ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Sadhanashree Column: ವರ್ಷಾ ಋತುಚರ್ಯೆಯಲ್ಲಿ ಅಡಗಿರುವ ಆಯುರ್ವೇದದ ಜ್ಞಾನ

ಗಮನಿಸಿ ನೋಡಿ. ಮೊದಲ ಮಳೆ ಸುರಿದ ತಕ್ಷಣ ಪಕ್ಷಿಗಳ ಹಾರಾಟವೂ ಬದಲಾಗುತ್ತದೆ. ಇರುವೆಗಳು ತಮ್ಮ ಗೂಡುಗಳನ್ನು ಎತ್ತರದ ಕಡೆಗೆ ಸ್ಥಳಾಂತರಿಸುತ್ತವೆ. ಅನೇಕ ಪ್ರಾಣಿಗಳು ತಮ್ಮ ಆಹಾರದ ಪ್ರಮಾಣವನ್ನು ತಾನಾಗಿಯೇ ಕಡಿಮೆ ಮಾಡಿಕೊಳ್ಳುತ್ತವೆ. ಏಕೆಂದರೆ ಪ್ರಕೃತಿಯೇ ಅವುಗಳಿಗೆ ‘ಈಗ ಜೀರ್ಣಶಕ್ತಿ ಕಡಿಮೆಯಾಗಿದೆ’ ಎಂಬ ಸಂದೇಶವನ್ನು ನೀಡುತ್ತದೆ.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಒಮ್ಮೆ ಒಬ್ಬ ಶಿಷ್ಯನು ತನ್ನ ಗುರುಗಳನ್ನು ಕೇಳಿದ: ಗುರುಗಳೇ, ಪ್ರಕೃತಿಯಲ್ಲಿ ಪ್ರಾಣಿಗಳು ವೈದ್ಯ ರನ್ನು ಕಾಣುವುದಿಲ್ಲ. ಹಾಗಿದ್ದರೂ ಅವು ಹೇಗೆ ಆರೋಗ್ಯವಾಗಿರುತ್ತವೆ? ಗುರುಗಳು ಮುಗುಳ್ನಗುತ್ತಾ ಉತ್ತರಿಸಿದರು: ಅವು ಪ್ರಕೃತಿಯ ಮಾತನ್ನು ಕೇಳುತ್ತವೆ; ಮನುಷ್ಯ ಮಾತ್ರ ತನ್ನ ನಾಲಿಗೆಯ ಮಾತನ್ನು ಕೇಳುತ್ತಾನೆ.

ಈ ಮಾತಿನಲ್ಲಿಯೇ ವರ್ಷಾ ಋತುಚರ್ಯೆಯ ಸಾರ ಅಡಗಿದೆ.

ಗಮನಿಸಿ ನೋಡಿ. ಮೊದಲ ಮಳೆ ಸುರಿದ ತಕ್ಷಣ ಪಕ್ಷಿಗಳ ಹಾರಾಟವೂ ಬದಲಾಗುತ್ತದೆ. ಇರುವೆ ಗಳು ತಮ್ಮ ಗೂಡುಗಳನ್ನು ಎತ್ತರದ ಕಡೆಗೆ ಸ್ಥಳಾಂತರಿಸುತ್ತವೆ. ಅನೇಕ ಪ್ರಾಣಿಗಳು ತಮ್ಮ ಆಹಾರ ದ ಪ್ರಮಾಣವನ್ನು ತಾನಾಗಿಯೇ ಕಡಿಮೆ ಮಾಡಿಕೊಳ್ಳುತ್ತವೆ. ಏಕೆಂದರೆ ಪ್ರಕೃತಿಯೇ ಅವುಗಳಿಗೆ ‘ಈಗ ಜೀರ್ಣಶಕ್ತಿ ಕಡಿಮೆಯಾಗಿದೆ’ ಎಂಬ ಸಂದೇಶವನ್ನು ನೀಡುತ್ತದೆ.

ಆದರೆ ನಾವು ಮಾತ್ರ ಮಳೆ ಬಂತು ಎಂದರೆ ಬಿಸಿ ಬಿಸಿ ಬಜ್ಜಿ, ಪಕೋಡ, ಎಣ್ಣೆಯಲ್ಲಿ ಕರಿದ ತಿಂಡಿ ಗಳು, ಸಿಹಿತಿಂಡಿಗಳು ಹಾಗೂ ತಂಪು ಪಾನೀಯಗಳತ್ತ ಆಕರ್ಷಿತರಾಗುತ್ತೇವೆ. ನಾಲಿಗೆಗೆ ಕ್ಷಣಿಕ ಸಂತೋಷ ಸಿಕ್ಕರೂ, ಅದರ ಪರಿಣಾಮವನ್ನು ಜಠರಾಗ್ನಿಯೇ ಅನುಭವಿಸಬೇಕಾಗುತ್ತದೆ. ಆಯುರ್ವೇದವು ಸಾವಿರಾರು ವರ್ಷಗಳ ಹಿಂದೆಯೇ ಮಳೆಗಾಲದಲ್ಲಿ ಜಠರಾಗ್ನಿ ದುರ್ಬಲ ವಾಗುತ್ತದೆ ಎಂದು ಹೇಳಿರುವುದು ಇದೇ ಕಾರಣಕ್ಕೆ.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಮಳೆಗಾಲದಲ್ಲಿ ನದಿಗಳು, ಕೆರೆಗಳು ಹಾಗೂ ಭೂಮಿಯ ನೀರು ಮಣ್ಣಿನ ಸಂಪರ್ಕದಿಂದ ಗುಣಗಳಲ್ಲಿ ಬದಲಾವಣೆಯನ್ನು ಹೊಂದುತ್ತವೆ ಎಂದು ಆಯುರ್ವೇದ ಗ್ರಂಥಗಳು ಉಲ್ಲೇಖಿಸುತ್ತವೆ. ಅದಕ್ಕಾಗಿಯೇ ಈ ಕಾಲದಲ್ಲಿ ನೀರನ್ನು ಕುದಿಸಿ ಕುಡಿಯುವುದು, ಆಹಾರ ವನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಹಾಗೂ ಹೊಸದಾಗಿ ಸಿದ್ಧ ಪಡಿಸಿದ ಊಟಕ್ಕೆ ಆದ್ಯತೆ ನೀಡುವುದು ಕೇವಲ ಸಂಪ್ರದಾಯವಲ್ಲ, ವೈಜ್ಞಾನಿಕ ಜೀವನಶೈಲಿಯೂ ಹೌದು.

ಇದನ್ನೂ ಓದಿ: Dr Sadhanashree Column: ಮೂತ್ರಪಾನ: ಔಷಧವೇ ? ಅಪಾಯವೇ ? ಆಯುರ್ವೇದದ ಉತ್ತರ !

ಪ್ರಕೃತಿಯ ಪ್ರತಿಯೊಂದು ಬದಲಾವಣೆಯೂ ನಮಗೆ ಒಂದು ಸಂದೇಶವನ್ನು ನೀಡುತ್ತದೆ- ನನ್ನೊಂದಿಗೆ ಹೊಂದಿಕೊಂಡು ಬದುಕು. ಋತುಗಳಿಗೆ ಅನುಗುಣವಾಗಿ ನಮ್ಮ ಆಹಾರ, ನಿದ್ರೆ, ವ್ಯಾಯಾಮ ಹಾಗೂ ದಿನಚರಿಯನ್ನು ಬದಲಾಯಿಸಿಕೊಂಡಾಗ, ಆರೋಗ್ಯವನ್ನು ಕಾಪಾಡಿ ಕೊಳ್ಳಲು ಹೆಚ್ಚು ಶ್ರಮಪಡ ಬೇಕಾಗುವುದಿಲ್ಲ. ಪ್ರಕೃತಿಯೇ ನಮ್ಮ ಅತ್ಯುತ್ತಮ ವೈದ್ಯಳಾಗಿ ಬಿಡುತ್ತಾಳೆ.

ಇನ್ನು ಮಳೆಗಾಲದ ವಿಷಯಕ್ಕೆ ಬರುವುದಾದರೆ, ಮಳೆ ಹನಿಗಳ ಸದ್ದು, ತಂಪಾದ ಗಾಳಿ, ಹಸಿರಿ ನಿಂದ ಕಂಗೊಳಿಸುವ ಪ್ರಕೃತಿ- ವರ್ಷಾಕಾಲದ ಸೌಂದರ್ಯವನ್ನು ವರ್ಣಿಸಲು ಮಾತುಗಳೇ ಸಾಲುವುದಿಲ್ಲ. ಆದರೆ ಪ್ರಕೃತಿ ಹೊರಗೆ ಎಷ್ಟು ಆನಂದವನ್ನು ಉಂಟುಮಾಡುತ್ತದೆಯೋ, ಅಷ್ಟೇ ದೊಡ್ಡ ಬದಲಾವಣೆ ಗಳನ್ನು ಅದು ನಮ್ಮ ದೇಹದೊಳಗೂ ಉಂಟುಮಾಡುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಇದೇ ಕಾರಣಕ್ಕೆ ಮಳೆಗಾಲದಲ್ಲಿ ಅಜೀರ್ಣ, ಹೊಟ್ಟೆಯ ತೊಂದರೆಗಳು, ಶೀತ-ಕೆಮ್ಮು, ಕೀಲುನೋವು, ಚರ್ಮದ ಸಮಸ್ಯೆಗಳು ಹಾಗೂ ಸೋಂಕುಗಳು ಹೆಚ್ಚಾಗಿ ಕಾಣಿಸಿಕೊಳ್ಳು ತ್ತವೆ.

ಆಯುರ್ವೇದವು ಈ ಬದಲಾವಣೆಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಗುರುತಿಸಿ, ವರ್ಷಾ ಕಾಲದಲ್ಲಿ ಹೇಗೆ ಆಹಾರ-ವಿಹಾರವನ್ನು ಬದಲಾಯಿಸಿಕೊಳ್ಳಬೇಕು ಎಂಬುದನ್ನು ವರ್ಷಾ ಋತುಚರ್ಯೆ ಎಂಬ ಸುಂದರ ಪರಿಕಲ್ಪನೆಯ ಮೂಲಕ ವಿವರಿಸಿದೆ.

food

ಮಳೆಗಾಲದಲ್ಲಿ ದೇಹ ಏನಾಗುತ್ತದೆ?

ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ದೇಹದಲ್ಲಿಯೂ ಕ್ಲೇದ (ದ್ರವಾಂಶ) ಹೆಚ್ಚಾಗು ತ್ತದೆ. ಜಠರಾಗ್ನಿ ದುರ್ಬಲವಾಗುತ್ತದೆ. ಹಸಿವು ಕಡಿಮೆಯಾಗುತ್ತದೆ. ದೇಹದ ಸಹಜ ಬಲ ಕುಂದುತ್ತದೆ. ಮೂರು ದೋಷಗಳಲ್ಲಿಯೂ ಅಸಮತೋಲನ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಈ ಸಮಯದಲ್ಲಿ ಸಾಮಾನ್ಯ ದಿನಗಳಂತೆ ಆಹಾರ ಸೇವಿಸುವುದಕ್ಕಿಂತ ಋತುವಿಗೆ ಅನುಗುಣವಾಗಿ ಕೆಲವು ಬದಲಾವಣೆ ಗಳನ್ನು ಮಾಡಿಕೊಳ್ಳುವುದು ಆರೋಗ್ಯ ರಕ್ಷಣೆಗೆ ಅತ್ಯಗತ್ಯ.

ಎಷ್ಟು ತಿನ್ನಬೇಕು ಎಂಬುದೂ ಮುಖ್ಯ

ಹಸಿವಿಗಿಂತ ಹೆಚ್ಚು ಆಹಾರ ಸೇವಿಸುವುದು ಮಳೆಗಾಲದಲ್ಲಿ ಅಜೀರ್ಣಕ್ಕೆ ಆಹ್ವಾನ ನೀಡಿದಂತೆಯೇ. ಆದ್ದರಿಂದ ಸುಲಭವಾಗಿ ಜೀರ್ಣವಾಗುವಷ್ಟು ಮಾತ್ರವೇ ಊಟ ಮಾಡಬೇಕು. ಎರಡು ಊಟಗಳ ಮಧ್ಯೆ ಅನಗತ್ಯವಾಗಿ ಏನನ್ನಾದರೂ ತಿಂದು ಅಥವಾ ಪದೇ ಪದೆ ಪಾನೀಯಗಳನ್ನು ಸೇವಿಸುವ ಅಭ್ಯಾಸವನ್ನು ಕಡಿಮೆ ಮಾಡಬೇಕು. ಇದರಿಂದ ಹುಳಿತೇಗು, ಹೊಟ್ಟೆ ಉಬ್ಬರ, ಭೇದಿ ಹಾಗೂ ತಲೆನೋವಿನಂತಹ ಸಮಸ್ಯೆಗಳನ್ನು ತಡೆಯಬಹುದು.

ಬಿಸಿ, ತಾಜಾ ಆಹಾರವೇ ಉತ್ತಮ

ಆಯುರ್ವೇದದ ಪ್ರಕಾರ ಆಗಷ್ಟೇ ಸಿದ್ಧಪಡಿಸಿದ, ಬಿಸಿಯಾದ, ಚೆನ್ನಾಗಿ ಬೇಯಿಸಿದ ಆಹಾರವು ಜೀರ್ಣ ಕ್ರಿಯೆಗೆ ಅತ್ಯುತ್ತಮ. ಇಂದಿನ ಜೀವನಶೈಲಿಯಲ್ಲಿ ಮೂರು ಹೊತ್ತೂ ಬಿಸಿ ಊಟ ಸಾಧ್ಯ ವಾಗದಿದ್ದರೂ, ಊಟದೊಂದಿಗೆ ಸ್ವಲ್ಪ ಸ್ವಲ್ಪ ಕುದಿಸಿದ ಬಿಸಿನೀರನ್ನು ಕುಡಿಯುವ ಅಭ್ಯಾಸವು ಆಹಾರವನ್ನು ಸುಲಭವಾಗಿ ಜೀರ್ಣಿಸಲು ಸಹಾಯ ಮಾಡುತ್ತದೆ.

ಕುದಿಸಿದ ನೀರು ಜಠರಾಗ್ನಿಯನ್ನು ಉತ್ತೇಜಿಸಿ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುವುದರ ಜೊತೆಗೆ ಮಲಮೂತ್ರ ವಿಸರ್ಜನೆಯನ್ನೂ ಸರಾಗಗೊಳಿಸುತ್ತದೆ. ನೀರನ್ನು ಊಟಕ್ಕೆ ಮುಂಚೆ ಅಥವಾ ತಕ್ಷಣ ನಂತರ ಹೆಚ್ಚಾಗಿ ಕುಡಿಯುವುದಕ್ಕಿಂತ, ಊಟದ ಮಧ್ಯೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದು ಉತ್ತಮ ಎಂದು ಆಯುರ್ವೇದ ತಿಳಿಸುತ್ತದೆ.

food2

ಫ್ರಿಡ್ಜ್ ಆಹಾರಕ್ಕೆ ವಿದಾಯ

ದಿನಗಟ್ಟಲೆ ಶೇಖರಿಸಿದ ಆಹಾರ, ಪದೇ ಪದೆ ಬಿಸಿ ಮಾಡಿದ ಊಟ, ತಂಗಳ ಪದಾರ್ಥಗಳು ಹಾಗೂ ಸಂಸ್ಕರಿತ ಆಹಾರಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುವುದಿಲ್ಲ. ಇವು ರೋಗನಿ ರೋಧಕ ಶಕ್ತಿಯನ್ನು ಕುಗ್ಗಿಸಿ, ದೇಹದಲ್ಲಿ ‘ಆಮ’ (ಸರಿಯಾಗಿ ಪಾಕವಾಗದ ಆಹಾರದ ಅಂಶ) ಉತ್ಪತ್ತಿಗೆ ಕಾರಣವಾಗುತ್ತವೆ. ಆದ್ದರಿಂದ ಮಳೆಗಾಲದಲ್ಲಿ ಸಾಧ್ಯವಾದಷ್ಟು ತಾಜಾ ಆಹಾರವನ್ನೇ ಆಯ್ಕೆ ಮಾಡುವುದು ಒಳಿತು.

ಆಯುರ್ವೇದವು ಆರು ರುಚಿಗಳಾದ ಮಧುರ, ಆಮ್ಲ, ಲವಣ, ಕಟು, ತಿಕ್ತ ಹಾಗೂ ಕಷಾಯ - ಎಲ್ಲವೂ ಸಮತೋಲನದಲ್ಲಿರುವ ಆಹಾರವನ್ನೇ ಆರೋಗ್ಯಕರ ಎಂದು ಹೇಳುತ್ತದೆ. ಆದರೆ ವರ್ಷಾಕಾಲದಲ್ಲಿ ವಿಶೇಷವಾಗಿ ಆಮ್ಲ (ಹುಳಿ), ಲವಣ (ಉಪ್ಪು) ಹಾಗೂ ಸ್ವಲ್ಪ ಕಟು (ಖಾರ) ರುಚಿಯುಳ್ಳ, ಬಿಸಿಯಾದ, ಸ್ವಲ್ಪ ಸ್ನಿಗ್ಧತೆಯುಳ್ಳ, ಒಗ್ಗರಿಸಿದ ಹಾಗೂ ಜೀರ್ಣಕ್ಕೆ ಹಗುರವಾದ ಆಹಾರಗಳು ಹೆಚ್ಚು ಹಿತಕರ.

ಜೀರಿಗೆ, ಮೆಣಸು, ಹಿಂಗು, ಸಾಸಿವೆ, ಶುಂಠಿ ಮೊದಲಾದ ದೀಪನ ದ್ರವ್ಯಗಳನ್ನು ಬಳಸಿದ ಹುಣಸೆ ಸಾರು, ನಿಂಬೆ ಸಾರು, ಶುಂಠಿ ರಸಂ, ಕೋಕಂ ಸಾರು, ನೆಲ್ಲಿಕಾಯಿ ಸಾರು ಹಾಗೂ ದಾಳಿಂಬೆ ಸಾರು ಈ ಕಾಲಕ್ಕೆ ಉತ್ತಮ ಆಯ್ಕೆಗಳು.

ಧಾನ್ಯ, ಬೇಳೆ ಮತ್ತು ತರಕಾರಿ

ಧಾನ್ಯಗಳಲ್ಲಿ ಹಳೆಯ ಅಕ್ಕಿಗೆ ಆಯುರ್ವೇದವು ವಿಶೇಷ ಮಹತ್ವ ನೀಡುತ್ತದೆ. ಕನಿಷ್ಠ ಒಂದು ವರ್ಷ ಹಳೆಯದಾದ ಅಕ್ಕಿ ಜೀರ್ಣಕ್ಕೆ ಹಗುರವಾಗಿದ್ದು, ಜಠರಾಗ್ನಿಗೆ ಹೆಚ್ಚಿನ ಭಾರವಾಗುವುದಿಲ್ಲ. ಇದಕ್ಕೆ ವಿರುದ್ಧವಾಗಿ ಹೊಸ ಅಕ್ಕಿ ಗುರು (ಭಾರ) ಗುಣವನ್ನು ಹೊಂದಿರುವುದರಿಂದ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಬಹುದು. ಪದೇ ಪದೆ ಹೊಸ ಅಕ್ಕಿಯ ಸೇವನೆಯು ಕಫ ವೃದ್ಧಿಗೆ ಕಾರಣವಾಗಿ, ಸ್ಥೌಲ್ಯ ಹಾಗೂ ಪ್ರಮೇಹ (ಮಧುಮೇಹ ಸೇರಿದಂತೆ ಮೂತ್ರವ್ಯಾಧಿಗಳ ಗುಂಪು) ಮುಂತಾದ ಜೀವನಶೈಲಿ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಆಯುರ್ವೇದ ಗ್ರಂಥಗಳು ವಿವರಿಸುತ್ತವೆ. ಆದ್ದರಿಂದ ವರ್ಷಾಕಾಲದಲ್ಲಿ ಹಳೆಯ ಧಾನ್ಯಗಳಿಗೆ ಆದ್ಯತೆ ನೀಡುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಹಿತಕರ.

ಹಳೆಯ ಅಕ್ಕಿ, ಗೋಧಿ, ಜವೆ (ಬಾರ್ಲಿ), ಫುಲ್ಕಾ, ರೊಟ್ಟಿ, ತೊಗರಿಬೇಳೆ, ಹೆಸರುಬೇಳೆ, ಹುರುಳಿ, ರಾಗಿ ಮುಂತಾದ ಆಹಾರಗಳು ಜೀರ್ಣಕ್ಕೆ ಹಿತಕರ. ಅರಿಶಿಣ, ಬೆಳ್ಳುಳ್ಳಿ, ಶುಂಠಿ, ಮೆಣಸು ಹಾಗೂ ಸಾಸಿವೆ ಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬಹುದು. ಹೀರೆಕಾಯಿ, ಸೋರೆಕಾಯಿ, ಹಾಲುಗುಂಬಳ, ಬೂದುಗುಂಬಳ, ಪಡವಲಕಾಯಿ, ಮೂಲಂಗಿ, ಕ್ಯಾರೆಟ್ ಹಾಗೂ ಈರುಳ್ಳಿ ಉತ್ತಮ ಆಯ್ಕೆಗಳು.

ಆದರೆ ಹೆಚ್ಚು ಹಸಿ ತರಕಾರಿಗಳು, ಸಲಾಡ್ ಹಾಗೂ ಮೊಳಕೆ ಕಾಳುಗಳ ಸೇವನೆಯನ್ನು ಮಳೆಗಾಲ ದಲ್ಲಿ ಕಡಿಮೆ ಮಾಡುವುದು ಉತ್ತಮ. ಈ ಋತುವಿನಲ್ಲಿ ತೇವಾಂಶ ಹಾಗೂ ಮಣ್ಣಿನ ಪ್ರಭಾವದಿಂದ ಇವು ಸುಲಭವಾಗಿ ಕ್ರಿಮಿದೂಷಣೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಆಯುರ್ವೇದವು ಈ ಕಾಲದಲ್ಲಿ ಇವುಗಳ ಅತಿಯಾದ ಬಳಕೆಯನ್ನು ಒಪ್ಪುವುದಿಲ್ಲ.

ಮಾಂಸಾಹಾರಿಗಳಿಗೆ

ಜೀರ್ಣಕ್ಕೆ ಹಗುರವಾದ ಪಕ್ಷಿ ಅಥವಾ ಪ್ರಾಣಿಗಳ ಮಾಂಸವನ್ನು ಸೂಪ್, ಸಾರು ಅಥವಾ ಗ್ರಿಲ್ ರೂಪದಲ್ಲಿ ಸೇವಿಸಬಹುದು. ಎಣ್ಣೆಯಲ್ಲಿ ಕರಿದ ಮಾಂಸಾಹಾರವನ್ನು ಸಾಧ್ಯವಾದಷ್ಟು ತಪ್ಪಿಸ ಬೇಕು.

ಹಣ್ಣುಗಳು ಮತ್ತು ಉಪಾಹಾರ

ಒಣದ್ರಾಕ್ಷಿ, ಖರ್ಜೂರ, ದಾಳಿಂಬೆ ಹಾಗೂ ಬೆಟ್ಟದ ನೆಲ್ಲಿಕಾಯಿಗಳು ಈ ಕಾಲದಲ್ಲಿ ಉತ್ತಮ ಫಲಗಳು. ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಹಾಗೂ ಉಪ್ಪಿನಲ್ಲಿಟ್ಟ ತರಕಾರಿಗಳನ್ನು ಮಿತ ಪ್ರಮಾಣ ದಲ್ಲಿ ಬಳಸಬಹುದು.

ನೀರು ಎಷ್ಟು ಕುಡಿಯಬೇಕು?

ಮಳೆಗಾಲದಲ್ಲಿ ಎಲ್ಲರೂ ಹೆಚ್ಚು ನೀರು ಕುಡಿಯಬೇಕು ಎನ್ನುವುದು ಸರಿಯಾದ ಕಲ್ಪನೆಯಲ್ಲ. ಬಾಯಾ ರಿಕೆಯಿರುವಾಗ ಮಾತ್ರ ನೀರು ಕುಡಿಯುವುದು ಸೂಕ್ತ. ಕುದಿಸಿದ ನೀರು, ಶುಂಠಿ ಹಾಕಿ ಕುದಿಸಿದ ನೀರು ಅಥವಾ ಜೀರಿಗೆ ನೀರು ಅತ್ಯುತ್ತಮ. ಈ ಋತುವಿನಲ್ಲಿ ಜೇನುತುಪ್ಪವನ್ನು ಮಿತ ಪ್ರಮಾಣದಲ್ಲಿ ಬಳಸಬಹುದು. ಕಾಯಿಸಿ ಆರಿಸಿದ ನೀರಿಗೆ ಶುದ್ಧ ಜೇನುತುಪ್ಪ ಸೇರಿಸಿ ಕುಡಿಯು ವುದು ಹಿತಕರ. ಆದರೆ ಜೇನುತುಪ್ಪವನ್ನು ಎಂದಿಗೂ ಬಿಸಿ ಮಾಡಬಾರದು ಅಥವಾ ಬಿಸಿ ಪದಾರ್ಥಗಳೊಂದಿಗೆ ಬೆರೆಸಬಾರದು.

ವಿಹಾರದಲ್ಲಿಯೂ ಬದಲಾವಣೆ

ಮಳೆಗಾಲದಲ್ಲಿ ರಾತ್ರಿ ತಡವಾಗಿ ಮಲಗುವುದು ಹಾಗೂ ಹಗಲು ನಿದ್ರೆ ಮಾಡುವುದು ಎರಡೂ ಆರೋಗ್ಯಕ್ಕೆ ಹಾನಿಕರ. ಇವು ಜಡತ್ವವನ್ನು ಹೆಚ್ಚಿಸಿ, ಸ್ಥೌಲ್ಯ ಹಾಗೂ ಅವರೋಧಾತ್ಮಕ ರೋಗಗಳಿಗೆ ಕಾರಣವಾಗ ಬಹುದು. ತುಂಬಾ ಶ್ರಮವಾಗುವ ವ್ಯಾಯಾಮಕ್ಕಿಂತ ಮಿತವಾದ ವ್ಯಾಯಾಮ ಉತ್ತಮ. ಈ ಸಮಯದಲ್ಲಿ ದೇಹಬಲ ಸ್ವಲ್ಪ ಕಡಿಮೆಯಿರುವುದರಿಂದ ಅತಿವ್ಯಾಯಾಮವು ದೇಹವನ್ನು ಇನ್ನಷ್ಟು ದುರ್ಬಲ ಗೊಳಿಸಬಹುದು.

ಅಭ್ಯಂಗವು ವರ್ಷಾಕಾಲದ ಅತ್ಯುತ್ತಮ ದೈನಂದಿನ ಅಭ್ಯಾಸಗಳಲ್ಲಿ ಒಂದು. ತಲೆಯಿಂದ ಪಾದದ ವರೆಗೆ ವಾತಹರ ತೈಲದಿಂದ ಎಣ್ಣೆ ಮಸಾಜ್ ಮಾಡಿ, ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹಕ್ಕೆ ಬಲ, ಚರ್ಮಕ್ಕೆ ಪೋಷಣೆ ಹಾಗೂ ಕೀಲುಗಳಿಗೆ ರಕ್ಷಣೆ ದೊರೆಯುತ್ತದೆ. ಜೊತೆಗೆ ನಿದ್ರಾಹೀನತೆ, ಕೂದಲು ಉದುರುವಿಕೆ, ಒಣಚರ್ಮ ಹಾಗೂ ಕೀಲುನೋವುಗಳಿಗೂ ಇದು ಸಹಕಾರಿ. ಅತಿಯಾದ ಪ್ರಯಾಣವನ್ನು ತಪ್ಪಿಸಿ, ಅನಿವಾರ್ಯವಾದರೆ ಗಾಳಿ ಮತ್ತು ಮಳೆಯಿಂದ ರಕ್ಷಣೆ ಪಡೆಯುವ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಋತುಸಂಧಿ ಮರೆಯಬೇಡಿ

ಒಂದು ಋತುವಿನಿಂದ ಮತ್ತೊಂದು ಋತುವಿಗೆ ಸಾಗುವ ಮಧ್ಯಂತರವನ್ನು ಆಯುರ್ವೇದವು ಋತುಸಂಽ ಎಂದು ಕರೆಯುತ್ತದೆ. ಹಿಂದಿನ ಋತುವಿನ ಕೊನೆಯ ಏಳು ದಿನಗಳು ಹಾಗೂ ಮುಂದಿನ ಋತುವಿನ ಮೊದಲ ಏಳು ದಿನಗಳಲ್ಲಿ ಆಹಾರ-ವಿಹಾರಗಳನ್ನು ನಿಧಾನವಾಗಿ ಬದಲಾಯಿಸಬೇಕು. ಏಕಾಏಕಿ ಜೀವನಶೈಲಿಯನ್ನು ಬದಲಾಯಿಸುವುದು ದೇಹಕ್ಕೆ ಒತ್ತಡ ಉಂಟುಮಾಡಬಹುದು.

ಕೊನೆಯ ಮಾತು

ವರ್ಷಾ ಋತುಚರ್ಯೆ ಎಂದರೆ ಕೇವಲ ಮಳೆಗಾಲದ ಆಹಾರದ ಪಟ್ಟಿ ಅಲ್ಲ. ಅದು ದೇಹದ ಬಲ, ಜಠರಾಗ್ನಿ ಹಾಗೂ ದೋಷಗಳ ಸ್ಥಿತಿಯನ್ನು ಅರ್ಥಮಾಡಿಕೊಂಡು ಜೀವನಶೈಲಿಯನ್ನು ಪ್ರಕೃತಿಗೆ ಹೊಂದಿಸಿಕೊಳ್ಳುವ ವೈeನಿಕ ವಿಧಾನ. ತಾಜಾ ಮತ್ತು ಬಿಸಿ ಆಹಾರ, ಮಿತ ಪ್ರಮಾಣದ ಊಟ, ಸರಿಯಾದ ನೀರಿನ ಸೇವನೆ, ಮೃದುವಾದ ವ್ಯಾಯಾಮ, ನಿಯಮಿತ ಅಭ್ಯಂಗ ಹಾಗೂ ಋತುಸಂಧಿ ಯ ಪಾಲನೆ - ಈ ಸರಳ ಅಭ್ಯಾಸಗಳೇ ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡುವ ನಿಜವಾದ ರಹಸ್ಯಗಳು.

ಪ್ರಕೃತಿ ಬದಲಾಗುವಾಗ ನಾವು ಸಹ ಅದರೊಂದಿಗೆ ಬದಲಾಗುವುದನ್ನು ಕಲಿತರೆ, ಋತುಗಳು ರೋಗ ಗಳನ್ನು ಅಲ್ಲ, ಆರೋಗ್ಯವನ್ನು ಕೊಡುಗೆಯಾಗಿ ನೀಡುತ್ತವೆ. ಆಯುರ್ವೇದದ ಈ ಅಮೂಲ್ಯ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು, ಆರೋಗ್ಯ ಮತ್ತು ಆನಂದದಿಂದ ಕೂಡಿದ ಮಳೆಗಾಲವನ್ನು ಎಲ್ಲರೂ ಅನುಭವಿಸೋಣ.

ಮಜ್ಜಿಗೆ ಹೌದು, ಮೊಸರು ಎಚ್ಚರ!

ಮಜ್ಜಿಗೆಯಿಂದ ತಯಾರಿಸಿದ ಕಡಿ, ಮಜ್ಜಿಗೆ ಹುಳಿ ಹಾಗೂ ಪಳದ್ಯಗಳು ಮಳೆಗಾಲದಲ್ಲಿ ಅತ್ಯುತ್ತಮ ಆಹಾರಗಳು. ಆದರೆ ಇಲ್ಲಿ ಬಳಸಬೇಕಾದದ್ದು ನೀರು ಸೇರಿಸಿ ಚೆನ್ನಾಗಿ ಕಡಿದ ಮಜ್ಜಿಗೆಯನ್ನೇ ಹೊರತು ಮೊಸರಲ್ಲ. ಕಾರಣ, ಮೊಸರನ್ನು ಬಿಸಿ ಮಾಡಲೇಬಾರದು. ಮೊಸರನ್ನು ಬಿಸಿ ಆಹಾರದ ಜೊತೆಗೆ ಸೇವಿಸುವುದೂ ಆರೋಗ್ಯಕರವಲ್ಲ. ವರ್ಷಾ ಕಾಲದಲ್ಲಿ ದಿನದ ವೇಳೆ ಸ್ವಲ್ಪ ಪ್ರಮಾಣದಲ್ಲಿ ಹುಳಿ ಕಡಿಮೆ ಇರುವ ಮೊಸರನ್ನು ಜೇನುತುಪ್ಪ, ನೆಲ್ಲಿಪುಡಿ, ಕಲ್ಲುಸಕ್ಕರೆ ಅಥವಾ ಬೇಳೆ ಕಟ್ಟುಗಳೊಂದಿಗೆ ಸೇವಿಸ ಬಹುದು. ಆದರೆ, ರಾತ್ರಿ ಮೊಸರು ಸೇವನೆಯನ್ನು ಆಯುರ್ವೇದ ಸರ್ವಕಾಲದಲ್ಲಿಯೂ ನಿಷೇಧಿಸಿದೆ.

ಡಾ. ಸಾಧನಾಶ್ರೀ ಪಿ,

View all posts by this author