ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vidyashankar Sharma Column: ಜನಮತದ ಬೆಂಬಲ ಪಡೆದ ಶ್ರೀರಾಮನ ಪಟ್ಟಾಭಿಷೇಕ

ದಶರಥನು ತನ್ನ ಇಚ್ಛೆಯನ್ನು ಪ್ರಕಟಿಸಿದಾಗ, ಪ್ರಜೆಗಳು ಒಮ್ಮತದಿಂದ ‘ಅದು ಸರಿಯಾದ ನಿರ್ಣಯ’ ಎನ್ನುತ್ತಾರೆ. ಆಗ ದಶರಥನು ಹೇಳುವ ಮಾತುಗಳನ್ನು ಗಮನಿಸಬೇಕು- “ಪ್ರಜೆ ಗಳೇ, ನನ್ನ ಉದ್ದೇಶವನ್ನು ಹೇಳಿದ ತಕ್ಷಣ ನೀವೆಲ್ಲರೂ ಅದನ್ನು ಕೂಡಲೇ ಒಪ್ಪಿಬಿಟ್ಟಿರಿ. ನನ್ನ ಮಾತುಗಳನ್ನು ಪಾಲಿಸಬೇಕೆಂದು ನೀವು ಹೀಗೆ ಹೇಳುತ್ತಿಲ್ಲವಷ್ಟೇ? ನನ್ನ ಆಡಳಿತವು ಸುಗಮ ವಾಗಿರುವಾಗ, ನನ್ನ ಮಗನು ರಾಜನಾಗಲು ವಿಶೇಷವಾದ ಕಾರಣವೇನಾದರೂ ತಮ್ಮಲ್ಲಿ ಇರುವುದೇ?".

ವಿದ್ಯಾಶಂಕರ ಶರ್ಮ, ಸಿದ್ದಾಪುರ

ನಾವಿಂದು ಪ್ರಜಾಪ್ರಭುತ್ವ ಆಡಳಿತದಲ್ಲಿ ಇದ್ದೇವೆ. ಜನರಿಂದ, ಜನರಿಗಾಗಿ ಜನರೇ ನಡೆಸುವ ಆಡಳಿತ ವ್ಯವಸ್ಥೆ ಎಂಬುದು ಅದರ ಅರ್ಥ. ಆದರೆ ಈಗಿನ ವ್ಯವಸ್ಥೆಯಲ್ಲಿ ಇದೇ ಮಾದರಿಯನ್ನು ಯಥಾವತ್ತಾಗಿ ಅನುಸರಿಸುತ್ತಿದ್ದಾರೆಯೇ ಎಂಬುದು ಪ್ರಶ್ನೆ. ಸ್ವಜನ ಪಕ್ಷಪಾತ, ಕುಟುಂಬ ವ್ಯಾಮೋಹ ಇವೆಲ್ಲ ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಕಲುಷಿತಗೊಳಿಸಿವೆ.

ಹಿಂದೆಲ್ಲ ರಾಜರ ಆಡಳಿತ ಇರುವಾಗ, ಆಡಳಿತವು ವಂಶಪಾರಂಪರ್ಯವಾಗಿತ್ತು. ಅದು ಒಂದು ಸ್ವಾಭಾವಿಕವಾದ ವ್ಯವಸ್ಥೆಯಾಗಿತ್ತು. ಹಾಗಿದ್ದರೂ ಪಟ್ಟವನ್ನು ಏರುವವನ ಯೋಗ್ಯತೆಯನ್ನು ವಿಮರ್ಶಿಸಲಾಗುತ್ತಿತ್ತು. ಆಡಳಿತಗಾರರು ಸ್ವಾರ್ಥಕ್ಕಿಂತ ಜನಹಿತವನ್ನು ಹೆಚ್ಚು ಬಯಸುತ್ತಿದ್ದರು.

ಆದರ್ಶ ಪುರುಷ ಶ್ರೀರಾಮನ ಪಟ್ಟಾಭಿಷೇಕದ ಸಮಯದಲ್ಲಿ ದಶರಥನು ನಡೆದುಕೊಂಡ ರೀತಿ ಈ ಮಾತುಗಳನ್ನು ಬಲವಾಗಿ ಪುಷ್ಟೀಕರಿಸುತ್ತದೆ. ಶ್ರೀರಾಮನ ಪಟ್ಟಾಭಿಷೇಕವನ್ನು ನಿಶ್ಚಯಿಸುವ ದಶರಥನು ಪುರಜನರ ಸಭೆಯೊಂದನ್ನು ಆಯೋಜಿಸಿ, ತನ್ನ ಹಿರಿಯ ಮಗನಿಗೆ ಆಡಳಿತದ ಜವಾಬ್ದಾರಿ ನೀಡುವ ನಿರ್ಧಾರವನ್ನು ಪ್ರಕಟಿಸುತ್ತಾನೆ.

ಇದನ್ನೂ ಓದಿ: Roopa Gururaj Column: ಮಾಯೆ ಎಂದರೇನು ? ಅಷ್ಟಾವಕ್ರ ಗೀತೆಯಲ್ಲಿ ಸಿಗುವ ಉತ್ತರ

‘ನಾನು ಪ್ರಜೆಗಳ ಒಳಿತಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ನನ್ನ ಮಗನೂ ಇದೇ ಕಾರ್ಯ ವನ್ನು ಮುಂದುವರಿಸುವನೆಂಬ ಭರವಸೆ ನನಗಿದೆ. ಪ್ರಜೆಗಳು ಈ ವಿಷಯದಲ್ಲಿ ಸರಿಯಾದ ತೀರ್ಮಾನ ಕೊಡಬಲ್ಲರು. ನಾನು ಶ್ರೀರಾಮನ ತಂದೆಯಾದ್ದರಿಂದ ನನಗೆ ಅವನಲ್ಲಿ ಸಹಜವಾಗಿ ಮಮತೆ ಇರುವುದು. ಆದರೆ ಪ್ರಜೆಗಳು ಪಕ್ಷಪಾತರಹಿತರು, ಹಾಗಾಗಿ ಅವರ ಅಭಿಪ್ರಾಯ ಬಹುಮುಖ್ಯ’ ಎನ್ನುತ್ತಾನೆ.

ಪ್ರಜೆಗಳ ಅಭಿಪ್ರಾಯಕ್ಕೆ ರಾಜರು ಎಷ್ಟು ಪ್ರಾಮುಖ್ಯವನ್ನು ಕೊಡುತ್ತಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ. ರಾಜರ ಆಳ್ವಿಕೆಯಲ್ಲಿ ಅವನ ವಂಶಸ್ಥರೇ ಆಡಳಿತ ಮುಂದು ವರಿಸಬೇಕೆಂಬುದು ಪದ್ಧತಿಯಾದರೂ, ಅಂಥ ಆಯ್ಕೆಯಲ್ಲಿ ಪ್ರಜೆಗಳೂ ಸಹಭಾಗಿಗಳಾಗಿರ ಬೇಕೆಂಬ ಆಶಯವನ್ನು ನಮ್ಮ ರಾಜರುಗಳು ಹೊಂದಿದ್ದರು.

ದಶರಥನು ತನ್ನ ಇಚ್ಛೆಯನ್ನು ಪ್ರಕಟಿಸಿದಾಗ, ಪ್ರಜೆಗಳು ಒಮ್ಮತದಿಂದ ‘ಅದು ಸರಿಯಾದ ನಿರ್ಣಯ’ ಎನ್ನುತ್ತಾರೆ. ಆಗ ದಶರಥನು ಹೇಳುವ ಮಾತುಗಳನ್ನು ಗಮನಿಸಬೇಕು- “ಪ್ರಜೆ ಗಳೇ, ನನ್ನ ಉದ್ದೇಶವನ್ನು ಹೇಳಿದ ತಕ್ಷಣ ನೀವೆಲ್ಲರೂ ಅದನ್ನು ಕೂಡಲೇ ಒಪ್ಪಿಬಿಟ್ಟಿರಿ. ನನ್ನ ಮಾತುಗಳನ್ನು ಪಾಲಿಸಬೇಕೆಂದು ನೀವು ಹೀಗೆ ಹೇಳುತ್ತಿಲ್ಲವಷ್ಟೇ? ನನ್ನ ಆಡಳಿತವು ಸುಗಮವಾಗಿರುವಾಗ, ನನ್ನ ಮಗನು ರಾಜನಾಗಲು ವಿಶೇಷವಾದ ಕಾರಣವೇನಾದರೂ ತಮ್ಮಲ್ಲಿ ಇರುವುದೇ?".

ಇಲ್ಲಿ ದಶರಥನು ನೆರೆದ ರಾಜರ, ಪ್ರಜೆಗಳ ಪ್ರಾಮಾಣಿಕ ಅಭಿಪ್ರಾಯವನ್ನು ಬಯಸು ತ್ತಿದ್ದಾನೆ. ತಾನು ಹೇಳಿದ ಕಾರಣಕ್ಕಾಗಿ ಶ್ರೀರಾಮನ ಪಟ್ಟಾಭಿಷೇಕವನ್ನು ಅವರು ಅನುಮೋದಿಸುತ್ತಿರುವರು ಎಂಬುದು ಅವನ ಅನಿಸಿಕೆಯಾಗಿತ್ತು. ಅಂದರೆ ‘ಅವರು ತಮ್ಮ ಸ್ವಂತಬುದ್ಧಿಯಿಂದ ವಿಚಾರ ಮಾಡಿ ಅಭಿಪ್ರಾಯವನ್ನು ಹೇಳುತ್ತಿರುವರೇ?’ ಎಂಬುದು ಅವನ ಪ್ರಶ್ನೆಯಾಗಿತ್ತು.

ರಾಜನ ತೀರ್ಮಾನ ಅಂತಿಮವಾಗಿದ್ದರೂ, ಅದನ್ನು ಪ್ರಜೆಗಳು ಹೇಗೆ ಸ್ವೀಕರಿಸಬಹುದು ಎಂಬುದರ ಪರೀಕ್ಷೆ ಕೂಡ ಇಲ್ಲಿರುವುದು ತಿಳಿಯುತ್ತದೆ. ದಶರಥನ ಪ್ರಶ್ನೆಗೆ ಉತ್ತರವಾಗಿ ಜನರು ಶ್ರೀರಾಮನ ವಿಶೇಷ ಗುಣಗಳನ್ನು ಹೆಸರಿಸುತ್ತಾರೆ. ರಾಜರು ನಗರ ಪ್ರವಾಸ ಮಾಡುವ ಪರಿಪಾಠ ಆಗ ಇದ್ದಿತು.

ಅಂಥ ಪ್ರಸಂಗಗಳಲ್ಲಿ ರಾಮನ ವರ್ತನೆಯನ್ನು ಪ್ರಜೆಗಳು ವರ್ಣಿಸುತ್ತಾರೆ. ರಾಮನು ನಗರ ಪರ್ಯಟನೆಯಲ್ಲಿ ಪ್ರಜೆಯ ಕುಟುಂಬದ ಹಿರಿಯನನ್ನು ಸಂದರ್ಶಿಸಿ, ಕುಟುಂಬದ ಪ್ರತಿ ಸದಸ್ಯನ ಬಗೆಗೆ ವಿಚಾರಿಸುತ್ತಿದ್ದನು. ಹೆಣ್ಣು ಮಕ್ಕಳ ವಿವಾಹ, ಕುಟುಂಬದ ಸೌಹಾರ್ದ, ಸೇವಕರ ನಡತೆ, ಗುರು-ಶಿಷ್ಯರ ಬಾಂಧವ್ಯ, ಮನೆಯಲ್ಲಿ ನಡೆಯಬೇಕಾದ ಯಜ್ಞ ಕಾರ್ಯ ಗಳು ಹೀಗೆ ಎಲ್ಲ ವಿಷಯಗಳ ಕುರಿತು ತಿಳಿದುಕೊಳ್ಳುತ್ತಿದ್ದನು. ಅಂದರೆ ಪ್ರಜೆ ಗಳೆಡೆಗೆ ಅವನಿಗೆ ಆತ್ಮೀಯತೆ ಇತ್ತು ಎಂಬುದು ತಿಳಿದುಬರುತ್ತದೆ.

ಶ್ರೀರಾಮನು ಪ್ರಜೆಗಳ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಾನೆ ಎನ್ನುತ್ತಾರೆ ಅಲ್ಲಿ ನೆರೆದ ಸಭಾಸದರು. ಅಪರಾಧಿಗಳನ್ನು ಶಿಕ್ಷಿಸುವ, ತನ್ನ ತಪ್ಪಿಗೆ ಪಶ್ಚಾತ್ತಾಪ ಪಡುವವರನ್ನು ಕ್ಷಮಿಸುವ ಗುಣವು ರಾಮನಲ್ಲಿದೆ. ಮಹಾಪರಾಧವನ್ನು ಮಾಡಿದ್ದರೂ ಅದರ ಕೂಲಂಕಷ ವಿಚಾರಣೆಯಾಗದೆ ದಂಡಿಸುವುದಿಲ್ಲ, ಒಂದು ವೇಳೆ ನ್ಯಾಯಾಲಯದಲ್ಲಿ ಅಪರಾಧವು ಸ್ಥಿರವಾಗದಿದ್ದರೆ ಅಪರಾಧಿಯ ವಿಷಯದಲ್ಲಿ ಕೋಪಗೊಳ್ಳುವುದಿಲ್ಲ.

ಸದಾ ಸೌಜನ್ಯಯುತ ವರ್ತನೆ, ಮನೋನಿಗ್ರಹಗಳಿಂದ ರಾಮನು ಬಲು ವಿಶೇಷವಾದ ವ್ಯಕ್ತಿತ್ವವನ್ನು ಹೊಂದಿರುವ ಮಹಾನುಭಾವನಾಗಿzನೆ. ಯಾವುದೇ ಯುದ್ದದಿಂದ ಹಿಂತಿರು ಗಿದ ಮೇಲೆ ರಾಮ ಪ್ರಜೆಗಳ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದನು. ಅಂದರೆ ರಾಮನು ಎಲ್ಲ ರೀತಿಯಿಂದಲೂ ರಾಜನ ಪದವಿಗೆ ಯೋಗ್ಯನು, ರಾಷ್ಟ್ರ ರಕ್ಷಣೆ, ಪ್ರಜೆಗಳ ಹಿತ ಎರಡನ್ನೂ ನಿರ್ವಹಿಸಲು ಅವನು ಅತ್ಯಂತ ಯೋಗ್ಯನು ಎಂಬ ತೀರ್ಮಾನವನ್ನು ಪ್ರಜೆಗಳು ದಶರಥನಿಗೆ ತಿಳಿಸುತ್ತಾರೆ.

ಶ್ರೀರಾಮನ ಪಟ್ಟಾಭಿಷೇಕದ ಈ ಸನ್ನಿವೇಶ ರಾಜ ಮತ್ತು ಪ್ರಜೆಗಳ ನಡುವಿನ ಉತ್ತಮ ಸಂಬಂಧ, ಪ್ರಜೆಗಳ ಅಭಿಪ್ರಾಯಕ್ಕೆ ಮನ್ನಣೆ, ಸುಭದ್ರ ಆಡಳಿತದ ಮಹತ್ವಗಳನ್ನು ಹೇಳುವದರ ಜತೆಗೆ, ಭರತ ಭೂಮಿಯ ರಾಜರುಗಳ ಆಡಳಿತ ವೈಖರಿಯನ್ನು ವಿವರಿಸುತ್ತದೆ. ರಾಜಾಡಳಿತದ ಬಗೆಗೆ ಶ್ರೀರಾಮನು ಹೊಂದಿದ್ದ ಶ್ರದ್ಧೆ ಮತ್ತು ಗೌರವಗಳನ್ನು ಸಭಿಕರ ಗುಣವರ್ಣನೆಯಲ್ಲಿ ಕಾಣಬಹುದಾಗಿದೆ. ತನ್ನ ಅಗಣಿತ ಗುಣಗಳ ಜತೆಯಲ್ಲಿ, ಉತ್ತಮ ಆಡಳಿತಗಾರ ಹೇಗಿರಬೇಕೆಂಬುದಕ್ಕೆ ಶ್ರೀರಾಮನು ಮಾದರಿಯಾಗಿದ್ದಾನೆ.