ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Sadhanashree Column: ಮೂತ್ರಪಾನ: ಔಷಧವೇ ? ಅಪಾಯವೇ ? ಆಯುರ್ವೇದದ ಉತ್ತರ !

ಆಯುರ್ವೇದದಲ್ಲಿ ವಿಶೇಷವಾಗಿ ಅಷ್ಟ ಮೂತ್ರ ಎಂಬ ಪರಿಕಲ್ಪನೆಯನ್ನು ವಿವರಿಸಲಾಗಿದೆ. ಇದರಲ್ಲಿ ಹಸು, ಕುರಿ, ಆಡು, ಎಮ್ಮೆ, ಒಂಟೆ, ಕತ್ತೆ, ಆನೆ ಹಾಗೂ ಮನುಷ್ಯನ ಮೂತ್ರಗಳ ಗುಣಧರ್ಮಗಳು ಮತ್ತು ಅವುಗಳ ಚಿಕಿತ್ಸಾ ಉಪಯೋಗಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ಮೂತ್ರವೂ ವಿಭಿನ್ನ ಸ್ವಭಾವ, ಗುಣ ಹಾಗೂ ಕಾರ್ಯಗಳನ್ನು ಹೊಂದಿದೆ. ಆದ್ದರಿಂದ ಎಲ್ಲ ಪ್ರಾಣಿಗಳ ಮೂತ್ರವನ್ನು ಒಂದೇ ರೀತಿಯಲ್ಲಿ ಬಳಸಬೇಕು ಅಥವಾ ಎಲ್ಲ ರೋಗಗಳಿಗೂ ಒಂದೇ ಮೂತ್ರವನ್ನು ಬಳಸಬಹುದು ಎಂದು ಆಯುರ್ವೇದ ಹೇಳುವುದಿಲ್ಲ.

ಮೂತ್ರಪಾನ: ಔಷಧವೇ ? ಅಪಾಯವೇ ? ಆಯುರ್ವೇದದ ಉತ್ತರ !

-

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಮೂತ್ರಪಾನ ಅಥವಾ ಮೂತ್ರವನ್ನು ಔಷಧಿಯ ಉದ್ದೇಶಕ್ಕಾಗಿ ಬಳಸುವ ವಿಷಯವು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವಿಷಯ. ಕೆಲವರು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದರೆ, ಇನ್ನೂ ಕೆಲವರು ಇದನ್ನು ಎಲ್ಲ ರೋಗಗಳಿಗೆ ರಾಮಬಾಣವೆಂದು ಬಿಂಬಿಸುತ್ತಾರೆ. ಆದರೆ, ಆಯುರ್ವೇದದ ದೃಷ್ಟಿಯಲ್ಲಿ ಈ ಎರಡೂ ನಿಲುವುಗಳು ಸಮಂಜಸವಲ್ಲ.

ಆಯುರ್ವೇದವು ಯಾವುದೇ ವಸ್ತುವನ್ನು ಅಂಧನಂಬಿಕೆ ಅಥವಾ ಭಾವನಾತ್ಮಕ ದೃಷ್ಟಿಯಿಂದ ನೋಡುವುದಿಲ್ಲ. ಪ್ರತಿಯೊಂದು ದ್ರವ್ಯವನ್ನೂ ಅದರ ರಸ, ಗುಣ, ವೀರ್ಯ, ವಿಪಾಕ, ಪ್ರಭಾವ, ಹಾಗೂ ಚಿಕಿತ್ಸೆಯಲ್ಲಿ ಅದರ ಉಪಯುಕ್ತತೆಯ ಆಧಾರದ ಮೇಲೆ ವಿಶ್ಲೇಷಿಸುತ್ತದೆ. ಇದೇ ಕಾರಣ ದಿಂದ ಆಯುರ್ವೇದದಲ್ಲಿ ಸಸ್ಯಗಳು, ಖನಿಜಗಳು, ಲೋಹಗಳು, ಪ್ರಾಣಿಜನ್ಯ ದ್ರವ್ಯಗಳ ಜತೆಗೆ ಕೆಲವು ಸಸ್ತನಿಗಳ ಮೂತ್ರವನ್ನೂ ಔಷಧಿಯ ದ್ರವ್ಯವಾಗಿ ಪರಿಗಣಿಸಲಾಗಿದೆ. ಆದರೆ, ಮೂತ್ರವನ್ನು ಸಾಮಾನ್ಯ ಪಾನೀಯವಾಗಿ ಅಥವಾ ಎಲ್ಲರಿಗೂ ಪ್ರತಿದಿನ ಸೇವಿಸಬೇಕಾದ ವಸ್ತುವಾಗಿ ಆಯುರ್ವೇದ ಎಲ್ಲಿಯೂ ಪ್ರತಿಪಾದಿಸುವುದಿಲ್ಲ. ಅದರ ಬಳಕೆ ಸಂಪೂರ್ಣವಾಗಿ ಚಿಕಿತ್ಸಾ ಸಂದರ್ಭಕ್ಕೆ ಸೀಮಿತವಾಗಿದೆ.

ಆಯುರ್ವೇದದಲ್ಲಿ ವಿಶೇಷವಾಗಿ ಅಷ್ಟ ಮೂತ್ರ ಎಂಬ ಪರಿಕಲ್ಪನೆಯನ್ನು ವಿವರಿಸಲಾಗಿದೆ. ಇದರಲ್ಲಿ ಹಸು, ಕುರಿ, ಆಡು, ಎಮ್ಮೆ, ಒಂಟೆ, ಕತ್ತೆ, ಆನೆ ಹಾಗೂ ಮನುಷ್ಯನ ಮೂತ್ರಗಳ ಗುಣ ಧರ್ಮಗಳು ಮತ್ತು ಅವುಗಳ ಚಿಕಿತ್ಸಾ ಉಪಯೋಗಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ಮೂತ್ರವೂ ವಿಭಿನ್ನ ಸ್ವಭಾವ, ಗುಣ ಹಾಗೂ ಕಾರ್ಯಗಳನ್ನು ಹೊಂದಿದೆ. ಆದ್ದರಿಂದ ಎಲ್ಲ ಪ್ರಾಣಿಗಳ ಮೂತ್ರವನ್ನು ಒಂದೇ ರೀತಿಯಲ್ಲಿ ಬಳಸಬೇಕು ಅಥವಾ ಎಲ್ಲ ರೋಗಗಳಿಗೂ ಒಂದೇ ಮೂತ್ರವನ್ನು ಬಳಸಬಹುದು ಎಂದು ಆಯುರ್ವೇದ ಹೇಳುವುದಿಲ್ಲ.

ಯಾವ ಮೂತ್ರವನ್ನು ಯಾವ ರೋಗದಲ್ಲಿ, ಯಾವ ಪ್ರಮಾಣದಲ್ಲಿ, ಯಾವ ಕಾಲದಲ್ಲಿ ಹಾಗೂ ಯಾವ ರೀತಿಯಲ್ಲಿ ಬಳಸಬೇಕು ಎಂಬುದಕ್ಕೆ ಗ್ರಂಥಗಳಲ್ಲಿ ಸ್ಪಷ್ಟ ಮಾರ್ಗದರ್ಶನವಿದೆ.

ಇದನ್ನೂ ಓದಿ: Dr Sadhanashree Column: ʼನಂಬಿಕೆಯ ಶಕ್ತಿʼ: ಚಿಕಿತ್ಸೆಯ ಯಶಸ್ಸಿನ ಹಿಂದೆ ಇರುವ ಅದೃಶ್ಯ ಔಷಧಿ

ಆಯುರ್ವೇದವು ಮೂತ್ರ ಸಂಗ್ರಹಿಸುವ ವಿಷಯದಲ್ಲಿಯೂ ಒಂದು ಅತ್ಯಂತ ಸೂಕ್ಷ್ಮವಾದ ಸೂಚನೆ ಯನ್ನು ನೀಡುತ್ತದೆ. ಹಸು, ಕುರಿ, ಆಡು ಮತ್ತು ಎಮ್ಮೆಗಳ ವಿಷಯದಲ್ಲಿ ಹೆಣ್ಣು ಪ್ರಾಣಿಗಳ ಮೂತ್ರ ವನ್ನೇ ಬಳಸಬೇಕೆಂದು ಗ್ರಂಥಗಳು ಸೂಚಿಸುತ್ತವೆ. ಆದರೆ ಆನೆ, ಕುದುರೆ, ಒಂಟೆ, ಕತ್ತೆ ಹಾಗೂ ಮನುಷ್ಯನ ವಿಷಯದಲ್ಲಿ ಗಂಡು ಜಾತಿಯ ಮೂತ್ರವನ್ನೇ ಔಷಧಿಯ ಉದ್ದೇಶಕ್ಕಾಗಿ ಬಳಸಬೇಕು ಎಂದು ನಿರ್ದಿಷ್ಟವಾಗಿ ಹೇಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಗೋಮೂತ್ರಪಾನದ ಬಗ್ಗೆ ಒಂದು ಸಾಮಾನ್ಯ ತಪ್ಪು ಕಲ್ಪನೆ ಹರಡಿದೆ. ಅನೇಕರು ಗೋಮೂತ್ರವನ್ನು ಪ್ರತಿದಿನ ಸೇವಿಸಬೇಕಾದ ಆರೋಗ್ಯ ಪಾನೀಯವೆಂದು ಭಾವಿಸು ತ್ತಾರೆ. ಆದರೆ, ಆಯುರ್ವೇದದ ಮೂಲ ಗ್ರಂಥಗಳನ್ನು ಪರಿಶೀಲಿಸಿದರೆ, ಇಂತಹ ಯಾವುದೇ ಸಾಮಾನ್ಯ ಶಿಫಾರಸು ಕಂಡುಬರುವುದಿಲ್ಲ. ಆಯುರ್ವೇದದಲ್ಲಿ ಗೋಮೂತ್ರಪಾನವನ್ನು ನಿತ್ಯವೂ ಅನುಸರಿಸಬೇಕಾದ ದಿನಚರಿಯ (ದಿನಚರ್ಯೆ) ಭಾಗವಾಗಿ ಎಲ್ಲಿಯೂ ಹೇಳಿಲ್ಲ.

ಆರೋಗ್ಯವಂತ ವ್ಯಕ್ತಿಯು ಪ್ರತಿದಿನ ಗೋಮೂತ್ರವನ್ನು ಸೇವಿಸಬೇಕು ಎಂಬ ನಿರ್ದೇಶನವೂ ಇಲ್ಲ. ಆಯುರ್ವೇದದಲ್ಲಿ ಪ್ರತಿಯೊಂದು ಔಷಧಿಯ ಬಳಕೆಗೆ ಒಂದು ಸ್ಪಷ್ಟ ಉದ್ದೇಶವಿದೆ. ಯಾವಾಗ ರೋಗ ಉಂಟಾಗುತ್ತದೆಯೋ, ಆಗ ರೋಗದ ಸ್ವರೂಪ, ದೋಷಗಳ ಸ್ಥಿತಿ, ರೋಗಿಯ ಪ್ರಕೃತಿ, ವಯಸ್ಸು, ಬಲ ಹಾಗೂ ಇತರ ಅನೇಕ ಅಂಶಗಳನ್ನು ಪರಿಗಣಿಸಿ ಸೂಕ್ತ ಔಷಧಿಯನ್ನು ಆಯ್ಕೆ ಮಾಡಲಾಗುತ್ತದೆ. ಗೋಮೂತ್ರವೂ ಇದೇ ತತ್ವಕ್ಕೆ ಹೊರತಾಗಿಲ್ಲ. ಇದನ್ನು ಆಹಾರದಂತೆ ಅಥವಾ ಪ್ರತಿದಿನದ ಆರೋಗ್ಯಪೂರಕವಾಗಿ ಅಲ್ಲ, ನಿರ್ದಿಷ್ಟ ರೋಗ ಸ್ಥಿತಿಯಲ್ಲಿ, ನಿರ್ದಿಷ್ಟ ಅವಽಯವರೆಗೆ, ಔಷಧವಾಗಿ ಮಾತ್ರ ಬಳಸುವ ಉಲ್ಲೇಖಗಳನ್ನು ನಾವು ಕಾಣುತ್ತೇವೆ.

270

ಒಂದು ಸರಳ ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಬ್ಬ ವ್ಯಕ್ತಿಗೆ ಜ್ವರ ಬಂದಾಗ ವೈದ್ಯರು ಐದು ಅಥವಾ ಏಳು ದಿನಗಳವರೆಗೆ ಮಾತ್ರ ಔಷಧಿಯನ್ನು ನೀಡುತ್ತಾರೆ. ಜ್ವರ ಕಡಿಮೆಯಾದ ನಂತರ ಅದೇ ಔಷಧಿಯನ್ನು ಜೀವನಪರ್ಯಂತ ಸೇವಿಸುತ್ತಾ ಇರಬೇಕೆಂದು ಯಾರೂ ಹೇಳುವು ದಿಲ್ಲ. ರೋಗವಿಲ್ಲದ ಸಂದರ್ಭದಲ್ಲಿ ಅದೇ ಔಷಧಿಯು ಅನಗತ್ಯವಾಗಬಹುದು ಅಥವಾ ಕೆಲವೊಮ್ಮೆ ಹಾನಿಯನ್ನೂ ಉಂಟುಮಾಡಬಹುದು. ಇದೇ ತತ್ವವನ್ನು ಆಯುರ್ವೇದವು ಗೋಮೂತ್ರಕ್ಕೂ ಅನ್ವಯಿಸುತ್ತದೆ.

ಆಯುರ್ವೇದದ ಪ್ರಕಾರ, ಚಿಕಿತ್ಸೆಯ ಉದ್ದೇಶಕ್ಕಾಗಿ ಮೂತ್ರವನ್ನು ಬಳಸಬೇಕಾದ ಸಂದರ್ಭ ಬಂದರೆ, ಆಗಷ್ಟೇ ವಿಸರ್ಜಿಸಲ್ಪಟ್ಟ, ಮುಂಜಾನೆಯ ಮೊದಲ ಮೂತ್ರವನ್ನು ಬಳಸುವುದು ಯೋಗ್ಯವೆಂದು ಹೇಳಲಾಗಿದೆ.

ರಾತ್ರಿ ಪೂರ್ತಿ ದೇಹದ ಜೈವಿಕ ಕ್ರಿಯೆಗಳ ನಂತರ ಬೆಳಗ್ಗೆ ದೊರೆಯುವ ಮೊದಲ ಮೂತ್ರವನ್ನು ಸಂಗ್ರಹಿಸಿ, ಅದರ ಸಹಜ ಉಷ್ಣತೆ ಕಳೆದುಕೊಳ್ಳುವ ಮುನ್ನವೇ ಬಳಸುವುದು ಉತ್ತಮ ಎಂದು ಗ್ರಂಥಗಳು ಸೂಚಿಸುತ್ತವೆ. ಅದೇ ರೀತಿ, ಚಿಕಿತ್ಸೆಯ ಅವಶ್ಯಕತೆಗೆ ಅನುಗುಣವಾಗಿ ಮೂತ್ರವನ್ನು ಎರಡು ರೀತಿಯಲ್ಲಿ ಬಳಸಬಹುದು.

ಒಂದು ವಿಧಾನವೆಂದರೆ, ವೈದ್ಯರು ಸೂಚಿಸಿದ ಸಂದರ್ಭಗಳಲ್ಲಿ ಮತ್ತು ಪ್ರಮಾಣದಲ್ಲಿ ನೇರವಾಗಿ ಮೂತ್ರವನ್ನು ಉಪಯೋಗಿಸುವುದು. ಮತ್ತೊಂದು ವಿಧಾನವೆಂದರೆ, ಮೂತ್ರವನ್ನು ಇತರ ಔಷಧಿ ಯ ದ್ರವ್ಯಗಳೊಂದಿಗೆ ಸಂಯೋಜಿಸಿ ಅಥವಾ ಅದರ ಆಧಾರದ ಮೇಲೆ ತಯಾರಿಸಲಾದ ಔಷಧ ರೂಪಗಳಲ್ಲಿ ಬಳಸುವುದು. ಆಯುರ್ವೇದದಲ್ಲಿ ಗೋಮೂತ್ರಾರ್ಕ, ವಿವಿಧ ಕ್ಷಾರಯೋಗಗಳು, ಹಾಗೂ ಅನೇಕ ಔಷಧ ಸಂಸ್ಕಾರಗಳಲ್ಲಿ ಗೋಮೂತ್ರವನ್ನು ಒಂದು ಸಂಸ್ಕಾರ ದ್ರವ್ಯವಾಗಿ ಬಳಸಿರುವ ಉದಾಹರಣೆಗಳನ್ನು ಕಾಣಬಹುದು.

ಮೂತ್ರಪಾನ ಮಾಡುವ ಮೊದಲು ನೆನಪಿಡಬೇಕಾದ ಅತ್ಯಂತ ಪ್ರಮುಖ ವಿಷಯಗಳು:

ವಾಸ್ತವವಾಗಿ, ಮೂತ್ರದ ಗುಣಗಳನ್ನು ಅರ್ಥ ಮಾಡಿಕೊಂಡಾಗ, ಯಾವ ಸಂದರ್ಭಗಳಲ್ಲಿ ಅದು ಉಪಯುಕ್ತ ಮತ್ತು ಯಾವ ಸಂದರ್ಭಗಳಲ್ಲಿ ಅದು ಅಪಾಯಕಾರಿಯಾಗಬಹುದು ಎಂಬುದು ಸ್ಪಷ್ಟವಾಗುತ್ತದೆ.

ಮೊದಲನೆಯದಾಗಿ, ಮೂತ್ರವು ಸಾಮಾನ್ಯವಾಗಿ ಪಿತ್ತವನ್ನು ಹೆಚ್ಚಿಸುವ ಸ್ವಭಾವವನ್ನು ಹೊಂದಿ ದೆ. ಆದ್ದರಿಂದ ಆಯುರ್ವೇದದಲ್ಲಿ ಪಿತ್ತದ ಕೊರತೆ ಇರುವ ಸಂದರ್ಭಗಳಲ್ಲಿ ಅಥವಾ ಪಿತ್ತದ ಕಾರ್ಯವನ್ನು ಉತ್ತೇಜಿಸುವ ಅಗತ್ಯವಿರುವ ಸಂದರ್ಭಗಳಲ್ಲಿ ಮಾತ್ರ ಅದರ ಬಳಕೆಯನ್ನು ಪರಿಗಣಿಸಲಾಗುತ್ತದೆ. ಆದರೆ, ಇದೇ ಕಾರಣದಿಂದ ಪಿತ್ತ ಪ್ರಕೃತಿಯ ವ್ಯಕ್ತಿಗಳು, ಪಿತ್ತದೋಷ ಈಗಾಗಲೇ ಹೆಚ್ಚಿರುವವರು, ಪಿತ್ತಜ ರೋಗಗಳಿಂದ ಬಳಲುತ್ತಿರುವವರು ಅಥವಾ ದೇಹದಲ್ಲಿ ಹೆಚ್ಚಿನ ಉಷ್ಣತೆ ಇರುವವರು ಮೂತ್ರವನ್ನು ಬಳಸಿದರೆ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚು.

ಉದಾಹರಣೆಗೆ, ಅತಿಯಾದ ಅಜೀರ್ಣದ ಉರಿ, ಎದೆಯುರಿ, ಆಮ್ಲಪಿತ್ತ, ಬಾಯಿ ಹುಣ್ಣು, ಮೂಗಿ ನಿಂದ ರಕ್ತಸ್ರಾವ, ಚರ್ಮದಲ್ಲಿ ಉರಿ, ಕೆಂಪಾಗುವಿಕೆ ಅಥವಾ ಸುಡುವ ಭಾವನೆ, ಅಧಿಕ ದಾಹ ಇತ್ಯಾದಿ ಪಿತ್ತ ಲಕ್ಷಣಗಳು ಈಗಾಗಲೇ ಇರುವವರಿಗೆ ಮೂತ್ರ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸ ಬಹುದು.

ಇದೇ ಕಾರಣಕ್ಕಾಗಿ ಋತು ಮತ್ತು ದೇಶ ಕೂಡ ಬಹಳ ಮುಖ್ಯ. ಬೇಸಿಗೆಯ ಕಾಲದಲ್ಲಿ ಅಥವಾ ಸಹಜವಾಗಿಯೇ ಉಷ್ಣತೆ ಹೆಚ್ಚಿರುವ ಪ್ರದೇಶಗಳಲ್ಲಿ ದೇಹದಲ್ಲಿ ಪಿತ್ತದ ಸಂಚಯ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಮೂತ್ರದ ಪ್ರಯೋಗವು ದೇಹದ ಉಷ್ಣತೆಯನ್ನು ಮತ್ತಷ್ಟು ಹೆಚ್ಚಿಸಿ ಅನಗತ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ, ಆಯುರ್ವೇದದಲ್ಲಿ ಒಂದೇ ಔಷಧಿಯ ಬಳಕೆಯೂ ಕಾಲ, ಸ್ಥಳ ಮತ್ತು ವ್ಯಕ್ತಿಯ ದೇಹಸ್ಥಿತಿಯನ್ನು ಅವಲಂಬಿಸಿರುತ್ತದೆ.

ಮೂತ್ರದ ಇನ್ನೊಂದು ಪ್ರಮುಖ ಗುಣವೆಂದರೆ ರೂಕ್ಷತ್ವ. ರೂಕ್ಷ ದ್ರವ್ಯವು ದೇಹದಲ್ಲಿರುವ ಅತಿಯಾದ ಸ್ನಿಗ್ಧತೆ, ತೇವಾಂಶ ಮತ್ತು ಕಫವನ್ನು ಒಣಗಿಸುತ್ತದೆ. ಈ ಕಾರಣದಿಂದ ಕಫದ ಅಧಿಕ್ಯ ವಿರುವ ಅನೇಕ ರೋಗಗಳಲ್ಲಿ ಮೂತ್ರದ ಬಳಕೆಯನ್ನು ಉಲ್ಲೇಖಿಸಲಾಗಿದೆ. ದೇಹದಲ್ಲಿ ಕಫ, ಮೇದಸ್ಸು ಮತ್ತು ಕ್ಲೇದ ಅತಿಯಾಗಿ ಸಂಗ್ರಹವಾದಾಗ ಅವುಗಳನ್ನು ಕಡಿಮೆ ಮಾಡುವಲ್ಲಿ ಇದರ ಗುಣಗಳು ಸಹಕಾರಿಯಾಗುತ್ತವೆ.

ಉದಾಹರಣೆಗೆ, ಮೇದಸ್ಸಿನ ಅಧಿಕ್ಯ, ಸ್ಥೌಲ್ಯ, ದೇಹದಲ್ಲಿ ನೀರು ತುಂಬಿಕೊಳ್ಳುವ ಜಲೋದರದಂತಹ ಕೆಲವು ಸ್ಥಿತಿಗಳು, ದೇಹದಲ್ಲಿ ಊತ, ಕಫಸಂಚಯ, ಅಥವಾ ಕಫ-ಮೇದ ಪ್ರಧಾನ ಚಯಾ ಪಚಯ ಸಮಸ್ಯೆಗಳಲ್ಲಿ ಆಯುರ್ವೇದದ ಚಿಕಿತ್ಸಾ ಕ್ರಮದಲ್ಲಿ ಮೂತ್ರವನ್ನು ಒಂದು ಔಷಧಿಯ ಆಯ್ಕೆ ಯಾಗಿ ಪರಿಗಣಿಸಲಾಗಿದೆ.

ಆದರೆ, ಇದೇ ರೂಕ್ಷ ಗುಣವು ಎಲ್ಲರಿಗೂ ಸೂಕ್ತವಲ್ಲ. ಈಗಾಗಲೇ ದೇಹವು ಕೃಶವಾಗಿರುವವರು, ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವವರು, ವಾತದೋಷ ಅಧಿಕವಾಗಿರುವವರು, ಚರ್ಮದ ಶುಷ್ಕತೆ, ದೇಹದ ಕ್ಷೀಣತೆ ಅಥವಾ ಧಾತುಕ್ಷಯ ಇರುವವರು ಮೂತ್ರವನ್ನು ವಿವೇಚನೆ ಯಿಲ್ಲದೆ ಬಳಸಿದರೆ ದೇಹದ ಶುಷ್ಕತೆ ಮತ್ತಷ್ಟು ಹೆಚ್ಚಾಗುವ ಅಪಾಯವಿದೆ.

ಮೂತ್ರದ ಮತ್ತೊಂದು ಮುಖ್ಯ ಗುಣವೆಂದರೆ ತೀಕ್ಷ್ಣತ್ವ. ತೀಕ್ಷ್ಣ ದ್ರವ್ಯಗಳು ದೇಹದಲ್ಲಿ ಉಂಟಾ ಗಿರುವ ಅವರೋಧಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ಕಾರಣದಿಂದ ಮಲ, ಮೂತ್ರ ಹಾಗೂ ಅಧೋವಾತದ ಅವರೋಧ, ಬದ್ಧಕೋಷ್ಟತೆ ಅಥವಾ ಕೆಲವು ರೀತಿಯ ಸ್ರೋತೋ ರೋಧಗಳಲ್ಲಿ ತೀಕ್ಷ್ಣಗುಣವು ಚಿಕಿತ್ಸಾತ್ಮಕವಾಗಿ ಉಪಯುಕ್ತವಾಗಬಹುದು. ಆದರೆ, ತೀಕ್ಷ್ಣ ಗುಣವಿರುವ ಯಾವುದೇ ಔಷಧಿಯಂತೆ, ಮೂತ್ರದ ಬಳಕೆಯಲ್ಲಿಯೂ ಅತಿಯಾದ ಜಾಗ್ರತೆ ಅಗತ್ಯ.

ತೀಕ್ಷ್ಣದ್ರವ್ಯವನ್ನು ಅನಗತ್ಯವಾಗಿ ಅಥವಾ ಅತಿಯಾದ ಪ್ರಮಾಣದಲ್ಲಿ ಬಳಸಿದರೆ ಅದು ದೇಹದ ಸೂಕ್ಷ್ಣ ಅಂಗಾಂಶಗಳಿಗೆ ಹಾನಿಯನ್ನುಂಟುಮಾಡಬಹುದು. ಜೀರ್ಣನಾಳದ ಒಳಪದರದಲ್ಲಿ ಉರಿ, ಹುಣ್ಣು, ರಕ್ತಸ್ರಾವ ಅಥವಾ ಇತರ ತೊಂದರೆಗಳು ಉಂಟಾಗುವ ಸಾಧ್ಯತೆಯನ್ನೂ ಆಯುರ್ವೇದ ಗಮನಿಸಿದೆ. ಆದ್ದರಿಂದ ತೀಕ್ಷ್ಣ ಗುಣವಿರುವ ಔಷಧಿಗಳನ್ನು ಸ್ವಯಂ ನಿರ್ಧಾರದಿಂದ ಬಳಸ ಬಾರದು ಎಂದು ಆಯುರ್ವೇದವು ಪರೋಕ್ಷವಾಗಿ ಎಚ್ಚರಿಸುತ್ತದೆ.

ಇದಲ್ಲದೆ, ಮೂತ್ರವು ಸರ ಗುಣ (ಚಲನೆಯನ್ನು ಉಂಟುಮಾಡುವ ಗುಣ) ಹಾಗೂ ಲವಣ ರಸವನ್ನು ಹೊಂದಿದೆ. ವಿಶೇಷವಾಗಿ ಒಂಟೆ, ಆಡು ಮುಂತಾದ ಒಣ ಪ್ರದೇಶಗಳಲ್ಲಿ ವಾಸಿಸುವ ಹಾಗೂ ಒಣ ಆಹಾರ ಸೇವಿಸುವ ಪ್ರಾಣಿಗಳ ಮೂತ್ರದಲ್ಲಿ ಲವಣತ್ವ ಇನ್ನಷ್ಟು ಹೆಚ್ಚಾಗಿರುತ್ತದೆ ಎಂದು ಗ್ರಂಥಗಳು ವಿವರಿಸುತ್ತವೆ. ಈ ಲವಣ ಮತ್ತು ಸರ ಗುಣಗಳಿಂದ ದೇಹದಲ್ಲಿ ಸಂಗ್ರಹ ವಾಗಿರುವ ಕಫ, ಮೇದಸ್ಸು ಮತ್ತು ಕ್ಲೇದ ಕರಗಲು ಸಹಾಯವಾಗುತ್ತದೆ.

ಆದರೆ, ಇದೇ ಗುಣಗಳು ಅತಿಯಾದರೆ ಅದರ ದುಷ್ಪರಿಣಾಮಗಳೂ ಗಂಭೀರವಾಗಬಹುದು. ದೀರ್ಘ ಕಾಲ ಅಥವಾ ವಿವೇಚನೆಯಿಲ್ಲದೆ ಮೂತ್ರವನ್ನು ಬಳಸುವುದರಿಂದ ದೇಹದ ಧಾತುಗಳು ಕ್ರಮೇಣ ಕ್ಷೀಣಿಸಬಹುದು. ಪರಿಣಾಮವಾಗಿ ದೇಹದ ದುರ್ಬಲತೆ, ಕಣ್ಣಿನ ತೊಂದರೆಗಳು, ಕೂದಲು ಉದುರುವುದು, ಚರ್ಮದ ಕಾಂತಿ ಕಡಿಮೆಯಾಗುವುದು, ಇಂದ್ರಿಯಗಳ ಶಕ್ತಿ ಕ್ಷೀಣಿಸುವುದು, ಸಂಧಿಗಳ ಸವೆತ, ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು ಹಾಗೂ ಅಕಾಲಿಕ ವೃದ್ಧಾಪ್ಯದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಂದರೆ, ಕಫ ಮತ್ತು ಮೇದಸ್ಸನ್ನು ಕರಗಿಸುವ ಅದೇ ಗುಣವು ಮಿತಿ ಮೀರಿದರೆ ಆರೋಗ್ಯಕರ ಧಾತುಗಳ ಮೇಲೆಯೂ ಪರಿಣಾಮ ಬೀರುತ್ತದೆ.

ಆಯುರ್ವೇದದ ಪ್ರಕಾರ, ಅನೇಕ ವಾತರೋಗಗಳು ಕೇವಲ ವಾತದ ಹೆಚ್ಚಳದಿಂದ ಮಾತ್ರ ಉಂಟಾಗುವುದಿಲ್ಲ. ಹಲವಾರು ಬಾರಿ ಕಫ, ಮೇದಸ್ಸು ಅಥವಾ ಆಮವು ದೇಹದ ಸ್ರೋತಸ್ಸು ಗಳನ್ನು ಮುಚ್ಚಿದಾಗ ವಾತದ ಸಹಜ ಗತಿಯು ಅಡ್ಡಿಯಾಗುತ್ತದೆ.

ಇದನ್ನೇ ಕಫವೃತ ವಾತ ಅಥವಾ ಅವರೋಧಜನ್ಯ ವಾತ ಎಂದು ಕರೆಯಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮೂತ್ರದ ತೀಕ್ಷ್ಣ, ಸರ ಹಾಗೂ ಲೇಖನ ಗುಣಗಳು ಆ ಅವರೋಧವನ್ನು ನಿವಾರಿಸಿ, ವಾತದ ಸಹಜ ಚಲನೆಯನ್ನು ಪುನಃ ಸ್ಥಾಪಿಸಲು ಸಹಾಯ ಮಾಡುತ್ತವೆ. ಪರಿಣಾಮವಾಗಿ ನೋವು, ಭಾರ, ಬಿಗಿತ ಮತ್ತು ಚಲನೆಯಲ್ಲಿನ ತೊಂದರೆಗಳು ಕಡಿಮೆಯಾಗಬಹುದು. ಆದರೆ, ಇಲ್ಲಿ ಗಮನಿಸ ಬೇಕಾದ ವಿಷಯವೆಂದರೆ, ಎಲ್ಲ ವಾತರೋಗಗಳಿಗೂ ಮೂತ್ರವು ಔಷಧಿಯಲ್ಲ.

ಕಫದ ಅವರೋಧದಿಂದ ಉಂಟಾಗಿರುವ ವಾತ ವಿಕಾರಗಳಲ್ಲಿ ಮಾತ್ರ ಅದರ ಉಪಯೋಗವನ್ನು ಆಯುರ್ವೇದ ಉಲ್ಲೇಖಿಸುತ್ತದೆ. ಮೂತ್ರವನ್ನು ಕ್ರಿಮಿಘ್ನ ದ್ರವ್ಯವಾಗಿಯೂ ಆಯುರ್ವೇದ ಪರಿಗಣಿಸುತ್ತದೆ. ಕ್ರಿಮಿ ಎಂಬ ಪದವು ಕೇವಲ ಹೊಟ್ಟೆಯ ಹುಳುಗಳಿಗೆ ಮಾತ್ರ ಸೀಮಿತವಲ್ಲ, ದೇಹದಲ್ಲಿ ವಿವಿಧ ರೀತಿಯ ಸೂಕ್ಷ್ಮಜೀವಿಗಳು ಮತ್ತು ಪರೋಪ ಜೀವಿಗಳಿಂದ ಉಂಟಾಗುವ ಕೆಲವು ರೋಗಸ್ಥಿತಿಗಳನ್ನೂ ಒಳಗೊಂಡಿದೆ.

ತೀಕ್ಷ್ಣ ಮತ್ತು ಕ್ಷಾರಪ್ರಧಾನ ಗುಣಗಳಿಂದ ಕೆಲವು ಕ್ರಿಮಿಜನ್ಯ ತೊಂದರೆಗಳಲ್ಲಿ ಮೂತ್ರವನ್ನು ಇತರ ಔಷಧಿಗಳೊಂದಿಗೆ ಸಂಯೋಜಿಸಿ ಬಳಸುವ ಉಲ್ಲೇಖಗಳು ದೊರೆಯುತ್ತವೆ. ಇದರ ಜತೆಗೆ, ಆಯುರ್ವೇದದ ಕೆಲವು ಗ್ರಂಥಗಳಲ್ಲಿ ಅರ್ಬುದ, ಗುಲ್ಮ, ವಿಷವಿಕಾರಗಳು, ಕುಷ್ಠ ಹಾಗೂ ಇತರ ಚರ್ಮರೋಗಗಳು, ಮತ್ತು ಅರ್ಶಸ್ (ಮೂಲವ್ಯಾಧಿ) ಮೊದಲಾದ ರೋಗಗಳಲ್ಲಿ ಮೂತ್ರದ ಉಪಯೋಗದ ಉಲ್ಲೇಖಗಳಿವೆ.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಈ ಉಲ್ಲೇಖಗಳ ಅರ್ಥ, ಮೂತ್ರವೊಂದನ್ನೇ ಸೇವಿಸಿದರೆ ಕ್ಯಾನ್ಸರ್ ಅಥವಾ ಇತರ ಗಂಭೀರ ರೋಗಗಳು ಸಂಪೂರ್ಣವಾಗಿ ಗುಣವಾಗುತ್ತವೆ ಎಂಬುದಲ್ಲ. ಆಯುರ್ವೇದದಲ್ಲಿ ಇಂತಹ ಸಂಕೀರ್ಣ ರೋಗಗಳ ಚಿಕಿತ್ಸೆಯು ಬಹುಮುಖವಾಗಿದ್ದು, ಆಹಾರ, ವಿಹಾರ, ಔಷಧ, ಶೋಧನ ಚಿಕಿತ್ಸೆಗಳು ಹಾಗೂ ಅನೇಕ ಔಷಧ ಸಂಯೋಜನೆಗಳನ್ನು ಒಳಗೊಂಡಿರುತ್ತದೆ. ಆ ಚಿಕಿತ್ಸಾ ಯೋಜನೆಯಲ್ಲಿ, ನಿರ್ದಿಷ್ಟ ಸಂದರ್ಭ ಗಳಲ್ಲಿ, ಮೂತ್ರವು ಒಂದು ಔಷಧಿಯ ದ್ರವ್ಯವಾಗಿ ಅಥವಾ ಒಂದು ಸಹಾಯಕ ಚಿಕಿತ್ಸೆಯಾಗಿ ಸ್ಥಾನ ಪಡೆಯುತ್ತದೆ.

ವಿಷವಿಕಾರಗಳಲ್ಲಿಯೂ ಮೂತ್ರದ ತೀಕ್ಷ್ಣ ಮತ್ತು ದೋಷಚಾಲಕ ಗುಣಗಳನ್ನು ಪರಿಗಣಿಸಿ ಕೆಲವು ನಿರ್ದಿಷ್ಟ ಚಿಕಿತ್ಸಾ ವಿಧಾನಗಳನ್ನು ಗ್ರಂಥಗಳು ವಿವರಿಸುತ್ತವೆ. ಮೂತ್ರಪಾನದ ಕುರಿತು ಆಯು ರ್ವೇದದ ನಿಲುವನ್ನು ಒಂದು ವಾಕ್ಯದಲ್ಲಿ ಹೇಳಬೇಕಾದರೆ, ವಿವೇಚನೆಯಿಂದ ಬಳಸಿದರೆ ಔಷಧಿ, ವಿವೇಚನೆಯಿಲ್ಲದೆ ಬಳಸಿದರೆ ಅಪಾಯ. ಇದೇ ಆಯುರ್ವೇದದ ಮೂಲ ಸಂದೇಶವಾಗಿದೆ.

ಆಯುರ್ವೇದವು ಮೂತ್ರವನ್ನು ಎಂದಿಗೂ ಎಲ್ಲರೂ ಪ್ರತಿದಿನ ಸೇವಿಸಬೇಕಾದ ಆರೋಗ್ಯ ಪಾನೀಯವೆಂದು ಹೇಳುವುದಿಲ್ಲ. ಹಾಗೆಯೇ ಅದನ್ನು ಯಾವುದೇ ವೈಜ್ಞಾನಿಕ ಆಧಾರವಿಲ್ಲದ ಮೂಢನಂಬಿಕೆಯೆಂದೂ ತಳ್ಳಿ ಹಾಕುವುದಿಲ್ಲ. ಬದಲಾಗಿ, ಅದರ ಗುಣಗಳು, ದೋಷಗಳ ಮೇಲೆ ಬೀರುವ ಪರಿಣಾಮ, ವ್ಯಕ್ತಿಯ ಪ್ರಕೃತಿ, ರೋಗದ ಸ್ವರೂಪ, ಋತು, ದೇಶ ಹಾಗೂ ಪ್ರಮಾಣ- ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಅಗತ್ಯವಿದ್ದಾಗ ಮಾತ್ರ ಔಷಧಿಯ ದ್ರವ್ಯವಾಗಿ ಬಳಸುವಂತೆ ಸೂಚಿಸುತ್ತದೆ.

ಇದು ಕೇವಲ ಮೂತ್ರಕ್ಕೆ ಮಾತ್ರ ಅನ್ವಯಿಸುವ ತತ್ವವಲ್ಲ. ಆಯುರ್ವೇದದಲ್ಲಿ ಪ್ರತಿಯೊಂದು ಔಷಧಿಗೂ ಇದೇ ನಿಯಮ. ತುಪ್ಪ, ಜೇನು, ಹಾಲು, ಶುಂಠಿ, ಮೆಣಸು, ಬೇವು, ತ್ರಿಫಲಾ -ಇವುಗಳೆಲ್ಲವೂ ಸರಿಯಾದ ವ್ಯಕ್ತಿಗೆ, ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ಔಷಧಿಗಳಾಗುತ್ತವೆ, ತಪ್ಪಾಗಿ ಬಳಸಿದರೆ ಅಡ್ಡಪರಿಣಾಮಗಳಿಗೂ ಕಾರಣವಾಗಬಹುದು. ಮೂತ್ರದ ವಿಷಯದಲ್ಲಿಯೂ ಇದೇ ವಿವೇಚನೆ ಅಗತ್ಯ.

ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಯಾವುದೇ ವಿಷಯವು ಎರಡು ತುದಿಗಳಿಗೆ ಹೋಗುವುದು ಸಾಮಾನ್ಯ. ಒಂದು ಕಡೆ ಮೂತ್ರವನ್ನು ಎಲ್ಲ ರೋಗಗಳಿಗೂ ಅದ್ಭುತ ಪರಿಹಾರ ವೆಂದು ಪ್ರಚಾರ ಮಾಡಲಾಗುತ್ತದೆ. ಮತ್ತೊಂದು ಕಡೆ ಅದನ್ನು ಸಂಪೂರ್ಣವಾಗಿ ಹಾಸ್ಯಾಸ್ಪದ ಅಥವಾ ಅವೈಜ್ಞಾನಿಕ ಎಂದು ತಿರಸ್ಕರಿಸಲಾಗುತ್ತದೆ. ಆದರೆ, ಆಯುರ್ವೇದದ ದೃಷ್ಟಿಕೋನ ಈ ಎರಡಕ್ಕೂ ಭಿನ್ನವಾಗಿದೆ.

ಆಯುರ್ವೇದವು ಅತಿರೇಕವನ್ನು ಒಪ್ಪುವುದಿಲ್ಲ, ಯುಕ್ತಿ, ಅನುಭವ ಮತ್ತು ಶಾಸ್ತ್ರ ಇವುಗಳ ಸಮನ್ವಯವನ್ನೇ ಒಪ್ಪುತ್ತದೆ. ಆದ್ದರಿಂದ ಮೂತ್ರಪಾನದ ಬಗ್ಗೆ ಯಾವುದೇ ನಿರ್ಧಾರವನ್ನು ಜನಪ್ರಿಯ ಪ್ರಚಾರಗಳು, ಸಾಮಾಜಿಕ ಮಾಧ್ಯಮದ ಸಲಹೆಗಳು ಅಥವಾ ವೈಯಕ್ತಿಕ ಅನುಭವಗಳ ಆಧಾರದ ಮೇಲೆ ತೆಗೆದುಕೊಳ್ಳಬಾರದು.

ಅದರ ಬದಲಾಗಿ, ಆಯುರ್ವೇದದ ತತ್ವಗಳನ್ನು ಅರ್ಥಮಾಡಿಕೊಂಡು, ಅರ್ಹ ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲಿ, ಅಗತ್ಯವಿದ್ದಾಗ ಮಾತ್ರ ಅದನ್ನು ಔಷಧಿಯಾಗಿ ಬಳಸುವುದು ಸುರಕ್ಷಿತ ಮತ್ತು ಶಾಸ್ತ್ರೋಕ್ತವಾದ ಮಾರ್ಗವಾಗಿದೆ.

ಆಯುರ್ವೇದದ ಶಕ್ತಿ ಯಾವುದನ್ನಾದರೂ ಅಂಧವಾಗಿ ಒಪ್ಪಿಕೊಳ್ಳುವುದರಲ್ಲಿ ಇಲ್ಲ, ಯಾವುದನ್ನೂ ಅಂಧವಾಗಿ ತಿರಸ್ಕರಿಸುವುದರಲ್ಲಿಯೂ ಇಲ್ಲ. ಪ್ರತಿಯೊಂದು ದ್ರವ್ಯವನ್ನೂ ಅದರ ಯೋಗ್ಯತೆ, ಸಂದರ್ಭ ಮತ್ತು ವಿವೇಚನೆಯೊಂದಿಗೆ ಬಳಸುವುದೇ ನಿಜವಾದ ಆಯುರ್ವೇದ.