Maya Balachandra Column: ಸಂಗೀತ ಎಂಬುದು ಮಂತ್ರದ ಮಂತ್ರಶಕ್ತಿ, ಹೃದಯದ ಮಧುರ ಭಾಷೆ
ನಮ್ಮ ಭಾರತೀಯ ಪರಂಪರೆಯಲ್ಲಿ ಯಾವುದೇ ವಿಚಾರವನ್ನು ತೆಗೆದುಕೊಂಡರೂ, ಅದನ್ನು ಆಧ್ಯಾತ್ಮಿಕ, ಸಾಂಸ್ಕೃತಿಕ ನೆಲೆಯಲ್ಲಿ ನೋಡುವುದು ರೂಢಿಯಾಗಿದೆ. ಬೇರೆ ದೇಶಗಳಲ್ಲಿ ಕೇವಲ ಮನರಂಜನೆ ಆಗುವ ಸಂಗೀತ, ನಮ್ಮಲ್ಲಿ ಇಡೀ ಸಮಾಜದ ಸಾಂಸ್ಕೃತಿಕ ಮೌಲ್ಯವನ್ನು ವರ್ಧಿಸುವ ಸಾಧನ ಆಗುತ್ತದೆ.
-
ಝೇಂಕಾರ
ಮಾಯಾ ಬಾಲಚಂದ್ರ
‘ಸಂಗೀತ’ ಎಂದ ಕೂಡಲೆ, ಮನರಂಜನೆಯ ಸಾಧನ ಎನ್ನುವ ಆಲೋಚನೆಯೇ ಸಾಮಾನ್ಯ ವಾಗಿ ಬಂದು ಬಿಡುತ್ತದೆ. ಮನರಂಜನೆಯೊಂದಿಗೆ, ಶರೀರ, ಮನಸ್ಸು, ಬುದ್ಧಿ, ಚಿತ್ತ ಎಲ್ಲವು ಗಳ ನಡುವೆ ಸೇತುವೆಯಾಗಿ ಕೆಲಸ ಮಾಡುವ ಅದ್ಭುತ ಮಾಧ್ಯಮ ಇದು.
ಚೈತನ್ಯಂ ಸರ್ವಭೂತಾನಾಂ ನಿವೃತ್ತಿಂ ಜಗದಾತ್ಮನಾ, ನಾದಬ್ರಹ್ಮ ಸದಾನಂದಂ ಅದ್ವಿತೀಯಮುಪಾಸ್ಮಹೇ" ಎಂದರೆ, ಯಾವುದು ಸಕಲ ಜೀವಿಗಳಿಗೆ ಚೈತನ್ಯವೂ, ತಾನೇ ಜಗತ್ತೂ ಆಗಿ ಸುಖ ಕೊಡುವುದೋ, ಯಾವುದು ಏಕೈಕವಾಗಿದ್ದು ಆನಂದವೇ ತಾನಾಗಿರು ವುದೋ ಅಂಥ ನಾದಬ್ರಹ್ಮನನ್ನು ಉಪಾಸಿಸುತ್ತೇವೆ ಎಂದು ನಮ್ಮ ಭಾರತೀಯ ಪರಂಪರೆ ಯಲ್ಲಿ ಹೇಳಲಾಗಿದೆ.
ಸಂಗೀತವನ್ನು ನಾದವಾಗಿ, ನಾದವೇ ಬ್ರಹ್ಮವಾಗಿ, ಬ್ರಹ್ಮನೆಂದರೆ ವಿಶಿಷ್ಟ ಶಕ್ತಿಯಾಗಿ ಆರಾಧಿಸುತ್ತೇವೆ. “ಪ್ರಾಣಾಗ್ನಿ ಸಂಯೋಗದಿ ಜನಿಸಿದ ಪ್ರಣವನಾದ ಸಪ್ತಸ್ವರ ರೂಪಿಣಿ" ಎಂದು ಮುತ್ತಯ್ಯ ಭಾಗವತರ್ ಅವರು ಹೇಳಿರುವುದು ಸಹ ಇದನ್ನೇ.
ನಮ್ಮ ಭಾರತೀಯ ಪರಂಪರೆಯಲ್ಲಿ ಯಾವುದೇ ವಿಚಾರವನ್ನು ತೆಗೆದುಕೊಂಡರೂ, ಅದನ್ನು ಆಧ್ಯಾತ್ಮಿಕ, ಸಾಂಸ್ಕೃತಿಕ ನೆಲೆಯಲ್ಲಿ ನೋಡುವುದು ರೂಢಿಯಾಗಿದೆ. ಬೇರೆ ದೇಶಗಳಲ್ಲಿ ಕೇವಲ ಮನರಂಜನೆ ಆಗುವ ಸಂಗೀತ, ನಮ್ಮಲ್ಲಿ ಇಡೀ ಸಮಾಜದ ಸಾಂಸ್ಕೃ ತಿಕ ಮೌಲ್ಯವನ್ನು ವರ್ಧಿಸುವ ಸಾಧನ ಆಗುತ್ತದೆ.
ಬೇರೆ ದೇಶಗಳಲ್ಲಿ ಸಹ ಸಪ್ತಸ್ವರಗಳ ಆಧಾರದಲ್ಲಿಯೇ ಸಂಗೀತ ಇದ್ದರೂ, ನಮ್ಮಲ್ಲಿ ಈ ಸಪ್ತಸ್ವರಗಳಿಗೂ ಅಧ್ಯಾತ್ಮದ ರೂಪ ಕೊಟ್ಟು ಆರಾಧಿಸುವ ಕಲೆ, ನಮ್ಮ ಸಂಗೀತ ಪರಂಪರೆ ಯನ್ನು ವಿಶ್ವದಲ್ಲಿಯೇ ವಿಶಿಷ್ಟ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ.
ಇದನ್ನೂ ಓದಿ: Maya Balachandra Column: ಮೌನ ಮುರಿಯಬೇಕಾದ ಸಾಮಾಜಿಕ ಸವಾಲುಗಳು
ದೃಶ್ಯವಿಲ್ಲದ ಅಭಿವ್ಯಕ್ತಿ
ಚಿತ್ರಕಲೆ, ನಾಟ್ಯಕಲೆ, ಶಿಲ್ಪಕಲೆ, ನಾಟಕ ಕಲೆ ಮುಂತಾದ ಸೃಜನಶೀಲ ಕಲೆಗಳಲ್ಲಿ, ಒಂದು ವಸ್ತು-ಕೇಂದ್ರಿತವಾದ ವಿವರಣೆ ಇರುತ್ತದೆ. ದೃಷ್ಟಿಗೆ ಗೋಚರವಾಗುವ ಮಾಧ್ಯಮವು ಇರುತ್ತದೆ. ಈ ಎಲ್ಲಾ ಮಾಧ್ಯಮಗಳು ಲೌಕಿಕದ ವಿವಿಧ ಆಯಾಮಗಳಿಗೆ ತೆರೆದುಕೊಳ್ಳುವ ಸಾಧ್ಯತೆ ಹೆಚ್ಚು. ಸಾಮಾಜಿಕ, ರಾಜಕೀಯ ತಿರುವುಗಳನ್ನು ಪಡೆಯುವ ಸಾಧ್ಯತೆಯೂ ಇಲ್ಲಿದೆ.
ಎಷ್ಟೋ ಸಲ, ಮೂಲ ಉದ್ದೇಶವೇ ಮರೆಯಾಗಿ, ವಿರುದ್ಧ ದಿಕ್ಕಿನಲ್ಲಿ ಅಭಿವ್ಯಕ್ತವಾಗುವು ದನ್ನು ಸಹ ನೋಡುತ್ತಿರುತ್ತೇವೆ. ಸಂಗೀತದ ಅಭಿವ್ಯಕ್ತಿಗೆ ಭಾಷೆಯ ಹಂಗಿಲ್ಲ. ಕೇವಲ ಸ್ವರ, ಲಯಗಳಲ್ಲಿ ಭಾವಾಭಿವ್ಯಕ್ತಿಯನ್ನು ಗ್ರಹಿಸಬಹುದು.
ಆಲಿಸುವುದರಿಂದಲೇ ಶ್ರೋತೃಗಳು ಭಾವತೀವ್ರತೆಯ ಅನುಭೂತಿಯನ್ನು ಪಡೆಯ ಬಹುದು. ಎಲ್ಲ ವಿಧವಾದ ಸಂಗೀತಗಳಿಂದ, ಅದರದ್ದೇ ಆದ ವಿಭಿನ್ನ ಅನುಭವ ಪಡೆಯಲು ಸಾಧ್ಯವಿದ್ದರೂ, ಶಾಸ್ತ್ರೀಯ ಸಂಗೀತದಿಂದ ಮನೋವಿಕಾಸಕ್ಕೆ ಕಲಾತ್ಮಕ ವಾದ ಹರಹು ದೊರೆಯುತ್ತದೆ.
ಯಾವುದೇ ಘಟನೆಯ ಕಥನವಿಲ್ಲದೆಯೂ, ಕೇವಲ ಆಲಾಪನೆ, ಕಲ್ಪನಾಸ್ವರ ವಿನ್ಯಾಸ ಗಳಿಂದ ಸಂಗೀತದಲ್ಲಿ ತಾದಾತ್ಮ್ಯವನ್ನು ಪಡೆಯಬಹುದು. ಶಾಸ್ತ್ರೀಯ ಸಂಗೀತದ ಪ್ರಗಲ್ಬತೆ, ಒಂದು ಸಮಾಜದ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ.
ಚಿಕಿತ್ಸಾತ್ಮಕ ಸಂಗೀತಸಂಗೀತಕ್ಕೆ ಅದರದ್ದೇ ಆದ ವಿಭಿನ್ನ ಆಯಾಮಗಳಿವೆ. ವೈಜ್ಞಾನಿಕ, ಸಾಮಾಜಿಕ, ಮನೋವೈಜ್ಞಾನಿಕ, ಆಧ್ಯಾತ್ಮಿಕ ನೆಲೆಯಲ್ಲಿ, ಸಂಗೀತ ಬೆಳೆದು ಬಂದ ದಾರಿ ಯನ್ನು ಗಮನಿಸಿದರೆ, ಸಂಗೀತದ ವಿಶಾಲ ವ್ಯಾಪ್ತಿಯ ಅರಿವಾಗುತ್ತದೆ. ಸಂಗೀತಕ್ಕೆ ವಾಸ್ತವದ ಗ್ರಹಿಕೆಯನ್ನೇ ಬದಲಿಸುವ ಶಕ್ತಿ ಇದೆ.
ಸಂಶೋಧನೆಗಳ ಪ್ರಕಾರ, ಸಂಗೀತವು ಮಿದುಳಿನಲ್ಲಿ ಡೋಪಮೈನ್ ಮತ್ತು ಸಿರೊಟೋ ನಿನ್ ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಸಂಗೀತವು, ಮನಸ್ಥಿತಿ, ಸ್ಮರಣ ಶಕ್ತಿ ಮತ್ತು ದೃಶ್ಯಗಳನ್ನು ನೋಡುವ ರೀತಿಯನ್ನು ನಿರ್ದೇಶಿಸುತ್ತದೆ. ಅಂದರೆ ನಾವು ಕೇಳುವ ಹಾಡಿನ ಪ್ರಕಾರ, ನಮ್ಮ ಜಗತ್ತು ನಮಗೆ ಆ ಕ್ಷಣದಲ್ಲಿ ಸುಂದರವಾಗಿಯೋ, ಗಂಭೀರವಾಗಿಯೋ, ಶೋಕದ ಮಡುವಾಗಿಯೋ, ರಸಾನುಭೂತಿಯನ್ನು ನೀಡುವ ಸನ್ನಿವೇಶವಾಗಿಯೋ ಕಾಣಿಸಬಹುದು.
ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು, ಭಾವನೆಗಳನ್ನು ಸಮತೋಲನದಲ್ಲಿಡಲು ಇತ್ತೀಚಿನ ದಿನದಲ್ಲಿ *Music Therapy* ಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಮೃದುವಾದ ಸಂಗೀತವನ್ನು ಆಲಿಸುವುದರಿಂದ cortisol (stress causing hormone) ಮಟ್ಟವನ್ನು ಕಡಿಮೆ ಮಾಡಲು ಸಾಧ್ಯ ಎನ್ನುವುದು ಸಾಬೀತಾದ ಅಂಶ.
ಸುಮಧುರ ಸಂಗೀತವನ್ನು ಆಲಿಸುವ ಸಂದರ್ಭದಲ್ಲಿ ಹೃದಯವು ಸಹಜವಾಗಿ ಸ್ಪಂದಿಸ ಲಾರಂಭಿಸಿ, ಉಸಿರಾಟದ ವೇಗ ಸಮತೋಲನಕ್ಕೆ ಬರುತ್ತದೆ. ಇದರಿಂದ ಮನಸ್ಸು ನಿರಾಳ ವಾಗಿ, ವಿಶ್ರಾಂತ ಸ್ಥಿತಿಗೆ ಹೋಗುತ್ತದೆ. ಇದರಿಂದ, ಮೊದಲೇ ಖಿನ್ನವಾಗಿದ್ದ ಮನಸ್ಸಿನಲ್ಲಿ ಪ್ರಶಾಂತತೆ ಆವರಿಸಿದ ಭಾವ ಮೂಡುತ್ತದೆ.
ಮಿದುಳಿನಲ್ಲಿ ಡೋಪಮೈನ್ ಉತ್ಪತ್ತಿ ಹೆಚ್ಚಿಸಿ, ಸಂಭ್ರಮದ ಭಾವಕ್ಕೆ ಕಾರಣವಾಗುತ್ತದೆ. ದೈಹಿಕ ನೋವುಗಳಾದ, ಸ್ನಾಯು ಸೆಳೆತ, ಶಸ್ತ್ರಚಿಕಿತ್ಸೆಯ ನಂತರದ ನೋವು, ಮಾಂಸ ಖಂಡಗಳ ಬಿಗಿತ, ತಲೆ ನೋವು ಈ ಎಲ್ಲವುಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಪ್ರತಿ ದಿನ ಸಂಗೀತಾಭ್ಯಾಸ (ಗಾಯನ, ಕೊಳಲು ವಾದನ, ಸ್ಯಾಕ್ಸೋಫೋನ್ ವಾದನ) ಮಾಡುವು ದರಿಂದ ಉಸಿರಾಟದ ಪ್ರಕ್ರಿಯೆ ಅನೂಹ್ಯವಾಗಿ ಉತ್ತಮಗೊಳ್ಳುತ್ತದೆ.
“ನಾಭಿ ಹೃತ್ಕಂಠ ರಸನ ನಾಸಾದುಲ ಎಂತೋ ಶೋಬಿಲ್ಲು ಸಪ್ತಸ್ವರ ಸುಂದರುಲ ಭಜಿಂಪವೇ ಮನಸಾ..." ಎಂದ ತ್ಯಾಗರಾಜರ ಕೀರ್ತನೆ ಇದನ್ನು ಪುಷ್ಟೀಕರಿಸುತ್ತದೆ. ನಾಭಿಯಿಂದ ಹೊರಡುವ ಉಸಿರು, ಹೃದಯದ ಮೂಲಕ ಕಂಠವನ್ನು ಹಾದು, ಬಾಯಿ, ನಾಲಿಗೆ, ಮೂಗು ಎಲ್ಲವುಗಳನ್ನು ಸ್ಪರ್ಶಿಸಿ ಹೊರಹೊಮ್ಮುತ್ತದೆ.
ಶರೀರದ ನರನಾಡಿಗಳು ಸಚೇತನಗೊಳ್ಳುತ್ತವೆ. ಶ್ವಾಸಕೋಶ ಪೂರ್ಣ ಪ್ರಮಾಣದಲ್ಲಿ ಹಿಗ್ಗಿ ಕೆಲಸ ಮಾಡುತ್ತಾ, ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತದೆ.
ಒಬ್ಬರೇ ಇದ್ದಾಗಲೂ, ಏಕಾಂಗಿ ಅನ್ನುವ ಭಾವ ಹೋಗಿ, ಆ ಜಾಗದಲ್ಲಿ ಸಂಗೀತದ ಅನಂತ ಭಾವಲಹರಿಗಳು ಹರಡಿಕೊಂಡು, ಒಂಟಿತನವನ್ನು ಓಡಿಸಿಬಿಡುತ್ತವೆ. ಮನಸ್ಸು ಸಹಜ ಸ್ಥಿತಿಯಲ್ಲಿರುವಾಗ, ನಿದ್ರೆ, ಆಹಾರ ಎಲ್ಲವೂ ಸಹಜ ಸ್ಥಿತಿಗೆ ಬಂದುಬಿಡುತ್ತದೆ.
ಗಾಳಿಗಿಂತಲೂ ವೇಗವಾಗಿರುವ ಮನಸ್ಸಿನ ಓಟಕ್ಕೆ, ನಿಧಾನ ಲಯದ ಸಂಗೀತ ‘ಬ್ರೇಕ್’ ಆಗಬಲ್ಲದು. ಸುಮಧುರ ಸಂಗೀತವು, ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ, ಮನಸ್ಸನ್ನು ಏಕಾಗ್ರಗೊಳಿಸುವ ದಿಕ್ಕಿನಲ್ಲಿ, ಅದ್ಭುತವಾಗಿ ಕೆಲಸ ಮಾಡುತ್ತದೆ. ಇದು ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ತಲುಪಿಸಿಬಿಡಬಲ್ಲದು.
‘ಮೋಹನ’ ರಾಗವು ಮನಸ್ಸಿಗೆ ಶಾಂತಿ ನೀಡಿದರೆ, ‘ಕಲ್ಯಾಣಿ’ ಆಶಾವಾದ ಮೂಡಿಸಿ, ಉತ್ಸಾಹ ತುಂಬುತ್ತದೆ. ‘ಹಂಸಧ್ವನಿ’ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಡೆದರೆ, ‘ಶಿವರಂಜಿನಿ’ ಭಾವನಾತ್ಮಕ ಶುದ್ಧೀಕರಣಕ್ಕೆ ಸಹಾಯಮಾಡುತ್ತದೆ. ಹೀಗೆ ವಿಭಿನ್ನ ರಾಗಗಳು, ದಿನದ ಬೇರೆ ಬೇರೆ ಸಮಯಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ ಒಳ್ಳೆಯ ಪರಿಣಾಮ ಗಳನ್ನು ಬೀರುತ್ತಾ, ಮನಸ್ಸನ್ನು ಆರೋಗ್ಯಕರವಾಗಿ ಇಡಬಲ್ಲವು.
ಪ್ರತಿದಿನ, ಒಂದು ನಿಶ್ಚಿತ ಸಮಯದಲ್ಲಿ, ನಿರ್ದಿಷ್ಟ ರಾಗಗಳನ್ನು ಕೇಳುತ್ತಾ, ಕಣ್ಮುಚ್ಚಿ, ಆಳವಾದ ಉಸಿರಾಟದೊಂದಿಗೆ ಆ ಸಂಗೀತದಲ್ಲಿ ಲೀನವಾಗಬಹುದಾದರೆ, ಎಲ್ಲಾ ಅನಿಶ್ಚಿತತೆಗಳು ದೂರವಾದ ಭಾವ ಮೂಡಲು ಸಾಧ್ಯ. ಇಲ್ಲೆಲ್ಲಾ, ನಂಬಿಕೆ, ಶ್ರದ್ಧೆಗಳು ಮುಖ್ಯಪಾತ್ರ ನಿರ್ವಹಿಸುತ್ತವೆ. ಕೆಲವು ವರ್ಷಗಳ ಹಿಂದೆ, 67 ವರ್ಷದ ಒಬ್ಬಾಕೆ, ಅಪಘಾತ ವೊಂದರಲ್ಲಿ ತೀವ್ರ ಆಘಾತವಾಗಿ ತನ್ನ ಹೆಚ್ಚಿನದೆಲ್ಲವನ್ನು ಮರೆತಿದ್ದರು.
ಎಲ್ಲ ಚಿಕಿತ್ಸೆಗಳು ಮುಗಿದ ನಂತರವೂ ಪೂರ್ಣ ನೆನಪು ಬಾರದೆ ಇದ್ದಾಗ, ಅವರನ್ನು Music Therapy ಗೆ ಕರೆತರಲಾಯಿತು. ಆಕೆಯ ಸುಕೃತ ಎನ್ನುವಂತೆ ಅವರು ಮೊದಲೇ ಸಂಗೀತಾಭ್ಯಾಸಿಗಳಾಗಿದ್ದರು. ಕೆಲವು ದಿನಗಳ ಕಾಲ ಕ್ರಮಬದ್ಧವಾಗಿ ಸಂಗೀತವನ್ನು ಆಲಿಸಲು ಪ್ರಶಾಂತವಾದ ಸ್ಥಳದಲ್ಲಿ ಆಕೆಗೆ ಅನುವು ಮಾಡಿಕೊಡಲಾಯಿತು.
ಒಂದು ತಿಂಗಳ ಆಕೆ ನೆನಪಿನ ಜಾಡು ಹಿಡಿಯಲಾರಂಭಿಸಿದರು. ನಾಲ್ಕು ತಿಂಗಳ ಹೊತ್ತಿಗೆ, ಅವರಿಗಾಗಿದ್ದ ಮಾತಿನ ತೊಡಕು ಸಹ ಹೋಗಿ, ತಾವೇ ಹಾಡಲಾರಂಭಿಸಿದರು. ಮತ್ತೆ ನಾಲ್ಕು ತಿಂಗಳ ನಿರಂತರ ಆಲಿಸುವಿಕೆ, ಅಭ್ಯಾಸಗಳಿಂದ ಕಛೇರಿ ಕೊಡುವಷ್ಟರ ಮಟ್ಟಿಗೆ ಸಿದ್ಧರಾಗಿಬಿಟ್ಟರು.
ಇದೆಲ್ಲ ಸಾಧ್ಯವಾಗುವುದು ಮಧುರ ಸಂಗೀತದಿಂದ ಮಾತ್ರ. ಅದೇ ಸಂಗೀತ ಕರ್ಕಶ ಶಬ್ದವಾಗಿ ಮಾರ್ಪಟ್ಟರೆ, ಅಸ್ವಸ್ಥತೆಗೆ ಕಾರಣವಾಗಿ ಬಿಡುತ್ತದೆ. ಇತ್ತೀಚಿಗೆ, ಸಂಗೀತ ಎಂದರೆ ಅಬ್ಬರದ ಧ್ವನಿಯ ಕಿರುಚಾಟ ಎನ್ನುವಂತಾಗಿಬಿಟ್ಟಿದೆ. ಇದು ಮಾನಸಿಕವಾಗಿ, ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳನ್ನೇ ಬೀರುತ್ತದೆ.
ಆಸ್ಪತ್ರೆಯ ಮುಂದೆ ‘ಸೈಲೆ ಪ್ಲೀಸ್’ ಎನ್ನುವ ಫಲಕವಿತ್ತು. ಅದರ ಎದುರು ಗಾಡಿಯಲ್ಲಿ ಜೋರಾಗಿ, ಕರ್ಕಶವಾದ ಸಂಗೀತ ಅಬ್ಬರಿಸುತ್ತಿತ್ತು. ಆಗತಾನೆ ಹೃದಯ ಶಸ್ತ್ರಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರ ಬಂದ ರೋಗಿ, ಚಿಕಿತ್ಸೆ ಯಶಸ್ವಿಯಾಗಿದ್ದರೂ, ಸಂಗೀತದ ಅಬ್ಬರ ದಿಂದಾಗಿ ಹೃದಯಾಘಾತಕ್ಕೊಳಪಟ್ಟನಂತೆ. ಸಂಸ್ಕೃತಿಯ ದ್ಯೋತಕವಾದ ಸಂಗೀತ, ಮತ್ತೊಬ್ಬರ ಶಾಂತಿಯನ್ನು ಕದಡುವ ಮಟ್ಟಕ್ಕೆ ಇಳಿದರೆ, ಅದು ಕಲೆ ಅಲ್ಲ- ಮಾಲಿನ್ಯ. ಹಾಗಾಗದಂತೆ ಸೃಜನಶೀಲ ಸಂಗೀತವನ್ನು ಸವಿಯುವ ಸಂಸ್ಕಾರವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.
ಪ್ರಕೃತಿ ತತ್ವ
ಬೇರೆ ಬೇರೆ ಸ್ವರಗಳನ್ನು ವಿಭಿನ್ನವಾಗಿ ಸಂಯೋಜಿಸಿ, ಸಿದ್ಧಪಡಿಸಲಾದ ರಾಗಗಳು, ಮೊದಲಿಗೆ ಶ್ರೋತೃಗಳನ್ನು ತಲುಪುತ್ತವೆ. ವಾಕ್ಯಗಳ ಮೂಲಕ ಸಾಹಿತ್ಯ ಅರ್ಥವಾಗುವುದು ನಂತರದ ಪ್ರಕ್ರಿಯೆ. ವಾಕ್ಯಗಳಲ್ಲಿ ಪದಗಳು, ಪದಗಳಲ್ಲಿ ಅಕ್ಷರಗಳು, ಅಕ್ಷರಗಳಲ್ಲಿ ಸ್ವರಗಳು ಹೀಗೆ ಸಂಗೀತದ ಹರಹು ಆಳಕ್ಕೂ, ಅಗಲಕ್ಕೂ, ಎತ್ತರಕ್ಕೂ ವಿಸ್ತರಿಸುತ್ತಾ, ವಿಶಾಲ ವಾಗುತ್ತಾ ಸಾಗುತ್ತದೆ.
“ಸ್ವತೋ ರಂಜಯತಿ ಶ್ರೋತೃಚಿತ್ತಂ ಸ ಸ್ವರಮುಚ್ಯತೆ" ಎಂದರೆ ತನ್ನಷ್ಟಕ್ಕೆ ತಾನೇ ಕೇಳು ವವರ ಮನಸ್ಸಿಗೆ ರಂಜನೆಯನ್ನು ಉಂಟು ಮಾಡುವ ಧ್ವನಿಗಳೇ ಸ್ವರಗಳು. ಧ್ವನಿಯ ವೈಶಿಷ್ಟ್ಯವೇನು ಕಡಿಮೆಯದ್ದಲ್ಲ. ಮಾತಿಗೊಂದು ಧ್ವನಿ, ವ್ಯಕ್ತಿಗೊಂದು ಧ್ವನಿ, ಸಮಾಜ ಕ್ಕೊಂದು ಧ್ವನಿ.. ಹೀಗೆ ಧ್ವನಿಸುತ್ತಾ, ಮಾರ್ದನಿಸುತ್ತಾ ಹೋಗುತ್ತದೆ.
ಅಂದರೆ ಧ್ವನಿ (ಸ್ವರ) ಕೇವಲ ಗಾಯನಕ್ಕೆ ಸೀಮಿತವಲ್ಲ. ಬ್ರಹ್ಮಾಂಡದೆಡೆ ಎಲ್ಲಕ್ಕೂ ಅದರದ್ದೇ ಆದ ಧ್ವನಿಗಳಿವೆ. ಈ ಧ್ವನಿಗಳನ್ನು ಬಾಧಿಸದೆ, ಅದರದ್ದೇ ಪ್ರಕೃತಿಗೆ ಘಾಸಿಯಾಗ ದಂತೆ ಕಾಳಜಿ ವಹಿಸುವವರು ಸ್ವರಾರಾಧಕರು. ಸ್ವರ ಪ್ರಭೇದಗಳಾದ ಪ್ರಕೃತಿ ಸ್ವರ, ವಿಕೃತಿ ಸ್ವರಗಳನ್ನೆಲ್ಲ ಶ್ರುತಿಬದ್ಧವಾಗಿ, ಕಂಠದಿಂದಲೂ, ವಾದ್ಯದಿಂದಲೂ ನುಡಿಸುವವರು ಸುರೀಲರು.
‘ಪ್ರಕೃತಿ ಸ್ವರ’ ಎನ್ನುವುದನ್ನು ಸಂಗೀತದ ಪಾರಿಭಾಷಿಕ ಶಬ್ದವಾಗಿ ನೋಡದೆ, ಸಾರ್ವತ್ರಿಕ ವಾಗಿ ನೋಡುವುದಾದರೆ, ಅದು ಪ್ರಕೃತಿಯದ್ದೇ ಆದ ಸ್ವರ. ಪ್ರಕೃತಿಯ ಮೂಲ ಪ್ರವೃತ್ತಿ ಯನ್ನು ಧ್ವನಿಸುವಂಥ ಪ್ರಕೃತಿಯ ಧ್ವನಿ. ಇದಕ್ಕೆ ಧಕ್ಕೆಯಾಗದಂತೆ ವರ್ತಿಸುವವರು, ಕಾಳಜಿ ವಹಿಸುವವರು ಸುರೀ ಪ್ರವೃತ್ತಿಯವರು.
ಮತ್ತೆ ಸಂಗೀತದ ಪರಿಭಾಷೆಗೆ ಮರಳಿದರೆ ಸಂಗೀತದ ಸಪ್ತಸ್ವರಗಳಲ್ಲಿ ‘ಪ್ರಕೃತಿ ಸ್ವರ’ ಗಳೆಂದರೆ ಎರಡು ಮಾತ್ರ. ಅವು ‘ಸ’ ಮತ್ತು ‘ಪ’ ಮಾತ್ರ. ಪ್ರಕೃತಿ ಸ್ವರಗಳು ನಿರ್ದಿಷ್ಟವಾಗಿ ರುವ ಸ್ವರಗಳು. ಇವು ಎಲ್ಲ ರಾಗಗಳಲ್ಲಿಯೂ ಒಂದೇ ತೆರನಾಗಿದ್ದು, ಬದಲಾಗದೆ ಉಳಿಯು ತ್ತವೆ. ಉಳಿದ ಐದು ಸ್ವರಗಳು ‘ವಿಕೃತಿ ಸ್ವರ’ಗಳೆನಿಸಿಕೊಳ್ಳುತ್ತವೆ.
ಇವುಗಳು ರಾಗದಿಂದ ರಾಗಕ್ಕೆ ಬದಲಾಗುತ್ತಾ ಹೋಗುತ್ತವೆ. ಪ್ರಕೃತಿ ಸ್ವರಗಳು ಮತ್ತು ವಿಕೃತಿ ಸ್ವರಗಳು ವಿರುದ್ಧ ಗುಣ ಸ್ವಭಾವಗಳನ್ನು ಹೊಂದಿದ್ದರೂ ಇವು ಯಾವುವೂ ವಿರುದ್ಧ ಧ್ವನಿಗಳಲ್ಲ. ಸ್ವರಗಳೆಲ್ಲವೂ ಪರಸ್ಪರ ಪೂರಕವೇ. ಎಲ್ಲವೂ ಒಂದಾಗಿ ರಾಗಕ್ಕೆ ಸಂಪನ್ನತೆ ಯನ್ನು ಕೊಟ್ಟು ಪೂರ್ಣವಾಗುವಂತೆ ಮಾಡುವ ಗುಣ ಎಲ್ಲ ಸ್ವರಗಳಿಗೂ ಇವೆ.
ಹಾಗೆಯೇ ಬ್ರಹ್ಮಾಂಡದಲ್ಲಿನ, ಅಂದರೆ ಪ್ರಕೃತಿಯಲ್ಲಿನ ಎಲ್ಲ ಧ್ವನಿಗಳು ಒಂದಕ್ಕೊಂದು ಪೂರಕವೇ ಆಗಿವೆ. ಇಲ್ಲಿ ಯಾವುದೂ ವಿರುದ್ಧವಲ್ಲ. ಎಲ್ಲವೂ ಮೇಳೈಸಿದಾಗಲೇ ಸುಂದರ ಜಗತ್ತು. ಇದು ಪ್ರಕೃತಿ ಸಾರುವ ನೀತಿ. ಸಂಗೀತದ ಜೀವಾಳವೂ ಇದೇ ಆಗಿದೆ. ಸಕಲ ಚರಾಚರಗಳನ್ನು ಒಳಗೊಳ್ಳುವ ಜಗದ ದನಿಯೇ ನಾದ. ಸಂಗೀತಕ್ಕೆ ಭಾಷೆಯ ಚೌಕಟ್ಟಿಲ್ಲ. ನಾದ ತಾನೇ ಭಾಷೆಯಾಗಿ, ವಿಶ್ವದ ಹೃದಯಗಳನ್ನು ಬೆಸೆಯುತ್ತಾ, ಎಲ್ಲರನ್ನೂ, ಎಲ್ಲವನ್ನೂ ತನ್ನ ಅಂತರಂಗದೊಳಗೆ ಭಾವ ಬಂಧಿಗಳನ್ನಾಗಿಸಿ ಬಿಟ್ಟಿದೆ.
‘ನಾದಾಧಿನಂ ಜಗತ್ ಸರ್ವಂ’..... ‘ನಾದಮಯ ಈ ಲೋಕವೆಲ್ಲ...’ಉಪನಿಷತ್ತಿನ ನಾದತತ್ವ ಮತ್ತು ರಾಗಗಳ ಅನುಭವ ಶಾಸ್ತ್ರ ಒಂದೇ ಆಂತರಿಕ ಚೇತನದ ಎರಡು ಮುಖಗಳು. ಇಲ್ಲಿ, ‘ನಾದೋ ಬ್ರಹ್ಮ’ (ನಾದವೇ ಬ್ರಹ್ಮ) ಎನ್ನುವುದರ ಮೂಲಕ, ನಾದವನ್ನು ಬ್ರಹ್ಮ ತತ್ವದ ಪ್ರಕಟಣೆಯೆಂದು ಕಾಣಲಾಗುತ್ತದೆ. ‘ಓಂಕಾರ ಏತದಕ್ಷರಂ ಇದಂ ಸರ್ವಂ..’ ಓಂಕಾರವೇ ಎಲ್ಲ ನಾದಗಳ ಮೂಲವೆಂದು ಉಪನಿಷತ್ತುಗಳು ಹೇಳುತ್ತವೆ.
ರಾಗವು ಚಿತ್ತವೃತ್ತಿ ನಿಯಂತ್ರಣದ ಸಾಧನ. ‘ಶಬ್ದಾತೀತಂ ಬ್ರಹ್ಮ’ ಎನ್ನುವಂತೆ, ರಾಗವು ಸಾಧಕನನ್ನು ಶಬ್ದದಿಂದ ಶಬ್ದಾತೀತದವರೆಗೆ ಕರೆದೊಯ್ಯುತ್ತದೆ. ನಾದವು ಬ್ರಹ್ಮಾನುಭವಕ್ಕೆ ದಾರಿ. ರಾಗವು ಆ ದಾರಿಯಲ್ಲಿ ನಡೆಯುವ ಕ್ರಮ.
ಜೋ ಜೋ ಲಾಲಿ ನಾ ಹಾಡುವೆ....
ಮಗುವು ನಿದ್ರೆಗೆ ಜಾರದೆ ರಚ್ಚೆ ಹಿಡಿದಿರುವಾಗ ಅಥವಾ ನಿದ್ರೆಯಿಂದ ಹಠಾತ್ತನೆ ಎಚ್ಚರ ಗೊಂಡು ಅಳತೊಡಗಿದಾಗ, ಅಮ್ಮನ ಜೋಗುಳ ಆರಂಭವಾದ ಕ್ಷಣದಲ್ಲಿ ಅದರ ಕಣ್ಣು ಗಳು ನಿಧಾನವಾಗಿ ಮುಚ್ಚಿಕೊಳ್ಳುತ್ತವೆ. ಇದು ಭಾವನಾತ್ಮಕತೆಯೊಂದಿಗೆ, ಮಮತೆ, ನಾದ ಮತ್ತು ದೇಹಶಾಸ್ತ್ರ ಸಂಗಮವಾದುದರ ದ್ಯೋತಕ.
ಜೋಗುಳದ ಲಯ ಇರುವುದು ಸಾಮಾನ್ಯವಾಗಿ ನಿಧಾನ ಗತಿಯ. ಅಮ್ಮನ ಧ್ವನಿಯು ಮಗುವಿಗೆ ಗರ್ಭಾವಸ್ಥೆಯಿಂದಲೇ ಪರಿಚಿತವಾದ ಶಬ್ದ. ಹಾಗಾಗಿ ಜೋಗುಳದ ನಾದವು ಮಗುವಿಗೆ ಭದ್ರತೆಯ ಸಂಕೇತವನ್ನು ಕೊಟ್ಟುಬಿಡುತ್ತದೆ. ಮೃದು ಧ್ವನಿಗಳು ನರಮಂಡಲ ವನ್ನು ಶಾಂತಗೊಳಿಸಿ, ಉಸಿರಾಟವನ್ನು ಸಹಜಸ್ಥಿತಿಗೆ ತಂದು, ಮಗುವಿನ ಮಿದುಳಿನಲ್ಲಿ ನೆಮ್ಮದಿ ಮೂಡಿಸಿ, ನಿದ್ರೆಯ ಪ್ರಕ್ರಿಯೆ ಸಹಜವಾಗಿ ಆರಂಭವಾಗುತ್ತದೆ.
ಮಗುವಿಗೆ ಪದಗಳ ಅರ್ಥ ಗೊತ್ತಿಲ್ಲದಿದ್ದರೂ, ಆ ನಾದದ ಅರಿವಾಗುತ್ತದೆ. ಆ ನಾದದಲ್ಲಿ ‘ನೀನು ಸುರಕ್ಷಿತ’ ಎಂಬ ಸಂದೇಶವು ಮಗುವಿನ ಸುಪ್ತ ಮನಸ್ಸನ್ನು ತಲುಪುತ್ತದೆ. ಇಲ್ಲಿ ಮಗುವಿಗೆ ಸಂಗೀತದೊಂದಿಗೆ ಅಮ್ಮನ ಸಂಬಂಧದ ಸ್ಪರ್ಶವೂ ಆಗುವುದು ವಿಶೇಷ.
ಇಲ್ಲಿ ನಾದ, ಮಮತೆ, ಮನೋವಿಜ್ಞಾನ, ಶರೀರ ವಿಜ್ಞಾನ ಎಲ್ಲವೂ ಒಂದಾಗುವ ಅನನ್ಯ ಕ್ಷಣಗಳು ಸಾಕ್ಷೀಭೂತವಾಗಿ ಉಳಿಯುತ್ತವೆ. ಗದ್ದಲದ ಜಗತ್ತಿನಲ್ಲಿ ಮೃದುನಾದವು ಶಾಂತಿ ಯ ಸೇತುವೆ ಎನ್ನುವುದನ್ನು ಈ ದೃಶ್ಯ ನಮಗೆ ನೆನಪಿಸುತ್ತದೆ.
ಹಾಲಿನ ಹನಿಗಳ ಹಿಂದೆ ಸಂಗೀತ ವಿಜ್ಞಾನ
ಕೃಷ್ಣ ಕಣ್ಮುಚ್ಚಿ ಕೊಳಲೂದುತ್ತಿದ್ದಾನೆ, ಅದುವರೆಗೂ ಮೇಯುತ್ತಿದ್ದ ಹಸುಗಳು ಅವನತ್ತ ಓಡಿಬರುತ್ತಿವೆ- ಇದು ನಮ್ಮ ಸ್ಮೃತಿಯಲ್ಲಿ ಮತ್ತೆ ಮತ್ತೆ ಮೂಡುವ ಸುಂದರ ದೃಶ್ಯ. ಇದು ಕೇವಲ ಪೌರಾಣಿಕ ಕಲ್ಪನೆ ಅಲ್ಲ. ಮಾನವ, ಪ್ರಕೃತಿ, ಸಂಗೀತ ಸಂಬಂಧದ ಆಳವಾದ ಸಂಕೇತ. ಸಂಗೀತಕ್ಕೆ ಜೀವಿಗಳನ್ನು ಆಕರ್ಷಿಸುವ ಶಕ್ತಿ ಇದೆ. ಕೃಷ್ಣನ ಕೊಳಲಿನ ದನಿ ಅವುಗಳಿಗೆ, ಮಮತೆ, ಭರವಸೆ. ಇಲ್ಲಿ ಸಂಗೀತ ಅವುಗಳಿಗೆ ಆಜ್ಞೆಯಲ್ಲ, ಆಮಂತ್ರಣದ ರೀತಿ ಕೆಲಸ ಮಾಡುತ್ತದೆ.
ಮನಸ್ಸುಗಳನ್ನು ಗೆಲ್ಲಲು ಧಾರ್ಷ್ಟ್ಯ ಬೇಡ, ಮೃದುನಾದವೇ ಸಾಕು ಎನ್ನುವ ಸಂಕೇತ ಇಲ್ಲಿಯದು. ಹಸುಗಳು ಸಹ ಮಾನವರೊಟ್ಟಿಗೆ ಬದುಕುವ ಸಹಜೀವಿಗಳು. ಅವುಗಳಿಗೂ ಭಯ, ಒತ್ತಡ ಇವೆ. ಹಾಲು ಬಿಡುವಿಕೆಗಾಗಿ, ಆಕ್ಸಿಟೋಸಿನ್ ಎನ್ನುವ ಹಾರ್ಮೋನ್, ಶಾಂತ ಪರಿಸ್ಥಿತಿಯಲ್ಲಿಯಷ್ಟೇ ಚೆನ್ನಾಗಿ ಕೆಲಸ ಮಾಡುತ್ತದೆ.
ಗದ್ದಲದ ವಾತಾವರಣದಲ್ಲಿ, ಒತ್ತಡ ಹೆಚ್ಚಾದಾಗ ಹಾಲನ್ನು ಬಿಡುವುದು ಹಸುಗಳಿಗೆ ಕಷ್ಟದ ಕೆಲಸ. ಮೃದು, ಮಧುರ ಸಂಗೀತವು ನರಮಂಡಲವನ್ನು ಸಮತೋಲನಗೊಳಿಸಿ, ಒತ್ತಡವನ್ನು ಕಡಿಮೆ ಮಾಡಿ, ಹಸುಗಳ ಹಾಲು ನೀಡುವ ಪ್ರಮಾಣ, ಗುಣಮಟ್ಟ ಎಲ್ಲವನ್ನು ಹೆಚ್ಚಿಸುತ್ತದೆ. ಹಸುಗಳ ಹಾಲಿನ ಹಿಂದೆ ಕೇವಲ ಆಹಾರವಲ್ಲ, ಸಂಗೀತದ ಪರಿಸರವೂ ವೈಜ್ಞಾನಿಕವಾಗಿ ಕೆಲಸ ಮಾಡುತ್ತದೆ.
(ಲೇಖಕಿ ಕೋಲಾರ ಜಿಲ್ಲಾ ನ್ಯಾಯಾಲಯದ ಕಾನೂನು ಅರಿವು ಜಾಗೃತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ)