Roopa Gururaj Column: ಮಾಯೆ ಎಂದರೇನು ? ಅಷ್ಟಾವಕ್ರ ಗೀತೆಯಲ್ಲಿ ಸಿಗುವ ಉತ್ತರ
ಈ ಸಂದರ್ಭಕ್ಕೆ ಅಷ್ಟಾವಕ್ರ ಗೀತೆಯ ಈ ಸಾಲು ಅತ್ಯಂತ ಸೂಕ್ತ: ‘ನ ಪ್ರಹೃಷ್ಯತಿ ಸಮ್ಮಾನೇ ನೈವ ಖಿದ್ಯತ್ಯಸನ್ಮನೇ | ಯಥಾ ಗಚ್ಛೇತ್ ಪ್ರಸನ್ನಾತ್ಮಾ ಸ ಏವ ಜ್ಞಾನವಿತ್ತಮಃ’, ಅಂದರೆ ಸನ್ಮಾನ ಸಿಕ್ಕಾಗ ಅತಿಯಾಗಿ ಹರ್ಷಪಡದವನು ಮತ್ತು ಅಪಮಾನವಾದಾಗ ಕುಗ್ಗದವನು, ಯಾವಾಗಲೂ ಪ್ರಸನ್ನವಾಗಿರುವವನೇ ನಿಜವಾದ ಜ್ಞಾನಿ.
-
ಒಂದೊಳ್ಳೆ ಮಾತು
ಒಮ್ಮೆ ಜನಕ ಮಹಾರಾಜನು ತನ್ನ ಅರಮನೆಯ ಮೃದುವಾದ ಹಾಸಿಗೆಯ ಮೇಲೆ ಮಲಗಿದ್ದಾಗ ಒಂದು ಕನಸು ಕಂಡನು. ಆ ಕನಸಿನಲ್ಲಿ ಅವನು ತನ್ನ ರಾಜ್ಯವನ್ನೆ ಕಳೆದು ಕೊಂಡು, ಹಸಿವಿನಿಂದ ಅಲೆಯುತ್ತಿದ್ದನು. ತಿನ್ನಲು ಒಂದು ತುತ್ತು ಅನ್ನವಿಲ್ಲದೆ ರಸ್ತೆಯಲ್ಲಿ ಬಿದ್ದಿದ್ದಾಗ, ಯಾರೋ ಪುಣ್ಯಾತ್ಮರು ಅವನಿಗೆ ಸ್ವಲ್ಪ ಗಂಜಿ ನೀಡಿದರು.
ಅದನ್ನು ಕುಡಿಯಲು ಹೋದಾಗ, ಒಂದು ಹದ್ದು ಬಂದು ಆ ಪಾತ್ರೆಯನ್ನು ಕೆಡವಿತು. ಹಸಿವಿನ ತೀವ್ರತೆಯಿಂದ ಜನಕನು ಜೋರಾಗಿ ಕಿರುಚಿದನು. ಆ ಕ್ಷಣವೇ ಅವನಿಗೆ ಎಚ್ಚರ ವಾಯಿತು.
ಎಚ್ಚರವಾದಾಗ ಅವನು ತನ್ನ ಸುಂದರ ಅರಮನೆಯಲ್ಲಿ, ರೇಷ್ಮೆ ಹಾಸಿಗೆಯ ಮೇಲಿದ್ದನು. ಸೇವಕರು ಪಕ್ಕದ ನಿಂತಿದ್ದರು. ಜನಕನಿಗೆ ದೊಡ್ಡ ಗೊಂದಲ ಶುರುವಾಯಿತು. ಗಂಜಿಗಾಗಿ ಹಸಿದು ಅಲೆಯುತ್ತಿದ್ದ ಆ ನಾನು ನಿಜವೋ? ಅಥವಾ ಅರಮನೆಯಲ್ಲಿರುವ ಈ ರಾಜ ಜನಕ ನಿಜವೋ? ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿರಲಿಲ್ಲ. ಆಗ ಅವನು ಅಷ್ಟಾವಕ್ರ ಮುನಿಗಳನ್ನು ಕೇಳಿದನು, “ಗುರುದೇವ, ‘ಮಾಯೆ’ ಎನ್ನುವುದು ನಿಜವೇ? ಅಥವಾ ಅದು ಕೇವಲ ಜ್ಞಾನಿಗಳು ಹೇಳುವ ಒಂದು ಕಲ್ಪನೆಯೇ? ಕನಸಿನಲ್ಲಿ ಕಂಡ ಆ ಹಸಿವು ನಿಜವೋ ಅಥವಾ ಈ ಅರಮನೆ ನಿಜವೋ?" ಅಷ್ಟಾವಕ್ರರು ಶಾಂತವಾಗಿ ಉತ್ತರಿಸಿದರು, “ರಾಜನ್, ನೀನು ಕನಸಿನಲ್ಲಿ ಹಸಿದು ಅಲೆಯುತ್ತಿದ್ದಾಗ ಈ ಅರಮನೆ ಇರಲಿಲ್ಲ. ಈಗ ಅರಮನೆಯಲ್ಲಿ ದ್ದಾಗ ಆ ಹಸಿವು ಮತ್ತು ಹದ್ದು ಇಲ್ಲ. ಅಂದರೆ, ಅದು ಸುಳ್ಳು, ಇದೂ ಸುಳ್ಳು! (ನ ತತ್ ಸತ್ಯಂ, ನ ಇದಂ ಸತ್ಯಂ).
ಇದನ್ನೂ ಓದಿ: Roopa Gururaj Column: ಕನ್ನಡಿ ಮತ್ತು ಕಲೆಯ ಭ್ರಮೆ: ಅಷ್ಟಾವಕ್ರ ಗೀತೆ
ಜನಕ ಗಾಬರಿಯಿಂದ ಕೇಳಿದನು, “ಹಾಗಾದರೆ ಸತ್ಯ ಯಾವುದು?" ಅಷ್ಟಾವಕ್ರರು ನಗು ಮೊಗದಿಂದ ಹೇಳಿದರು, “ಆ ಕನಸನ್ನೂ ನೋಡುತ್ತಿದ್ದ ಮತ್ತು ಈ ನನಸನ್ನೂ ನೋಡು ತ್ತಿರುವ ‘ನೀನು’ ಮಾತ್ರ ಸತ್ಯ! ನಿದ್ರೆಯಲ್ಲಿ ಮತ್ತು ಎಚ್ಚರದಲ್ಲಿ ಎರಡೂ ಸ್ಥಿತಿಗಳಲ್ಲಿ ಬದಲಾಗದೆ ಉಳಿದಿರುವ ಆ ಸಾಕ್ಷಿಪ್ರಜ್ಞೆಯೇ ನಿಜವಾದ ಸತ್ಯ. ಮಿಕ್ಕಿದ್ದೆಲ್ಲವೂ ಮಾಯೆ.
ಈ ಸಂದರ್ಭಕ್ಕೆ ಅಷ್ಟಾವಕ್ರ ಗೀತೆಯ ಈ ಸಾಲು ಅತ್ಯಂತ ಸೂಕ್ತ: ‘ನ ಪ್ರಹೃಷ್ಯತಿ ಸಮ್ಮಾನೇ ನೈವ ಖಿದ್ಯತ್ಯಸನ್ಮನೇ | ಯಥಾ ಗಚ್ಛೇತ್ ಪ್ರಸನ್ನಾತ್ಮಾ ಸ ಏವ ಜ್ಞಾನವಿತ್ತಮಃ’, ಅಂದರೆ ಸನ್ಮಾನ ಸಿಕ್ಕಾಗ ಅತಿಯಾಗಿ ಹರ್ಷಪಡದವನು ಮತ್ತು ಅಪಮಾನವಾದಾಗ ಕುಗ್ಗದವನು, ಯಾವಾಗಲೂ ಪ್ರಸನ್ನವಾಗಿರುವವನೇ ನಿಜವಾದ ಜ್ಞಾನಿ.
ಯಾವುದು ಕ್ಷಣಕ್ಷಣಕ್ಕೂ ಬದಲಾಗುತ್ತದೆಯೋ ಅದು ಮಾಯೆ. ನಮ್ಮ ಸುಖ, ಕಷ್ಟ, ಹಣ, ಅಧಿಕಾರ ಎಲ್ಲವೂ ಬದಲಾಗುತ್ತವೆ. ಅದಕ್ಕೆ ಅತಿಯಾಗಿ ಅಂಟಿಕೊಳ್ಳುವುದು ವ್ಯರ್ಥ. ನಾವು ಭೂತಕಾಲದ ನೆನಪುಗಳಲ್ಲಿ ಅಥವಾ ಭವಿಷ್ಯದ ಚಿಂತೆಯಲ್ಲಿ ಬದುಕುತ್ತೇವೆ. ಆದರೆ ಅಷ್ಟಾವಕ್ರರು ಹೇಳುವಂತೆ, ಎಲ್ಲವನ್ನೂ ಗಮನಿಸುತ್ತಿರುವ ನಮ್ಮ ‘ಅಂತರಾತ್ಮ’ ಮಾತ್ರ ಶಾಶ್ವತ.
ಜೀವನದಲ್ಲಿ ಕಷ್ಟ ಬಂದಾಗ ಅದು ‘ಕನಸು’ ಎಂದು ಭಾವಿಸಿ ಧೈರ್ಯ ತಂದುಕೊಳ್ಳಬೇಕು, ಸುಖ ಬಂದಾಗ ಅದು ‘ಮಾಯೆ’ ಎಂದು ಭಾವಿಸಿ ಅಹಂಕಾರ ಪಡಬಾರದು. ಇಂಥ ವಿಷಯಗಳನ್ನ ಮನನ ಮಾಡಿಕೊಂಡಾಗ ನಮ್ಮಲ್ಲಿ ಜೀವನವನ್ನು ಎದುರಿಸಲು ಮತ್ತಷ್ಟು ಅಂತಃಶಕ್ತಿ ಮೂಡುತ್ತದೆ.
ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ. ತಿರುಗುವ ಚಕ್ರದಂತೆ ಇಲ್ಲಿ ನಿರಂತರವಾಗಿ ಕಷ್ಟ ಸುಖಗಳ ನೆರಳು ಬೆಳಕಿನಾಟ ನಡೆದೇ ಇರುತ್ತದೆ. ಕಷ್ಟವನ್ನು ಇನ್ನು ಸಹಿಸಲು ಸಾಧ್ಯ ವಾಗುವುದಿಲ್ಲ ಎನ್ನುವ ಸ್ಥಿತಿಗೆ ತಲುಪಿದಾಗ ಅಲ್ಲಿ ಬೆಳಕಿನ ಕಿರಣ ಮೂಡಿರುತ್ತದೆ. ಯಶಸ್ಸಿನ ಅಮಲಿನಲ್ಲಿ ಮೈಮರೆತಾಗ ಅಲ್ಲಿ ಸೋಲಿನ ಪೆಟ್ಟು ಬಿದ್ದಿರುತ್ತದೆ.
ಆದ್ದರಿಂದಲೇ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುತ್ತಾ ಬದುಕನ್ನು ಬಂದಂತೆ ಸ್ವೀಕರಿ ಸುವ ತಟಸ್ಥ ಮನಸ್ಥಿತಿ ಇದ್ದಾಗ ಮಾತ್ರ ನಾವು ಮತ್ತಷ್ಟು ಅರ್ಥಪೂರ್ಣವಾಗಿ ಬದುಕಲು ಸಾಧ್ಯ. ಬದುಕನ್ನು ನಾವು ಹೇಗೆ ಎದುರಿಸಬಹುದು, ಸಾರ್ಥಕಗೊಳಿಸಿ ಕೊಳ್ಳಬಹುದು ಎಂಬುದನ್ನು ನಮ್ಮ ಸನಾತನ ಧರ್ಮದ ಅನೇಕ ಗ್ರಂಥಗಳಲ್ಲಿ ಅದ್ಭುತವಾಗಿ ವಿವರಿಸಿ ದ್ದಾರೆ.
ಇದಕ್ಕಾಗಿ ನಾವು ಹಣ ಕೊಟ್ಟು ಯಾರದ್ದೋ ಉಪದೇಶ ಪಡೆಯುವ ಅಗತ್ಯವಿಲ್ಲ. ನಮ್ಮದೇ ಗ್ರಂಥಗಳನ್ನು ಓದುವ, ಅವುಗಳನ್ನು ಅರ್ಥ ಮಾಡಿಕೊಳ್ಳುವ ಜ್ಞಾನದ ಹಸಿವು ನಮ್ಮಲ್ಲಿರಬೇಕು. ದಿನಕ್ಕೆ ಒಂದಷ್ಟು ಸಮಯವನ್ನು ಮೀಸಲಾಗಿರಿಸಿ ಇಂಥ ವಿಚಾರಗಳನ್ನು ತಿಳಿದುಕೊಳ್ಳುತ್ತಾ ಆತ್ಮಾವಲೋಕನ ಮಾಡಿಕೊಂಡರೆ ಸಾಕು. ದೊಡ್ಡ ದೊಡ್ಡ ಸೆಮಿನಾರ್ ಗಳಲ್ಲಿ ಕಲಿಸುವ ಜೀವನದ ಪಾಠಗಳನ್ನು ಇವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮಗೆ ಕಲಿಸುತ್ತವೆ...