Dr Sadhanashree Column: ನಾಲ್ಕು ದಿನಗಳ ಆ ನೋವಿಗೆ ಕಾರಣ ಹದಿನಾಲ್ಕು
ಆಧುನಿಕ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ, ನಿದ್ರಾಭಾವ, ಮಾನಸಿಕ ಒತ್ತಡ ಮತ್ತು ಪ್ರಕೃತಿ ವಿರುದ್ಧ ಆಚರಣೆಗಳು ಮಹಿಳೆಯ ದೇಹದ ಸಹಜ ಚಕ್ರದ ಮೇಲೆಯೇ ಪರಿಣಾಮ ಬೀರುತ್ತಿವೆ. ಆಯು ರ್ವೇದದ ಪ್ರಕಾರ, ಮುಟ್ಟು ಎಂಬುದು ಕೇವಲ ಮಾಸಿಕ ಸ್ರಾವವಲ್ಲ; ಅದು ಮಹಿಳೆಯ ಸಮಗ್ರ ಆರೋಗ್ಯದ ಪ್ರತಿಬಿಂಬ. ಆದ್ದರಿಂದ, ಈ ಸಮಸ್ಯೆಗಳ ಮೂಲವನ್ನು ಅರಿತು ಜೀವನ ಶೈಲಿಯಲ್ಲಿ ಬದಲಾವಣೆ ತರುವುದು ಅತ್ಯಗತ್ಯ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಇಂದಿನ ಕಾಲದಲ್ಲಿ ಮಹಿಳೆಯರ ಆರೋಗ್ಯವು ನಿಧಾನವಾಗಿ ಆತಂಕಕಾರಿ ದಿಕ್ಕಿನತ್ತ ಸಾಗುತ್ತಿದೆ. ಹಿಂದೆ ಅಪರೂಪ ವಾಗಿದ್ದ ಮುಟ್ಟಿನ ತೊಂದರೆಗಳು ಇಂದು ಬಹುತೇಕ ಪ್ರತಿಯೊಬ್ಬ ಮಹಿಳೆಯ ಜೀವನದ ಭಾಗವಾಗಿ ಬಿಟ್ಟಿವೆ. ವಿಷಮ ಋತುಚಕ್ರ, ಹೊಟ್ಟೆನೋವು, ಅಧಿಕ ಅಥವಾ ಕಡಿಮೆ ಸ್ರಾವ, PCOD, ಹಾರ್ಮೋನಲ್ ಅಸಮತೋಲನ, ಮನಸ್ಥಿತಿ ಬದಲಾವಣೆ, ದೌರ್ಬಲ್ಯ- ಇವುಗಳೆಲ್ಲ ದಿನೇದಿನೆ ಹೆಚ್ಚುತ್ತಿವೆ.
ಆಧುನಿಕ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ, ನಿದ್ರಾಭಾವ, ಮಾನಸಿಕ ಒತ್ತಡ ಮತ್ತು ಪ್ರಕೃತಿ ವಿರುದ್ಧ ಆಚರಣೆಗಳು ಮಹಿಳೆಯ ದೇಹದ ಸಹಜ ಚಕ್ರದ ಮೇಲೆಯೇ ಪರಿಣಾಮ ಬೀರು ತ್ತಿವೆ. ಆಯುರ್ವೇದದ ಪ್ರಕಾರ, ಮುಟ್ಟು ಎಂಬುದು ಕೇವಲ ಮಾಸಿಕ ಸ್ರಾವವಲ್ಲ; ಅದು ಮಹಿಳೆಯ ಸಮಗ್ರ ಆರೋಗ್ಯದ ಪ್ರತಿಬಿಂಬ. ಆದ್ದರಿಂದ, ಈ ಸಮಸ್ಯೆಗಳ ಮೂಲವನ್ನು ಅರಿತು ಜೀವನಶೈಲಿ ಯಲ್ಲಿ ಬದಲಾವಣೆ ತರುವುದು ಅತ್ಯಗತ್ಯ.
ಮೊದಲು, ಆಯುರ್ವೇದದ ದೃಷ್ಟಿಕೋನದಲ್ಲಿ ಮುಟ್ಟಿನ ಸ್ರಾವವು ದೇಹದಲ್ಲಿ ಹೇಗೆ ಉತ್ಪತ್ತಿ ಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ: ನಾವು ಪ್ರತಿನಿತ್ಯ ಸೇವಿಸುವ ಆಹಾರವು ಜೀರ್ಣ ಗೊಂಡ ನಂತರ ಅದರ ಸಾರಭಾಗವು ದೇಹದಲ್ಲಿರುವ ಅಗ್ನಿಯ ಪ್ರಭಾವದಿಂದ ರಸಧಾತುವಾಗಿ ಪರಿವರ್ತನೆಗೊಳ್ಳುತ್ತದೆ.
ಈ ರಸಧಾತುವು ಕ್ರಮೇಣ ರಕ್ತವರ್ಣವನ್ನು ಪಡೆದು ಗರ್ಭಾಶಯದ ಕಡೆಗೆ ಹರಿಯುತ್ತದೆ. ಗರ್ಭಾ ಶಯದಲ್ಲಿ ಈ ರಕ್ತವು ನಿಧಾನವಾಗಿ ಸಂಗ್ರಹಗೊಂಡು, ತಿಂಗಳ ಅಂತ್ಯದಲ್ಲಿ ಆರ್ತವ ಅಥವಾ ಮುಟ್ಟಿನ ರಕ್ತದ ರೂಪದಲ್ಲಿ ದೇಹದಿಂದ ಸ್ರಾವವಾಗುತ್ತದೆ. ಇಲ್ಲಿ ನಾವು ಗಮನಿಸ ಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಮುಟ್ಟಿನ ಆ ನಾಲ್ಕು ಅಥವಾ ಐದು ದಿನಗಳಲ್ಲಿ ಸ್ರಾವವಾಗುವ ರಕ್ತವು ಕೇವಲ ಆ ದಿನಗಳ ವಿಷಯವಲ್ಲ. ಅದು ಇಡೀ ತಿಂಗಳ ಕಾಲ ನಾವು ಅನುಸರಿಸಿದ ಆಹಾರ, ಜೀವನಶೈಲಿ, ನಿದ್ರೆ, ಮನಸ್ಥಿತಿ ಮತ್ತು ದಿನಚರ್ಯದ ಪ್ರತಿಬಿಂಬ.
ಇದನ್ನೂ ಓದಿ: Dr Sadhanashree Column: ಬಿಸಿಲಿನ ತಾಪಕ್ಕೆ ತಂಪಿನ ಸ್ಪರ್ಶ- ಆಯುರ್ವೇದದ ಸಮಗ್ರ ಪರಿಹಾರಗಳು
ಆದ್ದರಿಂದ, ಒಂದು ಋತು ಚಕ್ರವು ಯಾವುದೇ ಅಡಚಣೆ, ಅಸ್ವಸ್ಥತೆ ಅಥವಾ ನೋವಿಲ್ಲದೆ ಸರಾಗವಾಗಿ ನಡೆಯಬೇಕೆಂದರೆ, ಅದರ ಆರೈಕೆ ಕೇವಲ ಆ ನಾಲ್ಕು ದಿನಗಳಲ್ಲಿ ಅಲ್ಲ; ಪ್ರತಿದಿನವೂ ನಮ್ಮ ಆಹಾರ-ವಿಹಾರ-ವಿಚಾರಗಳ ಬಗ್ಗೆ ಜಾಗರೂಕತೆ ವಹಿಸುವುದು ಅತ್ಯಗತ್ಯ.
ಸಾಮಾನ್ಯವಾಗಿ ಯಾವುದೇ ಔಷ ಅಥವಾ ಕೃತಕ ಹಸ್ತಕ್ಷೇಪಗಳ ಅಗತ್ಯವಿಲ್ಲದೆ ಮುಟ್ಟು ಪ್ರತಿ ತಿಂಗಳು ಸಹಜವಾಗಿ ಆಗ ಬೇಕು. ಮುಟ್ಟುಆರಂಭವಾಗುವುದೂ, ನಾಲ್ಕ ರಿಂದ ಐದು ದಿನಗಳ ಕಾಲ ಯಾವುದೇ ವಿಶೇಷ ತೊಂದರೆ ನೀಡದೆ ಸರಾಗವಾಗಿ ಸ್ರಾವ ವಾಗಿ, ನಂತರ ಸ್ವಾಭಾವಿಕವಾಗಿ ನಿಲ್ಲುವುದೂ ಆರೋಗ್ಯದ ಪ್ರಮುಖ ಸೂಚಕವಾಗಿದೆ.
ಮುಟ್ಟಿನ ರಕ್ತದ ವರ್ಣವು ಸಹಜವಾಗಿ ರಕ್ತದ ವರ್ಣದಂತೆಯೇ ಇರಬೇಕು. ಬಿಳಿ ಬಟ್ಟೆಯ ಮೇಲೆ ಶಾಶ್ವತ ಕಲೆ ಉಳಿಸದೆ, ನೀರಿನಿಂದ ತೊಳೆದಾಗ ಶುದ್ಧವಾಗುವುದು ಆರೋಗ್ಯಕರ ಆರ್ತವದ ಲಕ್ಷಣ. ದುರ್ಗಂಧ, ಲೋಳೆಯಂತಿರುವ ದಪ್ಪತನ ಅಥವಾ ಅಸ್ವಾಭಾವಿಕ ವಾಸನೆಗಳಿಲ್ಲದೆ, ಯಾವುದೇ ಹೆಚ್ಚಿನ ತೊಂದರೆ ನೀಡದೆ ಸರಾಗವಾಗಿ ಸ್ರಾವವಾಗಿ ನಿಲ್ಲುವ ಮುಟ್ಟು ಸ್ವಾಸ್ಥ್ಯದ ಸಂಕೇತವಾಗಿದೆ.
ಇದಕ್ಕೆ ವಿರುದ್ಧವಾಗಿ, ಮುಟ್ಟಿನ ಮೊದಲು ಅಥವಾ ಮುಟ್ಟಾಗುವ ಸಮಯದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ವಾತದೋಷದ ಪ್ರಕೋಪದ ಸೂಚಕವಾಗಿದೆ. ತಿಂಗಳಿಗಿಂತ ಮೊದಲೇ ರಕ್ತಸ್ರಾವವಾಗುವುದು ಅಥವಾ ಅತಿಯಾಗಿ ರಕ್ತ ಹರಿಯುವುದು ಪಿತ್ತ ದೋಷದ ಅಸಮತೋಲನದಿಂದ ಉಂಟಾಗುತ್ತದೆ.
ಹಾಗೆಯೇ, ತಿಂಗಳು ಕಳೆದರೂ ಮುಟ್ಟು ಬಾರದಿರುವುದು, ಮುಂದೂಡಲ್ಪಡುವುದು ಅಥವಾ ಅತಿ ಕಡಿಮೆ ಪ್ರಮಾಣದಲ್ಲಿ ಸ್ರಾವವಾಗುವುದು ಸಾಮಾನ್ಯವಾಗಿ ಕಫದೋಷದ ಅಸಮತೋಲನದ ಪರಿಣಾಮವೆಂದು ಆಯುರ್ವೇದ ವಿವರಿಸುತ್ತದೆ.
ಬನ್ನಿ, ಆ ನಾಲ್ಕು ದಿನಗಳ ತೊಂದರೆಯ ಹಿಂದೆ ಅಡಗಿರುವ ಹದಿನಾಲ್ಕು ಪ್ರಮುಖ ಕಾರಣಗಳನ್ನು ಈಗ ಒಂದೊಂದಾಗಿ ನಮ್ಮ ವಿಳಾಸ ತಿಳಿದುಕೊಳ್ಳೋಣ.
1 ಜಿಡ್ಡಿಲ್ಲದ ಹಾಗೂ ಅತಿಯಾಗಿ ಒಣಗಿಸುವ ಆಹಾರಗಳ ಸೇವನೆ
ಒಣ ಸ್ವಭಾವದ ಆಹಾರಗಳನ್ನು ನಿರಂತರವಾಗಿ ಸೇವಿಸುವುದು ವಾತದೋಷವನ್ನು ಹೆಚ್ಚಿಸುವ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಮೊಳಕೆಕಾಳು, ಬಟಾಣಿ, ಹುರಿ ಗಾಳು, ಕಡ್ಲೆಪೂರಿ, ವಿವಿಧ ಕಂದಮೂಲಗಳು, ಹಸಿ ತರಕಾರಿಗಳು ಹಾಗೂ ಹಾಗಲಕಾಯಿ ಮೊದಲಾದ ಅತಿಯಾದ ಕಹಿ ಪದಾರ್ಥಗಳ ಸೇವನೆ ದೇಹದಲ್ಲಿ ರೂಕ್ಷ ಮತ್ತು ಶೀತ ಗುಣಗಳನ್ನು ಹೆಚ್ಚಿಸುತ್ತದೆ. ಈ ರೀತಿಯ ಆಹಾರ ಪದ್ಧತಿ ಅಪಾನ ವಾಯುವಿನ ಚಲನೆಯಲ್ಲಿ ಅಸಮತೋಲನ ಉಂಟು ಮಾಡಿ, ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು, ಬೆನ್ನುನೋವು, ಮುಟ್ಟಿನ ಅಡಚಣೆ ಹಾಗೂ ಕಡಿಮೆ ಸ್ರಾವದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
2 ಚೋದಕ ಪಾನೀಯಗಳ ಅತಿಯಾದ ಸೇವನೆ
ಅತಿಯಾಗಿ ಕಾಫಿ, ಗ್ರೀನ್ ಟೀ, ಕೂಲ್‌ಡ್ರಿಂಕ್ಸ್, ಎನರ್ಜಿ ಡ್ರಿಂಕ್ಸ್ ಹಾಗೂ ಇತರೆ ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವುದು ದೇಹದಲ್ಲಿ ಪಿತ್ತ ಮತ್ತು ವಾತದ ಅಸಮತೋಲನವನ್ನು ಉಂಟು ಮಾಡುತ್ತದೆ. ಇಂತಹ ಪಾನೀಯಗಳು ದೇಹದ ಸ್ವಾಭಾವಿಕ ಚಕ್ರವನ್ನು ಉದ್ರೇಕಗೊಳಿಸಿ, ಅಪಾನ ವಾಯುವಿನ ಗತಿಯಲ್ಲಿಯೂ ವ್ಯತ್ಯಯ ಉಂಟು ಮಾಡುತ್ತವೆ. ಇದರ ಪರಿಣಾಮವಾಗಿ ಮುಟ್ಟು ಸಮಯಕ್ಕಿಂತ ಮೊದಲೇ ಕಾಣಿಸಿ ಕೊಳ್ಳುವುದು, ಅತಿಯಾದ ರಕ್ತಸ್ರಾವ, ದೇಹ ದಲ್ಲಿ ಉಷ್ಣತೆಯ ಹೆಚ್ಚಳ, ಕಿರಿಕಿರಿ ಹಾಗೂ ದೌರ್ಬಲ್ಯದಂತಹ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು.
3 ಅತಿಯಾದ ಉಪ್ಪು, ಹುಳಿ, ಖಾರ ಹಾಗೂ ಮಸಾಲೆಯುಕ್ತ ಆಹಾರಗಳ ಸೇವನೆ
ವಿಪರೀತವಾಗಿ ಉಪ್ಪು, ಹುಳಿ, ಖಾರ ಮತ್ತು ಕ್ಷಾರಯುಕ್ತ ಪದಾರ್ಥಗಳನ್ನು ಸೇವಿಸುವುದು ದೇಹದಲ್ಲಿ ಪಿತ್ತದೋಷವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮಸಾಲೆ ಹಾಕಿದ ಉಪ್ಪಿನಕಾಯಿಗಳು, ಮಂಚೂರಿಯನ್, ಚಿಪ್ಸ್, ಫಾಸ್ಟ್ ಫುಡ್ ಹಾಗೂ ಅತಿಯಾಗಿ ಸಂಸ್ಕರಿಸಲಾದ ಆಹಾರಗಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಿ ರಕ್ತವನ್ನು ದೂಷಿತಗೊಳಿಸುತ್ತವೆ. ಇದರ ಪರಿಣಾಮವಾಗಿ ಮುಟ್ಟು ಸಮಯಕ್ಕಿಂತ ಮೊದಲೇ ಕಾಣಿಸಿಕೊಳ್ಳುವುದು, ಅತಿಯಾದ ರಕ್ತಸ್ರಾವ, ಉರಿಯೂತ, ಕಿರಿಕಿರಿ ಹಾಗೂ ದೇಹದ ದೌರ್ಬಲ್ಯದಂತಹ ಸಮಸ್ಯೆಗಳು ಉಂಟಾಗಬಹುದು.
೪ ಅತಿಯಾದ ಶೀತಲ ಆಹಾರಗಳ ಸೇವನೆ
ಐಸ್ಕ್ರೀಮ, ಕೇಕ್, ಪೇಸ್ಟ್ರೀಸ್, ಬೇಕರಿ ತಿನಿಸುಗಳು ಹಾಗೂ ಫ್ರಿಡ್ಜ್‌ನಲ್ಲಿಟ್ಟ ಶೀತಲ ಆಹಾರಗಳನ್ನು ಅತಿಯಾಗಿ ಸೇವಿಸುವುದು ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಅಪಾನವಾಯುವಿನ ಸಹಜ ಗತಿ ನಿಧಾನಗೊಂಡು, ಮುಟ್ಟು ಮುಂದೂಡಲ್ಪಡುವುದು, ಸರಿಯಾಗಿ ಆಗದೆ ಇರುವುದು ಅಥವಾ ಅತಿ ಕಡಿಮೆ ಪ್ರಮಾಣದಲ್ಲಿ ಸ್ರಾವವಾಗುವಂತಹ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ.
5 ಔಷಧಿಗಳ ಅತಿಯಾದ ಹಾಗೂ ಅನಿಯಂತ್ರಿತ ಬಳಕೆ
ಹಾರ್ಮೋನಲ್ ಪಿಲ್ಸ್, ಓರಲ್ ಕಾಂಟ್ರಾ ಸೆಪ್ಟಿವ್ಸ್, ತೀಕ್ಷ್ಣ ಸ್ವಭಾವದ ಔಷಧಿಗಳು, ಅತಿಯಾದ ಆಂಟಿಬಯೋಟಿಕ್ಸ್, ಸ್ಟೀರಾಯ್ಡ್ಸ್ ಹಾಗೂ ಪದೇಪದೆ ಪೇನ್‌ಕಿಲ್ಲರ್‌ಗಳ ಬಳಕೆ ದೇಹದ ಸಹಜ ಹಾರ್ಮೋನಲ್ ಸಮತೋಲನದ ಮೇಲೆ ಪರಿಣಾಮ ಬೀರುತ್ತವೆ. ಆರಂಭದಲ್ಲಿ ಇವು ತಾತ್ಕಾಲಿಕ ಪರಿಹಾರ ನೀಡಿದಂತೆಯೇ ಕಾಣಿಸಿದರೂ, ದೀರ್ಘಕಾಲದಲ್ಲಿ ದೇಹದ ಸ್ವಾಭಾವಿಕ ಋತುಚಕ್ರವನ್ನು ಅಸ್ತವ್ಯಸ್ತಗೊಳಿಸುವ ಸಾಧ್ಯತೆ ಇದೆ.
6 ಅಸಮರ್ಪಕ ಆಹಾರ ಸೇವನೆಯ ಅಭ್ಯಾಸಗಳು
ಬಾಯಾರಿಕೆ ಇಲ್ಲದಿದ್ದರೂ ಅತಿಯಾಗಿ ನೀರು ಅಥವಾ ದ್ರವಾಹಾರಗಳನ್ನು ಸೇವಿಸುವುದು, ಹಸಿವು ಇಲ್ಲದಿದ್ದರೂ ಪದೇಪದೆ ತಿನ್ನುವುದು, ಹಸಿವಿನ ಮಿತಿಯನ್ನು ಲೆಕ್ಕಿಸದೆ ಅತಿಯಾಗಿ ಆಹಾರ ಸೇವಿಸುವುದು ಹಾಗೂ ಸಮಯವಲ್ಲದ ಸಮಯದಲ್ಲಿ ಊಟ ಮಾಡುವ ಅಭ್ಯಾಸಗಳು ಮುಟ್ಟಿನ ಸಮಸ್ಯೆಗೆ ಮೂಲ ಕಾರಣ.
7 ದಿವಾಸ್ವಪ್ನ - ಹಗಲಿನ ನಿದ್ರೆಯ ಅಭ್ಯಾಸ
ಆಹಾರ ಸೇವಿಸಿದ ತಕ್ಷಣ ಮಲಗುವುದು ಅಥವಾ ಹಗಲಿನ ಯಾವುದೇ ಸಮಯದಲ್ಲಿ ಪದೇಪದೆ ಮಲಗುವ ಅಭ್ಯಾಸವನ್ನು ಆಯುರ್ವೇದದಲ್ಲಿ ದಿವಾಸ್ವಪ್ನ ಎಂದು ಕರೆಯಲಾಗುತ್ತದೆ. ಆಯು ರ್ವೇದದ ಪ್ರಕಾರ, ದಿವಾಸ್ವಪ್ನವನ್ನು ಸಾಧ್ಯವಾದಷ್ಟು ವರ್ಜ್ಯ ಮಾಡಬೇಕೆಂದು ಹೇಳಲಾಗಿದೆ. ಕಫದಿಂದಾಗುವ ಮುಟ್ಟಿನ ಸಮಸ್ಯೆಗೆ ಇದು ಕಾರಣವಾಗಬಹುದು.
8 ರಾತ್ರಿ ಜಾಗರಣೆ
ರಾತ್ರಿ ಸಮಯದಲ್ಲಿ ಜಾಗರಣೆ ಮಾಡುವ ಅಭ್ಯಾಸ ದೇಹದ ಸಹಜ ಜೈವಿಕ ಗತಿಯನ್ನೇ ಅಸ್ತವ್ಯಸ್ತ ಗೊಳಿಸುತ್ತದೆ. ಆಯುರ್ವೇದದ ಪ್ರಕಾರ, ರಾತ್ರಿ ನಿದ್ರಾ ಭಾವವು ಮುಖ್ಯವಾಗಿ ವಾತದೋಷವನ್ನು ಅತ್ಯಂತ ವೇಗವಾಗಿ ಪ್ರಚೋದಿಸುತ್ತದೆ. ವಾತದ ಪ್ರಕೋಪದಿಂದ ಅಪಾನ ವಾಯುವಿನ ಸಹಜ ಚಲನೆ ವ್ಯತ್ಯಯಗೊಂಡು, ಮುಟ್ಟು ಸರಿಯಾಗಿ ಆಗದೆ ಇರುವುದು, ಅತಿ ಕಡಿಮೆ ಪ್ರಮಾಣದಲ್ಲಿ ರಕ್ತಸ್ರಾವವಾಗುವುದು ಅಥವಾ ಕೆಲವೊಮ್ಮೆ ರಕ್ತವೇ ಹರಿಯದ ಸ್ಥಿತಿಯೂ ಉಂಟಾಗಬಹುದು.
9 ಶಾರೀರಿಕ ವೇಗಗಳನ್ನು ತಡೆ ಹಿಡಿಯುವುದು
ಹಸಿವು, ನಿದ್ರೆ, ಮಲ, ಮೂತ್ರ ಮೊದಲಾದ ದೇಹದ ಸಹಜ ವೇಗಗಳನ್ನು ತಡೆ ಹಿಡಿಯುವ ಅಭ್ಯಾಸವು ದೇಹದ ಸಹಜ ಸಮತೋಲನ ವನ್ನು ಭಂಗಪಡಿಸುತ್ತದೆ. ವಿಶೇಷವಾಗಿ ಮಹಿಳೆಯರು ತಮ್ಮ ಆರೋಗ್ಯವನ್ನು ಕಡೆಗಣಿಸಿ ಪದೇಪದೆ ಉಪವಾಸ ಮಾಡುವುದು, ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇರುವುದು ಅಥವಾ ಆಹಾರ- ಪಾನವನ್ನು ಬಿಟ್ಟು ದೇಹವನ್ನು ದಣಿವಿಗೆ ಒಳಪಡಿಸುವುದು ಅಪಾನವಾಯುವಿನ ಗತಿಯಲ್ಲಿ ವ್ಯತ್ಯಯ ಉಂಟುಮಾಡುತ್ತದೆ. ಆಯುರ್ವೇದದ ಪ್ರಕಾರ, ದೇಹದ ಸಹಜ ಅಗತ್ಯಗಳನ್ನು ನಿರ್ಲಕ್ಷಿಸುವುದು ನಿಧಾನವಾಗಿ ಅನೇಕ ಸ್ತ್ರೀರೋಗಗಳಿಗೆ ಮೂಲ ಕಾರಣವಾಗುತ್ತದೆ.
10 ಅತಿಯಾದ ದೈಹಿಕ ಶ್ರಮ ಮತ್ತು ವಿಶ್ರಾಂತಿಯ ಅಭಾವ
ಅತ್ಯಧಿಕ ದೈಹಿಕ ಶ್ರಮ, ವಿಶ್ರಾಂತಿ ಇಲ್ಲದೆ ನಿರಂತರ ದುಡಿಯುವುದು, ಅತಿಯಾದ ಪ್ರಯಾಣ, ತಮ್ಮ ದೇಹಶಕ್ತಿಯನ್ನು ಮೀರಿದ ವ್ಯಾಯಾಮ, ನೃತ್ಯ ಅಥವಾ ಕ್ರೀಡೆಗಳಲ್ಲಿ ತೊಡಗಿಸಿ ಕೊಳ್ಳುವುದು ದೇಹದಲ್ಲಿ ವಾತ ದೋಷವನ್ನು ಹೆಚ್ಚಿಸುತ್ತದೆ. ಅದರಲ್ಲೂ ಆಹಾರದಲ್ಲಿ ಅಗತ್ಯವಾದ ಜಿಡ್ಡಿನ ಅಂಶಗಳನ್ನು ಸೇವಿಸದೇ ಮಾಡುವ ಅತಿಯಾದ ವ್ಯಾಯಾಮ ದೇಹದಲ್ಲಿ ರೂಕ್ಷತೆ ಹೆಚ್ಚಿಸಿ ತೀವ್ರ ವಾತದುಷ್ಟಿಗೆ ಕಾರಣವಾಗುತ್ತದೆ. ಇದು ನಿಧಾನವಾಗಿ ಇಡೀ ಋತುಚಕ್ರದ ಸಮ ತೋಲನವನ್ನು ಹಾಳುಮಾಡುವ ಸಾಧ್ಯತೆಯಿದೆ.
11 ವ್ಯಾಯಾಮರಹಿತ ಜೀವನಶೈಲಿ ಮತ್ತು ಸುಖಪ್ರವೃತ್ತಿ
ಹಾಗೆಯೇ, ದೈಹಿಕ ಚಟುವಟಿಕೆಗಳಿಲ್ಲದ ಸುಖಪ್ರವೃತ್ತಿ, ಸದಾ ಒಂದೇ ಸ್ಥಳದಲ್ಲಿ ಕೂತು ಕೆಲಸ ಮಾಡುವ ಅಭ್ಯಾಸ, ದೇಹಕ್ಕೆ ಶ್ರಮವಿಲ್ಲದ ಜೀವನಶೈಲಿ ಹಾಗೂ ಚಲನೆಯ ಕೊರತೆ ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುತ್ತದೆ. ಆಯುರ್ವೇದದ ಪ್ರಕಾರ, ಸಮತೋಲನಯುತ ದೈಹಿಕ ಚಟುವಟಿಕೆ ಮಹಿಳೆಯ ಋತುಚಕ್ರವನ್ನು ಸರಾಗವಾಗಿ ಕಾಯ್ದುಕೊಳ್ಳಲು ಅತ್ಯಗತ್ಯವಾಗಿದೆ.
12 ಆರ್ತವಕಾಲದಲ್ಲಿ ಪಾಲಿಸಬೇಕಾದ ನಿಯಮಗಳನ್ನು ನಿರ್ಲಕ್ಷಿಸುವುದು
ಆಯುರ್ವೇದದಲ್ಲಿ ದಿನಚರ್ಯೆ ಮತ್ತು ಋತುಚರ್ಯೆಯಂತೆ, ಆರ್ತವಕಾಲದಲ್ಲಿಯೂ ಪಾಲಿಸ ಬೇಕಾದ ಕೆಲವು ವಿಶೇಷ ನಿಯಮಗಳನ್ನು ವಿವರಿಸಲಾಗಿದೆ. ಈ ಸಮಯದಲ್ಲಿ ಅತಿಯಾದ ವ್ಯಾಯಾಮವನ್ನು ತಪ್ಪಿಸುವುದು, ಸಾತ್ವಿಕ ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು, ಉಪ್ಪು-ಖಾರ-ಹುಳಿ ಪದಾರ್ಥ ಗಳನ್ನು ಮಿತಿಗೊಳಿಸುವುದು ಹಾಗೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯವೆಂದು ಹೇಳಲಾಗಿದೆ. ಆದರೆ, ಇಂದಿನ ಜೀವನ ಶೈಲಿಯಲ್ಲಿ ಈ ನಿಯಮಗಳನ್ನು ಕಡೆಗಣಿಸಿ, ದೇಹದ ಸ್ಥಿತಿಯನ್ನು ಲೆಕ್ಕಿಸದೆ ಅತಿಯಾದ ಚಟುವಟಿಕೆ, ಅಸಮರ್ಪಕ ಆಹಾರ ಮತ್ತು ಅಶಾಂತ ಮನ ಸ್ಥಿತಿಯೊಂದಿಗೆ ಆರ್ತವಕಾಲವನ್ನು ಕಳೆಯುವುದು ಸಾಮಾನ್ಯವಾಗಿದೆ. ಇಂತಹ ಅನಿಯ ಮಿತನಡೆನುಡಿಗಳು ನಿಧಾನವಾಗಿ ದೋಷಗಳ ಅಸಮತೋಲನಕ್ಕೆ ಕಾರಣವಾಗಿ ಮುಟ್ಟಿನ ತೊಂದರೆಗಳಿಗೆ ಕಾರಣವಾಗಬಹುದು.
13 ಮಾನಸಿಕ ಒತ್ತಡ ಮತ್ತು ಭಾವನಾತ್ಮಕ ಅಸ್ಥಿರತೆ
ಇಂದಿನ ನಿತ್ಯ ಜೀವನದಲ್ಲಿ ಅತಿಯಾದ ಉದ್ಯೋಗದ ಒತ್ತಡ, ನಿರಂತರ ಮಾನಸಿಕ ತಳಮಳ, ಚಿಂತೆ, ದುಃಖ, ಕೋಪ, ಭಯ ಹಾಗೂ ಅಶಾಂತಿಯಂತಹ ಭಾವನೆಗಳು ಮಹಿಳೆಯ ಆರೋಗ್ಯದ ಮೇಲೆ ಆಳವಾದ ಬದುಕಿ ತೋರಿಸುವ ಧೈರ್ಯ ಈ ಹೆಣ್ಣು ಮಕ್ಕಳಿಗೆ ಇರಬೇಕು. ಪ್ರತಿ ಮನೆಯಲ್ಲೂ ಇಂತಹ ಹೆಣ್ಣು ಮಕ್ಕಳನ್ನು ಬೆಳೆಸೋಣ. ಪರಿಣಾಮ ಬೀರುತ್ತಿವೆ.
ಆಯುರ್ವೇದದ ಪ್ರಕಾರ, ಮನಸ್ಸು ಮತ್ತು ದೇಹವು ಪರಸ್ಪರ ಅವಿನಾಭಾವ ಸಂಬಂಧ ಹೊಂದಿರುವುದರಿಂದ, ಮಾನಸಿಕ ಅಸಮತೋಲನವು ನೇರವಾಗಿ ಆರ್ತವದ ಮೇಲೂ ಪರಿಣಾಮ ಬೀರುತ್ತದೆ.ಆದ್ದರಿಂದ, ಆರ್ತವದ ಆರೋಗ್ಯವನ್ನು ಕಾಪಾಡಲು ಮನಸ್ಸಿನ ಶಾಂತಿಯೂ ಆಹಾರ-ವಿಹಾರದಷ್ಟೇ ಮಹತ್ವದ್ದಾಗಿದೆ.
14 ಅತಿಯಾದ ಹಾಗೂ ಅಸಮರ್ಪಕ ಮೈಥುನಾಚಾರ
ಆಯುರ್ವೇದದ ಪ್ರಕಾರ, ಮೈಥುನ ಕ್ರಿಯೆಯೂ ಒಂದು ನಿಯಮ ಮತ್ತು ಕ್ರಮದೊಳಗೆ ನಡೆಯ ಬೇಕಾದ ಸಹಜ ಚಟುವಟಿಕೆಯಾಗಿದೆ. ಋತು, ವಯಸ್ಸು, ದೈಹಿಕ ಕ್ಷಮತೆ ಹಾಗೂ ಆಹಾರ-ವಿಹಾರದ ಸ್ಥಿತಿಯನ್ನು ಅನುಸರಿಸಿ ಮೈಥುನಾಚಾರವನ್ನು ನಿಯಂತ್ರಿಸಬೇಕೆಂದು ಆಯುರ್ವೇದ ತಿಳಿಸುತ್ತದೆ. ಆದರೆ, ದೇಹದ ಶಕ್ತಿಯನ್ನು ಲೆಕ್ಕಿಸದೇ, ಅಗತ್ಯವಾದ ಪೋಷಕ ಆಹಾರವನ್ನು ಸೇವಿಸದೇ ಅಥವಾ ಅತಿಯಾದ ಮೈಥುನಾಚಾರದಲ್ಲಿ ತೊಡಗಿಸಿಕೊಳ್ಳುವುದು ಧಾತುಕ್ಷಯಕ್ಕೆ ಹಾಗೂ ವಾತ-ಪಿತ್ತದ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಅತಿಯಾದ ರಕ್ತಸ್ರಾವ, ಸಮಯಕ್ಕಿಂತ ಮೊದಲೇ ಮುಟ್ಟು ಕಾಣಿಸಿಕೊಳ್ಳುವುದು, ದೌರ್ಬಲ್ಯ ಹಾಗೂ ದೇಹದ ಶಿಥಿಲತೆ ಮೊದಲಾದ ಸಮಸ್ಯೆಗಳು ಉಂಟಾಗಬಹುದು.
ಸ್ನೇಹಿತರೆ, ಮುಟ್ಟು ಎಂಬುದು ಕೇವಲ ಪ್ರತಿ ತಿಂಗಳ ಸ್ರಾವವಲ್ಲ - ಅದು ಮಹಿಳೆಯ ದೇಹ, ಮನಸ್ಸು ಮತ್ತು ಜೀವನಶೈಲಿಯ ಸಮತೋಲನದ ಪ್ರತಿಬಿಂಬವಾಗಿದೆ. ಆ ನಾಲ್ಕು ದಿನಗಳ ನೋವು ಅಥವಾ ಅಸ್ವಸ್ಥತೆಯ ಹಿಂದೆ ದೇಹವು ತಿಂಗಳ ಪೂರ್ತಿ ಅನುಭವಿಸಿದ ಆಹಾರ, ವಿಹಾರ ಮತ್ತು ಮಾನಸಿಕ ಅಸಮತೋಲನಗಳು ಅಡಗಿವೆ.
ಇಂದಿನ ಜೀವನಶೈಲಿಯಲ್ಲಿ ನಾವು ಸಹಜತೆಯಿಂದ ಎಷ್ಟು ದೂರ ಸಾಗುತ್ತಿದ್ದೇವೋ, ಅಷ್ಟೇ ಋತುಚಕ್ರವೂ ತನ್ನ ಸಹಜ ಗತಿಯನ್ನು ಕಳೆದುಕೊಳ್ಳುತ್ತಿದೆ. ಆಯುರ್ವೇದವು ಮುಟ್ಟನ್ನು ಒಂದು ಸಮಸ್ಯೆಯಾಗಿ ನೋಡುವುದಿಲ್ಲ; ಅದು ಮಹಿಳೆಯ ಆರೋಗ್ಯದ ಕನ್ನಡಿಯೆಂದು ಪರಿಗಣಿಸುತ್ತದೆ. ಆದ್ದರಿಂದ ತಾತ್ಕಾಲಿಕ ಪರಿಹಾರಗಳ ಹಿಂದೆ ಓಡುವುದಕ್ಕಿಂತ, ಮೂಲ ಕಾರಣಗಳನ್ನು ಅರಿತು ಜೀವನಶೈಲಿಯನ್ನು ಸರಿಪಡಿಸುವುದು ಅತ್ಯಗತ್ಯ.
ಸರಿಯಾದ ಆಹಾರ, ಸಮತೋಲನಯುತ ಚಟುವಟಿಕೆ, ಮನಶಾಂತಿ ಮತ್ತು ಪ್ರಕೃತಿಗೆ ಅನುಗುಣ ವಾದ ಬದುಕು - ಇವೇ ಆರೋಗ್ಯಕರ ಋತುಚಕ್ರದ ನಿಜವಾದ ಆಧಾರಗಳು.