ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Interview of Minister Dr. Vijayananda S. Kashappanavar: ಉತ್ತರ ಕರ್ನಾಟಕದ ಅಭಿವೃದ್ದಿಗೆ ಕೈಗಾರಿಕೆ ಕ್ರಾಂತಿಯೇ ನಮ್ಮ ಗುರಿ

ಉತ್ತರ ಕರ್ನಾಟಕದ ರಾಜಕೀಯ ವಲಯದಲ್ಲಿ ನೇರ ನಡೆ, ನಿಷ್ಠುರ ಮಾತು ಮತ್ತು ಜನಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ನಾಯಕ ಡಾ. ವಿಜಯಾನಂದ ಎಸ್. ಕಾಶಪ್ಪನವರ್ ಮತ್ತು ಅವರ ಕುಟುಂಬ ಕೃಷ್ಣಾ ಕೊಳ್ಳದ ಭಾಗದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇವರ ತಂದೆ ಎಸ್.ಆರ್. ಕಾಶಪ್ಪನವರ್ ಅವರು 1999ರಲ್ಲಿ ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಸಚಿವ ಡಾ.ವಿಜಯಾನಂದ ಎಸ್.ಕಾಶಪ್ಪನವರ್ ಸಂದರ್ಶನ

ವಿಶೇಷ ಸಂದರ್ಶನ: ಚಿದಾನಂದ ರುದ್ರಾಪುರಮಠ

ಹುನಗುಂದ ಕ್ಷೇತ್ರದ ನೀರಾವರಿ ಸಾಧನೆ, ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಪಾರ್ಕ್‌ಗಳ ಸ್ಥಾಪನೆ, ಯುವಜನತೆಗೆ ಉದ್ಯೋಗಾವಕಾಶ, ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಾಗೂ ರಾಜ್ಯ ರಾಜಕೀಯದ ಕುರಿತು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಡಾ. ವಿಜಯಾನಂದ ಎಸ್. ಕಾಶಪ್ಪನವರ್(Dr. Vijayananda S. Kashappanavar) ಅವರು ಮನದಾಳದ ಮಾತುಗಳನ್ನು ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ರಾಜಕೀಯ ವಲಯದಲ್ಲಿ ನೇರ ನಡೆ, ನಿಷ್ಠುರ ಮಾತು ಮತ್ತು ಜನಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ನಾಯಕ ಡಾ. ವಿಜಯಾನಂದ ಎಸ್. ಕಾಶಪ್ಪನವರ್ ಮತ್ತು ಅವರ ಕುಟುಂಬ ಕೃಷ್ಣಾ ಕೊಳ್ಳದ ಭಾಗದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇವರ ತಂದೆ ಎಸ್.ಆರ್. ಕಾಶಪ್ಪನವರ್ ಅವರು 1999ರಲ್ಲಿ ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ರಾಮಥಾಳ ಬೃಹತ್ ನೀರಾವರಿ ಯೋಜನೆಗೆ 5.84 ಟಿಎಂಸಿ ನೀರು ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಈ ಭಾಗದ ಕೃಷಿ ಚಟುವಟಿಕೆಗಳಿಗೆ ಹೊಸ ಭರವಸೆ ಮೂಡಿಸಿದ್ದರು. ತಂದೆಯವರ ನಿಧನದ ನಂತರ ತಾಯಿ ಗೌರಮ್ಮ ಕಾಶಪ್ಪನವರ್ ಅವರೂ ಶಾಸಕರಾಗಿ ಜನಸೇವೆ ಮುಂದುವರಿಸಿದ್ದರು. ತಂದೆ-ತಾಯಿಯವರ ರಾಜಕೀಯ ಮತ್ತು ಸಾಮಾಜಿಕ ಸೇವೆಯ ಪರಂಪರೆಯನ್ನು ಮುಂದುವರಿಸಿರುವ ವಿಜಯಾನಂದ ಎಸ್. ಕಾಶಪ್ಪನವರ್, ಸುಮಾರು 24 ವರ್ಷಗಳ ಬಳಿಕ ತಮ್ಮ ಕುಟುಂಬಕ್ಕೆ ಸಚಿವ ಸ್ಥಾನದ ಗೌರವವನ್ನು ಮರಳಿ ತಂದುಕೊಟ್ಟಿದ್ದಾರೆ.

ನಾಲ್ಕು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಇವರು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. 2013ರಿಂದ 2018ರ ಅವಧಿಯಲ್ಲಿ ಶಾಸಕರಾಗಿದ್ದಾಗ ರು.786 ಕೋಟಿ ವೆಚ್ಚದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಇವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Minister Vijayanand Kashappanavar Interview: ನರೇಂದ್ರ ಮೋದಿಯದ್ದು ವೋಟ್ ಚೋರಿ ಮಾಡಿ ಮುಂದಿನ ಚುನಾವಣೆಯಲ್ಲೂ ಗೆಲ್ಲುವ ಪ್ಲ್ಯಾನ್‌

ಪಂಚಮಸಾಲಿ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆದ 2ಎ ಮೀಸಲಾತಿ ಹೋರಾಟದಲ್ಲಿಯೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ‘ವಿಶ್ವವಾಣಿ ಟಿವಿ’ಗೆ ನೀಡಿದ ತಮ್ಮ ಮೊದಲ ವಿಶೇಷ ಸಂದರ್ಶನದಲ್ಲಿ ಇಲಾಖೆಯ ಕಾರ್ಯಯೋಜನೆ, ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಹುನಗುಂದ ಕ್ಷೇತ್ರದ ಅಭಿವೃದ್ಧಿ, ಮೀಸಲಾತಿ ಹೋರಾಟ ಮತ್ತು ರಾಜ್ಯ ರಾಜಕೀಯದ ಕುರಿತು ಮಾತನಾಡಿದ್ದಾರೆ.

ಪ್ರಶ್ನೆ: ನಿಮ್ಮ ಕುಟುಂಬಕ್ಕೆ ಸುಮಾರು ಐದು ದಶಕಗಳ ರಾಜಕೀಯ ಹಿನ್ನೆಲೆಯಿದೆ. ಈ ಹಾದಿಯ ಬಗ್ಗೆ ಏನು ಹೇಳುತ್ತೀರಿ?

ಉತ್ತರ: ನಮ್ಮ ಕುಟುಂಬ ಕಳೆದ 50 ವರ್ಷಗಳಿಂದ ಈ ಭಾಗದ ಜನರ ಸೇವೆಯಲ್ಲಿದೆ. 1999ರಲ್ಲಿ ತಂದೆ ಎಸ್. ಆರ್. ಕಾಶಪ್ಪನವರ್ ಅವರು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದಾಗ ಈ ಭಾಗದ ನೀರಾವರಿ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ರಾಮಥಾಳ ನೀರಾವರಿ ಯೋಜನೆಗೆ 5.84 ಟಿಎಂಸಿ ನೀರು ದೊರಕಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ನಂತರ ನನ್ನ ತಾಯಿ ಗೌರಮ್ಮ ಕಾಶಪ್ಪನವರ್ ಅವರೂ ಶಾಸಕರಾಗಿ ಕ್ಷೇತ್ರದ ಜನರ ಸೇವೆ ಮಾಡಿದ್ದಾರೆ. ತಂದೆ-ತಾಯಿಯ ಮಾರ್ಗದರ್ಶನ ಮತ್ತು ಜನರ ಆಶೀರ್ವಾದವೇ ನನ್ನ ರಾಜಕೀಯ ಬದುಕಿಗೆ ಪ್ರೇರಣೆ.

ಪ್ರಶ್ನೆ: ನಿಮ್ಮ ಕುಟುಂಬಕ್ಕೆ ಸಚಿವ ಸ್ಥಾನ ದೊರೆತಿರುವುದು ಸುಮಾರು 24 ವರ್ಷಗಳ ಬಳಿಕ. ಈ ಜವಾಬ್ದಾರಿಯನ್ನು ಹೇಗೆ ಸ್ವೀಕರಿಸಿದ್ದೀರಿ?

ಉತ್ತರ: ಇದು ನನಗೆ ದೊರೆತ ಗೌರವದ ಜೊತೆಗೆ ದೊಡ್ಡ ಜವಾಬ್ದಾರಿಯೂ ಹೌದು. ನನ್ನ ತಂದೆ-ತಾಯಿ ಹಾಗೂ ಹುನಗುಂದ ಕ್ಷೇತ್ರದ ಜನರು ನೀಡಿದ ಆಶೀರ್ವಾದದಿಂದ ಈ ಸ್ಥಾನ ದೊರೆತಿದೆ. ಪಕ್ಷದ ಹೈಕಮಾಂಡ್ ನನ್ನ ಮೇಲೆ ನಂಬಿಕೆ ಇಟ್ಟು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಜವಾಬ್ದಾರಿ ನೀಡಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಆದ್ಯತೆ.

ಪ್ರಶ್ನೆ: ಹುನಗುಂದ ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿಗೆ ನೀವು ಕೈಗೊಂಡಿರುವ ಪ್ರಮುಖ ಕ್ರಮಗಳೇನು?

ಉತ್ತರ: ಸುಮಾರು ರು.786 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ. ಇದರಿಂದ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಇದಕ್ಕೂ ಮೊದಲು ಕಾಲುವೆ ನೀರಾವರಿ ಮೂಲಕ ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿತ್ತು. ಕೃಷಿ ಅಭಿವೃದ್ಧಿಗೆ ನೀರಾವರಿ ಅತ್ಯಂತ ಅಗತ್ಯವಾಗಿರುವುದರಿಂದ ಈ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ.

ಪ್ರಶ್ನೆ: ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವ ಯೋಜನೆ ರೂಪಿಸಲಾಗಿದೆ? ಉತ್ತರ: ಹುನಗುಂದ ಕ್ಷೇತ್ರದ 170ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಸುಮಾರು ರು.135 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಯೋಜನೆ ಪೂರ್ಣ ಗೊಂಡ ಬಳಿಕ ಗ್ರಾಮೀಣ ಪ್ರದೇಶದ ಜನರಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದ್ದೇವೆ. ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.

ಪ್ರಶ್ನೆ: ಇಳಕಲ್ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ?

ಉತ್ತರ: ಇಳಕಲ್‌ನಲ್ಲಿ ಸುಮಾರು 40 ಎಕರೆ ಪ್ರದೇಶದಲ್ಲಿ 1550 ನಿವೇಶನಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ಸ್ವಂತ ಸೂರು ಹೊಂದುವ ಅವರ ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ನಮ್ಮ ಉದ್ದೇಶ.

ಪ್ರಶ್ನೆ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ದಯವಿಟ್ಟು ವಿವರಿಸಿ.

ಉತ್ತರ: ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ವಿಜಯ ಮಹಾಂತೇಶ ಶಿಕ್ಷಣ ಸಂಸ್ಥೆಯ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಲು ಪ್ರಯತ್ನಿಸಲಾಗಿದೆ. ವಿಶೇಷವಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶ ನಮ್ಮದಾಗಿದೆ. ಶಿಕ್ಷಣ ಸಂಸ್ಥೆಗಳ ಮೂಲಕ ಈ ಭಾಗದ ಯುವಜನತೆಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂಬುದು ನಮ್ಮ ಆಶಯ.

ಪ್ರಶ್ನೆ: ಹುನಗುಂದ ಕ್ಷೇತ್ರದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಯಾವ ಯೋಜನೆಗಳನ್ನು ರೂಪಿಸಿದ್ದೀರಿ? ಉತ್ತರ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೈಗಾರಿಕೆಗಳ ಬೆಳವಣಿಗೆ ಬಹಳ ಮುಖ್ಯ. ಹುನಗುಂದದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಸುಮಾರು 16 ಎಕರೆ ಅರಣ್ಯೇತರ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವಿದೆ. ವಿಶೇಷವಾಗಿ ದೊಡ್ಡ ಪ್ರಮಾಣದ ಗಾರ್ಮೆಂಟ್ಸ್ ಘಟಕಗಳನ್ನು ಈ ಭಾಗಕ್ಕೆ ತರಲು ಪ್ರಯತ್ನಿಸು ತ್ತಿದ್ದೇವೆ. ಇದರಿಂದ ಗ್ರಾಮೀಣ ಮಹಿಳೆಯರು ಮತ್ತು ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯಲಿದೆ.

ಪ್ರಶ್ನೆ: ಕೊಪ್ಪಳ-ಬಾಗಲಕೋಟೆ-ಮುದಗಲ್ ರೈಲು ಮಾರ್ಗದ ಯೋಜನೆಯ ಬಗ್ಗೆ ಏನು ಹೇಳುತ್ತೀರಿ?

ಉತ್ತರ: ಈ ಭಾಗದ ಸಂಪರ್ಕ ವ್ಯವಸ್ಥೆ ಸುಧಾರಿಸಲು ರೈಲು ಮಾರ್ಗದ ಅಭಿವೃದ್ಧಿ ಅತ್ಯಂತ ಅಗತ್ಯ. ಕೊಪ್ಪಳ-ಬಾಗಲಕೋಟೆ-ಮುದಗಲ್ ರೈಲು ಮಾರ್ಗದ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಈ ಯೋಜನೆ ಶೀಘ್ರವಾಗಿ ಮುಂದುವರಿ ಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ರೈಲು ಸಂಪರ್ಕದಿಂದ ಈ ಭಾಗದ ಜನರಿಗೆ ಅನುಕೂಲ ವಾಗುವುದರ ಜೊತೆಗೆ ವ್ಯಾಪಾರ, ಕೈಗಾರಿಕೆ ಮತ್ತು ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ.

ಪ್ರಶ್ನೆ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದ ಬಗ್ಗೆ ನಿಮ್ಮ ನಿಲುವೇನು? ಉತ್ತರ: ಪಂಚಮಸಾಲಿ ಸಮುದಾಯದ ಮೀಸಲಾತಿ ಬೇಡಿಕೆ ಬಹಳ ವರ್ಷಗಳಿಂದ ಚರ್ಚೆಯಲ್ಲಿದೆ. ಈ ವಿಚಾರದಲ್ಲಿ ಎಲ್ಲರಿಗೂ ನ್ಯಾಯ ದೊರೆಯುವಂತಹ ಪರಿಹಾರ ಅಗತ್ಯ. ಹಿಂದಿನ ಬಿಜೆಪಿ ಸರ್ಕಾರ 2ಸಿ ಮತ್ತು 2ಡಿ ಪ್ರವರ್ಗಗಳನ್ನು ಅವಸರದಲ್ಲಿ ಸೃಷ್ಟಿಸಿತ್ತು ಎಂಬುದು ನಮ್ಮ ನಿಲುವು. ಮೀಸಲಾತಿ ವಿಚಾರದಲ್ಲಿ ಸಂವಿಧಾನಾತ್ಮಕವಾಗಿ ಮತ್ತು ಕಾನೂನುಬದ್ಧವಾಗಿ ಪರಿಹಾರ ಕಂಡುಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ಸಮುದಾಯದ ಭಾವನೆಗಳಿಗೆ ಗೌರವ ನೀಡುವುದರ ಜೊತೆಗೆ ಕಾನೂನಿನ ಚೌಕಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ.

ಪ್ರಶ್ನೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ನಮ್ಮ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳಿಂದ ಮಹಿಳೆಯರು, ರೈತರು, ಕಾರ್ಮಿಕರು, ಯುವಜನರು ಸೇರಿದಂತೆ ವಿವಿಧ ವರ್ಗದ ಜನರಿಗೆ ನೆರವಾಗಿದೆ. ಜನರ ಬದುಕಿನಲ್ಲಿ ಆರ್ಥಿಕ ಭದ್ರತೆ ಮೂಡಿಸುವುದು ನಮ್ಮ ಸರ್ಕಾರದ ಉದ್ದೇಶ. ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣ ಎರಡಕ್ಕೂ ನಾವು ಸಮಾನ ಆದ್ಯತೆ ನೀಡುತ್ತಿದ್ದೇವೆ.

ಪ್ರಶ್ನೆ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಮತ್ತು ಬರ ಪರಿಹಾರ ವಿಚಾರದಲ್ಲಿ ನಿಮ್ಮ ನಿಲುವೇನು?

ಉತ್ತರ: ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ಹಾಗೂ ಬರ ಪರಿಹಾರ ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ಸಮರ್ಪಕವಾಗಿ ಸ್ಪಂದಿಸಬೇಕು. ರಾಜ್ಯದ ಜನರ ಹಿತದೃಷ್ಟಿಯಿಂದ ನಮಗೆ ಬರಬೇಕಾದ ಅನುದಾನವನ್ನು ನೀಡುವುದು ಕೇಂದ್ರದ ಜವಾಬ್ದಾರಿ. ರೈತರು, ಕಾರ್ಮಿಕರು ಮತ್ತು ಯುವಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ.

ಪ್ರಶ್ನೆ: ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾಗಿ ನಿಮ್ಮ ಇಲಾಖೆಯಲ್ಲಿ ಯಾವ ಬದಲಾವಣೆ ತರಲು ಬಯಸಿದ್ದೀರಿ?

ಉತ್ತರ: ಸಣ್ಣ ಕೈಗಾರಿಕೆಗಳು ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು. ಗ್ರಾಮೀಣ ಭಾಗದಲ್ಲಿಯೂ ಉದ್ಯಮ ಶೀಲತೆಯನ್ನು ಬೆಳೆಸಬೇಕು. ಖಾದಿ, ಚರ್ಮೋದ್ಯಮ ಮತ್ತು ಕರಕುಶಲ ಕ್ಷೇತ್ರಗಳಿಗೆ ಸಂಬಂಧಿಸಿದ ಮಂಡಳಿಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶವಿದೆ. ಸಣ್ಣ ಉದ್ಯಮಿಗಳಿಗೆ ಅಗತ್ಯ ನೆರವು, ಮಾರುಕಟ್ಟೆ ಅವಕಾಶ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಪ್ರಾದೇಶಿಕ ಅಸಮತೋಲನ ನಿವಾರಣೆಯೂ ನಮ್ಮ ಪ್ರಮುಖ ಗುರಿಯಾಗಿದೆ.

ಪ್ರಶ್ನೆ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಿಮ್ಮ ಮುಂದಿನ ಗುರಿಗಳೇನು?

ಉತ್ತರ: ಉತ್ತರ ಕರ್ನಾಟಕವು ಅಪಾರವಾದ ಸಂಪನ್ಮೂಲ ಮತ್ತು ಮಾನವಶಕ್ತಿಯನ್ನು ಹೊಂದಿರುವ ಪ್ರದೇಶ. ಆದರೆ ಈ ಭಾಗಕ್ಕೆ ಇನ್ನಷ್ಟು ನೀರಾವರಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿ ಅಗತ್ಯವಿದೆ. ಹುನಗುಂದ ಸೇರಿದಂತೆ ಇಡೀ ಉತ್ತರ ಕರ್ನಾಟಕ ದಲ್ಲಿ ಕೈಗಾರಿಕೆಗಳು ಬೆಳೆಯಬೇಕು, ಸ್ಥಳೀಯ ಯುವ ಜನರಿಗೆ ಉದ್ಯೋಗ ದೊರೆಯಬೇಕು, ರೈತರ ಆದಾ ಯ ಹೆಚ್ಚಬೇಕು ಎಂಬುದು ನಮ್ಮ ಆಶಯ. ಸರ್ಕಾ ರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಈ ಭಾಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.