ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಆಸ್ಪತ್ರೆಯ ಹೊರಗೆ ವೈದ್ಯರು ಜೋಲುಮುಖವನ್ನು ಹಾಕಿಕೊಂಡು ನಿಂತಿದ್ದರು. ಹರ್ನಿಯವು ಸಿಡಿದಿರಬೇಕು, ಸೋಂಕು ಉದರಾದ್ಯಂತ ವ್ಯಾಪಿಸಿದೆ. ಅಂತಿಮ ಘಟ್ಟವನ್ನು ತಲುಪಿದೆ. ಈ ಮಗು ಇನ್ನು ಕೆಲವೇ ಗಂಟೆಗಳ ಅತಿಥಿ ಮಾತ್ರ... ಎಂದು ಮೆಲುದನಿಯಲ್ಲಿ ಅಲವತ್ತು ಕೊಂಡರು.

ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

-

ಹಿಂದಿರುಗಿ ನೋಡಿದಾಗ

1935. ಲಂಡನ್‌ನಲ್ಲಿ ಸಂಜೆ ಐದು ಗಂಟೆಯಾಗಿತ್ತು. ಸೈಂಟ್ ಜಾರ್ಜ್ ಆಸ್ಪತ್ರೆಯ ಸುತ್ತ ಮುತ್ತ ಕೂಡಾ ಗಾಢ ಚಳಿ ಆವರಿಸಿತ್ತು. ಹೊರ ಸುರಿಯುತ್ತಿದ್ದ ಹಿಮದ ದಪ್ಪ ಪರದೆ ಯನ್ನು ಸೀಳಿಕೊಂಡು ಒಂದು ಧ್ವನಿಯು ಎಡೆಬಿಡದಂತೆ ಹೊರ ಬರುತ್ತಿತ್ತು, ಅದು ಸೈಂಟ್ ಜಾರ್ಜ್ ಆಸ್ಪತ್ರೆಯ ಮಕ್ಕಳ ವಾರ್ಡಿನಿಂದ ಹೊರಬರುತ್ತಿದ್ದು ಕೇಳುಗರ ಕರುಳನ್ನು ಕಿವುಚುವಂತಿತ್ತು.

‘ಅಮ್ಮ... ನನಗೆ ಸಾಯಲು ಇಷ್ಟ ಇಲ್ಲ, ನಾನು ಬದುಕಬೇಕು. ನನ್ನನ್ನು ಕಾಪಾಡಮ್ಮ...’ 11 ವರ್ಷ ವಯಸ್ಸಿನ ಹ್ಯಾನ್ವಿಲ್ ಆಂಡರ್ಸನ್ ತನ್ನ ಹಾಸಿಗೆಯಲ್ಲಿ ಹೊರಳಾಡುತ್ತಾ ಗಂಟಲು ಸಿಡಿಯುವಂತೆ ಕೂಗುತ್ತಿದ್ದ. ಅವನಿಂದ ನೋವನ್ನು ತಡೆಯಲಾಗುತ್ತಿರಲಿಲ್ಲ. ಅವನ ಮುಖವು ಕಾದ ಕುಲುಮೆಯಿಂದ ತೆಗೆದಂತೆ ಕೆಂಪಗಾಗಿತ್ತು, ಕಣ್ಣುಗಳು ಪೇಲವವಾಗಿದ್ದವು, ನಿರ್ಜೀವವಾಗಿದ್ದವು. ಅವನ ಉದರದ ಬಲಮೂಲೆಯಲ್ಲಿ ಚೂರಿಯಿಂದ ತಿವಿದಂತಹ ಉಗ್ರಸ್ವರೂಪದ ನೋವು. ಇಡೀ ಉದರವು ಕಲ್ಲಿನಂತೆ ಗಟ್ಟಿಯಾಗಿತ್ತು.

ನೋವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದ ತಾವಿನಲ್ಲಿ ಒಂದು ಗಂಟು ಉಬ್ಬಿ ನಿಂತಿತ್ತು. ಯಾರಾದರೂ ಆ ಗುಂಟನ್ನು ಮುಟ್ಟಲು ಪ್ರಯತ್ನಿಸಿದರೆ ಹ್ಯಾನ್ವಿಲ್ ಆಂಡರ್ಸನ್ ಬಾಯಿಯಿಂದ ವಾಂತಿಯು ರೊಯ್ಯನ್ನೆ ದೂರಕ್ಕೆ ಚಿಮ್ಮುತ್ತಿತ್ತು. ಜ್ವರವು ೧೦೪ ಡಿಗ್ರಿ ಫಾರೆನ್‌ಹೀಟ್ನಷ್ಟು ಹೆಚ್ಚಿತ್ತು. ಉಸಿರಾಡುವಿಕೆಯು ಮಹಾ ಸಂಕಟವನ್ನು ಉಂಟು ಮಾಡುತ್ತಿತ್ತು.

ಆಸ್ಪತ್ರೆಯ ಹೊರಗೆ ವೈದ್ಯರು ಜೋಲುಮುಖವನ್ನು ಹಾಕಿಕೊಂಡು ನಿಂತಿದ್ದರು. ಹರ್ನಿಯವು ಸಿಡಿದಿರಬೇಕು, ಸೋಂಕು ಉದರಾದ್ಯಂತ ವ್ಯಾಪಿಸಿದೆ. ಅಂತಿಮ ಘಟ್ಟವನ್ನು ತಲುಪಿದೆ. ಈ ಮಗು ಇನ್ನು ಕೆಲವೇ ಗಂಟೆಗಳ ಅತಿಥಿ ಮಾತ್ರ... ಎಂದು ಮೆಲುದನಿಯಲ್ಲಿ ಅಲವತ್ತುಕೊಂಡರು.

ಇದನ್ನೂ ಓದಿ: Dr N Someshwara Column: ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಆಗ ಒಬ್ಬ ವ್ಯಕ್ತಿಯು ಮುಂದೆ ಬಂದ. ಆತ ಕಪ್ಪು ಉದ್ದನೆಯ ಅಂಗಿ ಹಾಗೂ ಕಪ್ಪು ಹ್ಯಾಟನ್ನು ಧರಿಸಿದ್ದ. ಆತನ ಕಣ್ಣುಗಳು ಅತ್ಯಂತ ತೀಕ್ಷ್ಣವಾಗಿದ್ದವು, ಅದೆಷ್ಟೆಂದರೆ, ಅವು ಉಕ್ಕಿನ ಗೋಡೆಯನ್ನು ಭೇದಿಸಬಲ್ಲಷ್ಟು ಪ್ರಖರವಾಗಿದ್ದವು.

ಆತ ಕ್ಲಾಡಿಯಸ್ ಅಮ್ಯಾಂಡ್. ಕ್ಲಾಡಿಯಸ್ ಅಮ್ಯಾಂಡ್ (1680-1740) ಬ್ರಿಟನ್‌ನ ಅರಸನ ಖಾಸಗಿ ಶಸ್ತ್ರವೈದ್ಯನಾಗಿದ್ದ. ಧೈರ್ಯಕ್ಕೆ ಮತ್ತೊಂದು ಹೆಸರೇ ಕ್ಲಾಡಿಯಸ್ ಅಮ್ಯಾಂಡ್. ಯುದ್ಧರಂಗದಲ್ಲಿ ಗಾಯಗೊಂಡ ಸೈನಿಕರ ಗುಂಡುಗಳನ್ನು ಕ್ಷಣ ಮಾತ್ರದಲ್ಲಿ ಹೊರ ತೆಗೆಯುತ್ತಿದ್ದ. ಕೈಕಾಲುಗಳನ್ನು ತುಂಡರಿಸಬೇಕಾದ ಸಂದರ್ಭಗಳಲ್ಲಿ ಯಾವುದೇ ರೀತಿ ಯಲ್ಲಿ ಹಿಂಜರಿಕೆಯನ್ನು ತೋರದೆ ಛೇದಿಸುತ್ತಿದ್ದ.

ಭಯ, ಅಜ್ಞಾತ ಭಯ ಎನ್ನುವುದು ಅವನ ನಿಘಂಟಿನಲ್ಲಿ ಇರಲೇ ಇಲ್ಲ. ಧೈರ್ಯ ಮತ್ತು ಸಾಹಸಕ್ಕೆ ಮತ್ತೊಂದು ಹೆಸರಾಗಿದ್ದ.

‘ಈ ಹುಡುಗನನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಿರಿ, ನಾನು ಆಪರೇಷನ್ ಮಾಡು ತ್ತೇನೆ’ ಎನ್ನುತ್ತಾ ಬದಲಿ ಉತ್ತರಕ್ಕೆ ಕಾಯದೆ ನೇರವಾಗಿ ಆಪರೇಶನ್ ಥಿಯೇಟರಿನ ಕಡೆಗೆ ನಡೆದ. ಅವನನ್ನು ಮಾರ್ಗದಲ್ಲಿಯೇ ತಡೆದ ಸಹಾಯಕ ಶಸ್ತ್ರವೈದ್ಯ ‘ಸರ್.. ಇದು ಅತ್ಯಂತ ಸಂಕೀರ್ಣ ಪ್ರಕರಣ. ಸೋಂಕು ಹರಡಿದೆ, ಕರುಳು ತಿರುಚಿಕೊಂಡಿದೆ.

ಹುಡುಗನನ್ನು ಮುಟ್ಟುವುದಕ್ಕೂ ಎಲ್ಲರೂ ಹಿಂಜರಿಯುತ್ತಿದ್ದಾರೆ ಎನ್ನುತ್ತಿದ್ದಂತೆಯೇ ಕ್ಲಾಡಿಯಸ್ ಅಮ್ಯಾಂಡ್ ಹಿಂದಕ್ಕೆ ತಿರುಗಿ, ‘ನಾನು ಆಪರೇಶನ್ ಮಾಡ್ತೇನೆ ಅಂತ ಹೇಳಿದ್ದು ಕೇಳಿಸಲಿಲ್ವ..?‘ ಎಂದು ಕಟುವಾಗಿ ನುಡಿದು ಉತ್ತರಕ್ಕೆ ಕಾಯದೆ ಮುಂದೆ ನಡೆದ.

ಆಪರೇಷನ್ ಥಿಯೇಟರ್. ಒಂದು ಹಳದಿ ಬಣ್ಣದ ಲಾಟೀನು ಮಂದ ಬೆಳಕನ್ನು ಬೀರು ತ್ತಿತ್ತು. ಅಳುತ್ತಿದ್ದ ವಿಲಿಯಂನನ್ನು ಒಂದು ಮರದ ಹಲಗೆಯ ಮೇಲೆ ಮಲಗಿಸಿದರು. ಅವನ ಕೈಕಾಲುಗಳು ಅಲುಗದಂತೆ ದಾರದಿಂದ ಬಿಗಿದರು, ಹಾಗೆಯೇ ಅವನ ದೇಹವನ್ನೂ ಸಹ ಆ ಮರದ ಹಲಗೆಗೆ ಬಲವಾಗಿ ಕಟ್ಟಿದರು.

ಹ್ಯಾನ್ವಿಲ್ ಆಂಡರ್ಸನ್‌ನ ಬಾಯಿಯಿಂದ ಒಂದು ಸೊಲ್ಲು ಹೊರ ಬರದಂತೆ ಬಟ್ಟೆ ಯನ್ನು ತುರುಕಿದರು. ಕೂಗದಂತೆ, ತನ್ನ ನಾಲಿಗೆಯನ್ನು ತಾನೇ ಕಚ್ಚಿಕೊಳ್ಳದಂತೆ ತಡೆಯು ವುದು ಅಗತ್ಯವಾಗಿದ್ದ ಕಾರಣ ಬಟ್ಟೆಯನ್ನು ತುರುಕುವುದು ಅನಿವಾರ್ಯವಾಗಿತ್ತು.

ಅರಿವಳಿಕೆ!?

ಹಾಗಂದರೆ ಏನೆಂದು ಅಂದಿನ ವೈದ್ಯರಿಗೆ ತಿಳಿದಿರಲಿಲ್ಲ, ಅದನ್ನು ಇನ್ನೂ ಕಂಡು ಹಿಡಿದಿರ ಲಿಲ್ಲ. ಅವನಿಗೆ ಕುಡಿಯಲು ಅಫೀಮು ಬೆರೆತ ನೀರನ್ನು ಮಾತ್ರ ಸಾಕಷ್ಟು ನೀಡಿದ್ದರು. ಹ್ಯಾನ್ವಿಲ್ ಆಂಡರ್ಸನ್ ಕುಟುಂಬದವರು ಆಪರೇಶನ್ ಥಿಯೇಟರಿನ ಬಾಗಿಲಲ್ಲೇ ನಿಂತಿ ದ್ದರು. ಎರಡೂ ಕೈಗಳನ್ನು ಜೋಡಿಸಿ, ವಿಲಿಯಂನನ್ನು ಉಳಿಸುವಂತೆ ಪರಮಾತ್ಮನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದರು. ಅಮ್ಯಾಂಡ್ ಸ್ಕ್ಯಾಲ್‌ಪೆಲ್ ಕೈಗೆತ್ತಿಕೊಂಡ. ಅವನ ಸಹಾಯಕ ವೈದ್ಯರು ನಿಂತಲ್ಲಿಯೇ ನಡುಗುತ್ತಿದ್ದರು.

‘ಸರ್... ಅಕಸ್ಮಾತ್ ಕರುಳು ಸಿಡಿದರೆ... ಎಂದು ಅನುಮಾನವನ್ನು ವ್ಯಕ್ತಪಡಿಸಿದರು. ಆಗ ಅಮ್ಯಾಂಡ್ ಕಟುವಾಗಿ ಸಿಡಿದರೆ ಇಬ್ಬರೂ ಸಾಯುತ್ತಾರೆ. ಈ ಹುಡುಗ ಹಾಗೂ ಅವನ ಕಾಯಿಲೆ ಎನ್ನುತ್ತಾ ಉದರವನ್ನು ಛೇದಿಸಿದರು. ರಕ್ತವು ಛಿಲ್ಲನೇ ಚಿಮ್ಮಿತು. ಚೂರಿಯನ್ನು ಮತ್ತಷ್ಟು ಆಳಕ್ಕೆ ಇಳಿಸಿ ಛೇದಿಸಿದರು. ಆಗ ಅವರು ಕಂಡ ದೃಶ್ಯ, ಎಲ್ಲರನ್ನು ನಿಂತಲ್ಲಿಯೇ ಸ್ತಂಭಿತರನ್ನಾಗಿಸಿತು.

ಅವರಿಗೆ ಹರ್ನಿಯದ ಚೀಲ ಕಾಣುತ್ತಿತ್ತು. ಆ ಚೀಲದ ಒಳಗೆ ಇತ್ತು ಹುಳುಗರುಳು! (ಅಪೆಂಡಿಕ್ಸ್, ಕರುಳು ಬಾಲ) ಹುಳುಗರುಳು ಕೆಂಡದಂತೆ ಕೆಂಪಗಾಗಿತ್ತು. ಊದಿಕೊಂಡಿತ್ತು. ಯಾವ ಕ್ಷಣದಲ್ಲಾದರೂ ಸಿಡಿದು, ತನ್ನಲ್ಲಿರುವ ಎಲ್ಲ ಕೊಳೆಯನ್ನು ದಶದಿಕ್ಕುಗಳನ್ನು ಚಿಮ್ಮಲು ಸಿದ್ಧವಾಗಿತ್ತು, ಜೊತೆಗೆ ಮಡುಗಟ್ಟಿದ ದ್ರವ ಚಿನ್ನ. ಆ ಚೀಲದ ತಳದಲ್ಲಿ, ದ್ರವ ಚಿನ್ನವು ಮಡುಗಟ್ಟಿದಂತೆ ಕೀವು ಸಂಗ್ರಹವಾಗಿತ್ತು. ಆ ಕೀವಿನ ನಡುವೆ ಒಂದು ಬೆಳ್ಳಿಯ ಪಿನ್ (ಬಾಯಿ ತೆರೆದಿದ್ದ ಸೇಫ್ಟಿ ಪಿನ್) ನಗುತಲಿತ್ತು.

ಹ್ಯಾನ್ವಿಲ್ ಆಂಡರ್ಸನ್, ಯಾವತ್ತೋ ಒಂದು ದಿನ ಅಕಸ್ಮಾತ್ತಾಗಿ ನುಂಗಿದ್ದ ಬೆಳ್ಳಿಯ ಪಿನ್ನು, ಹೊಟ್ಟೆಯಲ್ಲಿ ಬಾಯಿ ತೆರೆದುಕೊಂಡು, ಹುಳುಗರುಳಿಗೆ ಚುಚ್ಚಿಕೊಂಡು, ಸೋಂಕಿಗೆ ಅವಕಾಶವನ್ನು ನೀಡಿ, ಈ ಎಲ್ಲ ಅನಾಹುತಕ್ಕೆ ಕಾರಣವಾಗಿತ್ತು, ಜೊತೆಗೆ ಆ ಪಿನ್ನು ಹರ್ನಿಯದ ಚೀಲವನ್ನು ಚುಚ್ಚಿ, ತನ್ನೊಡನೆ ಸೋಂಕು ಗ್ರಸ್ತ ಹುಳುಗರುಳನ್ನು ಒಳಗೆ ಎಳೆದುಕೊಂಡು ಹೋಗಿತ್ತು. ಸಾವನ್ನು ಆಹ್ವಾನಿಸುವುದಕ್ಕೆ ಸೂಕ್ತ ವೇದಿಕೆಯು ಸಿದ್ಧ ವಾಗಿತ್ತು.

ಅಮ್ಯಾಂಡ್ ಕೈ ಒಂದು ಕ್ಷಣ ಕಂಪಿಸಿತು. ಒಂದೇ ಒಂದು ಕ್ಷಣ ಕಾಲ. ಕೂಡಲೇ ಅವನ ಧ್ವನಿಯು ಆಪರೇಷನ್ ಥಿಯೇಟರಿನಲ್ಲಿ ಪ್ರತಿಧ್ವನಿಸಿತ್ತು. ‘ಇದನ್ನು ಛೇದಿಸಬೇಕು. ಈ ಹುಳುಗರುಳನ್ನು ಅದರ ಬುಡದವರೆಗೆ ಛೇದಿಸಬೇಕು.. ನೋಡನೋಡುತ್ತಿರುವಂತೆ ರೋಗ ಗ್ರಸ್ತ ಹುಳುಗರುಳು ಆ ಹುಡುಗನ ಒಡಲಿನಿಂದ ಪ್ರತ್ಯೇಕವಾಯಿತು.

ಒಂದು ಲೋಟದಷ್ಟು ಕೀವನ್ನು ಹೊರ ತೆಗೆದರು. ಆ ಕೀವು ಹೊರಸೂತ್ತಿದ್ದ ದುರ್ವಾಸನೆ ಯು ಅನೇಕರಿಗೆ ವಾಕರಿಯನ್ನು ಉಂಟು ಮಾಡಿತು. ಅದನ್ನು ನೋಡುತ್ತಿರು ವಂತೆಯೇ, ಸಹಾಯಕ ಶಸ್ತ್ರವೈದ್ಯನು ತಲೆಸುತ್ತು ಬಂದ ಕಾರಣ ಥಿಯೇಟರಿನಲ್ಲೇ ಕುಸಿದು ಬಿದ್ದ.

ಅಮ್ಯಾಂಡ್, ಎಲ್ಲ ರಕ್ತಸ್ರಾವ ಬಿಂದುಗಳನ್ನು ಗಮನಿಸಿ ಬಿಗಿದ. ಕೊನೆಯ ಹೊಲಿಗೆಯನ್ನು ಹಾಕಿದ. ಹ್ಯಾನ್ವಿಲ್ ಆಂಡರ್ಸನ್ ಉಸಿರಾಡುತ್ತಿದ್ದ. ಅತ್ಯಂತ ಸಾವಕಾಶವಾಗಿ ಉಸಿರಾಡು ತ್ತಿದ್ದ. ಅವನನ್ನು ವಾರ್ಡ್‌ಗೆ ವರ್ಗಾಯಿಸಿದರು. ಕ್ಲಾಡಿಯಸ್ ಅಮ್ಯಾಂಡ್, ಇಡೀ ರಾತ್ರಿ ಹ್ಯಾನ್ವಿಲ್ ಆಂಡರ್ಸನ್ನನ ಹಾಸಿಗೆಯ ಪಕ್ಕದಲ್ಲಿಯೇ ಕುಳಿತು, ಆಂಡರ್ಸನ್‌ನ ಆರೋಗ್ಯದ ಗತಿಯನ್ನು ಪರೀಕ್ಷಿಸುತ್ತಿದ್ದ.

ಬೆಳಗಿನ ಜಾವ ಏಳುಗಂಟೆ. ವಿಲಿಯಂ ನಿಧಾನವಾಗಿ ಕಣ್ಣನ್ನು ತೆರೆದ. ‘ಈಗ ಹೊಟ್ಟೆ ನೋವಿಲ್ಲ ಡಾಕ್ಟ್ರೆ’ ಎಂದು ನಿಧಾನವಾಗಿ ಉಸುರಿದ ಆಂಡರ್ಸನ್. ಅದನ್ನು ಕೇಳುತ್ತಿ ರುವಂತೆಯೇ ಕ್ಲಾಡಿಯಸ್ ಅಮ್ಯಾಂಡನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಬಹಳ ಕಷ್ಟಪಟ್ಟು ತನ್ನ ಭಾವನೆಗಳನ್ನು ನಿಗ್ರಹಿಸಿಕೊಂಡ. ಉಗುಳು ನುಂಗಿಕೊಂಡು ಸುಮ್ಮನೆ ತನ್ನ ತಲೆಯನ್ನು ಆಡಿಸಿ, ವಾರ್ಡಿ ನಿಂದ ಹೊರಗೆ ಹೋದ.

ಡಿಸೆಂಬರ್ 6, 1735. ಮನುಕುಲದ ಇತಿಹಾಸದಲ್ಲಿ ಹುಳುಗರುಳನ್ನು ಛೇದಿಸಿದ ಮೊದಲ ದಿನ. ಪ್ರಾಟೆಸ್ಟಂಟ್ಸ್: ಕ್ಲಾಡಿಯಸ್ ಅಮ್ಯಾಂಡ್ 1680ರಲ್ಲಿ ಫ್ರಾನ್ಸ್ ದೇಶದ ಪ್ರಾಟೆಸ್ಟಂಟ್ ಕ್ರೈಸ್ತರ ವಂಶದಲ್ಲಿ ಹುಟ್ಟಿದ. ಅಂದಿನ ದಿನಗಳಲ್ಲಿ ಪ್ರಾಟೆಸ್ಟಂಟ್ಸ್ ಕ್ರೈಸ್ತರಿಗೆ ಸ್ಥಾನಮಾನ ವಿರಲಿಲ್ಲ. ಹಾಗಾಗಿ ಅನೇಕರು ಫ್ರಾನ್ಸನ್ನು ತೊರೆದು ಇಂಗ್ಲೆಂಡ್, ನೆದರ್ಲ್ಯಾಂಡ್, ಜರ್ಮನಿಗೆ ವಲಸೆ ಹೋಗುತ್ತಿದ್ದರು. ಅಮ್ಯಾಂಡ್ ಹೆತ್ತವರು ಹೀಗೆ ಇಂಗ್ಲಂಡಿಗೆ ವಲಸೆ ಬಂದರು. ಈ ವಲಸೆಯು ಅಮ್ಯಾಂಡ್ ಕುಟುಂಬಕ್ಕೆ ಅಗತ್ಯ ರಕ್ಷಣೆಯನ್ನು ನೀಡುವುದರ ಜೊತೆಯಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸಿತು.

ಅಮ್ಯಾಂಡ್, ಶಸ್ತ್ರವೈದ್ಯನಾಗಿ ತರಬೇತಿಯನ್ನು ಪಡೆದ. ಅಂದಿನ ದಿನಗಳಲ್ಲಿ ಕ್ಷೌರಿಕರು ಮಾತ್ರ, ಶಸ್ತ್ರವೈದ್ಯರಾಗುತ್ತಿದ್ದರು. ಇವರು ಅತ್ಯಂತ ಒರಟು ಶಸ್ತ್ರಚಿಕಿತ್ಸೆಯನ್ನು ಮಾಡು ತ್ತಿದ್ದರು. ಆದರೆ 17 ಮತ್ತು 18ನೆಯ ಶತಮಾನಗಳಲ್ಲಿ ಅಂಗರಚನ ವಿಜ್ಞಾನ ಹಾಗೂ ಅಂಗಕ್ರಿಯಾ ವಿಜ್ಞಾನಗಳಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿದ್ದವು.

ಅನಾರೋಗ್ಯವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಅಗತ್ಯ ಚಿಕಿತ್ಸೆಯನ್ನು ನೀಡುವುದು ಸಾಮಾನ್ಯವಾಗಿತ್ತು. ಶಸ್ತ್ರ ವೈದ್ಯಕೀಯವು ಕ್ಷೌರಿಕರ ಒರಟು ಕೈಗಳಿಂದ ವಿದ್ಯಾವಂತರ ಕೈಗೆ ವರ್ಗಾವಣೆಯಾಯಿತು. ಅಮ್ಯಾಂಡ್, ಶಸ್ತ್ರಚಿಕಿತ್ಸೆಯಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿದ. ಹಾಗಾಗಿ ಅವನು ಇಂಗ್ಲಂಡಿನ ಇಮ್ಮಡಿ ಜಾರ್ಜ್‌ನ ಸಾರ್ಜಂಟ್ ಸರ್ಜನ್ ಆಗಿ ಆಯ್ಕೆಯಾದ. ವೈದ್ಯಕೀಯ ವಿದ್ಯಾಲಯದಲ್ಲಿ ಪಾಠವನ್ನು ಹೇಳಲಾರಂಭಿಸಿದ.

ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರನಾದ. ಯುದ್ಧದಲ್ಲಿ ಸತ್ತ ಸೈನಿಕರ ಮಕ್ಕಳಿಗೆ ವಿಶೇಷ ಶಾಲೆಯೊಂದನ್ನೆ ತೆರೆದು ಮನೆ ಮಾತಾದ. ಅಂದಿನ ದಿನಗಳಲ್ಲಿ ಶಸ್ತ್ರವೈದ್ಯರ ದೈನಂದಿನ ಬದುಕು ಸದಾ ಆತಂಕದಿಂದ ತುಂಬಿರುತ್ತಿತ್ತು. ಅರಿವಳಿಕೆಯನ್ನು ಕಂಡುಹಿಡಿದಿರಲಿಲ್ಲ. ಪೂತಿನಾಶಕ (ಆಂಟಿ ಸೆಪ್ಟಿಕ್) ಎಂದರೆ ಏನು ಎಂದು ತಿಳಿದಿರಲಿಲ್ಲ.

ಸ್ವಚ್ಛತೆಯ ಬಗ್ಗೆ ಪ್ರಾಥಮಿಕ ತಿಳಿವಳಿಕೆಯೂ ಇರಲಿಲ್ಲ. ಸೋಂಕನ್ನು ನಿಯಂತ್ರಿಸಲು ಅಗತ್ಯವಾದ ಪ್ರತಿಜೈವಿಕ ಔಷಧಗಳು ಲಭ್ಯವಿರಲಿಲ್ಲ, ಹಾಗಾಗಿ ಶಸ್ತ್ರವೈದ್ಯನು ಯಾವುದೇ ಒಂದು ಶಸ್ತ್ರಚಿಕಿತ್ಸೆಯನ್ನು ನಡೆಸುವಾಗ ಸದಾ ಆತಂಕದಲ್ಲಿ ಇರುತ್ತಿದ್ದ. ಶಸ್ತ್ರಚಿಕಿತ್ಸೆಗೆ ಒಳಗಾದ ಅನೇಕ ಜನರು ಸಾಯುತ್ತಿದ್ದರೂ, ಅಲ್ಲೊಬ್ಬರು ಇಲ್ಲೊಬ್ಬರು ಪವಾಡ ಸದೃಶ ವಾಗಿ ಬದುಕುಳಿಯುತ್ತಿದ್ದರು.

ಹ್ಯಾನ್ವಿಲ್ ಆಂಡರ್ಸನ್ ಇಂತಹವರಲ್ಲಿ ಒಬ್ಬನಾಗಿದ್ದ. ಅಮ್ಯಾಂಡ್ ತಾನು ನಡೆಸಿದ ಶಸ್ತ್ರಚಿಕಿತ್ಸೆಯ ಎಲ್ಲ ವಿವರಗಳನ್ನು ಫಿಲಸಾಫಿಕಲ್ ಟ್ರಾನ್‌ಸ್ಯಾಕ್ಷನ್ಸ್ ಆಫ್ ದಿ ರಾಯಲ್ ಸೊಸೈಟಿಯಲ್ಲಿ ಮಂಡಿಸಿದ. ಆ ಪ್ರಬಂಧದಲ್ಲಿ ಸ್ಪಷ್ಟವಾಗಿ ಹುಳುಗರುಳು ಹರ್ನಿಯ ಚೀಲದಲ್ಲಿತ್ತು. ‌

ಬೆಳ್ಳಿಯ ಪಿನ್ನು ಹುಳುಗರುಳನ್ನು ಚುಚ್ಚಿ ಸೋಂಕು ಆರಂಭವಾಗಲು ಕಾರಣವಾಗಿತ್ತು. ಅಷ್ಟು ಸಾಲದೆಂಬಂತೆ ಹರ್ನಿಯ ಚೀಲವನ್ನೂ ಚುಚ್ಚಿ, ತನ್ನೊಡನೆ ರೋಗಗ್ರಸ್ತ ಹುಳುಗರುಳನ್ನು ಹರ್ನಿಯ ಚೀಲದೊಳಗೆ ಸೆಳೆದುಕೊಂಡು ಹೋಗಿತ್ತು. ಇದೊಂದು ಅಪರೂಪದ ಪ್ರಸಂಗ. ಹುಳುಗರುಳನ್ನು ಛೇದಿಸದೇ ಬೇರೆ ದಾರಿಯಿರಲಿಲ್ಲ ಎಂದು ದಾಖಲಿಸಿದ. ಅಂದಿನಿಂದ ವೈದ್ಯಕೀಯ ಜಗತ್ತಿನಲ್ಲಿ ಹುಳುಗರುಳು ಹರ್ನಿಯ ಚೀಲದಲ್ಲಿ ರುವ ವಿಶೇಷ ಪ್ರಕರಣವನ್ನು (೧% ಮಾತ್ರ) ಆತನ ಗೌರವಾರ್ಥವಾಗಿ ಅಮ್ಯಾಂಡ್ಸ್ ಹರ್ನಿಯ ಎಂದು ಕರೆಯಲಾರಂಭಿಸಿದರು.

ಕ್ರಾಂತಿಕಾರಕ: ಅಮ್ಯಾಂಡ್ ಮಾಡಿದ ಶಸ್ತ್ರಚಿಕಿತ್ಸೆಯು ಅವನ ಕಾಲಕ್ಕೆ ಕ್ರಾಂತಿಕಾರಕ ವಾಗಿತ್ತು, ಅದಕ್ಕೆ ಹಲವು ಕಾರಣಗಳಿವೆ.

1 ಅಂದಿನ ದಿನಗಳಲ್ಲಿ ಯಾವ್ ಶಸ್ತ್ರವೈದ್ಯನ್ನು ಉದರಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ಗಳನ್ನು ಮಾಡುತ್ತಿರಲಿಲ್ಲ. ಉದರವನ್ನು ಛೇದಿಸಿದಾಗ ತಲೆದೋರುವ ಸೋಂಕಿನ ಕಾರಣ, ರೋಗಿಯು ಸಾಯುವುದು ಖಚಿತ ಎಂದು ಎಲ್ಲ ವೈದ್ಯರು ನಂಬಿದ್ದರು.

2 ಹುಳುಗರುಳು ರೋಗಗ್ರಸ್ತವಾಗಬಹುದು ಹಾಗೂ ಮಾರಕ ಸ್ಥಿತಿಗೆ ಕಾರಣವಾಗಬಹುದು ಎಂಬ ತಿಳಿವಳಿಕೆಯು ಅಂದಿನ ವೈದ್ಯರಿಗೆ ಇರಲಿಲ್ಲ. ಇದನ್ನು ಅಮ್ಯಾಂಡ್ ಪುರಾವೆ ಸಹಿತ ನಿರೂಪಿಸಿದ್ದ.

3 ಒಂದು ರೋಗಗ್ರಸ್ತ ಹುಳುಗರುಳನ್ನು ಛೇದಿಸಿದ ಮೇಲೂ ರೋಗಿಯು ಬದುಕಿದ್ದಾನೆ ಎಂದರೆ, ತಾವೂ ಯಾಕೆ ಅಂತಹ ಶಸ್ತ್ರಚಿಕಿತ್ಸೆಯನ್ನು ಮಾಡಬಾರದು ಎಂದು ಯೋಚಿಸಿ ದರು. ಆದರೆ ಅಂತಹ ದಿನವು 1800ರ ನಂತರವೇ ಬಂದಿತು.

೪ ತುರ್ತು ಸಂದರ್ಭಗಳಲ್ಲಿ ಹುಳುಗರುಳಿನ ಸಮಸ್ಯೆಯನ್ನು ನಿಗ್ರಹಿಸಲು ಶಸ್ತ್ರಚಿಕಿತ್ಸೆ ಯನ್ನು ನಡೆಸಲು ಹಿಂಜರಿಯಬಾರದು ಎಂಬ ತಿಳಿವಳಿಕೆಯನ್ನು ವೈದ್ಯಕೀಯ ಜಗತ್ತಿಗೆ ನೀಡಿತು.

ಸಮಕಾಲೀನ: ಈಗ ಹುಳುಗರುಳಿನ ಶಸ್ತ್ರಚಿಕಿತ್ಸೆಯು ನಿಮಿಷಗಳಲ್ಲಿ ಮಾಡಿ ಮುಗಿಸ ಬಹುದಾದಂತಹ ಸರಳ ಶಸ್ತ್ರಚಿಕಿತ್ಸೆಯಾಗಿದೆ. ರೋಗನಿದಾನಕ್ಕೆ ಅಲ್ಟ್ರಾಸೌಂಡ್ ಸೌಲಭ್ಯ ವಿದೆ. ಪರಿಣಾಮಕಾರಿ ಅರಿವಳಿಕೆಯಿದೆ.

ಉದರದರ್ಶಕದಿಂದ ಶಸ್ತ್ರಚಿಕಿತ್ಸೆಯನ್ನು ನಡೆಸಿದರೆ, ಕಲೆಯೂ ಉಳಿಯುವುದಿಲ್ಲ. ಸೋಂಕನ್ನು ತಡೆಗಟ್ಟಲು ಶಕ್ತಿಶಾಲಿಯಾದ ಪ್ರತಿಜೈವಿಕ ಔಷಧಗಳಿವೆ. ಅನೇಕ ಸಲ, ಆಪರೇಶನ್ ದಿನವೇ ರೋಗಿಯನ್ನು ಮನೆಗೆ ಕಳುಹಿಸುವ ಪದ್ಧತಿಯೂ ಚಾಲ್ತಿಯಲ್ಲಿದೆ.

ಅಮ್ಯಾಂಡನಿಗೆ ತನ್ನ ಅಂಗರಚನಾ ತಿಳಿವಳಿಕೆಯ ಬಗ್ಗೆ ವಿಶ್ವಾಸವಿತ್ತು. ಎಲ್ಲ ವೈದ್ಯರ ಭೀತಿಯನ್ನು ಆತನು ಧೈರ್ಯವಾಗಿ ಪ್ರಶ್ನಿಸಿದ. ಆಂಡರ್ಸನ್ ಸಾಯುವುದು ಖಚಿತವಿತ್ತು, ಹಾಗಾಗಿ ಅಳೆದೂ ತೂಗಿ ತುಂಬಾ ಲೆಕ್ಕಾಚಾರ ಹಾಕಿ, ಶಸ್ತ್ರಚಿಕಿತ್ಸೆಯನ್ನು ನಡೆಸಲು ಮನಸ್ಸನ್ನು ಮಾಡಿದ. ತನ್ನೆಲ್ಲಾ ವಿಚಾರಗಳನ್ನು ಪ್ರಾಮಾಣಿಕವಾಗಿ ದಾಖಲಿಸಿದ.

ಅವನ ಸಕಾಲಿಕ ಧೈರ್ಯವು ಒಂದು ಮಗುವಿನ ಜೀವವನ್ನು ಉಳಿಸಿತು. ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ಕರಗಳು ಶಸ್ತ್ರವೈದ್ಯನಿಗೆ ಇರಲೇಬೇಕು.