ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jayashri kalkundri Column: ಮಣ್ಣಿನ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆ

ಕಾರಹುಣ್ಣಿಮೆಯ ದಿನದಂದು, ಎತ್ತು ಗಳನ್ನು ಶುಭ್ರಗೊಳಿಸಿ, ಅಲಂಕರಿಸಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳ ನೈವೇದ್ಯ ಸಮರ್ಪಿಸಿ, ಸಾಯಂಕಾಲದ ಸಮಯ ಕರಿ ಎರೆಯುವ ಸಂಪ್ರದಾಯವಿದೆ. ತಿಂಗಳುಗಳ ವರೆಗೆ ವಿಶ್ರಾಂತಿ ಪಡೆಯುತ್ತಿದ್ದ ಎತ್ತುಗಳು ಶ್ರಾವಣ ಮಾಸದ ಹೊತ್ತಿಗೆ ಕೃಷಿಕಾರ್ಯಕ್ಕೆ ಸಜ್ಜಾಗುತ್ತವೆ. ಭೂದೇವಿಯು ಪ್ರಕೃತಿಯ ಸ್ವರೂಪವಾದರೆ, ಎತ್ತುಗಳು ಪರಮೇಶ್ವರನ ಸ್ವರೂಪ ಮತ್ತು ನೇಗಿಲು ಈಶ್ವರನ ಆಯುಧ ಗಳ ಸ್ವರೂಪವಾಗಿವೆ.

ಜಯಶ್ರೀ ಕಾಲ್ಕುಂದ್ರಿ

ಹಬ್ಬ ಹರಿದಿನಗಳ ದೇಶವಾದ ಭಾರತ ದಲ್ಲಿ, ಸಂಸ್ಕೃತಿ ಸಂಸ್ಕಾರಗಳಿಗೆ ವಿಶೇಷ ಮಹತ್ವ ವಿದೆ. ಭಾರತೀಯ ರಾದ ನಾವೆಲ್ಲರೂ ಮರಗಳು, ಕಲ್ಲು ಮತ್ತು ಮಣ್ಣಿನಲ್ಲೂ ಸಹ ದೈವತ್ವ ವನ್ನು ಕಾಣುತ್ತೇವೆ. ಮಣ್ಣನ್ನು ಹೊನ್ನು ಎಂದು ಭಾವಿಸಿ, ನಮ್ಮ ಅನೇಕ ಹಬ್ಬಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಮಾಡಿ ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ. ಕಾರ ಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಆಚರಿಸುವ ಮುಂಗಾರಿನ ಆರಂಭದ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ.

ಕಾರಹುಣ್ಣಿಮೆಯ ದಿನದಂದು, ಎತ್ತು ಗಳನ್ನು ಶುಭ್ರಗೊಳಿಸಿ, ಅಲಂಕರಿಸಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳ ನೈವೇದ್ಯ ಸಮರ್ಪಿಸಿ, ಸಾಯಂಕಾಲದ ಸಮಯ ಕರಿ ಎರೆಯುವ ಸಂಪ್ರದಾಯವಿದೆ. ತಿಂಗಳುಗಳ ವರೆಗೆ ವಿಶ್ರಾಂತಿ ಪಡೆಯುತ್ತಿದ್ದ ಎತ್ತುಗಳು ಶ್ರಾವಣ ಮಾಸದ ಹೊತ್ತಿಗೆ ಕೃಷಿಕಾರ್ಯಕ್ಕೆ ಸಜ್ಜಾಗುತ್ತವೆ. ಭೂದೇವಿಯು ಪ್ರಕೃತಿಯ ಸ್ವರೂಪವಾದರೆ, ಎತ್ತುಗಳು ಪರಮೇಶ್ವರನ ಸ್ವರೂಪ ಮತ್ತು ನೇಗಿಲು ಈಶ್ವರನ ಆಯುಧ ಗಳ ಸ್ವರೂಪವಾಗಿವೆ.

ಇದನ್ನೂ ಓದಿ: Jayashree Kalkundri Column: ಯುದ್ಧೋನ್ಮಾದ, ಇದ್ದವರ ಹುಚ್ಚಾಟ- ಇಲ್ಲದವರ ಗೋಳಾಟ

ಜ್ಯೇಷ್ಠ ಮಾಸದ ಅಮಾವಾಸ್ಯೆಯು, ಭೂಮಿ ಸಂಬಂಧ ಪರ್ವ ಕಾಲವಾಗಿದ್ದರಿಂದ, ಅಂದು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸಲಾಗುತ್ತದೆ. ವರ್ಷಪೂರ್ತಿ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವುದು ಈ ಹಬ್ಬದ ಮುಖ್ಯ ಉದ್ದೇಶ ವಾಗಿದೆ.

ಮಣ್ಣನ್ನು ನಂಬಿ ಬದುಕುವ ರೈತ, ಮಣ್ಣಿನಿಂದಲೇ ಎತ್ತುಗಳನ್ನು ಮಾಡಿ ಪೂಜಿಸುವು ದರಿಂದ ಇದಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ಎಂಬ ಹೆಸರು ಬಂದಿದೆ. ಕೃಷಿಕರಿಗೆ ತಮ್ಮ ಎತ್ತುಗಳ ಮೇಲೆ ಅಭಿಮಾನದ ಜೊತೆಗೆ ನಂಬಿಕೆಯೂ ಜಾಸ್ತಿ. ಎತ್ತು ತನ್ನ ಕಾಲಿನಿಂದ ಯಾವ ಧಾನ್ಯವಿರುವ ಸೇರನ್ನು ತಳ್ಳಿ ಮುಂದೆ ಸಾಗುವುದೋ, ಅದೇ ಧಾನ್ಯವೇ ಬಿತ್ತಲು ಸೂಕ್ತವೆಂದು ನಿಶ್ವಯಿಸುತ್ತಾರೆ.

ಮಣ್ಣೆತ್ತಿನ ಅಮಾವಾಸ್ಯೆಯನ್ನು ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ, ಪ್ರಮುಖವಾಗಿ ಆಚರಿಸುತ್ತಾರೆ. ಎತ್ತುಗಳನ್ನು ಹೊಲಗಳಲ್ಲಿ ಸಿಗುವ ಜಿಗುಟು ಮಣ್ಣಿನಿಂದ ತಯಾರಿಸುವ ಸಂಪ್ರದಾಯ ರೂಢಿಯಲ್ಲಿದೆ. ಕೆಲವರು, ಕುಂಬಾರರ ಮನೆಗಳಿಂದ ಮಣ್ಣಿನಿಂದ ತಯಾರಿಸಿದ ಜೋಡಿ ಎತ್ತುಗಳನ್ನು ಖರೀದಿಸಿ ತರುತ್ತಾರೆ. ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ (ಮೇವು-ನೀರು ಹಾಕಲು) ಮಾಡುತ್ತಾರೆ.

ಮಣ್ಣಿನ ಎತ್ತುಗಳನ್ನು ಸಿಂಗರಿಸಿ ಜೋಡೆತ್ತುಗಳಿಗೆ ಆರತಿ ಎತ್ತಿ ಸಲ್ಲಿಸಲಾಗುತ್ತದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಈ ಹಬ್ಬವನ್ನು ‘ಕರಿ ದಿನ’ ಎಂತಲೂ ಕರೆಯುತ್ತಾರೆ. ಈ ದಿನದಂದು ಯಾವುದೇ ಕೃಷಿ ಕೆಲಸಗಳನ್ನು ಮಾಡದೆ, ಎತ್ತುಗಳಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಆಷಾಡ ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣಿನ ಪೂಜೆಗಳಾಗಿವೆ. ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಮತ್ತು ಜೋಕುಮಾರ ಈ ಐದು ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ. ದೀಪಾವಳಿ ಅಮಾವಾಸ್ಯೆ ಯ ದಿನ ಧನಲಕ್ಮೀ ಪೂಜೆಗೊಂಡರೆ, ಮಣ್ಣೆತ್ತಿನ ಅಮಾವಾಸ್ಯೆಯ ದಿನ ಧಾನ್ಯ ಲಕ್ಷ್ಮಿ ಯನ್ನು ತರುವ ಎತ್ತುಗಳು ಹಾಗೂ ಕೃಷಿಯ ಎಲ್ಲಾ ಉಪಕರಣಗಳು ಪೂಜೆಗೊಳ್ಳುತ್ತವೆ.

ಪೌರಾಣಿಕ ಹಿನ್ನೆಲೆ: ಒಂದು ಬಾರಿ, ಶಿವನು ಮಾರುವೇಷದಲ್ಲಿ ಬಂದು ನಿಮ್ಮ ಎತ್ತುಗಳನ್ನು ಕೆಲಕಾಲ ನನಗೆ ಕೊಡಿ ಎಂದು ರೈತರನ್ನು ಕೇಳಿದನಂತೆ. ಆಗ ಅವರು ಕುಹಕದಿಂದ ‘ನಮ್ಮ ಎತ್ತುಗಳು ಮಣ್ಣಿನವು. ಅದಕ್ಕಾಗಿ ಕೊಡಲಾಗುವುದಿಲ್ಲ’ ಎಂದು ನಿರಾಕರಿಸಿದರಂತೆ. ಈಶ್ವರನ ಅವಕೃಪೆಗೆ ಪಾತ್ರರಾದ ಕೃಷಿಕರ ಕೊಟ್ಟಿಗೆಯಲ್ಲಿದ್ದ ಎತ್ತುಗಳೆಲ್ಲವೂ ಮಣ್ಣಿನ ರೂಪವನ್ನೇ ತಳೆದಿದ್ದವು. ನಂತರ, ಅವರೆ ಪಶ್ಚಾತ್ತಾಪದಿಂದ ಶಿವನನ್ನು ಪೂಜಿಸಿ ಪ್ರಾರ್ಥಿಸಿ ದಾಗ ಆತನ ಅನುಗ್ರಹದಿಂದ ಎತ್ತುಗಳೆಲ್ಲ ಮರಳಿ ಜೀವಂತವಾದವಂತೆ.

ಪೂಜಾ ವಿವರ: ಮಣ್ಣೆತ್ತಿನ ಅಮಾವಾಸ್ಯೆಯಂದು ಬೆಳಗ್ಗೆ ಮನೆಯನ್ನೂ, ಸ್ವಚ್ಛಗೊಳಿಸಿ, ರಂಗೋಲಿ ಯಿಂದ ಅಂಗಳವನ್ನು ಅಲಂಕರಿಸಲಾಗುತ್ತದೆ. ಕೊಟ್ಟಿಗೆಯಲ್ಲಿರುವ ಎತ್ತುಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಅಲಂಕರಿಸಿ ಕುತ್ತಿಗೆಗೆ ಗಂಟೆ, ಹೂಮಾಲೆ ಮತ್ತು ಬಣ್ಣದ ಬಟ್ಟೆಗಳನ್ನು ಕಟ್ಟುತ್ತಾರೆ. ಎತ್ತುಗಳಿಗೆ ಬಣ್ಣ ಲೇಪಿಸಿ, ಜೋಳ, ಕುಸುಬಿ ಕಾಳುಗಳು ಮತ್ತು ಗಂಟೆಸರಗಳಿಂದ ಸಿಂಗರಿಸಿ, ನೈವೇದ್ಯ ಸಲ್ಲಿಸಿ, ಆರತಿ ಎತ್ತಿ ಪೂಜಿಸುತ್ತಾರೆ. ಹೊಲ ದಿಂದ ತಂದ ಮಣ್ಣಿನ ಎತ್ತುಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಕೆಲವೆಡೆ ಸಣ್ಣ ಮಣ್ಣಿನ ಗುಡ್ಡವನ್ನು ಮಾಡಿ ಅದನ್ನು ಭೂದೇವಿಯ ಸಂಕೇತವಾಗಿ ಪೂಜಿಸುತ್ತಾರೆ.

ಕೃಷಿಕರಿಗೆ, ಕುಂಬಾರರು, ಅಮಾವಾಸ್ಯೆಯ ಮುನ್ನಾದಿನವೇ ಮಣ್ಣಿನ ಎತ್ತುಗಳನ್ನು ತಯಾರಿಸಿ, ಮನೆಗೆ ತಲುಪಿಸಿ, ಅವರರಿಂದ ವೀಳ್ಯ ದಕ್ಷಿಣೆ, ಅಕ್ಕಿ ತೆಂಗಿನಕಾಯಿ ಮತ್ತು ಕಾಣಿಕೆ ಪಡೆಯುತ್ತಾರೆ. ಈ ಎತ್ತುಗಳಿಗೆ ಸುಂದರವಾದ ಬಣ್ಣ ಹಚ್ಚಿ, ಕೊಂಬುಗಳಿಗೆ ಗೆಜ್ಜೆ, ಜೂಲುಗಳಿಂದ ಅಲಂಕರಿಸುತ್ತಾರೆ. ಮನೆಯ ದೇವರ ಕೋಣೆಯಲ್ಲಿ ಅಥವಾ ಹೊಸ್ತಿಲ ಬಳಿ ಧಾನ್ಯಗಳನ್ನು (ಹೆಸರುಕಾಳು, ಜೋಳ ಇತ್ಯಾದಿ) ಹರಡಿ, ಅದರ ಮೇಲೆ ಈ ಮಣ್ಣಿನ ಎತ್ತುಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.

ನಂತರ ಧೂಪ, ದೀಪ ಹಚ್ಚಿ, ಪೂಜಾ ವಿಽಗಳನ್ನು ಸಲ್ಲಿಸುತ್ತಾರೆ. ಈ ಹಬ್ಬದಂದು ಮನೆ ಗಳಲ್ಲಿ ಸೊಪ್ಪಿನ ಪದಾರ್ಥಗಳು, ಹೂರಣದ ಕಡುಬು, ಖಾರದ ಕಡಬು, ಹೋಳಿಗೆ, ಪಾಯಸದಂತಹ ವಿಶೇಷ ಖಾದ್ಯಗಳನ್ನು ತಯಾರಿಸಿ ಎತ್ತುಗಳಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ.

ಕೃಷಿಕರಿಗೆ ಒಕ್ಕಲುತನವೇ ಮೂಲಾಧಾರ. ಈ ನಿಟ್ಟಿನಲ್ಲಿ, ಮಣ್ಣೆತ್ತಿನ ಅಮಾವಾಸ್ಯೆ, ಜೀವನದುದ್ದಕ್ಕೂ ತಮ್ಮನ್ನು ಸಲಹುವ ಅನ್ನದಾತ ಬಸವಣ್ಣನನ್ನು ಗೌರವಿಸುವ ಹಬ್ಬವಾಗಿ ನಮ್ಮ ನಾಡಿನ ಸಂಸ್ಕೃತಿಯ ದ್ಯೋತಕವೆನಿಸಿದೆ.