ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

‘ಸ್ಟಾರೋ ಕ್ಲಾಡಿಯ’ ಎಂಬ ಅಂಬಲಿ ಮೀನು ಕೇವಲ 0.5 ಮಿ.ಮೀ. ಇರುತ್ತದೆ. ಅದೇ ‘ಸಯನಿಯ ಕ್ಯಾಪಿಲ್ಲೇಟ’ ಎಂಬ ಬೃಹತ್ ಅಂಬಲಿ ಮೀನಿನ ಲತಾಬಾಹುಗಳು 100-120 ಅಡಿ ಉದ್ದವಿರುತ್ತವೆ. ಹಾಗಾಗಿ ಕೆಲವರು ಈ ಅಂಬಲಿ ಮೀನನ್ನು ‘ಸಾಗರದ ಅತ್ಯಂತ ಉದ್ದನೆಯ ಜೀವಿ’ ಎಂದು ಕರೆಯುವರು.

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

-

ಹಿಂದಿರುಗಿ ನೋಡಿದಾಗ

(ಭಾಗ-2)

ಸಹಜ ಸಾವಿಲ್ಲದ ಅಮರತ್ವ ವನ್ನು ಪಡೆದಿರುವ ಒಂದು ಜೀವಿಯು ವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿದೆ. ಈ ಜೀವಿಯ ಅಮರತ್ವದ ಕಡೆಗೆ ಒಂದು ಸ್ಥೂಲ ನೋಟವನ್ನು ಹರಿಸೋಣ.

ಅಂಬಲಿ ಮೀನಿಗೂ ಹಾಗೂ ನಾವು ತಿನ್ನುವ ಮೀನಿಗೂ ಯಾವುದೇ ಸಂಬಂಧವಿಲ್ಲ. ‘ಮೀನು’ ಎಂಬ ಹೆಸರಿದ್ದರೂ ಇದು ಮೀನಲ್ಲ. ಅಂಬಲಿ ಮೀನುಗಳು ಪ್ರಧಾನವಾಗಿ ಸಮುದ್ರಜೀವಿಗಳು. ಸಿಹಿ ನೀರಿನಲ್ಲಿಯೂ ಕೆಲವು ಪ್ರಭೇದಗಳು ಜೀವಿಸುತ್ತವೆ. ಇವು ‘ನೈಡೇರಿಯ’ ಎನ್ನುವ ವಂಶಕ್ಕೆ ಸೇರಿವೆ. ಇವುಗಳ ಒಡಲು ಗಂಟೆಯ ಹಾಗೆ ಪಾರದರ್ಶಕ ವಾಗಿರುತ್ತದೆ.

ಗಂಟೆಯ ಅಂಚಿನಿಂದ ಕೆಲವು ಸಲ ನೂರಾರು ಲತಾ ಬಾಹುಗಳು ಹುಟ್ಟಿರುತ್ತವೆ. ಈ ಬಾಹುಗಳ ಮೂಲ ಕೆಲಸ ಆಹಾರ ಸಂಪಾದನೆ. ಕೆಲವು ಬಾಹುಗಳಲ್ಲಿ ‘ನೈಡೋಸಿಸ್ಟ್’ ಗುಂಡುಗಳು (ಬುಲೆಟ್ಸ್) ಇರುತ್ತವೆ. ಹತ್ತಿರ ಬಂದ ಶತ್ರುಗಳತ್ತ ಈ ಗುಂಡುಗಳನ್ನು ಹಾರಿಸಿ ಅವನ್ನು ಓಡಿಸುತ್ತವೆ. ಈ ಗುಂಡುಗಳು ಒಂದು ವೇಳೆ ಮನುಷ್ಯರಿಗೇನಾದರೂ ತಾಗಿದರೆ, ಅವು ತೀವ್ರ ಸ್ವರೂಪದ ಅಲರ್ಜಿಯನ್ನು ಉಂಟುಮಾಡಬಲ್ಲವು.

ಕೆಲವು ಸಲ ಸಾವಿಗೂ ಕಾರಣವಾಗುತ್ತದೆ. ‘ಸ್ಟಾರೋ ಕ್ಲಾಡಿಯ’ ಎಂಬ ಅಂಬಲಿ ಮೀನು ಕೇವಲ 0.5 ಮಿ.ಮೀ. ಇರುತ್ತದೆ. ಅದೇ ‘ಸಯನಿಯ ಕ್ಯಾಪಿಲ್ಲೇಟ’ ಎಂಬ ಬೃಹತ್ ಅಂಬಲಿ ಮೀನಿನ ಲತಾಬಾಹುಗಳು 100-120 ಅಡಿ ಉದ್ದವಿರುತ್ತವೆ. ಹಾಗಾಗಿ ಕೆಲವರು ಈ ಅಂಬಲಿ ಮೀನನ್ನು ‘ಸಾಗರದ ಅತ್ಯಂತ ಉದ್ದನೆಯ ಜೀವಿ’ ಎಂದು ಕರೆಯುವರು.

ಜೀವನಚಕ್ರ

ಅಂಬಲಿ ಮೀನಿನ ಜೀವನಚಕ್ರದಲ್ಲಿ ಎರಡು ಪ್ರಮುಖ ಘಟ್ಟಗಳಿವೆ. ವಯಸ್ಕ ಹಂತದ ‘ಮೆಡುಸ’ ಎನ್ನುವ ಘಟ್ಟ ಹಾಗೂ ಬೆಳವಣಿಗೆಯ ಹಂತವನ್ನು ಸೂಚಿಸುವ ‘ಪಾಲಿಪ್’ ಹಂತ. ಮೆಡುಸ ಎಂದರೆ ಗ್ರೀಕ್ ಪುರಾಣದಲ್ಲಿ ಬರುವ ಓರ್ವ ಸ್ತ್ರೀ ದೈತ್ಯದೇಹಿ. ಈಕೆಯ ತಲೆಯಲ್ಲಿ ಕೂದಲು ಇರಬೇಕಾದ ಕಡೆಯಲ್ಲಿ ವಿಷಸರ್ಪಗಳು ಇದ್ದು ಅವು ಫೂತ್ಕರಿಸು ತ್ತಿದ್ದವಂತೆ!

ಇದನ್ನೂ ಓದಿ: Dr N Someshwara Column: ಹುಟ್ಟು, ಸಾವು ಮತ್ತು ಚಿರಂಜೀವತ್ವ !

ಅಂಬಲಿ ಮೀನಿನ ಮೆಡುಸ ಅಂಚಿನಿಂದ ಹೊರಚಾಚಿರುವ ಲತಾಬಾಹುಗಳು ವಿಷಪೂರಿತ ಸರ್ಪಗಳ ಹಾಗೆ ಕಂಡ ಕಾರಣ ಲಿನೇಯಸ್ 1752ರಲ್ಲಿ ಅಂಬಲಿ ಮೀನಿನ ವಯಸ್ಕ ಹಂತ ವನ್ನು ಮೆಡುಸ ಎಂದು ಕರೆದನು. ಈ ಮೆಡುಸವನ್ನು ನಾವು ಕನ್ನಡದಲ್ಲಿ ‘ಶಿರ’ ಎಂದು ಕರೆಯಬಹುದು. ಈಗ ಅಂಬಲಿಮೀನುಗಳ ಜೀವನಚಕ್ರವನ್ನು ಸ್ಥೂಲವಾಗಿ ಗಮನಿಸೋಣ.

? ಅಂಬಲಿ ಮೀನುಗಳು ಲೈಂಗಿಕವಾಗಿ (ಸೆಕ್ಷುವಲ್) ಹಾಗೂ ಅಲೈಂಗಿಕವಾಗಿಯೂ (ಏಸೆಕ್ಷುವಲ್) ಸಂತಾನವರ್ಧನೆಯನ್ನು ನಡೆಸುತ್ತವೆ.

? ಅಂಬಲಿ ಮೀನಿನಲ್ಲಿ ಲಿಂಗಗಳು ಪ್ರತ್ಯೇಕ. ಗಂಡು ಹಾಗೂ ಹೆಣ್ಣು ಅಂಬಲಿ ಮೀನು ಗಳಿರುತ್ತವೆ.

? ವಯಸ್ಕ ಹೆಣ್ಣು ಅಂಡಗಳನ್ನು ನೀರಿನೊಳಗೆ ವಿಸರ್ಜಿಸುತ್ತದೆ. ಅದೇ ವೇಳೆಗೆ ಗಂಡು ಅಂಬಲಿ ಮೀನು ವೀರ್ಯಾಣುಗಳನ್ನು ವಿಸರ್ಜಿಸುತ್ತದೆ.

? ನೀರಿನಲ್ಲಿ ವೀರ್ಯಾಣು ಹಾಗೂ ಅಂಡಾಣುಗಳ ಸಂಯೋಗವಾಗುತ್ತದೆ. ಯುಗ್ಮಜವು (ಜೈಗೋಟ್) ಬೆಳೆಯುತ್ತದೆ.

? ಯುಗ್ಮಜವು ಬೆಳೆದು ಪ್ಲಾನ್ಯುಲ ಎನ್ನುವ ಮರಿಹುಳು (ಲಾರ್ವ) ಆಗುತ್ತದೆ.

? ಪ್ಲಾನ್ಯುಲ ನೇರವಾಗಿ ಸಮುದ್ರ ತಳವನ್ನು ತಲುಪುತ್ತದೆ. ಬೇರುಬಿಡುತ್ತದೆ, ಬೆಳೆಯುತ್ತದೆ. ಇದನ್ನು ‘ಪಾಲಿಪ್’ ಎಂದು ಕರೆಯುವರು.

? ಪಾಲಿಪ್ ಕಾಯ ನೀಳವಾಗಿದೆ. ಪಾರದರ್ಶಕವಾಗಿದೆ. ತುದಿಯಲ್ಲಿ ಬಾಯಿಯಿದೆ. ಸುತ್ತಲೂ ಲತಾಪಾದಗಳ ಪೂರ್ವರೂಪವಿದೆ. ಹತ್ತಿರಬಂದ ಆಹಾರ ಪದಾರ್ಥಗಳನ್ನು ಸೆಳೆದು ತಿನ್ನುತ್ತವೆ. ಹೀಗೆ ಆಹಾರವನ್ನು ಸೇವಿಸಿ ಚೆನ್ನಾಗಿ ಬೆಳೆಯುತ್ತವೆ.

? ಒಂದು ಹಂತಕ್ಕೆ ಬೆಳೆದ ಪಾಲಿಪ್ ಅಲೈಂಗಿಕವಾಗಿ ಸಂತಾನವರ್ಧನೆಯನ್ನು ನಡೆಸುತ್ತದೆ.

? ಮೊದಲು ಪಾಲಿಪ್ ಒಡಲು ಉಂಗುರಮಯವಾಗಿರುತ್ತದೆ. ಕ್ರಮೇಣ ಒಡಲಿನಿಂದ ಒಂದೊಂದೇ ಉಂಗುರವು ಪ್ರತ್ಯೇಕಗೊಳ್ಳುತ್ತದೆ. ಸುಮಾರು 1 ಮಿ.ಮೀ. ಗಾತ್ರದ ಈ ಉಂಗುರ ರೂಪದ ಮೊಗ್ಗು ನೀರಿನಲ್ಲಿ ಈಜುತ್ತಾ ಸಾಗುತ್ತದೆ.

? ಈ ಮೊಗ್ಗು ಮೆಡುಸ ಆಗಿ ಬೆಳೆಯುತ್ತದೆ. ಸುಮಾರು ಒಂದು ತಿಂಗಳಿನವರೆಗೆ ಆಹಾರ ವನ್ನು ಸೇವಿಸಿ ಬೆಳೆದು ಸಂತಾನವರ್ಧನೆಯನ್ನು ನಡೆಸುವ ಸಾಮರ್ಥ್ಯವನ್ನು ಗಳಿಸುತ್ತದೆ.

ಇದುವೇ ವಯಸ್ಕ ಮೆಡುಸ. ಇದು ಅಂಡಾಣು ಇಲ್ಲವೇ ವೀರ್ಯಾಣುಗಳನ್ನು ಉತ್ಪಾದಿ ಸುವುದರ ಮೂಲಕ ಮತ್ತೆ ಮತ್ತೆ ಸಂತಾನವರ್ಧನಾ ಚಕ್ರವನ್ನು ಪುನರಾವರ್ತಿಸುತ್ತದೆ.

ಟುರ್ರಿಟಾಪ್ಸಿಸ್ ನ್ಯೂಟ್ರಿಕ್ಯುಲ

ಟುರ್ರಿಟಾಪ್ಸಿಸ್ ನ್ಯೂಟ್ರಿಕ್ಯುಲ ಎನ್ನುವುದು ಸಹಾ ಒಂದು ಅಂಬಲಿಮೀನು! ಟುರ್ರಿಟಾ ಪ್ಸಿಸ್ ಮೂಲತಃ ಕ್ಯಾರೆಬಿ ಯನ್ ಸಮುದ್ರದ ಜೀವಿ. ಈಗ ಈ ಜೀವಿಯನ್ನು ವಿಶ್ವದ ಎಲ್ಲ ಸಾಗರ ಹಾಗೂ ಸಮುದ್ರಗಳಲ್ಲಿ ನೋಡಬಹುದು. ಘಂಟಾಕೃತಿಯ ದೇಹ. ಸುಮಾರು 4.5 ಮಿ.ಮೀ. ಎತ್ತರ ಹಾಗೂ ಅಷ್ಟೇ ಅಗಲವಿರುತ್ತದೆ.

ಒಡಲು ಪಾರದರ್ಶಕ. ಜಠರಾಂಗವು ಸ್ವಲ್ಪ ದಟ್ಟವಾಗಿರುತ್ತದೆ. ಮರಿ ಅಂಬಲಿ ಮೀನು ಸುಮಾರು 1 ಮಿ.ಮೀ. ಇರುತ್ತದೆ. ಘಂಟಾಕೃತಿ ಒಡಲಂಚಿನಲ್ಲಿ ಸಮಾನಾಂತರವಾಗಿ ಎಂಟು ಲತಾಬಾಹುಗಳು (ಟೆಂಟಕಲ್ಸ್) ಇರುತ್ತವೆ. ವಯಸ್ಕ ಅಂಬಲಿ ಮೀನಿನ ಅಂಚಿನಲ್ಲಿ ಲತಾಪಾದಗಳ ಸಂಖ್ಯೆ 80-90ರವರೆಗೆ ಇರಬಹುದು.

ಜೈವಿಕ ಚಿರಂಜೀವತ

? ಅಂಬಲಿ ಮೀನುಗಳ ಜಗತ್ತು ಸಾಕಷ್ಟು ವೈವಿಧ್ಯಮಯವಾಗಿದೆ. ಅಂಬಲಿ ಮೀನುಗಳು ಕೆಲವು ಗಂಟೆಗಳಿಂದ ಹಿಡಿದು ಹಲವು ತಿಂಗಳುಗಳ ವರೆಗೆ ಬದುಕಿರುತ್ತವೆ.

? ಮೆಡುಸ ಅಂಬಲಿಮೀನು ತನ್ನ ಸಂತಾನವರ್ಧನಾ ಜವಾಬ್ದಾರಿಯನ್ನು ಪೂರ್ಣ ಗೊಳಿಸಿರುವ ಕಾರಣ, ಅದರ ಒಡಲು ಕ್ರಮೇಣ ಶಿಥಿಲವಾಗಿ ನಾಶವಾಗಿ ಬಿಡುತ್ತದೆ. ‘ಜಾತಸ್ಯ ಮರಣಂ ಧ್ರುವಂ’- ಹುಟ್ಟಿದ ಜೀವಿ ಸಾಯಲೇಬೇಕು!

? ಮೆಡುಸ ಹಂತದಲ್ಲಿರುವ ಚಿರಂಜೀವಿ ಅಂಬಲಿ ಮೀನು ಆಹಾರಾಂಶಗಳ ಕೊರತೆ ಅಥವಾ ಇನ್ನಿತರ ಅನಾನುಕೂಲಕರ ಪರಿಸ್ಥಿತಿಯು ರೂಪುಗೊಂಡಾಗ, ಮೆಡುಸ ಹಂತ ವನ್ನು ಬಿಟ್ಟು ತನ್ನ ಪೂರ್ವರೂಪವಾದ ಪಾಲಿಪ್ ಹಂತಕ್ಕೆ ಮರಳುತ್ತದೆ.

? ಪಾಲಿಪ್ ಹಂತದಲ್ಲಿ ಜೀವವನ್ನು ಹಿಡಿದಿಟ್ಟುಕೊಳ್ಳುತ್ತದೆ.

? ಮತ್ತೆ ಅನುಕೂಲಕರ ಪರಿಸ್ಥಿತಿ ರೂಪುಗೊಂಡಾಗ, ಆಹಾರವನ್ನು ಸೇವಿಸಿ ಬೆಳೆಯುತ್ತದೆ. ಅಲೈಂಗಿಕವಾಗಿ ಉಂಗುರ ರೂಪದ ಮೊಗ್ಗುಗಳನ್ನು ರೂಪಿಸುತ್ತದೆ.

ಮೊಗ್ಗುಗಳು ಪ್ರತ್ಯೇಕಗೊಳ್ಳುತ್ತವೆ. ನೀರಿನಲ್ಲಿ ಈಜುತ್ತಾ, ಮತ್ತೆ ಸ್ವತಂತ್ರ ಬದುಕನ್ನು ನಡೆಸುತ್ತ, ವಯಸ್ಕ ಹಂತವನ್ನು ತಲುಪಿ ಲೈಂಗಿಕವಾಗಿ ಸಂತಾನ ವರ್ಧನೆಯಲ್ಲಿ ತೊಡಗು ತ್ತವೆ. ಮತ್ತೆ ಏನಾದರೂ ಅನಾನುಕೂಲಕರ ಪರಿಸ್ಥಿತಿ ರೂಪುಗೊಂಡರೆ ಇದೇ ಮೆಡುಸಗಳು ಮತ್ತೆ ಪಾಲಿಪ್ ಹಂತಕ್ಕೆ ಹಿಂದಿರುಗಬಲ್ಲವು.

ಅನುಕೂಲಕರ ಪರಿಸ್ಥಿತಿ ರೂಪುಗೊಳ್ಳುವ ವರೆಗೂ ಕಾಯಬಲ್ಲವು. ಮತ್ತೆ ಹೊಸ ಬದುಕ ನ್ನು ಆರಂಭಿಸಬಲ್ಲವು. ಹೀಗೆ ಬಾಲ್ಯ-ಯೌವನಗಳು ನಿರಂತರವಾಗಿ ಮುಂದುವರಿಯು ತ್ತಲೇ ಇರುವ ಕಾರಣ ಇವುಗಳಿಗೆ ಸಹಜ ಸಾವು ಎನ್ನುವುದಿಲ್ಲ.

ಹಾಗಾಗಿ ಇವನ್ನು ‘ಜೈವಿಕ ಚಿರಂಜೀವಿಗಳು’ (ಬಯಲಾಜಿಕಲ್ ಇಮ್ಮಾರ್ಟಲ್ಸ್) ಎಂದು ಕರೆಯಬಹುದು.

? ಚಿರಂಜೀವಿ ಅಂಬಲಿಮೀನು ಹೇಗೆ ಮೆಡುಸ ಹಂತದಿಂದ ಪಾಲಿಪ್ ಹಂತಕ್ಕೆ ಮರಳುತ್ತದೆ ಎನ್ನುವುದು ಕುತೂಹಲಕರ ವಿಷಯವಾಗಿದೆ.

? ಅನಾನುಕೂಲಕರ ಪರಿಸ್ಥಿತಿಯು ಮೂಡಿದಾಗ ಸಾಮಾನ್ಯವಾಗಿ ಅಂಬಲಿಮೀನಿನ ಘಂಟಾಕೃತಿಯ ಒಡಲು ಶಿಥಿಲವಾಗುತ್ತದೆ. ಆನಂತರ ಲತಾಪಾದಗಳೆಲ್ಲ ಶಿಥಿಲವಾಗಿ ಕರಗಿಹೋಗುತ್ತವೆ. ಈ ಕರಗುವಿಕೆ ‘ಅಪೋಪ್ಟೋಸಿಸ್’ ಎನ್ನುವ ಸ್ವಯಂ ಜೀರ್ಣಕಾರಿ ಕ್ರಿಯೆಯ ಮೂಲಕ ನಡೆಯುತ್ತದೆ. ಅಂತಿಮವಾಗಿ ಅಂಬಲಿ ಮೀನು ಕೇವಲ ಪ್ಲಾನ್ಯುಲ ಗಾತ್ರಕ್ಕಿಳಿದು ಸಮುದ್ರ ತಳವನ್ನು ಮುಟ್ಟುತ್ತದೆ, ಬೇರು ಬಿಡುತ್ತದೆ, ಬೇರನ್ನು ಹರಡುತ್ತದೆ. ಬೇರಿನಿಂದ ಮತ್ತೆ ಪಾಲಿಪ್ ರೂಪುಗೊಂಡು ಬೆಳೆಯಲಾರಂಭಿಸುತ್ತದೆ.

ಟ್ರಾನ್ಸ್‌ಡಿಫರೆನ್ಷಿಯೇಶನ್

? ವಯಸ್ಕ ಹಂತದಲ್ಲಿದ್ದ ಅಂಬಲಿಮೀನಿನಲ್ಲಿರುವ ಜೀವಕೋಶಗಳು ‘ಟ್ರಾನ್ಸ್‌ಡಿಫರೆನ್ಷಿ ಯೇಶನ್’ ಎನ್ನುವ ಪ್ರಕ್ರಿಯೆಯ ಮೂಲಕ ಮತ್ತೆ ಪಾಲಿಪ್ ಹಂತಕ್ಕೆ ಮರಳುತ್ತವೆ.

? ಒಂದು ವಯಸ್ಕ ಕಾಯಕೋಶವು ಮತ್ತೊಂದು ವಯಸ್ಕ ಕಾಯಕೋಶಕ್ಕೆ ನೇರವಾಗಿ ಜನ್ಮ ನೀಡುವುದೇ ಈ ಪ್ರಕ್ರಿಯೆಯ ತಿರುಳು.? ಒಂದು ಕ್ಯಾನ್ಸರ್ ಜೀವಕೋಶವು ಮತ್ತೊಂದು ಕ್ಯಾನ್ಸರ್ ಜೀವಕೋಶಕ್ಕೆ ಜನ್ಮನೀಡುತ್ತದೆ. ಅತ್ಯಂತ ವೇಗವಾಗಿ, ಯಾವುದೇ ತಪ್ಪುಗಳಿಲ್ಲದೇ, ಕೇವಲ ಕ್ಯಾನ್ಸರ್ ಜೀವಕೋಶಗಳಿಗೇ ಜನ್ಮ ನೀಡುತ್ತಾ ಹೋಗುತ್ತದೆ. ಹೀಗೆ ಜನ್ಮನೀಡುವ ಸಾಮರ್ಥ್ಯ ಬಹುಶಃ ಸದಾ ಕಾಲಕ್ಕೂ ನಡೆಯಬಲ್ಲದು. ಅಂದರೆ ಒಂದರ್ಥ ದಲ್ಲಿ ಕ್ಯಾನ್ಸರ್ ಜೀವಕೋಶಗಳೂ ಚಿರಂಜೀವಕೋಶಗಳು!

ಆದರೆ ಈ ಎಲ್ಲ ಜೀವಕೋಶಗಳು ಅಸಹಜವಾದವು. ಇಂಥ ಅಸಹಜ ಜೀವಕೋಶಗಳು ನಮಗೆ ಅನುಪಯುಕ್ತ ಹಾಗೂ ಮಾರಕ.

? ‘ಟ್ರಾನ್ಸ್‌ಡಿಫರೆನ್ಷಿಯೇಶನ್’ ಪ್ರಕ್ರಿಯೆಯಲ್ಲಿ ಹೊಸ ಹೊಸ ಜೀವಕೋಶಗಳು ಹುಟ್ಟುತ್ತವೆ. ಆದರೆ ಇವೆಲ್ಲ ಆರೋಗ್ಯಕರ ಜೀವಕೋಶಗಳು. ಹೊಸ ಸಂತಾನವನ್ನು ರೂಪಿಸುವ ಜೀವ ಕೋಶಗಳು. ಮಾತೃಜೀವಿಗೂ ಹಾಗೂ ಸಂತಾನಕ್ಕೂ ಯಾವುದೇ ವ್ಯತ್ಯಾಸವಿರುವುದಿಲ್ಲ, ಏಕರೂಪವಾಗಿರುತ್ತವೆ.

ಭವಿಷ್ಯ

ಅನಾದಿ ಕಾಲದಿಂದಲೂ ಮನುಷ್ಯನಿಗೆ ಚಿರಂಜೀವಿಯಾಗುವ ಆಸೆ. ಆದರೆ ಚಿರಂಜೀವಿ ಯಾಗುವ ದಿಶೆಯಲ್ಲಿ ನಡೆಸಬಹುದಾದ ಪ್ರಯೋಗಗಳ ಬಗ್ಗೆ ಪರ- ವಿರೋಧದ ಧ್ವನಿ ಗಳೆದ್ದಿವೆ. ವಿಜ್ಞಾನಿಗಳು ದೀರ್ಘಾಯಸ್ಸನ್ನು ನೀಡುವುದು ಅಥವಾ ವೃದ್ಧಾಪ್ಯವನ್ನು ನಿಧಾನಗೊಳಿಸುವುದು ಸಾಧ್ಯ ಎಂದು ನಂಬಿದ್ದಾರೆ.

ಅಲ್ಲದೆ ಒಂದಲ್ಲ ಒಂದು ದಿನ ಸಾವನ್ನು ಗೆಲ್ಲಬಹುದು ಎಂಬ ಕನಸನ್ನೂ ಕಾಣುತ್ತಿದ್ದಾರೆ. 2012ನೆಯ ವರ್ಷದಲ್ಲಿ ಸಾವನ್ನು ಗೆಲ್ಲಬಲ್ಲ ಪ್ರಯೋಗಗಳು ನಡೆಯಬೇಕು ಎಂದು ರಷ್ಯ, ಅಮೆರಿಕ, ನೆದರ್ಲ್ಯಾಂಡ್ಸ್ ಹಾಗೂ ಇಸ್ರೇಲ್ ದೇಶಗಳು ಬಹಿರಂಗವಾಗಿ ಬೆಂಬಲವನ್ನು ಸೂಚಿಸಿವೆ. ಹಾಗಾಗಿ ಈ ದಿಶೆಯಲ್ಲಿ ಪ್ರಯೋಗಗಳು ಆರಂಭವಾಗಬಹುದು ಎಂದು ಜನಸಾಮಾನ್ಯರು, ವಿಜ್ಞಾನಿಗಳು ಹಾಗೂ ರಾಜಕಾರಣಿಗಳು ನಿರೀಕ್ಷಿಸುತ್ತಿದ್ದಾರೆ.