ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮತ್ತೆ ಬಂದಿದೆ ಚೌತಿ ಸಂಭ್ರಮ

ಗಣಪತಿ ಹಬ್ಬ ವಿಜೃಂಭಣೆಯಿಂದ ಆಚರಿಸುವ ಸಡಗರದ ಹಬ್ಬ. ವಿಘ್ನ ವಿನಾಶಕ, ಸಂಕಷ್ಟಹರ ನೆಂದು ಭಕ್ತಿ-ಭಾವದಿಂದ ಪೂಜಿಸುವ ಹಬ್ಬವಿದು. ಒಂದು ಕಾಲದಲ್ಲಿ ಅವರವರ ಮನೆಯಲ್ಲಿ ಆಚರಿಸುತ್ತಿದ್ದ ಹಬ್ಬ ಇಂದು ಸಾರ್ವಜನಿಕವಾಗಿ ಸಡಗರದಿಂದ ಆಚರಿಸುವ ಸಂಭ್ರಮದ ಹಬ್ಬ ವಾಗಿದೆ. ಇಂತಹ ಹಬ್ಬ ಹತ್ತಿರವಾಗುತ್ತಿದ್ದಂತೇ ಅದೇನೋ ಮೈಪುಳಕ.

ರಾಘವೇಂದ್ರ ಈ ಹೊರಬೈಲು

ಗಣಪತಿ ಹಬ್ಬ ವಿಜೃಂಭಣೆಯಿಂದ ಆಚರಿಸುವ ಸಡಗರದ ಹಬ್ಬ. ವಿಘ್ನ ವಿನಾಶಕ, ಸಂಕಷ್ಟಹರ ನೆಂದು ಭಕ್ತಿ-ಭಾವದಿಂದ ಪೂಜಿಸುವ ಹಬ್ಬವಿದು. ಒಂದು ಕಾಲದಲ್ಲಿ ಅವರವರ ಮನೆಯಲ್ಲಿ ಆಚರಿಸುತ್ತಿದ್ದ ಹಬ್ಬ ಇಂದು ಸಾರ್ವಜನಿಕವಾಗಿ ಸಡಗರದಿಂದ ಆಚರಿಸುವ ಸಂಭ್ರಮದ ಹಬ್ಬ ವಾಗಿದೆ. ಇಂತಹ ಹಬ್ಬ ಹತ್ತಿರವಾಗುತ್ತಿದ್ದಂತೇ ಅದೇನೋ ಮೈಪುಳಕ.

ನಾವು ಚಿಕ್ಕವರಿದ್ದಾಗಲಂತೂ ಗಣಪತಿ ಹಬ್ಬಕ್ಕಾಗಿಯೇ ಎಷ್ಟೋ ದಿನಗಳಿಂದ ಕಾದು ಕುಳಿತಿದ್ದಿದೆ. ಹೊಸ ಬಟ್ಟೆ, ಹಬ್ಬದ ಬಗೆಬಗೆಯ ಅಡುಗೆಗಳ ಸವಿ ಒಂದುಕಡೆಯಾದರೆ, ಬಿದಿರಿನ ಪೆಟ್ಲು ಮಾಡಿ ಕೊಂಡು, ಒಳಗೆ ಜುಮ್ಮನಕಾಯಿ, ಪೆಟ್ಲುಕಾಯಿ, ಕಂಗಾನಳ್ಳು ಎನ್ನುವ ವಿವಿಧ ಸಣ್ಣ ಸಣ್ಣ ಕಾಯಿಗಳನ್ನು ಬಳಸಿ ಪಟ್ ಎಂದು ಬಂದೂಕಿನಲ್ಲಿ ಹೊಡೆಯುವಂತೆ ಹೊಡೆಯುತ್ತಾ ಸಡಗರ ದಿಂದ ಊರಿನ ತುಂಬಾ ಓಡಾಡುವುದೇ ಮಹದಾನಂದ.

ಹಬ್ಬಕ್ಕಿಂತ ಸುಮಾರು ದಿನಗಳ ಹಿಂದಿನಿಂದಲೇ ಕೋಲಾಟ, ಭಜನೆಯ ತಾಲೀಮು ನಡೆಯುತ್ತಿತ್ತು. ಗಣಪತಿ ಹಬ್ಬದ ದಿನದಿಂದ ವಿಸರ್ಜನೆ ಮಾಡುವ ದಿನದವರೆಗೂ ಪ್ರತೀ ರಾತ್ರಿ ಕೋಲಾಟ ಆಡುತ್ತಾ, ಭಕ್ತಿ ಗೀತೆಗಳನ್ನು ಹಾಡುತ್ತಾ, ಭಜನೆ ಮಾಡುತ್ತಾ, ಆ ವರ್ಷದ ಗಣಪತಿ ಹಬ್ಬ ಸಾರ್ಥಕವಾಗುತ್ತಿತ್ತು. ಇಡೀ ಊರಿಗೆ ಒಂದೇ ಕಡೆ, ಒಂದೇ ಗಣಪತಿ ಪ್ರತಿಷ್ಠಾಪಿಸುತ್ತಿದ್ದರಿಂದ ಊರಿನವರೆಲ್ಲರೂ ಒಂದು ಕಡೆ ಸೇರಿ ಹಬ್ಬ ಆಚರಿಸುತ್ತಿದ್ದು, ನಮ್ಮ ಖುಷಿಯನ್ನು ನೂರ್ಮಡಿಗೊಳಿಸುತ್ತಿತ್ತು.

ಇದನ್ನೂ ಓದಿ: Ganesha chaturthi 2025: ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಗೆ 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ

ಬದಲಾದ ಸಂಭ್ರಮಾಚಾರಣೆ

ಆದರೆ ಇತ್ತೀಚಿನ ದಿನಗಳಲ್ಲಿ ಗಣಪತಿ ಹಬ್ಬದ ರೀತಿಯೇ ಸಂಪೂರ್ಣ ಬದಲಾಗಿದೆ. ಈಗ ಒಂದೊಂದು ಗಲ್ಲಿಯಲ್ಲಿಯೂ ಪ್ರತ್ಯೇಕ ಗಣಪತಿ ಪ್ರತಿಷ್ಠಾಪಿಸುವ ಸಂಪ್ರದಾಯ ಬೆಳೆಯುತ್ತಿದೆ. ಪರಸ್ಪರ ಪೈಪೋಟಿಗೆ ಬಿದ್ದು, ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನ ಹೊಳೆಯುವ ಬಣ್ಣಬಣ್ಣದ ಗಣಪತಿ ಮೂರ್ತಿಗಳನ್ನು ಒಂದೊಂದು ಊರಿಗೂ ನೂರಾರಂತೆ ಕೂರಿಸಿದರೆ, ಅದನ್ನು ವಿಸರ್ಜಿಸಿದಾಗ ಉಂಟಾಗುವ ಮಾಲಿನ್ಯ ಊಹಿಸಲೂ ಅಸಾಧ್ಯ. ಈ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಕ್ಯಾಲ್ಸಿಯಂ ಸಲೇಟ್ ಹೆಮಿಹೈಡ್ರೇಟ್ ಅನ್ನು ಹೊಂದಿರುತ್ತದೆ. ‌

ಇದು ನೀರಿನಲ್ಲಿ ಸಂಪೂರ್ಣವಾಗಿ ಕರಗಲು ಹಲವು ತಿಂಗಳುಗಳಿಂದ ವರ್ಷಗಳವರೆಗೆ ತೆಗೆದು ಕೊಳ್ಳುತ್ತದೆ. ಇಂತಹ ಗಣಪತಿ ವಿಗ್ರಹವನ್ನು ನೀರಿನ ಮೂಲಗಳಾದ ಕೆರೆ, ನದಿ ಅಥವಾ ಹೊಳೆ ಗಳಲ್ಲಿ ವಿಸರ್ಜನೆ ಮಾಡುವುದರಿಂದ, ಇದು ನೀರಿನಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಜಲಚರಗಳ ಜೀವಕ್ಕೆ ಅಪಾರ ಹಾನಿಯಾಗುತ್ತದೆ ಎನ್ನುತ್ತದೆ ವಿಜ್ಞಾನ.

ಡಿಜೆ ಸದ್ದು ಹೃದಯಕ್ಕೆ ಮಾರಕ

ಜೊತೆಗೇ ಗಣಪತಿ ಹಬ್ಬವನ್ನೂ ಒಳಗೊಂಡು ಎಲ್ಲಾ ಹಬ್ಬಗಳಲ್ಲೂ ಇತ್ತೀಚಿಗೆ ಡಿಜೆ ಹಾಡುಗಳ ಅಬ್ಬರ ಹೆಚ್ಚಾಗಿದೆ. ಹಿಂದೆ ಗಣಪತಿ ಹಬ್ಬದ ದಿನಗಳಲ್ಲಿ ಜಾನಪದ ನೃತ್ಯಗಳನ್ನು ಮಾಡುತ್ತಾ, ಸುಮಧುರ ಭಕ್ತಿಗೀತೆಗಳನ್ನು ಹಾಡುತ್ತಾ ಸಂಪನ್ನಗೊಳಿಸಲಾಗುತ್ತಿತ್ತು. ಆದರೆ ಇಂದು ಆ ಜಾಗವನ್ನು ಆಕ್ರಮಿಸಿಕೊಂಡಿರುವ ಡಿಜೆಗಳು ಮಿತಿಮೀರಿದ ಸದ್ಧಿನೊಂದಿಗೆ ಎದೆಗೆ ಗುದ್ದಿ ಗದ್ದಲವೆಬ್ಬಿಸುತ್ತಿವೆ. ಒಂದೊಂದು ಗಲ್ಲಿಯಲ್ಲಿಯೂ ಇಂತಹ ಹತ್ತಾರು ಡಿಜೆಗಳು ಗುದ್ದತೊಡಗಿದರೆ ವೃದ್ಧರು, ಮಕ್ಕಳು, ಗರ್ಭಿಣಿಯರ ಎದೆಯು ಆ ಸದ್ಧಿನ ಗದ್ದಲಕ್ಕೆ ಒದ್ದಾಡಿಹೋಗುತ್ತವೆ. ಡಿಜೆ ಸದ್ದಿನಿಂದ ಹೃದಯಕ್ಕೆ ತೊಂದರೆಯಾಗಬಹುದೆಂದು ವೈದ್ಯವಿಜ್ಞಾನ ಎಚ್ಚರಿಸುತ್ತಲೇ ಇದೆ.

ಸಂಭ್ರಮ ಇರಲಿ ಮಾಲಿನ್ಯ ಬೇಡ!

ಈ ವರ್ಷದಿಂದ ಯಾವುದೇ ಕಾರಣಕ್ಕೂ ಭಾರೀ ಲೋಹ ಮಿಶ್ರಿತ ರಾಸಾಯನಿಕ ಬಣ್ಣ ಹಾಗೂ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಹಾಗೂ ೧೨೫ ಡೆಸಿಬಲ್ ಗಿಂತ ಹೆಚ್ಚಿನ ಶಬ್ಧದ ಡಿಜೆ ಸೌಂಡ್ಸ್ ಮತ್ತು ಪಟಾಕಿ ಎರಡನ್ನೂ ಬಳಸಬಾರದೆಂದು ಸರಕಾರವು ಅಽಸೂಚನೆ ನೀಡಿದೆ. ಆದರೆ ಅದನ್ನೂ ಮೀರಿ, ಜನರು ಉತ್ಸಾಹದ ಭರದಲ್ಲಿ, ಸಮಾಜಕ್ಕೆ ತೊಂದರೆ ನೀಡುವ ಅಭ್ಯಾಸಗಳನ್ನು ಮುಂದುವರೆಸುವವರ ಬಗ್ಗೆ ಆತಂಕವೂ ಇದೆ.

ಇತ್ತೀಚಿನ ದಿನಗಳಲ್ಲಿ ಕೆಲವರು ಯುವಕರು ಭಕ್ತಿಯ ಜತೆಯಲ್ಲೇ, ಕುಣಿದಾಡುವ ಉದ್ದೇಶಕ್ಕಾಗಿಯೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡುವಂತಾಗಿರುವುದು ಕಂಡುಬರುತ್ತಿದೆ; ಇದು ಸರಿಯಲ್ಲ. ದಾರಿಯಲ್ಲಿ ಹೋಗುವವರನ್ನೆಲ್ಲಾ ಅಡ್ಡಗಟ್ಟಿ ಗಣಪತಿ ಪ್ರತಿಷ್ಠಾಪನೆಗೆ ಹಣ ಕೊಡಲೇಬೇಕೆಂದು ಒತ್ತಾಯ ಮಾಡಿ, ವಸೂಲಿ ಮಾಡುವುದು ಕಳವಳಕಾರಿ ವಿಷಯ. ಹಾಗೆ ವಸೂಲಾದ ಹಣವನ್ನು ಸರಿಯಾದ ಲೆಕ್ಕವಿಟ್ಟು, ಸದುದ್ದೇಶಕ್ಕೆ ಬಳಸಿದರೆ ಒಳಿತೆ.

ಆದರೆ ತಮ್ಮ ವೈಯಕ್ತಿಕ ಮೋಜು-ಮಸ್ತಿಗೆ ಬಳಸಿ, ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ಕುಡಿದು ತೂರಾಡುವ ಘಟನೆಗಳೂ ಅಲ್ಲಲ್ಲಿ ನಡೆಯುತ್ತಿರುವುದು ಹಬ್ಬಕ್ಕೆ ಮಾಡುವ ದೊಡ್ಡ ಅಪಚಾರ. ಪರಿಸರವನ್ನು ಹಾಳುಮಾಡುವ, ಆ ಮೂಲಕ ಜೀವ ಜಗತ್ತಿಗೆ ಕಂಟಕವಾಗುವ ವಿಷಪೂರಿತ ರಾಸಾಯನಿಕಗಳಿಂದ, ಅಪಾಯಕಾರಿ ಬಣ್ಣಗಳಿಂದ ತಯಾರಿಸಿದ ಗಣಪತಿಯನ್ನು ಬಳಸದೇ ಇರೋಣ.

ಪ್ರತೀ ಮನೆಮನೆಯಲ್ಲೂ ಗಣಪತಿ ಕೂರಿಸಿ, ಹಬ್ಬ ಆಚರಿಸಿದರೂ ಎಲ್ಲರಿಗೂ ಸಂತೋಷವೇ. ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಹಸಿರು ಗಣಪತಿಯನ್ನು ಪ್ರತಿಷ್ಠಾಪಿಸಿ, ನಮ್ಮ ಭಕ್ತಿಯ ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಯುವ ಪ್ರಯತ್ನ ಮಾಡೋಣ. ಗಣಪತಿ ಮೂರ್ತಿಯನ್ನು ವಿಸರ್ಜಿಸುವಾಗ, ಸಾಮಾಜಿಕ ಸ್ವಾಸ್ಥ್ಯವನ್ನು ಗಮನಿಸೋಣ. ವಿಗ್ರಹವನ್ನು ವಿಸರ್ಜನೆ ಮಾಡದೇ ಹಾಗೆಯೇ ಜೋಪಾನವಾಗಿ ಇಟ್ಟುಕೊಂಡು ಮುಂದಿನ ವರ್ಷ ಪುನಃ ಪ್ರತಿಷ್ಠಾಪಿಸಬಹುದು ಮತ್ತು ಈ ನಡೆ ಪರಿಸರಸ್ನೇಹಿಯೂ ಹೌದು.

ಸುಮಧುರ ಗೀತೆ ಕೇಳಲಿ

ಮನಸ್ಸಿಗೂ ಮುದ ನೀಡದ, ವಿಪರೀತ ಶಬ್ದದಿಂದ ಶಬ್ಧಮಾಲಿನ್ಯ ಉಂಟು ಮಾಡುವ ಡಿಜೆ ಹಾಡುಗಳನ್ನು ಕಡಿಮೆ ಮಾಡಿ, ಮನಸ್ಸಿಗೂ ಆಹ್ಲಾದ ನೀಡುವ, ಭಕ್ತಿ ಸುರಿಸುವ ಸುಮಧುರ ಗೀತೆಗಳನ್ನು ಕೇಳೋಣ. ಹಣ ಮತ್ತು ಆರೋಗ್ಯ ಎರಡನ್ನೂ ಆಪೋಶನ ತೆಗೆದುಕೊಳ್ಳುವ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಲ್ಲಿಸೋಣ. ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ವಾಗುವಂತಹ ಸುಂದರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಜಾನಪದ ಕಲಾಪ್ರಕಾರ ಗಳನ್ನು ಪ್ರದರ್ಶಿಸಬಹುದು. ಆ ಮೂಲಕ ವಿಘ್ನ ನಿವಾರಕ ಗಣಪತಿಯ ಹಬ್ಬದ ಆಚರಣೆಯನ್ನು ಸಾರ್ಥಕಗೊಳಿಸಬಹುದು.

ತಿಲಕರ ಕೊಡುಗೆ

ಮನೆಯೊಳಗಿನ ಹಬ್ಬವಾಗಿದ್ದ ಗಣಪತಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಪ್ರಾರಂಭ ವಾಗಿದ್ದು ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರಿಂದ. ಜಾತಿ-ಧರ್ಮ ಭೇದವಿಲ್ಲದೆ ಬ್ರಿಟೀಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸುವುದು ಈ ಹಬ್ಬದ ಮೂಲ ಉದ್ದೇಶವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗಣಪತಿ ಹಬ್ಬದ ಸಂದರ್ಭಗಳಲ್ಲೇ ಅನೇಕ ಕಡೆ ಸೌಹಾರ್ದ ಕದಡು ವಂತಹ ಘಟನೆಗಳಾಗುತ್ತಿರುವುದು ದುರಾದೃಷ್ಟಕರ. ಸ್ವಾತಂತ್ರ್ಯ ಹೋರಾಟಗಾರರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗಣಪತಿ ಹಬ್ಬ ಸಂಘರ್ಷದ ಬದಲಿಗೆ ಸೌಹಾರ್ದ ಸೃಷ್ಟಿಸಿ, ಸಮಾಜ ಎಲ್ಲರೂ ಒಂದುಗೂಡಿ ಆಚರಿಸಿದರೆ ಆ ಹಬ್ಬದ ಸೊಗಸೇ ಬೇರೆ. ಅಂತಹ ಹಬ್ಬ ಆಚರಿಸಿ, ಮನಸ್ಸಿಗೆ ನೆಮ್ಮದಿ ತರೋಣ, ಶಾಂತಿ ತುಂಬೋಣ, ಸಮಾಜದ ಸ್ವಾಸ್ಥ್ಯ ಕಾಪಾಡೋಣ.

(ಈ ಲೇಖನದ ಉದ್ದೇಶ ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ತರುವುದಲ್ಲ. ಒಂದು ದೇಶದ ಜವಾಬ್ದಾರಿಯುತ ನಾಗರಿಕರಾಗಿ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ.)ತ್ರವಾಗಿದೆ. ಜನಸಂದಣಿಯ ನಡುವೆಯೂ ಶಾಂತವಾಗಿ ನಡೆದು ನಿಷಿದ್ಧ ಶಬ್ದಗಳಿಗೂ ಬೆಚ್ಚದೆ ಪ್ರತಿಕ್ರಿಯಿಸುವ ಧೈರ್ಯ ಈ ಆನೆಯ ಬಲವಾಗಿದೆ.