೊಸ ಅವಸ್ಥೆ ಯನ್ನು ರೂಪಿಸಿತು.
ತಂದೆ-ತಾಯಿಯಾಗಿದ್ದವರು ಅಜ್ಜ-ಅಜ್ಜಿಗಳಾಗಿ ತಮ್ಮ ಮಕ್ಕಳ ಮಕ್ಕಳ (ಮೊಮ್ಮೊಕ್ಕಳ) ರಕ್ಷಣೆ ಹಾಗೂ ಜವಾಬ್ದಾರಿಯನ್ನು ಹೊರಲಿ ಎಂದು ವೃದ್ಧಾಪ್ಯದಲ್ಲಿಯೂ ಹೊಣೆಯನ್ನು ಹೊರಿಸಿತು. ಜಗತ್ತಿನಲ್ಲಿ ಅಜ್ಜರಿಗಿಂತ ಅಜ್ಜಿಯರು ದೀರ್ಘಾಯುಷಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿರುವವರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಜ್ಜಿಯ ಕೆಲಸ ಪೂರ್ಣಗೊಂಡ ನಂತರವೇ ಆಕೆಯ ಬಳಿಗೆ ಸಾವು ಬರುತ್ತದೆ.
ಚಿರಂಜೀವತ್ವ: ಈ ಭೂಮಿಯಲ್ಲಿ ಹುಟ್ಟಿದ ಮನುಷ್ಯ ಸಾಯಲು ಇಷ್ಟಪಡುವುದಿಲ್ಲ. ತಾನು ಸಾಯಲೇಬೇಕು ಎಂದು ತಿಳಿದಿದ್ದರೂ, ಸಾವು ತನಗೆ ಬರಲಾರದೇನೋ ಎಂಬಂತೆ ವರ್ತಿಸುತ್ತಾನೆ. ತನ್ನನ್ನು ಬಿಟ್ಟರೆ ಬೇರೆಯವರಿಲ್ಲ ಎಂದು ಅಹಂಕಾರದಿಂದ ಬೀಗುತ್ತಾನೆ. ಬಹುಶಃ ಚಿರಂಜೀವತ್ವ ವನ್ನೇನಾದರೂ ದುಡ್ಡು ಕೊಟ್ಟು ಕೊಂಡುಕೊಳ್ಳುವ ಹಾಗಿದ್ದರೆ ಅಥವಾ ಯಮನೇನಾದರೂ ‘ಕಿಕ್ ಬ್ಯಾಕ್’ ಒಪ್ಪಿಕೊಳ್ಳುವ ಹಾಗಿದ್ದಿದ್ದರೆ...! ಕಲ್ಪಿಸಿಕೊಂಡರೇನೇ ಭಯವಾಗುತ್ತದೆ.
ಸದ್ಯಕ್ಕೆ ಸಾವು ಅಜೇಯ! ಆದರೆ ಈ ಅಜೇಯತ್ವ ಎಲ್ಲಿಯವರೆಗೆ ಉಳಿಯಬಲ್ಲುದು ಎನ್ನುವ ಸಣ್ಣ ಅನುಮಾನದ ಒಂದು ಎಳೆ ವಿಜ್ಞಾನಿಗಳನ್ನು ಕಾಡುತ್ತಿದೆ.
(ಮುಂದುವರಿಯುವುದು)