ಹಿಂದಿರುಗಿ ನೋಡಿದಾಗ
ಸಸ್ಯಗಳು ಸೂರ್ಯನ ಬೆಳಕಿನಲ್ಲಿ ಗ್ಲೂಕೋಸ್ ರೂಪದ ಆಹಾರವನ್ನು ಉತ್ಪಾದಿಸುತ್ತವೆ. ಅವನ್ನು ನಾವು ತಿನ್ನುತ್ತೇವೆ. ಸಸ್ಯಗಳಲ್ಲಿರುವ ಗ್ಲೂಕೋಸ್ ನಮ್ಮ ದೇಹವನ್ನು ಸೇರುತ್ತದೆ. ನಾವು ಉಸಿರಾಡು ವಾಗ ನಮ್ಮ ಶ್ವಾಸಕೋಶಗಳನ್ನು ಪ್ರವೇಶಿಸುವ ಆಕ್ಸಿಜನ್, ಹಿಮೋಗ್ಲಾಬಿನ್ ನೆರವಿನಿಂದ ನಮ್ಮ ಶರೀರದ ಪ್ರತಿಯೊಂದು ಜೀವಕೋಶವನ್ನು ತಲುಪುತ್ತದೆ.
ಇನ್ಸುಲಿನ್, ಜೀವಕೋಶದ ‘ಬಾಗಿಲನ್ನು’ ತೆರೆದು ಗ್ಲೂಕೋಸ್ ಪ್ರವೇಶಕ್ಕೆ ಅನುಮತಿಯನ್ನು ಕೊಡು ತ್ತದೆ. ಜೀವಕೋಶವೆಂಬ ಒಲೆಯಲ್ಲಿ ಆಕ್ಸಿಜನ್, ಗ್ಲೂಕೋಸ್ ಎಂಬ ಇಂಧನಕ್ಕೆ ಕಿಡಿಯನ್ನು ಹೊತ್ತಿಸಿ ಭಸ್ಮ ಮಾಡುತ್ತದೆ. ಆಗ ಶಕ್ತಿಯು ಉತ್ಪಾದನೆಯಾಗುತ್ತದೆ. ಈ ಶಕ್ತಿಯ ನೆರವಿನಿಂದ ಶರೀರಕ್ಕೆ ಉಪಯುಕ್ತ ಕೆಲಸಗಳನ್ನು ಮಾಡಬಹುದು.
ಇದುವೇ ಚಯ ಅಥವಾ ಅನಬಾಲಿಸಂ. ಅನಗತ್ಯ ರಚನೆಗಳನ್ನು ನಿವಾರಿಸಿ ವಿಲೇವಾರಿ ಮಾಡಬಹುದು. ಇದುವೇ ಅಪಚಯ ಅಥವ ಕೆಟಬಾಲಿಸಂ. ಎರಡನ್ನೂ ಸಮಷ್ಟಿಯಾಗಿ ಚಯಾಪಚಯ ಅಥವ ಮೆಟಬಾಲಿಸಂ ಎನ್ನಬಹುದು. ಈ ಚಯಾಪಚಯ ಕ್ರಿಯೆಯಲ್ಲಿ ಶಾಖವು ಉತ್ಪಾದನೆಯಾಗಿ ಶರೀರವನ್ನು ಬೆಚ್ಚಗೆ ಇಡುತ್ತದೆ.
ಇದುವೇ ಶರೀರದ ಉಷ್ಣತೆ. ಸಹಜ ಉಷ್ಣತೆಯು ೩೭ ಡಿಗ್ರಿ ಸೆಲ್ಷಿಯಸ್‌ನಷ್ಟಿರುತ್ತದೆ. 35 ಡಿಗ್ರಿ ಸೆಲ್ಷಿಯಸ್ ಅನ್ನು ಇಳಿತಾಪವೆಂದು, 38.3 ಡಿಗ್ರಿ ಸೆಲ್ಷಿಯಸ್ ಉಷ್ಣತೆಯನ್ನು ಏರುತಾಪ ಎಂದು ಕರೆಯುವುದು ವಾಡಿಕೆ.
ಇದನ್ನೂ ಓದಿ: Dr N Someshwara Column: ಬದುಕು ನೀಡುವ ಬದಲಿ ಜೋಡಣೆ
ಹೃದಯದಲ್ಲಿ ರಂಧ್ರ: ಕೆಲವು ಶಿಶುಗಳು ಹುಟ್ಟುವಾಗಲೇ ಅವುಗಳ ಹೃದಯದ ನಡುತಡಿಕೆಯಲ್ಲಿ ಒಂದು ರಂಧ್ರವಿರುತ್ತದೆ. ಹಾಗಾಗಿ ಆಕ್ಸಿಜನ್‌ಭರಿತ ರಕ್ತ ಹಾಗೂ ಆಕ್ಸಿಜನ್ ಕೊರತೆಯ ರಕ್ತಗಳೆರಡೂ ಮಿಶ್ರವಾಗಿ, ಶಿಶುವಿಗೆ ಅಗತ್ಯವಾದ ಆಕ್ಸಿಜನ್ ದೊರೆಯದೆ ಬಳಲುವ ಸಾಧ್ಯತೆಯಿರುತ್ತದೆ. ಈ ರಂಧ್ರ ವನ್ನು ಹೇಗೆ ಮುಚ್ಚಬಹುದು ಎಂಬ ಪರಿಕಲ್ಪನೆಯು ವಿಜ್ಞಾನಿಗಳಿಗಿದೆ. ಆದರೆ ಒಂದು ಸಮಸ್ಯೆ. ಹೃದಯವು ಮಿಡಿಯುವಾಗ, ರಕ್ತ ಪ್ರವಾಹವು ಹರಿಯುವಾಗ, ಆ ರಂಧ್ರವನ್ನು ಮುಚ್ಚುವ ಪ್ರಯತ್ನ ವನ್ನು ನಡೆಸುವುದು ಅತ್ಯಂತ ಅಪಾಯಕಾರಿ.
ರಕ್ತನಾಳಕ್ಕೆ ಇಕ್ಕಳ ಹಾಕಿ, ತಾತ್ಕಾಲಿಕವಾಗಿ ರಕ್ತಪ್ರವಾಹವನ್ನು ನಿಲ್ಲಿಸಿ, ರಂಧ್ರವನ್ನು ದುರಸ್ತಿ ಮಾಡಬಹುದು. ಆದರೆ ಮಿದುಳಿನ ನರಕೋಶಗಳು ೪ ನಿಮಿಷಗಳು ಮಾತ್ರ ಆಕ್ಸಿಜನ್ ಇಲ್ಲದೇ ಬದುಕಬಲ್ಲವು. ೬ ನಿಮಿಷಗಳಾಗುತ್ತಿರುವಂತೆಯೇ ಅವು ಶಾಶ್ವತವಾಗಿ ಸಾಯುತ್ತವೆ. ಹಾಗಾಗಿ ವಿಜ್ಞಾನಿಗಳು ಹೃದಯವನ್ನು ಸ್ಥಗಿತಗೊಳಿಸುವ ದಾರಿಕಾಣದೆ ಕಂಗಾಲಾಗಿದ್ದರು.
ನೆಲ-ಅಳಿಲು: ದಂಶಕಗಳು (ರೋಡೆಂಟ್ಸ್) ಎಂಬ ಪ್ರಾಣಿಗಳಿವೆ. ಇಲಿ, ಅಳಿಲು, ಮೊಲ, ಮುಳ್ಳು ಹಂದಿ, ಗಿನಿಪಿಗ್, ಬೀವರ್, ಹ್ಯಾಮ್‌ಸ್ಟರ್ ಮುಂತಾದ ಪ್ರಾಣಿಗಳಿವೆ. ಇದೇ ವರ್ಗಕ್ಕೆ ಸೇರಿದ ಹಾಗೂ ಅಮೆರಿಕ ಮತ್ತು ಕೆನಡಗಳಲ್ಲಿ ವಿಶೇಷವಾಗಿ ವಾಸಿಸುವ ಗ್ರೌಂಡ್‌ಹಾಗ್ (ಮಾರ್ಮೋಟ ಮೊನಾಕ್ಸ್) ಎಂಬ ಜೀವಿಯಿದೆ. ಹಾಗ್ ಎಂದರೆ ಹಂದಿಯಲ್ಲ. ಸ್ವಲ್ಪ ದೊಡ್ಡ ಅಳಿಲು. ಹಾಗಾಗಿ ಇದನ್ನು ನೆಲಅಳಿಲು ಎಂದು ಕರೆಯಬಹುದು. ಇವು ಚಳಿಗಾಲದಲ್ಲಿ ಶಿಶಿರ ನಿದ್ರೆಯನ್ನು (ಹೈಬರ್ನೇಶನ್) ಮಾಡುತ್ತವೆ. ಆಗ ಅವುಗಳ ದೇಹದ ಉಷ್ಣತೆಯು ೨ ಡಿಗ್ರಿ ಸೆಲ್ಷಿಯಸ್ ನಷ್ಟು ಇಳಿಯುತ್ತದೆ. ಹೃದಯವು ಒಂದು ನಿಮಿಷಕ್ಕೆ ೪-೧೦ ಸಲ ಮಾತ್ರ ಮಿಡಿಯುತ್ತದೆ. ಪ್ರತಿ ೬ ನಿಮಿಷಗಳಿಗೆ ಒಂದು ಸಲ ಮಾತ್ರ ಉಸಿರಾಡುತ್ತದೆ. ಶಿಶಿರನಿದ್ರೆಯು ಮುಗಿಯುವ ವೇಳೆಗೆ (೩-೫ ತಿಂಗಳು) ಅದರ ಶರೀರ ದಲ್ಲಿ ಸಂಗ್ರಹವಾಗಿರುವ ಕೊಬ್ಬು ಅರ್ಧಕ್ಕೆ ಅರ್ಧ ಇಳಿದಿರುತ್ತದೆ.
ಡಾ.ವಿಲ್ ಫ್ರೆಡ್ ಬೀಜ್‌ಲೋ ಎಂಬ ಕೆನಡಿಯನ್ ಶಸ್ತ್ರವೈದ್ಯನು ಟೊರಾಂಟೊ ವಿಶ್ವವಿದ್ಯಾಲಯ ದಲ್ಲಿ ಕೆಲಸವನ್ನು ಮಾಡುತ್ತಿದ್ದ. ಅವನಿಗೆ ಈ ನೆಲ ಅಳಿಲುಗಳ ಶಿಶಿರನಿದ್ರೆಯು ಮಹಾಚೋದ್ಯ ವೆನಿಸಿತು. ೨ ಡಿಗ್ರಿ ಸೆಲ್ಷಿಯಸ್ ಉಷ್ಣತೆ, ನಿಮಿಷಕ್ಕೆ ೪-೧೦ ಸಲ ಹೃದಯ ಮಿಡಿತ ಹಾಗೂ ಆರು ನಿಮಿಷಗಳಿಗೆ ಒಂದು ಸಲ ಉಸಿರಾಟ!
ಹೀಗೆ ೩-೫ ತಿಂಗಳು ಕಳೆದು ವಸಂತ ಋತು ಆಗಮಿಸುತ್ತಿರುವಂತೆಯೇ ಎಚ್ಚೆತ್ತುಕೊಂಡು, ನೂರಕ್ಕೆ ನೂರರಷ್ಟು ಚಟವಟಿಕೆಯಿಂದ ತನ್ನ ಬದುಕನ್ನು ಮರು ಆರಂಭಿಸುತ್ತದೆಯಲ್ಲ!... ಇದು ಹೇಗೆ ಸಾಧ್ಯ? ಬೀಜ್‌ಲೋ ತರ್ಕಿಸಿದ. ನೆಲಅಳಿಲಿನ ದೇಹದ ಉಷ್ಣತೆಯು ಶೂನ್ಯಕ್ಕೆ ಹತ್ತಿರ ಬಂದಿದೆ ಎಂದರೆ, ಅದರ ಚಯಾಪಚಯವೂ ಅಷ್ಟೇ ಕಡಿಮೆಯಾಗಬೇಕು. ಚಯಾಪಚಯವು ಕಡಿಮೆಯಾ ದಷ್ಟು ಉಷ್ಣತೆಯು ಕಡಿಮೆಯಾಗುತ್ತದೆ.
ಒಂದು ಬಾಟಲಿ ಹಾಲನ್ನು ಮೇಜಿನ ಮೇಲಿಟ್ಟರೆ, ಅದು ಕೆಲವು ಗಂಟೆಗಳಲ್ಲಿ ಒಡೆದು ಹೋಗುತ್ತದೆ. ಅದೇ ಬಾಟಲಿ ಹಾಲನ್ನು ಫ್ರಿಜ್‌ನಲ್ಲಿಟ್ಟರೆ ದಿನಗಟ್ಟಲೆ ರಕ್ಷಿಸಬಹುದು. ಅಂದರೆ ಶೀತಲತೆಯು ಚಯಾಪಚಯ ವೇಗವನ್ನು ಕಡಿಮೆ ಮಾಡುತ್ತದೆ. ಹಾಗಿದ್ದ ಮೇಲೆ, ಓರ್ವ ವ್ಯಕ್ತಿಯ ದೇಹವನ್ನು ಶೀತಲಗೊಳಿಸೋಣ; ಶರೀರದ ಉಷ್ಣತೆಯು ಕಡಿಮೆಯಾದರೆ, ಆ ವ್ಯಕ್ತಿಯ ಮಿದುಳು ‘ಶಿಶಿರನಿದ್ರೆ’ಗೆ ಹೋಗುತ್ತದೆ. ಅವುಗಳಿಗೆ ಹೆಚ್ಚು ಆಕ್ಸಿಜನ್ ಬೇಕಾಗುವುದಿಲ್ಲ. ಹಾಗಾಗಿ ಹೃದಯವನ್ನು ೪ ನಿಮಿಷ ಗಳಿಗಿಂತಲೂ ಹೆಚ್ಚುಕಾಲ ಸ್ಥಗಿತಗೊಳಿಸಬಹುದು.
ಹೃದಯದಲ್ಲಿರುವ ರಂಧ್ರಕ್ಕೆ ತೇಪೆ ಹಾಕಬಹುದು. ಮತ್ತೆ ದೇಹದ ಉಷ್ಣತೆಯನ್ನು ನಿಧಾನವಾಗಿ ಹೆಚ್ಚಿಸಿದಾಗ, ಮಿದುಳು ಸಹ ಯಾವುದೇ ಹಾನಿಯಿಲ್ಲದೆ ಚೇತರಿಸಿಕೊಳ್ಳುತ್ತದೆ ಎಂದು ಲೆಕ್ಕಾಚಾರ ಹಾಕಿದ. 1940ರ ದಶಕ. ನಾಯಿಗಳ ಮೇಲೆ ಅವನು ಪ್ರಯೋಗವನ್ನು ಆರಂಭಿಸಿದ. ನಾಯಿಯ ಶರೀರದ ಉಷ್ಣತೆಯನ್ನು ೨೦ ಡಿಗ್ರಿ ಸೆಲ್ಷಿಯಸ್‌ಗೆ ಇಳಿಸಿದ.
ದೇಹದ ಉಷ್ಣತೆಯು ಶೇ.85ರಷ್ಟು ಇಳಿಯಿತು. ಅವನು ನಾಯಿಯ ಹೃದಯದ ರಕ್ತನಾಳಗಳಿಗೆ ಇಕ್ಕಳ ಹಾಕಿ ರಕ್ತಪ್ರವಾಹವನ್ನು ನಿಲ್ಲಿಸಿದ. ಹೃದಯದ ಮೇಲೆ ಅಗತ್ಯ ಶಸ್ತ್ರಪ್ರಯೋಗವನ್ನು ಮಾಡಿದ. ನಂತರ ಇಕ್ಕಳವನ್ನು ತೆಗೆದು ಮತ್ತೆ ರಕ್ತಪ್ರವಾಹವನ್ನು ಆರಂಭಿಸಿದ. ನಾಯಿಯ ಒಡಲಿನ ಉಷ್ಣತೆಯನ್ನು ಕ್ರಮೇಣ ಹೆಚ್ಚಿಸಿದ. ಯುರೇಕಾ!.... ಎಂದು ಮನದಲ್ಲಿಯೇ ಕೂಗಿದ ಬೀಜ್‌ಲೋ. ನಾಯಿ ಸಂಪೂರ್ಣ ಎಚ್ಚರಗೊಂಡಿತು. ಅದು ಆರೋಗ್ಯಕರವಾಗಿತ್ತು.
ಜಾಕ್ವೆಲಿನ್ ಜಾನ್ಸನ್: ಬೀಜ್‌ಲೋ ಚಿಕಿತ್ಸಾ ಇಳಿತಾಪಮಾನ (ಥೆರಾಪ್ಯೂಟಿಕ್ ಹೈಪೋಥರ್ಮಿಯ) ಎನ್ನುವ ಹೊಸ ವಿಜ್ಞಾನ ಶಾಖೆಯು ಆರಂಭವಾಗಲು ಕಾರಣವಾದ. ಆದರೆ ಈ ತಂತ್ರಜ್ಞಾನದ ಲಾಭವನ್ನು ಪಡೆದು ಮೊದಲ ಬಾರಿಗೆ ಅದನ್ನು ಮನುಷ್ಯರ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದ ಕೀರ್ತಿ ಮಿನಿಸ್ಫೋಟ ವಿಶ್ವವಿದ್ಯಾಲಯದ ಡಾ.ಎಫ್.ಜಾನ್ ಲೆವಿಸ್ ಮತ್ತು ಡಾ. ಮನ್ಸೂರ್ ತೌಫಿಕ್ ಅವರಿಗೆ ದೊರೆಯಿತು.
ಸೆಪ್ಟೆಂಬರ್ ೨, 1952. ಐದು ವರ್ಷದ ಹುಡುಗಿ ಜಾಕ್ವೆಲಿನ್ ಜಾನ್ಸನ್. ಆಕೆಯ ಹೃದಯದ ನಡು ತಡಿಕೆಯಲ್ಲಿ ಒಂದು ರಂಧ್ರವಿತ್ತು. ಎಡ ಹೃತ್ಕರ್ಣ ಮತ್ತು ಬಲಹೃತ್ಕರ್ಣಗಳ ನಡುವೆ ಇದ್ದ ರಂಧ್ರ ವನ್ನು ಏಟ್ರಿಯಲ್ ಸೆಪ್ಟಲ್ ಡಿಫೆಕ್ಟ್ ಎನ್ನುತ್ತಾರೆ. ಆ ಮಗುವಿನ ನಡುತಡಿಕೆಯಲ್ಲಿದ್ದ ರಂಧ್ರದ ಮೂಲಕ ಆಕ್ಸಿಜನ್‌ಭರಿತ ಹಾಗೂ ಕೊರತೆಯಿರುವ ರಕ್ತವು ಪರಸ್ಪರ ಬೆರೆತು, ಆಕೆಯ ಬದುಕಿಗೇ ಸಂಚಕಾರವನ್ನು ತಂದಿತ್ತು. ಈ ಸ್ಥಿತಿಯಲ್ಲಿ ಆಕೆಯು ಹೆಚ್ಚುಕಾಲ ಬದುಕುವ ಸಾಧ್ಯತೆಯಿರಲಿಲ್ಲ. ಆ ಮಗುವನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆತಂದರು. ಈ ಹಿಂದೆ, ಯಾರೂ ಕೈಯಾರ ಹೃದಯ ವನ್ನು ನಿಲ್ಲಿಸಿ, ಛೇದಿಸಿ, ಒಳಗಿರುವ ರಂಧ್ರವನ್ನು ಮುಚ್ಚುವ ಸಾಹಸವನ್ನೇ ಮಾಡಿರಲಿಲ್ಲ.
ಜಾಕ್ವೆಲಿನ್ ಜಾನ್ಸನ್ನಳ ದೇಹವನ್ನು ಶೈತ್ಯೀಕರಿಸುವ ತಂತ್ರಜ್ಞಾನ ಆಗ ದೊರೆಯುತ್ತಿರಲಿಲ್ಲ. ನಾವು ಊಹಿಸಿಕೊಳ್ಳದಂಥ ಅತ್ಯಂತ ಕಚ್ಚಾ ವಿಧಾನವನ್ನು ವೈದ್ಯರು ಬಳಸಿದರು. ಜಾಕ್ವೆಲಿನ್ನಳ ಪುಟ್ಟ ದೇಹವನ್ನು ರಬ್ಬರ್ ಕಂಬಳಿಯಲ್ಲಿ ಸುತ್ತಿದ್ದರು. ಇಡೀ ದೇಹವನ್ನು ಮಂಜು ನೀರಿನ ತೊಟ್ಟಿಯಲ್ಲಿ ಮುಳುಗಿಸಿದರು. ಆಕೆಯ ದೇಹದ ಉಷ್ಣತೆಯು ನಿಧಾನವಾಗಿ ಇಳಿಯಲಾರಂಭಿಸಿತು.
ಉಷ್ಣತೆಯು ಈಗ ೨೭ ಡಿಗ್ರಿ ಸೆಲ್ಷಿಯಸ್‌ಗೆ ಮುಟ್ಟಿತು. ಹೃದಯ ಮಿಡಿತವು ನಿಧಾನವಾಗಿ ಕಡಿಮೆ ಯಾಗಲಾರಂಬಿಸಿತು. ಡಾ.ಲೆವಿಸ್ ಜಾಕ್ವೆಲಿನ್ನಳ ಹೃದಯದ ಧಮನಿಗಳಿಗೆ ಇಕ್ಕಳವನ್ನು ಹಾಕಿದರು. ಹೃದಯದೊಳಗೆ ರಕ್ತಪ್ರವೇಶವು ನಿಂತಿತು. ೫ ನಿಮಿಷ ೩೦ ಸೆಕೆಂಡುಗಳ ಒಳಗೆ ರಂಧ್ರಕ್ಕೆ ತೇಪೆ ಹಾಕುವ ಕೆಲಸವನ್ನು ಪೂರ್ಣಗೊಳಿಸಿದರು.
ಈ ಅವಧಿಯಲ್ಲಿ ಆಕೆಯ ಹೃದಯವು ಸ್ಥಗಿತವಾಯಿತು. ವೈದ್ಯಕೀಯ ಪರಿಭಾಷೆಯಲ್ಲಿ ಹೇಳ ಬೇಕಾದರೆ, ಆಕೆಯು ‘ಕ್ಲಿನಿಕಲಿ ಡೆಡ್!’. ಹೃದಯದ ಭಿತ್ತಿಯನ್ನು ಹೊಲಿದರು. ಇಕ್ಕಳವನ್ನು ಸಾವಕಾಶವಾಗಿ ತೆರೆದರು. ಬಿಸಿರಕ್ತವು ರಕ್ತನಾಳದ ಮೂಲಕ ಹೃದಯದ ಒಳಗೆ ಹರಿಯಲಾ ರಂಭಿಸಿತು.
ತೊಟ್ಟಿಯಲ್ಲಿದ್ದ ತಣ್ಣೀರನ್ನು ಕ್ರಮವಾಗಿ ಹೊರದೆಗೆದು ಬಿಸಿನೀರನ್ನು ತುಂಬಲಾರಂಭಿಸಿದರು. ಜಾಕ್ವೆಲಿನ್ನಳ ದೇಹವು ಸಹಜ ಉಷ್ಣತೆಗೆ ಬಂದಿತು. ಹೃದಯವು ತನಗೆ ತಾನೇ ಮಿಡಿಯಲಾ ರಂಭಿಸಿತು. ರಂಧ್ರ ಮುಚ್ಚಿದ್ದರಿಂದ ಜಾಕ್ವೆಲಿನ್ನಳ ಬದುಕಿನಲ್ಲಿ ಮೊದಲ ಬಾರಿಗೆ ಪರಿಪೂರ್ಣ ಆಕ್ಸಿಜನ್‌ಭರಿತ ರಕ್ತವು ದೇಹದಲ್ಲಿ ಹರಿಯಲಾರಂಭಿಸಿತು. ಜಾಕ್ವೆಲಿನ್ ಜಾನ್ಸನ್ ಬದುಕಿದಳು. ಹೀಗೆ ಜಗತ್ತಿನ ಮೊತ್ತ ಮೊದಲ ತೆರೆದ ಹೃದಯ ಶಸ್ತ್ರಚಿಕಿತ್ಸೆಯು ಯಶಸ್ವಿಯಾಯಿತು.
ಹೃದಯ-ಶ್ವಾಸಕೋಶ ಯಂತ್ರ: ಹೃದ್ರೋಗಿಗಳನ್ನು ಮಂಜುನೀರಿನ ತೊಟ್ಟಿಯಲ್ಲಿ ಮುಳುಗಿಸಿ, ಸಾವಿಗೆ ೧೦-೧೫ ನಿಮಿಷಗಳ ಮೋದವನ್ನು ಮಾಡಿ ಅಸಂಖ್ಯ ಶಸ್ತ್ರಚಿಕಿತ್ಸೆಗಳು ನಡೆದವು. ಆದರೆ ೧೦-೧೫ ನಿಮಿಷಗಳಲ್ಲಿ ಮಾತ್ರ ಮಾಡಬಹುದಾದಂಥ ಸರಳ ಹೃದ್ರೋಗ ಚಿಕಿತ್ಸೆಗಳನ್ನು ಮಾತ್ರ ಮಾಡಬಹುದಾಗಿತ್ತು. ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳಿನ್ನೂ ಕನಸಾಗಿದ್ದವು. ಆಗ ಜಾನ್ ಗಿಬ್ಬನ್ ಎಂಬಾತ ಹೃದಯ-ಶ್ವಾಸಕೋಶಗಳ ಯಂತ್ರವನ್ನು ರೂಪಿಸಿದ. ಈ ಯಂತ್ರವು ಹೃದಯದ ಬದಲು ತಾನು ರಕ್ತವನ್ನು ಪಂಪ್ ಮಾಡುತ್ತಿತ್ತು. ಇದರಿಂದ ಹಲವು ಗಂಟೆಗಳ ಕಾಲ ನಡೆಯುವ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳು ಸಾಧ್ಯವಾದವು. ಆದರೆ ರಕ್ತವನ್ನು ಮಾತ್ರ ಶೀತಲೀಕರಿಸ ಲೇಬೇಕಾಗಿತ್ತು. ಯಂತ್ರವೇ ಶೀತಲ ರಕ್ತವನ್ನು ಪೂರೈಸುವುದರ ಕಾರಣ, ಮಿದುಳು ಗಂಟೆಗಟ್ಟಲೆ ಶಿಶಿರನಿದ್ರೆಯನ್ನು ಮಾಡುತ್ತಿತ್ತು.
ಮೃತ್ಯುಂಜಯ: ಅಪರೂಪಕ್ಕೆ ಹೃದಯದ ಮಹಾಧಮನಿಯು ಛಿದ್ರವಾಗಬಹುದು. ತಕ್ಷಣವೇ ಅದನ್ನು ಸರಿಪಡಿಸದಿದ್ದರೆ ನೋಡನೋಡುತ್ತಿರುವಂತೆಯೇ ಸಾವು ಸಂಭವಿಸುತ್ತದೆ. ಇಂಥ ಕ್ಲಿಷ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಒಂದೆರಡು ಗಂಟೆ ಸಾಕಾಗಲಾರದು. ಹೆಚ್ಚಿನ ಸಮಯ ಬೇಕಾಗು ತ್ತದೆ. ಹಾಗಾಗಿ ವೈದ್ಯರು ಅತೀವ ಇಳಿತಾಪ ಪರಿಚಲನಾ ಸ್ಥಗಿತ (ಡೀಪ್ ಹೈಪೋಥರ್ಮಿಕ್ ಸರ್ಕ್ಯು ಲೇಟರಿ ಅರೆಸ್ಟ್) ಎಂಬ ತಂತ್ರವನ್ನು ರೂಪಿಸಿದರು.
ವೈದ್ಯರು ರೋಗಿಯ ದೇಹವನ್ನು ೧೮-೨೦ ಡಿಗ್ರಿಸೆಲ್ಷಿಯಸ್‌ನಷ್ಟು ತಂಪುಗೊಳಿಸುತ್ತಾರೆ. ಈ ಉಷ್ಣತೆ ಯಲ್ಲಿ ಹಾಟ್ -ಲಂಗ್ ಯಂತ್ರವನ್ನೂ ಸ್ಥಗಿತಗೊಳಿಸುತ್ತಾರೆ. ಹೀಗೆ ಗರಿಷ್ಠ ೪೫ ನಿಮಿಷಗಳ ಕಾಲ ಮುಂದುವರಿಸಬಹುದು. ಈ ಅವಧಿಯಲ್ಲಿ ಹೃದಯವು ಮಿಡಿಯುವುದಿಲ್ಲ.
ಮಿದುಳು ಜಾಗೃತವಾಗಿರುವುದಿಲ್ಲ. ದೇಹದಲ್ಲಿ ಯಾವುದೇ ರೀತಿಯ ರಕ್ತಪರಿಚಲನೆಯಿರುವುದಿಲ್ಲ. ಇಡೀ ದೇಹವು ತೂಗುಬಿದ್ದ ಚಿತ್ರದಂತೆ (ಸಸ್ಪೆಂಡೆಡ್ ಆನಿಮೇಶನ್) ಸ್ಥಗಿತವಾಗಿರುತ್ತದೆ. ಅಂದರೆ ೪೫ ನಿಮಿಷಗಳ ಕಾಲ ಈ ವ್ಯಕ್ತಿಯು ಸತ್ತಿದ್ದಾನೆ ಎಂದು ಸಾವಿಗೆ ನಂಬಿಕೆಯನ್ನು ಹುಟ್ಟಿಸಿ ಮತ್ತೆ ಜೀವವನ್ನು ತುಂಬುವ ಆಧುನಿಕ ಮೃತ್ಯುಂಜನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಅನ್ನ ಬಾಗೆನ್‌ಹೋಮ್: ವೈದ್ಯಕೀಯ ಇತಿಹಾಸದಲ್ಲಿ ಚಿಕಿತ್ಸಾ ಇಳಿತಾಪದ ಒಳನೋಟವನ್ನು ನೀಡುವಂಥ ಒಂದು ಅದ್ಭುತ ಘಟನೆಯು ನಡೆಯಿತು. 1999. ಸ್ವೀಡಿಷ್ ರೇಡಿಯಾಲಜಿಸ್ಟ್ ಅನ್ನ ಬಾಗೆನ್‌ಹೋಮ್, ನಾರ್ವೆ ದೇಶದಲ್ಲಿ ಹಿಮಗಟ್ಟಿದ ನದಿಯ ಮೇಲೆ ಸ್ಕೇಟಿಂಗ್ ಮಾಡಹೊರಟಳು. ಹೆಪ್ಪುಗಟ್ಟಿದ ನದಿಯಲ್ಲಿ ಬಿದ್ದುಬಿಟ್ಟಳು. ೨೦ ಸೆಂ.ಮೀ. ದಪ್ಪದ ಮಂಜಿನ ಪದರ. ೪೦ ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡಳು. ಆಲ್ಲೆಲ್ಲೋ ಗಾಳಿಯ ಬುಗ್ಗೆಯಿತ್ತು, ಹೇಗೋ ಉಸಿರಾಡುತ್ತಿದ್ದಳು.
೪೦ ನಿಮಿಷಗಳ ನಂತರ ಉಸಿರಾಡುವುದನ್ನು ನಿಲ್ಲಿಸಿದಳು. ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಬಿಟ್ಟಳು. ಆಕೆಯ ನೆರವಿಗೆ ಸಹಾಯಕರು ಬರುವ ವೇಳೆಗೆ ೮೦ ನಿಮಿಷಗಳು ಕಳೆದಿದ್ದವು. ಆಕೆ ಆಸ್ಪತ್ರೆಗೆ ಬಂದಾಗ ದೇಹದ ಉಷ್ಣತೆಯು ಬರೀ ೧೩.೭ ಡಿಗ್ರಿ ಸೆಲ್ಷಿಯಸ್ ಆಗಿತ್ತು. ನಾಡಿ ಸಿಗುತ್ತಿರ ಲಿಲ್ಲ.
ಉಸಿರಾಡುತ್ತಲೂ ಇರಲಿಲ್ಲ. ಅಲ್ಲಿನ ತುರ್ತು ವೈದ್ಯಕೀಯ ವಿಭಾಗದ ಡಾ.ಮ್ಯಾಡ್ಸ್ ಗಿಲ್ಬರ್ಟ್, ಇಳಿತಾಪದಲ್ಲಿ ಯಾರೂ ಸಾಯುವುದಿಲ್ಲ; ಸಹಜ ಉಷ್ಣತೆಗೆ ಬಂದ ಕೂಡಲೇ ಅವರು ಸಾಯುವುದು ಎನ್ನುವುದನ್ನು ತಿಳಿದಿದ್ದ. ಆಕೆಯ ಮಿದುಳು ಮಂಜುನೀರಿನ ಸಂಪರ್ಕಕ್ಕೆ ಬರುತ್ತಿದ್ದ ಹಾಗೆಯೇ ‘ಶಿಶಿರನಿದ್ರೆ’ಗೆ ಹೊರಟುಹೋಗಿತ್ತು. ಹೃದಯವೂ ಸ್ಥಗಿತವಾಗಿತ್ತು.
ದೇಹವನ್ನು ಹೃದಯ-ಶ್ವಾಸಕೋಶ ಯಂತ್ರಕ್ಕೆ ಒಪ್ಪಿಸಿದರು. ಆಕೆಯ ದೇಹದ ಉಷ್ಣತೆಯನ್ನು ನಿಧಾನವಾಗಿ ಹೆಚ್ಚಿಸಿದರು. ಆಕೆಗೆ ಎಚ್ಚರವಾದಾಗ ಕುತ್ತಿಗೆಯ ಕೆಳಗಿನ ಭಾಗವು ಸ್ಥಗಿತವಾಗಿತ್ತು. ಚಿಕಿತ್ಸೆಯನ್ನು ಮುಂದುವರಿಸಿದರು. ಹೃದಯವು ಕೆಲಸವನ್ನು ಮಾಡಲಾರಂಭಿಸಿತು. ಹೀಗೆ ಮಿದುಳು ೮೦ ನಿಮಿಷಗಳ ಕಾಲ ‘ಮೃತವಾಗಿದ್ದು’ ನಂತರ ಜಾಗೃತವಾಯಿತೆಂದರೆ, ಅದು ಪವಾಡವಲ್ಲದೆ ಮತ್ತೇನು?
ಐಸಿಯು: ಚಿಕಿತ್ಸಾ ಇಳಿತಾಪವು ಇಂದು ತುರ್ತುವೈದ್ಯಕೀಯ ವಿಭಾಗಗಳಿಗಿಂತ ತೀವ್ರ ನಿಗಾ ಘಟಕದಲ್ಲಿ ಹೆಚ್ಚು ಉಪಯುಕ್ತವಾಗುತ್ತಿದೆ. ರಸ್ತೆಯಲ್ಲಿ ಹೃದಯಾಘಾತವು ಆಯಿತು, ಹೃದಯವು ಸ್ಥಗಿತವಾಗಿದೆ (ಕಾರ್ಡಿಯಾಕ್ ಅರೆಸ್ಟ್). ಯಾರೋ ಪುಣ್ಯಾತ್ಮರು ಸಿಪಿಆರ್ ನೀಡಿ ಸ್ಥಗಿತವಾಗಿದ್ದ ಹೃದಯಕ್ಕೆ ಮರುಚೈತನ್ಯ ತುಂಬಿದ್ದರು. ಅದುವರೆಗೂ ಆಕ್ಸಿಜನ್ ಇಲ್ಲದೇ ನರಳುತ್ತಿದ್ದ ಮಿದುಳಿಗೆ, ಈಗ ಒಮ್ಮೆಲೆ ಆಕ್ಸಿಜನ್ ಪ್ರವಾಹೋಪಾದಿಯಲ್ಲಿ ಹರಿದಾಗ ಮಿದುಳು ಊದಿಕೊಳ್ಳುತ್ತದೆ.
ಹಾಗಾಗಿ ವೈದ್ಯರು ಐಸಿಯುವಿನಲ್ಲಿ ರೋಗಿಯನ್ನು ಗುರಿ ನಿರ್ದೇಶಿತ ಉಷ್ಣ ನಿಭಾವಣೆಯಲ್ಲಿ (ಟಾರ್ಗೆಟೆಡ್ ಟೆಂಪರೇಚರ್ ಮ್ಯಾನೇಜ್ಮೆಂಟ್) ದೇಹದ ಉಷ್ಣತೆಯನ್ನು ೩೩-೩೭ ಡಿಗ್ರಿ ಸೆಲ್ಷಿಯಸ್ ನಡುವೆ ಇರುವಂತೆ ೨೪ ಗಂಟೆಗಳವರೆಗೆ ನೋಡಿಕೊಳ್ಳುತ್ತಾರೆ. ಆಗ ಮಿದುಳು ಸಹಜವಾಗಿ ಚೇತರಿಸಿ ಕೊಳ್ಳುತ್ತದೆ.
ಕೆಲವು ಸಲ, ನವಜಾತ ಶಿಶುಗಳು ಹುಟ್ಟುವಾಗಲೇ ಆಕ್ಸಿಜನ್ ಕೊರತೆಯ ಮಿದುಳುಬೇನೆ (ಹೈಪಾ ಕ್ಸಿಕ್-ಇಸ್ಕಿಮಿಕ್ ಎನ್ಸೆ-ಲೋಪತಿ) ಎಂಬ ಮಾರಕ ಸ್ಥಿತಿಗೆ ತಲುಪಬಹುದು. ಆಗ ನವಜಾತ ಶಿಶು ವನ್ನು, ವಿಶೇಷವಾಗಿ ತಂಪುಗೊಳಿಸಿದ ‘ಚಾಪೆ’ಗಳ ಮೇಲೆ ೭೨ ಗಂಟೆಗಳ ಕಾಲ ಇರಿಸುತ್ತಾರೆ. ಇದುವೇ ‘ಇಳಿತಾಪ ಚಿಕಿತ್ಸೆ’
(ಕೂಲಿಂಗ್ ಕ್ಯೂರ್).