ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

K Srinivas Column: ವೃದ್ದರಿಗೆ ಗೌರವ, ಶುದ್ದ ಸಮಾಜ

ಮಾನವ ಸಹಜವಾಗಿಯೇ 70ರ ನಂತರ ದುರ್ಬಲನಾಗುತ್ತಾನೆ. ಎಲ್ಲ ವಿಷಯಗಳಲ್ಲಿ ನಿರಾಸಕ್ತಿ, ಆಯಾಸ, ಮಂಡಿನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಣ್ಣು ಮಂಜಾಗುವಿಕೆ, ಕಿವಿ ಏನೊಂದೂ ಕೇಳದು, ಬಳಲಿದ ಹೃದಯ, ಯಾವಾಗ ಲಬ್ ಡಬ್ ನಿಲ್ಲಿಸುವುದೋ ತಿಳಿಯದು! ಕುತ್ತಿಗೆ ನೋವು, ಬೆನ್ನುನೋವು, ತಿರುಗಿ ನೋಡಲು ಇಡೀ ದೇಹ ಯೂಟರ್ನ್ ಮಾಡಬೇಕು! ಮರೆವು, ಮನೆಯವರ ಹೆಸರೂ ನೆನಪಿರುವುದಿಲ್ಲ

ಕೆ.ಶ್ರೀನಿವಾಸರಾವ್, ಹರಪನಹಳ್ಳಿ

ಇಂದು (ಅ.1) ವಿಶ್ವ ವೃದ್ಧರ ದಿನಾಚರಣೆ. ಆ ಪ್ರಯುಕ್ತ ಈ ಲೇಖನ.

ಮಾನವ ಸಹಜವಾಗಿಯೇ 70ರ ನಂತರ ದುರ್ಬಲನಾಗುತ್ತಾನೆ. ಎಲ್ಲ ವಿಷಯಗಳಲ್ಲಿ ನಿರಾಸಕ್ತಿ, ಆಯಾಸ, ಮಂಡಿನೋವು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಣ್ಣು ಮಂಜಾಗುವಿಕೆ, ಕಿವಿ ಏನೊಂದೂ ಕೇಳದು, ಬಳಲಿದ ಹೃದಯ, ಯಾವಾಗ ಲಬ್ ಡಬ್ ನಿಲ್ಲಿಸುವುದೋ ತಿಳಿಯದು! ಕುತ್ತಿಗೆ ನೋವು, ಬೆನ್ನುನೋವು, ತಿರುಗಿ ನೋಡಲು ಇಡೀ ದೇಹ ಯೂಟರ್ನ್ ಮಾಡಬೇಕು! ಮರೆವು, ಮನೆಯವರ ಹೆಸರೂ ನೆನಪಿರುವುದಿಲ್ಲ. ಆಗಾಗ ಹವಾಮಾನ ವೈಪರೀತ್ಯಗಳಿಂದ ಕೀವುಗುಳ್ಳೆ ಆಗುವಿಕೆ, ಶೀತ, ಜ್ವರ ಒಮ್ಮೊಮ್ಮೆ ಹಸಿವಿನ ಕೊರತೆ, ಮತ್ತೊಮ್ಮೆ ಅಜೀರ್ಣ, ಇನ್ನೂ ಹಲವರಲ್ಲಿ ಖಿನ್ನತೆ! ಇವರಿಗೆ ಜಗತ್ತೇ ಶೂನ್ಯ, ಇಹದ ಪರಿವೆ ಇವರಿಗಿಲ್ಲ.

ಒಂದರ್ಥದಲ್ಲಿ ಅರೆ ಬುದ್ಧಿಮಾಂದ್ಯತೆ, ಅನಿಯಮಿತ ಮೂತ್ರ ವಿಸರ್ಜನೆ. ಇವೆಲ್ಲ ಆರೋಗ್ಯ ಸಂಬಂಧಿ ಸಮಸ್ಯೆಗಳಾದರೆ ಮಾನಸಿಕ ಸಮಸ್ಯೆಗಳು ಹಲವು. ಹಲವು ಮನೆಗಳಲ್ಲಿ ವೃದ್ಧರಿಗೆ ವಿನಾಕಾರಣ ತಾವು ಅನಾಥರೆಂಬ ಅನಾಥಭಾವ. ಯಾರೂ ತಮ್ಮ ಮಾತಿಗೆ ಬೆಲೆ ಕೊಡರು. ಪತ್ನಿ, ಮಕ್ಕಳು ಅಲಕ್ಷಿಸುತ್ತಿzರೆ ಎಂಬ ಸಂಶಯ, ಸಮಾಜದಲ್ಲಿ ಯುವಕರ ಛೇಡಿಸುವಿಕೆ, ಇಷ್ಟದ ಆಹಾರ ತಿನ್ನಲಾಗದ, ಮನ ಬಯಸಿದ ಕೆಲಸ ಮಾಡಲಾಗದ ಅಸಹಾಯಕತೆ.

ಇದನ್ನೂ ಓದಿ: Bengaluru day-care: ಬೆಂಗಳೂರಿನ ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್‌ ಮಷಿನ್‌ಗೆ ತೂರಿಸಿ, ಬಾತ್ರೂಮ್‌ನಲ್ಲಿ ಕೂಡಿ ಹಾಕಿ ಹಿಂಸೆ; ಸಿಬ್ಬಂದಿ ವಿರುದ್ಧ ಎಫ್‌ಐಆರ್‌, Video

ಒಟ್ಟಾರೆ ಪರರ ಹಂಗಿನಲ್ಲಿರುವ ಭಾವ, ಅಸುರಕ್ಷತೆ, ಅದರಲ್ಲೂ ಪತ್ನಿ ಮೊದಲೇ ಗತಿಸಿದ್ದರೆ ಅವರ ನೋವು ಅಧಿಕ. ಹಾಗಾದರೆ ವೃದ್ಧರು ಹೇಗಿರಬೇಕು? ವೃದ್ಧರಿಗೆ ಮಾನಸಿಕ ಸ್ಥೈರ್ಯ ಅತ್ಯಗತ್ಯ. ಸದಾ ಪಾಸಿಟಿವ್ ಯೋಚನೆ ಮಾಡಬೇಕು. ಮನೆಯವರೊಂದಿಗೆ ಬೆರೆತು ನಗುತ್ತಿರಬೇಕು. ಮೊಮ್ಮಕ್ಕ ಳೊಂದಿಗೆ ಆಟ, ಸುತ್ತಾಟ, ಹಾಸ್ಯ, ಪ್ರಮೋದಗಳಲ್ಲಿ ಮಗ್ನರಾಗಿರಬೇಕು.

ಪತ್ನಿ, ಮಗ, ಸೊಸೆಯ ಇಚ್ಛೆಗಳಿಗೆ ವಿರುದ್ಧ ಮಾತಾಡದೇ ಪರಸ್ಪರ ಅನ್ಯೋನ್ಯ ಸಾಧಿಸಬೇಕು. ಬೆಳಿಗ್ಗೆ ಯೋಗ, ವ್ಯಾಯಾಮ, ವಾಕಿಂಗ್ ಜೊತೆಗೆ ಸಂಜೆ ಪಾರ್ಕಲ್ಲಿ ಗೆಳೆಯರೊಂದಿಗೆ ಹರಟಿ ಮನದುಂಬಿ ನಗಬೇಕು. ದಿನಕ್ಕೆ 8 ತಾಸುಗಳ ಸವಿನಿದ್ರೆ ಅಗತ್ಯ. ಟಿವಿಯಲ್ಲಿ ಇಷ್ಟದ ಸಿನೆಮಾ, ಸಂಗೀತ, ಯಕ್ಷಗಾನ ವೀಕ್ಷಣೆ, ಬಿಡುವಿದ್ದಾಗ ಸಂಗೀತ, ವಾದ್ಯಗಳ ವಾದನ ಕೇಳುವಿಕೆ ಒಳ್ಳೆಯದು.

ಮನೆಯವರು ವೃದ್ಧರ ಕುರಿತು ಏನು ಮಾಡಬೇಕು? ತಮ್ಮನ್ನು ಲಾಲಿಸಿ, ಪಾಲಿಸಿ, ವಿದ್ಯೆ ಕೊಡಿಸಿ ಇಂದು ಸಮಾಜದ ಒಬ್ಬ ಸಭ್ಯ ನಾಗರಿಕನನ್ನಾಗಿಸಿದ ಪೋಷಕರ ಕುರಿತು ಮಕ್ಕಳಿಗೆ ಕಕ್ಕುಲತೆ ಅಗತ್ಯ. ಅವರ ಆಸೆ, ಆಕಾಂಕ್ಷೆಗಳಿಗೆ ತಕ್ಕಂತೆ ನಡೆಯಬೇಕು. ಸದಾ ಅವರ ಆರೋಗ್ಯದ ಕುರಿತು ಗಮನಿಸಿ ಚಿಕಿತ್ಸೆ ಒದಗಿಸಬೇಕು. ಅವರಿಗೆ ಗೆಳೆಯರ ಸಹಯೋಗ, ಬಂಧುಗಳ ಭೇಟಿ, ಆಗಾಗ ಪ್ರವಾಸ, ಹೋಟೆಲ್, ಸಿನೆಮಾ, ದೇವಸ್ಥಾನ, ತೀರ್ಥಕ್ಷೇತ್ರ ದರ್ಶನ, ಔಷಧಿಗಳ ವೆಚ್ಚ, ಹೊಸಬಟ್ಟೆ, ಇತರೆಗಳ ಕಡೆ ಗಮನ ಕೊಡಬೇಕು.

ನಿತ್ಯ ಸಂಜೆ ಮನೆಯವರೆಲ್ಲ ಒಂದೆಡೆ ಕುಳಿತು ಹರಟಬೇಕು. ಇದರಿಂದ ಅವರಿಗೆ ತಾವು ವೇಸ್ಟ್ ಬಾಡಿ ಅಲ್ಲ, ತಾನೂ ಉಳಿದವರ ಪ್ರೀತಿಪಾತ್ರ ಎನ್ನುವ ಸವ್ಯ ಭಾವ ಮೂಡಿ ಉಲ್ಲಸಿತರಾಗುತ್ತಾರೆ. ಮಾನಸಿಕ ಸ್ಥೈರ್ಯ ಹೆಚ್ಚಿ ಆಯಸ್ಸು ವೃದ್ಧಿಯಾಗುತ್ತದೆ. ಮಕ್ಕಳು ವೃದ್ಧರ ಆರೋಗ್ಯ ಕುರಿತು ಅವಶ್ಯ ಬೇಕಾದ ಬಿಪಿ ಮಾನಿಟರ್, ಗ್ಲೂಕೋಮೀಟರ್, ಥರ್ಮಾಮೀಟರ್, ಆಕ್ಸಿಮೀಟರ್, ನೆಬ್ಯು ಲೈಜರ್, ಅವಶ್ಯ ಮಾತ್ರೆಗಳನ್ನು ಮನೆಯಲ್ಲಿಯೇ ಇಟ್ಟಿರುವುದು ಒಳಿತು.

ಕೆಲವು ಪೋಷಕರು ಇಂದಿಗೂ ತಮ್ಮ ಮಗಳನ್ನು ಮದುವೆ ಮಾಡಿಕೊಡುವ ಮುನ್ನ ಆ ವರನ ಮನೆಯಲ್ಲಿ ರಾಹುಕೇತು ಇದ್ದಾರೆಯೇ? ಎಂದು ವಿಚಾರಿಸುತ್ತಾರೆ. ರಾಹು ಕೇತು ಎಂದರೆ ವರನ ಪೋಷಕ ವೃದ್ಧರು! ಇತ್ತೀಚೆಗೆ ಆಂಧ್ರಪ್ರದೇಶದಿಂದ ಕಾರಲ್ಲಿ 75 ವರ್ಷದ ತನ್ನ ತಾಯಿಯನ್ನು ಕರೆತಂದು ದ.ಕ.ದ ಬ್ರಹ್ಮಾವರದ ಬಸ್ ನಿಲ್ದಾಣದಲ್ಲಿ ಬಿಟ್ಟು ಓಡಿ ಹೋಗಿದ್ದನಂತೆ ಒಬ್ಬ ಮಹಾಪುರುಷ!

ಒಂದು ಅಂದಾಜಿನ ಪ್ರಕಾರ ಇದೀಗ ವಿಶ್ವದಲ್ಲಿ 173 ಮಿಲಿಯ ವೃದ್ಧರಿದ್ದಾರೆ! ವಿಶ್ವಸಂಸ್ಥೆಯ ಪ್ರಕಾರ 2030ರ ವೇಳೆಗೆ ಇವರ ಸಂಖ್ಯೆ 1.4 ಬಿಲಿಯ ಆಗುವ ಸಂಭವವಿದೆಯಂತೆ! ವಿಶ್ವಸಂಸ್ಥೆ ವೃದ್ಧರ ಆರೋಗ್ಯ, ಹಕ್ಕುಗಳು, ಸುರಕ್ಷತೆ, ಯೋಗಕ್ಷೇಮ ಕುರಿತು ಜನಜಾಗೃತಿ ಮಾಡುತ್ತಿದೆ. ಅಂತೆಯೇ ಪ್ರತಿವರ್ಷ ಅಕ್ಟೋಬರ್ 1ರಂದು ವಿಶ್ವ ವೃದ್ಧರ ದಿನ ಆಚರಿಸಲಾಗುತ್ತಿದೆ. ಮನೆಯಲ್ಲಿ ವೃದ್ಧರಿದ್ದರೆ ಅವರ ಅನುಭವದ ಗಣಿಯಿಂದ ಸೂಕ್ತ ಸಲಹೆ, ಪರಿಹಾರ ದೊರೆಯುತ್ತದೆ.