ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Maya Balachandra Column: ಜೈಸಾ ಅನ್ನ್‌, ವೈಸಾ ಮನ್...:‌ ರುಚಿಯ ರಾಜಕೀಯಕ್ಕೆ ಆರೋಗ್ಯದ ಬೆಲೆ ತೆರಬೇಕಾ ?

ಮಾತು ಮಾತಿಗೆ ಅಜ್ಜಿಯ ಅಡುಗೆಯನ್ನು ಕೊಂಡಾಡುವುದಷ್ಟೇ; ಹೋಗುವುದು ಮಾತ್ರ ದರ್ಶಿನಿ, ಫಾಸ್ಟ್‌ ಫುಡ್, ಸ್ಟ್ರೀಟ್ ಫುಡ್, ಕಲೋನಿಯಲ್ ಫುಡ್ ಜಾಯಿಂಟ್ ಗಳಿಗೆ. ಅಜ್ಜಿಯ ಅಡುಗೆಯ ಬಗ್ಗೆ ಮಾತನಾಡಿದ ನಾಲಿಗೆಯು ಸವಿಯುವುದು ಅಲ್ಲಿನ ವ್ಯಂಜನಗಳನ್ನೇ. ನಮ್ಮ ಅಕ್ಷರಮಾಲೆಯಲ್ಲಿ ವ್ಯಂಜನಗಳಿಗೆ ಸ್ವರಗಳು ಮೇಲ್ಪಂಕ್ತಿ ಆಗಿರುವಂತೆ, ಊಟದ ತಟ್ಟೆಯ ಲ್ಲಿಯೂ, ಸ್ವರವಾಗಿ ಅನ್ನ, ವ್ಯಂಜನವಾಗಿ ಸಾರು-ಸಾಂಬಾರ್ -ಪಲ್ಯಗಳು ಇದ್ದರೇನೇ ಅದು ಸಂಪೂರ್ಣ ಎನಿಸಿಕೊಳ್ಳುವುದು. ಅನ್ನ-ಸಾರು ಎಂದರೆ ಮೂಗು ಮುರಿಯುವ ಇಂದಿನ ತಲೆಮಾರಿಗೆ ಅದರ ಮಹತ್ವ ತಿಳಿಯುವ ಆಸಕ್ತಿ ಸಹ ಇಲ್ಲ.

ಮಾಯಾ ಬಾಲಚಂದ್ರ, ಶ್ರೀನಿವಾಸಪುರ

‘ನನ್ನ ತಾತನಿಗೊಂದು ಆನೆ ಇತ್ತು’- ಇದು ಕೇರಳದ ಸಾಹಿತಿಯೊಬ್ಬರ ಕೃತಿಯೊಂದರ ಹೆಸರು. ಇದು ಇಂದಿನ ದಯನೀಯ ಪರಿಸ್ಥಿತಿಯನ್ನು ಮುಚ್ಚಿಡಲು, ಅಂದಿನ ವೈಭವ ವನ್ನು ನೆನೆಯುವ ಲಾಜಿಕ್. ಆಹಾರದ ವಿಷಯದಲ್ಲಿ ನಾವೀಗ ಮಾಡುತ್ತಿರುವುದು ಅದನ್ನೇ.

ಮಾತು ಮಾತಿಗೆ ಅಜ್ಜಿಯ ಅಡುಗೆಯನ್ನು ಕೊಂಡಾಡುವುದಷ್ಟೇ; ಹೋಗುವುದು ಮಾತ್ರ ದರ್ಶಿನಿ, ಫಾಸ್ಟ್‌ ಫುಡ್, ಸ್ಟ್ರೀಟ್ ಫುಡ್, ಕಲೋನಿಯಲ್ ಫುಡ್ ಜಾಯಿಂಟ್ ಗಳಿಗೆ. ಅಜ್ಜಿಯ ಅಡುಗೆಯ ಬಗ್ಗೆ ಮಾತನಾಡಿದ ನಾಲಿಗೆಯು ಸವಿಯುವುದು ಅಲ್ಲಿನ ವ್ಯಂಜನಗಳನ್ನೇ. ನಮ್ಮ ಅಕ್ಷರಮಾಲೆಯಲ್ಲಿ ವ್ಯಂಜನಗಳಿಗೆ ಸ್ವರಗಳು ಮೇಲ್ಪಂಕ್ತಿ ಆಗಿರುವಂತೆ, ಊಟದ ತಟ್ಟೆಯಲ್ಲಿಯೂ, ಸ್ವರವಾಗಿ ಅನ್ನ, ವ್ಯಂಜನವಾಗಿ ಸಾರು-ಸಾಂಬಾರ್ -ಪಲ್ಯಗಳು ಇದ್ದರೇನೇ ಅದು ಸಂಪೂರ್ಣ ಎನಿಸಿಕೊಳ್ಳುವುದು. ಅನ್ನ-ಸಾರು ಎಂದರೆ ಮೂಗು ಮುರಿಯುವ ಇಂದಿನ ತಲೆಮಾರಿಗೆ ಅದರ ಮಹತ್ವ ತಿಳಿಯುವ ಆಸಕ್ತಿ ಸಹ ಇಲ್ಲ.

ಪೂರಕ ವರ್ತನೆ ಅಗತ್ಯ

ಅನ್ನದಿಂದ ಕಾರ್ಬೋಹೈಡ್ರೇಟ್, ಸಾರು ಅಥವಾ ಸಾಂಬಾರಿನಿಂದ ಪ್ರೋಟೀನ್, ಅವಶ್ಯ ಎಣ್ಣೆ ಮತ್ತು ಶರೀರದ ಶೀತೋಷ್ಣದ ಸಮತೋಲನಕ್ಕೆ ಅಗತ್ಯವಾಗಿರುವ ಸಾರವನ್ನು ಸಂಬಾರ ಪದಾರ್ಥಗಳಿಂದ ಪಡೆಯಲು ಸಾಧ್ಯ. ಅನ್ನ-ಬೇಳೆಗಳು ಪೂರಕವಾಗಿ ವರ್ತಿಸುವುದು ನಮ್ಮ ತಟ್ಟೆಯಲ್ಲಿ ಮಾತ್ರವಲ್ಲ, ಅವು ಹೊಲದಲ್ಲಿಯೂ ಒಂದಕ್ಕೊಂದು ಪೂರಕವೇ. ಅಲ್ಲಿಯೂ ಏಕದಳ ಧಾನ್ಯವಾದ ಭತ್ತದ ‘ಸಹ ಬೆಳೆ’ಯಾಗಿ ಬೆಳೆಯುವ ದ್ವಿದಳ ಧಾನ್ಯಗಳಾದ ಬೇಳೆ-ಕಾಳುಗಳು ಪರಿಸರದ ಸಾರಜನಕವನ್ನು ಹೀರಿ, ಭತ್ತಕ್ಕೆ ಒದಗಿಸಬಲ್ಲವು.

ಒಂದರ ಕೊರತೆಯನ್ನು ಇನ್ನೊಂದು ನೀಗಿಸುವ ಕೆಲಸ ಮಾಡಲೂ ಬಲ್ಲವು. ಅಲ್ಲಿಯ ಸಮತೋಲನವು ಊಟದ ತಟ್ಟೆ, ಶರೀರದ ಆರೋಗ್ಯ, ಜನರ ನಡುವಿನ ಬಾಂಧವ್ಯ ಎಲ್ಲದರೊಂದಿಗೂ ಸಂಬಂಧ ಹೊಂದಿದೆ. ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಬೇರೆ ಬೇರೆಯಾಗಿಸಿ ಬೆಳೆಯಲು ಆರಂಭಿಸಿ ಬಹಳ ಸಮಯವೇ ಆಗಿಬಿಟ್ಟಿದೆ.

ಆಹಾರದ ಮೂಲದಲ್ಲಿಯೇ ಪೂರಕವಾಗಿದ್ದ ಸಹಬಾಳ್ವೆಯ ತತ್ವವನ್ನು, ‘ಆಧುನಿಕ ಬೇರ್ಪಡಿಸುವ ನೀತಿ’ಗೆ ಒಳಪಡಿಸಿದ್ದಾಗಿದೆ. ಊಟದ ತಟ್ಟೆಯಲ್ಲಿಯೂ, ಶರೀರದ ಆರೋಗ್ಯ ದಲ್ಲಿಯೂ, ಮನುಷ್ಯರ ಮನಸ್ಸಿನಲ್ಲಿಯೂ, ಸಂಬಂಧಗಳಲ್ಲಿಯೂ ಸಮತೋಲನ ಇಲ್ಲವಾಗಿದೆ.

ಇದನ್ನೂ ಓದಿ: Maya Balachandra Column: ಸಂಗೀತ ಎಂಬುದು ಮಂತ್ರದ ಮಂತ್ರಶಕ್ತಿ, ಹೃದಯದ ಮಧುರ ಭಾಷೆ

ಸಮಗ್ರ ಕೃಷಿ ಎನಿಸಿ, ಇಡಿಯಾಗಿzಲ್ಲವನ್ನು ಬಿಡಿಯಾಗಿಸಿದ್ದಾಗಿದೆ. ಹೀಗೆ ಬೇರೆ ಬೇರೆಯಾಗಿಸಿ ಬೆಳೆಯತೊಡಗಿದ ನಂತರ ಸಮಸ್ಯೆ ತಲೆದೋರಿದ್ದೇ ಹೆಚ್ಚು. ಕೀಟಬಾಧೆ, ಕಡಿಮೆ ಇಳುವರಿ ಎಲ್ಲವೂ ರೈತರನ್ನು ಹೈರಾಣಾಗಿಸಿವೆ. ಬೆಳೆಗೆ ಕೀಟಗಳ ಕಾಟ ಹೆಚ್ಚಾದರೆ, ‘ಅದು ಕೇವಲ ರೈತರ ತಲೆನೋವು, ನಮಗೇಕೆ ಅದರ ಗೊಡವೆ?’ ಅಂದುಕೊಳ್ಳುವವರು ಹೆಚ್ಚು. ಹೊಲಕ್ಕೆ ಹುಳುಗಳು ದಾಳಿಯಿಟ್ಟರೆ, ರೈತರು ಕ್ರಿಮಿನಾಶಕ ಸಿಂಪಡಿಸಿಬಿಡುತ್ತಾರೆ. ಆ ವಿಷವು ಸೇರುವುದು ಆ ಹುಳುಗಳನ್ನಷ್ಟೇ ಅಲ್ಲ, ನಮ್ಮ ಹೊಟ್ಟೆಯನ್ನೂ!

ಇದು ಮುಂದಿನ ತಲೆಮಾರಿನ ಮೇಲೆಯೂ ಪರಿಣಾಮ ಬೀರುತ್ತದೆ ಎನ್ನುವ ಸಣ್ಣ ಪರಿeನ ನಮ್ಮಲ್ಲಿ ಮೊಳೆತರೆ, ನಮ್ಮ ಆಹಾರದ ಮೂಲದ ಬಗ್ಗೆ ತಿಳಿಯಲು ಆಸಕ್ತಿ ತೋರಬಹುದು.

ಇಲ್ಲೂ ರಾಜಕಾರಣವೇ?!

ಬೇಳೆ ಕಾಳುಗಳು, ಎಣ್ಣೆ ಕಾಳುಗಳು ಮೂಲತಃ ಒಣಬೇಸಾಯದ ಬೆಳೆಗಳು. ನಮ್ಮ ದೇಶದ ಬೇಸಾಯ ಪದ್ಧತಿಯು ಹೆಚ್ಚಿನದಾಗಿ ಶುಷ್ಕ ಬೇಸಾಯವೇ. ಹಾಗಿದ್ದರೂ, ಬೇಡಿಕೆಯ ಶೇ.56ರಷ್ಟು ಎಣ್ಣೆ ಕಾಳುಗಳನ್ನು 2023-24ರಲ್ಲಿ ಆಮದು ಮಾಡಿಕೊಳ್ಳಲಾಗಿದೆ. 2024-25ರಲ್ಲಿ ಬೇಳೆಯ ಆಮದು 7.3 ಮಿಲಿಯನ್ ಟನ್. ಆಂತರಿಕ ಉತ್ಪಾದನೆಯೂ ಹೆಚ್ಚುತ್ತಿದ್ದರೂ ಬೇಡಿಕೆಯನ್ನು ಪೂರೈಸುವಲ್ಲಿ, ಆಮದನ್ನು ಆಶ್ರಯಿಸುತ್ತಿರುವುದು ದುರಂತ.

ಇದಕ್ಕೆ ಕಾರಣ, ಅಕ್ಕಿ, ಗೋಽ ಮಾತ್ರ ರಾಜಕಾರಣಕ್ಕೆ ಸಾಕು ಎನ್ನುವ ಮನೋಭಾವ ಇರಬಹುದು. ಆಹಾರ ಸ್ವಾವಲಂಬನೆ ಇಲ್ಲದ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಧ್ವನಿ ಕಳೆದುಕೊಳ್ಳುತ್ತದೆ.

ಇದು ಆಹಾರ ಭದ್ರತೆಯೇ?

ಬೇಳೆ ಕಾಳುಗಳು ಸಸ್ಯಾಹಾರಿಗಳಿಗೆ ಮುಖ್ಯ ಪ್ರೋಟೀನ್ ಆಗರವಾದರೆ, ಮಾಂಸಾಹಾರಿಗಳೂ ಇದನ್ನು ಅವಲಂಬಿಸಿದ್ದಾರೆ. ದೇಶೀಯ ಬೇಳೆ-ಕಾಳುಗಳಿಗೆ ಬ್ರಿಟಿಷರು, ‘ಪಿಜನ್ ಪೀ’, ‘ಕೌ ಪೀ’, ‘ಚಿಕ್ ಪೀ’, ‘ಹಾರ್ಸ್ ಗ್ರಾಮ್’ ಅಂತೆ ಕರೆದು, ನಮ್ಮ ಆಹಾರ ಪದ್ಧತಿಯನ್ನು ಪಶು ಆಹಾರಕ್ಕೆ ಹೋಲಿಸಿ, ಕೀಳಾಗಿ ಚಿತ್ರಿಸಿದ್ದಾರೆ. ಇವುಗಳ ಮೌಲ್ಯವನ್ನು ಮರುಸ್ಥಾಪನೆ ಮಾಡಬೇಕಿದೆ. ನಮಗೆ ಪೋಷಣೆ ನೀಡುವ ಬೆಳೆಗಳನ್ನು ಮೊದಲು ಪೋಷಿಸಬೇಕಿದೆ.

ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ, ಭಾರತದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತವಾಗಲು ಗುಣಾಣುಗಳೇ ಕಾರಣ ಎಂದು ಅರ್ಥಶಾಸ್ತ್ರಜ್ಞ ಪಣಗಾರಿಯ ಹೇಳುತ್ತಾರೆ. ಆಹಾರ ಕ್ರಮ ಹೀಗೇ ಮುಂದುವರಿದರೆ, ಭಾರತೀಯರು ಯುರೋಪಿಯನ್ನರ ದೈಹಿಕ ಎತ್ತರಕ್ಕೆ ಏರಲು, ಇನ್ನೂ 250 ವರ್ಷಗಳು ಬೇಕು ಎನ್ನುವುದು ಡೀಟನ್ ವಿಶ್ಲೇಷಣೆ.

ಜನರಿಗೆ ಬೇಕಿರುವುದು ಪ್ರೋಟೀನ್; ಆದರೆ ಸರಕಾರಗಳು ಸಾರ್ವಜನಿಕರಿಗೆ ವಿತರಿಸು ತ್ತಿರುವುದು ಸ್ಟಾರ್ಚ್ ಅನ್ನು ಮಾತ್ರ. ಇದನ್ನು ಆಹಾರ ಭದ್ರತೆ ಎಂದುಕೊಂಡು ನಿರಾಳ ವಾಗಬಹುದೇ?

ವಾಣಿಜ್ಯೀಕರಣದ ಬಿಗಿಮುಷ್ಟಿ

ನಾವೆಷ್ಟು ವಾಣಿಜ್ಯೀಕರಣಕ್ಕೊಳಗಾಗಿದ್ದೇವೆ ಎಂದರೆ, ‘ಮೊದಲು ಸಮಸ್ಯೆಯನ್ನು ಹುಟ್ಟುಹಾಕಬೇಕು, ನಂತರ ಪರಿಹಾರ ಹುಡುಕಿ ಅದನ್ನು ಮಾರುಬೇಕು’ ಎನ್ನುವುದೇ ವ್ಯಾಪಾರ-ಮಂತ್ರವಾಗಿಬಿಟ್ಟಿದೆ. ಇದು ಆಹಾರದ ವಿಷಯದಲ್ಲಂತೂ ನೂರಕ್ಕೆ ನೂರು ಸತ್ಯ. ಹಸುಗಳಿಗೆ ಹಾರ್ಮೋನ್ ಕೊಟ್ಟು ಹೆಚ್ಚು ಹಾಲು ಕರೆವಂತೆ ಮಾಡುವುದು ಇದಕ್ಕೊಂದು ಉದಾಹರಣೆ. ಅದನ್ನು ಕುಡಿಯುವ ಹೆಚ್ಚಿನ ಹೆಣ್ಣು ಮಕ್ಕಳು ಏಳು ವರ್ಷಗಳ ಒಳಗೆ ಋತುಮತಿ ಆಗುತ್ತಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ. ಹೀಗಿರು ವಾಗ ಏನು ಮಾಡಬೇಕು? ಔಷಧ ಕಂಪನಿಗಳು ಲಸಿಕೆ ಕಂಡುಹಿಡಿಯಲು ಪೈಪೋಟಿಗಿಳಿಯುತ್ತವೆ. ಅದೇ ಪರಿಹಾರ ಮಾರ್ಗವೆಂದು ಸರಕಾರಗಳು ಉತ್ತೇಜಿಸುತ್ತವೆ. ಇದೊಂದು ರೀತಿಯ ದೋಷಪೂರಿತ ‘ಕಾರ್ಯ-ಕಾರಣ’ ಸಂಬಂಧ. ಬೇರಿಗೆ ಗೆದ್ದಲು ಬಿಡುವುದು, ಮರದ ಎಲೆಗಳನ್ನು ತೊಳೆದು ಕಾಳಜಿ ಮೆರೆಯುವುದು. ಇಲ್ಲಿ ಗೆದ್ದಲು ಬಿಡುವವರಿಗೂ, ಎಲೆ ತೊಳೆಯುವವರಿಗೂ ಉದ್ಯೋಗಾವಕಾಶ ಸೃಷ್ಟಿ, ಮರದ ಪಾಡು ಯಾರಿಗೂ ಬೇಕಿಲ್ಲ!

ಇದರಂತೆಯೇ, ಆಂಟಿಬಯೋಟಿಕ್ ಬಳಸಿ, ಮಾಂಸದ ತೂಕ ಹೆಚ್ಚಿಸುವುದು ಸಹ ನಡೆಯುತ್ತಿದೆ. ಆಂಟಿಬಯೋಟಿಕ್ ಅನ್ನೇ ಆಹಾರವನ್ನಾಗಿಸಿಕೊಂಡ ರೋಗಾಣುಗಳು ಬಲಿಷ್ಠವಾಗುತ್ತಿವೆ. ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಿದೆ. ರೋಗ ಬಂದಾಗ, ವೈದ್ಯರು ಆಂಟಿಬಯೋಟಿಕ್ ನೀಡಿದರೂ ಅವು ಕೆಲಸ ಮಾಡದಂತಾಗಿದೆ. ವೈದ್ಯರನ್ನು ದೂಷಿಸುವುದೇನೋ ಸುಲಭ, ಆದರೆ ರೋಗಕ್ಕೇನು ಮಾಡಬೇಕು?

ಸೀಡ್‌ಲೆಸ್ ಜಮಾನ!

ಕಡಿಮೆ ಅವಧಿಯಲ್ಲಿ ಬೆಳೆಯಲಾಗುವ ಬೆಳೆಗಳು ಪೌಷ್ಟಿಕಾಂಶ ಕಳೆದುಕೊಂಡಿರುವುದರ ಬಗ್ಗೆ ‘ನ್ಯೂ ಸೈಂಟಿ ಜರ್ನಲ’ ವರದಿ ಮಾಡಿತ್ತು. ಇಂದಿನ ಸಂಸ್ಕರಿತ ತಳಿಗಿಂತ, ಮೂಲತಳಿಯ ಟೊಮೇಟೊದಲ್ಲಿ 166 ಪಟ್ಟು ಹೆಚ್ಚು ‘ಟೊಮೇಟಿನ್’ ಇದೆ. ಅದು ಪೌಷ್ಟಿಕಾಂಶದ ಮೂಲ. ಮೂಲತಳಿಯ ಈರುಳ್ಳಿಗಿಂತ, ಈಗಿನ ಈರುಳ್ಳಿಯಲ್ಲಿ ರೋಗ ನಿರೋಧಕ ರಾಸಾಯನಿಕವಾದ ‘ಕ್ವರ್ಸಟಿನ್’ 500 ಪಟ್ಟು ಕಡಿಮೆಯಾಗಿದೆ. ಕಿತ್ತಳೆ ಮತ್ತು ನಿಂಬೆಯ ಲಿಮೊನಿನ್, ನರಿನ್ಜಿನ್ ಕೂಡ ಆತಂಕ ಮೂಡಿಸುವ ಮಟ್ಟದಲ್ಲಿ ಕಡಿಮೆಯಾಗಿದೆ ಎನ್ನುತ್ತದೆ ವರದಿ.

ಒಗರನ್ನು ಅಗಲಿದ ನೆಲ್ಲಿಕಾಯಿ, ಲೋಳೆಯನ್ನು ಕಳೆದುಕೊಂಡ ಬೆಂಡೆಕಾಯಿ ಎಲ್ಲವೂ ಬಡವಾಗಿಬಿಟ್ಟಿವೆ. ಮುಂದೆ ಹಾಗಲಕಾಯಿ ಸಿಹಿ ಆಗಬಹುದೇನೋ?! ಜತೆಗೆ ‘ಸೀಡ್‌ಲೆಸ್’ ನದ್ದು ಬೇರೆ ಹಾವಳಿ. ಸೀಡ್‌ಲೆಸ್ ದಾಳಿಂಬೆ-ದ್ರಾಕ್ಷಿ-ಪಪ್ಪಾಯ ಎಲ್ಲವೂ ಆಯಿತು.

ಸೀಡ್‌ಲೆಸ್ ಕಡಲೆಕಾಯಿಯನ್ನು ಮುಂದೆ ನಿರೀಕ್ಷಿಸಬಹುದೇನೋ! ಹೀಗೆ ಒಂದು ಕಡೆ ಎಲ್ಲದರ ಪೌಷ್ಟಿಕಾಂಶ ಕಳೆದು, ಅದರ ನೈಸರ್ಗಿಕ ಸ್ವಭಾವವನ್ನು ನಾಶಮಾಡಿ, ಇನ್ನೊಂದು ಕಡೆಯಿಂದ ಕುಲಾಂತರಿ ಬೆಳೆಗಳನ್ನು, ಪೌಷ್ಟಿಕಾಂಶ ಹೆಚ್ಚಿಸಲಿಕ್ಕಾಗಿಯೇ ನಡೆಸುತ್ತಿದ್ದಾರೆ. ಇದ್ದದ್ದನ್ನು ಉಳಿಸಿಕೊಳ್ಳಲು ಬಳಕೆಯಾಗದ ಬುದ್ಧಿವಂತಿಕೆ, ಇಲ್ಲದನ್ನು ಕಂಡುಹಿಡಿಯಲು ಬಳಕೆಯಾಗುತ್ತಿದೆ.

ಮಿಥ್ಯೆಯೇ ಹೆಚ್ಚು

ಆಹಾರದ ಬಗ್ಗೆ ಸಾರ್ವತ್ರಿಕವಾಗಿ ಇರುವ ನಂಬಿಕೆಗಳಲ್ಲಿ, ಸತ್ಯಕ್ಕಿಂತ ಮಿಥ್ಯೆಯೇ ಹೆಚ್ಚೇನೋ ಎನಿಸಿಬಿಡುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಮಿಥ್. ಕೆಲವರು ಕಾರ್ಬೋ ಹೈಡ್ರೇಟ್ ವಿರೋಧಿಗಳಾದರೆ, ಇನ್ನು ಕೆಲವರು ಕೊಬ್ಬಿನ ವಿರೋಧಿಗಳು. ಕೆಲವರು ಪ್ರೋಟೀನ್ ಪರವಾದರೆ, ಕೆಲವರು ಎಲ್ಲದರ ಮಿಶ್ರಣದ ಪರ. ಬಜ್ಜಿ, ವಡೆ ಇವುಗಳನ್ನು ಕೊಟ್ಟಾಗ ಕೆಲವರು, ದಿನಪತ್ರಿಕೆಯ ಮಧ್ಯೆ ಇಷ್ಟು, ಒತ್ತಿ ಒತ್ತಿ ಎಣ್ಣೆ ತೆಗೆದು, ಪತ್ರಿಕೆ ಹೀರಿಕೊಂಡಿರುವ ಎಣ್ಣೆಯನ್ನು ನೋಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಖುಷಿಯಿಂದ ತಿನ್ನತೊಡಗುತ್ತಾರೆ. ಅವರಿಗೆ ಪತ್ರಿಕೆಯ ಇಂಕಿನಲ್ಲಿರುವ ವಿಷಕಾರಿಯಾದ ಸೀಸ ಹೊಟ್ಟೆ ಸೇರಿದರೂ ಪರವಾಗಿಲ್ಲ, ಎಣ್ಣೆಯನ್ನು ಅವಾಯ್ಡ್ ಮಾಡಿದ ಸಂತೃಪ್ತಿ!

ಮನಸ್ಸಿನ ರೂಪಕಾರಕ

ಆಹಾರವು ದೇಹವನ್ನು ಮಾತ್ರ ನಿರ್ಮಿಸುವುದಲ್ಲ, ಮನಸ್ಸಿನ ಗುಣ, ಚಿಂತನೆಯ ದಿಕ್ಕು ಮತ್ತು ಬದುಕಿನ ಗುಣಮಟ್ಟವನ್ನು ರೂಪಿಸುವ ಶಕ್ತಿಯೂ ಹೌದೆನ್ನುತ್ತದೆ ಭಾರತೀಯ ಚಿಂತನೆ. ಉಪನಿಷತ್ತುಗಳು ಮತ್ತು ಭಗವದ್ಗೀತೆ, ಆಹಾರವನ್ನು ದೇಹದ ಅವಶ್ಯಕತೆಯಾಗಿ ಮಾತ್ರವಲ್ಲ, ಚೈತನ್ಯದ ಆಧಾರವಾಗಿಯೂ ವಿವರಿಸುತ್ತವೆ. ‘ಆಹಾರ ಶುದ್ಧಿಯಾದರೆ ಮನಸ್ಸು ಶುದ್ಧವಾಗುತ್ತದೆ’ ಎಂಬ ಆಲೋಚನೆ ನಮ್ಮ ಸಂಸ್ಕೃತಿಯ ನಾಡಿಯ ಸೇರಿಬಿಟ್ಟಿದೆ.

ಸ್ಥೂಲ ಶರೀರ, ಅಂದರೆ ನಮ್ಮ ಗೋಚರ ದೇಹ, ಇದು ಆಹಾರದಿಂದಲೇ ನಿರ್ಮಿತ‌ ವಾಗುತ್ತದೆ. ನಾವು ತಿನ್ನುವ ಪ್ರತಿಯೊಂದು ತಿನಿಸೂ ರಕ್ತವಾಗುತ್ತದೆ, ಮಾಂಸವಾಗುತ್ತದೆ, ಎಲುಬಾಗುತ್ತದೆ. ಇದು ವೈದ್ಯಕೀಯವಾಗಿ ಸಾಬೀತಾಗಿರುವ ಸತ್ಯ. ಆದರೆ ಭಾರತೀಯ ದರ್ಶನದ ನಿಜವಾದ ವೈಶಿಷ್ಟ್ಯವು, ಸೂಕ್ಷ್ಮ ಶರೀರದ ಕುರಿತು ನೀಡಿದ ವಿವರಣೆಯಲ್ಲಿ ಗೋಚರಿಸುತ್ತದೆ. ಸೂಕ್ಷ್ಮ ಶರೀರವು ಮನಸ್ಸು, ಬುದ್ಧಿ ಮತ್ತು ಪ್ರಾಣಶಕ್ತಿಯ ಸಂಕಲನ. ಆಹಾರದ ಗುಣವು ಮನಸ್ಸಿನ ಗುಣವನ್ನು ಪ್ರಭಾವಿಸುತ್ತದೆ ಎನ್ನುವುದು ಆಧ್ಯಾತ್ಮಿಕವಾಗಿ ಮತ್ತು ಮನೋವೈಜ್ಞಾನಿಕವಾಗಿ ಗಮನಾರ್ಹ ವಿಚಾರ.

ಹಾಗಾಗಿಯೇ ನಮ್ಮ ಪರಂಪರೆಯಲ್ಲಿ, ರಣರಂಗದಲ್ಲಿ ಕಾದಾಡುವವರಿಗೆ, ತತ್ವಶಾಸ್ತ್ರ ಅಧ್ಯಯನ-ಅಧ್ಯಾಪನ ಮಾಡುವವರಿಗೆ, ಸೇವಾಕ್ಷೇತ್ರದಲ್ಲಿ ನಿರತರಾದವರಿಗೆ ಬೇರೆ ಬೇರೆಯದೇ ಶೈಲಿಯ ಆಹಾರ ಪದ್ಧತಿಯನ್ನು ಒತ್ತಾಯರಹಿತವಾಗಿ ಸೂಚಿಸಲಾಗುತ್ತಿತ್ತು. ಎಲ್ಲರೂ ತಮ್ಮ ಕಾರ್ಯಕ್ಷೇತ್ರಕ್ಕೆ ಅನುಗುಣವಾಗಿ ಆಹಾರವನ್ನು ಸ್ವೀಕರಿಸುವುದು ರೂಢಿಯಲ್ಲಿತ್ತು. ಇದನ್ನು ಧಾರ್ಮಿಕ ವರ್ಗೀಕರಣ ಎಂದು ಭಾವಿಸಬೇಕಿಲ್ಲ. ಇಂದಿನ ಮನೋವಿeನವೂ ಆಹಾರ ಮತ್ತು ಮನೋಭಾವಗಳ ನಡುವಿನ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ. ಕಳ್ಳನ ಮನೆಯಲ್ಲಿ ಊಟ ಮಾಡಿದ ಸನ್ಯಾಸಿ, ಅವನ ಮನೆಯ ಬೆಳ್ಳಿ ಲೋಟವನ್ನು ತನಗರಿವಿಲ್ಲದಂತೆಯೇ ಕದ್ದು ತಂದ ಕಥೆ ಬಹು ಪ್ರಚಲಿತ...!

ಉತ್ತಮ ಆಹಾರ, ಉನ್ನತ ಚಿಂತನೆ

ಆಧುನಿಕ ಜೀವನಶೈಲಿಯಲ್ಲಿ, ವೇಗದ ಆಹಾರ ಸಂಸ್ಕೃತಿ ನಮ್ಮ ಆಯ್ಕೆಗಳನ್ನು ನಿರ್ಧರಿಸುತ್ತಿದೆ. ರುಚಿ ಮತ್ತು ತ್ವರಿತತೆಯ ಹಿಂದೆ ಓಡುತ್ತಿರುವ ನಾವು, ಆಹಾರದ ಗುಣದ ಬಗ್ಗೆ ಯೋಚಿಸಲು ಸಮಯ ತೆಗೆದುಕೊಳ್ಳುತ್ತಿಲ್ಲ. ದೇಹದ ಸ್ಥೂಲ ಆರೋಗ್ಯದ ಜತೆಗೆ, ಮನಸ್ಸಿನ ಸೂಕ್ಷ್ಮ ಸಮತೋಲನ ಕೂಡ ಆಹಾರದ ಮೇಲೆ ಅವಲಂಬಿತವಾಗಿರುವುದನ್ನು ಮರೆತಿದ್ದೇವೆ.

ನಮ್ಮ ಚಿಂತನೆ ಉನ್ನತವಾಗಿzಗ ಮಾತ್ರವೇ ವ್ಯಕ್ತಿತ್ವವು ಔನ್ನತ್ಯ ಹೊಂದಲು ಸಾಧ್ಯ. ಉನ್ನತ ಚಿಂತನೆಗಾಗಿ ಆರೋಗ್ಯ ಪೂರ್ಣ ಮನ-ಬುದ್ಧಿ ಇರಲೇಬೇಕು. ಮನ-ಬುದ್ದಿಗಳು ಆಹಾರ ದಿಂದ ಪ್ರಭಾವಿತವಾಗುವುದನ್ನು ನಾವೆಂದಿಗೂ ಮರೆಯುವಂತಿಲ್ಲ. ಇದರಿಂದಾಗಿ ‘ನಾವು ಆಹಾರವನ್ನು ಕೇವಲ ಜೀರ್ಣಿಸಿಕೊಳ್ಳುತ್ತಿದ್ದೇವೆಯೇ ಅಥವಾ ಅದು ನಮ್ಮ ಚಿಂತನೆ, ಸ್ವಭಾವ ಮತ್ತು ಬದುಕಿನ ದಿಕ್ಕನ್ನೇ ರೂಪಿಸುತ್ತಿದೆಯೇ?’ ಎಂಬ ಪ್ರಶ್ನೆ ಮೂಡುತ್ತದೆ.

ಆಹಾರವು ಹೊಟ್ಟೆಗೆ ಮಾತ್ರವಲ್ಲ, ಅದು ವ್ಯಕ್ತಿತ್ವಕ್ಕೆ ಸೇರಿದ ವಿಷಯ. ದೇಹವನ್ನು ಕಟ್ಟುವ ಆಹಾರವೇ ಮನಡಿಸ್ಸಿನ ನೆಲೆಯನ್ನೂ ಕಟ್ಟುತ್ತದೆ. ಸಮಾಜದ ಆರೋಗ್ಯವು ವ್ಯಕ್ತಿಯ ಆಹಾರ ಸಂಸ್ಕೃತಿಯಿಂದಲೇ ಆರಂಭವಾಗುತ್ತದೆ ಎಂಬುದನ್ನು ಮರೆಯದಿರೋಣ...