ಹಿಂತಿರುಗಿ ನೋಡಿದಾಗ
ಇಂದು ನಾವು ಎರಡು ನೀಲಿ ಚರ್ಮಗಳ ಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯ ನೀಲಿ ಚರ್ಮದ ಕಥೆ ಈ ಕೆಳಕಂಡಂತಿದೆ. ನಿಮ್ಮಲ್ಲಿ ಬಹುತೇಕರು, ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್’ ಚಲನಚಿತ್ರವನ್ನು ನೋಡಿರಬಹುದು. ಇದೊಂದು ವೈಜ್ಞಾನಿಕ ಕಥಾನಕ. ಕ್ರಿ.ಶ.2154. ಭೂಮಿಯ ಮೇಲಿರುವ ಎಲ್ಲ ರೀತಿಯ ನೈಸರ್ಗಿಕ ಸಂಪತ್ತಿನ ಬಳಕೆಯಾಗಿ ಭೂಮಿಯು ‘ಬಂಜೆ’ಯಾಗುವ ಹಂತದಲ್ಲಿರುವ ಸಮಯ.
‘ಜಗತ್ತಿನ ಸಂಪನ್ಮೂಲ ಅಭಿವೃದ್ಧಿ ಆಡಳಿತ’ವು (ರಿಸೋರ್ಸಸ್ ಡೆವಲಪ್‌ಮೆಂಟ್ ಅಡ್ಮಿನಿಸ್ಟ್ರೇಶನ್), ನಮ್ಮ ಕ್ಷೀರಪಥಕ್ಕೆ ಸಮೀಪದಲ್ಲಿರುವ ‘ಆಲಾ ಸೆಂಟಾರಿ’ ಅನಿಲ ದೈತ್ಯದ ಬಳಿ ಸುತ್ತು ಹಾಕುತ್ತಿರುವ ಪಾಂಡೋರ’ ಎಂಬ ಚಂದ್ರನನ್ನು ಅಧ್ಯಯನ ಮಾಡುತ್ತದೆ. ಈ ಪಾಂಡೋರದಲ್ಲಿ ‘ಯೂನೋ ಬೇಟ್ನಿಯಂ’ ಎಂಬ ಕಾಲ್ಪನಿಕ ಲೋಹವು ಯಥೇಚ್ಛವಾಗಿರುತ್ತದೆ.
ಇದು ಕೋಣೆಯ ಉಷ್ಣತೆಯಲ್ಲಿ ‘ಅತಿವಾಹಕತ್ವ’ ಇಲ್ಲವೇ ‘ಸೂಪರ್ ಕಂಡಕ್ಟಿವಿಟಿ’ಯನ್ನು ತೋರ ಬಲ್ಲ ಅಪರೂಪದ ಲೋಹವಾಗಿದೆ. ಈ ಲೋಹವನ್ನು ಭೂಮಿಗೆ ತರಬೇಕೆಂದು ಅಭಿವೃದ್ಧಿ ಮಂಡಳಿಯ ಆಸೆ. ಆದರೆ ಈ ಪಾಂಡೋರ ಚಂದ್ರನಲ್ಲಿ ‘ನಾವೀ’ ಎಂಬ ಜನಾಂಗದವರು ವಾಸವಾ ಗಿದ್ದಾರೆ.
ಇವರು 10 ಅಡಿ ಎತ್ತರದವರು. ತೆಳ್ಳಗಿನ ಮೈಕಟ್ಟಿನವರು. ಚರ್ಮದ ಬಣ್ಣವಂತೂ ಆಕಾಶನೀಲಿ ಯನ್ನು ಹೋಲುತ್ತದೆ. ಇವರು ರೂಪಾಂತರ ಹೊಂದಿದ ‘ಸೆಪಿಯಂಟ್ ಹೋಮೋನಾಯ್ಡ್’ಗಳು. ಹೋಮೋ ಸೆಪಿಯನ್ಸ್ ನಮ್ಮ ವೈಜ್ಞಾನಿಕ ನಾಮಧೇಯ. ಇವರು ಮಾನವ ರೂಪಿಗಳು.
ಇದನ್ನೂ ಓದಿ: Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು
ವೈಜ್ಞಾನಿಕ ಕಥೆ ಎಂದರೆ ತಮ್ಮ ತಮ್ಮ ಕಲ್ಪನೆಯನ್ನು ಮನಸ್ಸಿಗೆ ಬಂದ ಹಾಗೆ ಹರಿಯ ಬಿಡುವ ಹಾಗೆ ಇಲ್ಲ. ವೈಜ್ಞಾನಿಕ ಕಥೆ, ಕಾದಂಬರಿ ಇಲ್ಲವೇ ಚಲನಚಿತ್ರಗಳಲ್ಲಿ ಒಂದು ವೈಜ್ಞಾನಿಕ ಎಳೆಯಿಲ್ಲದ ಕಥೆಯನ್ನು ವಿಸ್ತರಿಸುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಅಂಥ ಒಂದು ಎಳೆಯು ನಾವೀ ಜನರ ನೀಲಿ ಚರ್ಮದ ಹಿನ್ನೆಲೆಯಲ್ಲಿದೆ.
ಹೀಮೋಗ್ಲಾಬಿನ್: ನಮ್ಮ ಭೂಮಿಯ ಮೇಲೆ ವಾಸಮಾಡುವ ಬಹುಪಾಲು ಸ್ತನಿಗಳು (ಮ್ಯಾಮಲ್ಸ್) ಆಕ್ಸಿಜನ್ ನೆರವಿನಿಂದ ತಮ್ಮ ಬದುಕನ್ನು ನಡೆಸುತ್ತವೆ. ಆಕ್ಸಿಜನ್ ಗಾಳಿಯಲ್ಲಿರುತ್ತದೆ. ನಾವು ಉಸಿರನ್ನು ಎಳೆದುಕೊಂಡಾಗ, ಆಕ್ಸಿಜನ್ ನಮ್ಮ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ಶ್ವಾಸ ಕೋಶಗಳ ಅಂತಿಮ ರಚನೆಯೇ ಗಾಳಿಗೂಡು ಅಥವ ಆಲ್ವಿಯೋಲೈ. ಈ ಗಾಳಿಗೂಡನ್ನು ಲೋಮ ನಾಳಗಳ ದಟ್ಟಜಾಲ ಆವರಿಸಿರುತ್ತದೆ.
ರಕ್ತದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಿದ್ದು, ಕಾರ್ಬನ್ ಡೈಯಾಕ್ಸೈಡ್ ಪ್ರಮಾಣ ಹೆಚ್ಚಿರುತ್ತದೆ. ಗಾಳಿಗೂಡುಗಳಲ್ಲಿ ಇದು ತಿರುಗುಮುರುಗ. ಗಾಳಿಗೂಡುಗಳಲ್ಲಿರುವ ಅಧಿಕ ಆಕ್ಸಿಜನ್ ರಕ್ತವನ್ನು ಪ್ರವೇಶಿಸುತ್ತದೆ. ಹಾಗೆಯೇ ರಕ್ತದಲ್ಲಿರುವ ಹೆಚ್ಚುವರಿ ಕಾರ್ಬನ್ ಡೈಯಾಕ್ಸೈಡ್ ಶ್ವಾಸಕೋಶಗಳನ್ನು ಪ್ರವೇಶಿಸುತ್ತದೆ. ನಾವು ಉಸಿರನ್ನು ಬಿಟ್ಟಾಗ, ಕಾರ್ಬನ್ ಡೈಯಾಕ್ಸೈಡ್ ಮೂಗಿನ ಮೂಲಕ ಹೊರ ಹೋಗುತ್ತದೆ.
ರಕ್ತದಲ್ಲಿ ಮೂರು ರೀತಿಯ ಕಣಗಳಿವೆ. ಕೆಂಗಣಗಳು (ರೆಡ್ ಬ್ಲಡ್ ಕಾರ್ಪಸಲ್ಸ್). ಬಿಳ್ಕಣಗಳು (ವೈಟ್ ಬ್ಲಡ್ ಕಾರ್ಪಸಲ್ಸ್) ಹಾಗೂ ಕಿರುಬಿಲ್ಲೆಗಳು. ಕೆಂಗಣಗಳಲ್ಲಿರುವ ‘ಹಿಮೋಗ್ಲಾಬಿನ್’ ದೇಹಕ್ಕೆ ಅಗತ್ಯ ವಾದ ಶೇ.97-98.5 ಆಕ್ಸಿಜನ್ ಅನ್ನು ಸಾಗಿಸುತ್ತದೆ. ಉಳಿದ ಆಕ್ಸಿಜನ್ ಅನ್ನು ರಕ್ತದಲ್ಲಿ ಕರಗಿರುವ ಹಿಮೋಗ್ಲಾಬಿನ್ ಪೂರೈಸುತ್ತದೆ.
ಹೀಮೋಗ್ಲಾಬಿನ್ ಎನ್ನುವುದು ‘ಹೀಮ್’ ಎಂಬ ಕಬ್ಬಿಣ ಹಾಗೂ ‘ಗ್ಲಾಬಿನ್’ ಎಂಬ ಪ್ರೋಟೀನಿನಿಂದ ಆದ ರಚನೆ. ಒಂದು ಹೀಮೋಗ್ಲಾಬಿನ್ ಅಣುವಿನ ಒಡಲಿನ ಮೇಲೆ ನಾಲ್ಕು ಪ್ರೋಟೀನ್ ಘಟಕ ಗಳಿದ್ದು, ಒಂದೊಂದು ಘಟಕದಲ್ಲಿ ಒಂದೊಂದು ಹೀಮ್ ಇರುತ್ತದೆ.
ಶ್ವಾಸಕೋಶದ ಲೋಮನಾಳಗಳ ಭಿತ್ತಿಯ ಮೂಲಕ ನುಸುಳಿ ಬರುವ ಆಕ್ಸಿಜನ್ ಈ ಕಬ್ಬಿಣದ ಘಟಕದ ಜತೆಯಲ್ಲಿ ಲಘುವಾಗಿ ಅಂಟಿಕೊಳ್ಳುತ್ತದೆ. ಇದನ್ನು ‘ಆಕ್ಸಿಹಿಮೋಗ್ಲಾಬಿನ್’ ಅಂದರೆ ‘ಆಕ್ಸಿಜನ್ ಅಧಿಕವಿರುವ ಹಿಮೋಗ್ಲಾಬಿನ್’ ಎಂದು ಅರ್ಥೈಸಬಹುದು. ಇದು ಉಜ್ವಲ ಕೆಂಪು ಬಣ್ಣವನ್ನು ತಳೆಯುತ್ತದೆ.
ರಕ್ತಪ್ರವಾಹದ ಮೂಲಕ ದೇಹದ ಪ್ರತಿಯೊಂದು ಜೀವಕೋಶವನ್ನು ತಲುಪುವ ಈ ಆಕ್ಸಿ ಹಿಮೋ ಗ್ಲಾಬಿನ್, ಜೀವಕೋಶದಲ್ಲಿ ಸಡಿಲ ಬಂಧನದಲ್ಲಿರುವ ಆಕ್ಸಿಜನ್ ಅನ್ನು ಸುಲಭವಾಗಿ ಬಿಡುಗಡೆ ಮಾಡುತ್ತದೆ. ಜೀವಕೋಶವು ಆ ಆಕ್ಸಿಜನ್ ಅನ್ನು ತನ್ನ ಎಲ್ಲ ಜೈವಿಕ ಕೆಲಸ ಕಾರ್ಯಗಳಿಗೆ ಬಳಸಿ ಕೊಳ್ಳುತ್ತದೆ.
ಹೀಮೋಸಯನಿನ್: ಮನುಷ್ಯ ಹಾಗೂ ಉನ್ನತ ಸ್ತನಿಗಳ ಒಡಲಿನಲ್ಲಿ ಆಕ್ಸಿಜನ್ ಪೂರೈಕೆಯ ವಿಧಾನವನ್ನು ಸ್ಥೂಲವಾಗಿ ತಿಳಿದೆವು. ಆದರೆ ಜೀವಜಗತ್ತಿನ ಎಲ್ಲ ಜೀವಿಗಳು ಹೀಮೋಗ್ಲಾಬಿನ್ ಮೂಲಕ ತಮಗೆ ಅಗತ್ಯವಾದ ಆಕ್ಸಿಜನ್ ಅನ್ನು ಪಡೆಯುವುದಿಲ್ಲ. ಆಕ್ಸಿಜನ್ ಪಡೆಯುವ ವೈವಿಧ್ಯ ವಿಧಾನ ಕುತೂಹಲಕರವಾಗಿದೆ. ಅಷ್ಟಪಾದಿ, ಏಡಿ ಹಾಗೂ ಇತರ ಸಂಧಿಪದಿಗಳು (ಆರ್ಥ್ರೋಪಾಡ್ಸ್) ಆಕ್ಸಿಜನ್‌ಗಾಗಿ ಹೀಮೋಗ್ಲಾಬಿನ್ ಅನ್ನು ಬಳಸುವುದಿಲ್ಲ. ಬದಲಿಗೆ ‘ಹೀಮೋಸಯನಿನ್’ ಎಂಬ ರಾಸಾಯನಿಕ ವಸ್ತುವನ್ನು ಬಳಸಿಕೊಳ್ಳುತ್ತವೆ.
ಹೀಮೋಸಯನಿನ್‌ನಲ್ಲಿ ಹೀಮ್ ಇರುವ ಕಡೆ ತಾಮ್ರ ಅಥವಾ ಕಾಪರ್ ಇರುತ್ತದೆ. ಹೀಮೋಗ್ಲಾಬಿನ್ ಆಕ್ಸಿಜನ್ ಅನ್ನು ಹೀರಿಕೊಳ್ಳುತ್ತಿರುವಂತೆ ಹೇಗೆ ಉಜ್ವಲ ಕೆಂಪು ಬಣ್ಣವನ್ನು ತಳೆಯುತ್ತದೆಯೋ, ಹಾಗೆಯೇ ಹೀಮೋಸಯನಿನ್ ಆಕ್ಸಿಜನ್ ಅನ್ನು ಹೀರಿಕೊಳ್ಳುತ್ತಲೇ ‘ಉಜ್ವಲ ನೀಲಿ ಬಣ್ಣ’ವನ್ನು ತಳೆಯುತ್ತದೆ.
ನಾವಿ ಜನರಂತೆ, ಆಕ್ಟೋಪಸ್ಸಿನ ಚರ್ಮವು ಪಾರದರ್ಶಕವಾಗಿದ್ದರೆ, ಇಡೀ ದೇಹವು ನೀಲಿಯ ಬಣ್ಣಕ್ಕೆ ಕಾಣುತ್ತದೆ. ನಾವಿ ಜನರ ಚರ್ಮವು ಪಾರದರ್ಶಕವಾಗಿರುವ ಕಾರಣ, ಅವರ ಇಡೀ ದೇಹವು ನೀಲಿಯ ಬಣ್ಣಕ್ಕೆ ಕಾಣುತ್ತದೆ. ಜೇಮ್ಸ್ ಕ್ಯಾಮರೂನ್ ಸುಮ್ಮನೇ ನೀಲಿ ಬಣ್ಣದ ನಾವಿ ಜನರನ್ನು ಸೃಜಿಸದೆ, ಅದರ ಹಿಂದೆ ಒಂದು ವೈಜ್ಞಾನಿಕ ಎಳೆ ಇರುವಂತೆ ನೋಡಿಕೊಂಡಿದ್ದಾರೆ. ಇದು ಅವರ ಹೆಗ್ಗಳಿಕೆ.
ಎರಡನೆಯ ನೀಲಿ ಚರ್ಮ: ನಮ್ಮ ಭೂಮಿಯ ಮೇಲಿರುವ ಅತ್ಯಂತ ಹಳೆಯ ಪರ್ವತ ಸಾಲು ಗಳಲ್ಲಿ ಅಪಲಾಚಿಯನ್ ಪರ್ವತಸಾಲು ಮುಖ್ಯವಾದದ್ದು. ಸುಮಾರು 2400 ಕಿ.ಮೀ. ಉದ್ದದ ಈ ಪರ್ವತ ಸಾಲು, ಕೆನಡ ದೇಶದ ನ್ಯೂಫೌಂಡ್ ಲ್ಯಾಂಡಿನಲ್ಲಿ ಆರಂಭವಾಗಿ, ಅಮೆರಿಕದ ಪೂರ್ವ ಭಾಗದಲ್ಲಿ ಅಲಬಾಮ ಮತ್ತು ಜಾರ್ಜಿಯ ಪ್ರದೇಶಗಳವರೆಗೆ ವ್ಯಾಪಿಸಿದೆ. ಅಪಲಾಚಿಯನ್ ಪರ್ವತ ಸಾಲಿನ ಶಿಖರಗಳು ಹಿಮಾಲಯ ಅಥವಾ ಆಂಡೀಸ್ ಪರ್ವತಗಳಂತೆ ಚೂಪು ಚೂಪಾಗಿಲ್ಲ. ಎತ್ತಿನ ಭುಜದಂತೆ ನುಣುಪಾಗಿವೆ.
ಲಕ್ಷಾಂತರ ವರ್ಷಗಳಿಂದ ಸುರಿಯುವ ಬಿರುಮಳೆ ಹಾಗೂ ಬೀಸುವ ರಭಸಗಾಳಿಗೆ ಶಿಖರಗಳ ಕೋಡುಗಳೆಲ್ಲ ನುಣುಪಾಗಿದೆ. ಅಪಲಾಚಿಯನ್ ಪ್ರದೇಶದಲ್ಲಿ ದಟ್ಟ ನಿತ್ಯ ಹರಿದ್ವರ್ಣ ಕಾಡು ಗಳಿವೆ. ಮಹಾ ಕೊರಕಲಿನ ಕಣಿವೆಗಳಿವೆ. ಒಂದೊಂದು ಪ್ರದೇಶವು ಒಂದೊಂದು ‘ದ್ವೀಪ’ದ ಹಾಗೆ. ಸಂಚಾರ ವ್ಯವಸ್ಥೆಯು ಮಹಾದುರ್ಭರ.
ಹಾಗಾಗಿ ಇಲ್ಲಿರುವ ಅಸಂಖ್ಯ ಬುಡಕಟ್ಟಿನ ಜನ, ಜೀವವೈವಿಧ್ಯ, ಅವರ ಸಂಸ್ಕೃತಿ, ಜೀವನಶೈಲಿ, ಭಾಷೆ, ಜಾನಪದ, ವೈದ್ಯಕೀಯ, ಅವರನ್ನು ಕಾಡುವ ಅನೇಕ ಕಾಯಿಲೆಗಳು ವಿಶಿಷ್ಟವಾದಂಥವು. ಒಂದು ಬುಡಕಟ್ಟಿನ ಸಮಸ್ಯೆಗಳು ಮತ್ತೊಂದು ಬುಡಕಟ್ಟಿಗೆ ತಿಳಿಯುವ ಸಾಧ್ಯತೆಯು ಕಡಿಮೆ ಯಿರುತ್ತದೆ. ಅವರು ಹತ್ತಿರವಿದ್ದರೂ ‘ದೂರ ದೂರ’ದಲ್ಲಿರುವುದು ಅನಿವಾರ್ಯ.
ಪೂರ್ವ ಕೆಂಟುಕಿಯ ಪ್ರದೇಶ. ಅಲ್ಲಿ ‘ಟ್ರಬಲ್ಸಮ್ ಕ್ರೀಕ್’ ಎಂಬ ಕೊರಕಲು ಪ್ರದೇಶ. ಇಲ್ಲಿ ಹುಟ್ಟುವ ಎಲ್ಲ ಜನರ ಚರ್ಮವು ಯುರೋಪಿಯನ್ನರ ಹಾಗೆ ಬೆಳ್ಳಗಿರಲಿಲ್ಲ. ಆಫ್ರಿಕನ್ನರ ಹಾಗೆ ಕಪ್ಪಗೆ ಇರಲಿಲ್ಲ. ಚೀನಿಯರ ಹಾಗೆ ಹಳದಿ ಬಣ್ಣಕ್ಕಿರಲಿಲ್ಲ. ಭಾರತೀಯರ ಹಾಗೆ ಕಂದು ಬಣ್ಣಕ್ಕೆ ಇರಲಿಲ್ಲ. ಬದಲಿಗೆ ಮೇಘ ವರ್ಣದ ನೀಲಿ ಬಣ್ಣವಾಗಿತ್ತು. ನೀಲಿ ಎನ್ನುವುದು ರೂಪಕವಲ್ಲ. ನೀಲಿ ಎನ್ನುವುದು ಕಾವ್ಯಾತ್ಮಕವಲ್ಲ. ಅಕ್ಷರಶಃ ನೀಲಿ. ಅಲ್ಲಿ ಹುಟ್ಟುವ ಎಲ್ಲರ ಚರ್ಮದ ಬಣ್ಣ ನೀಲಿಮಯವಾಗಿತ್ತು.
ಮಕ್ಕಳ ಇಡೀ ದೇಹವು ಸ್ಲೇಟಿನ ಹಾಗೆ ನೀಲಿಯಾಗಿದ್ದರೆ, ತುಟಿಗಳು ಮಾತ್ರ ನೇರಳೆ ಬಣ್ಣವನ್ನು ತಳೆದಿದ್ದವು. ಮಗು ಹುಟ್ಟುತ್ತಿರುವಂತೆಯೇ ಅದರ ನೀಲ ಮುಖವನ್ನು ನೋಡಿದ ಸೂಲಗಿತ್ತಿಯರು ಹಾಗೂ ವೈದ್ಯರು ಬೆಚ್ಚಿ ಬೀಳುತ್ತಿದ್ದರು. ಇವರಲ್ಲಿ ಓರ್ವ ಹೆಣ್ಣು ಮಗಳಿದ್ದಳು. ಅವಳ ನೀಲ ಸೌಂದರ್ಯವಂತೂ ವಿಶ್ವವಿಖ್ಯಾತವಾಯಿತು. ಆಕೆಯ ಹೆಸರನ್ನು ಪ್ರಜ್ಞಾಪೂರ್ವಕವಾಗಿ ಬೆಳಕಿಗೆ ತರಲಿಲ್ಲ. ಈ ನೀಲಿ ಚರ್ಮವು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ನಿರಂತರವಾಗಿ ಹರಿದುಬರುತ್ತಿತ್ತು. ಈ ನೀಲಚರ್ಮವು ಅಂದಿನ ವೈದ್ಯಕೀಯ ವಿಜ್ಞಾನಕ್ಕೆ ಒಂದು ಉತ್ತರಿಸಲಾಗದ ಸವಾಲಾಗಿತ್ತು.
ಮಾರ್ಟಿನ್ ಫ್ಯುಗೇಟ್: 1820ರ ದಶಕ. ಅಪಲಾಚಿಯನ್ ಪರ್ವತ ಸಾಲಿನ ಕೆಂಟುಕಿಯ ಟ್ರಬಲ್ಸಮ್ ಕೊರಕಲಿಗೆ ಓರ್ವ ಅನಾಥ ಬಂದ. ಅವನು ಫ್ರೆಂಚ್ ಮೂಲದ ಓರ್ವ ವ್ಯಕ್ತಿಯಾಗಿದ್ದ. ಅವನು ಯಾಕೆ ಈ ಅಜ್ಞಾತ ಟ್ರಬಲ್ಸಮ್ ಕೊರಕಲಿಗೆ ಬಂದ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ಬಹುಶಃ ಮನುಷ್ಯರ ಲೋಕದಿಂದ ದೂರ ಹೋಗಬೇಕು ಎಂದು ಅನಿಸಿರಬಹುದು.
ಏಕಾಂತವಾಗಿ ಪ್ರಕೃತಿಯೊಡನೆ ಕಾಲವನ್ನು ಕಳೆಯುವ ಇಚ್ಛೆ ಇದ್ದಿರಬಹುದು. ಒಂದಷ್ಟು ಭೂಮಿ ಯನ್ನು ಹದಗೊಳಿಸಿ, ಅಲ್ಲಿ ಕೃಷಿಯನ್ನು ಆರಂಭಿಸುವ ಯೋಚನೆ ಇದ್ದಿರಬಹುದು. ಫ್ಯುಗೇಟ್ ಅಲ್ಲಿ ಬಂದಾಗ, ಅವನನ್ನು ಪ್ರಶ್ನಿಸಲು ಅಲ್ಲಿ ಯಾರೂ ಇದ್ದಿರಲಿಲ್ಲ. ಹಾಗಾಗಿ ಅವನ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
ಫ್ಯುಗೇಟ್ ಟ್ರಬಲ್ಸಮ್‌ನಲ್ಲಿ ನೆಲೆಸಿದ. ಕೃಷಿ ಕೆಲಸವನ್ನು ಆರಂಭಿಸಿದ. ಹತ್ತಿರದಲ್ಲಿದ್ದ ಹತ್ತಾರು ಮೈಲಿಗಳ ದೂರದಲ್ಲಿತ್ತು ಕಠಿಣ ಹಾದಿ. ಒಂದು ದಿವಸ ನಗರಕ್ಕೆ ಹೋದ. ಅಲ್ಲಿ ‘ಎಲಿಜ಼ಬೆಥ್ ಸ್ಮಿತ್’ ಎಂಬುವವಳನ್ನು ಮದುವೆಯಾದ. ಇಬ್ಬರೂ ಟ್ರಬಲ್ಸಮ್ ಪ್ರದೇಶಕ್ಕೆ ಬಂದು ಕೃಷಿಯಲ್ಲಿ ತೊಡಗಿ ದರು. ಆಕೆ ತೆಳ್ಳಗೆ, ಬೆಳ್ಳಗೆ ಇದ್ದಳು. ಆಕೆಯ ಚರ್ಮದ ಮೂಲಕ ಬೆಳಕು ಹಾದುಹೋಗ ಬಲ್ಲದೇನೋ ಎಂಬಷ್ಟು ಪಾರದರ್ಶಕವಾಗಿತ್ತು.
ಪ್ರಬಲ-ಅಪ್ರಬಲ: ನಮ್ಮ ದೇಹದಲ್ಲಿ 23 ಜೊತೆ ಕ್ರೋಮೋಸೋಮುಗಳಿವೆ. ಈ ಕ್ರೋಮೋ ಸೋಮುಗಳ ಮೇಲೆ 20,000-25,000 ವಂಶವಾಹಿಗಳಿವೆ. ನಮ್ಮ ಗುಣಲಕ್ಷಣಗಳನ್ನು ವಂಶವಾಹಿ ಗಳು ಅಥವಾ ಜೀನ್ಸ್ ನಿರ್ಧರಿಸುತ್ತವೆ. ಸಾಮಾನ್ಯವಾಗಿ ಒಂದು ಗುಣಲಕ್ಷಣವು ಪ್ರದರ್ಶಿತವಾಗಲು ಒಂದು ಜೊತೆ ವಂಶವಾಹಿಗಳಾದರೂ ಬೇಕು. ಈ ಒಂದು ಜೊತೆಯಲ್ಲಿ ಒಂದು ವಂಶವಾಹಿ ತಂದೆಯ ಕಡೆಯಿಂದ, ಮತ್ತೊಂದು ತಾಯಿಯ ಕಡೆಯಿಂದ ಬರುತ್ತದೆ.
ಈ ವಂಶವಾಹಿಗಳಲ್ಲಿ ಒಂದು ಪ್ರಬಲವಾಗಿದ್ದಾಗ (ಡಾಮಿನಂಟ್), ಅದು ತನ್ನ ಲಕ್ಷಣವನ್ನು ಪ್ರದರ್ಶಿಸುತ್ತದೆ. ಮತ್ತೊಂದು ತಾನಿದ್ದರೂ ತನ್ನ ಗುಣಲಕ್ಷಣವನ್ನು ಪ್ರದರ್ಶಿಸುವುದಿಲ್ಲ. ಇದನ್ನು ಅಪ್ರಬಲ ಅಥವಾ ರೆಸೆಸಿವ್ ಎನ್ನುವರು. ಉದಾಹರಣೆಗೆ ಕಣ್ಣಿನ ಬಣ್ಣ ಕಂದು ಇರಬಹುದು ಇಲ್ಲವೇ ನೀಲಿಯಿರಬಹುದು.
ಕಂದು ಬಣ್ಣಕ್ಕೆ ಕಾರಣ ಆ ಎನ್ನುವ ವಂಶವಾಹಿ. ಇದು ತಂದೆಯ ಕಡೆಯಿಂದ ಬಂದಿರಬಹುದು, ತಾಯಿಯ ಕಡೆಯಿಂದ ಬಂದಿರಬಹುದು. ಇಬ್ಬರಿಂದಲೂ ಬಂದಿದ್ದರೆ ಅದು BB ಎಂದೆನಿಸಿ ಕೊಳ್ಳುತ್ತದೆ. ಹಾಗೆಯೇ ನೀಲಿ ಕಣ್ಣಿಗೆ ಕಾರಣವಾದದ್ದು b ಎಂಬ ಅಪ್ರಬಲ ವಂಶವಾಹಿ. ತಂದೆಯ ಕಡೆಯಿಂದ b ವಂಶವಾಹಿ ಬಂದಿದ್ದು ಹಾಗೂ ತಾಯಿಯ ಕಡೆಯಿಂದಲೂ B ವಂಶವಾಹಿ ಬಂದಿದ್ದರೆ, ಮಗುವಿನ ಒಡಲಿನಲ್ಲಿ bb ವಂಶವಾಹಿ ರೂಪುಗೊಂಡು ಮಗುವಿನ ಕಣ್ಣು ನೀಲಿ ಯಾಗುತ್ತದೆ. ಹಾಗಾಗಿ ನೀಲಿ ಕಣ್ಣಿನ ಮಗು ಹುಟ್ಟಬೇಕಾದರೆ, ತಂದೆ ಹಾಗೂ ತಾಯಿ b ವಂಶವಾಹಿ ಗಳನ್ನು ಸಂತಾನಕ್ಕೆ ನೀಡಿರಬೇಕು. ಆಗ ಮಾತ್ರ ಸಂತಾನಕ್ಕೆ ನೀಲಿ ಕಣ್ಣಿರಲು ಸಾಧ್ಯ.
ನೀಲಿ ವಂಶವಾಹಿ: ನಮ್ಮ ಹಿಮೋಗ್ಲಾಬಿನ್ ಹೇಗೆ ಶ್ವಾಸಕೋಶಗಳಿಂದ ಆಕ್ಸಿಜನ್ ಹೊತ್ತು, ದೇಹದ ಪ್ರತ್ರಿಯೊಂದು ಜೀವಕೋಶಗಳಿಗೂ ಅದನ್ನು ಪೂರೈಸುತ್ತವೆ ಎನ್ನುವುದನ್ನು ಈಗಾಗಲೇ ತಿಳಿದಿ ದ್ದೇವೆ. ಆರೋಗ್ಯಕರ ಹಿಮೋಗ್ಲಾಬಿನ್ ರೂಪುಗೊಳ್ಳಲು ವಂಶವಾಹಿಗಳಿವೆ. ಈ ವಂಶವಾಹಿ ಗಳು ಪ್ರಬಲ ರೂಪದಲ್ಲಿದ್ದಾಗ, ಆರೋಗ್ಯಕರ ಹಿಮೋಗ್ಲಾಬಿನ್ ರೂಪುಗೊಳ್ಳುತ್ತದೆ.
ಮಾರ್ಟಿನ್ ಫ್ಯುಗೇಟ್ ಮತ್ತು ಎಲಿಜ಼ಬೆಥ್ ಸ್ಮಿತ್ ಇಬ್ಬರಲ್ಲೂ ಒಂದೊಂದು ಅಪ್ರಬಲ ವಂಶವಾಹಿ ಇದ್ದವು. ಹಾಗಾಗಿ ಅವರ ಒಡಲಿನಲ್ಲಿ ವಿರೂಪಗೊಂಡು ಹೀಮೋಗ್ಲಾಬಿನ್ ರೂಪುಗೊಳ್ಳುತ್ತಿತ್ತು.
ವೈದ್ಯರು ಮತ್ತು ಸೂಲಗಿತ್ತಿಯರು ಅಪಲಾಚಿಯನ್ ಚಳಿಗೆ ಮಗುವಿನ ಬಣ್ಣ ಹೀಗಾಗಿರಬಹುದು ಎಂದರು. ಆದರೆ ಮಗುವು ಬೆಳೆದು ದೊಡ್ಡದಾದರೂ ಅದರ ನೀಲಿ ಬಣ್ಣ ಬದಲಾಗಲಿಲ್ಲ. ಕೆಲವು ಮಕ್ಕಳು ಶೈಶವದಲ್ಲಿ ಸಾಯುತ್ತಿದ್ದವು. ಕೆಲವು ಮಕ್ಕಳು ನಾನಾ ತೊಂದರೆಗಳನ್ನು ಅನುಭವಿಸಿದರೂ ಹೆಚ್ಚಿನವರು ಹೇಗೋ ಕೃಷಿಯಲ್ಲಿ ತೊಡಗಿ ಬದುಕನ್ನು ನಡೆಸುತ್ತಿದ್ದದು. ಈ ಸಮಸ್ಯೆ ಫ್ಯುಗೇಟ್ ವಂಶಸ್ಥರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಆ ಅಜ್ಞಾತ ಕೊರಕಲಿನಲ್ಲಿ ಹೆಣ್ಣುಗಳ ಕೊರತೆಯಿದ್ದ ಕಾರಣ ಒಳವಿವಾಹಗಳು ಸಾಮಾನ್ಯವಾಗಿದ್ದವು.
ಮೆಥೀಮೋಗ್ಲಾಬಿನೀಮಿಯ: ಫ್ಯುಗೇಟರಿಗೆ ಇದ್ದ ಅನಾರೋಗ್ಯವನ್ನು ಇಂದಿನ ವೈದ್ಯಕೀಯ ಪರಿಭಾಷೆಯಲ್ಲಿ ‘ಮೆಥೀಮೋಗ್ಲಾಬಿನೀಮಿಯ’ ಎನ್ನುವರು. ಇದೊಂದು ಅಪರೂಪದ ಆನುವಂಶಿಕ ಕಾಯಿಲೆ. ಸಾಮಾನ್ಯವಾಗಿ ಹಿಮೋಗ್ಲಾಬಿನ್ʼನಲ್ಲಿರುವ ಹೀಮ್, ಆಕ್ಸಿಜನ್ ಜತೆ ಸಡಿಲವಾಗಿ ಬಂಧನಕ್ಕೆ ಒಳಗಾಗಿ, ಜೀವಕೋಶದ ಬಳಿಗೆ ಈ ಸಡಿಲ ಬಂಧನದಿಂದ ಮುಕ್ತವಾಗಿ ಜೀವಕೋಶಕ್ಕೆ ಆಕ್ಸಿಜನ್ ಬಿಡುಗಡೆ ಮಾಡುತ್ತದೆ.
ಒಂದು ವೇಳೆ ಆ ಸಡಿಲ ಬಂಧನ ಮುಕ್ತವಾಗದಿದ್ದರೆ? ಹಿಮೋಗ್ಲಾಬಿನ್-ಆಕ್ಸಿಜನ್ ಜತೆಯಲ್ಲಿಯೇ ಉಳಿಯುತ್ತದೆ. ಗಾಢ ನೀಲಿ ಇಲ್ಲವೇ ಚಾಕೋಲೆಟ್ ಬಣ್ಣವನ್ನು ತಳೆಯುತ್ತದೆ. ಎಲಿಜ಼ಬೆಥ್ ಸ್ಮಿತ್ತಳ ಚರ್ಮವು ಬಹುಪಾಲು ಪಾರದರ್ಶಕವಾಗಿತ್ತು. ಹಾಗಾಗಿ ಆಕ್ಸಿಜನ್ ಮುಕ್ತವಾಗದ ರಕ್ತ ನೀಲವಾಗಿ ಎದ್ದು ಕಾಣುತ್ತಿತ್ತು. ಅವರ ದೇಹಕ್ಕೆ ಪೂರ್ಣ ಪ್ರಮಾಣದ ಆಕ್ಸಿಜನ್ ದೊರೆಯದಿದ್ದರೆ ಸಾವು ಸಂಭವಿಸುತ್ತಿತ್ತು. ಅರೆಬರೆ ಪೂರೈಕೆಯಾಗುತ್ತಿದ್ದರೆ, ಹೇಗೋ ಬದುಕನ್ನು ನಡೆಸುತ್ತಿದ್ದರು. ಫ್ಯುಗೇಟ್ ವಂಶದಲ್ಲಿದ್ದ ಬಹುಪಾಲು ಜನರು ಹೇಗೋ ಬದುಕನ್ನು ನಡೆಸುತ್ತಿದ್ದರು.
ಪವಾಡ: 1950ರ ದಶಕ. ಕೆಂಟುಕಿ ವಿಶ್ವವಿದ್ಯಾನಿಲಯದಲ್ಲಿ ಡಾ.ಮ್ಯಾಡಿಸನ್ ಕೇವಿನ್-3 (1865-1914) ಎಂಬ ರಕ್ತವಿಜ್ಞಾನಿಯಿದ್ದ (ಹಿಮಟಾಲಜಿಸ್ಟ್). ಅವನು ನೀಲಿ ಚರ್ಮದವರ ಬಗ್ಗೆ ಕೇಳಿದ್ದ. ಆದರೆ ಯಾರೂ ಖಚಿತ ಮಾಹಿತಿಯನ್ನು ನೀಡಿರಲಿಲ್ಲ. ಹಾಗಾಗಿ ಒಂದು ದಿನ ರುತ್ ಪೆಂಡರ್ಗ್ರಾಸ್ ಎಂಬ ದಾದಿಯ ಜತೆಯಲ್ಲಿ ಟ್ರಬಲ್ಸಮ್ ಕೊರಕಲಿಗೆ ಬಂದ.
-ಗೇಟ್ ವಂಶಸ್ಥರನ್ನು ಭೇಟಿಯಾದ. ಅವರ ರಕ್ತವನ್ನು ಸಂಗ್ರಹಿಸಿ ಪರೀಕ್ಷಿಸಿದ. ಆಕ್ಸಿಜನ್ ಸಡಿಲ ವಾಗಿ ಬಂಧಮುಕ್ತವಾಗಲು ‘ಸೈಟೋಕ್ರೋಮ್ ಬಿ-5 ರಿಡಕ್ಟೇಸ್’ ಎಂಬ ಕಿಣ್ವದ ಅಗತ್ಯವಿತ್ತು. ಫ್ಯುಗೇಟ್ ಮನೆತನದವರಲ್ಲಿ ಈ ಕಿಣ್ವವನ್ನು ಉತ್ಪಾದಿಸಲು ಅಗತ್ಯವಾಗಿದ್ದ CYB5R3 ಎಂಬ ವಂಶವಾಹಿಯ ಅಪ್ರಬಲ ರೂಪಗಳು ಫ್ಯುಗೇಟ್ ಮತ್ತು ಎಲಿಜ಼ಬೆತ್ ದೇಹದಲ್ಲಿ ಇದ್ದ ಕಾರಣ,
ಆಕ್ಸಿಜನ್ ಬಂಧನ ಮುಕ್ತವಾಗಲು ಕಷ್ಟವಾಗುತ್ತಿತ್ತು. ಹಾಗಾಗಿ ಅವರ ಚರ್ಮವು ಸದಾಕಾಲಕ್ಕೂ ನೀಲಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ‘ಪ್ರಸಿದ್ಧ’ರಾಗಲು ಕಾರಣವಾಯಿತು. ಡಾ.ಮ್ಯಾಡಿಸನ್ ಮತ್ತೊಂದು ಪವಾಡವನ್ನು ತಕ್ಷಣವೇ ಮಾಡಿದರು!
ಒಬ್ಬ ನೀಲಿ ಚರ್ಮದವ ನನ್ನು ಕರೆಯಿಸಿದರು. ಅವನ ರಕ್ತನಾಳದೊಳಗೆ ‘ಮೆಥಿಲಿನ್ ಬ್ಲೂ ಎಂಬ ಬಣ್ಣದ ವಸ್ತುವಿನ ಇಂಜೆಕ್ಷನ್ ನೀಡಿದರು. ಎಲ್ಲರೂ ನೋಡನೋಡುತ್ತಿರುವಂತೆಯೇ ಚರ್ಮದ ನೀಲಿ ಬಣ್ಣ ಮಾಯವಾಗಲಾರಂಭಿಸಿ, ಅದರ ಸ್ಥಳದಲ್ಲಿ ಗುಲಾಬಿ ಬಣ್ಣದ ಚರ್ಮ ಹೊಳೆಯಲಾ ರಂಭಿಸಿತು. ಶತಶತಮಾನಗಳಿಂದ ನೀಲಿ ಚರ್ಮದ ಶಾಪಕ್ಕೆ ತುತ್ತಾಗಿದ್ದವರು ಕ್ಷಣ ಮಾತ್ರದಲ್ಲಿ ಶಾಪಮುಕ್ತರಾಗಿದ್ದರು.
1975ರಲ್ಲಿ ಪ್ಯುಗೇಟ್ ಮನೆಯಲ್ಲಿ ‘ಬೆಂಜ಼ಮಿನ್ ಸ್ಟೇಸಿ’ ಎಂಬ ಕೊನೆಯ ನೀಲಿ ಮಗುವು ಹುಟ್ಟಿತು. ನೀಲಿಚರ್ಮ (ಮೆಥೀಮೋಗ್ಲಾಬಿನೀಮಿಯ) ಇಂದಿಗೂ ಆನುವಂಶಿಕ ರೂಪದಲ್ಲಿ ಹಾಗೂ ಸಂಪಾದಿತ (ಅಕ್ವೈರ್ಡ್) ಕಂಡುಬರುತ್ತದೆ. ಆದರೆ ಇದನ್ನು ಸುಲಭವಾಗಿ ಗುರುತಿಸಬಹುದು ಹಾಗೂ ಗುಣಪಡಿಸಬಹುದು.