Bengaluru day-care: ಬೆಂಗಳೂರಿನ ಡೇ-ಕೇರ್‌ನಲ್ಲಿ ಮಕ್ಕಳನ್ನು ವಾಷಿಂಗ್ ಮಷಿನ್‌ಗೆ ತೂರಿಸಿ, ಬಾತ್ರೂಮ್‌ನಲ್ಲಿ ಕೂಡಿ ಹಾಕಿ ಹಿಂಸೆ; ಸಿಬ್ಬಂದಿ ವಿರುದ್ಧ ಎಫ್‌ಐಆರ್, Video
ಬೆಂಗಳೂರಿನ ಎಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ ಆವರಣದಲ್ಲಿರುವ ಬ್ರೂಕ್ಫೀಲ್ಡ್ನಲ್ಲಿರೋ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್‌ನಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಅಳುವ ಪುಟ್ಟ ಮಕ್ಕಳ ಮೇಲೆ ಸಿಬ್ಬಂದಿ ಮೃಗೀಯ ವರ್ತನೆ ತೋರಿದ್ದಾರೆ.
-
ಬೆಂಗಳೂರು: ನಗರದ ಐಟಿ ಕಂಪನಿಯೊಂದರ ಆವರಣದಲ್ಲಿನ ಡೇ-ಕೇರ್ ಸೆಂಟರ್‌ನಲ್ಲಿ (Bengaluru day-care Centre) ಎರಡು ವರ್ಷದ ಪುಟ್ಟ ಮಕ್ಕಳಿಗೆ ದೈಹಿಕ ಹಿಂಸೆ, ಕಿರುಕುಳ ನೀಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಗೆ ಹಿಂಸೆ ನೀಡುವ ವಿಡಿಯೊಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮಕ್ಕಳ ಸಹಾಯವಾಣಿಗೆ ಈ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಡೇ-ಕೇರ್ ಕೇಂದ್ರದ ಐವರು ಆಯಾಗಳ ವಿರುದ್ಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ ಕ್ಯಾಪ್‌ಜೆಮಿನಿ ಆವರಣದಲ್ಲಿರುವ ಬ್ರೂಕ್ಫೀಲ್ಡ್ನಲ್ಲಿರೋ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್‌ನಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಈ ಸೆಂಟರ್‌ನಲ್ಲಿ ಬಿಟ್ಟು ಹೋಗುತ್ತಾರೆ. ಆದರೆ, ಅಲ್ಲಿನ ಆಯಾಗಳು ಮಾತ್ರ ಮಕ್ಕಳ ಮೇಲೆ ಮೃಗೀಯ ವರ್ತನೆ ತೋರಿದ್ದಾರೆ. ಮಕ್ಕಳು ಅಳುವಾಗ ಅಥವಾ ಗಲಾಟೆ ಮಾಡಿದಾಗ ಹಿಂಸೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
🚨The Bengaluru city police have registered a criminal case against five daycare workers at an on-campus creche belonging to Capgemini Technology Services India Limited after allegations that employees’ children were subjected to physical assault, intimidation, and cruelty. The…
— Forum For IT Employees - FITE (@FITEMaharashtra) July 1, 2026
ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕಿ ಹಿಂಸೆ
ವೈರಲ್ ಆಗಿರುವ ವಿಡಿಯೊಗಳು ಭಯಾನಕವಾಗಿವೆ. ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕಿ ಹೆದರಿಸುವುದು, ಬಲವಂತವಾಗಿ ಟಾಯ್ಲೆಟ್ ಜೆಟ್ ಸ್ಪ್ರೇ ಪೈಪ್ ಮೂಲಕ ನೇರವಾಗಿ ಮಕ್ಕಳ ಬಾಯಿಗೆ ನೀರು ಬಿಟ್ಟು ಹಿಂಸೆ ನೀಡುವುದು, ಬಾತ್‌ರೂಮ್‌ನಲ್ಲಿ ಕೂಡಿ ಹಾಕಿ ವಿಕೃತಿ ಮೆರೆದಿರುವುದು ಕಂಡುಬಂದಿದೆ. ಮಕ್ಕಳು ಭಯದಿಂದ ಅಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ವಿಡಿಯೊಗಳು ವೈರಲ್ ಬೆನ್ನಲ್ಲೇ ಮಕ್ಕಳ ಸಹಾಯವಾಣಿಗೆ ದೂರು ಬಂದಿದೆ. ಚೈಲ್ಡ್ ಹೆಲ್ಪ್‌ಲೈನ್ ನೀಡಿದ ದೂರಿನ ಮೇರೆಗೆ ಪೊಲೀಸರು, ಐವರು ಆಯಾಗಳ ವಿರುದ್ಧ ಬಿಎನ್ಎಸ್ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಎಚ್‌ಎಎಲ್ ಪೊಲೀಸರು ವಿಡಿಯೊಗಳನ್ನು ಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.