ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಸ್ನೇಹಿತರೆ, ನಮ್ಮ ಸಮಾಜದಲ್ಲಿ ಮಗು ಆಯಿತು ಎನ್ನುವ ಮಾತು ತುಂಬಾ ಸಾಮಾನ್ಯ. ಆದರೆ, ಆಯುರ್ವೇದದ ದೃಷ್ಟಿಯಲ್ಲಿ ಮಗು ಎನ್ನುವುದು ಕೇವಲ ಒಂದು ಘಟನೆ ಅಲ್ಲ. ಅದು ಅತ್ಯಂತ ಜಾಗೃತಿಯಿಂದ, ಸಂಸ್ಕಾರದಿಂದ, ಸಿದ್ಧತೆಯಿಂದ ನಡೆಯಬೇಕಾದ ಸೃಷ್ಟಿ ಪ್ರಕ್ರಿಯೆ. ಆದ್ದರಿಂದ ಪ್ರಶ್ನೆ ಉದ್ಭವಿಸುತ್ತದೆ - ಮಗು ಆಗುವುದೇ? ಅಥವಾ ಮಗು ಮಾಡಿ ಕೊಳ್ಳುವುದೇ? ಇಂದಿನ ಜೀವನ ಶೈಲಿಯಲ್ಲಿ ಅನೇಕ ದಂಪತಿಗಳು ಮದುವೆಯಾದ ತಕ್ಷಣವೇ ಅಥವಾ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಗರ್ಭಧಾರಣೆಗೆ ಮುಂದಾಗುತ್ತಾರೆ.
ಕೆಲವೊಮ್ಮೆ ಅದು ಸಂಪೂರ್ಣ ಅಪ್ರತೀಕ್ಷಿತವಾಗಿಯೇ ಸಂಭವಿಸುತ್ತದೆ. ಆದರೆ, ಒಂದು ಉತ್ತಮ ಮನೆ ಕಟ್ಟಬೇಕೆಂದರೆ ನಾವು ನಕ್ಷೆ ಹಾಕುತ್ತೇವೆ, ನೆಲ ಪರಿಶೀಲಿಸುತ್ತೇವೆ, ಸಾಮಗ್ರಿ ಗಳನ್ನು ಆರಿಸುತ್ತೇವೆ. ಹಾಗಾದರೆ ಒಂದು ಜೀವವನ್ನು ಈ ಲೋಕಕ್ಕೆ ತರಬೇಕಾದಾಗ ಸಿದ್ಧತೆ ಬೇಕಾಗುವುದಿಲ್ಲವೇ? ಗರ್ಭಧಾರಣೆ ಎನ್ನುವುದು ಕೇವಲ ಜೈವಿಕ ಕ್ರಿಯೆಯಲ್ಲ.
ಅದು ಒಂದು ಹೊಸ ಜೀವವನ್ನು ಈ ಭೂಮಿಗೆ ಆಹ್ವಾನಿಸುವ ಅತ್ಯಂತ ಜವಾಬ್ದಾರಿಯುತ ಮತ್ತು ಪವಿತ್ರ ಪ್ರಕ್ರಿಯೆ. ಆದ್ದರಿಂದ ಗರ್ಭಧಾರಣೆಗೆ ಮುನ್ನ ದಂಪತಿಗಳು ತಮ್ಮನ್ನು ತಾವು ಮೂರು ವಿಭಿನ್ನ ಮಟ್ಟಗಳಲ್ಲಿ ಸಿದ್ಧಪಡಿಸಿಕೊಳ್ಳುವುದು ಅತ್ಯಗತ್ಯ- ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಮಟ್ಟಗಳಲ್ಲಿ. ದೈಹಿಕವಾಗಿ ದೇಹ ಆರೋಗ್ಯಕರವಾಗಿದೆಯೇ, ಆಹಾರ ಸರಿಯಾಗಿದೆಯೇ, ನಿದ್ರೆ, ವ್ಯಾಯಾಮ, ಹಾಗೂ ಜೀವನಶೈಲಿ ಗರ್ಭಧಾರಣೆಗೆ ಅನುಕೂಲಕರ ವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಮಾನಸಿಕವಾಗಿ ಮನಸ್ಸು ಶಾಂತವಾಗಿದೆಯೇ, ಅತಿಯಾದ ಒತ್ತಡ, ಆತಂಕ, ಅಸ್ಥಿರತೆ ಅಥವಾ ಅಸಮಾಧಾನಗಳ ನಡುವೆ ಬದುಕುತ್ತಿಲ್ಲವೆಯೇ ಎಂಬುದನ್ನು ಗಮನಿಸಬೇಕು. ಏಕೆಂದರೆ ತಾಯಿಯ ಮತ್ತು ತಂದೆಯ ಮನಸ್ಥಿತಿ ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ.
ಭಾವನಾತ್ಮಕ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಇದೆ - ನಾವು ನಿಜವಾಗಿಯೂ ಈ ಮಗುವನ್ನು ಪ್ರೀತಿಯಿಂದ, ಸಮಯದಿಂದ, ಸಹನೆಯಿಂದ ಮತ್ತು ಜವಾಬ್ದಾರಿಯಿಂದ ಸ್ವೀಕರಿಸಲು ಸಿದ್ಧರಾಗಿದ್ದೇವೆಯೇ? ನಮ್ಮ ಸಂಬಂಧದಲ್ಲಿ ಸ್ಥಿರತೆ ಮತ್ತು ಆತ್ಮೀಯತೆ ಇದೆಯೇ? ಎಂಬ ಪ್ರಶ್ನೆಗಳನ್ನು ದಂಪತಿಗಳು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಈ ಮೂರು ಮಟ್ಟ ಗಳಲ್ಲಿಯೂ ಜಾಗೃತಿಯುತ ಸಿದ್ಧತೆ ಇದ್ದಾಗ ಮಾತ್ರ ಗರ್ಭಧಾರಣೆ ಒಂದು ಆಕಸ್ಮಿಕ ಘಟನೆ ಆಗದೇ, ಅರಿವಿ ನಿಂದ ಮಾಡಿದ ಪವಿತ್ರ ಸೃಷ್ಟಿಯಾಗಿ ರೂಪುಗೊಳ್ಳುತ್ತದೆ.
ಇದನ್ನೂ ಓದಿ: Dr Sadhanashree Column: ನಾಲ್ಕು ದಿನಗಳ ಆ ನೋವಿಗೆ ಕಾರಣ ಹದಿನಾಲ್ಕು
ಆಯುರ್ವೇದದ ಪ್ರಕಾರ ಗರ್ಭದಲ್ಲಿರುವ ಶಿಶುವಿನ ಆರೋಗ್ಯ, ಸ್ವಭಾವ ಮತ್ತು ಬೆಳವಣಿಗೆ ಯ ಮೇಲೆ ಆರು ಪ್ರಮುಖ ಭಾವಗಳು ಅಥವಾ ಅಂಶಗಳು ನೇರ ಪರಿಣಾಮ ಬೀರುತ್ತವೆ.
೧ ಮಾತೃಜ ಭಾವ: ತಾಯಿಯಿಂದ ಬರುವ ಅಂಶಗಳು. ಗರ್ಭದಲ್ಲಿರುವ ಮೃದು ಮತ್ತು ಸೂಕ್ಷ್ಮ ಅವಯವಗಳ ನಿರ್ಮಾಣದಲ್ಲಿ ತಾಯಿಯ ಪಾತ್ರ ಅತ್ಯಂತ ಮುಖ್ಯ. ಹೃದಯ, ಯಕೃತ್ತು, ಪ್ಲೀಹೆ ಮೊದಲಾದ ಸೌಮ್ಯ ಅವಯವಗಳು ಮಾತೃಜ ಭಾವದಿಂದ ರೂಪು ಗೊಳ್ಳುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಆದ್ದರಿಂದ ತಾಯಿಯ ದೈಹಿಕ ಆರೋಗ್ಯ, ಆಹಾರ ಮತ್ತು ಜೀವನಶೈಲಿ ಉತ್ತಮವಾಗಿದ್ದರೆ ಗರ್ಭದಲ್ಲಿನ ಈ ಸೂಕ್ಷ್ಮ ಅವಯವಗಳ ಬೆಳವಣಿಗೆಯೂ ಸಮರ್ಪಕವಾಗಿರುತ್ತದೆ.
೨ ಪಿತೃಜ ಭಾವ: ತಂದೆಯಿಂದ ಬರುವ ಅಂಶಗಳು. ಎಲುಬುಗಳು, ಹಲ್ಲುಗಳು, ಕೂದಲು, ನಖಗಳು ಮುಂತಾದ ಗಟ್ಟಿಯಾದ ರಚನೆಗಳ ನಿರ್ಮಾಣದಲ್ಲಿ ಪಿತೃಜ ಭಾವ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ತಂದೆಯ ಆರೋಗ್ಯ, ಶಕ್ತಿ ಮತ್ತು ವೀರ್ಯದ ಗುಣ ಮಟ್ಟವು ಗರ್ಭದ ಶಾರೀರಿಕ ಬಲದ ಮೇಲೆ ಪರಿಣಾಮ ಬೀರುತ್ತದೆ.
೩ಸಾತ್ಮ್ಯಜ ಭಾವ: ಒಂದು ಕುಟುಂಬ ಅಥವಾ ವಂಶದಲ್ಲಿ ಪೀಳಿಗೆಯಿಂದ ಪೀಳಿಗೆ ಸೇವಿಸುತ್ತ ಬಂದಿರುವ ಆಹಾರ ಪದ್ಧತಿ, ಜೀವನಶೈಲಿ ಮತ್ತು ಅಭ್ಯಾಸಗಳು ಸಾತ್ಮ್ಯವಾಗು ತ್ತವೆ. ಉದಾಹರಣೆಗೆ, ಒಂದು ಕುಟುಂಬದಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದ್ದರೆ ಅದು ಆ ವಂಶಕ್ಕೆ ಸಾತ್ಮ್ಯ ಆಹಾರ. ಗರ್ಭಿಣಿ ತನ್ನ ದೇಹಕ್ಕೆ ಹೊಂದಿಕೊಂಡಿರುವ, ಸಾತ್ಮ್ಯವಾದ ಆಹಾರವನ್ನು ಸೇವಿಸಿದರೆ ಗರ್ಭದ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ, ಹಠಾತ್ ಅಪರಿಚಿತ, ದೇಹಕ್ಕೆ ಹೊಂದದ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಗರ್ಭದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
೪ ರಸಜ ಭಾವ: ಗರ್ಭಿಣಿ ಸೇವಿಸುವ ಆಹಾರ ಸರಿಯಾಗಿ ಜೀರ್ಣಗೊಂಡು ಅದರಿಂದ ಉತ್ಪತ್ತಿಯಾಗುವ ಆಹಾರ ರಸವೇ ಗರ್ಭದ ಪೋಷಣೆಗೆ ಮೂಲ. ತಾಯಿ ಉತ್ತಮ ಗುಣಮಟ್ಟದ, ಸಮಯಕ್ಕೆ ಸರಿಯಾದ ಆಹಾರ ಸೇವಿಸಿದರೆ ಅದರ ಸಾರ ಗರ್ಭಕ್ಕೆ ಪೋಷಕ ವಾಗುತ್ತದೆ. ಆದರೆ, ಅಜೀರ್ಣ, ಅಕಾಲಿಕ ಊಟ, ಕಳಪೆ ಆಹಾರ ಪದ್ಧತಿ ಇದ್ದರೆ ಕಳಪೆ ಗುಣದ ಆಹಾರರಸ ಉತ್ಪತ್ತಿಯಾಗಿ ಅದೇ ಗರ್ಭವನ್ನು ಪೋಷಿಸುತ್ತದೆ. ಆದ್ದರಿಂದ ಗರ್ಭಿಣಿಯ ಆಹಾರ ಕ್ರಮ ಅತ್ಯಂತ ಮಹತ್ವದ್ದಾಗಿದೆ.
೫ ಸತ್ವಜ ಭಾವ: ಮಾನಸಿಕ ಅಂಶ. ಗರ್ಭಧಾರಣೆಯ ಸಮಯದಲ್ಲೂ ಹಾಗೂ ಗರ್ಭಾ ವಸ್ಥೆಯ ಒಂಬತ್ತು ತಿಂಗಳುಗಳಲ್ಲೂ ತಾಯಿ-ತಂದೆಯ ಮನಸ್ಥಿತಿ ಶಿಶುವಿನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಕೋಪ, ಒತ್ತಡ, ಭಯ, ಅಶಾಂತಿ ಇವುಗಳ ನಡುವೆ ಗರ್ಭಧಾರಣೆ ನಡೆದರೆ ಅದರ ಪ್ರಭಾವ ಮಗುವಿನ ಮನೋ ವಿಕಾಸದ ಮೇಲೂ ಕಾಣಿಸ ಬಹುದು. ಆದ್ದರಿಂದ ಶಾಂತ, ಸಾತ್ವಿಕ ಮತ್ತು ಪ್ರೀತಿಪೂರ್ಣ ವಾತಾವರಣ ಗರ್ಭಿಣಿಗೆ ಅತ್ಯಗತ್ಯ.
೬ ಆತ್ಮಜ ಭಾವ: ಕೆಲವೊಮ್ಮೆ ನಾವು ಇಬ್ಬರೂ ಆರೋಗ್ಯವಾಗಿದ್ದೇವೆ, ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ, ಆದರೂ ಮಗುವಿನಲ್ಲಿ ಈ ವಿಶೇಷ ಗುಣ ಅಥವಾ ಸಮಸ್ಯೆ ಯಾಕೆ? ಎಂಬ ಪ್ರಶ್ನೆ ಪೋಷಕರಲ್ಲಿ ಉದ್ಭವಿಸುತ್ತದೆ. ಆಯುರ್ವೇದದ ಪ್ರಕಾರ, ಕೆಲವು ಗುಣಗಳು ತಾಯಿಯಿಂದಲೂ ಅಲ್ಲದೆ, ತಂದೆಯಿಂದಲೂ ಅಲ್ಲದೆ, ಅವು ಮಗುವಿನ ಆತ್ಮದೊಂದಿಗೆ ಬಂದಿರುವ ವಿಶಿಷ್ಟ ಗುಣಗಳು. ಇದನ್ನೇ ಆತ್ಮಜ ಭಾವ ಎಂದು ಕರೆಯ ಲಾಗುತ್ತದೆ. ಇದು ಸಕಾರಾತ್ಮಕವಾಗಿರಬಹುದು ಅಥವಾ ಸವಾಲಿನ ರೂಪದಲ್ಲಿರಬಹುದು. ಆತ್ಮಜ ಭಾವವನ್ನು ನೇರವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಗರ್ಭಧಾರಣೆಗೆ ಮುನ್ನ ದೇಹಶುದ್ಧಿ, ಮನಃಶುದ್ಧಿ, ಸಾತ್ವಿಕ ಆಹಾರ, ಧ್ಯಾನ, ಪ್ರಾರ್ಥನೆ ಮುಂತಾದ ಮೂಲಕ ದಂಪತಿಗಳು ತಮ್ಮ ಕ್ಷೇತ್ರವನ್ನು ಶುದ್ಧಗೊಳಿಸಿದಾಗ, ಉತ್ತಮ ಆತ್ಮವನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚುತ್ತದೆ. ಹೇಗೆ ಸ್ವಚ್ಛ ಮನೆಯಲ್ಲಿ ಕೀಟಗಳು ಕಡಿಮೆಯೋ, ಹಾಗೆಯೇ ಶುದ್ಧವಾದ ದೇಹ ಮತ್ತು ಮನಸ್ಸು ಉತ್ತಮ ಆತ್ಮವನ್ನು ಆಮಂತ್ರಿಸುತ್ತದೆ. ಆದ್ದರಿಂದ ಉಳಿದ ಐದು ಭಾವಗಳನ್ನು ಸಮತೋಲನದಲ್ಲಿಡುವುದು ಆತ್ಮಜ ಭಾವಕ್ಕೂ ಸಹಕಾರಿಯಾಗುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.
ಆಯುರ್ವೇದದಲ್ಲಿ ಗರ್ಭಿಣಿ ಪರಿಚಾರ್ಯೆ ಎಂದರೆ ಕೇವಲ ಗರ್ಭಿಣಿಯು ಒಂಬತ್ತು ತಿಂಗಳು ಪಾಲಿಸಬೇಕಾದ ಆಹಾರ-ವಿಹಾರ ಮಾತ್ರವಲ್ಲ. ಅದಕ್ಕಿಂತಲೂ ಮುಂಚೆಯೇ, ಗರ್ಭಧಾರಣೆಗೆ ತಯಾರಾಗುತ್ತಿರುವ ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ದೇಹ, ಮನಸ್ಸು ಮತ್ತು ಜೀವನಶೈಲಿಯನ್ನು ಶುದ್ಧಗೊಳಿಸಿ ಉತ್ತಮ ಗೊಳಿಸಬೇಕೆಂದು ಶಾಸಗಳು ಸ್ಪಷ್ಟವಾಗಿ ತಿಳಿಸಿವೆ.
ಈ ಪೂರ್ವಸಿದ್ಧತೆಯಲ್ಲಿ ಮೊದಲನೆಯದು ಶಾರೀರಿಕ ಶೋಧನ. ದಂಪತಿಗಳು ಇನ್ನು ನಾವು ಮಗುವಿಗೆ ಪ್ರಯತ್ನಿಸಬೇಕು ಎಂದು ನಿರ್ಧರಿಸಿದ ತಕ್ಷಣವೇ ಮೊದಲಿಗೆ ದೇಹ ಶುದ್ಧಿಯ ಕಡೆ ಗಮನ ಕೊಡಬೇಕು. ಏಕೆಂದರೆ ಬಾಲ್ಯದಿಂದಲೂ ನಾವು ಅನುಸರಿಸುತ್ತ ಬಂದಿರುವ ಅನೇಕ ಆಹಾರ-ವಿಹಾರಗಳು ದೇಹಕ್ಕೆ ಸದಾ ಪೋಷಕ ವಾಗಿರುತ್ತವೆ ಎನ್ನಲು ಸಾಧ್ಯವಿಲ್ಲ. ಅದರ ಜತೆಗೆ ಇಂದಿನ ಒತ್ತಡದ ಜೀವನ, ಮಾಲಿನ್ಯ, ಅಸಮಯದ ಆಹಾರ, ನಿದ್ರಾಹೀನತೆ, ಮಾನಸಿಕ ಒತ್ತಡ ಇವೆಲ್ಲ ಸೇರಿ ದೇಹದಲ್ಲಿ ದೋಷಗಳ ಸಂಚಯ ವಾಗಿರುತ್ತದೆ.
ಇಂತಹ ದೋಷ ಸಂಚಯವನ್ನು ಹೊರಹಾಕಿ ದೇಹದಲ್ಲಿ ಶುದ್ಧತೆ ಮತ್ತು ಸಮತೋಲನ ವನ್ನು ತರುವ ಪ್ರಕ್ರಿಯೆಯೇ ಶೋಧನ. ಆಯುರ್ವೇದದಲ್ಲಿ ಮುಖ್ಯವಾಗಿ ಮೂರು ರೀತಿಯ ಶೋಧನಗಳನ್ನು ಹೇಳಲಾಗಿದೆ. ವಾತದೋಷವನ್ನು ಸಮತೋಲನಗೊಳಿಸಲು ಬಸ್ತಿ, ಪಿತ್ತದೋಷವನ್ನು ಶುದ್ಧಗೊಳಿಸಲು ವಿರೇಚನ, ಮತ್ತು ಕಫದೋಷದ ಸಂಚಯವನ್ನು ಹೊರ ಹಾಕಲು ವಮನ. ಇವು ಕೇವಲ ದೇಹಶುದ್ಧಿಗಾಗಿ ಮಾತ್ರವಲ್ಲ, ದೇಹದ ಪೋಷಣೆಗೆ ಸಹ ಸಹಕಾರಿಯಾಗುತ್ತವೆ. ಮಹಿಳೆಯರಲ್ಲಿ ಗರ್ಭಾಶಯದ ಶುದ್ಧತೆ ಮತ್ತು ಬಲವರ್ಧನೆಗೆ, ಯೋನಿ ಮಾರ್ಗದ ಆರೋಗ್ಯಕ್ಕೆ, ಪುರುಷರಲ್ಲಿ ವೀರ್ಯದ ಶುದ್ಧತೆ ಮತ್ತು ಪೌಷ್ಟಿಕತೆಗೆ ಇವು ಸಹಾಯಕವಾಗುತ್ತವೆ. ಆದ್ದರಿಂದ ಗರ್ಭಧಾರಣೆಗೆ ಮುನ್ನ ಗಂಡ ಮತ್ತು ಹೆಂಡತಿ ಇಬ್ಬರೂ ಸಹ ಆಯುರ್ವೇದ ವೈದ್ಯರ ಮಾರ್ಗದರ್ಶನದಲ್ಲಿ ಶೋಧನ ಚಿಕಿತ್ಸೆ ಪಡೆಯು ವುದು ಅತ್ಯುತ್ತಮ. ಶೋಧನವಾದ ನಂತರ ದೇಹವು ಅನಗತ್ಯ ದೋಷಗಳಿಂದ ಮುಕ್ತವಾಗಿ ಹಗುರವಾಗಿರುತ್ತದೆ.
ದೇಹ ಶುದ್ಧವಾದಾಗ ಸಹಜವಾಗಿಯೇ ವೀರ್ಯ ಮತ್ತು ಅಂಡಾಣುಗಳ ಗುಣಮಟ್ಟವೂ ಉತ್ತಮಗೊಳ್ಳುತ್ತದೆ. ಆದರೆ, ಶಾರೀರಿಕ ಶುದ್ಧತೆಯಷ್ಟೇ ಸಾಕಾಗುವುದಿಲ್ಲ. ಅದರ ನಂತರ ಮಾನಸಿಕ ಮತ್ತು ಭಾವನಾತ್ಮಕ ಸಿದ್ಧತೆಗೂ ಸಮಾನ ಮಹತ್ವ ನೀಡಬೇಕು.
ನಮಗೆ ಯಾವ ರೀತಿಯ ಮಗು ಬೇಕೆಂದು ನಾವು ಬಯಸುತ್ತೇವೋ, ಅಂತಹ ಗುಣಗಳನ್ನು ನಮ್ಮ ಜೀವನದಲ್ಲಿಯೇ ಬೆಳೆಸಿಕೊಳ್ಳಲು ಆರಂಭಿಸಬೇಕು. ಶಾಂತ, ಸಾತ್ವಿಕ ಮತ್ತು ಜ್ಞಾನ ಪೂರ್ಣ ವ್ಯಕ್ತಿಗಳ ಸಂಗ ಮಾಡುವುದು, ಸತ್ಸಂಗದಲ್ಲಿ ಭಾಗವಹಿಸುವುದು, ಒಳ್ಳೆಯ ಪುಸ್ತಕ ಗಳನ್ನು ಓದುವುದು, ಪ್ರಾರ್ಥನೆ, ಧ್ಯಾನ, ಮಂತ್ರ ಪಠಣ ಇವುಗಳನ್ನು ಜೀವನದಲ್ಲಿ ಸೇರಿಸಿ ಕೊಳ್ಳಬೇಕು.
ಮಗುವಿನಲ್ಲಿ ಕಾಣಬೇಕೆಂದಿರುವ ಗುಣಗಳನ್ನು ನಾವು ಪ್ರತಿದಿನ ಚಿಂತಿಸಬೇಕು. ನಮ್ಮ ಮಗು ಧೈರ್ಯಶಾಲಿಯಾಗಿರಲಿ, ದಯಾಳುವಾಗಿರಲಿ, ಸಾತ್ವಿಕವಾಗಿರಲಿ ಎಂದು ಬಯಸು ವುದಾದರೆ ಆ ಗುಣಗಳು ಮೊದಲು ಪೋಷಕರಲ್ಲಿ ವ್ಯಕ್ತವಾಗಬೇಕು. ಈ ರೀತಿಯ ಮಾನಸಿಕ ಸಿದ್ಧತೆಯನ್ನು ಕನಿಷ್ಠ ಒಂದು ಅಥವಾ ಎರಡು ತಿಂಗಳು ಪಾಲಿಸುವುದು ಅತ್ಯುತ್ತಮ.
ಶೋಧನವಾದ ತಕ್ಷಣವೇ ಗರ್ಭಧಾರಣೆಗೆ ಪ್ರಯತ್ನಿಸಬಾರದು. ಕನಿಷ್ಠ ಒಂದು ಅಥವಾ ಎರಡು ತಿಂಗಳ ಕಾಲ ದೇಹಕ್ಕೆ ಪುನಃ ಪೋಷಣೆಯ ಸಮಯ ನೀಡಬೇಕು. ಈ ಅವಧಿಯಲ್ಲಿ ವೀರ್ಯ ಮತ್ತು ಅಂಡಾಣುಗಳ ಗುಣಮಟ್ಟ ಉತ್ತಮಗೊಳ್ಳಲು ವಿಶೇಷ ಆಹಾರ ಕ್ರಮ ಗಳನ್ನು ಪಾಲಿಸಬೇಕು.
ಸಾಮಾನ್ಯವಾಗಿ ಪುರುಷರು ಈ ಸಮಯದಲ್ಲಿ ಹಾಲು ಮತ್ತು ತುಪ್ಪ ಪ್ರಧಾನವಾದ ಸಾತ್ವಿಕ ಆಹಾರವನ್ನು ಸೇವಿಸುವುದು ಉತ್ತಮ. ಅತಿಯಾದ ಉಪ್ಪು, ಹುಳಿ, ಖಾರ, ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ ಸೌಮ್ಯ ಮತ್ತು ಪೋಷಕ ಆಹಾರಗಳನ್ನು ಹೆಚ್ಚಿಸಬೇಕು. ಮಹಿಳೆಯರು ಗರ್ಭಾಶಯದ ಬಲವರ್ಧನೆಗಾಗಿ ಮಾಷ (ಉದ್ದು) ಮತ್ತು ತಿಲ (ಎಳ್ಳು) ಪ್ರಧಾನವಾದ ಆಹಾರಗಳನ್ನು ಸೇವಿಸಬಹುದು.
ಉದ್ದಿನ ದೋಸೆ, ಉದ್ದಿನ ಇಡ್ಲಿ, ಉದ್ದಿನ ವಡೆ, ಉದ್ದಿನ ಉಂಡೆ, ಉದ್ದಿನ ಲೇಹ್ಯ ಇತ್ಯಾದಿ ಪದಾರ್ಥಗಳು ಗರ್ಭಾಶಯಕ್ಕೆ ಪೋಷಕವಾಗುತ್ತವೆ. ಜತೆಗೆ ಎಳ್ಳೆಣ್ಣೆ ಅಥವಾ ದೇಹಕ್ಕೆ ಹೊಂದುವ ಉತ್ತಮ ಗುಣಮಟ್ಟದ ಎಣ್ಣೆಯ ಬಳಕೆಯನ್ನು ಜೀರ್ಣಶಕ್ತಿಗೆ ಅನುಗುಣವಾಗಿ ಸ್ವಲ್ಪ ಹೆಚ್ಚಿಸ ಬಹುದು.
ಈ ಒಂದು ಅಥವಾ ಎರಡು ತಿಂಗಳ ಅವಧಿಯಲ್ಲಿ ಆಹಾರ ನಿಯಮನದ ಜತೆಗೆ ಗಂಡ ಮತ್ತು ಹೆಂಡತಿ ಭಾವನಾತ್ಮಕವಾಗಿ ಇನ್ನಷ್ಟು ಅನ್ಯೋನ್ಯತೆಯನ್ನು ಸಾಧಿಸಲು ಪ್ರಯತ್ನಿಸ ಬೇಕು. ಪ್ರೀತಿ, ಗೌರವ, ಶಾಂತಿ ಮತ್ತು ಪರಸ್ಪರ ಅರಿವು ತುಂಬಿದ ವಾತಾವರಣದ ಒಂದು ಉತ್ತಮ ಗರ್ಭಧಾರಣೆಗೆ ಭದ್ರವಾದ ಅಡಿ ಪಾಯ ನಿರ್ಮಾಣವಾಗುತ್ತದೆ ಎಂದು ಆಯು ರ್ವೇದ ತಿಳಿಸುತ್ತದೆ.
ಈ ರೀತಿಯಾಗಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡ ನಂತರ ಹೆಂಡತಿಯ ಋತುಸ್ರಾವ ಪ್ರಾರಂಭವಾಗಿ ಮೂರು ಅಥವಾ ನಾಲ್ಕು ದಿನಗಳ ಕಾಲದ ಸ್ರಾವ ಸಂಪೂರ್ಣವಾಗಿ ನಿಂತ ಮೇಲೆ, ನಾಲ್ಕನೆಯ ದಿನದಿಂದ ಹನ್ನೆರಡನೆಯ ದಿನದವರೆಗೆ ಇರುವ ಕಾಲವನ್ನು ಆಯುರ್ವೇದವು ಗರ್ಭಧಾರಣೆಗೆ ಅತ್ಯುತ್ತಮ ಸಮಯ ವೆಂದು ವಿವರಿಸುತ್ತದೆ. ಈ ಅವಧಿಯಲ್ಲಿ ಗಂಡ ಮತ್ತು ಹೆಂಡತಿಯ ಸಂಭೋಗ ಕ್ರಿಯೆಯು ಉತ್ತಮವಾದ ಪ್ರಜೆಯನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ದೈವಿಕ ಭಾವನೆಯೊಂದಿಗೆ ನಡೆದ ಸಂಭೋಗವು ಸಾತ್ವಿಕ ಮತ್ತು ಆರೋಗ್ಯವಂತ ಗರ್ಭ ಧಾರಣೆಗೆ ಸಹಕಾರಿ. ಸಂಭೋಗದ ನಂತರ ಗರ್ಭಧಾರಣೆ ಆಗಿದೆ ಎಂಬ ಭಾವನೆಯೊಂದಿಗೆ ಗರ್ಭಿಣಿ ಪರಿಚರ್ಯೆಯನ್ನು ಪ್ರಾರಂಭಿಸಬಹುದು. ಅಂದರೆ ಆಹಾರ, ನಿದ್ರೆ, ವಿಶ್ರಾಂತಿ, ಮನೋಭಾವ, ಮಾತು, ದಿನಚರಿ - ಇವೆಲ್ಲದಲ್ಲೂ ಜಾಗ್ರತೆ ವಹಿಸಬೇಕು.
ಒಂದು ತಿಂಗಳ ನಂತರ ಋತುಸ್ರಾವ ಆಗದೇ ಇದ್ದರೆ ಗರ್ಭಧಾರಣೆಯಾಗಿದೆ ಎಂದು ತಿಳಿಯ ಬಹುದು. ಆದರೆ, ಮತ್ತೆ ಮಾಸಿಕ ಸ್ರಾವ ಪ್ರಾರಂಭವಾದರೆ, ನಿರಾಶರಾಗದೆ ಪುನಃ ಗರ್ಭಧಾ ರಣೆಗೆ ಅನುಕೂಲವಾದ ಆಹಾರ-ವಿಹಾರ, ಮಾನಸಿಕ ಸಿದ್ಧತೆ ಮತ್ತು ಶಾರೀರಿಕ ನಿಯಮ ಗಳನ್ನು ಮುಂದುವರಿಸಬೇಕು. ಮುಖ್ಯವಾಗಿ ಈ ಸಮಯದಲ್ಲಿ ದೇಹವನ್ನು ಮತ್ತೆ ಅಶುದ್ಧ ಗೊಳಿಸುವಂತಹ ಆಹಾರ ಪದ್ಧತಿ, ಅತಿಯಾದ ಜಂಕ್ ಫುಡ್, ರಾತ್ರಿ ಜಾಗರಣೆ, ಒತ್ತಡದ ಜೀವನಶೈಲಿ ಇವುಗಳಿಂದ ದೂರವಿರುವುದು ಅತ್ಯಗತ್ಯ.
ಹೀಗೆ ಗರ್ಭಧಾರಣೆಗೆ ಮುನ್ನ ಸೂಕ್ತ ಸಿದ್ಧತೆ ಮಾಡಿಕೊಂಡು, ಗರ್ಭಧಾರಣೆಯಾದ ನಂತರ ಒಂಭತ್ತು ತಿಂಗಳ ಗರ್ಭಿಣಿ ಪರಿಚಾರ್ಯೆಯನ್ನು ಸಮರ್ಪಕವಾಗಿ ಪಾಲಿಸಿದರೆ ಆರೋಗ್ಯ ವಂತ, ಸಾತ್ವಿಕ ಮತ್ತು ಸಮಗ್ರ ವ್ಯಕ್ತಿತ್ವದ ಮಗುವಿಗೆ ಜನ್ಮ ನೀಡುವುದು ಸಾಧ್ಯವೆಂದು ಆಯುರ್ವೇದ ತಿಳಿಸುತ್ತದೆ.
ಒಂದು ಉತ್ತಮ ಬೀಜವನ್ನು ಬಿತ್ತುವ ಮೊದಲು ರೈತನು ಭೂಮಿಯನ್ನು ಸಿದ್ಧಪಡಿಸು ತ್ತಾನೆ. ಆದರೆ, ಇಂದು ಮನುಷ್ಯ ಮಾತ್ರ ಜೀವನದ ಅತ್ಯಂತ ಮಹತ್ವದ ಸೃಷ್ಟಿಯಾದ ಮಗುವಿನ ವಿಷಯದಲ್ಲಿ ಪೂರ್ವಸಿದ್ಧತೆಯ ಮಹತ್ವವನ್ನು ಮರೆತಿದ್ದಾನೆ. ಆಯುರ್ವೇದವು ನಮಗೆ ನೆನಪಿಸುವುದು ಒಂದೇ - ಉತ್ತಮ ಸಂತಾನ ಎನ್ನುವುದು ಕೇವಲ ಅದೃಷ್ಟದ ಫಲವಲ್ಲ. ಅದು ಜಾಗೃತಿಯುತ ಸಿದ್ಧತೆ, ಶುದ್ಧ ಜೀವನಶೈಲಿ, ಸಾತ್ವಿಕ ಮನೋಭಾವ ಮತ್ತು ದೈವಿಕ ಭಾವನೆಯ ಫಲ. ತಾಯಿ-ತಂದೆಯ ದೇಹ,ಮನಸ್ಸು, ಆಹಾರ, ಆಚಾರ, ವಿಚಾರ - ಇವೆಲ್ಲವೂ ಸೇರಿ ಮುಂದಿನ ಪೀಳಿಗೆಯನ್ನು ರೂಪಿಸುತ್ತವೆ. ಆದ್ದರಿಂದ ಮಗು ಎನ್ನುವುದು ಆಕಸ್ಮಿಕವಾಗಿ ಆಗಿಬಿಡುವ ಘಟನೆ ಆಗಬಾರದು. ಅದು ಸಂಪೂರ್ಣ ಅರಿವು ಮತ್ತು ಜವಾಬ್ದಾರಿಯಿಂದ ಮಾಡಿಕೊಳ್ಳುವ ಪವಿತ್ರ ನಿರ್ಧಾರ ವಾಗಬೇಕು.
ಏಕೆಂದರೆ ನಾವು ಇಂದು ಹೇಗೆ ಬದುಕು ತ್ತೇವೋ, ನಾಳೆಯ ಸಮಾಜ ಅದೇ ರೂಪದಲ್ಲಿ ಹುಟ್ಟುತ್ತದೆ. ಉತ್ತಮ ಮಕ್ಕಳನ್ನು ಬಯಸುವುದಾದರೆ ಮೊದಲು ಉತ್ತಮ ಪೋಷಕ ರಾಗಲು ನಾವು ಸಿದ್ಧರಾಗಬೇಕು.