ಅಜಯ್
ಜಪಾನ್ ದೇಶದಲ್ಲಿ ಗಣೇಶನನ್ನು ನಂದಿಕೇಶ್ವರ ಎಂದೂ ಕರೆಯಲಾಗುತ್ತದೆ! ಜಪಾನಿನ ಬೌದ್ಧ ಧರ್ಮದ ಒಂದು ಶಾಖೆಯ ದೇವರಾಗಿರುವ ಗಣೇಶನನ್ನು ಅಲ್ಲಿನವರು ಕಂಜಿಟೆನ್ ಅಥವಾ ಕಾಂಕಿ ಟೆನ್ ಎಂದು ಕರೆಯುವರು. ಅಲ್ಲಿ ಗಣೇಶನಿಗೆ ಬಳಕೆಯಲ್ಲಿರುವ ಇತರ ಹೆಸರುಗಳೆಂದರೆ ಶೋಟೆನ್, ಶೋಡೆನ್, ಗಣಬಚಿ, ಗಣಹತಿ, ಬಿನಾಯಕ ಇತ್ಯಾದಿ.
ನಮ್ಮ ದೇಶದ ಗಣೇಶನೇ ಜಪಾನಿನಲ್ಲಿ ಪೂಜಿಸಲ್ಪಡುತ್ತಿರುವನು ಎಂಬುದು ನಿಜವಾದರೂ, ಅಲ್ಲಿನ ಗಣೇಶನಿಗೂ ನಾವು ಇಂದು ಪೂಜಿಸುತ್ತಿರುವ ಗಣೇಶನಿಗೂ ಕೆಲವು ವ್ಯತ್ಯಾಸಗಳನ್ನು ಗುರುತಿಸ ಬಹುದು. ಬಹು ಹಿಂದೆ ಅಲ್ಲಿನ ಜನರು ಗಣೇಶನನ್ನು ಗಣಗಳ ಅಧಿಪತಿ ಎಂದು ಗುರುತಿಸಿ, ಅವರೆಲ್ಲರೂ ವಿಘ್ನಗಳನ್ನು ತಂದೊಡ್ಡುವವರು ಎಂದೇ ತಿಳಿದಿದ್ದರು!
ಇದನ್ನೂ ಓದಿ: Ganesh Chaturthi: ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್ ಮಾರ್ಕೆಟ್
ಜತೆಯಲ್ಲೇ, ಕೇಳಿದ್ದನ್ನೆಲ್ಲಾ ಕೊಡುವ ದೇವತೆ ಕಂಜಿಟೆನ್ ಎಂದೂ ಆತನಿಗೆ ಬಹಳವಾದ ಗೌರವವನ್ನು ಕೊಡುತ್ತಿದ್ದರು. ನಮ್ಮ ದೇಶದಲ್ಲಿ ಗಣೇಶನನ್ನು, ಗಣೇಶನ ವಿಗ್ರಹಗಳನ್ನು, ಗಣೇಶನ ಫೊಟೋಗಳನ್ನು ಎಲ್ಲೆಂದರಲ್ಲಿ ಕಾಣಬಹುದು. ಆದರೆ, ಜಪಾನಿನಲ್ಲಿ, ಆ ರೀತಿ ಎಲ್ಲೆಂದರಲ್ಲಿ ಗಣೇಶನನ್ನು ಕಾಣುವುದು ಕಷ್ಟ; ಬದಲಿಗೆ, ಆತನು ಬಹಳ ಪವಿತ್ರ ಎಂಬ ಭಾವನೆಯಿಂದ, ದೇಗುಲಗಳ ಒಳಭಾಗಗಳಲ್ಲಿ ಆತನ ವಿಗ್ರಹಗಳನ್ನು ಇಡುತ್ತಿದ್ದರು.
ಅನುಭವಿ ಸನ್ಯಾಸಿಗಳು ಗಣೇಶನಿಗೆ ಪೂಜಿಸುವರೇ ವಿನಃ, ಜನಸಾಮಾನ್ಯರು ನೇರವಾಗಿ ಗಣೇಶನ ಬಳಿ ಸಾರಲು ಹಿಂಜರಿಕೆ ಇತ್ತು. ಆನೆ ಮುಖದ ಗಣೇಶನನ್ನು ಅಲ್ಲಿ ಕಾಣಬಹುದಾದರೂ, ಆತನನ್ನು ಎರಡು ತಲೆಯ ದೇವತೆ ಯನ್ನಾಗಿಯೂ ಗುರುತಿಸಲಾಗಿದೆ. ಜಪಾನಿನ ಹಲವು ಕಡೆ ಇಂದಿಗೂ ಗಣೇಶನನ್ನು ಅಲ್ಲಿದೇ ಪದ್ಧತಿಯಲ್ಲಿ ಪೂಜಿಸುವುದನ್ನು ಕಾಣಬಹುದು.